Pages

Saturday, February 25, 2012

ಮಂಕುತಿಮ್ಮನ ಕಗ್ಗ - ರಸಧಾರೆ - ಕಗ್ಗ - ೧೦



ಏನು ಪ್ರಪಂಚವಿದು! ಏನು ಧಾಳಾಧಾಳಿI 

ಏನದ್ಭುತಾಪಾರಶಕ್ತಿ  ನಿರ್ಘಾತ! II

ಮಾನವನ ಗುರಿಯೇನು? ಬೆಲೆಯೇನು?ಮುಗಿವೇನು? I

ಏನರ್ಥವಿದಕೆಲ್ಲ? - ಮಂಕುತಿಮ್ಮ II


ಏನದ್ಭುತಾಪಾರಶಕ್ತಿ  ನಿರ್ಘಾತ = ಏನು ಅದ್ಭುತ + ಅಪಾರ+ ಶಕ್ತಿ , ನಿಘಾತ = ಹೊಡೆತ.


ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮ ಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿಮನುಷ್ಯನ  ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ಈ ಸಮಯಕ್ಕೆ ನಾ ಹಿಂದೆ ಹೇಳಿದಂತೆ ಎರಡನೇ ಮಹಾ ಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ದಾಳಿಗಳು. ಇವಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಇಂದಿನ ಮತ್ತು ಮುಂದಿನ ಕೆಲವು ಕಗ್ಗಗಳಲ್ಲಿ ಕಾಣಬಹುದು. 


ಈ ಪ್ರಪಂಚಕ್ಕೆ ಏನಾಗಿದೆ? ಏಕೆ ಈ ಮುತ್ತಿಗೆಗಳು? ಏನು ಈ ಹೊಡೆತಗಳು ಮತ್ತು ಆ ಹೊಡೆತಗಳ ಹಿಂದಿನ ಅಪಾರ ಶಕ್ತಿ ಏನು ?ಮಾನವನ ಗುರಿಯೇನು? ಇದಕ್ಕೆಲ್ಲ ಬೆಲೆಯೇನು? ಇದಕ್ಕೆಲ್ಲ ಅಂತ್ಯವೇನು? ಮತ್ತು ಇದಕ್ಕೆಲ್ಲ ಏನು ಅರ್ಥ ಎಂಬ ಬಾವಗಳನ್ನು ವ್ಯಕ್ತ ಪಡಿಸುತ್ತಾ ಅಂದು ನಡೆಯುತ್ತಿದ್ದ ಪ್ರಾಪಂಚಿಂಕ  ವಿಧ್ಯಮಾನಗಳನೆಲ್ಲ ಒಟ್ಟುಗೂಡಿಸಿ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ. 


ಯಾರೋ ಒಬ್ಬ ಸರ್ವಾಧಿಕಾರಿಯ  ಅಧಿಕಾರ ದಾಹ, ಅಧಿಕಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ  ಮತ್ತು ಅಹಂಕಾರವನ್ನು ತಣಿಸುವ ದಾಹಕ್ಕೆ ಬಲಿಯಾದದ್ದು ಇಡೀ ವಿಶ್ವ. ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದಮೇಲೆ ದಾಳಿ. ಆ ರಾಷ್ಟ್ರಕ್ಕೆ ಕೆಲವು ಮತ್ತು ಈ ರಾಷ್ಟ್ರಕ್ಕೆ ಕೆಲವು ರಾಷ್ಟ್ರಗಳು ಸಹಾಯಕ್ಕೆ ನಿಲ್ಲುತ್ತವೆ. ಆಗ ಆ ಎರಡು ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ ಸಹಾಯಕ್ಕೆ ನಿಂತ ಬೇರೆ ರಾಷ್ಟ್ರಗಳ ಎಲ್ಲ ಸೈನಿಕರೂ ಹೊಡೆದಾಡುತ್ತಾರೆ. ಯಾರೋ ಯಾರ ಮೇಲೋ ದಾಳಿ. ದಾಳಿಗೊಳಗಾದ ರಾಷ್ಟ್ರಕ್ಕಾಗಲೀ ದಾಳಿಮಾಡಿದ ರಾಷ್ಟ್ರಕ್ಕಾಗಲೀ ದಾಳಿಯ ಕಾರಣವೇ ಗೊತ್ತಿಲ್ಲ. ಹೊಡೆದಾಡುವುದು, ಪಾಪ ಮುಗ್ದ ಸೈನಿಕರು. ಕೇವಲ ಜೀವಿಕೆಗಾಗಿ. 


ಇದು ಮಾನವನ ಜೀವನದ ಇತಿಹಾಸದಲ್ಲಿ ನಿರಂತಾರವಾಗಿ  ನಡೆದಿದೆ. ಕ್ರಿಸ್ತಪೂರ್ವ ಸುಮಾರು ೩೨೫ ವರ್ಷದಲ್ಲಿ ಅಲೆಕ್ಸಾಂಡರನ ವಿಶ್ವ ವಿಜಯ ಯಾತ್ರೆಯಿಂದ ಹಿಡಿದು, ಇಂದಿನವರೆಗೆ ನಡೆದ ಯುದ್ಧಗಳು ಆಯಾಯಾ  ರಾಷ್ಟ್ರಗಳ ನಾಯಕರ ಭೌದ್ಧಿಕ ಮತ್ತು ನೈತಿಕ  ( intellectual & moral ) ದಿವಾಳಿತನದಿಂದಲೇ ನಡೆದಿದೆ ಅಲ್ಲವೆ.  


ಅಂತಹ ಒಂದು ಸ್ಥಿತಿಯೇ ೨ನೆ ಮಹಾಯುದ್ಧದ ಕಾಲದಲ್ಲಿ ಹಿಟ್ಲರನ ತಿಳಿಗೇಡಿತನದಿಂದಾಗಿ  ಆರಂಭವಾಗಿ ವಿಶ್ವವೆಲ್ಲ ಹರಡಿ ಹಲಕೆಲವರು ಕೆಲಕೆಲವರ ಪಕ್ಷ ಹಿಡಿದು  ಹೋರಾಡಿ, ಇಡೀ ಪ್ರಪಂಚವನ್ನು ವಿನಾಶದಂಚಿಂಗೆ ತಳ್ಳಿದರು ಘನಘೋರ ಯುದ್ಧ, ಅಪಾರ ಶಕ್ತಿಯ ವ್ಯಯ, ಸಾವು ನೋವು. ಪ್ರತಿ ದೇಶಕ್ಕೂ ಯುದ್ಧಕ್ಕಾಗಿ ಅಪಾರ ವೆಚ್ಚ. ಆ ವೆಚ್ಚವನ್ನು ಭರಿಸಲಿಕ್ಕಾಗಿ ಅಧಿಕ ಕರಗಳು ಮತ್ತು ಕರಭಾರದಿಂದ ತತ್ತರಿಸಿದ ಪ್ರಜೆಗಳು. ಯುದ್ದ್ಧದಲ್ಲಿ ಸಾವು ನೋವುಗಳು. ಇದು ಸಾಲದೆಂಬಂತೆ ಅಂದು ಇಡೀ ಪ್ರಪಂಚದಲ್ಲೇ ಬರದ ಕರಾಳ ನೃತ್ಯ. ಎಲ್ಲದಕ್ಕೂ ಕೊರತೆ, ಕಾಲರಾ ಪ್ಲೇಗ್ ನಂತಹ ಸೋಂಕು ರೋಗಗಳ ರುದ್ರ ನರ್ತನ. ನೋವು ಮಾತ್ರ ಅಧಿಕ . ಇಂದನ್ನು ಕಂಡೆ ಗುಂಡಪ್ಪನವರು, "ಮಾನವನ ಗುರಿಯೇನು"?  ಎಂದು ಪ್ರಶ್ನಿಸುತ್ತಾರೆ.  ಇದಕ್ಕೆಲ್ಲ ಏನು ಅರ್ಥ ಎಂದು ಕೇಳುತ್ತಾರೆ. 


ವಾಚಕರೆ, ನಿಮ್ಮಲ್ಲಿ ಬಹಳಷ್ಟು ಜನಗಳಿಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ವಿಚಾರವೇನೆಂದರೆ ಅಂದು ಅನ್ನಕ್ಕೆ ಬರ.ಬಟ್ಟೆಗೆ ಬರ. ಹಾಲು ನೀರಿಗೂ ಬರ. ಪ್ರತಿ ಊರಿನಲ್ಲೂ ಗಂಜಿ ಕೇಂದ್ರಗಳು. ಪ್ರತಿಯೊಬ್ಬರಿಗೂ ಬೆಳಗ್ಗೆ ಎರಡು ಸೌಟು ಮತ್ತು ಸಂಜೆ  ಎರಡು ಸೌಟು. ಬಟ್ಟೆ ಬೇಕಾದರೆ, ಸರ್ಕಾರದಿಂದ ಪರವಾನಗಿ( permit ) ತೆಗೆದುಕೊಂಡು ಗುಟ್ಟಲ್ಲಿ ಖರೀದಿ ಮಾಡಬೇಕಾದ ಪರಿಸ್ಥತಿ. 


ಅಂತಹ ಪರಸ್ಥಿತಿಗೆ ಅರ್ಥವೇನು?  ಅಂದರೆ ಅರ್ಥಹೀನ ಎಂಬ ರೀತಿ ಗುಂಡಪ್ಪನವರು ಪ್ರಶ್ನಿಸುತ್ತಾರೆ. 


ಇಂದು ಕೂಡ ಪರಸ್ಥಿತಿ ಬದಲಾಗಿಲ್ಲ. ಅಹಂಕಾರದ, ದ್ವೇಷದ, ಯುದ್ಧಗಳ,  ನೋವಿನ,  ಕೊರತೆಗಳ ರೂಪ ಬೇರೆ ಅಷ್ಟೇ! ಇಂದು ಕೂಡ ನಾವು ಅಂದು ಅವರು ಕೇಳಿದ ಪ್ರಶ್ನೆಗಳನ್ನೇ ಕೇಳುವ ಸ್ಥತಿ ಇದೆ ಇಲ್ಲವೇ? 


ಇದನ್ನೇ ವಿಚಾರಮಾಡುತ್ತಾ  ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ. ? 


ಇಂದಿನ ದಿನ ನಿಮಗೆಲ್ಲ ಶಿವವಾಗಲಿ-ಶುಭವಾಗಲಿ. 


ನಮಸ್ಕಾರ 

ರವಿ ತಿರುಮಲೈ 

1 comment:

  1. ನಿಮ್ಮ ವ್ಯಾಖ್ಯಾನಶೈಲಿ ಅಚ್ಚರಿ ಮೂಡಿಸಿದೆ. ನನ್ನ ಬಾಲ್ಯದಲ್ಲಿ ಕ್ಷಾಮ ಬಂದದ್ದು, ಅಮೆರಿಕಾ ದೇಶದವರು ನಮ್ಮ ದೇಶಕ್ಕೆ ಕಳಿಸುತ್ತಿದ್ದ ಹಾಲಿನ ಪುಡಿ, ಕೇರ್ ಹೆಸರಿನ ಗೋದಿಯನುಚ್ಚು -ಇವೆಲ್ಲವನ್ನೂ ಉಪಯೋಗಿಸಿಕೊಂಡು ಶಾಲೆಯಲ್ಲಿ ಮಕ್ಕಳಿಗೆ ಉಪ್ಪಿಟ್ಟು ಮತ್ತು ಹಾಲನ್ನು ಕೊಡುತ್ತಿದ್ದರು. ಅದೇ ಉಪ್ಪಿಟ್ಟು ಹಾಲು ಅದೆಷ್ಟೋ ದಿನ ಅದರಲ್ಲೇ ಹೊಟ್ಟೆ ತುಂಬಿಸಿಕೊಂಡಿದ್ದು ನೆನಪಾಗುತ್ತಿದೆ. ಜೊತೆಗೆ ಅಂಗಡಿಗಳಲ್ಲಿ ನವಣೆ ಅಥವಾ ಬೇರೆ ಯಾವುದೋ ಹೆಸರಿನ ರಾಗಿ ಆಕಾರದ ಧಾನ್ಯವನ್ನು ಮಾರುತ್ತಿದ್ದರು.ಜನರು ಅದನ್ನೇ ತಿಂದು ಬದುಕುತ್ತಿದ್ದರು. ದನಗಳಿಗೆ ಹುಲ್ಲು ಕೂಡ ಸಿಗುತ್ತಿರಲಿಲ್ಲ. ಅದ್ಯಾವುದೋ ಮರದ ಹೆಸರು ಮರೆತಿರುವೆ. ಆ ಮರದ ಗರಿಗಳನ್ನು ಕಡಿದುತಂದು ದನಗಳಿಗೆ ಮೇವು ಕೊಡುತ್ತಿದ್ದೆವು.
    ಅಬ್ಭಾ! ನನ್ನ ಬಾಲ್ಯದ ನೆನಪು ಮಾಡಿಬಿಟ್ಟಿರಿ! ಇಂದು ಆಹಾರ ಚೆಲ್ಲಾಟ! ಜನರಿಗೆ ಕ್ಷಾಮದ ಅರ್ಥವೂ ಗೊತ್ತಿಲ್ಲ. ಮಳೆ ಬೀಳದಿದ್ದರೂ ಸರ್ಕಾರದ ಪರಿಹಾರ! ಮಳೆ ಹೆಚ್ಚಾದರೂ ಸರ್ಕಾರದ ಪರಿಹಾರ! ನಿಜವಾಗಿ ಈಗ ಆಹಾರದ ಕೊರತೆ ಇಲ್ಲ. ಅಂದಿನ ದಿನಗಳನ್ನು ನೆನಸಿಕೊಂಡರೆ, ಹೌದಾ? ಹಾಗಿತ್ತಾ? ಅಂದಿನ ನಾವು ಈಗಿರುವ ನಾವೇನಾ? ಎನಿಸುತ್ತದೆ.
    ಅದಕ್ಕೂ ಹಿಂದೆ ನಮ್ಮ ಅಜ್ಜನ ಕಾಲದಲ್ಲಿ ನಮ್ಮ ಮನೆಯಲ್ಲಿ ಪ್ಲೇಗಿಗೆ ತುತ್ತಾದ ನಮ್ಮ ಚಿಕ್ಕಪ್ಪ, ಮನೆ ಬಿಟ್ಟು ತೋಟದಲ್ಲಿ ಶೆಡ್ ಹಾಕಿಕೊಂಡು ಜೀವಿಸುತ್ತಿದ್ದ ಕಾಲ! ಅದೆಲ್ಲವನ್ನೂ ನಮ್ಮ ತಂದೆ ಹೇಳುತ್ತಿದ್ದರು. ನಿಮಗೆ ಮಾಹಿತಿ ಇದ್ದರೆ ಆ ದಿನಗಳ ನೆನಪುಮಾಡಿ ಒಂದು ಲೇಖನ ಬರೆಯಿರಿ. ಇಂದಿನ ಜನರಿಗೆ ಹಿಂದಿನ ಕಷ್ಟಗಳ ಅರಿವು ಇರಬೇಕು.
    ನಾಲ್ಕೈದು ದಶಕಗಳ ಹಿಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟಿರಿ!!!

    ReplyDelete