“ಎಲ್ಲರಿಗಾಗಿ
ವೇದ” - ಬ್ರಾಹ್ಮಣ
ವರ್ಣ
ಬ್ರಾಹ್ಮಣ
ವರ್ಣದ ಕರ್ತವ್ಯಗಳ ಬಗ್ಗೆ ಕಳೆದ ವಾರ ಒಂದಿಷ್ಟು ವಿಚಾರ ಮಾಡಿದ್ದೆವು. ಈ ವಾರವೂ ಅದೇ ವಿಷಯವನ್ನು
ಮುಂದುವರೆಸೋಣ. ಋಗ್ವೇದದ ಏಳನೇ ಮಂಡಲದ 103 ನೇ ಸೂಕ್ತದ 7ನೇ ಮಂತ್ರವನ್ನು ನೋಡೋಣ.
ಬ್ರಾಹ್ಮಣಾಸೋ ಅತಿರಾತ್ರೇ ನ ಸೋಮೇ ಸರೋ ನ
ಪೂರ್ನಮಭಿತೋ ವದಂತ: |
ಸಂವತ್ಸರಸ್ಯ ತದಹ: ಪರಿ ಷ್ಠ ಯನ್ಮಂಡೂಕಾ: ಪ್ರಾವೃಷೀಣಂ ಬಭೂವ ||
ಅರ್ಥ:-
ಯತ್ = ಹೇಗೆ
ಸಂವತ್ಸರಸ್ಯ = ವರ್ಷದ
ಪ್ರಾವೃಷೀಣಮ್ = ಮಳೆಗಾಲದ
ಅಹ: = ದಿನವು
ಬಭೂವ = ಇರುತ್ತದೋ
ಮತ್ತು
ತತ್ ಅಹ: = ಆ ದಿನ
ಮಂಡೂಕಾ: = ಶುದ್ಧ ಮನಸ್ಕರು
ಪೂರ್ಣಮ್ = ಪೂರ್ಣವಾಗಿ
ಸರ: = ಜ್ಞಾನವನ್ನು
ಅಭಿತ: = ಎಲ್ಲೆಡೆಯಲ್ಲೂ
ವದಂತ: = ಉಪದೇಶಿಸುತ್ತಾ
ಪರಿಷ್ಠ: = ಉತ್ತಮ ರೀತಿಯಲ್ಲಿ ದೃಢವಾಗಿ ನಿಲ್ಲುತ್ತಾರೋ
ಹಾಗೆಯೇ
ಅತಿರಾತ್ರೇ = ದಾನಕರ್ಮದ ಮಿತಿಯನ್ನು ದಾಟಿ
ಸೋಮೇ ನ = ವಿವೇಕವನ್ನು ಹಂಚುವಂತೆ
ಬ್ರಾಹ್ಮಣಾಸ: = ಬ್ರಹ್ಮ ಜ್ಞಾನಿಗಳೇ
ಪರಿಷ್ಠ: = ದೃಢವಾಗಿ ನಿಲ್ಲಿ
ಭಾವಾರ್ಥ:-
ವರ್ಷಾಕಾಲದಲ್ಲಿ ಜಲಧಾರೆಗಳು ಹರಿಯುವಂತೆ, ಶುದ್ಧ ಮನಸ್ಕರ
ಹೃದಯಗಳಿಂದ ಜ್ಞಾನ ಅನುಕಂಪಗಳು ಸ್ರವಿಸುವಂತೆ ಹೇ
ಬ್ರಾಹ್ಮಣರೇ ಸಾರಾಸಾರ ವಿವೇಕವನ್ನು ಮಿತಿಯಿಲ್ಲದಂತೆ ಪಸರಿಸುವ ಕಾರ್ಯದಲ್ಲಿ ತೊಡಗಿರಿ.
ಈ
ವೇದ ಮಂತ್ರದ ಅರ್ಥದ ಕಡೆ ಗಮನ ಹರಿಸಿದರೆ ನಿಜವಾದ ಬ್ರಾಹ್ಮಣ ಯಾರು? ಎಂಬ ಕಲ್ಪನೆ ಸಿಗುತ್ತದೆ. ನಾಲ್ಕೂ
ವರ್ಣಗಳ ಕರ್ತವ್ಯವನ್ನು ನೋಡುತ್ತಾ ಹೋದಾಗ ಜ್ಞಾನಪ್ರಸಾರದಂತಹ ಪ್ರಮುಖ ಹೊಣೆಯು ಬ್ರಾಹ್ಮಣಪಾಲಿಗೆ
ಬಂದಿರುವುದರಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಬ್ರಾಹ್ಮಣ ತನ್ನ ವೈಯಕ್ತಿಕ ಬದುಕನ್ನು ಆದರ್ಶವಾಗಿಯೇ
ಇಟ್ಟುಕೊಳ್ಳಬೇಕು. ಬೇರೆಯವರಿಗೆ ಆದರ್ಶವಾಗಿರುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಅವನು ಬಹಳ
ತ್ಯಾಗವನ್ನು ಮಾಡಬೇಕಾಗುತ್ತದೆ.ಕಷ್ಟಪಡಬೇಕಾಗುತ್ತದೆ. ಇವನ ನಡೆ, ನುಡಿ,ವ್ಯವಹಾರ, ಆಹಾರ-ವಿಹಾರ ಎಲ್ಲದರಲ್ಲೂ
ಇನ್ನೊಬ್ಬರಿಗೆ ಆದರ್ಶವಾಗಿರುವಂತಿರಬೇಕು. ಬದುಕನ್ನು ಆದರ್ಶವಾಗಿಟ್ಟುಕೊಂಡು ಜ್ಞಾನಪ್ರಸಾರವನ್ನು
ಹೇಗೆ ಮಾಡಬೇಕೆಂಬುದನ್ನು ಈ ಮಂತ್ರದಲ್ಲಿ ಬಣ್ಣಿಸಲಾಗಿದೆ.
ವರ್ಷಾಕಾಲದಲ್ಲಿ ಜಲಧಾರೆಗಳು ಹರಿಯುವಂತೆ ಜ್ಞಾನಪ್ರಸಾರಕಾರ್ಯದಲ್ಲಿ
ತೊಡಗಿಕೊಳ್ಳಿ, ಎನ್ನುತ್ತದೆ, ಈ ಮಂತ್ರ. ಮಳೆಗಾಲದಲ್ಲಿ ನದಿ-ತೊರೆಗಳು ಹೇಗೆ ತುಂಬಿಹರಿಯುತ್ತವೆಯೋ ಹಾಗೆ ಬ್ರಾಹ್ಮಣನು ಜ್ಞಾನಪ್ರಸಾರವನ್ನು ಮಾಡಬೇಕು. ಅಂದರೆ ನಿಜಬ್ರಾಹ್ಮಣನು
ಜ್ಞಾನಭಂಡಾರವಾಗಿದ್ದು ಸಮಾಜದಲ್ಲಿ ಹೆಚ್ಚು ಹೆಚ್ಚು
ಜ್ಞಾನಪ್ರಸಾರ ಮಾಡಬೇಕು.
ಮತ್ತೊಂದು
ಹೋಲಿಕೆ ಇನ್ನೂ ಚೆನ್ನಾಗಿದೆ. “ಶುದ್ಧ ಮನಸ್ಕರ ಹೃದಯಗಳಿಂದ ಜ್ಞಾನ ಅನುಕಂಪಗಳು ಸ್ರವಿಸುವಂತೆ” ಬ್ರಾಹ್ಮಣರೇ
ಸಾರಾಸಾರ ವಿವೇಕವನ್ನು ಮಿತಿಯಿಲ್ಲದಂತೆ ಪಸರಿಸುವ ಕಾರ್ಯದಲ್ಲಿ ತೊಡಗಿರಿ.ಅಂದರೆ ಇಲ್ಲಿ “ಅನುಕಂಪ”
ಎಂಬ ಮಾತಿಗೆ ಒತ್ತು ಕೊಡಲಾಗಿದೆ. ಒಬ್ಬ ಬ್ರಾಹ್ಮಣನಿಗೆ ಸಮಾಜದ ಮೇಲೆ ಅನುಕಂಪವಿರಬೇಕು. ಅನುಕಂಪವಿದ್ದವನು
“ ಈ ಸಮಾಜ ಹೇಗಾದರೂ ಇರಲಿ” ಎಂಬ ಭಾವನೆಯನ್ನು ಹೊಂದಲಾರ. “ಲೋಕದಾ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ
ನಿಮ್ಮ ತನುವ ಸಂತೈಸಿಕೊಳ್ಳಿ” ಎಂಬ ವಚನವನ್ನು ಹೇಗೂ ಬಳಸಿಕೊಳ್ಳುವ ಬುದ್ಧಿವಂತರಿದ್ದಾರೆ. ಯಾವುದೇ
ಮಾತನ್ನು ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಯಾರಿಗೆ ಹೇಳಿದರೆಂಬುದು ಬಹಳ ಮುಖ್ಯವಾಗುತ್ತದೆ. ವೇದವು
ಬ್ರಾಹ್ಮಣನ ಕರ್ತವ್ಯದಲ್ಲಿ ಸ್ಪಷ್ಟವಾಗಿ ತಿಳಿಸುತ್ತದೆ “ ಅವನಿಗೆ ಸಮಾಜದ ಬಗ್ಗೆ ಅನುಕಂಪವಿರಬೇಕು”.
ಅನುಕಂಪವಿದ್ದಾಗ ಸಮಾಜವು ತಪ್ಪುದಾರಿಗೆ ಹೋಗದಂತೆ ತಿದ್ದುವ ಕೆಲಸವನ್ನು ಬ್ರಾಹ್ಮನನು ಮಾಡಬೇಕಾಗುತ್ತದೆ.
ಇದೆಲ್ಲಾ ಬ್ರಾಹ್ಮಣನ ಅಧಿಕಾರವಲ್ಲಾ, ಇವೆಲ್ಲಾ ಅವನ ಕರ್ತವ್ಯಗಳು, ಎಂಬ ಅರಿವಿರಬೇಕು.
ಭಗವದ್ಗೀತೆಯಲ್ಲಿ
ಶ್ರೀ ಕೃಷ್ಣನು ಶ್ರೇಷ್ಠಪುರುಷನ ಆಚರಣೆ ಪ್ರಭಾವವನ್ನು ಚೆನ್ನಾಗಿ ಹೇಳಿದ್ದಾನೆ…..
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನ:
|
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತ
||
[ಭಗವದ್ಗೀತೆ ಅಧ್ಯಾಯ-3 ಶ್ಲೋಕ- 21]
ಯತ್
ಯತ್ ಆಚರತಿ ಶ್ರೇಷ್ಠ: ತತ್ ತತ್ ಏವ ಇತರ: ಜನ: ಸ ಯತ್ ಪ್ರಮಾಣಂ ಕುರುತೇ ಲೋಕ: ತತ್ ಅನುವರ್ತತೇ….
ಅರ್ಥ:
ಶ್ರೇಷ್ಠ
ಪುರುಷನು ಯಾವ ಯಾವ ಆಚರಣೆ ಮಾಡುತ್ತಾನೋ,ಇನ್ನಿತರೇ ಜನರೂ
ಸಹ ಅದರಂತೆಯೇ ನಡೆದುಕೊಳ್ಳುತ್ತಾರೆ. ಯಾವುದನ್ನು ಆಧಾರವಾಗಿಟ್ಟುಕೊಂಡು ನಡೆಯುತ್ತಾನೋ ಜನರೂ
ಅದರಂತೆ ಅನುಸರಿಸುತ್ತಾರೆ. ಇದು ನಿಜ ಬ್ರಾಹ್ಮಣನಿಗೆ ಸರಿಯಾಗಿ ಸಲ್ಲುತ್ತದೆ. ತಾನು ಮಾಡುವ ಆಚರಣೆಗಳು
ಹೇಗಿರಬೇಕು, ಅದಕ್ಕೆ ಆಧಾರ ಏನಾಗಿರಬೇಕು, ಎಂಬುದನ್ನು ಸರಿಯಾಗಿ ವಿವೇಚಿಸಿ ನಡೆಯಬೇಕಾದ್ದು ಒಬ್ಬ
ಬ್ರಾಹ್ಮಣನ ಕರ್ತವ್ಯ.ಅಂದಮಾತ್ರಕ್ಕೆ ಬ್ರಾಹ್ಮಣ ಶ್ರೇಷ್ಠ ಉಳಿದ ವರ್ಣ ಕನಿಷ್ಠ ಎಂದಲ್ಲ. ಬ್ರಾಹ್ಮಣನು
ನಡೆಯಬೇಕಾದ್ದೇ ಹೀಗೆ. ಹಾಗೆ ನಡೆಯಲಾರದವನು ಬ್ರಾಹ್ಮಣನಾಗಿರಲಾರ.
No comments:
Post a Comment