Pages

Thursday, April 23, 2015

ಸಾರ್ಥಕ ಹೊತ್ತು, ಸನ್ಮಿತ್ರನಿಗೆ ಅರವತ್ತು!

 ಜೀವನವೇದ ಪುಸ್ತಕ ಲೋಕಾರ್ಪಣೆಯ ಆ ಕ್ಷಣ!

     ಕಳೆದ ಭಾನುವಾರ ನನ್ನ ದೀರ್ಘಕಾಲದ ಮಿತ್ರ ಶ್ರೀಧರ ೬೦ ವಸಂತಗಳನ್ನು ಕಂಡು ಮುಂದಡಿಯಿಟ್ಟ ದಿನ. ಆ ಸುಸಂದರ್ಭದ ನಿಮಿತ್ತ ಮಿತ್ರನ ಮನೆಯಲ್ಲಿ ಅಗ್ನಿಹೋತ್ರ, ವಿಶೇಷ ಕಾರ್ಯಕಲಾಪಗಳು, ಬಂಧು-ಮಿತ್ರರ ಶುಭ ಹಾರೈಕೆಗಳ ಮೇಳೈಕೆಗಳೊಂದಿಗೆ ರಾ.ಸ್ವ.ಸಂಘದ ಜ್ಯೇಷ್ಠ ಪ್ರಚಾರಕ ಸನ್ಮಾನ್ಯ ಶ್ರೀ ಸು.ರಾಮಣ್ಣನವರ ಆಶೀರ್ವಾದಪೂರ್ವಕ ಸಂದೇಶಸೂಚಕವಾದ ಮಾತುಗಳು, ದೂರವಾಣಿ ಮೂಲಕವೇ ಸಾಂದರ್ಭಿಕವಾಗಿ ಮಾತನಾಡಿದ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾತುಗಳು ಶುಭಸಂದರ್ಭವನ್ನು ಮತ್ತಷ್ಟು ಮಹತ್ವಗೊಳಿಸಿದವು. ಸಮ್ಮಿಶ್ರಭಾವದಿಂದ ನನ್ನ ಕಣ್ಣುಗಳಿಂದ ಜಾರಿದ ಒಂದೆರಡು ಹನಿಗಳನ್ನು ಬೇರೆಯವರು ಗಮನಿಸದಂತೆ ಒರೆಸಿಕೊಂಡೆ. ನನ್ನ ಮತ್ತು ಶ್ರೀಧರರ ಗೆಳೆತನ ಸಾಗಿಬಂದ ದಿನಗಳನ್ನು ಮನಸ್ಸು ಮೆಲುಕು ಹಾಕಿತ್ತು.                                                              
     ಅರವತ್ತು ವರ್ಷಗಳು ಜೀವಿಯ ಕಾಲದಲ್ಲಿ ಆತ್ಮಾವಲೋಕನದ ಸಮಯ. ಕಳೆದ ಆ ವರ್ಷಗಳಲ್ಲಿ ಬಾಳಿನಲ್ಲಿ ಕಳೆದುದೆಷ್ಟೋ, ಕೂಡಿದುದೆಷ್ಟೋ, ಗುಣಿಸಿದೆಷ್ಟೋ ಮತ್ತು ಭಾಗಿಸಿದದೆಷ್ಟೋ ಎಲ್ಲ ಲೆಕ್ಕವನ್ನೂ ಮಾಡಿದ ನಂತರ ಉಳಿವ ಶೇಷವೇ ಆ ಸಮಯದ ಬದುಕಿನ ಸ್ಥಿತಿ! ನನ್ನ ಸನ್ಮಿತ್ರನ ಈಗಿನ ಸ್ಥಿತಿಯಲ್ಲಿ ಈ ರೀತಿ ಲೆಕ್ಕ ಹಾಕಿದರೆ ಪುಣ್ಯದ ಲೆಕ್ಕದಲ್ಲಿ ಗಣನೀಯ ಶಿಲ್ಕು ಇರುವುದು ಗೋಚರವಾಗದೇ ಇರದು. ಧನ್ಯತೆ ಮತ್ತು ಮಾನ್ಯತೆ ಎರಡನ್ನೂ ಗಳಿಸಿಕೊಂಡಿರುವುದಕ್ಕೆ ಪೂರ್ವಾರ್ಜಿತ ಕರ್ಮ ಮತ್ತು ಈಗ ಮಾಡಿರುವ ಸುಕರ್ಮಗಳ ಫಲಗಳೇ ಕಾರಣವೆಂದರೆ ತಪ್ಪಿಲ್ಲ.

ವೇದಭಾರತಿಯ ತಂಡದ ಸಹಕಾರದೊಡನೆ ವಿಶೇಷ ಅಗ್ನಿಹೋತ್ರ

     ಇದು ವಾನಪ್ರಸ್ಥಾಶ್ರಮದ ಸಮಯ. ವಾನಪ್ರಸ್ಥವೆಂದರೆ ಜನರಿಂದ ದೂರವಾಗಿ ಬಾಳುವುದಲ್ಲ. ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು ತಾನು ತಾನಾಗಿರಬೇಕು, ಅರ್ಥಾತ್ ತನಗಾಗಿ ಬಾಳಬೇಕು. ತನಗಾಗಿ ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ನನ್ನ ಮಿತ್ರನ ಸದ್ಯದ ಗುರಿಯೆಂದರೆ ವೇದದ ಕುರಿತು ಪ್ರಚಾರ, ಪ್ರಸಾರದಲ್ಲಿ ತೊಡಗುವುದು, ಅಗ್ನಿಹೋತ್ರವನ್ನು ಜನಪ್ರಿಯಗೊಳಿಸುವುದು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು ಮತ್ತು ಇತರರನ್ನೂ ಆ ದಿಸೆಯಲ್ಲಿ ಪ್ರೇರಿಸುವುದು. ಆತ ಸಾಗುತ್ತಿರುವ ರೀತಿಯಿಂದ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಕಾಣುತ್ತಿದೆ. ಯಶಸ್ವಿಯೂ ಆಗಲಿ ಎಂಬುದು ಮನದಾಳದ ಹಾರೈಕೆ.
ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಮಲಗುಂದದ ಆರ್ಷ ವಿದ್ಯಾ ಗುರುಕುಲದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಟ್ಟಾಗ


     ೧೯೭೦ರ ದಶಕದ ಸಮಯದಲ್ಲಿ ಶ್ರೀಧರರ ಪರಿಚಯವಾದಾಗ ಆತ ಇನ್ನೂ ಐ.ಟಿ.ಐ. ಓದುತ್ತಿದ್ದ ವಿದ್ಯಾರ್ಥಿ. ನಾನು ಆಗಿನ್ನೂ ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು. ನಾನು ಜಿಲ್ಲಾ ಫುಡ್ ಇನ್ಸ್‌ಪೆಕ್ಟರ್ ಆಗಿದ್ದೆ. ಇಬ್ಬರೂ ಸಂಘದ ಕಾರ್ಯಕರ್ತರಾದ್ದರಿಂದ ಪರಿಚಯ ಸಹಜವಾಗಿ ಆಗಿತ್ತು. ೧೯೭೩ರಲ್ಲಿ ಶ್ರೀಧರ್ ಸಂಘದ ಕಾರ್ಯಾಲಯದಲ್ಲಿ ಇದ್ದುಕೊಂಡು ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯ. ಆತ ವಾಣಿವಿಲಾಸ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿದ್ದ ಶೈಲೇಂದ್ರ ಸಾಯಂಶಾಖೆಯ ಮುಖ್ಯಶಿಕ್ಷಕನಾಗಿದ್ದರೆ, ನಾನು ಭಾಗ ಕಾರ್ಯವಾಹ ಮತ್ತು ನಂತರದಲ್ಲಿ ನಗರ ಸಹಕಾರ್ಯವಾಹನಾಗಿ ಜವಾಬ್ದಾರಿ ಹೊಂದಿದ್ದೆ. ಚ.ವಾಸುದೇವ್ ಜಿಲ್ಲಾ ಪ್ರಚಾರಕ್, ಬಿ.ಎನ್.ಹರಿಪ್ರಸಾದ್ (ಈಗಿನ ಬೆಂಗಳೂರಿನ ಜನಪ್ರಿಯ ಶಾಸಕರಾದ ಬಿ.ಎನ್.ವಿಜಯಕುಮಾರರ ತಮ್ಮ) ನಗರ ಪ್ರಚಾರಕ್, ಎ.ವಿ. ಚಂದ್ರಶೇಖರ್ (ಈಗ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು) ವಿಸ್ತಾರಕ್ ಮತ್ತು ಸು.ರಾಮಣ್ಣನವರು ಮೈಸೂರು ವಿಭಾಗ ಪ್ರಚಾರಕರಾಗಿದ್ದ ಸಮಯವದು. ಹೊ.ವೆ.ಶೇಷಾದ್ರಿಯವರು ಪ್ರಾಂತ ಪ್ರಚಾರಕರಾಗಿದ್ದರು. ನಾನು ಪ್ರತಿನಿತ್ಯ ನನ್ನ ವ್ಯಾಪ್ತಿಯಲ್ಲಿನ ಒಂದೊಂದು ಶಾಖೆಗೆ ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆಗೂ ವಾರಕ್ಕೆ ಎರಡು-ಮೂರು ದಿನಗಳು ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆ ಸಂಖ್ಯಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಉತ್ತಮದ್ದಾಗಿತ್ತು. ಅವರು ಬಾಲ ಸ್ವಯಂಸೇವಕರೊಂದಿಗೆ ಬೆರೆಯುತ್ತಿದ್ದ ರೀತಿ, ಆಟವಾಡಿಸುತ್ತಿದ್ದ ಶೈಲಿ, ಗಟ್ಟಿ ಕಂಠದಲ್ಲಿ ಹೇಳಿಕೊಡುತ್ತಿದ್ದ ದೇಶಭಕ್ತಿಗೀತೆಗಳು, ಶಾಖೆಗೆ ಬಾರದಿದ್ದ ಬಾಲಕರ ಮನೆಗಳಿಗೆ ಹೋಗಿ ಅವರನ್ನು ಮಾತನಾಡಿಸುತ್ತಿದ್ದುದು, ಮುಂತಾದವು ಹೊಸ ಹೊಸ ಬಾಲಕರನ್ನು ಶಾಖೆಯೆಡೆಗೆ ಸೆಳಯುತ್ತಿದ್ದವು. ಶ್ರೀಧರರ ಇಂದಿನ ಕಾರ್ಯಕ್ಷಮತೆ, ಸಂಘಟನಾಚತುರತೆ, ವಾಕ್ಪಟುತ್ವಗಳಿಗೆ ಅವರು ಶೈಲೇಂದ್ರ ಶಾಖೆಯ ಮುಖ್ಯಶಿಕ್ಷಕನಾಗಿದ್ದುದು, ಮೇಲೆ ತಿಳಿಸಿದ ಮಹನೀಯರ ಮಾರ್ಗದರ್ಶನ, ಜೊತೆಯಲ್ಲಿದ್ದ ಸಮರ್ಥ ಸಂಘದ ಕಾರ್ಯಕರ್ತರ ಸಹವಾಸ, ಬಡತನದ ಕಷ್ಟ-ನಷ್ಟಗಳ ಅರಿವುಗಳು ಗಟ್ಟಿ ತಳಹದಿ ಹಾಕಿತ್ತೆಂಬುದರಲ್ಲಿ ಅನುಮಾನವೇ ಇಲ್ಲ.
ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಮಲಗುಂದದ ಆರ್ಷ ವಿದ್ಯಾ ಗುರುಕುಲದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಟ್ಟಾಗ

     ಅಧಿಕಾರದಾಹದಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಜನತೆಯ ಮೇಲೆ ಹೇರಿದ್ದ ೧೯೭೫-೭೭ರ ತುರ್ತುಪರಿಸ್ಥಿತಿ ದೇಶವನ್ನು ಸರ್ವಾಧಿಕಾರಕ್ಕೆ ದೂಡಿತ್ತು. ವಿರೋಧಿಗಳನ್ನೆಲ್ಲಾ ಜೈಲುಪಾಲಾಗಿಸಿದ್ದರು. ಪತ್ರಿಕಾ ಮತ್ತು ಇತರ ಮಾಧ್ಯಮಗಳಿಗೆ ದಿಗ್ಬಂಧನ, ರಾ.ಸ್ವ.ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ನಿಷೇಧ ದೇಶದ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ತಂದಿತ್ತು. ಆ ಅವಧಿ ನನ್ನ ಪಾಲಿಗೂ ಕರಾಳ ಅವಧಿಯಾಗಿತ್ತು. ನಾನೂ ಸೇರಿದಂತೆ ಹಲವರನ್ನು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಅಟ್ಟಿದ್ದರು. ನನ್ನ ನೌಕರಿ ಹೋಗಿತ್ತು. ಸುಮಾರು ಆರು ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿ ಕಳೆದಿದ್ದೆ. ಶ್ರೀಧರ್ ಆ ಸಮಯದಲ್ಲಿ ೧೯೭೪ರಿಂದ೭೭ರವರೆಗೆ ಬೆಂಗಳೂರಿನಲ್ಲಿದ್ದು ತುರ್ತುಪರಿಸ್ಥಿತಿ ಅವಧಿಯಲ್ಲಿ ಭೂಗತನಾಗಿ ತುರ್ತುಪರಿಸ್ಥಿತಿ ವಿರುದ್ಧ ಜನರನ್ನು ಜಾಗೃತಗೊಳಿಸುವ ಕಹಳೆ ಪತ್ರಿಕೆಯ ವಿವಿದೆಡೆಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. ತೆರೆಮರೆಯ ಈ ಕೆಲಸ ಅತ್ಯಂತ ಮಹತ್ವದ್ದು ಮತ್ತು ಅಪಾಯಕಾರಿಯಾಗಿದ್ದುದಾಗಿತ್ತು. ಹಲವು ಸಲ ಚಾಣಾಕ್ಷತೆಯಿಂದ ಪೋಲಿಸರ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡಿದ್ದರು. ಆ ಕರಾಳ ಅವಧಿ ನೂರಾರು ಸ್ವಯಂಸೇವಕರ ಜೀವನವನ್ನೇ, ಸಂಸಾರಗಳನ್ನೇ ನಾಶ ಮಾಡಿತ್ತು. ಸಂಘದ ದಿಟ್ಟ ಹೋರಾಟದಿಂದ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದ್ದು ಈಗ ಇತಿಹಾಸ.
ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕನಾಗಿ
     ೧೯೭೭ರಿಂದ ೭೯ರವರೆಗೆ ಕೆಜಿಎಫ್ ನಲ್ಲಿದ್ದ ಶ್ರೀಧರ್ ೧೯೭೯ರಲ್ಲಿ ಹಾಸನ ಜಿಲ್ಲೆಗೆ ಬಂದವರು ತದನಂತರದಲ್ಲಿ ಹಾಸನ ಜಿಲ್ಲೆಯಲ್ಲಿಯೇ ಕೆಲಸ ಮಾಡಿದರು. ನನ್ನ ಮತ್ತು ಶ್ರೀಧರರ ಮರುಭೇಟಿ ೧೯೮೦ರ ದಶಕದ ಆರಂಭದ ವರ್ಷಗಳಲ್ಲಿ ಹೊಳೆನರಸಿಪುರದಲ್ಲಾಯಿತು. ನಾನು ಹೊಳೆನರಸಿಪುರಕ್ಕೆ ಉಪತಹಸೀಲ್ದಾರನಾಗಿ ಹೋದಾಗ ಅವರು ಕೆ.ಇ.ಬಿ. ನೌಕರರಾಗಿ ಅಲ್ಲಿ ಕೆಲಸ ಮಾಡುತ್ತಿದ್ದರು. ಸಂಘದ, ವಿಶ್ವಹಿಂದು ಪರಿಷತ್ತಿನ ಅನೇಕ ಚಟುವಟಿಕಗಳಲ್ಲಿ ಇಬ್ಬರೂ ಸಕ್ರಿಯವಾಗಿ ತಡಗಿಸಿಕೊಂಡಿದ್ದೆವು. ನಾನು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಮತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ಆಗಿದ್ದರಿಂದ ಆ ಸಂಘಗಳ ಮೂಲಕವೂ ಸಮಾಜಮುಖಿ ಚಟುವಟಿಕೆಗಳನ್ನು ಮಾಡಲು ಅವಕಾಶವಾಗಿತ್ತು. ಅಂತಹ ಚಟುವಟಿಕೆಗಳಿಗೆ ಶ್ರೀಧರರ ಸಕ್ರಿಯ ಸಹಕಾರ ಲಭಿಸುತ್ತಿತ್ತು. ಅಲ್ಲಿಂದ ನನಗೆ ವರ್ಗಾವಣೆಯಾದಾಗ ಮತ್ತೆ ಬೇರ್ಪಟ್ಟೆವು.
ಸಂಸ್ಕೃತ ಸಮ್ಮೇಳನದಲ್ಲಿ ಸಮ್ಮೇಳನ ಸಂಯೋಜಕನಾಗಿ


     ಸಕಲೇಶಪುರ, ಬೇಲೂರು, ಮಂಗಳೂರು ಜಿಲ್ಲೆಯ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿ ಹಾಸನಕ್ಕೆ ೧೯೯೧-೯೨ರಲ್ಲಿ ವರ್ಗ ಮಾಡಿಸಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ಕಾರ್ಯ ಮಾಡಲು ಬಂದಾಗ ಶ್ರೀಧರ್ ಸಹ ಹಾಸನದಲ್ಲಿದ್ದರು. ನಾನು ಶಾಂತಿನಗರದ ಸ್ವಂತ ಮನೆಯಲ್ಲಿದ್ದರೆ, ಅವರೂ ಶಾಂತಿನಗರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶ್ರೀಧರ್ ಆಗ ವಿಶ್ವಹಿಂದುಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾಗಿದ್ದರು.ಅದೇ ಸಮಯದಲ್ಲಿ  ಶ್ರೀರಾಮಜನ್ಮಭೂಮಿಮುಕ್ತಿ ಹೋರಾಟ ಆರಂಭವಾಗಿ  ವಿಶ್ವಹಿಂದು ಪರಿಷತ್ತಿನ ಮೇಲೆ ಸರ್ಕಾರವು ನಿಶೇಧವನ್ನು ಹೇರಿದ್ದರಿಂದ ವಿಶ್ವಹಿಂದು ಪರಿಷತ್ತಿನ ಹೆಸರಲ್ಲಿ ಚಟುವಟಿಕೆ ನಡೆಸುವಂತಿರಲಿಲ್ಲ. ಆಗ ರೂಪುಗೊಂಡಿದ್ದೇ ಮನೆ-ಮನೆ ಭಜನೆ ಕಾರ್ಯಕ್ರಮ. ಶ್ರೀಧರ್, ನಾನು, ವಿಶ್ವೇಶ್ವರಯ್ಯ (ಈಗ ಮೈಸೂರಿನಲ್ಲಿದ್ದಾರೆ) ಮತ್ತು ಉಪೇಂದ್ರ (ಈಗ ಚಿಕ್ಕಮಗಳೂರಿನಲ್ಲಿ) ನಾವು ನಾಲ್ವರು ಮಾತನಾಡಿಕೊಂಡು ಪ್ರತಿ ಶನಿವಾರ ಒಂದೊಂದು ಮನೆಯಲ್ಲಿ ಸಾಮೂಹಿಕ ಭಜನೆ ನಡೆಸುವುದೆಂದು ತೀರ್ಮಾನಿಸಿ ಆರಂಭಿಸಿಯೇ ಬಿಟ್ಟೆವು. ಸಾಯಂಕಾಲ ೭ರಿಂದ ೭.೪೫ರವರೆಗೆ ಭಜನೆ, ೧೦ ನಿಮಿಷಗಳ ಕಾಲ ಸಾಮಯಿಕ ಮಹತ್ವದ ವಿಷಯದ ಕುರಿತು ಯಾರಾದರೂ ಒಬ್ಬರ ಮಾತು, ನಂತರ ಮಂಗಳಾರತಿ (ಯಾರ ಮನೆಯಲ್ಲಿ ಭಜನೆ ನಡೆಯುತ್ತಿತ್ತೋ ಆ ಮನೆಯವರು ಪೂಜಿಸುವ ದೇವರಿಗೆ), ಜೊತೆಗೆ ಭಾರತಮಾತಾ ನಮನವೂ ಇರುತ್ತಿತ್ತು. ಪ್ರಸಾದ ವಿನಿಯೋಗದೊಂದಿಗೆ ೮ರ ವೇಳೆಗೆ ಕಾರ್ಯಕ್ರಮ ಮುಗಿಯುತ್ತಿತ್ತು. ಸುಮಾರು ಎರಡು ವರ್ಷಗಳ ಕಾಲ ನಡೆದ ಈ ಕಾರ್ಯಕ್ರಮ ಶಾಂತಿನಗರ ಮತ್ತು ಹೇಮಾವತಿನಗರದ  ಅನೇಕರ ಮನೆಗಳಲ್ಲಿ ನಡೆದು, ಪರಸ್ಪರರಲ್ಲಿ ಸೌಹಾರ್ದತೆ, ಬಡಾವಣೆಯವರೆಲ್ಲಾ ಒಂದೇ ಕುಟುಂಬದವರು ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಫಲವಾಗಿ ಅಂಚೆ-ತಂತಿ ಗಣಪತಿ ದೇವಸ್ಥಾನದ ಆವರಣದಲ್ಲಿ ನಾವುಗಳೇ ರಾಮನವಮಿ ಉತ್ಸವವನ್ನು ಸುಮಾರು ೧೦ ವರ್ಷಗಳವರೆಗೆ ವಿಜೃಂಭಣೆಯಿಂದ ಮಾಡಿದ್ದೆವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದೊಡ್ಡ ಮೆರವಣಿಗೆಗಳು ನಡೆಯುತ್ತಿದ್ದವು. ನಂತರದಲ್ಲಿ ಶ್ರೀಧರ್ ಸ್ವಂತ ಮನೆ ಈಶಾವಾಸ್ಯಮ್ವಾಸಿಯಾದರೆ ನಾನು ವರ್ಗಾವಣೆಯಾಗಿ ಬೇರೆ ಜಿಲ್ಲೆಗಳಲ್ಲಿ ಸುತ್ತುತ್ತಿದ್ದುದರಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತು. ಶ್ರೀಧರ್ ಅರಸಿಕೆರೆಯ ತಾಲ್ಲೂಕು ಸಹಕಾರ್ಯವಾಹ ಮತ್ತು ನಂತರದಲ್ಲಿ ಜಿಲ್ಲಾಸಹಕಾರ್ಯವಾಹರಾಗಿ, ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಗಣನೀಯ ಕಾರ್ಯ ಮಾಡಿದ್ದಾರೆ. ಸಂಘದ ಜಿಲ್ಲಾ ಪ್ರಚಾರ ಪ್ರಮುಖರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರು.
     ಹಾಸನ ನಗರದಲ್ಲಿ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅಕ್ಟೋಬರ್, ೧೯೯೩ರಲ್ಲಿ ಸೇವಾಭಾರತಿ ಸಂಸ್ಥೆ ಉದಯವಾಗಿ ಅದಕ್ಕಾಗಿ ೧೩ ಸದಸ್ಯರ ತಂಡ ಜೋಡಿಸಲಾಯಿತು. ನಾನು ಈ ಸಂಸ್ಥೆಯ ಸಂಯೋಜಕರಾಗಿದ್ದರೆ, ಡಾ. ಗುರುರಾಜ ಹೆಬ್ಬಾರ್ ಅಧ್ಯಕ್ಷರು, ಡಾ. ವೈ.ಎಸ್. ವೀರಭದ್ರಪ್ಪ ಹಾಗೂ ಡಾ. ಭಾರತಿ ರಾಜಶೇಖರ್ ಉಪಾಧ್ಯಕ್ಷರು, ಶ್ರೀ ಹೆಚ್.ಬಿ ಲಕ್ಷ್ಮಣ್ ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ಭಟ್ ಸಹಕಾರ್ಯದರ್ಶಿ, ಶ್ರೀ ಎಂ.ಎಸ್. ಶ್ರೀಕಂಠಯ್ಯ ಖಜಾಂಚಿಯಾಗಿದ್ದರೆ, ಸದಸ್ಯರುಗಳಾಗಿ ಶ್ರೀಯುತರಾದ ಹರಿಹರಪುರ ಶ್ರೀಧರ್, ಕೆ. ವೆಂಕಟಯ್ಯ, ನರಹರಿ, ಗಿರಿಜಮ್ಮ, ಸೀತಾಲಕ್ಷ್ಮಮ್ಮ, ಡಾ. ದೇವದಾಸ್‌ರವರು ಇದ್ದರು. ಆ ಸಮಯದಲ್ಲಿ ಶ್ರೀಧರ್ ಸಂಘದ ಜಿಲ್ಲಾ ಸೇವಾಪ್ರಮುಖ್ ಆಗಿ ಜವಾಬ್ದಾರಿ ಹೊಂದಿದ್ದರು. ಯೋಗ ಮತ್ತು ಸಂಸ್ಕೃತ ತರಗತಿಗಳು, ವೈದ್ಯಕೀಯ ಸೇವೆ, ಆಪ್ತ ಸಲಹಾ ಕೇಂದ್ರ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದೆವು. ಹೆಸರಿಗೆ ೧೩ ಜನರ ತಂಡವಿದ್ದರೂ ಡಾ. ಗುರುರಾಜ ಹೆಬ್ಬಾರ್ ಮತ್ತು ಡಾ. ವೈ.ಎಸ್. ವೀರಭದ್ರಪ್ಪನವರ  ಅತ್ಯಮೂಲ್ಯ ಸಹಕಾರ ಪಡೆದು ನಿಜವಾಗಿ ಸೇವಾಭಾರತಿಯ ಕೆಲಸದಲ್ಲಿ ತೊಡಗಿಕೊಂಡವರು ನಾನು, ಶ್ರೀಧರ್ ಮತ್ತು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ಮಾತ್ರ. ಇದು ವಾಸ್ತವ ಸಂಗತಿ. ಈ ಮೂವರ ತಂಡವನ್ನು  ಸೇವಾ ಆಟೋ ಎಂದು ಸ್ನೇಹಿತರು ಹಾಸ್ಯ ಮಾಡುತ್ತಿದ್ದರು. ೩ ಚಕ್ರಗಳ ಪೈಕಿ ಒಂದಕ್ಕೆ ತೊಂದರೆಯಾದರೂ ಸೇವಾ ಆಟೋ ಸಾಗುತ್ತಿರಲಿಲ್ಲ. ಈ ಆಟೋದ ಎಂಜಿನ್ ಹೆಬ್ಬಾರರಾಗಿದ್ದರು. ಸುಮಾರು ೪ ವರ್ಷಗಳ ಕಾಲ ಈ ಸೇವಾಚಟುವಟಿಕೆಗಳು ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ಲಕ್ಷ್ಮಣ್ ಮೈಸೂರಿಗೆ ಮತ್ತು ನಾಗರಾಜ್ ಮಂಗಳೂರಿಗೆ ವರ್ಗಾವಣೆಗೊಂಡದ್ದರಿಂದ ನಡೆಯುತ್ತಿದ್ದ ಸೇವಾಚಟುವಟಿಕೆಗಳನ್ನು ಮುಂದುವರೆಸಲಾಗಿರಲಿಲ್ಲ. ಸೇವಾಭಾರತಿಯಿಂದ ಹಾಸನದ ಅಂಬೇಡ್ಕರ್ ನಗರ ಮತ್ತು ಸಿದ್ದಯ್ಯನಗರಗಳ ವ್ಯಾಪ್ತಿಯಲ್ಲಿ ೮ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನಿಗಳ ವಿವರ ಸಂಗ್ರಹಿಸಿ ರಕ್ತದಾನ ಮಾಡುವ ವ್ಯವಸ್ಥೆ, ಸೇವಾದಿನದ ಆಚರಣೆ, ಸಂಸ್ಕೃತ ಸಂಭಾಷಣಾ ಶಿಬಿರಗಳು, ಸ್ವದೇಶಿ ಜಾಗರಣ ಆಂದೋಲನ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಶಾಂತಿನಗರ ಬಡಾವಣೆಯಲ್ಲಿ ಪಾರ್ಥೇನಿಯಂ ನಿರ್ಮೂಲನಾ ಕಾರ್ಯದ ಜೊತೆಗೆ ವಿನೂತನ ರೀತಿಯ ರಕ್ಷಾಬಂಧನ ಕಾರ್ಯಕ್ರಮ, ಇತ್ಯಾದಿ ಚಟುವಟಿಕೆಗಳು ಸುಮಾರು ನಾಲ್ಕು ವರ್ಷಗಳವರೆಗೆ ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ನಾನು ತಹಸೀಲ್ದಾರನಾಗಿ ಮಂಗಳೂರಿಗೆ, ಲಕ್ಷ್ಮಣ್ ಮೈಸೂರಿಗೆ ವರ್ಗವಾಗಿ ಹೋದನಂತರದಲ್ಲಿ ಸೇವಾಭಾರತಿ ಚಟುವಟಿಕೆ ಸ್ತಬ್ಧವಾಯಿತು. ಈಗಲೂ ಯಾರಾದರೂ ತರುಣರು ಈ ಕಾರ್ಯ ಮುಂದುವರೆಸಲು ಮುಂದೆ ಬಂದಲ್ಲಿ ನನ್ನ ಮತ್ತು ಶ್ರೀಧರರ ಕ್ರಿಯಾತ್ಮಕ ಸಹಕಾರ ಸಿಗಲಿದೆ.
     ನಂತರದ ಮತ್ತು ಈಗಿನ ಚಟುವಟಿಕೆಗಳು ವೇದಭಾರತಿಯ ಯಶೋಗಾಥೆಯದು. ಶಿಕಾರಿಪುರ ಮತ್ತು ಶಿವಮೊಗ್ಗಗಳಲ್ಲಿ ಕಾರ್ಯ ನಿರ್ವಹಿಸಿ ೨೦೦೯ರ ಡಿಸೆಂಬರಿನಲ್ಲಿ ಸ್ವಯಂ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ಶ್ರೀಧರ್ ಸಹ ಒಂದೆರಡು ವರ್ಷಗಳ ನಂತರ ಸ್ವಯಂ ನಿವೃತ್ತಿ ತೆಗೆದುಕೊಂಡರು. ವೇದಸುಧೆ ಅಂತರ್ಜಾಲದ ಬ್ಲಾಗ್ ಅನ್ನು ಶ್ರೀಧರ್ ತೆರೆದರು. ನನ್ನನ್ನು ಗೌರವ ಸಂಪಾದಕರಾಗಿರಲು ಮತ್ತು ಲೇಖನಗಳನ್ನು ಬರೆಯಲು ಕೋರಿದರು. ಈ ಬ್ಲಾಗ್ ಎಷ್ಟು ಜನಪ್ರಿಯವಾಯಿತೆಂದರೆ ಇದುವರೆಗೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಪುಟವೀಕ್ಷಣೆಗಳನ್ನು ಇದು ಕಂಡಿದೆ. ಬ್ಲಾಗಿನ ವಾರ್ಷಿಕೋತ್ಸವವನ್ನೂ ಆಚರಿಸಿದೆವು. ಶ್ರೀಧರ್ ಮತ್ತು ನನ್ನ ತಮ್ಮನ ಒತ್ತಾಯದ ಮೇರೆಗೆ ನನ್ನ ಮೂಢ ಉವಾಚ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ವಿವರಗಳು ಪ್ರಚುರವಾಗುತ್ತಲೇ ಇರುವುದರಿಂದ ಇಲ್ಲಿ ಪುನಃ ಅ ಬಗ್ಗೆ ವಿವರಿಸಹೋಗುವದಿಲ್ಲ. ತಮ್ಮ ಮನೆಯ ಹಾಲ್ ಅನ್ನೇ ಈ ಚಟುವಟಿಕೆಗಳಿಗೆ ಮೀಸಲಿಟ್ಟು ವೇದಭಾರತಿಯ ಬೆನ್ನೆಲುಬಾಗಿರುವ ಶ್ರೀಧರರಿಗೆ ಸಕ್ರಿಯ ಸಹಕಾರ, ಬೆಂಬಲಗಳನ್ನು ವೇದಭಾರತಿ ಕಾರ್ಯಕರ್ತರು ಹೀಗೆಯೇ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಸಲಿ ಎಂದು ಹಾರೈಸುವೆ.
      ಹಾಸನದಲ್ಲಿ ನಡೆದ ನಮ್ಮ ಕೆಳದಿ ಕವಿಮನೆತನದವರ ವಾರ್ಷಿಕ ಸಮಾವೇಶದಲ್ಲಿ ಅದು ತಮ್ಮದೇ ಕೆಲಸವೆಂಬಂತೆ ನನ್ನ ಹೆಗಲಿಗೆ ಹೆಗಲಾಗಿ ಶ್ರಮಿಸಿದ ಶ್ರೀಧರರಿಗೆ ನಾನು ಕೃತಜ್ಞ. ಜಿಲ್ಲಾ ಸಂಸ್ಕೃತ ಸಮ್ಮೇಳನದ ಬಗ್ಗೆ ಹೇಳಲೇಬೇಕು. ಸಮ್ಮೇಳನದ ಸಂಯೋಜಕರಾಗಿ ಸಮ್ಮೇಳನವು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ನಡೆದ ಸಮ್ಮೇಳನಗಳಿಗಿಂತ ಅತ್ಯದ್ಭುತವಾಗಿ ಯಶಸ್ವಿಗೊಳಿಸಲು ಶ್ರೀಧರ್ ವಹಿಸಿದ ಶ್ರಮ ಅಭಿನಂದನೀಯ. ಅವರ ಸಂಘಟನಾ ಚತುರತೆ ಇಲ್ಲಿ ಫಲ ನೀಡಿತು. ಅವರು ಹಾಸನದ ಜನಮಿತ್ರ ಮತ್ತು ಜನಹಿತ ಪತ್ರಿಕೆಗಳಲ್ಲಿ, ವಿಕ್ರಮ ವಾರಪತ್ರಿಕೆಯಲ್ಲಿ ನಿರಂತರವಾಗಿ ವೇದದ ವಿಚಾರಗಳ ಬಗ್ಗೆ ಬರೆಯುತ್ತಿದ್ದ ಲೇಖನಗಳ ಸಂಗ್ರಹ ಜೀವನವೇದ ನಿಜಕ್ಕೂ ಒಂದು ಅದ್ಭುತ ಕೃತಿಯಾಗಿದ್ದು ಸಮ್ಮೇಳನದಲ್ಲಿ ಬಿಡುಗಡೆಯಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವೂ ಆಗಿ ಜನಪ್ರಿಯವೆನಿಸಿರುವುದು ಹೆಮ್ಮೆಯ ಸಂಗತಿ.
     ಬರೆಯುತ್ತಾ ಹೋದರೆ ಮುಗಿಯಲಾರದು. ಸಂಕ್ಷಿಪ್ತವಾಗಿ ನನ್ನ ಮತ್ತು ಶ್ರೀಧರರ ದಶಕಗಳ ಒಡನಾಟದ ಕೆಲವು ಸಂದರ್ಭಗಳನ್ನು ಸ್ಮರಿಸಿಕೊಂಡಿರುವೆ. ಶ್ರೀಧರರಿಂದ ಇನ್ನೂ ಹೆಚ್ಚು ರಭಸದಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇನೆ. ಅವರಿಗೆ ಇನ್ನೂ ಹೆಚ್ಚಿನ ಧನ್ಯತೆ ಮತ್ತು ಮಾನ್ಯತೆ ಎರಡೂ ಸಿಗಲಿ ಎಂದು ಪುನಃ ಹಾರೈಸುತ್ತಾ, ಅವರಿಗೆ ನನ್ನ ಕ್ರಿಯಾತ್ಮಕ ಸಹಕಾರ ಸದಾ ಇರುತ್ತದೆಂದು ತಿಳಿಸುತ್ತಾ ಈ ಕೆಲವು ಸಾಲುಗಳನ್ನು ಅವರ ಅರವತ್ತರ ಸಂದರ್ಭಕ್ಕೆ ಉಡುಗೊರೆಯಾಗಿ ನೀಡಿರುವೆ.

ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವಾ
-ಕ.ವೆಂ.ನಾಗರಾಜ್.


No comments:

Post a Comment