ಕಳೆದ ನಾಲ್ಕೈದು ವರ್ಷಗಳಿಂದ ವೇದದ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ವೇದಸುಧೆಯು ತನ್ನ ಎಲ್ಲಾ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ "ವೇದಭಾರತಿಯ" ಹೆಸರಲ್ಲಿ ಹಾಸನದಲ್ಲಿ ಜಾತಿ-ಮತ-ಲಿಂಗ ಭೇದಗಳಿಲ್ಲದೆ "ಎಲ್ಲರಿಗಾಗಿ ವೇದ ಪಾಠ ಮತ್ತು ಅಗ್ನಿಹೋತ್ರವು " ನಿತ್ಯವೂ ಸಂಜೆ 6.00 ರಿಂದ 7.00 ರವರಗೆ ನಡೆಯುತ್ತಿದ್ದು ,ಸಧ್ಯಕ್ಕೆ ಸುಮಾರು 20 ಜನ ಸ್ತ್ರೀಯರು ಮತ್ತು 20 ಜನ ಪುರುಷರು ಪಾಲ್ಗೊಳ್ಳುತ್ತಿದ್ದಾರೆ.
ನೆಮ್ಮದಿಯ ಬದುಕಿಗೆ ಸಹಾಯವಾಗುವ ಚಿಂತನೆಗಳು ಸಾಮಾನ್ಯವಾಗಿ ನಿತ್ಯವೂ ಈ ಸತ್ಸಂಗದಲ್ಲಿ ನಡೆಯುತ್ತದೆ. ಆಗಿಂದಾಗ್ಗೆ ಹಲವು ಊರುಗಳಲ್ಲಿ ಅಗ್ನಿಹೋತ್ರವನ್ನು ನಡೆಸಿ ವೇದದ ಅರಿವು ಮೂಡಿಸುವ ಪ್ರಯತ್ನವೂ ಸಾಗಿದೆ. ಈಗಾಗಲೇ ಬೆಂಗಳೂರು, ಮೈಸೂರು, ಅರಸೀಕೆರೆ, ಹಂಪಾಪುರ, ಕೊಣನೂರು ಮುಂತಾದ ಸ್ಥಳಗಳಲ್ಲದೆ ಹಾಸನ ನಗರದ ಹಲವೆಡೆ ಇಂತಾ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯುತ್ತಿವೆ. ಹಾಸನ ನಗರದಲ್ಲಿ ವೇದಶಿಬಿರ, ಬಾಲಶಿಬಿರ, ಶ್ರೀ ಸುಧಾಕರಶರ್ಮರೊಡನೆ ಮುಕ್ತ ಸಂವಾದ, ಗೀತಾ ಜ್ಞಾನ ಯಜ್ಞ ...ಮುಂತಾದ ಹಲವು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ಸಾವಿರಾರು ಜನ ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಹಾಸನ ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ ವೇದಕ್ಕೆ ಸಂಬಂಧಿಸಿದ ನಮ್ಮ ಅಂಕಣಗಳು ಪ್ರಕಟವಾಗುತ್ತಿವೆ.
ಹೀಗೆ ಕಳೆದ ಎರಡು ವರ್ಷಗಳಿಂದ ವೇದಭಾರತಿಯ ಹೆಸರಲ್ಲಿ ನಮ್ಮ ಸಾಮಾಜಿಕ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿವೆ. ಇದರ ಮೂಲ ಉದ್ದೇಶವೇ ವೇದದ ಸತ್ಯ ಸಂದೇಶವನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಿರು ಪ್ರಯತ್ನ. ನಮ್ಮ ದೇಶದಲ್ಲಿ ನೂರಾರು ವರ್ಷ ತಪಸ್ಸು ಮಾಡಿ ತಾವು ಕಂಡುಕೊಂಡ ಸತ್ಯ ಸಂಗತಿಗಳನ್ನು ಜನರ ನೆಮ್ಮದಿಯ ಬದುಕಿಗಾಗಿ ವೇದದ ಮೂಲಕ ಜಗತ್ತಿಗೆ ನಮ್ಮ ಋಷಿಮುನಿಗಳು ನೀಡಿದ್ದಾರೆ. ಆದರೆ ವೇದದ ಬಗೆಗೆ ತಪ್ಪು ಸಂದೇಶಗಳೇ ಹೆಚ್ಚು ಚಾಲ್ತಿಯಲ್ಲಿದ್ದು ವೇದವನ್ನು ಅಪಹಾಸ್ಯ ಮಾಡುವ ,ವಿರೋಧಿಸುವ ಜನರಿಗೇನೂ ಕೊರತೆ ಇಲ್ಲ. ಇದಕ್ಕೆ ಕಾರಣ ವೇದವನ್ನು ಅಪವ್ಯಾಖ್ಯೆ ಮಾಡಿದ್ದು. ವೇದದಲ್ಲಿ ಎಲ್ಲೂ ಮಾನವ ವಿರೋಧದ ಮಂತ್ರಗಳಿಲ್ಲದಿದ್ದರೂ ವೇದ ಮಂತ್ರಗಳಿಗೆ ತಪ್ಪು ವ್ಯಾಖ್ಯೆ ಮಾಡಿರುವ ಕೆಲವು ಪಟ್ಟ ಭದ್ರರ ಕಾರಣವಾಗಿ ಅದೇ ಸತ್ಯವೆಂದು ಹಲವರು ಅದನ್ನೇ ಆಧಾರವಾಗಿಟ್ಟುಕೊಂಡು ವೇದವನ್ನು ದೂಷಿಸುತ್ತಿರುವುದು ನಮಗೆಲ್ಲಾ ತಿಳಿದ ಸಂಗತಿಯೇ ಆಗಿದೆ. ಆದರೆ ವೇದವು ತನ್ನನ್ನೇ ಅನುಸರಿಸಲು ಎಂದೂ ಕರೆಕೊಡುವುದಿಲ್ಲ , ಅಲ್ಲದೆ ಎಲ್ಲೆಡೆಯಿಂದ ಲಭ್ಯವಾಗುವ ಸದ್ವಿಚಾರಗಳನ್ನು ಸ್ವೀಕರಿಸು, ಎಂಬುದು ವೇದದ ಕರೆ. ಮಾನವರೆಲ್ಲರೂ ಸಮಾನರು, ಎಂಬುದು ವೇದದ ಆದೇಶ. ಇದಕ್ಕೆ ಸಂಬಂಧಿಸಿದ ನೂರಾರು ವೇದ ಮಂತ್ರಗಳಿವೆ.ಆದರೆ ಅದಕ್ಕೆ ವಿರುದ್ಧವಾಗಿ ನಡೆಯುವ ಜನರನ್ನೇ ವೇದದ ವಾರಸುದಾರರೆಂದು ತಿಳಿದು ಕೆಲವರು ವೇದವನ್ನು ವಿರೋಧಿಸುತ್ತಾ ಸಮಾಜಕ್ಕೆ ಸಿಗಬೇಕಾದ ಸತ್ಯ ಸಂದೇಶಗಳು ಸಿಗಬಾರದೆಂಬ ವ್ಯರ್ಥ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಈ ನಮ್ಮ ಭೂಮಿ ಧರ್ಮ ಭೂಮಿ. ಸತ್ಯಕ್ಕೇ ಜಯ. ಜನರಿಗೆ ಬೇಕಾಗಿರುವುದು ನೆಮ್ಮದಿಯ ಜೀವನ. ಅದು ಸಿಗದಂತೆ ಮಾಡುವ ವ್ಯರ್ಥಪ್ರಯತ್ನವನ್ನು ಕೈ ಬಿಟ್ಟು ಸತ್ಯವನ್ನು ಅರ್ಥಮಾಡಿಕೊಳ್ಳುವ ಬುದ್ಧಿಯನ್ನು ಭಗವಂತನು ದಯಪಾಲಿಸಲೆಂದು ಆಶಿಸೋಣ.
No comments:
Post a Comment