Pages

Sunday, August 8, 2010

ಯೋಚಿಸಲೊ೦ದಿಷ್ಟು..... ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.
೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು.

೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!

೪.  ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ ಓಟವನ್ನು ಅಥವಾ ಕ್ರಿಯಾಶೀಲತೆಯನ್ನು ಕಾಪಿಟ್ಟುಕೊಳ್ಳ ಬೇಕು. ನಾವು ಯಾವಾಗ ಮತ್ತು ಎಲ್ಲಿ೦ದ ಓಟವನ್ನು ಆರ೦ಭಿಸಿದೆವು ಎನ್ನುವುದಕ್ಕಿ೦ತ.ನಾವು ಗುರಿಯನ್ನು ತಲುಪಿದ್ದೇವೆಯೇ ಎ೦ಬುದೇ ಅತ್ಯ೦ತ ಮುಖ್ಯವಾಗುತ್ತದೆ!

೫. ಗುರಿಯ ತಾಣವು ನಮ್ಮನ್ನು ಒದೆಯುವ ಮೊದಲೇ ನಾವೇ ಗುರಿಯನ್ನು ಮುಟ್ಟಬೇಕು.

೬. “ ನಾನಿನ್ನೂ ವಿಧ್ಯಾರ್ಥಿ “ ಎ೦ಬ ವಾಕ್ಯವು ನಮ್ಮ ಸೋಲಿಗೆ ಸಬೂಬು ಆಗಿರಬಾರದು! ಅದು ನಮ್ಮ ನಿಶಕ್ತತೆ ಅಥವಾ ಅಕ್ರಿಯಾಶೀಲತೆಯನ್ನು ತೋರಿಸುತ್ತದೆ!

೭. ನ೦ಬಿಕೆ ಎಲ್ಲವನ್ನೂ ಸಾಧ್ಯವಾಗಿಸಿದರೆ, ಇಚ್ಛೆ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಿಸುತ್ತದೆ.

೮. ನಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಯ ಜೀವನದಲ್ಲಿ ನಾವು ಪ್ರಮುಖರಲ್ಲ ಎ೦ಬ ವಿಚಾರವನ್ನು ಯಾವಾಗ ಪರಿಸ್ಥಿತಿಗಳು ನಮ್ಮನ್ನು ಒಪ್ಪಿಕೊಳ್ಳುವ೦ತೆ ಮಾಡುತ್ತವೋ ಆಗಿನಿ೦ದ ಮಾನಸಿಕ ಅಸ೦ತೋಷ ಮನೆ ಮಾಡಲು ಆರ೦ಭಿಸುತ್ತದೆ!

೯. ನಮ್ಮ ಪ್ರೀತಿಪಾತ್ರರಿಗಾಗಿ ಸಣ್ಣ-ಸಣ್ಣ ಉಪಕಾರಗಳನ್ನು ಮಾಡಲು ಹಿ೦ಜರಿಯುವುದು ಬೇಡ. ನಮ್ಮ ಎಣಿಕೆಯಲ್ಲಿ ಸಣ್ಣ ಉಪಕಾರ ಎನ್ನುವುದು ಅವರ ಜೀವನದಲ್ಲಿ ಬಹು ದೊಡ್ಡದ್ದಾಗಿರಬಹುದು ಅಥವಾ ನಾವು ಮಾಡಿದ ಆ ಸಣ್ಣ ಉಪಕಾರದಿ೦ದಲೇ ಅವರ ಜೀವನ ನೆಲೆ ನಿಲ್ಲಬಹುದು!

೧೦. ಯಾರೂ ಸುಖವನ್ನು ಬೆನ್ನಿಗಿಟ್ಟುಕೊ೦ಡೇ ಜನಿಸಿರುವುದಿಲ್ಲ. ಆದರೆ ಎಲ್ಲರೂ ಸುಖವನ್ನು ಪಡೆಯುವ ಸಾಮರ್ಥ್ಯವನ್ನು ಪಡೆದೇ ಜನಿಸಿರುತ್ತಾರೆ!

೧೧. ಬದುಕು ಮತ್ತು ನಗು ಇವೆರಡೂ ಆ ದೇವರ ಸು೦ದರ ಸೃಷ್ಟಿಗಳು! ಬದುಕಿನಲ್ಲಿ ನಗುವನ್ನು ಅಳವಡಿಸಿಕೊಳ್ಳುವುದರಿ೦ದ ಸಕಾರಾತ್ಮಕವಾಗಿ ಕ್ರಿಯಾಶೀಲರಾಗಬಹುದು.

೧೨.ಪ್ರತಿಯೊ೦ದು ಸಮಸ್ಯೆಯೂ ಒ೦ದು ದೊಡ್ಡ ಬಾಗಿಲಿನ ಹಾಗೆ!ಅದಕ್ಕೆ ಸರಿಯಾಗುವ ಸಣ್ಣ ಬೀಗದ ಕೀ (ಪರಿಹಾರ) ಇದ್ದೇ ಇರುತ್ತದೆ!ಸಮಸ್ಯೆಯೆ೦ಬ ಬೀಗವನ್ನು ತೆರೆಯಲು ಬಳಸಬಹುದಾದ ಬೀಗದ ಕೈ ಯನ್ನು ನಾವೇ ಹುಡುಕಿಕೊಳ್ಳಬೇಕು, ತನ್ಮೂಲಕ ಜೀವನದಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು!

೧೩. ನಮ್ಮ ಮೌನವು ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು.ಆದರೆ ತೆರೆದ ಹೃದಯದಿ೦ದ ಸಮಸ್ಯೆಗಳ ಬಗ್ಗೆ ಚರ್ಚಿಸು ವುದರಿ೦ದ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು!

೧೪. ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ.ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾ ದರೂ ತಾಕುತ್ತವೆ ಹಾಗೂ ಅವರ ಮನ ಪರಿವರ್ತನೆಗೆ ಕಾರಣವಾಗುತ್ತವೆ!ಮೃದು ಹೃದಯ ಹಾಗೂ ಮೃದು ಮಾತುಗಳು ನಮ್ಮ ವ್ಯಕ್ತಿತ್ವಕ್ಕೊ೦ದು ಭೂಷಣವೇ ಸರಿ!

೧೫.ಸ೦ಬ೦ಧಗಳಲ್ಲಿ ಪ್ರೀತಿಯ ಬಳ್ಳಿಯನ್ನು ಬೆಳೆಸಬೇಕಾದರೆ ಅದಕ್ಕೆ ಬೇಕಾದ ಸಾಮಗ್ರಿಗಳು ಸಹಕಾರವೆ೦ಬ ಮಣ್ಣು, ಸಹಬಾಳ್ವೆ ಎ೦ಬ ಗೊಬ್ಬರ ಹಾಗೂ ಪರಸ್ಪರ ವಿಶ್ವಾಸವೆ೦ಬ ನೀರು!

Saturday, August 7, 2010

ಅವಧೂತ-೫

"ಉಪೇಂದ್ರ, ನೀನು ನಿಮ್ಮ ಅತ್ತಿಗೆಯನ್ನು ಕರೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಯಾಕೆ ೧೫ ದಿನ ಇಟ್ಟುಕೊಳ್ಳಬಾರದು? "- ಅವಧೂತರ ಬಾಯಲ್ಲಿ ಬಂದದ್ದು ಉಪೇಂದ್ರರಿಗೆ ವೇದವಾಕ್ಯವೇ ಸರಿ. ಮರು ಮಾತಾಡದೆ " ಸರಿ ಗುರುಗಳೇ ಈಗಿಂದೀಗಲೇ ಚಿಕ್ಕಮಗಳೂರಿಗೆ ಹೋಗಿ ಅತ್ತಿಗೆಯನ್ನು ಕರೆದುಕೊಂಡು ಹೋಗುವೆ."-ಎಂದವರೇ ಅತ್ತಿಗೆಯನ್ನು ಕರೆದುಕೊಮ್ಡು ಹಾಸನಕ್ಕೆ ಬಂದು ಬಿಟ್ಟರು. ಯಾರೂ ಏಕೆ? ಏನು? ಎಂದು ಕೇಳಲಿಲ್ಲ. ಹದಿನೈದು ದಿನಗಳು ಕಳೆದಿದೆ. ಅತ್ತಿಗೆಯೊಡನೆ ಅವರ ಮನೆಯ ಕ್ಷೇಮ - ಸಮಾಚಾರಗಳನ್ನು ಸಹಜವಾಗಿ ಉಪೇಂದ್ರರು ಪ್ರಸ್ತಾಪಿಸುತ್ತಾರೆ.
ಅತ್ತಿಗೆ ಹೇಳುತ್ತಾರೆ" ನೀನು ನನ್ನನ್ನು ಕರೆದುಕೊಂಡು ಬರದೆ ಇದ್ದಿದ್ದರೆ ನನ್ನ ಜೀವ ಹೋಗಿ ಹದಿನೈದು ದಿನಗಳಾಗಿರುತ್ತಿತ್ತು! " --ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಗುರುಗಳು ಜೀವ ಉಳಿಸಿದ್ದರು!!

ಅವಧೂತ-೪

ನನ್ನ ಮಿತ್ರ ಸೇತೂರಾಮ್ ಅರಸೀಕೆರೆಯ ಪತ್ರಕರ್ತ.ಈಗ್ಗೆ ಸುಮಾರು ಹತ್ತು ವರ್ಷದ ಹಿಂದಿನ ಮಾತಿರಬಹುದು. ಸೇತೂರಾಮ್ ಮದುವೆಯಾದನಂತರ ಅವರ ಪತ್ನಿಗೆ ಒಂದೆರಡು ಭಾರಿ ಅಬಾರ್ಶನ್ ಆಗಿ ಇನ್ನು ಮುಂದೆ ಮಕ್ಕಳು ಬದುಕುತ್ತವೆಯೇ! ಎಂಬ ಆತಂಕದಲ್ಲಿದ್ದಾಗಲೇ ಮತ್ತೊಮ್ಮೆ ಆಕೆ ಗರ್ಭಿಣಿ. ಸರಿ ವೈದ್ಯರ ಮೇಲ್ವಿಚಾರಣೆಯಲ್ಲಿ ದಿನಗಳು ಕಳೆದಿವೆ. ಸೇತೂರಾಮ್ ಗೆ ಒಮ್ಮೆ ಅವಧೂತರನ್ನು ನೋಡುವ ಸಂದರ್ಭ ಒದಗಿದೆ." ಸೇತೂ, ಬರುವ ಫೆಬ್ರವರಿ ೨೦ ರೊಳಗೆ ನಿನ್ನ ಪತ್ನಿ ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ.ಡಾ|| ಆಪರೇಶನ್ ಆಗಬೇಕೆನ್ನುತ್ತಾರೆ, ಆದರೆ ಆಪರೇಶನ್ ಏನೂ ಬೇಡ, ಹೆರಿಗೆ ಸುಲಭವಾಗಿ ಆಗುತ್ತೆ!!" - ಅವಧೂತರು ಸೇತೂರಾಮರಿಗೆ ದೃಢವಾಗಿ ಹೇಳಿದ್ದರು "ಅರೇ ಡಾಕ್ಟರ್ ಮಾರ್ಚ್ ೨೫ಕ್ಕೆ ಡೇಟ್ ಕೊಟ್ಟಿದ್ದಾರಲ್ಲಾ! ಸರಿ ದೇವರು ಮಾಡಿಸಿದಂತಾಗಲಿ!" ಸೇತೂ ಅವಧೂತರ ದರ್ಶನ ಪಡೆದು ಮನೆಗೆ ಮರಳಿದ್ದರು. ವೈದ್ಯರ ಪ್ರಕಾರ ಇನ್ನೂ ಐದು ತಿಂಗಳು ಕಾಲಾವಕಾಶವಿತ್ತು.ಪತ್ನಿಯನ್ನು ಬೆಂಗಳೂರಿನಲ್ಲಿ ತೌರುಮನೆಯಲ್ಲಿ ಬಿಟ್ಟು ಸೇತೂ ಅರಸೀಕೆರೆಯಲ್ಲಿಯೇ ಇದ್ದರು.ಪತ್ರಕರ್ತನಾಗಿ ಓಡಾಟದಿಂದ ಅವರಿಗೆ ದಿನಗಳುರಿಳಿದ್ದೇ ಅರಿವಿಲ್ಲ. ಅಂದು ಕಾರ್ಯನಿಮಿತ್ತ ಬಾಣಾವರದಲ್ಲಿದ್ದರು. ರಾತ್ರಿ ೧೨ ಗಂಟೆಗೆ ಇವರಿಗೆ ಫೋನ್ ಬರುತ್ತೆ. ಹೆರಿಗೆ ನೋವು ಶುರುವಾಗಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ-ಎಂಬ ಸುದ್ಧಿತಿಳಿದೊಡನೆ ಬೆಂಗಳೂರು ಬಸ್ ಹತ್ತುತ್ತಾರೆ. ಆಸ್ಪತ್ರೆ ತಲುಪಿದಾಗ ಪತ್ನಿಯನ್ನು ಆಪರೇಶನ್ ಗಾಗಿ ಸಿದ್ಧಗೊಳಿಸುತ್ತಿದ್ದಾರೆ! ಅವಧೂತರಿಂದ ಅಂದು ಪಡೆದಿದ್ದ ಭಸ್ಮವನ್ನು ಪತ್ನಿಯ ಹೊಟ್ಟೆಗೆ ಸವರಲು ತಿಳಿಸುತ್ತಾರೆ. ಸ್ವಲ್ಪ ಸಮಯದಲ್ಲೇ ಪತ್ನಿಗೆ ಸುಖವಾಗಿ ಹೆರಿಗೆ ಆಗುತ್ತೆ, ಆಪರೇಶನ್ ಇಲ್ಲದೆ!!ಅವಧೂತರು ಹೇಳಿದ್ದ ದಿನಕ್ಕೆ!!

ವೇದೋಕ್ತ ಜೀವನ ಪಥ

ಜೀವನ ಬುನಾದಿ -12

ಸತ್ಯದಲ್ಲಿ ಶ್ರದ್ಧೆಯಿಡಬೇಕು. ಆದರೆ ಜ್ಞಾನವಿಲ್ಲದೆ ಸತ್ಯಾಸತ್ಯನಿರ್ಣಯ ಮಾಡುವುದಾದರೂ ಹೇಗೆ? ಅದೇ ಕಾರಣದಿಂದ ಪರಮಾತ್ಮನು ಪ್ರತಿಯೊಬ್ಬ ಜೀವನಿಗೂ ಭರವಸೆ ನೀಡಿದ್ದಾನೆ:

ಬ್ರಹ್ಮಣಾ ತೇ ಬ್ರಹ್ಮಯುಜಾ ಯುನಜ್ಮಿ ಹರೀ ಸಖಾಯಾ ಸಧಮಾದ ಆಶೂ|
ಸ್ಥಿರಂ ಕಥಂ ಸುಖಮಿಂದ್ರಾಧಿತಿಷ್ಠನ್ ಪ್ರಜಾನನ್
ವಿದ್ವಾನ್ ಉಪ ಯಾಹಿ ಸೋಮಮ್|| (ಋಕ್.3.35.4)

[ಇಂದ್ರ] ಓ ಇಂದ್ರಿಯವಾನ್ ಜೀವ! [ತೇ] ನಿನ್ನನ್ನು [ಬ್ರಹ್ಮಯುಜಾ ಬ್ರಹ್ಮಣಾ] ಪರಬ್ರಹ್ಮಯುಕ್ತವಾದ ನಿರ್ಮಲಜ್ಞಾನದೊಂದಿಗೆ [ಯುನಜ್ಮಿ] ಸಂಬದ್ಧನಾಗಿ ಮಾಡುತ್ತೇನೆ. [ಸಖಾಯಾ] ನಿನಗೆ ಮೈತ್ರಿ ತೋರುವ [ಆಶೂ] ವೇಗಯುಕ್ತವಾದ [ಹರೀ] ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು [ಸಧಮಾದೇ ಯುನಜ್ಮಿ] ಅಕ್ಕಪಕ್ಕದಲ್ಲಿ ನಿಯೋಜಿಸುತ್ತೇನೆ. [ಸ್ಥಿರಂ ಸುಖಂ ರಥಮ್] ಧೃಢವೂ, ಸುಖಕರವೂ ಆದ ದೇಹರಥವನ್ನು [ಅಧಿತಿಷ್ಟನ್] ಏರಿ [ವಿದ್ವಾನ್] ವಿದ್ವಾಂಸನಾಗಿ [ಪ್ರಜಾನನ್] ಪ್ರಜ್ಞಾನವನ್ನು ಗಳಿಸಿ [ಸೋಮಂ ಉಪಯಾಹಿ] ಶಾಂತಿಸಾಗರನಾದ ಪ್ರಭುವಿನ ಬಳಿ ಸಾರು.

Friday, August 6, 2010

ಗುರು ಚಿಂತನ




ನಿನ್ನೆ ಗುರುವಾರ ಹಾಸನಜಿಲ್ಲೆಯ ಚನ್ನರಾಯಪಟ್ಟಣದಲ್ಲಿ "ಗುರು ಚಿಂತನ " ಎಂಬ ಒಂದು ವಿನೂತನ ಕಾರ್ಯಕ್ರಮ. ಬೆಂಗಳೂರಿನ ಸಪ್ತಮಿ ಟ್ರಸ್ಟ್ ನವರು ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವೆಡೆ ನಡೆಸುವ ಈ ಕಾರ್ಯಕ್ರಮದಲ್ಲಿ ಒಂದೆರಡು ಭಾರಿ ನಾನು ಭಾಗವಹಿಸಿರುವೆ. ಇಂದಿನ ಶಾಲಾ ಶಿಕ್ಷಕರ ಚೈತನ್ಯವನ್ನು ಜಾಗೃತಮಾಡುವ ಈ ಕಾರ್ಯಕ್ರಮಗಳು ಶಿಕ್ಷಕ ಸಮುದಾಯದ ಮೆಚ್ಚುಗೆ ಪಡೆದಿವೆ. ಶಿಕ್ಷಕರುಗಳಿಗಾಗಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಮಾತಾಜಿ ವಿವೇಕಮಯಿಯವರು ಆಡಿರುವ ಮಾತುಗಳು ನಮಗೂ ಪ್ರೇರಣಾದಾಯಕವೇ ಆಗಿವೆ.




Thursday, August 5, 2010

ಮಕ್ಕಳಿಗೆ ಕಿವಿಮಾತು

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ
ಸಂಬಂಧ ಉಳಿಸುವ ಕಳಕಳಿಯ ಮಾತು

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು

ದಾರಿಯದು ಸರಿಯಿರಲಿ ಅನೃತವನಾಡದಿರಿ
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ

ಗೌರವಿಸಿ ಹಿರಿಯರ ಕಟುಮಾತನಾಡದಿರಿ
ಅಸಹಾಯಕರ ಶಾಪ ತಂದೀತು ಪರಿತಾಪ

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
ಹೃದಯಗಳ ಜೋಡಿಸಿರಿ ಆಗುವುದು ಮನೆಯು

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ?
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ