Pages

Saturday, February 25, 2012

ವೈದ್ಯರಿಗೆ ವೈದ್ಯರಾದ ಭಗವಾನ್ ಶ್ರೀ ರಮಣ ಮಹರ್ಷಿಗಳು



1929 ರಲ್ಲಿ ರಮಣ ಆಶ್ರಮದಲ್ಲಿ ಪ್ರಾರಂಭಿಸಲಾದ ಚಿಕಿತ್ಸಾಲಯದ   ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿ, ಮಹರ್ಷಿಗಳ ಅನುಕಂಪಕ್ಕೆ ಮತ್ತು ಅನುಗ್ರಹಕ್ಕೆ ಒಳಗಾದ ಸುಪ್ರಸಿದ್ದ ಪ್ರಥಮ ವೈದ್ಯರು.  ಡಾಕ್ಟರ್ಕೃಷ್ಣಮೂರ್ತಿ ರವರು ಮಹರ್ಷಿಗಳ ಪರಮ ಭಕ್ತರಾಗಿದ್ದು ಈ ಆಶ್ರಮದಲ್ಲಿ  ಚಿಕಿತ್ಸೆಗೆ ಬರುತ್ತಿದ್ದ  ಎಲ್ಲಾ ರೋಗಿಗಳ ಶಿಶ್ರುಷೆಯಂತು ಅತ್ಯಂತ ಪ್ರೇಮ ಮತ್ತು ಸೌಹಾರ್ದದಿಂದ ಮಾಡುತ್ತಿದ್ದರು .    ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ಈ ಚಿಕಿತ್ಸಾಲಯಕ್ಕೆ  ಮುಖ್ಯ ಕಾರಣವೆಂದರೆ ಮಹರ್ಷಿಗಳ ಕೃಪಾವಲಯ ಮತ್ತು ಅನುಗ್ರಹ.   ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರು ತಿರುವನ್ನಮಲೈ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದರು.  ಪ್ರತಿನಿತ್ಯ ಆಶ್ರಮಕ್ಕೆ ಬಂದು ತಮ್ಮ ಸೇವೆಯನ್ನು ಮಾಡಿ ಹೋಗುತ್ತಿದ್ದರು. ಮಹರ್ಷಿಗಳು  ಬ್ರಹ್ಮ ನಿರ್ವಾಣ ಹೊಂದಿದ ಮೇಲೂ ಡಾಕ್ಟರ್ರವರು ಮಹರ್ಷಿಗಳ ಸಮಾಧಿಯ ಬಳಿ ನಿಂತು ಭಕ್ತಿ ಗೀತೆಯನ್ನು ಹಾಡಿ ನಂತರದಲ್ಲಿ ಗಿರಿ ಪ್ರದಕ್ಷಿಣೆಗೆ ಹೋಗುತ್ತಿದ್ದರು. ಇಂತಹ ಪರಮ ಭಕ್ತರ ಜೀವನದಲ್ಲಿ ಭಗವಾನರ ಅನುಗ್ರಹ ಹೇಗೆ ಆಯಿತು? ಎಂಬುದರ  ಬಗ್ಗೆ ಶ್ರೀ ವಿ ಗಣೇಶನ್ ಧಾಖಲಿಸಿರುವ ಒಂದು ಘಟನೆ.


1930  ರ ಸಮಯದಲ್ಲಿ ಮಹರ್ಷಿಗಳಿಗೆ ಅಗ್ಗಾಗ್ಗೆ ತೊಂದರೆ ಕೊಡುತ್ತಿದ್ದ ಬಿಕ್ಕಳಿಕೆಯನ್ನು ತಡೆಯಲು  ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರು ಮಹರ್ಷಿಗಳಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದರು. ಆದರೆ, ದಿನ ಕಳೆದಂತೆ ಈ ಬಿಕ್ಕಳಿಕೆ ಕಡಿಮೆಯಾಗಲೇ ಇಲ್ಲ. ಎಲ್ಲಾ ತರಹದ ಔಷದಿಗಳನ್ನು ಪ್ರಯತ್ನಿಸಲಾಯಿತು.  ಆದರೂ, ಮಹರ್ಷಿಗಳು ಗುಣಮುಖರಾಗಲೇ ಇಲ್ಲ.  ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರಿಗೆ  ಆತಂಕ ಪ್ರಾರಂಭವಾಯಿತು.  ಈತನ್ಮಧ್ಯೆ ಮಹರ್ಷಿಗಳ ನಾಡಿ ಮಿಡಿತವನ್ನು ಪರೀಕ್ಷಿಸಲಾಗಿ ಅದೂ ಸಹ ಬಹಳ ಕಡಿಮೆಯಾದ ಕಾರಣ ಆತಂಕ ಇನ್ನಷ್ಟು ಜಾಸ್ತಿಯಾಯಿತು.  ಡಾಕ್ಟರ್ರವರ ಮನಸಿನಲ್ಲಿ ಮಹರ್ಷಿಗಳ ಜೀವಿತಾವಧಿ ಕೆಲವು ದಿನಗಳು ಇರಬಹುದೇ? ಎಂಬ ಸಂಶಯ ಬಲವಾಗಿ ಕಾಡತೊಡಗಿತು.  ಡಾಕ್ಟರ್ ಕೃಷ್ಣಮೂರ್ತಿಯವರು ಮಹರ್ಷಿಯವರಲ್ಲಿ ಏನೊಂದು ಮಾತನಾಡಲಿಲ್ಲ , ಅವರ ಎದುರಿನಲ್ಲಿ ಕೈ ಕಟ್ಟಿ ನಿಂತು ಮುಂದೆ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕಣ್ಣು ಬಾಯಿ ಬಿಡುತ್ತ ನಿಂತಿದ್ದರು.  ಆದರೆ, ಮನಸ್ಸು ಮಾತ್ರ " ಏನಾದರೊಂದು ದಾರಿ ತೋರಿಸಿ ಗುರುವೇ" ಎಂದು ಅಂಗಲಾಚುತ್ತಿತ್ತು.  ಮಹರ್ಷಿಗಳು ಮಾತ್ರ ತಮಗೇನೂ ಗೊತ್ತಿಲ್ಲ ಎನ್ನುವಂತೆ ಸುಮ್ಮನೆ ಕುಳಿತು ಬಿಟ್ಟಿದ್ದರು.  ಸ್ವಲ್ಪ ಸಮಯದ ನಂತರ ಡಾಕ್ಟರ್ರವರು ಒಲ್ಲದ ಮತ್ತು ಭಾರವಾದ ಮನಸ್ಸಿನಿಂದ ಮನೆಗೆ ಹಿಂತಿರುಗಿದರು.


ಮನೆಗೆ ಬಂದ ನಂತರದಲ್ಲಿ ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿರವರಿಗೆ ತಮ್ಮ ದುಃಖ ತಡೆದು ಕೊಳ್ಳಲು ಸಾಧ್ಯವಾಗಲೇ ಇಲ್ಲ.  ದುಃಖ ಉಮ್ಮಳಿಸಿ ಬಂತು. ದಿಕ್ಕು ತೋಚದೆ  ಚಿಕ್ಕ ಮಗುವಿನಂತೆ  ಗಟ್ಟಿಯಾಗಿ ಅಳಲು ಪ್ರಾರಂಭ ಮಾಡಿದರು.  ಯಾರು ಸಮಾಧಾನ ಮಾಡಿದರು ಸಮಾಧಾನ ಆಗಲೇ ಇಲ್ಲ. ಅಂದು ಊಟವನ್ನು ಮಾಡದೆ ಹಾಗೆ ಮಲಗಿಬಿಟ್ಟರು.  ಬಹಳಹೊತ್ತು ನಿದ್ದೆ ಬಾರದೆ ಏನೇನೋ ಚಿಂತೆಗಳು ಕಾಡುತ್ತಲೇ ಇದ್ದವು.  ಯಾವಾಗಲೋ ನಿದ್ದೆ ಹತ್ತಿದೆ.   ಸುಮಾರು ಬೆಳಗಿನ ಜಾವದ ಸಮಯ ಇರಬಹುದೇನೋ ಆ ಸಮಯದಲ್ಲಿ ಭಗವಾನರು ಇವರ ಕನಸಿನಲ್ಲಿ ಬಂದು " ಏಕೆ ಅಳುತ್ತಿಯೇ?" ಎಂದು ಕೇಳಿದರು.  ಡಾಕ್ಟರ್ " ಭಗವಾನ್ ನಿಮಗೆ ಗೊತ್ತಿಲ್ಲದ್ದು ಏನಿದೆ? ನಾನು ಏಕೆ ಅಳುತ್ತಿರುವೆನೆಂದು ನಿಮಗೆ ಗೊತ್ತಿಲ್ಲವೇ?  ನಿಮ್ಮ ಈ ಬಿಕ್ಕಳಿಕೆಯ ರೋಗವನ್ನು  ಏನು ಮಾಡಿದರು ನನ್ನಿಂದ ಗುಣಪಡಿಸಲಾಗುತ್ತಿಲ್ಲವಲ್ಲ, ನಾನು ಏನು ಮಾಡಲಿ?"  ಎಂದು ಪುನಃ ಅಳಲು ಪ್ರಾರಂಭ ಮಾಡಿದರು.  ಆಗ ಮಹರ್ಷಿಗಳು " ಅಳಬೇಡ. ನಿಮ್ಮ ಮನೆಯ ಅಂಗಳದಲ್ಲಿ 'ಸೀಂಧಿಕೊಡಿ' ಎಂಬ ಗಿಡ ಇದೆ.  ಈ ಗಿಡದ ಎಲೆಗಳನ್ನು ಕಿತ್ತು ಶುಚಿಮಾಡಿ, ತುಪ್ಪದಲ್ಲಿ ಹುರಿದು,  ನಂತರ ಒಣಗಿದ ಶುಂಟಿ ಮತ್ತು ಬೆಲ್ಲವನ್ನು ಬೆರೆಸಿ ಚೆನ್ನಾಗಿ ಮಿದ್ದು ಗೋಲಿಗಳನ್ನು ಮಾಡಿಕೊಂಡು ನಾಳೆ ತೆಗೆದು ಕೊಂಡು ಬಾ.  ಏಕೆ ಸುಮ್ಮನೆ ಚಿಂತಿಸುತ್ತಿಯ?" ಎಂದು ಹೇಳಿದ ಹಾಗೆ ಭಾಸವಾಯಿತು.


ತಕ್ಷಣ ಎಚ್ಚರವಾಯಿತು.  ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಭಾಸವಾಯಿತು. ಆಶ್ಚರ್ಯದೊಂದಿಗೆ ಮೈ ಪುಲಕಿತ ಗೊಂಡಿತು. ತಕ್ಷಣ ತಮ್ಮ ಪತ್ನಿಯನ್ನು ಎಬ್ಬಿಸಿಕೊಂಡು ಕೈ ದೀಪ ಹಿಡಿದುಕೊಂಡು ಅಂಗಳವೆಲ್ಲವನ್ನು ಹುಡುಕಲು ಪ್ರಾರಂಭ ಮಾಡಿದರು . ಆ ಮನೆಯ ಅಂಗಳದ ಸ್ವಲ್ಪ ಭಾಗ ಬಿಟ್ಟು ಮಿಕ್ಕೆಲ್ಲ ಭಾಗ  ಗಾರೆ ಹಾಕಲ್ಪಟ್ಟಿತ್ತು.   ಆ ಇರುವ ಸ್ವಲ್ಪ ಜಾಗದಲ್ಲಿ ಈ ಗಿಡ ಹುಡುಕಬೇಕಾಗಿತ್ತು.  ಈ ಇರುವ ಮಣ್ಣಿನ ಜಾಗದಲ್ಲಿ ಹಲವಾರು ಗಿಡಗಳು ಪೊದೆಯಂತೆ ಬೆಳೆದು ಬಿಟ್ಟಿದ್ದವು.  ನಿಧಾನವಾಗಿ ಗಿಡಗಳನ್ನು ಸರಿಸುತ್ತ ಮಹರ್ಷಿಗಳು ಹೇಳಿದ ಗಿಡಕ್ಕಾಗಿ ಹುಡುಕಾಟ ಪ್ರಾರಂಭ ಮಾಡಿದರು.  ಒಂದು ಮೂಲೆಯಲ್ಲಿ ಮಹರ್ಷಿಗಳು ಹೇಳಿದ ಒಂದೇ ಒಂದು ಗಿಡ ಸಿಕ್ಕಿತು.  ಈ ದಂಪತಿಗಳಿಗೆ ಪರಮಾನಂದವಾಯಿತು. ಅವರ ಸಂತೋಷಕ್ಕೆ  ಪಾರವೇ ಇಲ್ಲ. ತಕ್ಷಣ ಆ ಗಿಡವನ್ನು ತಂದು ಮಹರ್ಷಿಗಳ ಆಜ್ಞಾನುಸಾರ  ಲೇಹ್ಯವನ್ನು ತಯಾರು ಮಾಡಿದರು.


ಈ ಲೇಹ್ಯವನ್ನು ತೆಗೆದುಕೊಂಡು ಆಶ್ರಮಕ್ಕೆ ಓಡಿದರು.  ಎಂದಿನಂತೆ ಆಶ್ರಮದಲ್ಲಿ ಸತ್ಸಂಗಕ್ಕೆ ಎಲ್ಲರು ಸೇರಿದ್ದರು. ಮಹರ್ಷಿಗಳು ತಮ್ಮ ಜಾಗದಲ್ಲಿ ಆಸೀನರಾಗಿದ್ದರು.  ಈ ದಂಪತಿಗಳನ್ನು ಕಂಡ ಮಹಷಿಗಳು ಮುಗುಳುನಕ್ಕು ಸ್ವಾಗತಿಸಿ ತಮ್ಮ ಕೈಯನ್ನು ಮುಂದೆ ಚಾಚಿ " ಅದೇನು ತಂದಿರುವಿರೋ ಅದನ್ನು ಕೊಡಿ" ಎಂದು ಔಷಧಿಯನ್ನು ಪಡೆದುಕೊಂಡು ಒಂದೆರಡು ಗೋಲಿಗಳನ್ನು ತಿಂದು ಬಿಟ್ಟರು.  ನಂತರದಲ್ಲಿ ತಮಗೆ ಬಿದ್ದ ಕನಸಿನ ಬಗ್ಗೆ ವಿಸ್ತಾರವಾಗಿ ಮಹಾರ್ಹಿಗಳಲ್ಲಿ ನಿವೇದಿಸಿಕೊಂಡಾಗ ತಮಗೇನೂ ಗೊತ್ತಿಲ್ಲದವರಂತೆ ಸುಮ್ಮನೆ ಕುಳಿತ್ತಿದ್ದರು.  ಒಂದೆರಡು ದಿನಗಳಲ್ಲೇ ಮಹರ್ಷಿಗಳ ಬಿಕ್ಕಳಿಕೆ ನಿಂತು ಸಹಜ ಸ್ತಿತಿಗೆ ಬಂದರು.




ಮಹರ್ಷಿಗಳ ಕೃಪೆಯೇ ಹಾಗೆ!  ಮಹರ್ಷಿಗಳು ಯಾರನ್ನು ಯಾವಾಗ, ಹೇಗೆ ಮತ್ತು ಯಾವ ಪರಿಸ್ಥಿತಿಯ  ಮುಖಾಂತರ ಅಹಂಕಾರವನ್ನು ನಾಶಮಾಡಬೇಕೆಂದು ತಿಳಿದು ಅಂತಹವರಿಗೆ ಯಾವ ಸುಳಿವನ್ನು ಕೊಡದೆ ಅಂದುಕೊಂಡ ಕೆಲಸವನ್ನು ನಿರ್ವಹಿಸುತ್ತಿದ್ದರು.   ಈ ರೀತಿಯ ಉಪದೇಶದಿಂದ ಭಕ್ತರನ್ನು ಸರಿ ದಾರಿಗೆ ತಂದು  ಉದ್ಧಾರ ಮಾಡಿ, ಜೀವನದಲ್ಲಿ ಎಂದೂ ಮರೆಯಲಾಗದ ಪಾಠವನ್ನು ಕಲಿಸಿಬಿಡುತ್ತಿದ್ದರು. ಡಾಕ್ಟರ ಜೀವನದಲ್ಲೂ ಎಲ್ಲೋ ಅಡಗಿದ್ದ ಅಹಂಕಾರದ ಮೂಲವನ್ನು ಹುಡುಕಿ ಬೇರು ಸಮೇತ ಕಿತ್ತು ಬಿಟ್ಟರು. "ಎಲ್ಲವೂ ನೀನೆ, ನಾನು ನೆಪ ಮಾತ್ರ" ಎಂಬ ಸತ್ಯವನ್ನು  ದೃಢವಾಗಿ ಇವರ ಮನಸ್ಸಿನಲ್ಲಿ ನೆಟ್ಟು ಬಿಟ್ಟರು.  ಇಂತಹ ಸಾವಿರಾರು ಉದಾಹರಣೆಗಳು ಮಹರ್ಷಿಗಳ ಜೀವನದಲ್ಲಿ ನಡೆದಿವೆ.  ಇದೊಂದು ತುಣುಕು ಮಾತ್ರ.  ಈ ರೀತಿಯ ಭಗವಾನರ ಕೃಪಾ ವಲಯಕ್ಕೆ ಬಂದ ಅದೆಷ್ಟೋ ಭಕ್ತರು ತಮ್ಮ ಜೀವನವನ್ನು ಪಾವನ ಮಾಡಿಕೊಂಡು ಬಿಟ್ಟರು. ಇಂತಹ ಪುಣ್ಯ ಪುರುಷರ ಅನುಭವಾಮೃತ ಕೇಳುವಾಗಲೇ ನಮ್ಮ ಮೈ ಮತ್ತು ಮನಸ್ಸು ಪುಲಕಿತ ವಾಗುತ್ತದೆ.  ಇನ್ನು ಸ್ವತಃ ಅನುಭವ ಆದಾಗ........ ಅದನ್ನು ಪದಗಳು ಪ್ರಾಯಶಃ ಬಣ್ಣಿಸಲಾರವು.   ಆದರೂ, ನಮ್ಮಂತಹ ಪಾಮರರಿಗಾಗಿ ಅನುಭವ ಕಥನವನ್ನು ಧಾಖಲಿಸಿರುವುದೂ ಸಹ ನಮ್ಮ ಪೂರ್ವಪುಣ್ಯದ ವಿಶೇಷವೆಂದೇ ನಾನು ಭಾವಿಸುತ್ತೇನೆ.


ಹೆಚ್ ಏನ್ ಪ್ರಕಾಶ್ 

No comments:

Post a Comment