Pages

Monday, July 16, 2012

ಓದುವ ವಿಧ್ಯಾರ್ಥಿಗಳಿಗೆ ಸಹಾಯ ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ



ನಾನು S S L C  ಓದುತ್ತಿದ್ದ ಸಮಯದಲ್ಲಿ ನಮ್ಮ ಮನೆಗೆ ಒಬ್ಬ ವಿಧ್ಯಾರ್ಥಿ ವಾರಾನ್ನಕಾಗಿ ಬರುತ್ತಿದ್ದ.. ವಾರಾನ್ನ ಎಂದರೆ ವಾರದ ಒಂದು ದಿನ, ಒಂದು ಹೊತ್ತಿನ ಅಥವಾ ಎರಡು ಹೊತ್ತಿನ ಊಟವನ್ನು ಮಾಡಿಕೊಂಡು ಹೋಗುವುದು. ಆ ದಿನಗಳಲ್ಲಿ ಹಳ್ಳಿಯಿಂದ   ಬರುವ ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ವಾಸಮಾಡಲು ಅನಾಥಾಲಯಗಳಲ್ಲಿ ಜಾಗ ಸಿಗುತ್ತಿತ್ತು. ಆದರೆ, ಊಟಕ್ಕೆ ಈ ರೀತಿಯಾಗಿ ತಮ್ಮದೇ ವರ್ಗದ ಮನೆಗಳಲ್ಲಿ ಉಚಿತವಾಗಿ ವಾರದ ಒಂದು ದಿನ ಅಥವಾ ಅರ್ಧ ದಿನದ ಊಟದ ವ್ಯವಸ್ಥೆ ಕೇಳಿಕೊಂಡು ಬರುತ್ತಿದ್ದರು. ಅಂದಿನ ದಿನಗಳಲ್ಲಿ ಹೋಟೆಲ್ಲಿಗೆ ಅಥವಾ ಮೆಸ್ಸಿಗೆ ಹೋಗುವಷ್ಟು ಅನುಕೂಲ ಹೆಚ್ಚಿನವರಲ್ಲಿ ಇರುತ್ತಿರಲಿಲ್ಲ.  ಹೀಗೆ ಕೇಳಿಕೊಂಡು ಬಂದ ವಿಧ್ಯಾರ್ಥಿಗಳ ಕುಲ ಗೋತ್ರ ವಿಚಾರಿಸಿಕೊಂಡು ಯಥಾನುಶಕ್ತಿ ವಿದ್ಯಾರ್ಥಿಗಳಿಗೆ ವಾರನ್ನಕ್ಕೆ ಒಪ್ಪಿಗೆ ನೀಡುತ್ತಿದ್ದರು.  ಆ ವಿಧ್ಯಾರ್ಥಿ ನಿಗದಿತ ವಾರದ ದಿನದಂದು ಬಂದು ಊಟ, ತಿಂಡಿ ಮುಗಿಸಿ ಹೋಗುತ್ತಿದ್ದ.  ಪ್ರತಿ ವಿಧ್ಯಾರ್ಥಿ ಹೀಗೆ ಹತ್ತಾರು ಮನೆಗಳ ವ್ಯವಸ್ಥೆ ಮಾಡಿಕೊಂಡು ತಮ್ಮ ವಿಧ್ಯಾಭ್ಯಾಸ ಮುಗಿಸುತ್ತಿದ್ದರು.

ನಮ್ಮ ಮನೆಯಲ್ಲಿ ಕೂಡ ಮೂವರು ವಿಧ್ಯಾರ್ಥಿಗಳಿಗೆ ಈ ರೀತಿಯ ವಾರಾನ್ನದ ವ್ಯವಸ್ಥೆ ಇತ್ತು. ನಮ್ಮದು ಬಡ ಕುಟುಂಬವೇ.  ನಮ್ಮ ಮನೆಯಲ್ಲೂ ಆರು ಜನ ಮಕ್ಕಳೊಟ್ಟಿಗೆ ನಮ್ಮ ಅಪ್ಪ ಅಮ್ಮ ಸೇರಿ ಎಂಟು ಮಂದಿಯ ಜೊತೆಗೆ ವಾರಾನ್ನದ ವಿಧ್ಯಾರ್ಥಿಯ   ಊಟವು    ಸೇರುತ್ತಿತ್ತು .  ಇಷ್ಟು  ಜನಗಳ   ತುತ್ತಿನ  ಚೀಲ  ತುಂಬುವ   ಹೊಣೆ  ನನ್ನ  ತಂದೆಯ  ಏಕಮಾತ್ರ  ಆದಾಯದಿಂದ  ಸಾಗುತಿತ್ತು.   ಒಮ್ಮೆ ಕೂಡ ನನ್ನ ಅಪ್ಪ ತನಗಾಗುತ್ತಿದ್ದ ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿಯನ್ನು  ನಮ್ಮೆದುರಿಗೆ ಎಂದಿಗೂ ಹೇಳಿಕೊಂಡವರಲ್ಲ.

ಒಂದು ದಿನ ರಾತ್ರಿ      ಎಲ್ಲ ಎಂಟು ಜನರು ಊಟಕ್ಕೆ ಕೂತಿದ್ದೆವು.  ನನ್ನ ಅಮ್ಮ ಎಲ್ಲರಿಗೂ ಅನ್ನ ಬಡಿಸಲು ಪ್ರಾರಂಭ ಮಾಡಿದರು.  ಅಂದು ಬೆಳಿಗ್ಗೆ ಮಾಡಿ ಉಳಿದ ಅನ್ನವನ್ನು ಸಂಜೆಗೆ ಬಡಿಸಲು ಇಟ್ಟಿದ್ದರು. ಬಿಸಿಬಿಸಿ  ಅನ್ನ ಬಡಿಸುವ  ಬದಲು ಬೆಳಗಿನ ತಂಗಳು ಅನ್ನವನ್ನು ವಾರಾನ್ನದ ಹುಡುಗನ  ಕಡೆಯಿಂದ ಬಡಿಸಲು ಅಮ್ಮ ಪ್ರಾರಂಭಿಸಿದರು.  ಅಮ್ಮನ ಉದ್ದೇಶ ತಣ್ಣನೆಯ ಅನ್ನ ಖಾಲಿಯಾದೊಡನೆ ಬಿಸಿ ಅನ್ನ ಬಡಿಸುವ ಯೋಚನೆ. ಆ ಹುಡುಗ ಮೊದಲಲ್ಲೇ ಕೂತ ಕಾರಣ ಆ ಅನ್ನ ಅವನ ತಟ್ಟೆಗೆ ಅಮ್ಮ ಬಡಿಸಿದರು. ಆಚೆ ಬದಿಯಲ್ಲಿ ಕೂತ ನನ್ನ ಅಪ್ಪ "ಆ ಹುಡುಗನಿಗೆ ಬಿಸಿ ಅನ್ನ ಬಡಿಸು, ಅವನಿಗೆ ತಂಗಳು ಅನ್ನ ಬೇಡ " ಎಂದರು   .  ತಕ್ಷಣ    ಆತನಿಗೆ    ಬಡಿಸಿದ    ತಂಗಳು ಅನ್ನ ತೆಗೆದು    ಬಿಸಿ ಅನ್ನ ಬಡಿಸಿದರು ಅಮ್ಮ.  ಅಮ್ಮನಿಗೆ  ಕೊಂಚ  ಬೇಸರ  ಹಾಗೂ  ಇರಿಸುಮುರುಸು ಆಯಿತು .   ಅವರ  ಮುಖದಲ್ಲಿ  ಆದ   ಬದಲಾವಣೆ  ಇತರರಿಗೆ     ಗೊತ್ತಾಗುತ್ತಿತು  .  ಇದನ್ನು   ಆ ಹುಡುಗನು   ಗಮನಿಸಿದ   ಆತನಿಗೂ   ತುಂಬಾ            ಕಷ್ಟ    ಎನಿಸಿತು   .  ತಕ್ಷಣ  ಆ ಹುಡುಗ "ಇಲ್ಲ,.....  ನನಗೂ ಬೆಳಗಿನ ಅನ್ನವನ್ನೇ  ಹಾಕಿ , ಬಿಸಿ ಅನ್ನ ಬೇಡ" ಎಂದು ಬೇಡಿಕೊಂಡ .   ಪಕ್ಕದಲ್ಲಿ  ಇದ್ದ  ನಮ್ಮೆಲ್ಲರಿಗೂ  ಅಪ್ಪನ  ಮಾತು  ಆ ಸಮಯದಲ್ಲಿ ಸರಿ  ಅನ್ನಿಸಲಿಲ್ಲ .   ಇದನ್ನೆಲ್ಲಾ  ಸೂಕ್ಹ್ಮವಾಗಿ  ಗಮನಿಸಿದ  ನನ್ನ ತಂದೆಯವರು,          " ನೀನು       ಬಿಸಿ ಅನ್ನವನ್ನೇ   ಊಟಮಾಡು .  ಪರೀಕ್ಷೆ   ಸಮಯ  . ನೀನು  ಹುಷಾರು  ತಪ್ಪಿ  ಮಲಗಿದರೆ  ನೋಡಲು   ಯಾರಿದ್ದಾರೆ   .  ಈ ಮಕ್ಕಳಿಗೆ   ನಾನಿದ್ದೇನೆ.   ನಿಂಗೆ  ಇಲ್ಲಿ  ಯಾರಿದ್ದಾರಪ್ಪ ?  ಊಟ ಮಾಡು , ಚನ್ನಾಗಿ  ಓದು "  ಎಂದು ಹೇಳಿದರು.  ಈ ಮಾತು  ಕೇಳಿದ  ಅಮ್ಮನ  ಮುಖದಲ್ಲಿ     ಒಂದು ರೀತಿಯ ಸಮಾಧಾನ  ಕಂಡಿತು ಎಲ್ಲರು  ಊಟ ಮುಗಿಸಿ ಎದ್ದರು  .

ನಂತರದಲ್ಲಿ ನಮ್ಮನ್ನೆಲ್ಲ ಕೂರಿಸಿಕೊಂಡು ವಾರಾನ್ನಕ್ಕೆ ಬರುವ ಹುಡುಗರ ಕಷ್ಟಗಳು ಎಷ್ಟಿರುತ್ತದೆ? ಎಂಬುದನ್ನು ತಮ್ಮ ಜೀವನದಲ್ಲಿ ಆದ ಘಟನೆಗಳನ್ನು ವಿಸ್ತಾರವಾಗಿ ಹೇಳಿದರು. ನಮ್ಮೆಲ್ಲರಿಗೂ ಆಗ ಅಪ್ಪನ ಬಗ್ಗೆ ಹೆಮ್ಮೆ ಎನಿಸಿತು. ಈ ಘಟನೆ ಚಿಕ್ಕದಾಗಿ ಕಾಣಬಹುದು, ಆದರೆ ಇದು ನಮಗೆ ಹೇಳಿದ ಪಾಠ ಮಾತ್ರ ತುಂಬಾ ದೊಡ್ಡದಾಗಿತ್ತು. ಯಾವ ಬೀಜದ ಶಕ್ತಿ ಹೇಗೆ ಇರುತ್ತೆ ಎಂಬುದನ್ನು ಅರಿಯಲು ಕಾಯಬೇಕಾಗುತ್ತದೆ. ಒಮ್ಮೆಲೇ ತೀರ್ಮಾನಿಸಲು ಸಾಧ್ಯವಾಗದು.  ನಮ್ಮ ಮನೆಯಲ್ಲಿ ವಾರಾನ್ನ ಮಾಡಿದ ಒಬ್ಬ ವಿದ್ಯಾರ್ಥಿ ಉನ್ನತ ಹುದ್ದೆಗೆ ಸೇರಿಕೊಂಡಾಗ ನನ್ನ ಅಪ್ಪನ ಆಶೀರ್ವಾದ ಪಡೆದು ಹೋಗಲು ಬಂದಿದ್ದರು. ಆತ " ನಿಮ್ಮ ಉಪಕಾರ ಮರೆಯಲಾರೆ, ನಿಮ್ಮ ಋಣ ಹೇಗೆ ತೀರಿಸಲಿ? " ಎಂದು ಕೇಳಿದಾಗ ನನ್ನ ಅಪ್ಪ ಕೊಟ್ಟ ಉತ್ತರ " ನಿನ್ನಂತೆ ಇರಬಹುದಾದ ವಿದ್ಯಾರ್ಥಿಗೆ ಸರಿಯಾದ ಸಮಯದಲ್ಲಿ ಸಹಾಯ ಮಾಡು, ನಿನ್ನ ಋಣ ತೀರುತ್ತೆ " ಎಂದು ಆಶೀರ್ವಾದ ಮಾಡಿ ಕಳುಹಿಸಿ ಕೊಟ್ಟರು.

ನನ್ನ ಅಪ್ಪ  ನಮಗೂ ಪದೇ ಪದೇ ಹೇಳುತ್ತಿದ್ದರು. " ಓದುವ ವಿಧ್ಯಾರ್ಥಿಗಳಿಗೆ ಸಹಾಯ    ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ  "  ಈ ಮಾತು ನಮಗೆ ಯಾವಾಗಲು ಜ್ಞಾಪಕಕ್ಕೆ ಬರುತ್ತದೆ.  ಪುಣ್ಯವಶಾತ್ ನಾನೂ ಕೂಡ ಒಂದು ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಭಗವಂತ ಕರುಣಿಸಿದ ಕಾರಣ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ  ನನ್ನದಾಗಿದೆ. ನನ್ನ ತಂದೆಯವರು  ನನಗೆ ವಿದ್ಯಾಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಕೇಳಿಯೇ ತುಂಬಾ ಖುಷಿ ಪಟ್ಟು, "ಈ ಸದವಕಾಶವನ್ನು ಸರಿಯಾಗಿ ಬಳಸಿಕೋ" ಎಂದು ಹಲವಾರು ಬಾರಿ ನನಗೆ ಹೇಳಿದ್ದುಂಟು.


ಹೆಚ್ ಏನ್ ಪ್ರಕಾಶ್ 

No comments:

Post a Comment