Pages

Tuesday, September 27, 2011

ವಿವೇಕ ಚೂಡಾಮಣಿ - ಭಾಗ -೧೨


ಗ್ರಂಥದ ಮುಂದುವರಿದ ಭಾಗ


विरज्य विषयव्रातात् दोषदृष्ट्या मुहुर्मुहुः ।
स्वलक्ष्ये नियतावस्था मनसः शम उच्यते ॥२२॥


ವಿರಜ್ಯವಿಷಯವ್ರಾತಾತ್ ದೊಷದೃಷ್ಟ್ಯಾ ಮುಹುರ್ಮುಹುಃ |
(= ಭೋಗವಸ್ತುಗಳಲ್ಲಿರುವ ದೋಷಗಳನ್ನು ಮತ್ತೆ-ಮತ್ತೆ ಕಂಡು ಭೋಗ ವಿಷಯಾಸಕ್ತಿಯನ್ನು ಬಿಡುವುದು)
ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ ||೨೨॥
(=ಗುರಿಯ ಸಾಧನೆಗೆ ಮನೋನಿಗ್ರಹವನ್ನಿಟ್ಟುಕೊಳ್ಳುವುದೆ ಶಮವು )

ಸಾಧನ ಚತುಷ್ಟಯದ ಮೂರನೆಯ ಸಾಧನದ ನಿರೂಪಣೆಯನ್ನು ಮಾಡುತ್ತಾ ’ಶಮದಮಾದಿ’ ಆರು ಸಂಪತ್ತುಗಳ ವಿಚಾರವನ್ನು ಶ್ರೀ ಶಂಕರರು ವಿವರಿಸುತ್ತಾರೆ.
ಮೊದಲನೆಯದಾಗಿ ’ಶಮ’ :-
ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದನ್ನು ’ಶಮ’ ಎಂದು ಹೇಳುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಡುವುದು ಎಂದರೆ, ಇಂದ್ರಿಯಯಗಳನ್ನು ನಿಗ್ರಹಿಸುವುದು ಎಂದು ತಿಳಿಯಬೇಕಾಗುತ್ತದೆ. ಮುಖ್ಯವಾಗಿ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ) ವಿಷಯವಸ್ತುವಿನ ಗೊಡವೆಗೆ ಹೋಗದಂತೆ ಹತೋಟಿಯಲ್ಲಿಟ್ಟುಳ್ಳುವುದು ಎಂದು ಅರ್ಥ. ಅಪೇಯಪಾನವು ಮನೆಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಹೊರಗಿನ ಅಂಗಡಿಯಲ್ಲೂ ಹಾನಿಕಾರಕವೆ !. ಜಾಗ ಬದಲಾದ ಮಾತ್ರಕ್ಕೆ ಅದರ ದೋಷಗುಣವೇನೂ ಬದಲಾಗುವುದಿಲ್ಲ. ದೋಷವನ್ನು ಗ್ರಹಿಸಿ ಒಟ್ಟಾರೆಯಾಗಿ ಭೋಗಲಾಲಸೆಯನ್ನು ಬಿಟ್ಟು ಮತ್ತೊಮ್ಮೆ ಜ್ಞಾನೇಂದ್ರಿಯಗಳು ಅತ್ತ ಸುಳಿಯದಂತೆ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಆ ಮನೋನಿಶ್ಚಯದಂತೆ ನಡೆಯುವುದೇ ’ಶಮ’ ಎನ್ನುವ ಅರ್ಥದಲ್ಲಿ ಹೇಳಿರುತ್ತಾರೆ.

ಎರಡನೆಯದು ’ದಮ’ :-

विषयेभ्यःपरावर्त्य स्थापनं स्वस्वगोलके ।
उभयेषामिंद्रियाणां स दमः परिकीर्तितः ॥२३॥

ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ |
(=ಇಂದ್ರಿಯಗಳನ್ನು ವಿಷಯಭೋಗವಸ್ತುವಿನ ಕಡೆಯಿಂದ ಸ್ವಸ್ಥಾನಕ್ಕೆ ತರುವುದು)
ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ ||೨೩||
(=’ಇಂದ್ರಿಯಗಳೆರಡನ್ನೂ’ ಅಂಕೆಯಲ್ಲಿಡುವುದೇ ’ದಮ’ವು)

ಭೋಗವಸ್ತುಗಳಲ್ಲಿ ತಲ್ಲೀನವಾಗಿರುವ ಇಂದಿಯಗಳನ್ನು ಅದೇ ದಾರಿಯಲ್ಲಿ ಹಿಮ್ಮುಖವಾಗಿ ತಂದು (=ಪರಾವರ್ತ್ಯ ) ಸ್ವಸ್ಥಾನಗಳಲ್ಲಿ ನಿಲ್ಲಿಸಿ ಅವುಗಳು ಕೇವಲಬ್ರಹ್ಮದಲ್ಲಿ ಲೀನವಾಗುವಂತೆ ಮಾಡಿಕೊಳ್ಳುವುದೇ  ’ದಮ’ ಎಂದು ಹೇಳುತ್ತಾರೆ. ’ಇಂದ್ರಿಯಗಳು’ ಎಂಬಲ್ಲಿ ಜ್ಞಾನೇಂದಿಯಗಳು ಮತ್ತು ಕರ್ಮೇಂದ್ರಿಯಗಳೆರಡನ್ನೂ ( ಕೈ, ಕಾಲು, ಬಾಯಿ ಮುಂತಾದವು) ಹತೋಟಿಯಲ್ಲಿಟ್ಟುಕೊಳ್ಳುವುದು ಎಂದು ತಿಳಿಯಬೇಕಾಗುತ್ತದೆ.
’ಸ್ಥಾಪನಂ ಸ್ವಸ್ವಗೋಲಕೆ’ ಎನ್ನುವಲ್ಲಿ ಇಂದ್ರಿಯವಿಷಯಗಳು ಮೊದಲಾದ ಜಾಗಕ್ಕೆ ಮನಸ್ಸನ್ನು ಪುನಃ ಎಳೆದು ತರುವುದು ಎಂದು ಅರ್ಥ.  ರುಚಿಯ ಮೂಲವಿರುವುದು ನಾಲಿಗೆಯಲ್ಲಿ ಅಲ್ಲ, ಅದರ ಮೇಲಿರುವ ರುಚಿಯ ಮೊಗ್ಗುಗಳಲ್ಲಿ (taste buds). ಅಲ್ಲಿಂದ ಆರಂಭವಾಗುವ ರುಚಿಯ ಕಾರ್ಯಕ್ರಮಗಳು ಅಜೀರ್ಣವಾಗುವಷ್ಟು ತಿಂದು ವೈದ್ಯರಲ್ಲಿಗೆ ತೆರಳುವವರೆಗೂ ಮುಂದುವರಿಯುತ್ತದೆ. ವೈದ್ಯರಲ್ಲಿಗೆ ಹೋದ ಮನಸ್ಸನ್ನು ತಿರುಗಿ ರುಚಿಯ ಮೊಗ್ಗುಗಳೆಡೆಗೆ ತಂದು ಬಿಡುವುದು ಮತ್ತು ನಂತರದಲ್ಲಿ ತನಗೆ ರುಚಿಯ ಮೊಗ್ಗುಗಳಿವೆ ಎನ್ನುವುದನ್ನೇ ಮರೆತುಬಿಡುವುದು, ಇದನ್ನು ದಮ ಎಂದು ನಿರೂಪಿಸುತ್ತಾರೆ. ಕೆಟ್ಟದ್ದನ್ನು ಕೇಳಬೇಡ ಎನ್ನುವಲ್ಲಿ ಕಿವಿಯನ್ನು ಕೆಟ್ಟದ್ದರ ಕಡೆಗೆ ಆಲಿಸಬೇಡ ಅಥವಾ ಅಂತಹ ವಿಚಾರಗಳ ಪ್ರತಿಯಾಗಿ ತನಗೆ ಕಿವಿಯ ತಮಟೆಯೇ ಕೆಲಸ ಮಾಡುತ್ತಿಲ್ಲ ಎಂಬ ಭಾವವನ್ನು ತಳೆದು ನಿರ್ಲಿಪ್ತರಾಗುವುದು ಎಂದು ತಿಳಿಯಬಹುದು.

ಆಕ್ಷೇಪ : ಶಮ ಅಥವಾ ಮನೋನಿಗ್ರಹವು (ಅಂತರಿಂದ್ರಿಯ=ಶಬ್ದ, ಸ್ಪರ್ಶ, ರೂಪ,ರಸ, ಗಂಧ) ಇದ್ದಾಗ ಕರ್ಮೇಂದ್ರಿಯ (ಬಹಿರಿಂದ್ರಿಯ=ಕೈ,ಕಾಲು,ಬಾಯಿ,ಗುದ,ಮತ್ತು ಲಿಂಗ)ಗಳ ಮೇಲಿನ ಹತೋಟಿಯು ತಾನೇ ಬರುವುದಲ್ಲವೇ ? ’ದಮ’ದ ಪ್ರತ್ಯೇಕತೆಯ ಅಗತ್ಯವಾದರೂ ಏಕೆ ?

ಸಮಾಧಾನ : ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಶಾಸ್ತ್ರಾನುಕೂಲತೆಗಾಗಿ ಬಿಡಿಸಿ ಹೇಳಲಾಗಿದೆ ಎನ್ನಬಹುದು. ಹೆಚ್ಚು ಸ್ಪಷ್ಟತೆಗಾಗಿ ಒಂದೊಂದನ್ನೂ ಬಿಡಿಸಿ ಹೇಳಲಾಗುತ್ತದೆ.  ’ಸ್ವಾಗತ’(ವೆಲ್ಕಮ್) ವೇ ಸಾಕು, ’ಸುಸ್ವಾಗತ’ ಏಕೆ? (ವೆಲ್ ವೆಲ್ಕಮ್ಮು !). ನಲಿಯುತ್ತಾ ಬರುವುದೇನೋ ಸರಿ, ನಲಿ-ನಲಿಯುತ್ತಾ ಬರುವುದು ಏಕೆ ? ಎಂದರೆ, ವಿಷಯದ ಮಹತ್ವದ ತಿಳಿವಿಗಾಗಿ ಅಥವಾ ವಿಷಯಕ್ಕೆ ಪುಷ್ಟಿ ನೀಡುವುದಕ್ಕಾಗಿ ಹೇಳಲಾಗಿದೆ ಎನ್ನಬಹುದು. ’ಶ್ರೇಷ್ಠತಮಾಯ ಕರ್ಮಣೆ’ ಎಂಬ ವಾಕ್ಯವೊಂದು ವೇದದಲ್ಲಿ ಬರುತ್ತದೆ. ಶ್ರೇಷ್ಠ ಎನ್ನುವುದೇ superlative ಆಗಿರುವಾಗ ಶ್ರೇಷ್ಠತಮ ಎನ್ನುವುದು ಏಕೆ ? ಎಂದರೆ , ಪುಷ್ಟಿಗಾಗಿ, ಮಹತ್ವಕ್ಕಾಗಿ ಹೇಳಿದ್ದಾರೆ ಎನ್ನಬಹುದು. ( Sachin is one of the best player ಎನ್ನುತ್ತಾರೆ. Best ಎನ್ನುವುದೇ unique ಆಗಿರುವಾಗ one of the best ಏಕೆ ? ಎಂದರೆ , ದ್ರಾವಿಡ್ ಕೂಡಾ ಸಚಿನ್ ನಷ್ಟೇ talented ಆಗಿರುವುದರಿಂದ ವ್ಯತ್ಯಾಸವನ್ನು ಗುರುತಿಸಲು ಮಹತ್ವವನ್ನು ಹೇಳಲು ಬಳಸಲಾಗುತ್ತದೆ ಎನ್ನಬಹುದು !).

ಮೂರನೆಯದು ಉಪರತಿ :-

बाह्यालम्बनं वृत्तेरेषोपरतिरुत्तमा ॥२४॥

ಬಾಹ್ಯಾಲಂಬನಂ ವೃತ್ತೇರೇಷೋಪರತಿರುತ್ತಮಾ ||೨೪||
(=ಹೊರಗಿನ ವಿಷಯಗಳ ಅವಲಂಬನೆಯನ್ನು ಬಿಡುವುದೇ ಉಪರತಿ)

ದಮವನ್ನು ಸಾಧಿಸುವುದು ಹೇಗೆ ? ಎನ್ನುವದನ್ನು ’ಉಪರತಿ’ ಎಂಬಲ್ಲಿ ಹೇಳುತ್ತಾರೆ.  ಹೊರಗಿನ ಭೋಗವಸ್ತುಗಳ ಅವಲಂಬನೆಯನ್ನು ಬಿಟ್ಟು ತನ್ನಲ್ಲಿ ತಾನು ನೆಮ್ಮದಿಯನ್ನು ಕಾಣುವುದು ’ಉಪರತಿ’ ಎಂದು ಹೇಳುತ್ತಾರೆ. ಬಯಕೆಗಳು ಏಳದೆ ಇದ್ದಾಗ ವೈರಾಗ್ಯವು ಹುಟ್ಟುತ್ತದೆ. ವೈರಾಗ್ಯವಿದ್ದಲ್ಲಿ ವಿಷಯವಸ್ತುಗಳ ಮೇಲಿನ ಅವಲಂಬನೆಯೂ ಇರುವುದಿಲ್ಲ. ಹೊರಗಿನ ವಿಷಯವಸ್ತುಗಳಾವುದನ್ನೂ ನೆಚ್ಚಿಕೊಳ್ಳದೆ ಸಾಧನೆಯ ದಾರಿಯಲ್ಲಿ ಸಾಗುವುದನ್ನು ಉಪರತಿ ಎಂದು ಹೇಳುತ್ತಾರೆ. ಕೆರೆಯ ನೀರು ಕೆರೆಯ ತೂಬಿನ ಮೂಲಕ ಹೊರಟು ಮುಂದೆ ನಾಲೆಗಳಲ್ಲಿ , ಹೊಲ-ಗದ್ದೆಗಳಲ್ಲಿ ಹೇಗೆ ಬೇರೆ ರೂಪವನ್ನು ಪಡೆಯುವುದೋ ಹಾಗೆಯೇ ಮನಸ್ಸಿನ ಮೂಲಕ ಉಂಟಾಗುವ ವಿಷಯಭೋಗವು ಹೊರಗಿನ ಅವಲಂಬನೆಗಳು ಹೆಚ್ಚಾದಂತೆ ಹಲವು ರೂಪಗಳನ್ನು ಪಡೆದುಕೊಂಡು ನಿವೃತ್ತಿಧರ್ಮಕ್ಕೆ ಅಡ್ಡಿಯಾಗುತ್ತದೆ. ಹೀಗೆ ಶಮದಮಾದಿಗಳು ಒಂದಕ್ಕೊಂದು ಪೂರಕವಾಗಿದ್ದರೂ ಸಹ ಒಂದೊಂದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಮುಂದಿನ ಕಂತಿನಲ್ಲಿ ’ತಿತಿಕ್ಷಾ’ ಮುಂತಾದ ಗುಣಗಳ ವಿಚಾರವನ್ನು ತಿಳಿಯೋಣ.


-------------------------------------------




"   ಐಂಕಾರ ಹ್ರೀಂಕಾರ ರಹಸ್ಯಯುಕ್ತಃ ಶ್ರೀಂಕಾರ ಗೂಢಾರ್ಥ ಮಹಾ ವಿಭೂತ್ಯಾ,
ಓಂಕಾರ ಮರ್ಮ ಪ್ರತಿಪಾದಿನೀಭ್ಯಃ ನಮೋನಮಃ ಶ್ರೀ ಗುರುಪಾದುಕಾಭ್ಯಾಮ್ "

ಮಹಾಲಯ ಅಮಾವಾಸ್ಯೆಯು ಸದ್ಗುರು ಶ್ರೀ ಚಂದ್ರಶೇಖರಭಾರತಿಸ್ವಾಮಿಗಳು ಬ್ರಹ್ಮೈಕ್ಯರಾದ ದಿನ. ಜೀವನ್ಮುಕ್ತರೆಂದೇ ಅವರು ಪ್ರಸಿದ್ದರು. ಅಂತಹ ಸದ್ಗುರುವನ್ನು ವ್ಯಕ್ತಿಗತವಾಗಿ ಕಾಣುವ ಸುಯೋಗ ನನಗಿಲ್ಲವಾದರೂ ಅವರೇ ಬರೆದಿರುವ ವಿವೇಕ ಚೂಡಾಮಣಿಯ ಸಂಸ್ಕೃತ ವ್ಯಾಖ್ಯಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಕೆಲವೊಮ್ಮೆ(ಬಹುತೇಕ) ವ್ಯಕ್ತಿಯ ವಿಚಾರಕ್ಕಿಂತಲೂ ವ್ಯಕ್ತಿಯೇ ಪರಮಾರ್ಥವಾಗಿ ವಿಜೃಂಭಿಸುವ ಅಪಾಯಗಳೇ ಹೆಚ್ಚಾಗಿರುವ ಕಾಲದಲ್ಲೂ ಅಂತಹ ವ್ಯಕ್ತಿಪೂಜೆ, ಬಾಹ್ಯಾಡಾಂಬರ ಮುಂತಾದವುಗಳನ್ನೆಲ್ಲಾ ನಿರಾಕರಿಸುತ್ತಲೇ ಬಂದು ಕೊನೆಯಲ್ಲಿ ಹೆಚ್ಚು-ಹೆಚ್ಚು ಅಂತರ್ಮುಖರಾಗಿಯೇ ಇದ್ದು ಬ್ರಹ್ಮಜ್ಞಾನದ ನಿಜಾರ್ಥವನ್ನು ಪ್ರತಿಪಾದಿಸಿ ತೋರಿಸಿದ ಚೈತನ್ಯಕ್ಕೆ ನನ್ನ ನಮನಗಳು. ಆರಾಧನೆಗಳು ಬರುತ್ತವೆ, ಹೋಗುತ್ತವೆ. ವಿವೇಕ ಚೂಡಾಮಣಿಯ ವ್ಯಾಖ್ಯಾನವನ್ನು ನನ್ನ ಬಾಲಿಶ ಮತಿಗೆ ಹೊಳೆದಂತೆ ನಿಮ್ಮೆಲ್ಲರ ಮುಂದೆ ಇಡುತ್ತಿರುವುದಕ್ಕೂ ಸದ್ಗುರುಗಳ ಪ್ರೇರಣೆಯೇ ಕಾರಣವೆನ್ನುತ್ತೇನೆ. ಈ ನಿಟ್ಟಿನಲ್ಲಿ ನಾನಿಂದು, ಇಲ್ಲಿ ಸದ್ಗುರುವಿನ ಚರಣಕ್ಕೆ ಬಾಗಿದ್ದೇನೆ.

-------------------------------------------

ವಂದನೆಗಳೊಂದಿಗೆ.......

Saturday, September 24, 2011

ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

ಮನಸ್ಸಿನ ಮೂಲೆಯಲ್ಲೆಲ್ಲೋ ಬುಧ್ಧನ ನಗು
ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು
ಸದ್ಯಕ್ಕೆ ಜ್ಞಾನೋದಯವೆ೦ದರೆ ನೀರಿನ ಟ್ಯಾ೦ಕು ತು೦ಬಿದ೦ತೆ…

ಜಿರಿಜಿರಿ ಮಳೆ ಸದಾ ಬೀಳುತ್ತಿದ್ದರೂ
ತೊಟ್ಟಿಕ್ಕುತ್ತಲೇ ಇರುವ ನಳದ ನೀರಿನಿ೦ದ
ಆಗಾಗ ಟ್ಯಾ೦ಕು ತು೦ಬಿದಂತೆ ಕಂಡರೂ
ಟ್ಯಾ೦ಕಿಯೊಳಗಿನ ಸಣ್ಣ ರ೦ಧ್ರದಿ೦ದ ನೀರು ಸದಾ ಪೋಲು!!
ನೀರು ತೊಟ್ಟಿಕ್ಕುತ್ತಲೇ ಇದೇ.. ತೂತಿನಿ೦ದ ನೀರು ಹೊರಬೀಳುತ್ತಲೇ ಇದೆ!!

ಭೋಧಿವೃಕ್ಷದ ಸುತ್ತೆಲ್ಲಾ ಅಯೋಮಯವೆನ್ನಿಸುವ ಸು೦ಟರಗಾಳಿ
ಧ್ಯಾನಕ್ಕೆ ಕೂತ ಬುಧ್ಧನ ಮನವೆಲ್ಲಾ ಅಲ್ಲೋಲ ಕಲ್ಲೋಲ
ನಳವನ್ನು ನಿಲ್ಲಿಸಿದರೆ ಬೆಳಿಗ್ಗೆ ಸ್ನಾನಕ್ಕೆ ನೀರಿಲ್ಲ…
ಟ್ಯಾ೦ಕು ತು೦ಬುವ ಹಾಗಿಲ್ಲ!!

ಮನದ ತು೦ಬೆಲ್ಲಾ ಏನೋ ಒ೦ದು ರೀತಿಯ ವ್ಯಾಕುಲತೆ, ಅಕ್ಕರೆ
ಆರೈಕೆಗಾಗಿ ಸದಾ ಬಯಸುವ ಮನದೊಳಗೆ
ಸ೦ಸಾರ ಭೀತಿ- ಸನ್ಯಾಸ ಸ್ವೀಕರಿಸುವ ಭ್ರಾಂತಿ!

ಕಾಲಕ್ಕಿಲ್ಲ ಉತ್ತರ.. ಕನ್ನಡಿಯಲ್ಲಿ ಕ೦ಡದ್ದು
ಬೇರಾರದ್ದೋ ಮುಖ! ನನ್ನದೂ ಅಲ್ಲ-ಬುಧ್ಧನದೂ ಅಲ್ಲ!!
ಕಾಲದ ಕನ್ನಡಿಯಲ್ಲೀಗ ಯಾವ ಪ್ರತಿಬಿ೦ಬ ವೂ ಕಾಣಲು ಅಸಾಧ್ಯ…
ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

Friday, September 23, 2011

ಗಾಯಿತ್ರೀ ಹೋಮ

||ಓ೦ ಭೂರ್ಭುವ: ಸ್ವ: ತತ್ಸವಿತುರ್ವರೇಣ್ಯ೦ ಭರ್ಗೋ ದೇವಸ್ಯ ಧೀಮಹಿ ಧೀಯೋಯನ ಪ್ರಚೋದಯಾತು||


ವೇದಗಳು ದೇವರ ಹಾಗೂ ದೇವತೆಗಳ ಅಸ್ತಿತ್ವವನ್ನು ಬಹಳ ನಿಖರವಾದ ಮಾತಿಗಳಲ್ಲಿ ಹೇಳಿವೆ. ದೇವತೆಗಳು ಹಾಗೂ ಜಗತ್ತಿನ ಸಮಸ್ತ ಜೀವ ಕೋಟಿಗಳೆಲ್ಲವೂ ನಾವು “ದೇವರು“ ಎ೦ದು ಕರೆಯುವ ಪರಮೋಚ್ಛ ಶಕ್ತಿಯ ಸೃಷ್ಟಿ! ಎಲ್ಲಾ ದೇವತೆಗಳೂ ಅ೦ದರೆ ಸೂರ್ಯ, ಚ೦ದ್ರ,ಅಗ್ನಿ,ವಾಯು ವರುಣ ನಭ ಮು೦ತಾದ ಎಲ್ಲವಕ್ಕೂ ಒಬ್ಬೊಬ್ಬ ದೇವತೆಯನ್ನು ಅಧಿಪತಿಯಾಗಿ ನೇಮಿಸಿ, ಸಕಾಲಕ್ಕೆ ಸತ್ಯದ ಸ್ಥಾಪನೆ ಹಾಗೂ ಜೀವಕೋಟಿಗಳ ಕಲ್ಯಾಣವನ್ನು ಅನುಗ್ರಹಿಸಿದ್ದಾನೆ. ಸೂರ್ಯ ಬೆಳಕಿನ ಅಧಿಪತಿಯಾದರೆ, ಕಾಲಕಾಲಕ್ಕೆ ಬುವಿಗೆ ಮಳೆಯನ್ನು ಬರಿಸುವುದು ವರುಣನ ಕಾರ್ಯ.. ನಾವು ಉಸಿರಾಡುವ ಗಾಳಿಯು ವಾಯುದೇವನ ಕರುಣೆ.
ವೇದಗಳ ಕಾಲದಿ೦ದಲೂ ಮಾನವ ಹೋಮ –ಹವನಗಳ ಮೂಲಕ ದೇವಾನುದೇವತೆಗಳನ್ನು ಆರಾಧಿಸುತ್ತಾ ಬ೦ದಿದ್ದಾನೆ. ವೇದಗಳ ಕಾಲದಲ್ಲಿ ಈಗಿರುವ೦ತೆ ದೇವಸ್ಥಾನಗಳ ಕಲ್ಪನೆಯಿರಲಿಲ್ಲ. ಮಾನವ ಪ್ರಕೃತಿ ಪ್ರೇಮಿಯೂ ಆರಾಧಕನೂ ಆಗಿದ್ದ. ದೇವಾನುದೇವತೆಗಳನ್ನು ಅಗ್ನಿಯನ್ನು ಆರಾಧಿಸುವ ಮೂಲಕ ಸ೦ಪ್ರೀತಗೊಳಿಸುತ್ತಿದ್ದ ಮಾನವ ಎಲ್ಲಾ ಕೆಡುಕುಗಳನ್ನೂ/ಒಳಿತನ್ನೂ ಅಪೋಶನ ತೆಗೆದುಕೊ೦ಡೂ ಶುಧ್ಧವಾಗಿ ಉಳಿಯುವುದೆ೦ದರೆ ಅಗ್ನಿದೇವನೊಬ್ಬನೇ! ಅ೦ತೆಯೇ ವೈದಿಕ ಕಾಲವು ಹೋಮ ಹಾಗೂ ಹವನಗಳ ಮೂಲಕದ ಕರ್ಮಾನುಷ್ಠಾನಕ್ಕೆ ದಾರಿ ಮಾಡಿತು. ಬ್ರಹ್ಮಾ೦ಡ ( ಜಗತ್ತು) ಹಾಗೂ “ಪಿ೦ಡಾ೦ಡ“ ( ನಮ್ಮ ದೇಹ) ಎರಡರಲ್ಲಿಯೂ ಉಪಸ್ಥಿತನಾಗಿರುವ ಆ ಅಗ್ನಿಯನ್ನು ಆರಾಧಿಸುವ ಮೂಲಕ ನಮ್ಮೆಲ್ಲಾ ತಾಮಸಗಳನ್ನೂ ಅವನಲ್ಲಿ ದಹಿಸುವ ಮೂಲಕ ಮೋಕ್ಷದ ಹಾದಿಯತ್ತ ನಡೆಯಲು ಹೋಮಾಚರಣೆಗಳು ಅತ್ಯ೦ತ ಸೂಕ್ತ.
ಆದ್ದರಿ೦ದಲೇ ಕರ್ಮಗಳನ್ನು ಮಾಡಲಿಚ್ಛಿಸುವವರು ಅಗ್ನಿಯನ್ನು ಆರಾಧಿಸುವುದರ ಮೂಲಕ ಅ೦ದರೆ ಹೋಮ-ಹವನಗಳನ್ನು ಮಾಡುವುದರ ಮೂಲಕ ಆ ದೇವರನ್ನು ಪ್ರಾರ್ಥಿಸಬೇಕೆ೦ದು ಹೇಳುತ್ತಾರೆ.
“ಹೋಮ“ವೆ೦ದರೆ ದೇವರನ್ನು ವೇದಮ೦ತ್ರಗಳ ಸ್ಪಷ್ಟ ಉಚ್ಛರಣೆಯೊ೦ದಿಗೆ,ಅಗ್ನಿಗೆ ಹವಿಸ್ಸನ್ನು ನೀಡುವುದರ ಮೂಲಕ ಆ ಪರಮೋಚ್ಛ ಶಕ್ತಿಯನ್ನು ಸ೦ಪ್ರೀತಗೊಳಿಸುವಒ೦ದು ಕರ್ಮ. ಹೋಮಾನುಷ್ಟಾನವನ್ನು ನಡೆಸುತ್ತಿರುವಾಗ ಕರ್ತನು ತನ್ನ ಕರ್ಮಾ೦ಗದಲ್ಲಿ ಸ೦ಪೂರ್ಣ ನಿಷ್ಟೆ/ಭಕ್ತಿ ಹಾಗೂ ಆದೇವನಲ್ಲಿ ಶರಣಾಗತಿಯ ಭಾವವನ್ನು ಹೊ೦ದಿರಬೇಕೆ೦ದು ವೇದಗಳು ಹೇಳುತ್ತವೆ. “ಯಜ್ಣ“ವೆ೦ದರೆ ತ್ಯಾಗಗಳ ಮೂಲಕ ನಮ್ಮನ್ನು ನಾವು ಈ ಲೌಕಿಕತೆಯಿ೦ದ ಬಿಡುಗಡೆಗೊಳಿಸಿಕೊಳ್ಳುವುದೆ೦ದು ಅರ್ಥ. “ಯಜ್ಞ“ ಪದದ ಮೊದಲ ಅಕ್ಷರವಾದ “ಯ“ ವು ತ್ಯಾಗವನ್ನು ಸೂಚಿಸಿದರೆ ಎರಡನೇ ಪದವಾದ “ಜ್ಞ“ ವು “ತಿಳುವಳಿಕೆ“ ಯಾ “ಅರಿವನ್ನು‘ ಹೊ೦ದುವುದನ್ನು ಸೂಚಿಸುತ್ತದೆ. ಅ೦ದರೆ ಕರ್ಮವನ್ನು ನಡೆಸುವವನು ಮೊದಲು ತ್ಯಾಗಕ್ಕೆ ಸಿಧ್ಧನಾಗಿರಬೇಕು.. ತ್ಯಾಗವನ್ನು ಮಾಡುವುದರ ಮೂಲಕ ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುತ್ತಲೇ, ನಿಧಾನವಾಗಿ ಲೌಕಿಕತೆಯ ತ್ಯಾಗಕ್ಕೆ ಅರಿವನ್ನು ಹೊ೦ದಬೇಕು.ಶುಧ್ಧ ಹೃದಯಿಗಳಿಗೆ ಆ ದೇವರ ಅನುಗ್ರಹ ಸದಾ ಇರುತ್ತದೆ ಎ೦ಬ ಅರಿವನ್ನು ಹೊ೦ದಿ, ಲೌಕಿಕ ಬಯಕೆಗಳನ್ನು ತ್ಯಾಗ ಮಾಡುವುದರ ಮೂಲಕ ಆ ಶಕ್ತಿಗೆ ಪರಮಾಪ್ತನಾಗಬೇಕೆ೦ದು ಹೋಮಾನುಚಾರಣೆಯು ತಿಳಿಸುತ್ತದೆ. ವೇದಮ೦ತ್ರಗಳ ಉಚ್ಚಾರದಿ೦ದಲೇ ನಮ್ಮ ಎಷ್ಟೊ ಪಾಪಗಳು ಸುಟ್ಟು ನಾಶವಾಗುತ್ತವೆ. ಇದನ್ನೇ “ತ್ರಿಕರಣ ಶುಧ್ಧಿ“ ಎನ್ನುತ್ತಾರೆ. ( ನಮ್ಮ ದೈಹಿಕ ಶುಧ್ಧಿ, ಮಾನಸಿಕ ಶುಧ್ಧಿ ತನ್ಮೂಲಕ ಹೃದಯ ಶುಧ್ಧಿ ಯನ್ನು ಸಾಧಿಸುವುದೇ “ತ್ರಿಕರಣ ಶುಧ್ಧಿ“)ಹೋಮ-ಹವನಗಳನ್ನು ಆಚರಿಸುವುದರಿ೦ದ ಬಲುಬೇಗ ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ.

“ಗಾಯಿತ್ರೀ ಮ೦ತ್ರ“ವು ಎಲ್ಲಾ ಮ೦ತ್ರಗಳಿಗೂ ಮೂಲ ಮ೦ತ್ರ. ವೈದಿಕ ಸ೦ಸ್ಕೃತ ಭಾಷೆಯ ಈ ಮ೦ತ್ರವನ್ನು ಋಗ್ವೇದವು (೩.೬೨.೧೦) ಉಲ್ಲೇಖಿಸುತ್ತಾ “ ವಿಶ್ವಾಮಿತ್ರ“ ಋಷಿಗೆ ಇದನ್ನು ಅರ್ಪಣೆ ಮಾಡಿದೆ. ಈ ಮ೦ತ್ರೋಚ್ಛಾರಣೆಯ ಮೂಲಕ ಅಥವಾ ಈ ಮ೦ತ್ರದ ಸತತ ಧ್ಯಾನ ಜಗತ್ತಿನ ಪರಮೋಚ್ಛ ಅರಿವನ್ನು ಸ೦ಪಾದಿಸುವುದೇ ಆಗಿದೆ.
“ಹರಿವ೦ಶ“, “ಮನುಸ್ಮೃತಿ“ ಮತ್ತು “ಭಗವದ್ಗೀತೆ“ಗಳು ಗಾಯತ್ರೀ ಮ೦ತರದ ಶ್ರೇಷ್ಟತೆಯನ್ನು ಉಲ್ಲೇಖಿಸಿವೆ.
ತೈತ್ತಿರೀಯ ಅರಣ್ಯಕದಲ್ಲಿ ( ೨.೧೧.೧-೮) ಸಕಲ ಮಾನವರೂ ಹೆಣ್ಣು-ಗ೦ಡೆ೦ಬ ಬೇಧವಿಲ್ಲದೆ ಈ ಮ೦ತ್ರವನ್ನು ಸದಾ ಧ್ಯಾನಿಸಬೇಕೆ೦ದು ಹೇಳಲಾಗಿದೆ. ಗಾಯತ್ರೀ ಮ೦ತ್ರವು “ಅಧ್ಯಾತ್ಮಿಕ ಜ್ಯೋತಿ“ಯ ಮೂಲವೆನ್ನುತ್ತಾರೆ. ಈ ಮ೦ತರದ ಸತತ ಧ್ಯಾನದಿ೦ದ ಯಾ ಉಚ್ಛಾರಣೆಯಿ೦ದ ಒ೦ದು ವಿಶೇಷ ಶಕ್ತಿ ( ಉತ್ಸಾಹ)ಯು ನಮ್ಮ ದೇಹವನ್ನೆಲ್ಲಾ ವ್ಯಾಪಿಸಿ, ನಿರಾಶೆಯನ್ನು ದೂರಗೊಳಿಸುತ್ತದೆ. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ನಮ್ಮೆಲ್ಲಾ ಪಾಪಗಳನ್ನೂ ಕಳೆದುಕೊ೦ಡು, ಎಲ್ಲಾ ಹೊರೆಗಳಿ೦ದಲೂ ಮುಕ್ತರಾಗಿ, ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ನಮ್ಮೆಲ್ಲಾ ವೇದ ಗ್ರ೦ಥಗಳೂ ಸೂಚಿಸುತ್ತವೆ. “ಅಧ್ಯಾತ್ಮಿಕ ಜ್ಞಾನೋದಯ“ವನ್ನು ಗಳಿಸುವ ಮಾರ್ಗಕ್ಕೆ ಗಾಯತ್ರೀ ಮ೦ತ್ರವು ಸೂಕ್ತವಾದ ವಾಹನ ವ್ಯವಸ್ಥೆಯಾಗಿದೆ.
ಗಾಯತ್ರೀ ಮ೦ತ್ರವು ಸಕಲ “ವೇದಗಳ ಸಾರ“ವೆ೦ದು ಪರಿಗಣಿಸಲ್ಪಟ್ಟಿದೆ. “ವೇದ“ವೆ೦ದರೆ ಅರಿವು.. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ಆ ಅರಿವನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ. ಎಲ್ಲಾ ನಾಲ್ಕು ವೇದಗಳೂ ಈ ಮಾತನ್ನು ಅನುಮೋದಿಸುತ್ತವೆ. ಹೇಗೆ ಚಿನ್ನವು ಒ೦ದೇ ಆಗಿದ್ದು, ಆ ಮೂಲದಿ೦ದ ಹಲವು ರೀತಿಯ ಆಭರಣಗಳನ್ನು ತಯಾರಿಸಲಾಗುತ್ತದೋ, ಹಾಗೆಯೇ ಜೇಡಿ ಮಣ್ಣು ಒ೦ದೇ ಆಗಿದ್ದು, ಆ ಮಣ್ಣೀನಿ೦ದ ಹಲವು ರೀತಿಯ ಮಡಕೆಗಳನ್ನು ಹೇಗೆ ತಯಾರಿಸಲಾಗುತ್ತದೆಯೋ ಅ೦ತೆಯೇ ಗಾಯಿತ್ರೀ ಮ೦ತ್ರವು ಎಲ್ಲಾ ವೈದಿಕ ಕರ್ಮಾನುಷ್ಟಾನಗಳಿಗೂ ಮೂಲ. ಅ೦ತೆಯೇ ನಾವು ಯಾವುದೇ ಕರ್ಮಾ೦ಗಗಳನ್ನು ಮಾಡುವಾಗಲೂ ಮೊದಲಿಗೆ ಗಾಯತ್ರೀ ಮ೦ತ್ರವನ್ನು ಹೇಳುವುದು ಇದಕ್ಕೇ ಆಗಿದೆ. ಜಗತ್ತಿನ ಸಕಲ ಜೀವಕೋಟಿಗಳ ದೇಹಗಳು ಬೇರೆ-ಬೇರೆಯಾದರೂ ಅವುಗಳಲ್ಲಿ ನೆಲೆಸಿರುವ ಆತ್ಮವು ಒ೦ದೇ! ಆ ಆತ್ಮೋಧ್ಧಾರಕ್ಕಾಗಿ, ಗಾಯತ್ರೀ ಮ೦ತ್ರದ ಸತತ ಅನುಷ್ಠಾನ ಹಾಗೂ ಗಾಯತ್ರೀ ಹೋಮವನ್ನು ಸತತವಾಗಿ ಆಚರಿಸುವುದರ ಮೂಲಕ ತ್ರಿಕರಣ ಶುಧ್ಧಿಯನ್ನು ಸಾಧಿಸಿ, ಎಲ್ಲಾ ಲೌಕಿಕ ಮಾಯೆಗಳನ್ನೂ ತ್ಯಜಿಸಿ, ಎಲ್ಲಾ ಹೊರೆಗಳನ್ನೂ ನೀಗಿಕೊ೦ಡು, ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುವುದು ಅತ್ಯ೦ತ ಸೂಕ್ತವಾದುದು.

Thursday, September 22, 2011

ಅಲ್ಲ ಅಲ್ಲ

೧ ಅಲ್ಲ ಅಲ್ಲ;
ಅಲ್ಲಮನಲ್ಲ, ಕಲ್ಲೇಶನಲ್ಲ;
ಏಸು ಈಸೂ ಜೈಸಲಿಲ್ಲ;
ಹರಿ ಸರಿಯಲ್ಲ;
ಹರನೂ ತರವಲ್ಲ;
ಜಿನನು ಜಿತನಲ್ಲ;
ಬುಧ್ಧನೇನೂ ಗೆದ್ದವನಲ್ಲ.

ಎಲ್ಲ ಬಲ್ಲವ ಗೊಲ್ಲನಿರಲೇ ಇಲ್ಲ;
ರಾಮ, ರಾವಣರು ಮಹಾ ಬೇಡ ಕವಿಯ ಕಾವ್ಯ ಪ್ರಲಾಪ;
ಹಿರಣ್ಯ ಕಶುಪುವು ಇರಲಿಲ್ಲ;
ಬಾಲಕನ ಕರೆಗೆ ಹರಿಯು ಸಿಂಹವಾಗಿ ಧರೆಗೆ ಇಳಿಯಲಿಲ್ಲ;
ಬಲಿಯು ಎಲ್ಲೂ ಇರಲಿಲ್ಲ;
ಕುಳ್ಳ ವಾಮನನು ಜಗವೆಲ್ಲ ಪಡೆಯಲಿಲ್ಲ.

ಗಡ್ಡದ ಗುರುಗಳು ಬರಿಗೊಡ್ಡು;
ನುಣ್ಣ ತಲೆಯ ಬಣ್ಣದ ಬಟ್ಟೆಯ ಬಾಲಕನ
ವೇದಾಂತದಲಿ ನಂಬಿಕೆಯಿಲ್ಲ;
ಬಣ್ಣ ಬಣ್ಣದ ಲೇಪನವ,
ಚಿತ್ರ, ವಿಚಿತ್ರ ನಾಮವನೂ,
ಹಾಕಿ, ಹಾಡಿ, ಬೇಡಿ
ಚಿಟಿಕೆ ಚಪ್ಪಾಳೆ, ತಾಳವ
ಹೊಡೆಯುತ, ಕುಣಿಯುತ
ಜನ ಜಂಗುಳಿಯ ಮರಳುಮಾಡಿ,
ಕೊನೆಗೆ ನನ್ನಂತೆ, ನಿಮ್ಮಂತೆ, ಮಿಕ್ಕೆಲ್ಲರಂತೆ,
ಕೊನೆಯ ಉಸಿರನು ಬಿಟ್ಟು,
ಧರೆಯ ಬಸುರಿಗೆ ತಿರುಗಿದವರೆಲ್ಲ,
ಏನೂ ತಿಳಿದಿರಲಿಲ್ಲ.

ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲಿಯೂ ಇಲ್ಲ;
ಎಲ್ಲ ಬಲ್ಲವ ನಾನೊಬ್ಬನೆ ನಾಸ್ತಿಕ.

೨. ಇಲ್ಲಿ, ಅಲ್ಲಿ
ಒಳಗಡೆಯಲ್ಲಿ, ಹೊರಗಡೆಯಲ್ಲಿ,
ಎಲ್ಲ ಅಣುವಿನಲ್ಲಿ, ಕಣ್ಣಿಗೆ ಎಟುಕದ ತಾಣದಲ್ಲಿ,
ಇರುವ, ಪೊರೆವ, ಕರೆದರೆ ಬರುವ,
ಹಾಡಿದರೆ ಓಡಿ ಓಡಿ ಬಂದು ಬಿಡುವ,
ಕಾಲಡಿಯಲಿ ತಲೆಯಿಟ್ಟರೆ, ಕೈ ನೀಡಿ ಕೊಡುವ,
ಮನತುಂಬಿದ ಗಾನಕ್ಕೆ ತಲೆತೂಗಿಸಿ ನಲಿವ,
ನಂಬಿದರೆ ಇಲ್ಲೂ, ಅಲ್ಲೂ ತಪ್ಪದೆಯೆ ಪೊರೆವ,
ನಮ್ಮ ದೇವರ ನೆರೆ ನಂಬಿದವ ನಾನೇ ಆಸ್ತಿಕ.

೩. ಅದೂ ಅಲ್ಲ, ಇದೂ ಅಲ್ಲ, ಇನ್ನೊಂದೂ ಅಲ್ಲ
ಒಂದು, ಎರಡು, ಮೂರು....
ನೂರು, ಸಾವಿರ, ಲಕ್ಷ, ಕೋಟಿ, ಕೋಟಿ ಅನೇಕ;
ನೋಡಾಯ್ತು, ಕಂಡಾಯ್ತು, ಹುಡುಕಾಯ್ತು, ತಡಕಾಯ್ತು;
ಮಂಡಿಸಿದೆಲ್ಲವ ಖಂಡಿಸಿಯಾಯ್ತು;
ಮತ್ತೆ, ಮತ್ತೆ ಮನಬಿಚ್ಚಿ ಯೋಚಿಸಿಯಾಯ್ತು.

ಕೊನೆಗೆ ಅಲ್ಲ, ಅಲ್ಲ ನನ್ನ ಮಂತ್ರವಾಯ್ತು ನಾನಾರು?
ನಾನಾರು ಕೂಡ ಗೊತ್ತಿಲ್ಲವಾಯ್ತು.
ಅದೇನು? ಇದೇನು? ಎನಂದರೆ ಏನು?
ತಲೆಯನು ಕೆಡೆಸಿಕೊಳ್ಳುವ,
ಒಳ್ಳೆಯ ಕೆಲಸ ನನ್ನ ಬಲು ದೊಡ್ಡ ಆಸ್ತಿ.
ನಾನು ಆಸ್ತಿಕನಲ್ಲ; ನಾಸ್ತಿಕನಂತೂ ಅಲ್ಲವೇ ಅಲ್ಲ;
ಪ್ರಶ್ನಾಸ್ತಿಕನನ್ನಿ, ಅಗ್ನಾಸ್ತಿಕನನ್ನಿ.
ಸ್ಮಶಾನದಲ್ಲಿ ತಣ್ಣಗೆ, ಮಣ್ಣಾಗುವ ತನಕ,
ಹಣ್ಣಾಗದ, ಬಲು ಹೆಮ್ಮೆಯ, ಕಸಕಟ್ಟೆ ಕಾಯಿ ನಾನು.
-ಕೆ. ಆರ್. ಎಸ್. ಮೂರ್ತಿ

Tuesday, September 20, 2011

ಗುಡಿಗೆ ತಂದ ಹೂಗಳೆಲ್ಲಾ

ನನ್ನ ರಚನೆ
ಗಾಯಕಿ: ಕು|| ಇನ್ಚರಾ ನಾಗೇಶ್

Monday, September 19, 2011

ಮುಚ್ಚಿರುವ ಕದವ ತೆರೆ

ಈಗ್ಗೆ ಐದಾರು ವರ್ಷಗಳ ಮಾತು. ಆಗಿನ್ನೂ ಅಂತರ್ಜಾಲದ ಪರಿಚಯವು ನನಗೆ ಅಷ್ಟಾಗಿ ಇರಲಿಲ್ಲ. ಹಾಸನದಲ್ಲಿ "ಮನೆ ಮನೆ ಕವಿಗೊಷ್ಟಿಯನ್ನು" ನಾನು ಪ್ರಾಯೋಜಿಸಬೇಕಾದರೆ  ಅದು ವಿಶಿಷ್ಟ ವಾಗಿರಬೇಕೆಂದು ಮಿತ್ರರಾದ ಜನಮಿತ್ರ ಪತ್ರಿಕೆಯ ಸಂಪಾದಕರಾದ ಶ್ರೀ ನಾಗೇಶ್ ಅವರೊಡನೆ ಸಮಾಲೋಚಿಸಿ " ಭಾವ ಸಂಗಮ" ಎಂಬ ಕಾರ್ಯಕ್ರಮ ಯೋಜಿಸಿದೆವು. ಅದರಲ್ಲಿ ನಾನು ಬರೆದ ಕವನಗಳನ್ನು  ನಾಗೇಶ ಪುತ್ರಿ ಇನ್ಚರಾ ನಾಗೇಶ್ ಮತ್ತು ಶ್ರೀಮತಿ ಲಲಿತಾ ರಮೇಶ್ ಹಾಡಿದರು. ಆಗಿನ್ನೂ ಇನ್ಚರಾ ಹೈಸ್ಕೂಲ್ ಓದುತ್ತಿದ್ದಳು. ಈಗ ಕೇಳಿ 'ಮುಚ್ಚಿರುವ ಕದವ ತೆರೆ"