Pages

Friday, March 30, 2012




ಸತ್ಯವೂ,   ಮುಕ್ತವೂ   ಸುಂದರವೂ  




ಒಂದು ದಿನದ ಬದುಕೇ ಬಾಳಲ್ಲ
ಪ್ರತಿಕ್ಷಣವು ಬದುಕು ಅಮೂಲ್ಯ
ಕಳೆದ ನಿನ್ನೆ ಇಂದಿಗೆ ಪ್ರಸ್ತುತ
ಇಂದಿನ ಘಳಿಗೆ ರಸಮಯವೆಂತಾದರೆ
ಕಾಣುವ ನಾಳೆ ವೈವಿಧ್ಯಮಯ.


ಬಾಳು   ಭರವಸೆಯ ಪ್ರತೀಕ
ನಿರಾಸೆಯ ಗೂಡಲ್ಲ.  ನಡೆವ ಹಾದಿ
ಹೂವಿನ ಹಾಸಿಗೆಯಲ್ಲ....ಸರಿ.
ಮುಳ್ಳಿನ ಹಾದಿಯೇ ಎಲ್ಲವು ಅಲ್ಲ.
ದಾರಿಗುಂಟ ಕಲ್ಲುಮುಳ್ಳುಗಳ ಮಧ್ಯೆ
ಸುಂದರ ಕಾಡು ಹೂವು, ಹುಲ್ಲಿನ ಹಾಸೂ
ಮುದನೀದಲು ಕಾದಿದೆ,  ಗಮನಿಸಬೇಕು...ಅಷ್ಟೇ


ನಾಮಪದದಷ್ಟೇ ಕ್ರಿಯಾಪದವು ಮುಖ್ಯ ನೆಮ್ಮದಿಗೆ.
ನಾನು ಬೆಳೆದೆ, ಓದಿದೆ, ಕಲಿತೆ, ದುಡಿದೆ ಎನ್ನುವ
ಗತಕಾಲದ ವೈಭವಕಿಂತ ........  ನಾನು
ಬೆಳೆಯುತ್ತಿದ್ದೇನೆ, ಓದುತ್ತಿದ್ದೇನೆ, ಕಲಿಯುತ್ತಿದ್ದೇನೆ,
ದುಡಿಯುತ್ತಿದ್ದೇನೆ ಎನ್ನುವ  ವಿನಯ
ಸುಪ್ತ ಅಹಂಕಾರದ ಪ್ರತಿಷ್ಠೆಯನ್ನು ಮೆಟ್ಟಿ ನಿಲ್ಲುತ್ತದೆ


ಒಂದು ಹಂತದಲಿ......ಬದುಕಿಗೆ ಇಷ್ಟು ಸಾಕು ಎನಿಸಬೇಕು
ಲಭ್ಯವಾದುದರಲ್ಲೇ  ಸಂತೋಷವ ತುಂಬಿ,
ಬಾರದುದಕೆ ಕಾಯದೆ , ಸಿಗದುದಕೆ ವಿಷಾದಿಸದೆ,
ಸಂತಸದೆ ಬದುಕುವ ಬಗೆಯೇ ತೃಪ್ತಿ.
ಪದೋನ್ನತಿ ಬೇಡವೆಂದೇನೋ ಅಲ್ಲ ಅದಕಾಗಿ
ಕೋಪ ತಾಪಗಳಿಲ್ಲ,  ಬೇಡದ ಗೊಣಗಾಟವಿಲ್ಲ.


ಸಮೃದ್ಧವಾದ ಈ  ಜಗತ್ತಿನಲಿ
ವಿಶಾಲತೆ,  ಗಹನತೆಗಳು ಅನೇಕವಿದೆ.
ಕೊರತೆಗಳು ನಮ್ಮ ದೃಷ್ಟಿ ದೋಷ.
ಎಲ್ಲವೂ ಇಲ್ಲೇ ಇದೆಯೆನ್ನುವ ಪ್ರಯತ್ನಕ್ಕೆ
ಸುಲಭದ   ದಾರಿ ಹತ್ತಾರು.


ಭಗವಂತನ ದಿವ್ಯಾನುಗ್ರಹ ಈ ದೇಹ.
ಮನಸಿನ ಆರೋಗ್ಯ ದೇಹದ ಪ್ರತಿರೂಪ,
ದಿನನಿತ್ಯದ ಬದುಕು ನಾವು ಬೆಳೆಯುವ ಪರಿ.
ಪ್ರೀತಿಯ ಸಸಿಗೆ ನೀರೆರೆದಾಗ  ಸಮೃದ್ದಿಯಫಲ
ಪವಿತ್ರ ಬದುಕಿಗೆ, ಮುಕ್ತ ಮನಸಿನ
ನಿರ್ಮಲ ಭಾವ....... ಸಂತೃಪ್ತಿ


ಮನಸು, ದೇಹ ಸಂಯಮದಲಿ ಸ್ಪಂದಿಸಿದರೆ
ತಾಪ ಪರಿತಾಪಗಳ ಹೊಯ್ದಾಟವಿಲ್ಲ.
ವಿಶ್ವಾತ್ಮ ಭಾವ ಮನದಲುದಯಿಸಿದಾಗ
ಸಹಜ ಶಾಂತಿಯ, ದಿವ್ಯಾನುಭೂತಿಯ
ಮಧುರ ಬದುಕಿನ ಕ್ಷಣಗಳು
ಸತ್ಯವೂ,   ಮುಕ್ತವೂ   ಸುಂದರವೂ ಹೌದು.


ಹೆಚ್  ಏನ್  ಪ್ರಕಾಶ್

No comments:

Post a Comment