"ಹಾಂ! ನೀನಿನ್ನೂ ಬದುಕಿದ್ದೀಯೇನೋ?"
"ನೀನೂ ಇದೀಯೇನೋ?"
36-37 ವರ್ಷಗಳ ನಂತರದಲ್ಲಿ ಪ್ರಥಮತಃ ಭೇಟಿಯಾದ ವೃದ್ಧರಿಬ್ಬರ ನಡುವಣ ಉದ್ಗಾರಗಳಿವು. ಇದೇ ರೀತಿಯ ಅನುಭವ ಅಲ್ಲಿದ್ದ ಇನ್ನೂ ಹಲವರದು. ಕೆಲವರು ಭಾವಾತಿರೇಕದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಕೆಲವರ ಕಣ್ಣಿನಲ್ಲಿ ಆನಂದಾಶ್ರುಗಳು ತುಳುಕಿದವು. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಇಂತಹ ಭಾವನೋತ್ತುಂಗದ ಕ್ಷಣಗಳಿಗೆ ಸಾಕ್ಷಿಯಾದದ್ದು ಹಾಸನದಲ್ಲಿ 29-11-2012ರಲ್ಲಿ ನಡೆದ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರ, ತುರಂಗವಾಸ ಅನುಭವಿಸಿದವರ ಸಮಾವೇಶದಲ್ಲಿ. ಸುಮಾರು 80 ಹೋರಾಟಗಾರರು ಉಪಸ್ಥಿತರಿದ್ದ ಆ ಸಮಾವೇಶವನ್ನು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವ ನನ್ನ ಕೃತಿ "ಆದರ್ಶದ ಬೆನ್ನು ಹತ್ತಿ . ."ಯ ಬಿಡುಗಡೆಯ ಪೂರ್ವಭಾವಿಯಾಗಿ ಯೋಜಿಸಲಾಗಿತ್ತು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ಗ್ರಹಣ ಹಿಡಿದಿದ್ದ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ, ದೇಶ ಕ್ರಮೇಣ ಸರ್ವಾಧಿಕಾರದೆಡೆಗೆ ಜಾರುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ ಪುನಃ ಪ್ರಜಾಪ್ರಭುತ್ವ ಸ್ಥಾಪನೆಗೆ ಅನುವು ಮಾಡಿಕೊಟ್ಟದ್ದು ರಾ.ಸ್ವ.ಸಂಘ ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ನಡೆಸಿದ ಅಭೂತಪೂರ್ವ ಆಂದೋಲನ. ಆ ಐತಿಹಾಸಿಕ ಆಂದೋಲನದ ವಿವರ 1970ರ ದಶಕದ ನಂತರದಲ್ಲಿ ಜನಿಸಿದವರಿಗೆ ಇರಲಾರದು. ಅಂದು ಕಷ್ಟ-ನಷ್ಟಗಳನ್ನು ಸಹಿಸಿ ನೋವನುಂಡವರ ತ್ಯಾಗ, ಬಲಿದಾನಗಳಿಂದ ಉಳಿದ ದೇಶದ ಪ್ರಜಾಸತ್ತೆಯನ್ನು ಇಂದಿನ ರಾಜಕಾರಣಿಗಳು ನೈತಿಕ ಅಧೋಗತಿಗೆ ಒಯ್ಯುತ್ತಿರುವುದನ್ನು ಕಂಡು ಅಂದಿನ ಹೋರಾಟಗಾರರು ಮರುಗದೇ ಇರಲಾರರು. ಭ್ರಷ್ಠಾಚಾರದ ವಿರುದ್ಧ, ಸರ್ವಾಧಿಕಾರದ ವಿರುದ್ಧ ಸೆಣಸಿದವರ ಅಂದಿನವರ ಮನೋಭಾವ ಇಂದಿನ ತರುಣರಿಗೆ ಮೂಡದಿದ್ದರೆ ಪರಿಸ್ಥಿತಿಯ ಸುಧಾರಣೆಯಾಗುವುದು ದುಸ್ತರವೇ ಸರಿ.
ಹಾಸನ ಜಿಲ್ಲೆಯಲ್ಲಿ 13 ಜನರು ಆಂತರಿಕ ಭದ್ರತಾ ಶಾಸನದ ಅನ್ವಯ (ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದೆ 2 ವರ್ಷಗಳ ಕಾಲ ಯಾರನ್ನೇ ಅಗಲಿ ಬಂಧಿಸಲು ಅವಕಾಶ ಕೊಟ್ಟಿದ್ದ ಕಾಯದೆ) ಬಂದಿಗಳಾಗಿದ್ದರು. ಸರಿಯಾಗಿ ಮೀಸೆಯೇ ಮೂಡಿರದಿದ್ದ ಆಗ 18-19 ವರ್ಷದ ತರುಣರಾದ ಹಾಸನದ ಪಾರಸಮಲ್ ಮತ್ತು ಅರಕಲಗೂಡಿನ ಪಟ್ಟಾಭಿರಾಮರೂ ಅವರಲ್ಲಿ ಸೇರಿದ್ದರು. ಆ ಪೈಕಿ 7 ಜನರು ಈಗ ದಿವಂಗತರು. ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರಕೈ ಸಹ ಮೀಸಾ ಬಂದಿಯಾಗಿದ್ದು, ಆಗ ಅನುಭವಿಸಿದ ಹಿಂಸೆಯ ಕಾರಣದಿಂದ ಕೆಲವು ವರ್ಷಗಳ ನಂತರದಲ್ಲಿ 30-32ರ ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ ಒಳಗಾಗಿ ಮೃತಪಟ್ಟವರು. 300ಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಣಾ ಕಾಯದೆಯ ಅನ್ವಯ ಬಂಧಿಸಿದ್ದರು. ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಮೊಕದ್ದಮೆಗಳನ್ನು ಸಾವಿರಾರು ಜನರ ಮೇಲೆ ಹೂಡಿದ್ದರು. ಕೊನೆ ಕೊನೆಗೆ ಜೈಲುಗಳಲ್ಲಿ ಬಂದಿಗಳನ್ನು ಇಡಲು ಸಾಧ್ಯವಾಗದಾದಾಗ ಸತ್ಯಾಗ್ರಹಿಗಳನ್ನು ಬಂಧಿಸಿ, ಹೊಡೆದು, ಬಡಿದು ವಾಹನಗಳಲ್ಲಿ ಕರೆದೊಯ್ದು ದೂರದ ಸ್ಥಳಗಳಲ್ಲಿ ಬಿಟ್ಟು ಬರುತ್ತಿದ್ದ ಸಂದರ್ಭಗಳೂ ಬಂದಿದ್ದವು. ಅಂತಿಮವಾಗಿ ಜನತೆಯದೇ ಜಯವಾಯಿತು. ಜಿಲ್ಲೆಯಲ್ಲಿ ಅಂತಹ ಪ್ರೇರಣಾದಾಯಿ ಹೋರಾಟ ಮಾಡಿದವರನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಲು ನಿರ್ಧರಿಸಿ ಮಿತ್ರ ಹರಿಹರಪುರ ಶ್ರೀಧರ ಮತ್ತು ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡಿದೆವು. ಉತ್ತಮ ಸ್ಪಂದನ ಸಿಕ್ಕಿತು. ಅಂದು ಹೋರಾಡಿದ್ದ ಹಲವರು ಸ್ವರ್ಗವಾಸಿಗಳಾಗಿದ್ದರು. ಹಲವರು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ತಿಳಿಯಲಿಲ್ಲ. ಹಲವರು ವೃದ್ಧಾಪ್ಯದ ಕಾರಣದ ಸಹಜ ಅನಾರೋಗ್ಯ ಕಾರಣದಿಂದ ಪ್ರಯಾಣ ಮಾಡಲು ಕಷ್ಟವಿರುವ ಸ್ಥಿತಿಯಲ್ಲಿದ್ದರು. ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಅಂದು ಬರಲು ಕಷ್ಟವಿತ್ತು. ಹಾಗಾಗಿ ನಮ್ಮ ಪ್ರಯತ್ನದ ಮಿತಿಯಲ್ಲಿ ಮಾಡಿದ ಪ್ರಯತ್ನಕ್ಕೆ ಅಂದು ಹಾಜರಿದ್ದ 80 ವೃದ್ಧತರುಣರು ಉಪಸ್ಥಿತರಿದ್ದುದು ಯಶಸ್ಸು ಸಿಕ್ಕಿತ್ತೆಂದೇ ಹೇಳಬಹುದು. ಕಾರ್ಯಕ್ರಮಕ್ಕೆ ಬರಲಾಗದಿದ್ದ ಹಲವರು ಅನೇಕ ಸಲ ದೂರವಾಣಿ ಮಾಡುತ್ತಾ, ಅದಕ್ಕಾಗಿ ಪೇಚಾಡಿಕೊಂಡು ಕಾರ್ಯಕ್ರಮದ ವಿವರ ಪಡೆಯುತ್ತಿದ್ದುದು ಅವರ ಕಳಕಳಿ ತೋರಿಸುತ್ತಿತ್ತು.
ಜೈಲಿನಲ್ಲಿ ಬಂದಿಗಳು ಹೇಳಿಕೊಳ್ಳುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಸಮೂಹಗೀತೆಯನ್ನು ಎಲ್ಲರೂ ಒಕ್ಕೊರಳಿನಿಂದ ಎದೆ ಸೆಟೆಸಿ, ಚಪ್ಪಾಳೆ ಹಾಕುತ್ತಾ ಹೇಳಿದರು. ಬಂದಿದ್ದವರೆಲ್ಲರು ತಮ್ಮ ತಮ್ಮ ಅನುಭವಗಳ ಬುತ್ತಿಯನ್ನು ತೆರೆಯುತ್ತಿದ್ದಂತೆ ಕಾಲ 37 ವರ್ಷಗಳ ಹಿಂದಕ್ಕೆ ಸರಿದಿತ್ತು. ಅನುಭವಗಳನ್ನು ಹೇಳಿಕೊಳ್ಳುವಾಗ ಅವರ ಕಣ್ಣುಗಳಲ್ಲಿನ ಮಿಂಚು, ಮುಖದಲ್ಲಿ ವ್ಯಕ್ತವಾಗುತ್ತಿದ್ದ ಆನಂದ, ಸಾರ್ಥಕ್ಯ ಭಾವವನ್ನು ಹೊರಸೂಸುತ್ತಿತ್ತು. ಅವರ ತಾರುಣ್ಯ ಮರುಕಳಿಸಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭದ ಮೇಲೆ ಕಪ್ಪು ಧ್ವಜ ಹಾರಿಸಿ ಕೆಳಗೆ ಇಳಿದು ಬರುವಾಗ ಕಂಬಕ್ಕೆ ಗ್ರೀಸು ಹಚ್ಚಿ ಕೆಳಗೆ ಇಳಿದಿದ್ದ ಮತ್ತು ಆ ಕಾರಣಕ್ಕಾಗಿ ಪೋಲಿಸರ ಆತಿಥ್ಯ ಪಡೆದಿದ್ದ ಅರಕಲಗೂಡಿನ ಅನಂತ, ಹೊಳೆನರಸಿಪುರದ ಸಂತೆಯಲ್ಲಿ ಅಂದು ಪ್ರಸಾರ ಮಾಡುತ್ತಿದ್ದ ಭೂಗತ ಪತ್ರಿಕೆ 'ಕಹಳೆ'ಯನ್ನು ಟಾಂ ಟಾಂ ಹೊಡೆಯುತ್ತಾ ಹಂಚಿಸಿದ್ದಕ್ಕಾಗಿ ಪೋಲಿಸರಿಂದ ಹೊಡೆತ ತಿಂದಿದ್ದ ಭಗವಾನ್ ಮತ್ತು ಅವನ ಮಿತ್ರರು, ಸತ್ಯಾಗ್ರಹ ಮಾಡಿ ಬಂದಿಗಳಾಗಿದ್ದವರು, ಜೈಲಿನಲ್ಲಿ 10 ತಿಂಗಳುಗಳಿಗೂ ಹೆಚ್ಚು ಕಾಲವಿದ್ದು ಬಿಡುಗಡೆಯಾದ ನಂತರ ಮನೆಗೆ ಹೋಗದೆ ಮತ್ತೆ ಹೋರಾಟದ ಕೆಲಸಕ್ಕೆ ಆದ್ಯತೆ ನೀಡಿದ್ದ ಬೇಲೂರಿನ ರವಿ ಮತ್ತು ಗೆಳೆಯರು, ಅರಸಿಕೆರೆಯಲ್ಲಿ ನಡೆದ ರಂಗು ರಂಗಿನ ಸತ್ಯಾಗ್ರಹದ ವಿವರಗಳು, ಅನುಭವಿಸಿದ ಚಿತ್ರಹಿಂಸೆಗಳನ್ನು ತೆರೆದಿಟ್ಟ ರಾಮಚಂದ್ರ, ಗೋವಿಂದರಾಜು, ಬಸವರಾಜು, ಸತ್ಯನಾರಾಯಣ ಮುಂತಾದವರು, ಸಕಲೇಶಪುರದ ಸತ್ಯನಾರಾಯಣಗುಪ್ತ ನೀಡಿದ ರೋಚಕ ಮಾಹಿತಿಗಳು, ಹಾಸನದ ಪಾರಸಮಲ್, ನಾಗರಾಜ್, ಚಂದ್ರಶೇಖರ್, ಜಯಪ್ರಕಾಶ್ ಮುಂತಾದವರ ಅನುಭವಗಳು ನೆರೆದಿದ್ದವರನ್ನು ವಿಸ್ಮಿತಗೊಳಿಸಿದ್ದು ಸತ್ಯ.
ನಮ್ಮ ನಡುವೆ ಈಗ ಇಲ್ಲದ, ಸ್ವರ್ಗಸ್ಥರಾದವರ ಹೆಸರುಗಳನ್ನು ಹೇಳಲು ಬಂದವರನ್ನು ಕೋರಿದಾಗ ಸುಮಾರು 40 ಜನರ ಹೆಸರುಗಳು ಕೇಳಿಬಂದವು. ಅವರುಗಳು ಮಾಡಿದ ಕೆಲಸಗಳು ಮನಃಪಟಲದ ಮೇಲೆ ಮೂಡಿದವು. ಅಗಲಿದ ಆ ಎಲ್ಲಾ ಧೀರರಿಗೆ ಶ್ರದ್ಧಾಂಜಲಿಯಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಎಲ್ಲರ ಮಾತುಗಳನ್ನು ಕೇಳಿದ ನಂತರ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಮಾತನಾಡಿ ಸಂಕಟದ ಕಾಲದಲ್ಲಿ ನಿಸ್ವಾರ್ಥ ಭಾವದಿಂದ ಮಾಡಿದವರ ತ್ಯಾಗ, ಬಲಿದಾನಗಳು ಎಂದಿಗೂ ಮಾರ್ಗದರ್ಶಿಯಾಗಿ ಉಳಿಯುತ್ತದೆ ಎಂದರಲ್ಲದೆ, ಇಂದಿನ ರಾಜಕೀಯ ಪರಿಸ್ಥಿತಿಯಿಂದಾಗಿ ಧೃತಿಗೆಡದೆ ದೇಶಹಿತವನ್ನು ಮುಂದಿರಿಸಿಕೊಂಡು ಕೆಲಸ ಮಾಡಲು ಮತ್ತು ಯುವಕರಿಗೆ ಪ್ರೇರಿಸಲು ಕೇಳಿಕೊಂಡರು. ಹಿರಿಯರಾದ ಶ್ರೀ ಕೆ.ಎನ್. ದುರ್ಗಪ್ಪಶ್ರೇಷ್ಠಿಯವರು "ಆದರ್ಶದ ಬೆನ್ನು ಹತ್ತಿ . ." ಕೃತಿಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಹಿಂದೆ ಮೀಸಾ ಬಂದಿಗಳಾಗಿದ್ದು, ಈಗ ನಮ್ಮ ನಡುವೆ ಇರುವ ಜಿಲ್ಲೆಯ 6 ಜನರ ಪೈಕಿ ಸಮಾವೇಶದಲ್ಲಿ ಹಾಜರಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿ, ಶ್ರೀ ಕೆ. ಆರ್. ಶ್ರೀನಿವಾಸ ಮೂರ್ತಿ, ಹಾಸನದ ಪಾರಸಮಲ್ ಮತ್ತು ಸಕಲೇಶಪುರದ ಶ್ರೀ ಸತ್ಯನಾರಾಯಣ ಗುಪ್ತರನ್ನು ಸನ್ಮಾನಿಸಲಾಯಿತು. ಮಾರ್ಗದರ್ಶಿ ಭಾಷಣ ಮಾಡಿದ ಮತ್ತು ಕಾರ್ಯಕ್ರಮಕ್ಕೆ ಪ್ರೇರೇಪಣೆ ನೀಡಿದ್ದ ಶ್ರೀ ಸು. ರಾಮಣ್ಣನವರನ್ನು ಗೌರವಿಸಲಾಯಿತು. 'ಆದರ್ಶದ ಬೆನ್ನು ಹತ್ತಿ . .' ಕೃತಿಯ ಲೇಖಕರನ್ನು ಅಭಿನಂದಿಸಲಾಯಿತು. ಸಹಕರಿಸಿದ ಎಲ್ಲರಿಗೆ ಹರಿಹರಪುರ ಶ್ರೀಧರ್ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮ ಬಂದಿದ್ದವರಿಗೆ ಸಂತೋಷ ನೀಡಿದ್ದರೆ, ಆಯೋಜಿಸಿದವರಿಗೆ ಧನ್ಯತಾಭಾವ ಮೂಡಿಸಿತ್ತು.
ಸಮಾವೇಶದ ಕೆಲವು ದೃಷ್ಯಗಳಿವು:
ಸಮಾವೇಶದ ಕೆಲವು ದೃಷ್ಯಗಳಿವು:
ಅಂದು ಕಷ್ಟಪಟ್ಟವರಿಗೆ ಇಂದಿನ ಕಿತ್ತಾಟ ನೋಡಿ ಹೇಗನಿಸಿರಬೇಡ???
ReplyDelete