ಬಲು ಎತ್ತರದ ನೀಳಶರೀರದ ಉದ್ದನೆಯ ಗಡ್ಡದ ,ಫಳ ಫಳ ಹೊಳೆಯುವ ಕಣ್ಣಿನ ತೇಜಸ್ವೀ ವ್ಯಕ್ತಿಯೊಬ್ಬರು ನಿಂತಿದ್ದಾರೆ. ಮಾಸಿದ ಕಾವಿ ಬಟ್ಟೆ ಧರಿಸಿದ್ದರೂ ಅವರ ತೇಜಸ್ಸಿನಿಂದ ಆಕರ್ಶಿತನಾಗುತ್ತೇನೆ. ಅಭಯ ಹಸ್ತ ತೋರಿಸುತ್ತಾ ನಿಂತಿದ್ದಾರೆ.
-ಯಾರು ಸ್ವಾಮಿ ನೀವು?
-ಅಯ್ಯೋ ದಡ್ಡ ಗೊತ್ತಾಗಲಿಲ್ಲವೇ?
-ದಡ್ಡ ನೆಂಬ ಅರಿವಿದೆ. ನನ್ನ ಮಕ್ಕಳು, ನನ್ನ ಬಂಧುಗಳೆಲ್ಲಾ ಹೇಳುತ್ತಿರುತ್ತಾರೆ.
-ಅವರು ಹೇಳಲಿ ಬಿಡು. ನಾನು ನಿನಗೆ ಮಾತ್ರ ದರ್ಶನ ಕೊಟ್ಟೆನೆಂದ ಮೇಲೆ ನೀನು ದಡ್ಡ ನೋ ಬುದ್ಧಿವಂತನೂ, ಏನಾದರಾಗಲಿ, ನೀನು ಪುಣ್ಯವಂತ ನೆನಸಿಲ್ಲವೇ?
-ಹೌದು ಸ್ವಾಮಿ, ನಾನು ಪುಣ್ಯ ವಂತನೇ ಹೌದು. ಜೀವನದಲ್ಲಿ ಕಾಣಬೇಕಾಗಿದ್ದ ಹಲವು ಕಷ್ಟಗಳನ್ನು ಕಂಡು ಅನುಭವಿಸಿ , ಸುಖವನ್ನೂ ಕಂಡು ಅನುಭವಿಸಿ ಈಗ ನಿಮ್ಮಂತವರ ಸಹವಾಸ ಸಿಗುತ್ತಿದೆ, ಇದಕ್ಕಿಂತ ಇನ್ನೇನು ಬೇಕು? ನಾನು ಪುಣ್ಯ ವಂತನೇ ಹೌದು.
- ಹೌದು, ಅದೇನು ಹೀಗೆ ಈ ಹೊತ್ತಿನಲ್ಲಿ ಬಂದಿರಿ?
-ನಿನ್ನ ತೊಳಲಾಟ ನೋಡಲಾರದೆ ಬಂದೆ. ಅದೇನೋ " ಗೊಂದಲ ಗೊಂದಲ " ಎಂದು ಹಲಬುತ್ತಿದ್ದೆಯಲ್ಲಾ! ಆ ಬಗ್ಗೆ ನಿನಗೆ ಸತ್ಯ ತಿಳಿಸಲು ಬಂದೆ.
-ಸತ್ಯವನ್ನು ತಿಳಿಸುವಿರಾ? ಯಾರು ಸ್ವಾಮಿ ನೀವು?
-ನಿನಗೆ ನಾನ್ಯಾರೆಂಬುದು ಮುಖ್ಯವೋ? ಅಥವಾ ಸತ್ಯ ದ ವಿಚಾರ ಮುಖ್ಯವೋ?
-ಸತ್ಯ ತಿಳಿಯಬೇಕೆಂಬ ಇಚ್ಛೆ, ನೀವ್ಯಾರು ತಿಳಿಯಬೇಕೆಂಬ ಕುತೂಹಲ!
-ನೋಡು ನಿನ್ನ ಮನಸ್ಸಿನಲ್ಲಿ ಎದ್ದಿರುವ ವಿಚಾರಗಳೆಲ್ಲಾ ಸರಿಯಾಗಿಯೇ ಇದೆ. ಸತ್ಯ ಎಂಬುದು ಒಂದೆ. ಅದೇ ವೇದ. ವೇದದಲ್ಲಿ ಹೇಳಿರುವುದೇ ಸತ್ಯ!
-ವೇದದಲ್ಲಿ ಸಮಾನತೆ ಇದೆ ಎಂದು ಸುಧಾಕರ ಶರ್ಮರು ವೇದ ಮಂತ್ರವನ್ನು ಉಧಾಹರಿಸಿ ಹೇಳುತ್ತಾರೆ. ಆದರೆ ಆಚರಣೆಯಲ್ಲಿ ಪ್ರತಿಶತ 99 ಪುರೋಹಿತರು ಹೇಳುವ ಮಾತು ಇದಕ್ಕೆ ಹೊರತಾಗಿಯೇ ಇದೆಯಲ್ಲಾ! ನಾವು ಮಾಡುತ್ತಿರುವ ಆಚರಣೆಗಳಲ್ಲಿ ಪ್ರತಿಶತ 90 ಕ್ಕಿಂತ ಹೆಚ್ಚು ವೇದ ಭಾಹಿರವೇ ಎಂದು ಶರ್ಮರು ಹೇಳುತ್ತಾರಲ್ಲಾ!
-ನೋಡು ವೇದವಿರುವುದು ಸಮಸ್ತ ಮನುಕುಲದ ಉದ್ಧಾರಕ್ಕಾಗಿ , ಒಂದು ಸುಂದರ ಸಮಾಜಕ್ಕಾಗಿ! ನಿನ್ನ ಅಂತರಂಗದಲ್ಲಿ ಎದ್ದಿರುವ ಪ್ರಶ್ನೆಗಳು ಸರಿಯಾಗಿಯೇ ಇವೆ. ನಿನ್ನ ಅರಿವೇ ನಿನಗೆ ಗುರು ಎಂಬ ಮಾತನ್ನು ನೀನು ಕೇಳಿದ್ದೀಯಾ ತಾನೇ? ಹಾಗಿದ್ದಮೇಲೆ ನಿನಗೆ ಸತ್ಯವೆಂದು ಕಂಡಿದ್ದನ್ನು ಆಚರಿಸು, ಅಸತ್ಯವೆಂದು ಅರಿವಾದದ್ದನ್ನು ನಿನ್ನ ಅಂತ:ಸ್ಸಾಕ್ಷಿ ಗೆ ವಿರುದ್ಧ ವಾಗಿ ಅನುಸರಿಸಬೇಡ.
- ನಾನು ಅನುಸರಿಸದಿದ್ದರೆ ನನ್ನ ಪತ್ನಿ ಪುತ್ರರು ಬೇಸರ ವ್ಯಕ್ತ ಪಡಿಸುತ್ತಾರಲ್ಲಾ!
- ಮತ್ತೊಮ್ಮೆ ನಿನ್ನನ್ನು ದಡ್ಡ ನೆಂದೇ ಕರೆಯಬೇಕಾಗಿದೆಯಲ್ಲಾ!
-ಯಾರ್ಯಾರೋ ಹಾಗೆ ಕರೆಯುತ್ತಿರುವಾಗ ನಿಮ್ಮಂತ ಮಹಾನುಭಾವರೆದುರು ದಡ್ಡ ನೆಂದು ಕರೆಸಿಕೊಳ್ಳಲು ನನಗೆ ಬೇಸರವೆನಿಲ್ಲ.
---------------- ಅರೇ, ಎಲ್ಲಿ ಹೋದಿರಿ ಸ್ವಾಮೀ, ಕಾಣುತ್ತಲೇ ಇಲ್ಲವಲ್ಲಾ?
" ಯಾಕ್ರೀ ಹೀಗೆ ಕೂಗುತ್ತಿದ್ದೀರಿ? .....ಪತ್ನಿ ನನ್ನನ್ನು ಅಲ್ಲಾಡಿಸಿದಾಗ ಎಚ್ಚೆತ್ತು ಕಣ್ ಬಿಡುತ್ತೇನೆ, ಪಕ್ಕದಲ್ಲಿ ಪತ್ನಿಯನ್ನು ಬಿಟ್ಟು ಬೇರೆ ಯಾರೂ ಇಲ್ಲ. ಹಾಗಾದರೆ ನಾನು ಕಂಡಿದ್ದು!................... ಎತ್ತರದ ನೀಳಶರೀರದ ಉದ್ದನೆಯ ಗಡ್ಡದ ,ಫಳ ಫಳ ಹೊಳೆಯುವ ಕಣ್ಣಿನ,ಮಾಸಿದ ಕಾವಿ ಬಟ್ಟೆ ಧರಿಸಿದ್ದ ತೇಜಸ್ವೀ ವ್ಯಕ್ತಿ ????
ಆತ್ಮೀಯರೇ,
ReplyDeleteಈಗ್ಗೆ ನಡೆಸಲಾದ ಸಾಂಕೇತಿಕ ಅಶ್ವಮೇಧ ಯಜ್ಞದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದವು. ನಂತರ ವೇದಗಳಲ್ಲಿ ಪ್ರಾಣಿ ಬಲಿ ಇದೆಯೇ ಇಲ್ಲವೇ? ಎಂಬ ಚಿಂತನೆ ಮಂಥನವಾಯಿತು. ಇಲ್ಲಿ ನಿಜವಾಗಿ ಪ್ರಶ್ನೆ ಮಾಡಬೇಕಾಗಿರುವುದು ಏನೆಂದರೆ ಪ್ರಾಣಿಹಿಂಸೆ ಯಾಗದಲ್ಲಿ ಬೇಕೇ ಬೇಡವೇ? ಇದ್ದರೆ ಏಕೆ ಬೇಕು? ಬೇಡವಾದರೆ ಏಕೆ ಬೇಡ? ಎಂಬುದಾಗಬೇಕಾಗಿತ್ತು. ಆದರೆ, ವೇದದಲ್ಲಿ ಪ್ರಾಣಿಹಿಂಸೆ ಬಗ್ಗೆ ಏನು ಹೇಳಿದೆ ?ಎಂಬುದಾಗಿದೆ. ನನ್ನ ಪ್ರಶ್ನೆ ಇಷ್ಟೇ. ಈ ವಿಚಾರದಲ್ಲಿ ವೇದವನ್ನೇಕೆ ಎಳೆದು ತರುತ್ತಿರಿ? ವೇದದಲ್ಲಿ ಏನಾದರು ಹೇಳಿರಲಿ, ಬಿಟ್ಟಿರಲಿ ಅದು ಇಲ್ಲಿ ಹೇಗೆ ಪ್ರಸ್ತುತ?
ಈ ಬಗ್ಗೆ ಪ್ರಶ್ನೆ ಮಾಡುವ ಮುಂಚೆ ವೇದದಲ್ಲಿ ಹೇಳಿರಬಹುದಾದ ಎಲ್ಲವನ್ನು ನಾವು ಪ್ರಶ್ನಿಸುವ, ಪಾಲಿಸುವ ಸಂಕಲ್ಪವಿದ್ದಲ್ಲಿ ಖಂಡಿತ ಪ್ರಶ್ನೆ ಮಾಡೋಣ. ಅದರಂತೆ ಪಾಲಿಸೋಣ. ಆದರೆ ಇಲ್ಲಿ ಕೇವಲ ಯಾವುದೊ ಒಂದು ಆಚರಣೆಗೆ ಮಾತ್ರ ಸೀಮಿತ ಮಾಡಿ ರಬ್ಬರಿನಂತೆ ಎಳೆಯುವುದರಿಂದಹೆಚ್ಚಿನ ಪ್ರಯೋಜನವೇನು ಸಿಗದು . ಏಕೆಂದರೆ ವೇದದಲ್ಲಿ ಹೇಳಿರುವ ಹೆಚ್ಚಿನ ಆಚರಣೆಗಳು ಇಂತಹ ಯಾಗ ಯಜ್ಞಗಳಲ್ಲಿ ನಡೆಯುವುದಿಲ್ಲ. ಪ್ರಶ್ನಿಸುವುದೇ ಆದರೆ ಎಲ್ಲವನ್ನು ಪ್ರಶ್ನಿಸಿ. ವೇದಗಳಲ್ಲಿ ಹೇಳಿರುವ ಎಲ್ಲವನ್ನು ಈ ಲೌಕಿಕ ಜಗತ್ತಿನಲ್ಲಿ ಪಾಲಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೂ ಕಾಲಮಾನ ಪರಿಸ್ಥಿತಿಗೆ ತಕ್ಕಂತೆ ಎಷ್ಟು ಸಾಧ್ಯವೋ ಅಷ್ಟನ್ನು ಇಂದಿಗೂ ನಿರ್ಮಲವಾದ ಮನಸ್ಸಿನಿಂದ ಅವರವರ ನಂಬುಗೆಗೆ ತಕ್ಕಂತೆ ಆಚರಿಸಿಕೊಂಡು ಬರುತ್ತಿದ್ದಾರೆ. ಒಳ್ಳೆಯದನ್ನು ಆಚರಣೆಗೆ ತರುವ ಸಂಕಲ್ಪ ಮಾಡಿದರೆ ಕೆಟ್ಟ ಆಚರಣೆಗಳು ತನ್ನ ತನ ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿ ಒಳ್ಳೆಯದು ಎನ್ನುವುದು ಸಾಪೆಕ್ಷ್ಯವಾದರೂ, ಒಳ್ಳೆಯದನ್ನು ಅನುಭವದ ಆಧಾರದಲ್ಲಿ ಸಾಧಿಸಬಹುದಾಗಿದೆ. ಇದಕ್ಕೆ ನಾವು ಮಾಡುವ ದೃಡ ಸಂಕಲ್ಪವೇ ಸಹಕಾರಿ. ವೇದಗಳು ಬದುಕಿನ ದಾರಿ ತೋರಿಸುವ ದಾರಿ ದೀಪ ಎಂದು ನಂಬಿರುವ ಮಂದಿಗೆ ಗೊಂದಲವಾಗುವುದು ಬೇಡ. ಏಕೆಂದರೆ, ವೇದವನ್ನು ಸಮಗ್ರವಾಗಿ ಚಿಂತನೆ ಮಾಡಿದವರು ಈ ಬಗ್ಗೆ ತಲೆ ಕೊಳ್ಳುವುದಿಲ್ಲ. ಪಾಮರರಾದ ನಮನ್ನು ಗೊಂದಲಗಳ ಗೋಜಲಿಗೆ ತಳ್ಳುವುದು ಖಂಡಿತ ಅನಪೇಕ್ಷಿತ. ವೇದಸುಧೆಯಲ್ಲಿ ನಮಗೆ ಸಿಗುತ್ತಿರುವ ಸುಧೆ ನಿರಂತರವಾಗಿ ಸಿಗುತ್ತಲೇ ಇರಲಿ. ಇದು ನನ್ನ ಕಳಕಳಿಯ ಮನವಿ.
ಹೆಚ್ ಏನ್ ಪ್ರಕಾಶ್
ನಿಮ್ಮ ಅನಿಸಿಕೆ ಸೂಕ್ತ ಮತ್ತು ಸಮಂಜಸವಾಗಿದೆ, ಪ್ರಕಾಶರೇ. ನನ್ನ ವೈಯಕ್ತಿಕ ಅಭಿಮತವೇನೆಂದರೆ ವೇದದಲ್ಲಿ ಹೇಳಿರಲಿ, ಇಲ್ಲದಿರಲಿ, ಪ್ರಾಣಿಹಿಂಸೆ ಯಜ್ಞ/ಯಾಗದ ಹೆಸರಿನಲ್ಲಿ ಸಲ್ಲದು. ಇಲ್ಲಿ ಈ ವಿಷಯ ಏಕೆ ಪ್ರಸ್ತುತವಾಗುತ್ತದೆಯೆಂದರೆ ಈಗ ವೇದದ ಹೆಸರಿನಲ್ಲಿ ಅಪದ್ಧ ಆಚರಣೆಗಳು ನಡೆಯುತ್ತಿವೆ. ಹಾಗಾಗಿ ಆ ಕುರಿತು ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ. ನಿಜವಾಗಿ ವೇದಾಧ್ಯಯನ ಮಾಡಿರುವವರ ಸಂಖ್ಯೆ ಎಷ್ಟು? ಗಿಣಿಪಾಠದಂತೆ ವೇದಮಂತ್ರಗಳನ್ನು - ಅದರಲ್ಲೂ ಕೇವಲ ಪೂಜಾಪಾಠಗಳಿಗೆ ಸಂಬಂಧಿಸಿ - ಕಲಿತು ಅದರ ಅರ್ಥವನ್ನೇ ತಿಳಿಯದೆ ವೇ|ಬ್ರ|ಶ್ರೀ ಗಳೆನಿಸಿದವರ ಸಂಖ್ಯೆಯೇ ಬಹಳ.ಹೆಚ್ಚಿನವರು ಅದನ್ನು ಕಲಿಯುತ್ತಿರುವುದೂ ಹೊಟ್ಟೆ ಹೊರೆಯಲು ಎಂಬುದು ವಿಪರ್ಯಾಸ. ಈಗ ಶ್ರದ್ಧಾಕೇಂದ್ರಗಳೆನಿಸಿರುವ ದೇವಸ್ಥಾನಗಳಲ್ಲಿ ಇರುವ ಅರ್ಚಕರುಗಳು ವೇದೋಕ್ತ ರೀತಿಯಲ್ಲಿ ಪೂಜೆ ನಡೆಸುತ್ತಿದ್ದಾರೆಂದು ಹೇಳುವುದು ಕಷ್ಟ. ಅವುಗಳು ವ್ಯವಹಾರ/ವ್ಯಾಪಾರಿ ಕೇಂದ್ರಗಳೆನಿಸಿವೆ. ಮಠಗಳಲ್ಲಿ ಸಹ ಶ್ರದ್ಧೆಯಿಂದ ವೇದ ಕಲಿಸುವವರು, ಕಲಿಯುವವರ ಸಂಖ್ಯೆ ವಿರಳ. ಹೀಗಾಗಿ ದಾರಿ ತಪ್ಪಿಸುವವರ ಸಂಖ್ಯೆಯೇ ಹೆಚ್ಚಾಗಿ, ಜನರೂ ಅವರುಗಳನ್ನೇ ನಂಬುವ ಸ್ಥಿತಿಯಿರುವ ಇಂದಿನ ದಿನಗಳಲ್ಲಿ ವಿಚಾರವಾದಿ(ವ್ಯಾಧಿ)ಗಳೆನಿಸಿಕೊಂಡವರಿಂದ 'ಪುರೋಹಿತಶಾಹಿ' ಎಂಬ ಹಣೆಪಟ್ಟಿ ಹಚ್ಚಿಸಿಕೊಳ್ಳುವ ಪರಿಸ್ಥಿತಿಯಿದೆ. ವೇದದ ಹೆಸರಿನಲ್ಲಿ 'ಮೇಧ' ಸಲ್ಲದು ಅಲ್ಲವೇ?
ReplyDeleteಶ್ರೀ ಪ್ರಕಾಶ್,
ReplyDeleteಆರಂಭದಲ್ಲಿ ನಾನು ಮಂಡಿಸಿದ ಲೇಖನವನ್ನು ನೀವು ಓದಿದಿರೋ ಇಲ್ಲವೋ ಗೊತ್ತಿಲ್ಲ.ಅಥವಾ ಬರೀ ಚರ್ಚೆ ನೋಡಿದಿರೋ? ಏನಾದರೂ ಇರಲಿ.ಸಾಂಕೇತಿಕ ಅಶ್ವಮೇಧಯಾಕಕ್ಕೆ ಬಂದಿದ್ದ ಕೆಲವು ವೈದಿಕರು ನಮ್ಮ ಮನೆಯಲ್ಲಿ ತಂಗಿದ್ದರು. ಪ್ರಾಣಿಬಲಿ ಇಲ್ಲದೆ ಕೆಲವು ಯಜ್ಞಗಳು ಮುಗಿಯುವುದೇ ಇಲ್ಲವೆಂದು ತಿಳಿಸಿದಾಗ ವೇದದಲ್ಲಿ ಪ್ರಾಣಿಬಲಿಗೆ ಅವಕಾಶವೇ ಇಲ್ಲವೆಂದು ಆಧಾರ ಸಹಿತ ನಾನು ಲೇಖನ ಬರೆದೆ. ಅದು ಆರೋಗ್ಯ ಪೂರ್ಣ ವಾಗಿಯೇ ಮುಂದುವರೆಯಿತು. ಚರ್ಚೆಯಲ್ಲಿ ಪಾಲ್ಗೊಂಡು ವಿರುದ್ಧವಾಗಿ ವಿಚಾರವನ್ನು ಮಂಡಿಸಿರುವವರೂ ಕೂದ ಇಂದು ಪ್ರಾಣಿಬಲಿ ಬೇಡವೆಂದೇ ಹೇಳಿದ್ದಾರೆ. ಆದರೆ ವೇದದಲ್ಲಿ ಪ್ರಾಣಿಬಲಿಗೆ ಅವಕಾಶ ಇಲ್ಲವೆಂಬುದೇ ನನ್ನ ವಾದ. ವಿರುದ್ಧ ವಿಚಾರ ಮಂಡಿಸಿರುವವರು ಮಹಾಭಾರತ, ರಾಮಾಯಣ, ಭಾಗವತ, ಪುರಾಣಗಳ ಆಧಾರಗಳನ್ನು ಕೊಟ್ಟಿದ್ದಾರೆ. ಹಾಗಾಗಿ ಮಹಾಭಾರತ, ರಾಮಾಯಣ, ಭಾಗವತ, ಪುರಾಣಗಳನ್ನು ವೇದದ ಜೊತೆ ಜೊತೆಗೆ ಗುರುತಿಸಲು ಸಾಧ್ಯವಿಲ್ಲ. ವೇದಕ್ಕೆ ಅದರದೇ ಆದ ಮಹತ್ವವಿದೆ. ಇಡೀ ಮಾನವ ಕೋಟಿಯ ಅಭ್ಯುದಯಕ್ಕಾಗಿಯೇ ಇರುವ ವೇದ ವನ್ನು ಕೆಲವರಿಗೆ ಸೀಮಿತ ಗೊಳಿಸುವ , ಅಹಿಂಸೆಯನ್ನು ಪ್ರತಿಪಾದಿಸುವ ವೇದದಲ್ಲಿ ಹಿಂಸೆಗೆ ಅವಕಾಶ ಇದೆ ಎಂಬುದನ್ನು ಒಪ್ಪಬೇಕೇಕೆ? ಇಲ್ಲಿ ರಬ್ಬರಿನಂತೆ ಎಳೆಯುವುದು ಏನೂ ಇಲ್ಲ. ವಿರುದ್ಧವಾದ ವಿಚಾರ ಮಂಡಿಸಿರುವ ಇಬ್ಬರು ತರುಣರು ಸಾಕಷ್ಟು ಅಧ್ಯಯನ ಮಾಡಿ ಮಹಾಭಾರತ, ರಾಮಾಯಣ, ಭಾಗವತ, ಪುರಾಣಗಳ ಉಧಾಹರಣೆಗಲನ್ನು ಕೊಟ್ಟಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ಇಂತಹ ತರುಣರು ವೇದವನ್ನು ಅಧ್ಯಯನ ಮಾಡಿ ಸತ್ಯದ ಪರವಾಗಿ ನಿಲ್ಲುವ ದಿನಗಳು ದೂರವಿಲ್ಲ.