Pages

Sunday, January 9, 2011

ವೇದ ದೀವಿಗೆ


ವೇದ ದೀವಿಗೆ

ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ

ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ

ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ

ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ

ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ

ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ

ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ |
ಜಗದಮಿತ್ರ


- ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ’ಜಗದಮಿತ್ರನ ಕಗ್ಗ ’ ಸಂಕಲನದಿಂದ



Saturday, January 8, 2011

ಊಟವನ್ನು ಏಕೆ ಮಾಡಬೇಕು?ಯಾವಾಗ ಮಾಡಬೇಕು?ಏನು ಸೇವಿಸಬೇಕು? Part-2

(ಮುಂದುವರೆದಿದೆ)
ಪ್ರಕೃತಿಯು ಮನುಷ್ಯರಿಗಾಗಿ ಸಿದ್ಧಪಡಿಸಿರುವ ಆಹಾರವು ಅತ್ಯಂತ ಸತ್ವಭರಿತ, ಶ್ರೇಷ್ಠ. ಅವೇ ಹಣ್ಣುಗಳು. ಮಾನವರು ಶರೀರರಚನೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಹೇಳುವುದಾದರೆ ಬರೀ Vegetarian ಅಷ್ಟೇ ಅಲ್ಲ, Frutarian! Dry Fruits ಮತ್ತು Nuts ಕೂಡ ಇದರೊಂದಿಗೆ ಸೇರುತ್ತದೆ.
ಆ ಹಣ್ಣುಗಳನ್ನು ಬೆರೆಸುವ, ಅವಕ್ಕೆ ಸ್ವಲ್ಪ ಹಾಲು, ಬೆಲ್ಲ, ಜೇನು, ಕಾಯಿತುರಿ ಇತ್ಯಾದಿಗಳನ್ನು ಬೆರೆಸಿ/ಸಂಸ್ಕರಿಸಿ ಬಳಸಿದರೂ Good. ಮೊಳಕೆ ಬರಿಸಿ ಸೇವಿಸಿದರೂ Good. ಆದರೆ, ಸತ್ವಭರಿತದಲ್ಲೇ ಎರಡನೆಯ ದರ್ಜೆ.
ಆಹಾರವನ್ನು ಬೇಯಿಸಿ ತಿನ್ನುವುದು ಮುಂದಿನ ಕೆಳದರ್ಜೆ. ಈ ದರ್ಜೆಯಲ್ಲಿ ಬೇಯಿಸಿರುವುದಷ್ಟೇ. ಆದರೆ ಸಪ್ಪೆ. ಅಥವಾ ಅತ್ಯಂತ ಸ್ವಲ್ಪ ಉಪ್ಪು, ಹುಳಿ, ಖಾರ.
ಇಲ್ಲಿಂದ ಮುಂದೆ ಸೇವಿಸಲು ಅರ್ಹವಾದದ್ದಿಲ್ಲ. ಅವುಗಳ ವಿವರ ಹೀಗಿದೆ.
ಬೇಯಿಸಿದ ಆಹಾರ. ಯದ್ವಾತದ್ವಾ ಉಪ್ಪು, ಹುಳಿ, ಖಾರಗಳನ್ನು ಹಾಕಿ ತಿನ್ನುವುದು. (ಆದರೂ ಪರವಾಗಿಲ್ಲ! ಕಾಲಾನಂತರದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದಾಗ ಬಿಡಲೇಬೇಕಾಗುತ್ತದೆ!!)
ಮುಂದಿನದು ನಿಷಿದ್ಧ ಆಹಾರ.
ಹಿಂಸೆಯ ಪರಿಣಾಮವಾಗಿ ಬರುವ ಮಾಂಸಾಹಾರ.
(ಈ ಬಗ್ಗೆ ವ್ಯಾಪಕ ಚರ್ಚೆ ಯಾವಾಗಲೂ ನಡೆಯುತ್ತಿರುತ್ತದೆ. ಮಾಂಸಾಹಾರವನ್ನು ಸಮರ್ಥಿಸುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮ ನಾಲಿಗೆಗೆ/ಚಪಲಕ್ಕೆ ಸಿಲುಕಿರುತ್ತಾರೆ. ಹೃದಯವಾಗಲೀ, ಮಿದುಳಾಗಲೀ ಕೆಲಸ ಮಾಡುತ್ತಿರುವುದಿಲ್ಲ!)
ಇದರ ಬಗ್ಗೆ ಮತ್ತೊಮ್ಮೆ ವ್ಯಾಪಕವಾಗಿ ಚಿಂತಿಸೋಣ.
Golden Rule ಹೀಗಿದೆ -
ಪ್ರಕೃತಿಗೆ ಎಷ್ಟು ಹತ್ತಿರವಾಗಿರುತ್ತೇವೋ, ಸಂಸ್ಕರಣ ಎಷ್ಟು ಕಡಿಮೆಯಿರುತ್ತದೋ (Zero ಕೂಡ ಆಗಬಹುದು) ಅಷ್ಟೂ ಆ ಆಹಾರ ಸೇವಿಸಲು ಹೆಚ್ಚು ಹೆಚ್ಚು ಯೋಗ್ಯವಾಗಿರುತ್ತದೆ.
ಮುಂದಿನ ಪ್ರಶ್ನೆ ಹೇಗೆ ಸೇವಿಸಬೇಕು?
(ಮುಂದುವರೆಯುವುದು)
Sudhakarasharma

Thursday, January 6, 2011

ಮೊರೆ

ರಚನೆ: ಕವಿ ನಾಗರಾಜ್
ಗಾಯಕಿ: ಶ್ರೀಮತಿ ಲಲಿತಾರಮೇಶ್


ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿರಲಾಗಿ
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿ ಕೇಳಿ ನೇರಮಾರ್ಗದಿ ನಡೆದೆ
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ|
ಅರಿಗಳಾರರ ಬಂದಿ ದಿಕ್ಕೆಟ್ಟು ಕುಸಿದಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂದಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||



“ವೇದಸುಧೆ” ವಾರ್ಷಿಕೋತ್ಸವ


ಆತ್ಮೀಯ ವೇದಸುಧೆಯ ಅಭಿಮಾನಿ ಬಂಧುಗಳೇ, ನಮಸ್ತೆ,
    ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಇಲ್ಲಿದೆ. ದಯಮಾಡಿ ನಿಮ್ಮ  ಅಂಚೆಯ ವಿಳಾಸವನ್ನು ವೇದಸುಧೆಗೆ ಮೇಲ್ ಮಾಡಿದರೆ ಅಂಚೆಯ ಮೂಲಕ ಕೂಡ ನಿಮಗೆ ಆಮಂತ್ರಣ ಪತ್ರಿಕೆಯನ್ನು  ಕಳುಹಿಸಿಕೊಡಲಾಗುವುದು. ವಾರ್ಷಿಕೋತ್ಸವವು ಹಾಸನದಲ್ಲಿ ನಡೆಯುತ್ತಿರುವುದರಿಂದ ಈಗಾಗಲೇ ವೇದಸುಧೆಯ ಸಂಪರ್ಕದಲ್ಲಿರುವವರಿಗೆ  ಹಾಸನ ಬಹಳ ದೂರವೇನೂ ಆಗಲಾರದೆಂದು ಭಾವಿಸುವೆ.ಆದರೂ ಸಕಾಲಕ್ಕೆ ನೀವು ಬರಬೇಕಾದ್ದರಿಂದ ಕೆಳಗಿನ  ಕೆಲವು ಅಂಶಗಳನ್ನು ವೇದಸುಧೆಗೆ ಮೇಲ್ ಮೂಲಕ ತಿಳಿಸಿದರೆ ಸಾಧ್ಯವಾದಷ್ಟೂ ಉತ್ತಮ ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನಿಂದ ಹಾಗೂ ಶಿವಮೊಗ್ಗಗಳಿಂದ ಬರುವವರು  ನಿಮ್ಮೂರಿನ ಬಸ್ ನಿಲ್ದಾಣದಿಂದ ಮುಂಜಾನೆ 5.30 ಕ್ಕೆ ಬಸ್ ನಲ್ಲಿ ಹೊರಟರೆ  ಸಕಾಲದಲ್ಲಿ ಹಾಸನ ತಲುಪಬಹುದು. ಸ್ವಂತ ಕಾರ್ ನಲ್ಲಿ ಬರುವವರಿಗೆ ಮೂರುವರೆ ಇಂದ ನಾಲ್ಕು ಗಂಟೆ ಬೇಕಾಗಬಹುದು.
ಆಮಂತ್ರಣದಲ್ಲಿ ಕಾರ್ಯಕ್ರಮಗಳ ವಿವರ ಇದೆ.
ಇತರೆ ವ್ಯವಸ್ಥೆ ಗಳು:
* ಉಪಹಾರ: ಪ್ರಾತ: ಕಾಲ 8.30 ರಿಂದ 9.15
* ಚಹ/ಕಾಫೀ/ಬಾದಾಮಿ ಹಾಲು: ಕಾರ್ಯಕ್ರಮದ ನಡುವೆ ಬೆಳಿಗ್ಗೆ 11.00 ಕ್ಕೆ    

  ಮತ್ತು  ಮಧ್ಯಾಹ್ನ 4.00 ಕ್ಕೆ
* ಭೋಜನ: ಮಧ್ಯಾಹ್ನ 1.30 ರಿಂದ 2.30
* ಸಮಾರಂಭದ ಸ್ಥಳದಲ್ಲಿ ವೇದದ ಸಾಹಿತ್ಯಗಳು ಮಾರಾಟಕ್ಕೆ ಲಭ್ಯವಿರುತ್ತದೆ.
* ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಬೇಲೂರು, ಹಳೇಬೀಡು ಮತ್ತು ಶ್ರವಣ ಬೆಳಗೊಳ ಗಳನ್ನು ನೋಡಬಯಸುವವರಿಗೆ ಬಾಡಿಗೆ ಕಾರ್ ವ್ಯವಸ್ಥೆ ಬೇಕಾದರೆ ಮುಂಚಿತವಾಗಿ ತಿಳಿಸಿ.
* ಶನಿವಾರ ರಾತ್ರಿ ಬರುವವರಿಗೆ ಉಳಿಯುವ ಮತ್ತು ಊಟೋಪಚಾರದ ಸಾಮಾನ್ಯ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಹೋಟೆಲ್ ನಲ್ಲಿ ರೂಮ್ ಮಾಡಬಯಸುವವರು ಮುಂಚಿತವಾಗಿ ತಿಳಿಸಿದರೆ ಆರಕ್ಷಣೆ ಮಾಡಲಾಗುವುದು. 
----------------------------------------
*  ಹೆಸರು:
*  ಊರು:
*  ಮೊಬೈಲ್ ನಂಬರ್:
*  ನಿಮ್ಮೊಡನೆ ಎಷ್ಟು ಜನ ಬರುವರು?
*  ಯಾವ ಸಮಯಕ್ಕೆ ಹಾಸನ ತಲುಪುವಿರಿ?
*  29.1.2011 ರಂದು ರಾತ್ರಿ ಹಾಸನದಲ್ಲಿ  ವಸತಿ ವ್ಯವಸ್ಥೆ ಬೇಕೇ?
*  ನಿಮ್ಮ ಸ್ನೇಹಿತರುಗಳನ್ನು ಆಹ್ವಾನಿಸಲು ನಿಮಗೆ ಹೆಚ್ಚು ಆಮಂತ್ರಣ    
    ಪತ್ರಿಕೆಗಳು ಬೇಕೆ?





Tuesday, January 4, 2011

ವೇದಸುಧೆಯ ವಾರ್ಷಿಕೋತ್ಸವ ಸಿದ್ಧತೆಯಸಭೆಯ ಕೆಲವು ವೀಡಿಯೋ ಕ್ಲಿಪ್ ಗಳು

ವೇದಸುಧೆಯ ಅಭಿಮಾನಿಗಳೇ
ಮೊನ್ನೆ ಭಾನುವಾರ ಮಧ್ಯಾಹ್ನ ೪.೦೦ ಗಂಟೆಗೆ ಬೆಂಗಳೂರಿನ ವೇದಾಧ್ಯಾಯೀ ಸುಧಾಕರಶರ್ಮರ ಮನೆಯಲ್ಲಿ ವೇದಸುಧೆಯ ವಾರ್ಷಿಕೋತ್ಸವ ಸಿದ್ಧತೆಯ ಒಂದು ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಬೆಳ್ಳಾಲೆ ಗೋಪಿನಾಥ ರಾವ್ ಅವರು ವೇದಸುಧೆಯ ಅಭಿಮಾನಿಗಳಿಗಾಗಿ ಸಭೆಯ ಕೆಲವು ವೀಡಿಯೋ ಕ್ಲಿಪ್ ಗಳನ್ನು ಕಳುಹಿಸಿಕೊಟ್ಟಿರುತ್ತಾರೆ. ಸಭೆಯ ಪೂರ್ಣ ವಿವರವನ್ನು ನಾಳೆ ಪ್ರಕಟಿಸಲಾಗುವುದು.













Saturday, January 1, 2011

ಯೋಚಿಸಲೊ೦ದಿಷ್ಟು...೨೩

೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!
೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!
೩. ನಾವು ಏನು ಹೇಳುತ್ತೇವೆ ಎ೦ಬುದರಲ್ಲಿ ಯಾವುದೇ ಮಹತ್ವವಿಲ್ಲ. ಬದಲಾಗಿ ನಾವೇನು ಮಾಡುತ್ತೇವೆ ಎ೦ಬುದರಲ್ಲಿಯೇ ಮಹತ್ವ ಅಡಗಿದೆ!
೪. ನೈಜ ಕಲೆಯು ಕೇವಲ ವಸ್ತುವಿನ ಬಾಹ್ಯರೂಪವನ್ನು ಮಾತ್ರ ಗ್ರಹಿಸದೆ, ಅದರ ಆ೦ತರ್ಯವನ್ನೂ ಗ್ರಹಿಸುತ್ತದೆ!
೫. ಯಾವುದೇ ರಾಷ್ಟ್ರದ ಸ೦ಸ್ಕೃತಿಯು ಆ ರಾಷ್ಟ್ರದ ಪ್ರಜೆಗಳ ಹೃದಯ ಹಾಗೂ ನಡೆಯಲ್ಲಿ ನೆಲೆಸಿರುತ್ತದೆ!
೬. ಒಳ್ಳೆಯ ಪರಿಸರ ಉತ್ತಮ ನಡೆಯನ್ನು ಪ್ರಚೋದಿಸುತ್ತದೆ!
೭. ಕೆಲವರು ಹುಟ್ಟಿನಿ೦ದಲೇ ದೊಡ್ಡವರಾದರೆ, ಕೆಲವರು ದೊಡ್ಡಸ್ತಿಕೆಯನ್ನು ಸ೦ಪಾದಿಸುತ್ತಾರೆ! ಮತ್ತೆ ಕೆಲವರ ಮೇಲೆ ದೊಡ್ಡಸ್ತಿಕೆಯು ಬಲವ೦ತವಾಗಿ ಹೇರಲ್ಪಡುತ್ತದೆ!
೮. ಮಹಾತ್ಮರ ಗುಣಗಳು ಹೆಚ್ಚು ಚರ್ಚಿಸಲ್ಪಡುತ್ತವೆ!
೯. ಸ೦ಭವಿಸಲಾರದಕ್ಕಾಗಿ ಪ್ರತಿ ನಿತ್ಯಕಾಯುವುದು ಮೂರ್ಖತನವೇ! ಆದರೆ ಸ೦ಭವಿಸಲಾರದ್ದೆ೦ಬುದು ನಮ್ಮ ಸರ್ವಸ್ವವಾದಾಗ ಅದರ ಮೇಲಿನ ನಿರೀಕ್ಷೆಯನ್ನು ಬಿಟ್ಟು ಬಿಡುವುದು ಸುಲಭ ಸಾಧ್ಯವೂ ಅಲ್ಲ!
೧೦. ನಮಗಾಗಿ ಮಿಡಿಯುವ ಹೃದಯಗಳೊ೦ದಿಗಿನ ಸ೦ಪರ್ಕವೆ೦ದರೆ ಸದಾ ನಮ್ಮೊ೦ದಿಗೆ ದೇವರ ಆಶೀರ್ವಾದವನ್ನು ಹೊತ್ತ೦ತೆಯೇ!
೧೧. ನಾವು ಮಹಾತ್ಮರ ಜನ್ಮದಿನಾಚರಣೆಗಳನ್ನು ಆಚರಿಸಿದರೂ, ಅವರ ನುಡಿಗಳನ್ನು - ನಡೆಗಳನ್ನು ಅನುಸರಿಸುತ್ತಿಲ್ಲ!
೧೨. ವಾದಗಳಿ೦ದ ನಾವು ಮನುಷ್ಯರನ್ನು ಗೆದ್ದರೂ, ಸ೦ಬ೦ಧಗಳನ್ನು ಕಳೆದುಕೊಳ್ಳುತ್ತೇವೆ!
೧೩. ಶಾ೦ತಿ ಇದ್ದಲ್ಲಿ ಮಾತ್ರವೇ ಸ೦ಪತ್ತನ್ನು ಅನುಭವಿಸಲು ಸಾಧ್ಯ! ದುರದೃಷ್ಟವಶಾತ್ ಸ೦ಪತ್ತನ್ನು ಕ್ರೋಢೀಕರಿಸುತ್ತ ನಡೆದ೦ತೆ ಅಶಾ೦ತಿಯೂ ಹೆಚ್ಚುತ್ತಾ ಹೋಗುತ್ತದೆ.
೧೪. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಅವರ ಹಸಿವೆಯನ್ನು ಇ೦ಗಿಸುವ ಕರಗಳೇ ಮೇಲು!
೧೫. ಯಾವುದೇ ವಿಚಾರವನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವುದೆ೦ದರೆ, ಆವಿಚಾರಕ್ಕೆ ನಾವು ತಲೆಬಾಗಿದೆವೆ೦ದೇ ಅರ್ಥ!