ಮನದ ಮಾತನ್ನು ಹೇಳಿಬಿಡುವೆ.ನನ್ನ ಬಗ್ಗೆ ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ. ನಿತ್ಯವೂ ಬೆಳಿಗ್ಗೆ ಟಿ.ವಿ. ಆನ್ ಮಾಡಿದರೆ ಸಾಕು ಜ್ಯೋತಿಷಿಗಳ ದರ್ಶನ! ಪಾಪ! ಜನ ಕಾಯುತ್ತಿರುತ್ತಾರೆ. ಕೆಲವರು ಅವತ್ತಿನ ಜೀವನವನ್ನು ನಿರ್ಧಾರ ಮಾಡುವುದೇ ಜ್ಯೋತಿಷಿಗಳ ಸಲಹೆ ಪಡೆದು! ಕೆಲವು ರಾಶಿಯವರಿಗೆ ಜ್ಯೋತಿಷಿಗಳು ಸಲಹೆ ಕೊಟ್ಟು ಬಿಡ್ತಾರೆ “ ಇವತ್ತು ನಿಮಗೆ ಕ್ರೂರವಾಗಿದೆ. ನೀವು ಗಣೇಶನ ಅಥವಾ ಮತ್ಯಾವುದೋ ದೇವರ ನಾಮಜಪಮಾಡಿ.ನಿಮಗೆ ಕಾರ್ಯ ಸಿದ್ಧಿಯಾಗುತ್ತೆ! ಸರಿ ಹಲವರು ಅದರಂತೆಯೇ ನಡೆದುಕೊಳ್ಳುತ್ತಾರೆ.ಇರಲಿ.ಅದು ಅವರ ಸ್ವಾತಂತ್ರ್ಯ.ನಾನ್ಯಾರು ಆ ಮಾತು ಹೇಳಲು?
ಇನ್ನು ದೇವಾಲಯಗಳ ಬಗ್ಗೆ ನೋಡುವಾಗ. ಕೆಲವಂತೂ ಅಕ್ಷರಷಃ ವ್ಯಾಪಾರಕೇಂದ್ರಗಳು! ಅದಕ್ಕೆ ಮುಗಿಲು ಬಿದ್ದ ಭಕ್ತರು!! ದಿನಗಟ್ಟಲೆ ಸಾಲಿನಲ್ಲಿ ಕ್ಯೂ ನಿಂತು ಅಂತೂ ದರ್ಶನ ಪಡೆದವೆಂದು ನಿಟ್ಟುಸಿರು ಬಿಡುವ ಭಕ್ತರು! ಇನ್ನು ಸಾವಿರಾರು ರೂಪಾಯಿ ಟಿಕೆಟ್ ಕೊಂಡು ವಿಶೇಷ ದರ್ಶನ ಪಡೆಯುವ ಶ್ರೀಮಂತ ಭಕ್ತರು!!
ಒಬ್ಬ ಸ್ವಾಮಿಗಳು ಹೀಗೆ ಹೇಳಿದರು “ ಕ್ಲಬ್ ಗಳಿಗೆ ಹೋಗಿ ಹೆಂಡ ಕುಡಿದು ಜೂಜು ಆಡಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರ ಬಗ್ಗೆ,ವೇಶ್ಯಾಗೃಹಗಳಿಗೆ ಹೋಗಿ ಬರಿದಾಗುವವರ ಬಗ್ಗೆ ಮಾತಾಡುವುದಿಲ್ಲ, ದೇವಸ್ಥಾನಗಳ ಬಗ್ಗೆ ಮಾತಾಡ್ತಾರೆ! ಇದು ತಪ್ಪು!
ಅಯ್ಯೋ ರಾಮ –ಕೆಟ್ಟ ಚಟಗಳ ಬಗ್ಗೆ ಅದೆಷ್ಟು ಜಾಗೃತಿ ಸಭೆಗಳು ನಡೆಯುವುದಿಲ್ಲ! ಇವರಿಗೆ ಅದು ಗೊತ್ತಿಲ್ಲ. ಕೆಟ್ಟ ಚಟಗಳು ಮನುಷ್ಯನ ದೌರ್ಬಲ್ಯ. ಆದರೆ ದೇವಾಲಯಗಳಿಗೆ ಹೋಗುವುದು ಮನುಷ್ಯನ ದೌರ್ಬಲ್ಯವಾಗಬಾರದು. ದೇವಾಲಯಗಳಲ್ಲಿ ಮನುಷ್ಯನ ಆತ್ಮೋನ್ನತಿ ಯಾಗಬೇಕು. ಸಾವಿರ ಸಾವಿರ ಜನ ಕ್ಯೂನಲ್ಲಿ ನಿಂತು ದೇವರ ದರ್ಶನ ಮಾಡುವ ದೇವಾಲಯಗಳು ಇಂತಾ ಆತ್ಮೋನ್ನತಿಯ ಕೇಂದ್ರವಾಗಲು ಸಾಧ್ಯವೇ ಹೇಳಿ. ದಿನಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡುವುದೂ ಕೂಡ ಒಂದು ರೀತಿಯ ದೌರ್ಬಲ್ಯವೇ ಸರಿ. ಮನೆಯಲ್ಲೇನೋ ತಾಪತ್ರಯಗಳು! ಗಂಡ ಹೆಂಡಿರ ಜಗಳ. ಮಕ್ಕಳಲ್ಲಿ ಮನಸ್ಥಾಪ.ಯಾರಿಗೋ ಖಾಯಿಲೆ. ಇವೆಲ್ಲವನ್ನೂ ಆ ದೇವರು ಸರಿಪಡಿಸಬೇಕು, ಆ ಬೇಡಿಕೆಯ ಪಟ್ಟಿ ಹಿಡಿದು ದೇವರ ಮುಂದೆ ಉದ್ದುದ್ದ ಕ್ಯೂ.
ಜ್ಯೋತಿಷಿಗಳಿಗೂ ಡಿಮ್ಯಾಂಡ್!!
ಯಾಕೆ ಇದನ್ನೆಲ್ಲಾ ಬರೆದೆ, ಎಂದರೆ ನಾವು ನಮ್ಮ ವಿವೇಕದಿಂದ ಸರಿಮಾಡಿಕೊಳ್ಳ ಬೇಕಾದ್ದನ್ನು ದೇವರು ಸರಿ ಮಾಡ್ತಾನೆ, ಅಂತಾ ತೆಗೆದುಕೊಂಡು ಹೋಗ್ತೀವಲ್ಲಾ! ಅಂತಾ ಚಿಂತೆಯಾಯ್ತು.
ದೇವರು ಇಲ್ವಾ? ಖಂಡಿತಾ ಇದಾನೆ. ಅವನಿಲ್ಲದಿದ್ದರೆ ಈ ಜಗತ್ತು ನಡೆಯುತ್ತಲೇ ಇರಲಿಲ್ಲ. ಅವನು ಒಂದು ದಿವ್ಯ ಶಕ್ತಿ. ಅವನು ಅಗೋಚರ. ಅವನ ನೆರವು ಬೇಡವೇ? ಖಂಡಿತಾ ಬೇಕು. ನಮ್ಮ ಸಂಕಲ್ಪ ಸರಿಯಾಗಿದ್ದರೆ, ಅದಕ್ಕೆ ತಕ್ಕಂತೆ ನಾವು ನಡೆದುಕೊಂಡರೆ [ಹರಕೆ ತೀರಿಸುವುದಲ್ಲ] ಅಂದರೆ ಮಾಡಬೇಕಾದ್ದನ್ನು ಮಾಡಿದರೆ ಆಗಬೇಕಾದ್ದು ಆಗೇ ತೀರುತ್ತದೆ. ಅವನಿಗೆ ಇಡೀ ಬ್ರಹ್ಮಾಂಡವನ್ನು ನಡೆಸುವ ಹೊಣೆ ಇದೆ.ನಮ್ಮ ಗಂಡ-ಹೆಂಡಿರ ಮನಸ್ಥಾಪ ಬಿಡಿಸಲು ಅವನು ಬರಬೇಕೆ?
ನಿಜವಾಗಿ ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗವನ್ನು ಪಕ್ಕಕ್ಕಿಟ್ಟು ಜನರನ್ನು ದಾರಿತಪ್ಪಿಸುವವರಿಗೇ ಹೆಚ್ಚು ಪ್ರಾಮುಖ್ಯತೆ ಯಾಗಿದೆಯಲ್ಲಾ! ಇದು ಅತ್ಯಂತ ನೋವಿನ ಸಂಗತಿ.
ಸತ್ಯವನ್ನು ಹೂತು ಹಾಕಿ ಸುಳ್ಳಿನ ಮಹಲುಗಳನ್ನು ಕಟ್ಟಿ ದೊಡ್ದ ನಾಟಕದ ಕಂಪನಿಗಳು ನಡೆಯಿತ್ತಿವೆ. ಜನರು ನೋಡುತ್ತಿದ್ದಾರೆ. ಅದನ್ನೇ ಸತ್ಯವೆಂದು ನಂಬಿದ್ದಾರೆ. ಇದಕ್ಕಿಂತ ಆತ್ಮವಂಚನೆ ಬೇರೆ ಇಲ್ಲ.
ನಮಗೆ ಜೀವನದ ನಿಜವಾದ ಅರಿವು ಮೂಡುವುದು ವೇದಜ್ಞಾನದಿಂದ ಮಾತ್ರ.ಆದರೆ ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಅಮೂಲ್ಯ ಜ್ಞಾನಭಂಡಾರವಿದೆ, ಎಂದು ತಿಳಿಸಿಕೊಡುವವರ ಸಂಖ್ಯೆ ಬಹಳ ಕಡಿಮೆ ಇದೆ.
[ ಈ ಪೋಸ್ಟ್ ಗೆ ಆಧಾರವಾದ ಒಂದು ವೇದ ಮಂತ್ರವನ್ನು ನೋಡಿ]
ಸ್ವಯಂ ವಾಜಿನ್ಸ್ತನ್ವಂ ಕಲ್ಪಯಸ್ವ ಸ್ವಯಂ ಯಜಸ್ವ|
ಸ್ವಯಂ ಜುಷಸ್ವ ಮಹಿಮಾ ತೇ ಅನ್ಯೇನ ನಸನ್ನಶೇ ||
[ಯಜುರ್ವೇದ ೨೩ನೇ ಅಧ್ಯಾಯ ೧೫ ನೇ ಮಂತ್ರ]
ಸ್ವಯಂ = ತಾನೇ ಸ್ವತ:
ವಾಜಿನ್ = ಹೇ ಬಲಶಾಲಿಯೇ,
ತನ್ವಂ = ಶರೀರವನ್ನು
ಕಲ್ಪಯಸ್ವ = ಸಮರ್ಥಗೊಳಿಸಿಕೊ
ಸ್ವಯಂ ಯಜಸ್ವ = ತಾನೇ ಸ್ವತ: ಸತ್ಕರ್ಮ ಮಾಡು
ಸ್ವಯಂ ಜುಷಸ್ವ = ತಾನೇ ಸ್ವತ: ಪ್ರೀತಿಯಿಂದ ಮಾಡು
ತೇ ಮಹಿಮಾ = ಸಾಮರ್ಥ್ಯವು ನಿನ್ನದೇ
ಅನ್ಯೇನ ನ ಸನ್ನಶೇ = ಬೇರೆಯವರೊಂದಿಗೆ ನಷ್ಟವಾಗದಿರಲಿ.
ನನ್ನ ಕೈಲಿ ಈ ಕೆಲಸ ಮಾಡಲು ಸಾಧ್ಯವೇ? ನಾನು ಸಮರ್ಥನೇ? ನನಗೆ ಶಕ್ತಿ ಇದೆಯೇ? ಎಂದು ತಲ್ಲಣಿಸುವ ಕೀಳರಿಮೆಯ ಜನರು ಈ ವೇದ ಮಂತ್ರವನ್ನು ಕೇಳಬೇಕು.
ವೇದ ಮಂತ್ರವು ಸಾರುತ್ತಿದೆ ಹೇ ಅಣುಚೇತನರೇ ನೀನು ಬಲಶಾಲಿ ನೀನು ಕುಸಿದು ಕೂರುವ ಅಗತ್ಯವಿಲ್ಲ. ನಿನಗೆ ಸಾಮರ್ಥ್ಯವಿದೆ! ನಿನ್ನಲ್ಲಿ ಅಂತ:ಸತ್ವ ಇದೆ. ಕುಸಿದು ಕೂರಬೇಡ. ಯಾರಿಗೂ ನಿನ್ನನ್ನು ಹೋಲಿಸಿಕೊಳ್ಳುವ ಅಗತ್ಯವಿಲ್ಲ. ನಿನಗೆ ಎಷ್ಟು ಸಾಮರ್ಥ್ಯವಿದೆಯೋ ಅಷ್ಟನ್ನು ನೀನು ಮಾಡು. ತನ್ವಂ ಕಲ್ಪಯಸ್ವ ಅಂದರೆ ನಿನ್ನ ಶರೀರವನ್ನು ನೀನೇ ಸಮರ್ಥಗೊಳಿಸಿಕೊ. ನಮ್ಮ ಹೊಟ್ಟೆ ತುಂಬಲು ನಾವೇ ಊಟ ಮಾಡಬೇಕು,ನಮ್ಮ ಶರೀರ ಸದೃಢವಾಗಿರಲು ನಾವೇ ವ್ಯಾಯಾಮ ಮಾಡಬೇಕು, ನಾವೇ ವಿಶ್ರಾಂತಿ ತೆಗೆದುಕೊಳ್ಳಬೇಕು ತಾನೇ. ಹಾಗೆಯೇ ನಿನ್ನ ಶರೀರವನ್ನು ನೀನೇ ಸದೃಢ ಗೊಳಿಸಿಕೊ. ಸ್ವಯಂ ಯಜಸ್ವ ಅಂದರೆ ನೀನೇ ಸ್ವತ: ಸತ್ಕರ್ಮಗಳನ್ನು ಮಾಡು. ನಿನ್ನ ಪರವಾಗಿ ಬೇರೆ ಯಾರೋ ಸತ್ಕರ್ಮವನ್ನು ಮಾಡಿದರೆ ಅದರ ಫಲ ಅವರಿಗೇ ಹೊರತೂ ನಿನಗಲ್ಲ. ಸ್ವಯಂ ಜುಷಸ್ವ ಅಂದರೆ ನೀನೇ ಸ್ವತ: ಪ್ರೀತಿಯಿಂದ ಕರ್ಮವನ್ನು ಮಾಡು. ಮಾಡುವ ಕೆಲಸವನ್ನು ಬೇಸರದಿಂದ ಮಾಡಬೇಡ. ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ನಿನ್ನ ಅಂತರಂಗದಲ್ಲಿರುವ ಪಾತ್ರೆಯಲ್ಲಿ ಸತ್ಕರ್ಮ ಫಲವೇ ಜಾಸ್ತಿಯಾಗುತ್ತದಲ್ಲಾ! ಮಾಡುವ ಕೆಲಸವನ್ನು ಅಯ್ಯೋ ಮಾಡಬೇಕಲ್ಲಾ! ಎಂದು ಮಾಡುವ ಬದಲು ಸಂತೋಷವಾಗಿ ಮಾಡು. ಅದರಿಂದ ನಿನಗೇ ಲಾಭ. ಎಷ್ಟು ಕಷ್ಟಪಟ್ಟು ಜೀವನ ಮಾಡುತ್ತಿದ್ದೇನೆ, ಗೊತ್ತಾ? ಎಂದು ಯಾರೋ ಕನಿಕರ ಪಡುವಂತೆ ವರ್ತಿಸಬೇಡಿ.ಇದರಿಂದ ನಿಮ್ಮ ಅಂತರಂಗವು ಮಲಿನವಾಗುತ್ತದೆ.
"ತೇ ಮಹಿಮಾ ಅನ್ಯೇನ ನಸನ್ನಶೇ" ಅಂದರೆ ಯಾರೋ ಮಾಡುವ ಸಾಧನೆಯಿಂದ ನಿನ್ನ ಮಹಿಮೆಯು ಸಿದ್ಧಿಸುವುದಿಲ್ಲ. ನೀನು ಒಳ್ಳೆಯ ಅಡುಗೆ ಮಾಡಬೇಕೆಂದರೆ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀನೇ ಹೊಂದಿಸಿಕೊಳ್ಳ ಬೇಕು. ಬೇಕಾಗುವ ಸಾಮಗ್ರಿಗಳೇನು ? ನಿನ್ನ ಮಾತು, ನಿನ್ನ ನಡೆ, ನಿನ್ನ ವ್ಯವಹಾರ.ಅಷ್ಟೆ. ಯಾರೋ ಸಾಧನೆ ಮಾಡಿದ್ದರೆ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನೀನು ಅವರನ್ನು ಹೊಗಳ ಬಹುದಷ್ಟೆ. ಆದರೆ ನೀನು ಸಾಧನೆ ಮಾಡಬೇಕಾದರೆ ಅದು ನಿನ್ನ ನಡೆ, ನುಡಿ, ವ್ಯವಹಾರಗಳಿಂದ ಮಾತ್ರ ಸಾಧ್ಯ.
No comments:
Post a Comment