ಇತ್ತೇಚೆಗೆ ಫೆಸ್ ಬುಕ್ ನ ವೇದಿಕೆಯೊಂದರಲ್ಲಿ ಕೆಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆ ನಡೆಯುತ್ತಿತ್ತು. ಯಾರೋ ನನ್ನನ್ನು ಅಲ್ಲಿ ಎಳೆದುಕೊಂಡು ಹೋಗಿ ಸೇರಿಸಿದರು. ನನಗೆ ಅಂತಹ ಚರ್ಚೆಗಳು ಅನಾವಶ್ಯಕ ಅನಿಸಿದ್ದರಿಂದ ನಿರಾಸಕ್ತನಾಗಿದ್ದೆ. ಆದರೆ ಅಲ್ಲಿ ನಡೆಯುವ ಕೆಲ ಅಸಂಬದ್ಧ ವಿಷಯ ಮಂಡನೆಯನ್ನು ನೋಡಿ ಸಹಿಸಲಾಗದೇ ನಾನೂ ಚರ್ಚೆಯಲ್ಲಿ ಧುಮುಕಿದೆ. ಅನೇಕ ವಿಷಯಗಳ ಚರ್ಚೆಯಾದ ನಂತರ ಮತ್ತು ಇತ್ತೀಚಿನ ಕೆಲ ವಿದ್ವಾಂಸರ ಜನಪ್ರಿಯ ಪ್ರವಚನ ಮತ್ತು ಪುಸ್ತಕಗಳನ್ನು ಓದಿದಾಗ, ಹಾಗೂ ಬೆಂಗಳೂರಿನಂಥ ನಗರದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ಜನರ ಜೊತೆ ಕೆಲ ದಿನಗಳಿಂದ ಒಡನಾಡಿದ ನಂತರ ಗಮನಕ್ಕೆ ಬಂದ ವಿಷಯ ಏನೆಂದರೆ, ಭಾರತದ ಬಹುತೇಕ ಅಕ್ಷರಸ್ಥರು ವಿಚಾರವಂತರು ನಮ್ಮ ಭಾರತೀಯ ಧಾರ್ಮಿಕ ಆಚರಣೆಗಳ ಹಿಂದಿನ ಮರ್ಮಗಳನ್ನು ಅಥವಾ ಉದ್ದೇಶಗಳನ್ನು ತಿಳಿಯುವಲ್ಲಿ ಆಸಕ್ತರಾಗಿದ್ದಾರೆ. ನಗರಗಳಲ್ಲಿ ಅಂಥವರ ಸಂಖ್ಯೆ ತುಂಬಾ ಬೆಳೆಯುತ್ತಿದೆ. ಆದರೆ ಅಂಥವರಿಗೆ ಅವರಿಗೆ ಬೇಕಾದ ವಿಷಯಗಳನ್ನು ತಿಳಿಯುವ ಸರಿಯಾದ ''ದಾರಿ'' ಗೊತ್ತಿಲ್ಲದ ಕಾರಣ ದೇವಸ್ಥಾನಗಳ ಅರ್ಚಕರು ಹಾಗೂ ಟಿವಿ ಗಳಲ್ಲಿ ಬರುವ ಏನೂ ಓದಿಕೊಳ್ಳದ ನಿರ್ಲಜ್ಜ ಜ್ಯೋತಿಷಿಗಳನ್ನು ಆಶ್ರಯಿಸುತ್ತಿದ್ದಾರೆ. ಇಂತಹ ಜನ ಸಮೂಹದ ದೃಷ್ಟಿಯಲ್ಲಿ ಟಿವಿಗಳಲ್ಲಿ ಅಲ್ಪ-ಸ್ವಲ್ಪ ಚೆನ್ನಾಗಿ ಮಾತಾಡುವವರು ಕೂಡ ಮಹಾತ್ಮರಾಗಿ ಕಾಣುತ್ತಿದ್ದಾರೆ, ಹಾಗಾಗಿ ಜ್ಯೋತಿಷ್ಯದ ಕಾರ್ಯಕ್ರಮಗಳಿಗೆ ವಿಪರೀತ TRP ಬರುತ್ತಿದೆ ಮತ್ತು ಎಲ್ಲ ಚಾನೆಲ್ ಗಳು ಬೆಳಗಿನ ಹೊತ್ತು ಇಂತಹ ಕಾರ್ಯಕ್ರಮಗಳಿಗೆ ಮೀಸಲಾಗುತ್ತಿವೆ. ಇತ್ತೀಚಿನ ಶ್ರೀಮಂತ ಆಂಗ್ಲ ಶಾಲೆಗಳಲ್ಲಿ ಕೂಡ ಹಬ್ಬಗಳು ಯಾಕೆ ಮಾಡಬೇಕು ? ಮುಂತಾದ ವಿಷಯಗಳನ್ನು ಹಬ್ಬಗಳ ಮುನ್ನಾ ದಿನಗಳಲ್ಲಿ ಮಕ್ಕಳಿಗೆ ಹೇಳಿ ಕಳಿಸುತ್ತಿರುವುದು ಆಶ್ಚರ್ಯದ ವಿಚಾರ. ಇತ್ತೀಚೆಗೆ ನಾನು ಭೇಟಿಯಾದ ಮಹಿಳೆಯೊಬ್ಬರು ''ಈ ಯುಗಾದಿ ಹಬ್ಬದ ಬಗ್ಗೆ ನನಗಿಂತ ನನ್ನ ಆರು ವರ್ಷದ ಮಗುವಿಗೆ ಚೆನ್ನಾಗಿ ಗೊತ್ತಿದೆ'' ಎಂದು ಹೇಳಿಕೊಳ್ಳುವಾಗ ಆಕೆಯ ಮುಖದಲ್ಲಿ ಕೀಳರಿಮೆಯ ಜೊತೆಗೆ..''ನನ್ನ ಮಗನನ್ನು ಅಂತಹ ಉತ್ತಮ ಶಾಲೆಯಲ್ಲಿ ಒದಿಸುತ್ತಿದ್ದೇವೆ'' ಎಂಬ ಜಂಬ ಹೆಚ್ಚಾಗಿ ಕಾಣುತ್ತಿತ್ತು. ನಿಮ್ಮ ಮಕ್ಕಳಿಗೆ ಇಂಥದ್ದನ್ನೆಲ್ಲ ಕಲಿಸುತ್ತಿದ್ದೇವೆ ಎಂಬ ಪ್ರಲೋಭನೆಯೊಂದಿಗೆ ಹೆಚ್ಚಿನ ಡೊನೇಶನ್ ಪೀಕುತ್ತಿದ್ದೇವೆ ಎಂಬ ವಿಷವನ್ನು ಗಮನಕ್ಕೆ ಬಾರದ ಹಾಗೆ ಮಾಡುವ ಶಿಕ್ಷಣ ವ್ಯವಸ್ಥೆಯ ಹೊಸ ವ್ಯಾಪಾರ ತಂತ್ರ ಇದು ಎಂದು ಆಕೆಗೆ ಅರ್ಥವಾಗಿರಲಿಲ್ಲ. ಒಟ್ಟಿನಲ್ಲಿ ''ನೀನು ದುಡ್ಡು ಕೊಡು, ನಾವು ಎಲ್ಲ ನೀಡುತ್ತೇವೆ'' ಎನ್ನುವ ವ್ಯಾಪಾರ ತಂತ್ರ. ಮತ್ತು ''ನಾವು ದೊಡ್ದು ಕೊಡುತ್ತೇವೆ, ಹಾಗಾಗಿ ನಮ್ಮ ಜವಾಬ್ದಾರಿ ಎಲ್ಲ ಮುಗಿಯಿತು'' ಎನ್ನುವ ಪೋಷಕರ ಮನಸ್ಥಿತಿ- ಈ ಎರಡೂ ಒಟ್ಟೊಟ್ಟಿಗೆ ಕಂಡು ಬರುತ್ತಿವೆ. ಈ ಸ್ಥಿತಿ ಶಿಕ್ಷಣದಲ್ಲಿ ಮಾತ್ರ ಅಲ್ಲ, ಇಡಿಯಾದ ಮಾರುಕಟ್ಟೆ....ಇದೇ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಭಾರತೀಯ ಧಾರ್ಮಿಕ ಆಚರಣೆಗಳ ವಿಷಯಕ್ಕೆ ಮತ್ತೆ ಬರುವುದಾದರೆ, ನಗರ ಜೀವನ ಹುಟ್ಟು ಹಾಕುವ ಅನೇಕ ಸಮಸ್ಯೆಗಳ ನಿವಾರಣೆ, ನಾಳಿನ ಬಗೆಗಿನ ಭಯ, ಜ್ಞಾನದ ಕೊರತೆ, ಅತಿ ಆಸೆ ಮುಂತಾದ ಅನೇಕ ಕಾರಣಗಳಿಗಾಗಿ ಜನ ಜ್ಯೋತಿಷಿಗಳ ಮತ್ತು ದೇವಸ್ಥಾನಗಳ ಮುಂದೆ ತಂಡೋಪ ತಂಡವಾಗಿ ಕಾಣಿಸುತ್ತಿದ್ದಾರೆ. ಮಂತ್ರಗಳ -ಸ್ತೋತ್ರಗಳ ಕಲಿಯುವುವಿಕೆ ಮುಂತಾದವುಗಳು ಹೆಚ್ಚುತ್ತಿವೆ. ಇನ್ನು ಅನೇಕರು ಪೂಜಾ-ಆಚರಣೆಗಳ ಹಿನ್ನೆಲೆಯನ್ನು ತಿಳಿಯುವ ನಿಟ್ಟಿನಲ್ಲಿ ಅತೀ ಉತ್ಸುಕರಾಗಿದ್ದಾರೆ. ಈ ಎಲ್ಲ ಆಚಾರ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆ ಹೊಂದಿವೆಯೇ ಇಲ್ಲವೇ ? ಎಂದು ತಿಳಿಯುವ ಕುತೂಹಲಿಗಳ ಸಂಖ್ಯೆಯೂ ದೊಡ್ಡದಿದೆ. ಈ ಉದ್ದೇಶದ ಹಿಂದೆ....ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣ ಇಲ್ಲ . ಶ್ರದ್ಧೆ ಮತ್ತು ಆಸಕ್ತಿ ಇದ್ಯಾವುದೂ ಇಲ್ಲ. ಒಂದು ದೊಡ್ಡ ಸಮುದಾಯವೇ ಸಂಪೂರ್ಣವಾಗಿ ಒಂದು ಸನ್ನಿಗೆ ಒಳಗಾಗಿದೆ .. ಅದೇನೆಂದರೆ ಭಾರತೀಯೇತರ ಧರ್ಮಗಳಲ್ಲಿ ಅಥವಾ ಹಿಂದೂಯೇತರ ಧರ್ಮಗಳಲ್ಲಿ ಎಲ್ಲ ಪಾರದರ್ಶಕವಾಗಿದೆ, ನೆರವಾಗಿದೆ.. ವೈಜ್ಞಾನಿಕವಾಗಿದೆ ಮತ್ತು ಎಲ್ಲ ಸರಿಯಾಗಿದೆ...ಎಂಬ ಭ್ರಮೆಯ ಜೊತೆಗೆ ಭಾರತೀಯ ಆಚರಣೆಗಳು ಕೂಡ ವೈಜ್ಞಾನಿಕ ಎಂದು ಸಾಬೀತು ಪಡಿಸುವ ಹುಕಿಗೆ ಬಿದ್ದು ಅವುಗಳ ಹಿನ್ನೆಲೆಯನ್ನು ತಿಳಿಯುವವರ ಸಂಖ್ಯೆ ಬೆಳೆಯುತ್ತಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸುವ ಜನರು ಹುಟ್ಟಿಕೊಂಡಿದ್ದಾರೆ. ಕಳೆದ ಕೆಲ ಶತಮಾನಗಳಲ್ಲಿ ರಾಜನೈತಿಕ ದಾಸ್ಯದ ಪರಿಣಾಮವಾಗಿ....ಬೌದ್ಧಿಕ ಮತ್ತು ವೈಚಾರಿಕವಾಗಿಯೂ ನಮ್ಮ ಮನಸುಗಲ್ಲಿ ದಾಸ್ಯ ಬೇರೂರಿದೆ. ದಾಸ್ಯ ಮನೋಭಾವದ ಪರಿಣಾಮವಾಗಿ ಪಶ್ಚಿಮ ದೇಶಗಳ ಎಲ್ಲವೂ ಸಾಮಾನ್ಯ ಭಾರತೀಯರ ಕಣ್ಣಿಗೆ sophisticated ಆಗಿ ಕಾಣಿಸುತ್ತದೆ. ನಮ್ಮ ಋಷಿಗಳು ಹೇಳಿದ ಮಾತುಗಳು ನಮಗೆ ಕಾಲ ಕಸವಾದರೆ..ಅದೇ ಮಾತುಗಳನ್ನು ಇಂಗ್ಲಿಷ್ ನಲ್ಲಿ ಹೇಳಿದ ಮ್ಯಾಕ್ಸ್ ಮುಲ್ಲರ್ ಮಾತನ್ನು ನಾವು ಹೆಮ್ಮೆಯಿಂದ ಕೊಟ್ ಮಾಡುತ್ತೇವೆ. ಕನ್ನಡದ ಒಳ್ಳೆ ಪುಸ್ತಕದ ಹೆಸರುಗಳು ಸರಿಯಾಗಿ ತಿಳಿಯದ ನಾವು ಇಂಗ್ಲಿಷ್ ನಲ್ಲಿ ಬರೆದ ತಲೆಹರಟೆ ಪುಸ್ತಕಗಳನ್ನು ದೊಡ್ಡ ಬುದ್ಧಿಜೀವಿಯಂತೆ ಪೋಸ್ ಕೊಟ್ಟುಕೊಂಡು ಓದುತ್ತೇವೆ. ''ನಾನು ಇಂಗ್ಲಿಷ್ ಪುಸ್ತಕ ಓದುತ್ತೇನೆ'' ಎನ್ನುವುದೇ ದೊಡ್ಡ ಹೆಮ್ಮೆ. ಅದರಲ್ಲಿ ಕಸ ತುಂಬಿದೆ ಎಂಬುದು ಅರ್ಥವಾಗುವುದಿಲ್ಲ. ಆದ್ದರಿಂದಲೇ...ಚೇತನ್ ಭಗತ್ ನನ್ನು ''ನೀವು ಭಾರತೀಯರಗಿದ್ದೂ ಕೂಡ ನೀವು ಹಿಂದಿಯಲ್ಲಿ ಯಾಕೆ ಬರೆಯುವುದಿಲ್ಲ''? ಎಂದು ಕೇಳಿದಾಗ ''it's not considered cool to pick up a Hindi book in India '' ಅಂತ ಹೇಳಿದ್ದ... ಅವನಿಗೆ ಮಾರ್ಕೆಟ್ phycology ಚೆನ್ನಾಗಿ ಗೊತ್ತು. ಕಸ ತುಂಬಿ ಕೊಟ್ಟರೂ ನಮ್ಮ ಜನ ಇಂಗ್ಲಿಷ್ ಪುಸ್ತಕ ಓದುತ್ತಾರೆ. ರಸದ ಬಗ್ಗೆ ಅವರಿಗೆ ಗೊತ್ತಿಲ್ಲ.
ಅದೇ ರೀತಿ ನಮ್ಮ ಈ ಧಾರ್ಮಿಕ ಆಚರಣೆಗಳು ಅವೈಜ್ಞಾನಿಕ, ಮತ್ತು ಮೂಢನಂಬಿಕೆಗಳಿಂದ ಕೂಡಿವೆ ಎಂದು ಬಲವಾಗಿ ನಂಬುವ ದಾಸ್ಯ ಮೊನೋಭಾವದ ಸಮೂಹ ಅವುಗಳ ಹಿನ್ನೆಲೆಯನ್ನು, ಮತ್ತು ವೈಜ್ನಾನಿಕತೆಯನ್ನು ತಿಳಿಯುವ ಮೂಲಕ ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರದ್ದೆಗೆ ಬದಲಾಗಿ ಕೀಳರಿಮೆ ಈ ಬೆಳವಣಿಗೆಗೆ ಕಾರಣವಾಗುತ್ತಿರುವುದು ನಾಚಿಕೆ ಪಡುವ ವಿಚಾರ. ''ಧರ್ಮ'' ಮತ್ತು ''ಆಧ್ಯಾತ್ಮ'' ಎಂಬ ಈ ಎರಡು ಶಬ್ದಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ಹಾಗೂ ದುರುಪಯೋಗಕ್ಕೊಳಗಾದ ಶಬ್ದಗಳು. ಅವುಗಳ ನಿಜವಾದ ಅರ್ಥ ಸಾಮಾನ್ಯರಿಗೆ ತಿಳಿಸಬೇಕಾದ, ಆಧ್ಯಾತ್ಮ ಬೋಧಿಸಬೇಕಾದ ಪುರಾತನ ಗುರುಪೀಠಗಳು ಶುಲ್ಕ ವಿಧಿಸಿ ಪಾದಪೂಜೆ, ಅಭಿಷೇಕ, ಕುಂಕುಮಾರ್ಚನೆ, ಶ್ರಾದ್ಧ ಮುಂತಾದವುಗಳನ್ನು ಮಾಡಿಸುವ ಸೇವಾ ಕೌಂಟರ್ ಗಳಾಗಿ ಪರಿವರ್ತನೆಗೊಂಡಿವೆ. ರಾಜರ ಆಶ್ರಯದಲ್ಲಿ ಜ್ಞಾನ ಕೇಂದ್ರ ಗಳಾಗಿ ಕೆಲಸ ಮಾಡುತ್ತಿದ್ದ ದೇವಸ್ಥಾನಗಳು ಈಗಿಲ್ಲ. ಈಗ ಸರ್ಕಾರಗಳ ಕೈಯಲ್ಲಿರುವ ಹಾಗೂ ಶ್ರೀಮಂತರು ಮತ್ತು ಮಾಡಲು ಕೆಲಸವಿಲ್ಲದ ವೃದ್ಧ ಟ್ರಸ್ಟಿಗಳು ಕಟ್ಟಿಸುವ ದೇವಸ್ಥಾನಗಳಲ್ಲಿ ಅಜ್ಞಾನದ ಪೋಷಣೆ ನಡೆಯುತ್ತಿದೆಯೇ ಹೊರತು ಆಧ್ಯಾತ್ಮದ ಪರಿಚಯವೂ ಸಾಮಾನ್ಯರಿಗಾಗುತ್ತಿಲ್ಲ. ''ಧರ್ಮ'' ಎನ್ನುವ ಶಬ್ದ ಹಿಂದೂ-ಮುಸ್ಲಿಂ ಜಗಳಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು, ಆಧ್ಯಾತ್ಮ- ಧರ್ಮ ಬೊಧಿಸದೇ ಹೋದರೂ ಕೂಡ ಅವುಗಳ ಮುಸುಕಿನಲ್ಲಿ ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ನಿಯಂತ್ರಿಸುವ, ಯೋಗಾಸನ ಹೇಳಿಕೊಡುವ ಹಾಗೂ ಗಿಡಮೂಲಿಕೆ ಔಷಧಿ ಕೊಡುವ ಆಧುನಿಕ ಮಠಗಳು ಅಥವಾ ''ಮಲ್ಟಿ ಸ್ಪೆಷಾಲಿಟಿ ಆಶ್ರಮಗಳು'' ಶ್ರೀಮಂತರ ಜೇಬಿಗೆ ಮಾತ್ರ ನಿಲುಕುವಂಥವುಗಳು. ಈ ವಿಚಿತ್ರ ಸ್ಥಿತಿಯಲ್ಲಿರುವ ''ಜನಸಾಮಾನ್ಯ'' ಗಲಿಬಿಲಿಗೊಂಡು ಸಿಕ್ಕ ಸಿಕ್ಕವರನ್ನು ''ಗುರೂಜಿ'' ''ಸ್ವಾಮೀಜಿ'' ಎಂದು ಕರೆಯುತ್ತಿದ್ದಾನೆ. ದೇವಸ್ಥಾನದ ಹುಂಡಿಗೆ ದುಡ್ಡು ಹಾಕುವುದನ್ನೇ ''ಧಾರ್ಮಿಕತೆ'' ಮತ್ತು, ಹನುಮಾನ್ ಚಾಲೀಸಾ ಪಠಿಸುವುದನ್ನೇ ''ಆಧ್ಯಾತ್ಮಿಕತೆ'' ಎಂದು ತಿಳಿಯುತ್ತಿದ್ದಾನೆ. ಆದರೆ ಪ್ರಪಂಚದ ಎಲ್ಲ ಧರ್ಮಗಳಿಗಿಂತ ಭಾರತೀಯ ಸನಾತನ ಧರ್ಮ ಅತ್ಯಂತ ಪ್ರಾಚೀನವಾದದ್ದು. ಮತ್ತು ಅತೀ ಶ್ರೇಷ್ಠವಾದದ್ದು ಎಂದು ಭಾಷಣ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂಥವರನ್ನು ಪಕ್ಕಕ್ಕೆ ಕರೆದು ''ಸ್ವಾಮೀ, ಧರ್ಮ ಎಂದರೇನು ? ಎಂದು ಕೇಳಿ ನೋಡಿ...'' ನಿಮಗೆ ಸರಿಯಾದ ಉತ್ತರೆ ಸಿಕ್ಕರೆ ಅದು ಈ ದಶಕದ ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್ .
ನನ್ನ ಆಮಂತ್ರಣ ಮನ್ನಿಸಿ ತಕ್ಷಣ ಲೇಖನ ಬರೆದಿರುವ ಶ್ರೀ ದತ್ತರಾಜರೇ, ನಿಮಗೆ ಧನ್ಯವಾದಗಳು
ReplyDelete