Pages

Thursday, March 8, 2012

ಮಾನಸಿಕಬಲ ನೀಡು ಪ್ರಭುವೆ

     ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲುಗೊಂಡು ಅಲ್ಲಿ ನಡೆದ ಅಗ್ನಿಹೋತ್ರ, ಭಜನೆಗಳು, ಪಂಡಿತಜಿಯವರ ವಿಚಾರಧಾರೆಗಳನ್ನು ಕಣ್ಮನಗಳಲ್ಲಿ ತುಂಬಿಕೊಂಡ ಸೌಭಾಗ್ಯ ನನ್ನದಾಯಿತು. ಆ ಸಂದರ್ಭದಲ್ಲಿ ನಡೆದ ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರಣ ಮಾಡಿಕೊಂಡಿದ್ದೇನೆ. ಅಗ್ನಿಹೋತ್ರ ನಡೆದ ನಂತರದಲ್ಲಿ ಹೇಳಿದ ಭಜನೆಯ ವಿಡಿಯೋ ಚಿತ್ರಣವನ್ನು ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಅಗ್ನಿಹೋತ್ರ, ಯಜ್ಞಗಳ ಹಿರಿಮೆ ಸಾರುವ ಈ ಭಜನೆ ಮನನೀಯವಾಗಿದೆ, ಅರ್ಥಪೂರ್ಣವಾಗಿದೆ.


     ಪದಶಃ ಅಲ್ಲದಿದ್ದರೂ ಮೂಲ ಭಾವಾರ್ಥ ಮೂಡಿಸುವ ಭಜನೆಯ ಕನ್ನಡ ಅನುವಾದ ಮಾಡಿದ್ದೇನೆ. ಆಸಕ್ತರು ಇದನ್ನು ಹಾಡಿ ಧ್ವನಿಮುದ್ರಿಸಿ ಪ್ರಕಟಿಸಲು ವಿನಂತಿಸುವೆ. ಅಂದು ಹೇಳಲಾದ ಇನ್ನೊಂದು ಭಜನೆ 'ತಲೆ ಮಾತ್ರ ಬಾಗದಿರಲಿ'ಗೆ ಲಿಂಕ್: http://kavimana.blogspot.in/2012/03/blog-post_08.html
-.ಕವೆಂ.ನಾಗರಾಜ್.

ಮಾನಸಿಕಬಲ ನೀಡು ಪ್ರಭುವೆ

ಪೂಜನೀಯ ಪ್ರಭುವೆ ನಮ್ಮಯ ಭಾವ ಉಜ್ವಲ ಮಾಡಿರಿ |
ದೂರಗೊಳಿಸಿ ಛಲ ಕಪಟಗಳ ಮಾನಸಿಕ ಬಲ ನೀಡಿರಿ || ೧ ||


ವೇದ ತೋರಿದ ಮಾರ್ಗ ತಿಳಿಸಿ ಸತ್ಯ ಧಾರಣೆ ಮಾಡಿಸಿ |
ಹರ್ಷದಿರಲಿ ಸಕಲರೆಲ್ಲರು ಶೋಕಸಾಗರ ದಾಟಲಿ || ೨ ||


ವಾಸನಾತೀತರಾಗುವ ಯಜ್ಞಕಾರ್ಯವ ಮಾಡುವಾ |
ಧರ್ಮಪಥದಲಿ ಸಾಗಿ ನಾವು ಲೋಕ ಹಿತವನೆ ಸಾರುವಾ || ೩ ||


ನಿತ್ಯ ಶ್ರದ್ಧಾ ಭಕ್ತಿಯಲಿ ಯಜ್ಞಾದಿಗಳ ನಾವ್ ಮಾಡುವಾ |
ರೋಗ ಪೀಡಿತ ಲೋಕದಿರುವ ಸಕಲ ಸಂಕಟ ಕಳೆಯವಾ || ೪ ||


ಪಾಪ ಅತ್ಯಾಚಾರ ಭಾವ ಮನದ ಮೂಲದೆ ಅಳಿಯಲಿ |

ಯಜ್ಞದಿಂದಲಿ ನರರು ಸಕಲರ ಆಸೆಗಳು ಈಡೇರಲಿ || ೫ ||


ಸಕಲಜೀವಿಗೆ ಶುಭವ ತರಲಿ ಹವನ ಸುಖಕರವೆನಿಸಲಿ |
ವಾಯುಜಲ ಶುಭಗಂಧ ಕೂಡಿ ಲೋಕದೆಲ್ಲೆಡೆ ಹರಡಲಿ || ೬ ||


ಸ್ವಾರ್ಥಭಾವವು ಅಳಿದು ಹೋಗಿ ಪ್ರೇಮಪಥದಲಿ ಸಾಗುವಾ |
ನನಗಲ್ಲವಿದು ಎಂಬ ಭಾವದಿ ಸಾರ್ಥಕತೆ ನಾವ್ ಕಾಣುವಾ || ೭ ||


ಪ್ರೇಮರಸದಲಿ ತೃಪ್ತರಾಗಿ ನಾವು ವಂದನೆ ಸಲಿಪೆವು |
ಕರುಣಾನಿಧಿಯೇ ನಿಮ್ಮ ಕರುಣೆ ಸಿಗಲು ಎಲ್ಲರು ಧನ್ಯರು || ೮ ||

No comments:

Post a Comment