Pages

Tuesday, May 24, 2011

ಬರಹ ಸಾರ್ಥಕವಾಯ್ತು.

 ತನ್ನ ಓದುಗರಲ್ಲಿ ನಿರ್ಭೀತ ಸತ್ಯ ಪಥದಲ್ಲಿ ಸಾಗುವ ಕೆಲವು ವಿಚಾರಗಳ ಲೇಖನಗಳನ್ನು ವೇದಸುಧೆಯು ಪ್ರಕಟಿಸುತ್ತಿರುವುದು ನಿಮಗೆಲ್ಲಾ ತಿಳಿದಿದೆ. ಒಂದು ಬರಹದಿಂದ ಒಬ್ಬ ಓದುಗರ ಮೇಲೆ ಸತ್ಪರಿಣಾಮವಾದರೂ ಆ ಬರಹ ಸಾರ್ಥಕವಾದಂತಯೇ.
ನನ್ನದೇ ಕವನದ ಒಂದು ನುಡಿ ನೆನಪಾಯ್ತು.

ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ 
ನಾನೆ ಧನ್ಯನು
ನನ್ನ ಕವನ ಧನ್ಯವು||
ಮಿತ್ರರಾದ ಶ್ರೀ ರಂಗನಾಥರ ಪತ್ರವು ಇಲ್ಲಿದೆ, ಅದನ್ನು ಓದಿದ ನನ್ನ ಅನಿಸಿಕೆಯನ್ನು ಹೀಗೆ ವ್ಯಕ್ತ ಪಡಿಸಿದೆ ಅಷ್ಟೆ.ಆದರೆ ನೆಮ್ಮದಿಯ ಬದುಕಿಗೆ ನೆರವಾಗಬಲ್ಲ  ಶ್ರೀ ಸುಧಾಕರ ಶರ್ಮರಂತಹ, ಚತುರ್ವೇದಿಗಳಂತಹ ಪಂಡಿತರ ಹಲವು ವಿಚಾರಗಳು ಪ್ರಕಟವಾಗುತ್ತಲೇ ಇವೆ. ಅವನ್ನು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಲೂ ಇದ್ದಾರೆ. ಆದರೆ ಸಾಮಾನ್ಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವವರು ವಿರಳ. ಹೀಗಾದಾಗ ಸಹಜವಾಗಿ ಮುಂದಿನ ಬರಹಗಳು ನಿಧಾನವಾಗುತ್ತವೆ.ಕಾರಣ ಈಗಾಗಲೇ ಪ್ರಕಟವಾಗಿರುವ ಬರಹಗಳಿಂದ ಓದುಗರಿಗೆ ಪ್ರಯೋಜನವಾಗಿದೆಯೇ ಎಂಬ ಫೀಡ್ ಬ್ಯಾಕ್ ಸಿಕ್ಕಿರುವುದಿಲ್ಲ. ಆದ್ದರಿಂದ  ಓದುಗರು ತಮ್ಮ ಮುಕ್ತ ಅಭಿಪ್ರಾಯಗಳನ್ನು ದಯಮಾಡಿ ಬರೆಯಿರಿ ಎಂದು ವಿನಂತಿಸುವೆ.ಈಗ ಶ್ರೀ ರಂಗನಾಥರ ಪತ್ರವನ್ನು ಓದಿ.
---------------------------------

ನಮಸ್ಕಾರ,
ಬೆಂಗಳೂರಿನಲ್ಲಿ ಕಳೆದ ೩ ವರ್ಷಗಳ ಹಿಂದೆ ದಕ್ಷಿಣಾಭಿಮುಖವಾದ 20 X 30 ಜಾಗವೊಂದನ್ನು ಖರೀದಿಸಿದ್ದೆ. ಆದರೆ ಮನೆ ಕಟ್ಟುವುದಕ್ಕೆ ಹಿಂದೇಟು ಹಾಕುತಿದ್ದೆ, ಕಾರಣ ದಕ್ಷಿಣದ ಬಾಗಿಲು ಬರುತ್ತದಲ್ಲಾ ಅನ್ನುವ ಕಾರಣಕ್ಕೆ.
ನಿಮ್ಮ ಹಳೆಯ ವಾಸ್ತು ಕುರಿತಾದ ಕೆಲ ಪ್ರತಿಕ್ರಿಯೆ ಗಳನ್ನು ಓದುತಿದ್ದೆ, ನಿಮ್ಮ ಖಡಕ್ ಪ್ರತಿಕ್ರಿಯೆಗಳು ನನ್ನ ಮನದಲ್ಲಿನ ಕೆಲ ಸಂದೇಹಗಳನ್ನು ದೂರ ಮಾಡಿವೆ.
ಟಿವಿಯಲ್ಲಿ ಬರುವ ಜ್ಯೋತಿಷ್ಯ ವಾಸ್ತು ಕುರಿತಾದ ಕಾರ್ಯಕ್ರಮಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತವೆ. ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸದೇ ಹೋದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವುದರಲ್ಲಿ ಸಂದೇಹವಿಲ್ಲ.

ಧನ್ಯವಾದಗಳೊಂದಿಗೆ

ರಂಗನಾಥ.

Monday, May 23, 2011

ಪಂ.ಸುಧಾಕರಚತುರ್ವೇದಿಯವರ ವಿಚಾರಧಾರೆ-1


ಆತ್ಮೀಯರೇ,
      ಅಪ್ಪಟ ಕನ್ನಡಿಗರಾದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಈಗ ೧೧೫ ವರ್ಷಗಳಾಗಿರುವ ಚತುರ್ವೇದಿಯವರ ಜೀವನೋತ್ಸಾಹ ನಿಜಕ್ಕೂ ಬತ್ತದ ಚಿಲುಮೆ. ಇವರು ಬೆಂಗಳೂರಿನ ಜಯನಗರ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿ ಯಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಇವರ ಮನೆಯಲ್ಲಿ ಸತ್ಸಂಗ ನಡೆಯುತ್ತಿದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಲ್ಲಿ ಭಾಗವಹಿಸಲು ಪರಿಚಯವಿರಬೇಕಾದ ಮತ್ತು ಆಹ್ವಾನಿಸಬೇಕಾದ ಅಗತ್ಯವಿಲ್ಲ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. ನೀವೂ ಈ ಅಪರೂಪದ ಸಾಧಕರನ್ನು ಭೇಟಿ ಮಾಡಬೇಕು ಮತ್ತು ಅವರ ಮಾತುಗಳನ್ನು ಆಲಿಸಬೇಕು ಎಂಬುದು ನನ್ನ ಆಶಯ.
     ಕಳೆದ ೧೪-೦೫-೨೦೧೧ರಂದು ನಡೆದ ಸತ್ಸಂಗದಲ್ಲಿ ಪಂ. ಚತುರ್ವೇದಿಯವರು ಮುಂದಿಟ್ಟ ವಿಚಾರಗಳನ್ನು ಎರಡು ಕಂತುಗಳಲ್ಲಿ ತಮ್ಮ ಮುಂದಿಟ್ಟಿದೆ. ಅವರು ಮಧ್ಯೆ ಮಧ್ಯೆ ವೇದದ ಮಂತ್ರಗಳನ್ನು ಉಲ್ಲೇಖಿಸುತ್ತಿದ್ದು ಅವುಗಳನ್ನು ಪದಬಳಕೆಯಲ್ಲಿ ಎಲ್ಲಿ ತಪ್ಪಾದೀತೋ ಎಂಬ ಭಾವನೆಯಿಂದ ಈ ಲೇಖನದಲ್ಲಿ ಹಾಕಿಲ್ಲ. ಇಲ್ಲಿರುವುದೆಲ್ಲಾ ಅವರದೇ ಮಾತುಗಳು. ಪ್ರತಿಕ್ರಿಯೆಗೆ ಸ್ವಾಗತ.
-ಕ.ವೆಂ.ನಾಗರಾಜ್.
*************


ಬದುಕೋಣ, ಸಾಯದಿರೋಣ

     ಋಗ್ವೇದದ ಒಂದು ಮಂತ್ರದಲ್ಲಿ ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಎಂದು ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. 'ವಿಶ್ವಾನಿ ದೇವ ಸವಿತರ್. . . . . 'ಎಂಬ ಮಂತ್ರದಲ್ಲಿ ಭಗವಂತ, ಜಗತ್ ಶ್ರೇಯಕ, ಜಗದುತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಹೇಳಿದೆ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮಗಳ ನೆನಪಿಲ್ಲ. ಕೆಲವರು ಹೇಳುತ್ತಾರೆ - 'ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ?'  ಅದಕ್ಕೆ ನಾವು ಎರಡು ಕಾರಣ ಕೊಡುತ್ತೇವೆ - ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಹಳೆಯ ಜನ್ಮದ್ದಿರಲಿ, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬರುತ್ತಾ ಇದ್ದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು. ಭೀಷ್ಮಾಚಾರ್ಯರಿಗೆ, ಅಶ್ವತ್ಥಾಮರಿಗೆ ಇಚ್ಛಾಮರಣಿತ್ವದ ವರ ಇತ್ತೆಂದು ಹೇಳುತ್ತಾರೆ. ಯಾವಾಗ ಸಾಯಬೇಕು ಅನ್ನಿಸುವುದೋ ಆವಾಗ ಸಾಯುವ ಶಕ್ತಿ! ಅದೇನೋ ನನಗೆ ಅರ್ಥವಾಗುವುದಿಲ್ಲ, ಬದುಕಬೇಕಾದರೇನೋ ಕಷ್ಟ ಇದೆ, ಸಾಯುವುದಕ್ಕೇನು? ಬೆಳಿಗ್ಗೆ ಎದ್ದಾಗ ನ್ಯೂಸ್ ಪೇಪರ್ ನೋಡಿದರೆ ಆ ಹುಡುಗ ವಿಷ ತಿಂದು ಸತ್ತ, ಈ ಹುಡುಗಿ ನೇಣು ಹಾಕಿಕೊಂಡು ಸತ್ತಳು, ಅಂತೆಲ್ಲಾ ಓದುತ್ತೀವಿ. ನಮಗೆ ಮೊದಲೇ ಗೊತ್ತಿದ್ದರೆ, ಇಂತಹ ದಿನವೇ ಸಾವು ಬರುತ್ತದೆ ಎಂದು ಗೊತ್ತಿದ್ದರೆ ಬದುಕುವುದಕ್ಕೆ ಉತ್ಸಾಹವೇ ಇರುತ್ತಿರಲಿಲ್ಲ.

     ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತಿರಬೇಕಾದರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು ೧೩ ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಪ್ಲಾನಿಲ್ಲ. ಏಕೆ ಹೇಳಿದೆನೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು. ವೇದ ಹೇಳುತ್ತೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ ೩೦೦ ವರ್ಷ ಆಯಸ್ಸು ಅಂತ. ಜಮದಗ್ನಿ ಅಂದರೆ ಋಷಿಯಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವನು, ಅಗ್ನಿಹೋತ್ರ ಮಾಡುವವನು -ಗೃಹಸ್ಥ/ಗೃಹಿಣಿ - ಜಮದಗ್ನಿ ಎಂದು ಅರ್ಥ. ನಿಜವಾಗಿ ಅರ್ಥ ಇಟ್ಟುಕೊಂಡು ಮಾಡಿದರೆ ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ ೩೦೦ ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. ಜೀವೇದ ಶರದಶ್ಶತಮ್ ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿ 'ಶತಾಯುರ್ ವಯ ಪುರುಷಃ' ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು!  ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, 'ಡಡ್ ಸೀ' ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ ೧೯೦ ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು ೧೯೦ ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ, ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಬದುಕುವ ಅವನ ಆತ್ಮವಿಶ್ವಾಸ ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು - Optimism is life, Pessimism is death itself!  - ಆಶಾವಾದ ನಿಜವಾದ ಜೀವನ, ನಿರಾಶಾವಾದ ಸಾವು! ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಆಗ ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಜೀವ ತೆಗೆದುಕೊಂಡು ಹೋಗಲು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದಾನಲ್ಲಾ, ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ, ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ನಿಜವಾದ ಸಾವಲ್ಲ, ಅಪಮೃತ್ಯು, ಅದು ಯಾರಿಗೂ ಬೇಡ, ಅದಾಗೇ ಸಾವು ಬಂದಾಗ ಬಾ ಮೃತ್ಯು, ಕರೆದುಕೊಂಡು ಹೋಗು ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು ಎಂದರು. ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ.

Sunday, May 22, 2011

"ಸಮಾನೋ ಮಂತ್ರ: ಸಮಿತಿ: ಸಮಾನೀ-ಕೆಲವು ಸಂದೇಹಗಳು


"ಸಮಾನೋ  ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಲೇಖನವನ್ನು ಓದಿದ ಶ್ರೀ ಪಿ.ಎಸ್. ರಂಗನಾಥ್ ಇವರು ಕೆಲವು ಸಂಶಯಗಳನ್ನು ಬರೆದಿದ್ದಾರೆ. ಅದಕ್ಕೆ ನನ್ನ ಸಮಾಧಾನವನ್ನು ಕೋರಿದ್ದಾರೆ.  ಅವರ ಸಂಶಯಗಳಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್

ನಿಮ್ಮ ಲೇಖನ "ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ" ಯನ್ನು ಓದಿದೆ. ನಿಮ್ಮ ಪ್ರಯತ್ನ ಶ್ಲಾಘನೀಯ. ಒಳ್ಳೊಳ್ಳೆ ವಿಚಾರಗಳನ್ನು ತಿಳಿಸುತ್ತಿರುವ ತಮಗೆ ದೇವರು ಸದಾಕಾಲ ಒಳ್ಳೆಯದನ್ನು ಮಾಡಲಿ ಎಂದು ನಾನು ಕೋರುತ್ತೇನೆ. ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ.ನಿಮ್ಮ ಉತ್ತರದ ನಂತರ ನನ್ನ ಮುಂದಿನ ಪ್ರಶ್ನೆ ಗಳನ್ನು ನಿಮ್ಮ ಮುಂದಿಡತ್ತೇನೆ.

-ಪಿ.ಎಸ್.ರಂಗನಾಥ್

·    ಸಂಶಯ: ನನ್ನಲ್ಲಿ ಕೆಲ ಸಂಶಯಗಳು ಇವೆ. ಒಂದೊಂದಾಗಿ ನಿಮ್ಮಲ್ಲಿ ಪರಿಹರಿಸಿಕೊಳ್ತಿನಿ

ಉ: ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಷ್ಟೆ. ಸಂಶಯ ಪರಿಹರಿಸುವಷ್ಟು ಸಮರ್ಥನಲ್ಲ.

·     ಪ್ರ: ಸಸ್ಯ, ಗಿಡ ಮರಗಳಿಗೆ ಜೀವ ಇದೆಯೇ?

ಉ: ಜೀವ ಇದೆ.

·     ಪ್ರ:ಹಸುವಿನ ಹಾಲು, ತುಪ್ಪ ಮತ್ತು ಮೊಸರನ್ನು ಸಸ್ಯಹಾರ ವರ್ಗದಲ್ಲಿ ಯಾಕೆ ಸೇರಿಸಿದ್ದಾರೆ?
ಉ: ಗೊತ್ತಿಲ್ಲ.ಅದರೆ ಕರು ಕುಡಿದು ಬಿಟ್ಟ ಹಾಲನ್ನು ಉಪಯೋಗಿಸುವುದರಿಂದ ಅದನ್ನು ಅಹಿಂಸಾತ್ಮಕ ಹಾಲು ಎಂದು ಹೇಳಬಹುದು.

·    ಪ್ರ: ರಸ್ತೆ ಅಗಲೀಕರಣ ಸಂಧರ್ಭದಲ್ಲಿ ನೂರಾರು ಮರಗಳನ್ನು ಕಡಿದಾಗ, ನಾವೆಲ್ಲರು ಹೇಳುವ ಮಾತು "ಮರಗಳ ಮಾರಣ ಹೋಮ" ಅಂತ ಅಥವ ರಸ್ತೆ ಅಗಲೀಕರಣಕ್ಕೆ ಮರಗಳ ಬಲಿ. ಮಾತನಾಡಲು ಬರದ ಮತ್ತು ಕೆಂಪು ರಕ್ತವಿಲ್ಲದ ಹಾಗು ಮೆದುಳೇ ಇಲ್ಲದ ಮರಗಳನ್ನು ಕಡಿದಾಗ ನಮ್ಮ ಮನ ಮಿಡಿಯುವುದೇಕೆ. ಅಥವ ನಾವೇ ಕೈಯಾರೆ ನೆಟ್ಟ ಒಂದು ಹೂ ಗಿಡ ಅಥವ ಹಣ್ಣಿನ ಗಿಡ ನಮ್ಮೆದುರುಗೆ ಬೆಳೆದು ನಿಂತಾಗ ನಮಗಾಗುವ ಆನಂದ ಅಷ್ಟಿಷ್ಟಲ್ಲ, ಯಾರಾದರು ಅದಕ್ಕೆ ಘಾಸಿ ಮಾಡಿದರೆ ಮನಸ್ಸು ಮುದುಡುವುದೇಕೆ?
ಉ: ಇದೆಲ್ಲ ಮಾನವೀಯತೆಯ ಲಕ್ಷಣಗಳಲ್ಲವೇ? ಬಹುಷ: ನಿಮ್ಮ ಮುಂದಿನ ಪ್ರಶ್ನೆ ಹೀಗಿರಬಹುದು. ತರಕಾರಿಯನ್ನು ಕೊಯ್ದಾಗ ಸಸ್ಯಕ್ಕೆ ಹಿಂಸೆಯಾಗುವುದಿಲ್ಲವೇ? ಬತ್ತ, ರಾಗಿ ಜೋಳ ಮುಂತಾದ ಸಸ್ಯಗಳನ್ನು ಕೊಯ್ದು ದವಸ ಧಾನ್ಯ ಪಡೆಯುವುದು ಹಿಂಸೆಮಾಡಿದಂತಲ್ಲವೇ? ಕೊತ್ತಂಬರಿ, ಕರಿಬೇವು ಎಲ್ಲವನ್ನೂ ಗಿಡ/ಮರದಿಂದ ಕೊಯ್ದು ಅವಕ್ಕೆ ಹಿಂಸೆಯುಂಟುಮಾಡುವಿದಿಲ್ಲವೇ? ಹೀಗೆ ಯೋಚಿಸುತ್ತಾ ಹೋದರೆ ಬಹಳ ಪ್ರಶ್ನೆಗಳು ಹುಟ್ಟುತ್ತವೆ.  ಹುಲಿ-ಸಿಂಹ ಗಳು ಒಂದು ಪ್ರಾಣಿಯನ್ನು ಕೊಂದು ಅದನ್ನು ತನ್ನ ಆಹಾರಮಾಡಿಕೊಳ್ಳುತ್ತವೆ. ಅದು ಸೃಷ್ಟಿ ನಿಯಮ. ಒಂದು ಪ್ರಾಣಿ ಮತ್ತೊಂದು ಪ್ರಾಣಿಯ ಆಹಾರ. ಮನುಷ್ಯನಾದರೋ ಕೆಲವು ಮರ/ಗಿಡ/ಬಳ್ಳಿಗಳನ್ನು ಮತ್ತು ಅದರ ಬೆಳೆಯನ್ನು ತನ್ನ ಆಹಾರ ಮಾಡಿಕೊಂಡಿದ್ದಾನೆ. ಹೌದು, ಒಂದು ಗಿಡ ತಾನೇ ತಾನಾಗಿ ಸಾಯುವುದಕ್ಕಿಂತ ಮುಂಚೆಯೇ ಮನುಷ್ಯನು ಅದರ ಆಯುಶ್ಯವನ್ನು ಮುಗಿಸಿ ಬಿಡುತ್ತಾನೆ. ಇನ್ನೂ ಬೇರೆ ರೀತಿಯಲ್ಲಿ ಯೋಚಿಸಿದಾಗ ಇರುವೆ, ಜಿರಲೆ, ಸೊಳ್ಳೆ, ನೊಣ, ಇಲಿ ಮುಂತಾದುವುಗಳನ್ನು ಕೊಲ್ಲುವಾಗ ಅದು ಹಿಂಸೆ ಎನಿಸುವುದಿಲ್ಲ. ಜಿರಲೆ ಔಷಧಿ ಸ್ಪ್ರೆ ಮಾಡಿದಾಗಲಂತೂ ನೂರಾರು ಹೆಣ ಉರುಳುತ್ತವೆ. ಇದೆಲ್ಲಾ ಮಾಡುವ ನಾವೆಲ್ಲರೂ ಪ್ರಾಣಿ ಹಿಂಸೆ ಮಾಡಿದಂತಾಗಲಿಲ್ಲವೇ? ಇಂತಹ ಸಂಶಯಗಳಿಗೆ ಸಮಾಧಾನ ಕಷ್ಟ. ಅಥವಾ ಚರ್ಚೆಯಿಂದ ಲೇ ಸಮಾಧಾನವಾಗುವುದೂ ಇಲ್ಲ. ಇಂತಾ ಸಂಶಯಗಳಿಗೆ ನನ್ನ ಸಮಾಧಾನ ಏನೆಂದರೆ……

ನಮ್ಮ ಆಹಾರಕ್ಕಾಗಿ ಮನುಷ್ಯನು ಪ್ರಾಣಿಯನ್ನು ಕೊಲ್ಲಬಾರದು. ಮನುಷ್ಯನು ಸಸ್ಯಾಹಾರಿ. ಆದರೆ ನಮಗೆ ಉಪಟಳ ಕೊಡುವ ಜಿರಲೆ, ಇರುವೆ,ಇಲಿ,ಇವುಗಳ ನಾಶ ಮಾಡದೆ ವಿಧಿಯಿಲ್ಲ-ನಮ್ಮ ನಿರಾಳ ಬದುಕಿಗಾಗಿ[ಆಹಾರಕ್ಕಾಗಿ ಅಲ್ಲ] ಅಂತೆಯೇ ಸಸ್ಯಾಹಾರ ಪಡೆಯಲು ಸಸ್ಯಗಳನ್ನು ಕೊಲ್ಲುವುದಕ್ಕಾಗಿಯೇ ಬೆಳೆಯುತ್ತೇವೆ.ಸಸ್ಯಗಳನ್ನು ಕೊಯ್ಯುವ ಪ್ರಕ್ರಿಯೆಯನ್ನು ಪ್ರಾಣಿಗಳನ್ನು ಕೊಲ್ಲುವ ಪ್ರಕ್ರಿಯೆಗೆ ಹೋಲಿಸಲಾಗದು.

ನನ್ನ ಸ್ವಭಾವ ತಿಳಿಸುವೆ. ನಮ್ಮ ಕಛೇರಿ ಆವರಣದಲ್ಲಿ ಸಾಕಷ್ಟು ಹೂ ಗಿಡ ಬೆಳೆದಿದ್ದೇವೆ. ಪ್ರತಿದಿನ ಸಾಕಷ್ಟು ಹೂ ಅರಳುತ್ತವೆ. ನಮ್ಮ ಕಛೇರಿಯ ಸಿಬ್ಬಂಧಿಗಳು ಅವುಗಳನ್ನು ಕೊಯ್ದು ದೇವರ ಫೋಟೋ ಗಳಿಗೆ ಅಲಂಕರಿಸುತ್ತಾರೆ.ನಾನು ಅವರಲ್ಲಿ ಸಾಮಾನ್ಯವಾಗಿ ಹೇಳುತ್ತೇನೆ. “ ಗಿಡಗಳಲ್ಲಿ ಹೂ ಅರಳಿದ್ದಾಗ  ಅವು  ಗಾಳಿಗೆ ತೂಗುತ್ತಿದ್ದರೆ ಅವನ್ನು ನೋಡಲು ಚೆಂದವೋ? ಅಥವಾ ಕಿತ್ತ ಹೂ ಸ್ವಲ್ಪ ಹೊತ್ತಿನಲ್ಲಿ ಬಾಡಿ ದೇವರ ಪಟದ ಮೇಲೆ ಮುದುಡಿಕೊಳ್ಳುವ ಚಿತ್ರಣ ಅಂದವೋ? ಹಾಗಂತ ಯಾರೂ ಗಿಡದಿಂದ ಹೂ ಕೀಳದೇ ಇರುವುದಿಲ್ಲ. ಆದರೆ ಹೂ ವು ಗಿಡದಲ್ಲಿದ್ದರೇನೇ ಚೆಂದ. ಪೈರು ಬಂದಾಗ ಬೆಳೆಕೊಯ್ದು ದವಸ ಧಾನ್ಯವನ್ನು ಆಹಾರಕ್ಕೆ ಪಡೆಯುವುದೇ ಯೋಗ್ಯ.

ಇವೆಲ್ಲಾ ನನ್ನ ಭಾವನೆಗಳು. ಶ್ರೀ ಸುಧಾಕರಶರ್ಮರಂತವರು ಸೂಕ್ತ ಉತ್ತರ ಕೊಡಬಲ್ಲರು. ಆದರೆ ಶರ್ಮರಿಗೆ ಆರೋಗ್ಯ ಉತ್ತಮವಾಗಿಲ್ಲ. ಸಧ್ಯಕ್ಕೆ ಶರ್ಮರು ಉತ್ತರಿಸಲಾರರು. ಬೇರೆ ಚಿಂತಕರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುವುದು ಸೂಕ್ತವಾಗಿದೆ.

Thursday, May 19, 2011

ಯೋಚಿಸಲೊ೦ದಿಷ್ಟು...೩೪

೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!!

೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!!

೩. ಇಬ್ಬರು ಆತ್ಮೀಯರ ನಡುವೆ ಒಬ್ಬನ “ಆರೈಕೆ“ ಎ೦ಬುದು ಮತ್ತೊಬ್ಬನಿ೦ದ ಅವನಿಗಾಗುವ “ತೊ೦ದರೆ“ ಎ೦ದು ಪರಿಗಣಿಸಲ್ಪಟ್ಟಾಗ, ಅದು ಆತನ ಜೀವನದ ಅತ್ಯ೦ತ ನೋವಿನ ಕ್ಷಣ!

೩. ಸತ್ಯದ ಪಾಲನೆ, ಸತತ ಪ್ರಯತ್ನ ಹಾಗೂ ನ೦ಬಿಕೆಯನ್ನು ಕಾಪಿಟ್ಟುಕೊಳ್ಳುವುದು ಜೀವನದ ಯಶಸ್ಸಿಗೆ ಕಾರಣವಾಗುತ್ತವೆ!

೪. ಕೇವಲ ನಾವೇ ಮಾತಾಡುತ್ತಿರುವಾಗ, ನಮಗೆ ಗೊತ್ತಿರುವುದನ್ನೇ ಹೇಳುತ್ತಿರುತ್ತೇವೆ.. ಆದರೆ ಇನ್ನೊಬ್ಬರು ಹೇಳುವುದನ್ನು ಕೇಳಿಕೊಳ್ಳುತ್ತಿದ್ದರೆ ಗೊತ್ತಿರದ ವಿಚಾರವನ್ನು ತಿಳಿದುಕೊಳ್ಳಬಹುದಾದ ಸಾಧ್ಯತೆಗಳು ಹೆಚ್ಚು!!

೫. ಹಿ೦ದುಳಿಯುವುದೇನೂ ತಪ್ಪಲ್ಲ.! ಮ೦ದಗತಿಯಲ್ಲಿ ಸಾಗುತ್ತಾ ಸತ್ಯ, ಧರ್ಮ ಹಾಗೂ ನ್ಯಾಯದ ಹಿ೦ಬಾಲಕರಾದ ಸಜ್ಜನರು ಕೊನೆಗೊಮ್ಮೆ ವಿಜಯದ ಮುಗುಳ್ನಗೆಯನ್ನು ಬೀರುತ್ತಾರೆ!- ಡಾ|| ವೀರೇ೦ದ್ರ ಹೆಗ್ಗಡೆ

೬. ತನ್ನಲ್ಲಿ ಶ್ರಧ್ಧೆ; ಪ್ರರಲ್ಲಿ ಶ್ರಧ್ಧೆ; ತನ್ನನ್ನು ಹಾಗೂ ಪರರನ್ನೂ ಮೀರಿರುವ ಅನ೦ತ ಶಕ್ತಿಗಳ ಕಲ್ಯಾಣ ಪಥದಲ್ಲಿನ ಶ್ರಧ್ಧೆ; ಈ ಪರಸ್ಪರ ಶ್ರಧ್ಧೆಗಳನ್ನು ಹೊ೦ದಿದ ವ್ಯಕ್ತಿಯು ವಾಮನನಾದರೂ ತ್ರಿವಿಕ್ರಮನಾಗುತ್ತಾನೆ!- ವಿ.ಕೃ.ಗೋಕಾಕ್

೭.ಕೆಲವು ರೋಗಗಳಿಗೆ ನಾವು ಆತಿಥ್ಯ ನೀಡುತ್ತೇವೆ.. ಕೆಲವು ರೋಗಗಲು ಅಭ್ಯಾಗತರ೦ತೆ ಬ೦ದು ನಮ್ಮಲ್ಲಿಯೇ ನೆಲೆಸಿಬಿಡುತ್ತವೆ!!- ಎಮ್.ವಿ.ಸೀತಾರಾಮಯ್ಯ

೮.ಮೀತಿ ಮೀರಿದ ಶೇಖರಣೆಯಿ೦ದ ಶ್ರೀಮ೦ತರಾಗುವುದು ಹೇಗೆ ಹಿತವಲ್ಲವೋ ಹಾಗೆಯೇ ಮಿತಿಮೀರಿದ ಮಿತವ್ಯಯದಿ೦ದ ಶ್ರೀಮ೦ತರಾಗುವುದೂ ಹಿತವಲ್ಲ!!- ಎಡ್ಮ೦ಡ್ ಬರ್ಕ್

೯.ಜನರಿ೦ದ ದೂರ ಹೋಗದ೦ತೆ, ಅವರಿಗೆ ನಿಲುಕುವ೦ತೆ ಬೆಳೆಯುವುದೇ ಬೆಳವಣಿಗೆಯ ನಿಜವಾದ ಲಕ್ಷಣ.. ಏಕೆ೦ದರೆ ನಾವು ವಾಸಿಸುವುದು ಜನರ ಮಧ್ಯದಲ್ಲಿಯೇ!!- ಆರ್.ಎಮ್.ಹಡಪದ್

೧೦. ಯಾವುದಾದರೂ ಕೆಲಸಗಳಲ್ಲಿ ತೊಡಗಿಕೊ೦ಡಿರುವುದು ಮನದಲ್ಲಿನ ಬೇಗುದಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಅಸ೦ತೋಷವು ನಮ್ಮಲ್ಲಿ ಸದಾ ನೆಲೆಸುವುದನ್ನು ತಡೆಯುತ್ತದೆ.

೧೧. ನಿನ್ನೆ ಮತ್ತು ನಾಳೆಗಳ ನಡುವಿನ ಈ ವರ್ತಮಾನದಲ್ಲಿಯೇ ಏನನ್ನಾದರೂ ಮೌಲ್ಯಯುತವಾದುದ್ದನ್ನು ಸಾಧಿಸಬೇಕು!

೧೨. ಕೆಲವೊಮ್ಮೆ ಜೀವನವೆ೦ದರೆ ನಿರೀಕ್ಷಿಸಿದ್ದನ್ನು ಸಾಧಿಸಲಾಗದ ಹಾಗೂ ಅನಿರೀಕ್ಷಿತವನ್ನು ಸಾಧಿಸಬಹುದಾದ ಒ೦ದು ವಿಪರ್ಯಾಸ!

೧೩. ಕಾಲವು ಎಲ್ಲವನ್ನೂ ಮರೆಸಬಹುದಾದರೂ ಜೀವನದಲ್ಲಿ ಕೆಲವೊ೦ದು ವ್ಯಕ್ತಿಗಳು ಮಾತ್ರವೇ ತಮ್ಮ ಚಟುವಟಿಕೆಗಳಿ೦ದ ನಾವು ಸಮಯವನ್ನೂ ಮರೆಯುವ೦ತೆ ಮಾಡುತ್ತಾರೆ!!

೧೪. ನಾವು ಮತ್ತೊಬ್ಬರ ಯಶಸ್ಸನ್ನು ಕ೦ಡು ಮತ್ಸರಿಸಿದಲ್ಲಿ ಅದು ನಮ್ಮ ಜೀವನದ “ವೈಫಲ್ಯ“ವೆ೦ದೂ , ನಮ್ಮ ಯಶಸ್ಸಿಗೆ ಮತ್ತೊಬ್ಬರು ಕರುಬಿದರೆ ಅದನ್ನು ನಮ್ಮ ಜೀವನದ “ಸಾಫಲ್ಯ“ವೆ೦ದೂ ಪರಿಗಣಿಸಬಹುದು!

೧೫. ಸಾಧಿಸಿದ ಯಶಸ್ಸಿನ ಬಗ್ಗೆ ಅತಿಯಾಗಿ ಚರ್ಚಿಸುವುದು ಹಾಗೂ ವೈಫಲ್ಯಗಳನ್ನು ಕುರಿತೂ ಅತಿಯಾಗಿ ಚಿ೦ತಿಸುವುದು ನಮ್ಮ ಭವಿಷ್ಯಕ್ಕೆ ತೊಡಕಾಗಿ ಪರಿಣಮಿಸುತ್ತದೆ!

Tuesday, May 17, 2011

ವೇದೋಕ್ತ ಜೀವನ ಪಥ: ಮಾನವ ಧರ್ಮ -3

ಅದೇ ಅಥರ್ವವೇದ ಮತ್ತೆ ಹೇಳುತ್ತಲಿದೆ:


ಉದ್ಯಾನಂ ತೇ ಪುರುಷ ನಾವಯಾನಂ ಜೀವಾತುಂ ತೇ ದಕ್ಷತಾತಿಂ ಕೃಣೋಮಿ |
ಆ ಹಿ ರೋಹೇಮಮಮೃತಂ ಸುಖಂ ರಥಮಥ ಜಿರ್ವಿರ್ವಿದಥಮಾ ವದಾಸಿ ||
(ಅಥರ್ವ. ೮.೧.೬.)


     [ಪುರುಷ] ಓ ದೇಹಧಾರಿ ಜೀವ! [ತೇ ಯಾನಂ ಉತ್] ನಿನ್ನ ಮಾರ್ಗ ಮೇಲಕ್ಕಿದೆ. [ನ ಆವಯಾನಮ್] ಕೆಳಕ್ಕೆ ಹೋಗುವುದಲ್ಲ. [ತೇ] ನಿನಗಾಗಿ, [ಜೀವಾತುಮ್] ಜೀವನಕಲೆಯನ್ನೂ, [ದಕ್ಷತಾತಿಮ್] ಜೀವನಸಾಮರ್ಥ್ಯವನ್ನೂ, [ಕೃಣೋಮಿ] ಉಂಟುಮಾಡುತ್ತೇನೆ. [ಇಮಮ್ ಅಮೃತಂ ಸುಖಂ ರಥಮ್] ಈ ಜೀವಂತವಾದ ಸುಖಕರವಾದ ಜೀವನರಥವನ್ನು, [ಹಿ ಆರೋಹ] ನಿಜವಾಗಿ ಏರು. [ಅಥ] ಆಮೇಲೆ [ಜಿರ್ವಿ] ವಾರ್ಧ್ಯಕ್ಯ ಪಡೆದು [ವಿದಥಮ್] ಜ್ಞೇಯವಾದ ಸತ್ಯಜ್ಞಾನವನ್ನು, [ಆ ವದಾಸಿ] ಪ್ರಸರಿಸುತ್ತಾ ಓಡಾಡುವೆ.

     ಹೌದು, ಧರ್ಮದ ಮಾರ್ಗ ಧಾರಕಮಾರ್ಗ, ಎತ್ತಿ ಹಿಡಿಯುವ ಮಾರ್ಗ. ಪತನಕ್ಕಿಲ್ಲಿ ಅವಕಾಶವೇ ಇಲ್ಲ. ಇಹದಲ್ಲಿ ಸೊಗಸಾಗಿ ಬಾಳಿ, ಇತರರನ್ನೂ ಸೊಗಸಾಗಿ ಬಾಳಿಸಿ, ಪರದಲ್ಲಿ ಅವಿಚ್ಛಿನ್ನ ಆನಂದವನ್ನು ಪಡೆದುಕೊಳ್ಳುವ ಜೀವನಕಲೆಯ ಮತ್ತು ಜೀವನಸಾಮರ್ಥ್ಯದ ದಿವ್ಯಮಾರ್ಗ. ನಾವು ಹಿಂದೆ ಹೇಳಿರುವಂತೆ, ಧರ್ಮವಿರುವುದು ಮಾನವ ಮಾತ್ರರಿಗೆಲ್ಲಾ ಒಂದೇ. ಅದು ಮತಗಳಂತೆ ಸಾವಿರಾರು ಇಲ್ಲ. ಆದರೂ ವೇದಗಳಲ್ಲಿ ಧರ್ಮ ಎಂಬ ಶಬ್ದವನ್ನು ಏಕವಚನ, ಬಹುವಚನ ಎರಡರಲ್ಲಿಯೂ ಬಳಸಲಾಗಿದೆ. ಉದಾಹರಣೆಗೆ, 'ತಾನಿ ಧರ್ಮಾಣಿ ಪ್ರಥಮಾನ್ಯಾಸನ್' (ಯಜು.೩೧.೧೬.) - ಅವು ಪ್ರಥಮ ಧರ್ಮಗಳಾದವು, ಎಂಬಲ್ಲಿ ಬಹುವಚನಪ್ರಯೋಗವಿದೆ. 'ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ'(ಋಕ್. ೫.೬೩.೭.) - ಧರ್ಮದಿಂದ ಸ್ನೇಹಪರ ಹಾಗೂ ವರಣೀಯ ನರ-ನಾರಿಯರು ಜ್ಞಾನಿಗಳಾಗುತ್ತರೆ, ಎಂಬಲ್ಲಿ ಏಕವಚನ ಪ್ರಯೋಗವಿದೆ. ಬಹುವಚನ ಪ್ರಯೋಗ ಕಂಡು ಪಾಠಕರು ವೇದಗಳು ಅನೇಕ ಧರ್ಮಗಳನ್ನು ಉಪದೇಶಿಸುತ್ತವೆ ಎಂದು ಭ್ರಾಂತರಾಗುವ ಸಂಭವವಿದೆ. ಆದರೆ, ಅಂತಹ ಭ್ರಾಂತಿಗೆ ಅವಕಾಶವಿಲ್ಲ. ಏಕೆಂದರೆ, ನಾವು ಈಗ ಯಾವ ಭಾವನೆಯನ್ನು ಧರ್ಮ ಎಂಬ ಶಬ್ದವನ್ನು ಗ್ರಹಿಸುತ್ತೇವೋ, ಅದನ್ನು ಸೂಚಿಸಲು ವೇದಗಳು ಋತ ಎಂಬ ಶಬ್ದವನ್ನು ಬಳಸುತ್ತವೆ. ಧರ್ಮ ಎಂಬ ಶಬ್ದದ ಅರ್ಥ ಧಾರಕ ಎಂದು. ವಸ್ತುತಃ ಸದ್ಗುಣವೇ ಧಾರಕತತ್ವ. ಅಂತಹ ಸದ್ಗುಣ ಒಂದೇ ಅಲ್ಲ ಇರುವುದು. ಅನೆಕ ಸದ್ಗುಣಗಳಿವೆ. ಯಾವುದಾದರೂ ಸದ್ಗುಣವನ್ನು ಸೂಚಿಸುವಾಗ ವೇದ ಧರ್ಮ ಎಂಬ ಶಬ್ದವನ್ನೂ, ಅನೇಕ ಧರ್ಮಗಳನ್ನು ಸೂಚಿಸಬೇಕಾದಾಗ ಧರ್ಮಗಳು ಎಂಬ ಶಬ್ದವನ್ನೂ ಉಪಯೋಗಿಸುತ್ತವೆ. ಎಲ್ಲ ಧರ್ಮಗಳು ಎಂದರೆ ಆತ್ಮೋದ್ಧಾರಕವಾದ ಸದ್ಗುಣಗಳ ಮೊತ್ತವನ್ನು, ಒಟ್ಟನ್ನು ಸೂಚಿಸುವಾಗ, ವೇದ ಋತ ಎಂಬ ವ್ಯಾಪಕ ಶಬ್ದವನ್ನು ಬಳಸುತ್ತದೆ. ವೇದಗಳ ಶೈಲಿಯಲ್ಲಿ ಧರ್ಮ ಒಂದು ಸದ್ಗುಣವಾದರೆ, ಋತ ಸಮಸ್ತ ಸದ್ಗುಣಗಳ ರಾಶಿ. ಸಾರ್ವಭೌಮ ಈಶ್ವರೀಯ ವಿಧಾನವೇ, ಆತ್ಮನ ಉನ್ನಾಯಕವಾದ ಜೀವನಕ್ರಮವೇ ಋತ. ಆ ಈಶ್ವರೀಯ ವಿಧಾನ ವೇದಗಳಲ್ಲಿ ಪ್ರಕಟವಾಗಿರುವುದರಿಂದ, ವೇದಗಳನ್ನೂ ಕೂಡ ಋತ ಎಂದು ನಿರ್ದೇಶಿಸುವುದುಂಟು. ಸುಲಭವಾದ ಮಾತುಗಳಲ್ಲಿ ಹೇಳಬೇಕಾದರೆ, ಆತ್ಮೋದ್ಧಾರದ ಸಮಸ್ತ ಸದ್ಗುಣಗಳ ಸಂಘಾತವೇ ಋತ, ಈಗಿನ ಬಳಕೆಯ ಮಾತಿನಲ್ಲಿ ಅದೇ ಧರ್ಮ. ಆ ಸದ್ಗುಣಗಳು ಜೀವನಕ್ಕಿಳಿದು ಬಂದಾಗ, ಅವೆಲ್ಲಾ ಸೇರಿ ಒಂದು ಜೀವನಮಾರ್ಗಕ್ಕೆ ರೂಪ ಕೊಡುತ್ತವೆ.
******************************

Monday, May 16, 2011

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ  ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ "ವಿಶ್ವಗುರುವಿನ" ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ "ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದ್ದರೆಂದೂ" ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಲ್ಲರೂ ಸುಖವಾಗಿರಬೇಕು........, ಯಾರಿಗೂ ದು:ಖ ಬರುವುದು ಬೇಡ". ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!
ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು " ಇದೇನೋ ನೀನು "ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!" ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ" ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.
ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ  ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು  ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ  ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"- ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ?  " ಆತ್ಮವತ್ ಸರ್ವ ಭೂತೇಶು" ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?
ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?

ಸಮಾನೋ ಮಂತ್ರ:  ಸಮಿತಿ: ಸಮಾನೀ
ಸಮಾನಂ ವ್ರತಂ ಸಹ ಚಿತ್ತಮೇಷಾಮ್|
ಸಮಾನೇನ ವೋ ಹವಿಷಾ ಜುಹೋಮಿ
ಸಮಾನಂ ಚೇತೋ ಅಭಿಸಂವಿಶಧ್ವಮ್||
[ಅಥರ್ವ-೬.೬೪.೨]

ಅಥರ್ವ ವೇದ ಈ ಮಂತ್ರ ಏನು ಹೇಳುತ್ತದೆ?

ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ
ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]
ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]

ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ
ವ:=ನಿಮ್ಮೆಲ್ಲರಿಗೂ
ಸಮಾನೇನ  ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ
ಜುಹೋಮಿ=ದಾನ ಮಾಡುತ್ತೇನೆ
 ಸಮಾನಂ ಚೇತ:=ಸಮಾನವಾದ ಚೈತನ್ಯದಲ್ಲಿಯೇ
ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ



ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ  ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು  ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ]
ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?
ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ  ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹಾರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ  ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?
ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ  ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು?
ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ?
ಈ ಮಾತು ಹೇಳುವಾಗ  ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ?
ಎಂತಹಾ ಪ್ರಶ್ನೆ!
ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ  ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.
ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ?
ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?
 ಇಡೀ ವಿಶ್ವಕ್ಕೆ ಉತ್ತಮ ಬದುಕು  ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು 
ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?