Pages

Wednesday, June 5, 2013

ಸಂಪಾದಕೀಯ

           ಕಳೆದ ನಾಲ್ಕೈದು ವರ್ಷಗಳ ಮುಂಚೆ ನಾನು ಯಾವ ವಿಷಯದಲ್ಲಿ ವೇದಾಧ್ಯಾಯೀ ಸುಧಾಕರಶರ್ಮರೊಡನೆ ವಾದ ಮಾಡುತ್ತಿದ್ದೆನೋ ಅದೇ ವಿಷಯದಲ್ಲಿ ನಾನೀಗ ಬೇರೆಯವರಿಗೆ ಉತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಇಂದು ಮೂರ್ನಾಲ್ಕು ಜನ ಮಿತ್ರರು ಹರಟೆ ಹೊಡೆಯುತ್ತಿದ್ದೆವು. ಮಿತ್ರರೊಬ್ಬರು ನನಗೆ ಒಂದು ಸಲಹೆ ಕೊಟ್ಟರು " ನೋಡೀ, ನೀವು ಸಾಕಷ್ಟು ಸದ್ವಿಚಾರದ ಚಿಂತನೆ ಮಾಡುತ್ತಿರುವಿರಿ, ಆದರೆ ಒಂದು ವಿಷಯದಲ್ಲಿ ನನಗೂ ನಿಮಗೂ ಭೇದ ಇದೆ. ಅದೇನಪ್ಪಾ ಅಂದರೆ ನಿಮಗೆ ಸತ್ಯ ಎನಿಸಿದ್ದನ್ನು ಬರೆಯಿರಿ, ಆದರೆ ಬೇರೆಯವರನ್ನೇಕೆ ಖಂಡಿಸುತ್ತೀರಿ?

      ನಾನೂ ಶರ್ಮರೊಡನೆ ಇದೇ ವಿಚಾರದಲ್ಲಿ ಜಗಳವನ್ನೇ ಮಾಡುತ್ತಿದ್ದೆ. ಮೊನ್ನೆ ಅವರ ಭೇಟಿಯಾದಾಗ ಶರ್ಮರು ಹೇಳಿದರು" ನೋಡಿ, ನಿಮ್ಮ ಪರಿಚಯವಾದ ದಿನಗಳಿಗೂ ಇಂದಿಗೂ ನನ್ನಲ್ಲಿ ಸುಧಾರಣೆ ಆಗಿಲ್ಲವಾ? ನಿಮ್ಮ ತುಡಿತ ನನಗೆ ಅರ್ಥವಾಗಿದೆ. ನಾನು ಸತ್ಯದ ಹಾದಿಗಾಗಿ ವೇದದ ವಿರುದ್ಧದ ವಿಚಾರಗಳನ್ನು  ಖಂಡಿಸುತ್ತಿದ್ದಾಗ ನನ್ನೊಡನೆ ಹೆಚ್ಚು ಜನರು ಬರುತ್ತಿರಲಿಲ್ಲ. ಈಗ ವೇದದ ವಿಚಾರವನ್ನು ಹೇಳಿ ಖಂಡಿಸಬೇಕಾದ ವಿಚಾರವನ್ನು ಬಿಟ್ಟಿರುವುದರಿಂದ   ನನ್ನ ಹತ್ತಿರ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ವೇದದ ವಿಚಾರವನ್ನು ಹೆಚ್ಚು ಜನರಿಗೆ ತಲುಪಿಸಲು ಸಾಧ್ಯವಾಗಿದೆ.
     
         ಹೌದು, ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು ಆಳವಾಗಿ ವೇದವನ್ನು ಅಧ್ಯಯನ ಮಾಡಿದ್ದಾರೆ.ವೇದಕ್ಕೆ ವಿರುದ್ಧವಾದದ್ದನ್ನು ಖಂಡಿಸುವ ಸಾಮರ್ಥ್ಯವೂ ಅವರಿಗಿದೆ. ಆದರೂ ಖಂಡಿಸುವ ಪರಿಗಿಂತಲೂ  ವೇದದ ವಿಚಾರವನ್ನು  ಮನಕ್ಕೆ ನಾಟುವಂತೆ ಮಂಡಿಸುತ್ತಾರೆ.  ವೇದದ ವಿಚಾರಕ್ಕಾಗಿ ಅವರನ್ನು ಅರಸಿಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

           ನಾನಾದರೋ ಸಾಮಾಜಿಕ ಕಾರ್ಯದಲ್ಲಿ ಹಲವರೊಡನೆ ಜೋಡಿಸಿಕೊಂಡಿರುವವನು. ನನ್ನ ಪರಿಚಿತರೆಲ್ಲರೂ ನಾನು ಒಪ್ಪಿರುವ ವಿಚಾರವನ್ನು ನೂರಕ್ಕೆ ನೂರು ಒಪ್ಪುತ್ತಾರೆಂದೇನೂ ಅಲ್ಲ. ಇಲ್ಲೇ ನನಗೆ ಸಮಸ್ಯೆ ಎದುರಾಗಿರುವುದು. ವೇದಕ್ಕೆ ವಿರುದ್ಧವಾದುದನ್ನು  ನನ್ನ ಮನಸ್ಸು  ಒಪ್ಪುವುದಿಲ್ಲ. ತಟ್ಟನೆ ವಿರೋಧಿಸಿ ಬಿಡುವ ಸ್ವಭಾವ ನನ್ನದು.ಆದರೆ ನನ್ನ ಮಿತ್ರರು ನನಗೆ ಕೊಡುತ್ತಿರುವ ಸಲಹೆ ಎಂದರೆ " ನಮ್ಮ ಹಿರಿಯರು ನೂರಾರು ವರ್ಷಗಳಿಂದ ಆಚರಿಸಿಕೊಂಡು  ಬಂದಿರುವ ಹಲವು ವಿಚಾರಗಳನ್ನು ಅವು ವೇದ ಸಮ್ಮತವಲ್ಲವೆಂದು ಬಿಡಲು  ಸಾಧ್ಯವಿಲ್ಲ. ನಮಗೆ ಅದರಲ್ಲಿ ಸಮಾಧಾನವಿದೆ. ಮೂರ್ತಿ ಪೂಜೆ ಬೇಡ ಅಂತೀರಿ.ವೇದದಲ್ಲಿ ಮೂರ್ತಿ ಪೂಜೆ ಇಲ್ಲದಿರಬಹುದು. ನೂರಾರು ವರ್ಷಗಳಿಂದ ಆಚರಿಸಿಕೊಂಡು  ಬಂದಿರುವ ನಮ್ಮ ಪೂರ್ವಿಕರು ಹೆಡ್ದರೇನಲ್ಲ. ನೀವು ನಿಮ್ಮ ಪಾಡಿಗೆ ವಿಚಾರಗಳನ್ನು ಮಂಡಿಸುತ್ತಾ ಹೋಗಿ, ಯಾರ ತಂಟೆಗೂ ಬರಬೇಡಿ. ನಿಮ್ಮ ವಿಚಾರ ಬೇಕಾದರೆ ಜನರು ಸ್ವೀಕರಿಸುತ್ತಾರೆ, ಇಲ್ಲದಿದ್ದರೆ ಇಲ್ಲ, ಅಷ್ಟೆ."
      ನನ್ನ ಮಿತ್ರರು ಈ ಮಾತು ಹೇಳಬೇಕಾದರೆ ಅದು ಕೇವಲ ಅವರ ಮಾತಲ್ಲ, ಎಂಬ ಅರಿವು ನನಗಿದೆ. ಈ ಬಗ್ಗೆ ಸಾಕಷ್ಟು ಯೋಚಿಸಿದ ನಂತರ "ಹೌದಲ್ವಾ, ನಾನು ಯಾವುದೋ ವಿಚಾರವನ್ನು ಖಂಡಿಸಿ ವಿರೋಧ ಎದುರಿಸುವ ಬದಲು ,ವೇದದ ವಿಚಾರವನ್ನು ನಾನು ಅರ್ಥ ಮಾಡಿಕೊಂಡಂತೆ ತಿಳಿಸುತ್ತಾ ಹೋಗುವುದು, ಇಲ್ಲಿಯವರೆಗೂ  ಸ್ಥಳೀಯ ಪತ್ರಿಕೆಗಳಲ್ಲಿ ನಾನು ಬರೆದಿರುವ ಲೇಖನಕ್ಕಾಗಲೀ, ಅಥವಾ ಬ್ಲಾಗ್ ಬರಹಕ್ಕಾಗಲೀ " ಇದು ತಪ್ಪು" ಎಂದು ಯಾರೂ ನೇರವಾಗಿ ಹೇಳಿಲ್ಲ. ತಪ್ಪು ಎನಿಸಿದರೆ "ಇದು ತಪ್ಪು, ಇದು ಸರಿ " ಎಂದು ತಿಳಿಸಿರೆಂದೇ ನನ್ನ ಕೋರಿಕೆ. ಆದರೆ ಯಾಕೋ ಯಾರೂ ನೇರವಾಗಿ ಅವರ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಇರಲಿ. ವೇದಾಧ್ಯಾಯೀ ಸುಧಾಕರಶರ್ಮರೇ ಖಂಡನಾ ಮಾರ್ಗವನ್ನು ಬಿಟ್ಟಮೇಲೆ ನನ್ನದು ಯಾವ ದೊಡ್ದ ವಿಷಯ?  ಇನ್ನು ಮುಂದೆ ಯಾರ ಮನಸ್ಸಿಗೂ ಕಸಿವಿಸಿಯಾಗದಂತೆ ಬರೆಯಬೇಕೆಂದುಕೊಂಡಿದ್ದೇನೆ. ಆ ದಿಕ್ಕಿನಲ್ಲಿ ಸಾಗಲು ಭಗವಂತನು ಶಕ್ತಿ ಕೊಡಲಿ.

-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ

No comments:

Post a Comment