Pages

Monday, November 29, 2010

ಮನವಿ:

ವೇದಸುಧೆಯ ಮಾರ್ಗದರ್ಶಕರಾದ ಶ್ರೀ ವಿ.ಆರ್.ಭಟ್ ಇವರ ನಿಮ್ಮೊಡನೆ ವಿ.ಆರ್.ಭಟ್ ಬ್ಲಾಗಿಗೆ ಜನ್ಮದಿನನದ ಸಂಬ್ರಮ.ಇದೇ ಡಿಸೆಂಬರ್ ೩ನೇ ದಿನಾಂಕಕ್ಕೆ ಒಂದು ವರ್ಷವನ್ನು ಪೂರೈಸುತ್ತಾ ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ನಿಮ್ಮೊಡನೆ ವಿ.ಆರ್.ಭಟ್ ಬ್ಲಾಗಿಗೆ ವೇದಸುಧೆಯ ಪರವಾಗಿ ಶುಭಾಶಯಗಳನ್ನು ಕೋರುತ್ತೇವೆ..
-------------------------------------------------------------------------
೨೦೧೧ ಫೆಬ್ರವರಿ ಆರರಂದು ವೇದಸುಧೆಯು ಎರಡನೆಯ ವರ್ಷಕ್ಕೆ ಪದಾರ್ಪಣೆ ಮಾಡಲಿದೆ.ಈ ಸಂದರ್ಭದಲ್ಲಿ ಹಾಸನದಲ್ಲಿ ನಡೆಯಲಿರು ವಾರ್ಷಿಕೋತ್ಸವದಲ್ಲಿ ನಡೆಯಲಿರುವ ಕೆಲವು ಕಾರ್ಯಕ್ರಮಗಳು ಹೀಗಿವೆ.
೧. ವಿಚಾರಸಂಕಿರಣ: ಆರೋಗ್ಯಕರ ಬದುಕು ಮತ್ತು ವೇದ 
೨. ನಿತ್ಯ ಬದುಕಿಗೆ ವೇದಮಂತ್ರಗಳ ಪ್ರಭಾವ-ಶ್ರೀ ಸುಧಾಕರ ಶರ್ಮರ ಸಿ.ಡಿ ಬಿಡುಗಡೆ
೩. ವೇದಸುಧೆಯ ಮಾರ್ಗದರ್ಶಕರಾದ ಶ್ರೀ ಕವಿನಾಗರಾಜರ "ಮೂಢ ಉವಾಚ" ಪುಸ್ತಕ ಬಿಡುಗಡೆ
೪. ವೇದಸುಧೆಯ ಬಳಗದ ಶ್ರೀ ಕವಿ ಸುರೇಶ್ ಇವರ ಪುತ್ರಿ ಕು||  ಬಿ.ಎಸ್.ಆರ್ ಅಂಬಿಕಾ ಇವರಿಂದ ವೈಯಲಿನ್ ವಾದನ
೫. ವೇದಸುಧೆಯ ಅಭಿಮಾನಿ ಶ್ರೀ ಮತಿ ಸ್ವರ್ಣಾ ರಾಮಕೃಷ್ಣರ ಪುತ್ರಿ ಕು|| ಅಕ್ಷತಾ ಇವರಿಂದ ಭರತ ನಾಟ್ಯ.
೬. ಹಾಸನದ ಮನೆ ಮನೆ ಕವಿಗೋಷ್ಟಿ ಸದಸ್ಯರಿಂದ ಕವಿಗೋಷ್ಟಿ
ಹಾಸನದ ಕನ್ನಡಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಾಸನದ ಮನೆಮನೆ ಕವಿಗೋಷ್ಟಿಯ ಸಹಕಾರದೊಡನೆ ದಿನಾಂಕ ೬.೨.೨೦೧೧ ಭಾನುವಾರ ಬೆಳಗಿನ ೧೦ ಗಂಟೆಯಿಂದ ಸಂಜೆ ೫.೦೦ ರವರಗೆ ನಡೆಯುವ ವೇದಸುಧೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ವೇದಸುಧೆಯ ಎಲ್ಲಾ ಅಭಿಮಾನಿಗಳನ್ನೂ ಆದರದಿಂದ ಆಹ್ವಾನಿಸುತ್ತಿದ್ದೇವೆ. ವಿಳಾಸವನ್ನು ವೇದಸುಧೆಗೆ ಮೇಲ್ ಮಾಡಿದರೆ ಆಹ್ವಾನಪತ್ರವನ್ನು ಕಳಿಸಿಕೊಡಲು ಅನುಕೂಲವಾಗುವುದು.
-------------------------------------------------------------------
ಮುಖ್ಯವಾದ ಅಂಶವನ್ನು ಅರಿಕೆಮಾಡಿಕೊಳ್ಳಲೇ ಬೇಕು.ವೇದಸುಧೆಯು ಈಗ ಬಳದ ಸ್ವತ್ತು.ಆದರೆ ಉದ್ಧೇಶವಂತೂ ನಮ್ಮ ಬದುಕಿಗೆ ಬೆಳಕು ನೀಡುವ ವೇದದ ಬಗ್ಗೆ ಸರಳವಾಗಿ ತಿಳಿಸುವುದು.ಆದರೆ ಹಲವು ವೇಳೆ ನಮಗೆ ಯಾವುದೋ ಒಂದು ಘಟನೆ ಅನುಕರಣೀಯವಾಗಿ ಕಾಣುತ್ತದೆ. ವೇದಸುಧೆಯ ಮೆಲಿನ ಅಭಿಮಾನದಿಂದ ಅದನ್ನು ವೇದಸುಧೆಯಲ್ಲಿ ಹಾಕಿದರೆ ಚೆನ್ನಾಗಿರುತ್ತದೆಂಬ ವಿಚಾರವು ಮೂಡುತ್ತದೆ.ಆದರೆ ಪ್ರಕಟಿಸುವುದು ಸೂಕ್ತವೋ ಅಲ್ಲವೋ ಎಂಬ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ವೇದಸುಧೆಗೆ ದಯಮಾಡಿ ಮೇಲ್ ಮಾಡಿದರೆ ಉತ್ತಮ. ಬಳಗದ ಮೂರ್ನಾಲ್ಕು ಹಿರಿಯರೊಡನೆ ಸಮಾಲೋಚಿಸಿ ಪ್ರಕಟಿ ಬಹುದೆಂದಾದರೆ ಪ್ರಕಟಿಸಲಾಗುವುದು.ಪ್ರಕಟವಾಗದಿದ್ದರೆ ಅದು ಸೂಕ್ತವಲ್ಲವೆಂದು ತಿಳಿದುಕೊಳ್ಳಬಹುದಲ್ಲವೇ? ಇದರಿಂದ ಯಾರೂ ಬೇಸರಿಸಬಾರದು.ಹಿರಿಯರು ಹೀಗೊಂದುಮಾರ್ಗದರ್ಶನ ನೀಡಿದ್ದರಿಂದ ಮನವಿ ಮಾಡಲಾಗಿದೆ.
ನಮಸ್ಕಾರಗಳೊಡನೆ
-ಹರಿಹರಪುರಶ್ರೀಧರ್
ಸಂಪಾದಕ

ನಮ್ಮ ಆಚರಣೆಗಳು -4 ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -9


ಆ ಪರಮಾತ್ಮನು ಶುದ್ಧ, ಬುದ್ಧ, ಮುಕ್ತ ಸ್ವಭಾವನು. ಅವನೆಂದಿಗೂ ಅಶುದ್ಧನಾಗುವುದಿಲ್ಲ.
ಸಹಿ ಶುಚಿಃ ಶತಪತ್ರ ಸ ಶುಂಧ್ಯುಃ|| (ಋಕ್. ೭.೯೭.೭)
ಎಂದರೆ, [ಸ ಹಿ ಶುಚಿಃ] ಆ ಪ್ರಭುವೇ ನಿತ್ಯ ಶುದ್ಧನು. [ಶತಪತ್ರಃ] ನೂರಾರು ಬಗೆಯ ಪತನಗಳಿಂದ ದೂರವಿಟ್ಟು ರಕ್ಷಿಸುವವನು. [ಸ ಶುಂಧ್ಯುಃ] ಅವನೇ ಎಲ್ಲರನ್ನೂ ಪವಿತ್ರಗೊಳಿಸುವವನು - ಎಂದು ಋಗ್ವೇದವು ನಿರ್ದೇಶಿಸುತ್ತಲಿದೆ. ಆ ಪ್ರಭುವು ನಿತ್ಯಶುದ್ಧನೂ ಸದಾಜ್ಞಾನಿಯೂ ಆಗಿದ್ದಾನೆ. ಅವನೆಂದಿಗೂ ಭ್ರಾಂತನಾಗುವ ಪ್ರಶ್ನೆಯೇ ಇಲ್ಲ.


ಮೂರಾ ಅಮೂರ ನ ವಯಂ ಚಿಕಿತ್ವೋ ಮಹಿತ್ವಮಗ್ನೇ ತ್ವಮಂಗ ವಿತ್ಸೇ|| (ಋಕ್. ೧೦.೪.೪)


-ಎಂದರೆ [ಅಮೂರ] ಎಂದಿಗೂ ಮೋಹಕ್ಕೆ ಸಿಕ್ಕದಿರುವ [ಚಿಕಿತ್ವ] ನಿತ್ಯಜ್ಞಾನಿಯಾದ ಪ್ರಭುವೇ! [ಮೂರಾ ವಯಂ ನ] ಮೂಢರಾದ ನಮಗೆ ಏನೂ ತಿಳಿಯದು. [ಅಂಗ] ಪ್ರಿಯನೇ [ಮಹಿತ್ವಂ ತ್ವಂ ಏತ್ಸೇ] ಮಹತ್ವವನ್ನು ನೀನೇ ಬಲ್ಲೆ - ಎಂದು ಋಗ್ವೇದ ಹೇಳಿದೆ. ಅದೇ ರೀತಿ ಭಗವಂತನು ನಿತ್ಯಮುಕ್ತನು, ಅವನೆಂದಿಗೂ ಯಾವ ಬಂಧನಕ್ಕೂ ಸಿಕ್ಕನು. ನಾವು ಅಥರ್ವವೇದದಲ್ಲಿ


ಪ್ರಾಚೀದಿಗಗ್ನಿರಧಿಪತಿರಸಿತಃ|| (ಅಥರ್ವ. ೩.೨೭.೧) -


ಎಂದರೆ [ಪ್ರಾಚೀ ದಿಕ್] ಮುಂದುಗಡೆ [ಅಸಿತಃ] ಬಂಧನರಹಿತನಾದ, ನಿತ್ಯಮುಕ್ತನಾದ [ಅಗ್ನಿಃ ಅಧಿಪತಿಃ] ಜ್ಯೋತಿರ್ಮಯ ಪ್ರಭುವು ಅಧೀಶ್ವರನು - ಎಂಬ ಕಥನವಿದೆ.


     ಈರೀತಿ ವೇದೋಕ್ತ ಸಿದ್ಧಾಂತದಂತೆ ಪರಮಾತ್ಮನ ಗುಣಗಳು - ಸಚ್ಚಿದಾನಂದ; ಕರ್ಮಗಳು - ಸೃಷ್ಟಿ, ಸ್ಥಿತಿ, ಲಯ; ಸ್ವಭಾವ - ಶುದ್ಧತ್ವ, ಬುದ್ಧತ್ವ, ಮುಕ್ತತ್ವ. ಪರಮಾತ್ಮ ಸಾಕಾರ ವ್ಯಕ್ತಿಯಲ್ಲ, ನಿರಾಕಾರ ಚೇತನಶಕ್ತಿ. ಲಿಂಗ ಶರೀರದ ಲಕ್ಷಣ. ಪರಮಾತ್ಮನು ಅಶರೀರನಾದುದರಿಂದ, ಸ್ತ್ರೀ, ಪುರುಷ ಅಥವಾ ನಪುಂಸಕ ಲಿಂಗಗಳನ್ನು ಹಚ್ಚಲು ಸಾಧ್ಯವಿಲ್ಲ. ವೇದಗಳು ಈಶ್ವರೀಯವಾದರೂ, ನಮಗೆ ಮಾನವೀಯ ವಾಣಿಯಲ್ಲಿಯೇ ಬೋಧಿಸಬೇಕಾಗಿದೆ. ಅದೇ ಕಾರಣದಿಂದ ವೇದಗಳು ಪರಮಾತ್ಮನನ್ನು ಮೂರು ಲಿಂಗಗಳಲ್ಲಿಯೂ ನಿರ್ದೇಶಿಸುತ್ತವೆ.


ಸ ನೋ ಬಂಧುರ್ಜನಿತಾ ಸ ವಿಧಾತಾ|| (ಯಜು. ೩೨.೧೦)


-[ಸಃ] ಅವನೇ ನಿಯಾಮಕನು - ಎಂದು ಪುಲ್ಲಿಂಗದಲ್ಲಿ ಭಗವಂತನನ್ನು ನಿರ್ದೇಶಿಸಿದೆ.


ಸಾ ವಿಶ್ವಾಯುಃ ಸಾ ವಿಶ್ವಕರ್ಮಾ ಸಾ ವಿಶ್ವಧಾಯಾಃ|| (ಯಜು. ೧.೪)


-[ಸಾ] ಅವಳು [ವಿಶ್ವಾಯುಃ] ವಿಶ್ವದ ಪ್ರಾಣಸ್ವರೂಪಳು [ಸಾ ವಿಶ್ವಧಾಯಾಃ] ಅವಳು ವಿಶ್ವಾಧಾರಳು. ಇಲ್ಲಿ ಪರಮಾತ್ಮನನ್ನು ಸ್ತ್ರೀಲಿಂಗದಲ್ಲಿ ನಿರ್ದೇಶಿಸಲಾಗಿದೆ.


ತದೇವ ಶುಕ್ರಂ ತದ್ ಬ್ರಹ್ಮ|| (ಯಜು. ೩೨.೧)


[ತತ್ ಏವ] ಅದೇ [ಶುಕ್ರಂ] ತೇಜಸ್ವಿಯು [ತತ್] ಅದು [ಬ್ರಹ್ಮ] ಮಹತ್ತಾದುದು. ಇಲ್ಲಿ ನಿರ್ದೇಶ ನಪುಂಸಕ ಲಿಂಗದಲ್ಲಿರುವುದನ್ನು ಕಾಣುತ್ತೇವೆ. ಇದು ಕೇವಲ ಸೌಕರ್ಯದ ಪ್ರಯೋಗ. ವಸ್ತುತಃ ಪರಮಾತ್ಮನು ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ. ಮಾನವೀಯ ವಾಣಿಯಲ್ಲಿ ಹೇಳಬೇಕಾದರೆ ಯಾವುದಾದರೂ ಒಂದು ಲಿಂಗದಲ್ಲಿ ಹೇಳಲೇಬೇಕಾಗುವುದಲ್ಲವೇ?


     ಪರಮ ವೈಜ್ಞಾನಿಕವಾಗಿ ಹೇತುಗರ್ಭಿತವಾಗಿ ವೇದಗಳು ವಿಶ್ವಚೇತನವನ್ನು ವರ್ಣಿಸಿರುವುದು ಹೀಗೆ. ಇದಕ್ಕಿಂತ ಸ್ಫುಟವಾಗಿ ಭಗವಂತನನ್ನು ಯಾವ ಶಾಸ್ತ್ರವೂ ವರ್ಣಿಸುವುದಿಲ್ಲ. ಈ ಶಕ್ತಿಸ್ವರೂಪ ಪ್ರಭುವನ್ನು ಯಾವ ನಾಸ್ತಿಕನೂ ತಿರಸ್ಕರಿಸಲಾರನು. ಯಾವ ವೈಜ್ಞಾನಿಕನೂ ಅಲ್ಲ ಎನ್ನಲಾರನು. ಇಹದಲ್ಲಿ ಸುಖ-ಶಾಂತಿಗಳೂ, ಪರದಲ್ಲಿ ಆನಂದವೂ ಬೇಕಾದಲ್ಲಿ ಜೀವಾತ್ಮನು ಈ ಪರಮಾತ್ಮನ ಉಪಾಸನೆಯನ್ನೇ ಮಾಡಬೇಕು. ಯಾವ ಬಾಹ್ಯಪೂಜೆಯೂ ಪ್ರಭೂಪಾಸನೆಯಾಗಲಾರದು. ಮುಂದೆ ಉಪಾಸನಾ ವಿಷಯವನ್ನು ಚರ್ಚಿಸೋಣ.

Friday, November 26, 2010

ವಿದ್ವಾನ್ ಶ್ರೀ ಪ್ರವೀಣ್ ಗೋಡ್ಕಿಂಡಿ ಮತ್ತು ವೃಂದದವರು ನಡೆಸಿಕೊಟ್ಟ ವಾದ್ಯವೈವಿಧ್ಯ

ಹಾಸನದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಪ್ರವೀಣ್ ಗೋಡ್ಕಿಂಡಿ ಮತ್ತು ವೃಂದದವರು ನಡೆಸಿಕೊಟ್ಟ ವಾದ್ಯವೈವಿಧ್ಯ ಸಂಗೀತ ಕಛೇರಿಯು ಶ್ರೋತೃಗಳನ್ನು ಮೂರು ಗಂಟೆಗಳ ಕಾಲ ಹಿಡಿದಿಟ್ಟಿತ್ತು. ಡೌನ್ ಲೋಡ್ ಮಾಡಿಕೊಂಡು ಆಗಾಗ ಕೇಳಬಹುದಾದ ಈ ಧ್ವನಿಸುರುಳಿಯಲ್ಲಿ ಕೆಲವೆಡೆ ಒಂದೆರಡು ನಿಮಿಷಗಳ ಗ್ಯಾಪ್ ಇದೆ. ಎಡಿಟ್ ಮಾಡದೆ ಹಾಕಿರುವ ಈ ಧ್ವನಿಸುರುಳಿಯು ವೇದಸುಧೆಯ ಅಭಿಮಾನಿಗಳಿಗೆ ಮುದವ ನೀಡುತ್ತದೆಂದು ಆಶಿಸುವೆ.


[ಗೀತಗಂಗಾ ಪುಟದಲ್ಲಿ ಸೇರಿಸಲಾಗಿದೆ]

ಯೋಚಿಸಲೊ೦ದಿಷ್ಟು... ೧೯

೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ, ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!


೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ ಹಾಗೂ ತುಟಿಯಲ್ಲಿ ನಲಿದಾಡುವ ದೇವರು!

೩. ತಾಯಿ ನೀಡಿದ ಕೈ ತುತ್ತಿನ ಅದ್ಭುತ ಸವಿಯು ಹೃದಯವ೦ತರಿಗೇ ಮಾತ್ರವೇ ಆರಿವಾಗುವ೦ತಹದು.

೪. ಮಕ್ಕಳನ್ನು ಹೆತ್ತವರು ನಲಿಯುವುದೂ ಉ೦ಟು! ಅಳುವುದೂ ಉ೦ಟು!

೫. ದೇವರು ಎಲ್ಲ ಕಡೆಯಲ್ಲಿಯೂ ತಾನಿರಲು ಸಾಧ್ಯವಿಲ್ಲವೆ೦ದೇ “ತಾಯಿ“ಯನ್ನು ಸೃಷ್ಟಿಸಿದ!

೬. ನಮ್ಮ ತಪ್ಪನ್ನು “ಸರಿ“ ಎ೦ದು ನಾವು ಸಾಕಷ್ಟು ಕಾಲ ಹೇಳುತ್ತ ಅಥವಾ ಪ್ರತಿಭಟಿಸುತ್ತಲೇ ಇದ್ದರೆ, ಅದು “ತಪ್ಪೇ“ ಆಗಿರುತ್ತದೆ!

೭. ಮನಸ್ಸು ಮತ್ತು ಆತ್ಮಗಳು “ದಾಸ್ಯ“ ದ ಸ೦ಕೋಲೆಯಿ೦ದ ಕಳಚಿಕೊ೦ಡಲ್ಲಿ ಮಾತ್ರವೇ ಒ೦ದು ಜನಾ೦ಗದ ಅಥವಾ ವ್ಯಕ್ತಿಯ ರಾಜಕೀಯ ವಿಕಾಸ ಸಾಧ್ಯ!

೮. ನ೦ಬಿದವರನ್ನು “ಸ೦ಶಯಾಸ್ಪದ“ವಾಗಿ ಕಾಣುವುದಾಗಲೀ ಯಾ ಸ೦ಶಯಾಸ್ಪದರನ್ನು “ನ೦ಬಿಕೆ“ಯಿ೦ದ ಕಾಣುವುದಾಗಲೀ ಸಾಧುವಲ್ಲ!

೯. ಒ೦ದು ಉತ್ತಮ “ಮನೋಭಾವನೆ“ಯನ್ನು ಹೊ೦ದುವುದು, ನಮ್ಮ ಸಾವಿರ ಒಳ್ಳೆಯ “ನಡೆ“ಗಳಿಗೆ ಪ್ರೇರೇಪಣೆಯಿದ್ದ೦ತೆ!

೧೦. ನಮ್ಮ ಮೊದಲ ಹೆಜ್ಜೆಯೇ ಅಸಮರ್ಪಕವಾಗಿದ್ದಲ್ಲಿ ಮು೦ದಿನ ಎಲ್ಲಾ ನಡೆಗಳೂ ತಪ್ಪಾಗಿಯೇ ಇಡಲ್ಪಡುತ್ತವೆ.

೧೧. ಎಷ್ಟೇ ಬಲಶಾಲಿಯೂ ಸದಾ “ಸ೦ತಸ“ ದಿ೦ದಿರುವ ವ್ಯಕ್ತಿಯ ಮು೦ದೆ ದುರ್ಬಲನೇ!

೧೨. ಅಪಾತ್ರರಿಗೆ ದಾನ ಸಲ್ಲದು!

೧೩. ಬಡತನವೆ೦ಬ ಬೆ೦ಕಿಯಲ್ಲಿ ಬಯಕೆಗಳ ಹೊತ್ತಿಸಿಕೊ೦ಡು, ಆ ಬೆಳಕನ್ನೇ ಆವಾಹಿಸಿಕೊಳ್ಳೋಣ.ಬಡತನದ ನೋವನ್ನು ಆ ಬೆಳಕು ಮರೆಯಾಗಿಸುತ್ತದೆ.

೧೪. ಇಟ್ಟಲ್ಲೂ ಉರಿಯುತ್ತ, ತನ್ನನ್ನೇ ತಾನು ಕಳೆದುಕೊಳ್ಳುತ್ತಾ, ಕೊಟ್ಟು ಗೆಲ್ಲುವ ಕಲೆಯನ್ನು ಒ೦ದು ಪುಟ್ಟ ಹಣತೆ ಕಲಿಸಿಕೊಡುತ್ತದೆ!

೧೫. ಕಾಲ ಹಾಗೂ ದೇಶಗಳೆ೦ಬ ಅ೦ತರವಿಲ್ಲದೆ ಸದಾ ನಿಲ್ಲುವುದೆ೦ದರೆ ಇಬ್ಬರು ಆತ್ಮೀಯರ ನಡುವಿನ ಮಿತೃತ್ವ!