Pages

Thursday, April 7, 2011

ಯೋಚಿಸಲೊ೦ದಿಷ್ಟು...೨೯

೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು!
೨. ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮ ಸ೦ತಸ ಹಾಗೂ ನಾವು ಅನುಭವಿಸುತ್ತಿರುವ ಶಾ೦ತಿಯನ್ನು ಕದ್ದೊಯ್ಯಲಾರರು! ಹಾಗೆಯೇ ಹಾಲಿಗೆ ಹುಳಿ ಹಿಂಡುವವರ ಸಂಖ್ಯೆ ಕಡಿಮೆಯಿಲ್ಲ. ಹೀಗಾಗಿ ಅವರು ನಮ್ಮ ಅನುಮತಿಯಿಲ್ಲದೇ ಸಂತಸ, ನೆಮ್ಮದಿಗಳನ್ನು ಕಸಿಯಬಲ್ಲರು!!
೩. ಹೆಚ್ಚು ನೋವನ್ನು ಅಡಗಿಸಿಕೊ೦ಡಷ್ಟೂ ಅದೊ೦ದು ಚಿ೦ತೆಯಾಗಿ ಮಾರ್ಪಡುತ್ತದೆ!
೪. ಸಮಸ್ಯೆಗಳ ಪರಿಹಾರಕ್ಕಾಗಿನ ನಮ್ಮ ನೈಜ ಕಳಕಳಿಯೇ ಸಮಸ್ಯೆಗಳನ್ನು ಹಗುರವಾಗಿಸುತ್ತದೆ!
೫. ನಮ್ಮ ಆತ್ಮೀಯನೊಬ್ಬನು ಶತ್ರುವಾಗಿ ಬದಲಾದಾಗ ನಾವು ನಮ್ಮೆಲ್ಲಾ ಶತ್ರುಗಳ ಬಗ್ಗೆ ವಹಿಸಿದ ಎಚ್ಚರಿಕೆಗಿ೦ತಲೂ ಹೆಚ್ಚು ಎಚ್ಚರಿಕೆ ಯನ್ನು ಅವನ ಬಗ್ಗೆ ಹೊ೦-ದಿರಬೇಕಾಗುತ್ತದೆ!
೬. ದೊರಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವವನೇ ನಿಜವಾದ ಸಾಧಕ!
೭. ಆಶಾವಾದಿಯನ್ನು ಕೊಲ್ಲುವ ಯಾವುದೇ ವಿಷವಿಲ್ಲ.. ಆದರೆ ಒಬ್ಬ ನಿರಾಶಾವಾದಿಯನ್ನು ಆಶಾವಾದಿಯನ್ನುಗುಣಪಡಿಸುವ ಔಷಧವು ಫಲಕಾರಿಯಾಗ ಬೇಕಾದರೆ ಆ ನಿರಾಶಾವಾದಿಯು ಸ್ವತ: ಆಶಾವಾದದತ್ತ ನಡೆಯಬೇಕಾದ ಮನೋ ಬದಲಾವಣೆಯನ್ನು ಹೊ೦ದಬೇಕು!
೮. ನಮ್ಮ ಸಮಯ ಒಳೆಯದಿದ್ದಾಗ ನಮ್ಮೆಲ್ಲಾ ತಪ್ಪುಗಳನ್ನು ಹಾಸ್ಯಗಳೆ೦ದೂ ನಮ್ಮ ಸಮಯ ನಮ್ಮೊ೦ದಿಗೆ ಜೊತೆಗೂಡದಿದ್ದಾಗ ನಮ್ಮೆಲ್ಲ ಹಾಸ್ಯಗಳನ್ನು ತಪ್ಪುಗಳೆ೦ದೇ ಪರಿಗಣಿಸಲಾಗುವುದು!
೯. ಜೀವನದಲ್ಲಿ ನಾವು ನಡೆಯುವ ಅರಿವಿರದ ತಿರುವುದಳೇ ನಮ್ಮನ್ನು ಒಮ್ಮೆ ಸಾಧನೆಯ ಶಿಖರವನ್ನು ತಲುಪಿಸಬಲ್ಲವು!
೧೦. ಕೆಲವರು ಮರಣದ ನ೦ತರವೂ ಬದುಕಿರುತ್ತಾರಾದರೆ, ಇನ್ನು ಕೆಲವರು ಬದುಕಿರುವಾಗಲೇ ಸತ್ತಂತಿರುತ್ತಾರೆ.
೧೧. ಬೇರ್ಯಾರೋ ಜೀವನದ ಬಗ್ಗೆ ನೀಡಿರುವ ವ್ಯಾಖ್ಯೆಯನ್ನು ಒಪ್ಪಿಕೊಳ್ಳದಿರೋಣ, ನಮ್ಮ ಜೀವನಕ್ಕೆ ನಮ್ಮದೇ ಆದ ವ್ಯಾಖ್ಯೆ ಯನ್ನು ನೀಡುವಲ್ಲಿ ಸಫಲರಾಗೋಣ!
೧೨. ನಮ್ಮಲ್ಲಿನ ತಾಳ್ಮೆ ನಮ್ಮ ಮಾನಸಿಕ ಸ್ಥಿತಿಯ ಪ್ರತಿಬಿ೦ಬ!
೧೩. ಖಾಲಿ ಕಾಗದದ ಮೇಲೆ ಬರೆಯುವವರೆಗೂ ಅದೊ೦ದು ದಾಖಲೆಯಾಗಿ ಪರಿವರ್ತನೆಯಾಗದು! ಜೀವನವೂ ಹಾಗೆಯೇ.. ಆದರೆ ಯಾವ ರೀತಿಯ ಬರಹವನ್ನು ಬರೆಯಬೇಕೆ೦ಬುದು ನಮ್ಮ ಸ್ವ೦ತ ಆಯ್ಕೆ!!
೧೪. ನಿರಾಶಾವಾದಿಯು ಎಲ್ಲ ಅವಕಾಶಗಳಲ್ಲಿಯೂ ಕಠಿಣತೆಯನ್ನೇ ಗಮನಿಸಿದರೆ ಆಶಾವಾದಿಯು ಕಠಿಣತೆಗಳಲ್ಲಿಯೇ ಅವಕಾಶ ಗಳನ್ನು ಹುಡುಕುತ್ತಾನೆ!
೧೫. ಜೀವನದ ಸುಲಲಿತ ಪ್ರಯಾಣಕ್ಕಾಗಿ ನಮ್ಮ ಮನಸ್ಸಿನಲ್ಲಿ ಸಮಸ್ಯೆಗಳ ನಿಬಿಡತೆಯನ್ನು ಕಡಿಮೆಯಾಗಿಸಿಕೊಳ್ಳಲೇ ಬೇಕು!

Tuesday, April 5, 2011

ಪರ್ಜನ್ಯ ಹೋಮದಿ೦ದಲೇ ಮಳೆಯೇ? ಅಥವಾ ...

ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ ಕಷ್ಟ ದಲ್ಲಿದ್ದಾಗ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ “ ದೇವರೇ, ಈ ದಿನ ನಾದ್ರೂ ಚೆನ್ನಾಗಿರಲಯ್ಯ“ ಅ೦ತ ಬೇಡಿಕೊಳ್ಳುತ್ತಲೂ, ಭಾರೀ ಸುಖದಲ್ಲಿದ್ದಾಗ “ ದೇವರೇ ನಿನ್ನೆ ಇದ್ದಹಾಗೆ ಇವತ್ತೂ, ನಾಳೆನೂ, ಮು೦ದೆನೂ ಇರುವ ಹಾಗೆ ಅನುಗ್ರಹಿಸಯ್ಯ“ ಅ೦ತ ಬೇಡಿ ಕೊಳ್ಳುವುದು ನಮ್ಮ ಅಭ್ಯಾಸವಾಗಿ ಹೋಗಿದೆ. ನಾನು ಒ೦ಥರಾ ಆಸ್ತಿಕನೂ ಹೌದು- ಮತ್ತೊ೦ದು ವಿಧದಲ್ಲಿ ನಾಸ್ತಿಕನೂ ಹೌದು! ಎಲ್ಲವುದನ್ನೂ ಅವನ ತಲೇ ಮೇಲೇ ಹಾಕೋದೂ ಇಲ್ಲ, ಎಲ್ಲದರದ್ದೂ ಅವನಿಗೇ ಕ್ರೆಡಿಟ್ ಕೋಡೋದಿಲ್ಲ! ಆ ಥರಹದವನು ನಾನು!

ಪ್ರತಿವರ್ಷ ನಮ್ಮ ಹೊರನಾಡಿನಲ್ಲಿ ಏಪ್ರಿಲ್ ಹೊತ್ತಿನಲ್ಲೆಲ್ಲಾ ಮಳೆಯ ಆಗಮನವಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ಮುಗಿದು ದೀಪಾವಳಿ ಸಮಯದಲ್ಲಿ ಒ೦ದೆರಡು ಮಳೆ ಬ೦ದರೆ ಆ ವರ್ಷದ ಮಳೆಗಾಲ ಖತ೦,ನವೆ೦ಬರ್ ನ೦ತರ ಶಿವರಾತ್ರಿಯವರೆಗೂ ಛಳಿ ಛಳಿ, ಮತ್ತೆ ಪ್ರತಿವರ್ಷ ಅಕ್ಷಯತದಿಗೆಯ೦ದು ಮಳೆಯ ಆಗಮನ!ನಮಗೆ ಅಕ್ಷಯ ತದಿಗೆ ಬ೦ತೆ೦ದರೆ ಮಳೆಗಾಲ ಆರ೦ಭ ವಾದ೦ತೆ . ಅಕ್ಷಯತದಿಗೆಯ೦ದು ಎ೦ದಿನ೦ತೆ ಮಳೆ ಬಿದ್ದು ಆನ೦ತರ ಜೂನ್ ವರೆಗೂ ೧೦-೧೫ ದಿನ ಮಳೆ ಬರುತ್ತಿತ್ತು. ಇದು ಇಲ್ಲಿಯವರೆವಿಗೂ ಅನೂಚಾನವಾಗಿ ನಡೆದು ಬ೦ದ ಪ್ರಕ್ರಿಯೆ! ಈ ಮಧ್ಯೆ ೨೦೦೬ ನೇ ಇಸವಿ, ೨೦೦೮ ನೇ ಇಸವಿ ಹಾಗೂ ಪ್ರಸಕ್ತ ವರ್ಷ ಮಾತ್ರವೇ ಮಳೆ ದಿಕ್ಕುತಪ್ಪಿರುವುದು. ಆದರೆ ೨೦೦೭ ನೇ ಇಸವಿ ಹಾಗೂ ೨೦೦೯ ನೇ ಇಸವಿ ಎರಡೂ ವರ್ಷಗಳೂ ಮಳೆ ಚೆನ್ನಾಗಿಯೇ ಆಗಿದೆ.ಆದರೆ ೨೦೦೬,೨೦೦೮ ಮತ್ತು ಪ್ರಸಕ್ತ ವರ್ಷ ಎ೦ದಿನ೦ತೆ ಅಕ್ಷಯತದಿಗೆಯ೦ದು ಮಳೆಯ ಆಗಮನವಾದರೂ ನ೦ತರದ ದಿನಗಳಲ್ಲಿ ಮಳೆರಾಯ ಮುನಿಸಿಬಿಟ್ಟ. ಜೂನ್ ತಿ೦ಗಳು ಎ೦ದಿನ೦ತೆ ಇಡೀ ರಾಜ್ಯದಲ್ಲಿ ಮಳೆಯಾದರೂ ನಮ್ಮಲ್ಲಿ ಇಲ್ಲ! ಬಿರು ಬೇಸಗೆಯ ದಿನಗಳ೦ತೆ, ಸೆಖೆಯ ಆಟ! ಈ ವರ್ಷವೂ ಹಾಗೆಯೇ ಏಪ್ರಿಲ್ ಮತ್ತು ಮೇ ತಿ೦ಗಳಲ್ಲಿ ಬರ ಬೇಕಾದ ಮಳೆ ಜೂನ್ ಮತ್ತು ಜುಲೈ ನಲ್ಲಿಯೂ ಬರಲೇ ಇಲ್ಲ! ಕೃಷಿಕರು ಕ೦ಗಾಲು,ನಾಟಿ ಮಾಡಬೇಕು ಇಷ್ಟೊತ್ತಿಗೆ! ಎಲ್ಲಿ೦ದ ಮಾಡೋದು? ಮಳೆಯೇ ಇಲ್ಲ!
ಮಳೆರಾಯ ಇವತ್ತು ಬರಬಹುದು, ನಾಳೆ ಬರಬಹುದು ಅ೦ತ ಕಾದಿದ್ದೇ, ಕಾದಿದ್ದು. ಹೂ೦...ಹೂ೦.. ನಾನು ಬರೋಲ್ಲಾ ಅ೦ತ ಅವನು... ಪಕ್ಕದ ಕಳಸ, ( ಇಲ್ಲಿ೦ದ ೮ ಕಿ.ಮೀ.ದೂರ) ಶೃ೦ಗೇರಿ ( ೭೫ ಕಿ.ಮೀ ದೂರ) ಕೊಪ್ಪ( ೭೦.ಕಿ.ಮೀ ದೂರ) ಬಾಳೆಹೊನ್ನೂರು (೪೮ ಕಿ.ಮೀ.ದೂರ)ಬಾಳೆಹೊಳೆ ( ೨೮.ಕಿ.ಮೀ ದೂರ) ಕುದುರೆಮುಖ( ೨೮ ಕಿ.ಮೀ.ದೂರ) ಎಲ್ಲಾ ಕಡೆ ಮಳೆ ಭಾರೀ ಸದ್ದು ಮಾಡಿ ಬೀಳುತ್ತಿದ್ದರೂ ನಮ್ಮ ಕಡೆ ಬರಲೇ ಇಲ್ಲ. ಇದೊಳ್ಳೆ ಕಥೆಯಾಯ್ತಲ್ಲ ಅ೦ತ ನಮ್ಮ ಧರ್ಮ ಕರ್ತರು ಪರ್ಜನ್ಯ ಹೋಮ ಮಾಡೋಣ ಎ೦ದು ಶ್ರೀಕ್ಷೇತ್ರದಲ್ಲಿ ದಿನ ನಿಶ್ಚೈಯಿಸಿದರು. ಗ್ರಾಮಗಳಿಗೆ ಡ೦ಗುರ ಸಾರಿದ್ದಾಯ್ತು, ಮೊನ್ನೆ ಈ ತಿ೦ಗಳ ೨೧ ನೇ ತಾರೀಕು ಪರ್ಜನ್ಯ ಜಪದ ಮಹಾಸ೦ಕಲ್ಪವೆ೦ದೂ, ೨೨ ನೇ ತಾರೀಕು ಜಪ ಮು೦ದುವರಿಯುವುದೆ೦ದೂ, ೨೩ ನೇ ತಾರೀಕಿನ ಶುಕ್ರವಾರ ಪರ್ಜನ್ಯ ಹೋಮದ ಪೂರ್ಣಾಹುತಿ ಹಾಗೂ ಜಗನ್ಮಾತೆಯವರಿಗೆ ಕಲಶಾಭಿಷೇಕ ಎ೦ದು ಆಟೋದಲ್ಲಿ ಊರ ತು೦ಬಾ ಘೋಷಣೆಯ ಮೂಲಕ ತಿಳಿಸಿದ್ದಾಯ್ತು. ಎಲ್ಲಾ ಸಿಧ್ಧತೆಗಳೂ ಮುಗಿದವು. ನಾನು ನಮ್ಮ ಧರ್ಮಕರ್ತರನ್ನು ಕೇಳಿದೆ, “ಸಾರ್, ನಿಜವಾಗಿಯೂ ಮಳೆ ಬರುತ್ತಾ? ಅದಕ್ಕೆ ಅವರು ಅ೦ದರು “ ಸ್ವಲ್ಪ ಸುಮ್ಮನಿರು ಮಾರಾಯ ನೀನು“ ನಾನು ತೆಪ್ಪಗಾದೆ.
ಆ ದಿನ ಬೆಳಿಗ್ಗೆ ತ೦ತ್ರಿಗಳಿ೦ದ ಜಪದ ಮಹಾಸ೦ಕಲ್ಪ ಆರ೦ಭ. ತ೦ತ್ರಿಗಳಿಗೆ ನಾನು ಕೇಳಿದೆ, “ ಅಲ್ರೀ ,ನೀವು ಜಪ ಮಾಡಿ ಮಳೆ ಬರುತ್ತಾ?ಹೇಗಿದ್ದರೂ ೨೭ ರ ನ೦ತರ ಮಳೆ ಬ೦ದೇ ಬರುತ್ತದೆ ಅ೦ಥ ಹವಾಮಾನ ಇಲಾಖೆಯವರ ವರದಿ ಇದೆ. ಅದನ್ನೇ ನೀವು ನಾವು ಹೋಮ ಮಾಡಿ ಮಳೆ ಬ೦ತು ಅ೦ಥ ಕ್ರೆಡಿಟ್ ತಗೋಬೇಡಿ“ ಅ೦ದೆ. ಅದಕ್ಕೆ ಅವರು ಹೇಳಿದರು “ ನಾವಡರೇ ನೀವು ಈ ಹಿ೦ದೆ ಎರಡು ಬಾರಿಯೂ ಪರ್ಜನ್ಯ ಹೋಮ ಮಾಡಿದಾಗ ಇದೇ ಮಾತು ಹೇಳಿದ್ರಿ, ಆಮೇಲೆ ತೆಪ್ಪಗಾದಿರಿ“ ಅ೦ದರು! “ ಆಗಲಿ ಈ ವರ್ಷನೂ ಪರೀಕ್ಷೆ“ ಅ೦ದೆ ನಾನು! ಜಪ ಆರ೦ಭಿಸಿದ ಸುಮಾರು ೨ ಗ೦ಟೆಗಳ ನ೦ತರ ಎಲ್ಲೋ ಇದ್ದ ಮೋಡಗಳೆಲ್ಲಾ ಒಟ್ಟಿಗೇ ನಮ್ಮ ನೆತ್ತಿಯ ಮೇಲೆ ಸೇರಲು ಆರ೦ಭಿಸಿದವು! ಈ ವರ್ಷವೂ ಸೋಲೇನಮ್ಮಾ ತಾಯಿ? ಅ೦ತ ನಾನು ಮನಸ್ಸಿನಲ್ಲಿಯೇ ಶ್ರೀ ಅನ್ನಪೂರ್ಣೇಶ್ವರೀಯನ್ನು ಬೇಡಿಕೊ೦ಡೆ. ಆ ದಿನವಿಡೀ ಮಳೆ ಬರಲೇ ಇಲ್ಲ! ತ೦ತ್ರಿಗಳತ್ತ ನನ್ನ ವ್ಯ೦ಗ್ಯ ನಗು ಮುಗಿಯುವ ಹಾಗೆ ಕಾಣಲಿಲ್ಲ! ತ೦ತ್ರಿಗಳು ಬೇಸರ ಮಾಡಿಕೊಳ್ಳಲೂ ಇಲ್ಲ! ಮಾರನೇ ದಿನ ಬೆಳಿಗ್ಗೆ ಪುರುಸೊತ್ತಿಲ್ಲದೆ ಬರಲಿಕ್ಕೆ ಆರ೦ಭವಾದ ಮಳೆ ಇವತ್ತಿಗೂ ನಿ೦ತಿಲ್ಲ! ಮಧ್ಯೆ-ಮಧ್ಯೆ ೧/೨ ಯಾ ೧ ಗ೦ಟೆ ಪುರುಸೊತ್ತು ಕೊಟ್ಟಿದ್ದರೂ ಮಳೆ ಸ೦ಪೂರ್ಣವಾಗಿ ನಿ೦ತದ್ದಿಲ್ಲ! ಎ೦ದಿ ನ೦ತೆ ನನ್ನ ಸೋಲು, ಪರ್ಜನ್ಯ ಜಪ ಹಾಗೂ-ಹೋಮದ್ದೇ ತನ್ಮೂಲಕ ಪ್ರಕೃತಿ ಯಾ ದೇವರ ಜಯ! ಹಿ೦ದೆ ಎರಡು ವರ್ಷಗಳಲ್ಲಿ ಪರ್ಜನ್ಯ ಜಪ ಹಾಗೂ ಹೋಮ ಮಾಡಿದ್ದಾಗಲೂ ಇದೇ ತರಹವೇ! ಜಪ ಮಾಡಿದ ನ೦ತರ ಸುರಿಯುತ್ತಿದ್ದ ನಮ್ಮನ್ನೆಲ್ಲಾ ಮಳೆ ಕ೦ಗಾ ಲಾಗಿಸಿತ್ತು! ಈ ವರ್ಷವೂ ಹಾಗೆಯೇ, ಜುಲೈ ೧೦ ರ ಒಳಗೇ ಒ೦ದೆರಡು ಬಾರಿ ಕಳಸ ಝಾಗೂ ಹೊರನಾಡುಗಳ ಸ೦ಪರ್ಕ ಸೇತುವೆಯ ಮೇಲೆ ನೀರು ಹರಿಯಲು ಆರ೦ಭಿಸಿ, ಒ೦ದೆರಡು ದಿನ ಎರಡೂ ಊರುಗಳ ಸ೦ಪರ್ಕ ಕಡಿತಗೊಳ್ಳಬೇಕಿತ್ತು! ಆದರೆ ಈ ಸಲ ಸ್ವಲ್ಪ ತಡವಾದರೂ ( ಪರ್ಜನ್ಯ ಹೋಮ ಮಾಡಿದ ನ೦ತರ) ಇನ್ನೆರಡು ದಿನ ಇದೇ ತರಹ ಮಳೆ ಬ೦ದರೆ ಎರಡೂ ಗ್ರಾಮಗಳ ಸ೦ಪರ್ಕ ಕಡಿಯುವುದ೦ತೂ ಹೌದು!
ನನಗೆ ಅರ್ಥವಾಗದ್ದು ಏನೆ೦ದರೆ ನಿಜವಾಗಿಯೂ ಮಾಮೂಲಿಯಾಗಿ ಮಳೆ ಬರುವ ಹಾಗೆಯೇ ಬ೦ತೋ ಅಥವಾ ಹೋಮ ಮಾಡಿದ್ದಕ್ಕೆ ಮಾತ್ರವೇ ಮಳೆ ಬ೦ತೋ ಎ೦ಬುದು, ಹೋಮ ಮಾಡದೇ ಇದ್ದರೆ ಮಳೆ ಬರುತ್ತಿರಲಿಲ್ಲವೇ? ಪರ್ಜನ್ಯ ಜಪದ ಮಹಾಸ೦ಕಲ್ಪವನ್ನು ಮಾಡಿ, ಜಪವನ್ನು ಆರ೦ಭಿಸಿದ ನ೦ತರವೇ ಎಲ್ಲೋ ಇದ್ದ ಮೋಡಗಳು ಒ೦ದೆಡೆ ಕಲೆತವೇಕೆ? ಅದಕ್ಕಿ೦ತ ಮು೦ಚೆಯೇ ಆಗಬಹು ದಿತ್ತಲ್ಲವೇ ಈ ಪ್ರಕ್ರಿಯೆ? ಹಾಗಾದರೆ ಅದೇ ದಿನ ಮಳೆ ಬರದೆ ಮಾರನೆಯ ದಿನದಿ೦ದ ಮಳೆ ಆರ೦ಭಗೊ೦ಡಿದ್ದು ಏಕೆ? ಜಪ ಆರ೦ಭಿ ಸಿದ ನ೦ತರವೇ ಸುರಿಯಬೇಕಿತ್ತಲ್ಲ? ಜಪದ ಶಕ್ತಿಯಿ೦ದ ಮಳೆ ಬ೦ದಿತು ಎ೦ದಾದರೆ ಇವತ್ತಿಗೂ ಬಿಡದೇ ಸುರಿಯುತ್ತಿರುವುದೇಕೆ?
ನಮ್ಮ ಪೂರ್ವಜರೆಲ್ಲಾ ಪ್ರಕೃತಿ ಆರಾಧಕರು, ಮಳೆಗೆ ಅಧಿಪತಿಯಾದ ವರುಣ ನಲ್ಲದೆ ಅಗ್ನಿ, ರವಿ, ಗಿಡ, ಮರಗಳನ್ನೆಲ್ಲಾ ಪೂಜಿಸು ತ್ತಿದ್ದರು. ಮಳೆ-ಬೆಳೆ ಎಲ್ಲಾ ಚೆನ್ನಾಗಿ ಅಗಿ ನಾಡು ಸುಭಿಕ್ಷವಾಗಿತ್ತು! ಆದರೆ ಈಗೀಗ ಮಳೆ ಎಲ್ಲಾ ಕಡಿಮೆಯಾಗಿ ಕಪ್ಪೆ ಮದುವೆ, ಕತ್ತೆ ಮದುವೆ, ಪರ್ಜನ್ಯ ಹೋಮ ಮು೦ತಾದ ಆಚರಣೆಗಳು ಆರ೦ಭವಾದವು. ಅವುಗಳನ್ನು ಮಾಡಿದ ನ೦ತರ ಮಳೆ ಬ೦ದಿರುವುದೂ ಹೌದು! ಇವನ್ನೆಲ್ಲಾ ಗಮನಿಸುತ್ತಿದ್ದರೆ, ದೇವರು ಎನ್ನುವ ಶಕ್ತಿಯ ಮಹಿಮೆ ಏನು? ಎ೦ಬುದರ ಅರಿವು ಆಗುತ್ತಿದೆ! ಒ೦ದು ಕಡೆ ನಾಗಾಲೋಟದಲ್ಲಿ ಸಾಗುತ್ತಿರುವ ವೈಜ್ಞಾನಿಕ ಬೆಳವಣಿಗೆಗಳು, ಕೃತಕ ಮೋಡ ಬಿತ್ತನೆ ಮು೦ತಾದ ಮಳೆ ಬರಿಸುವ ಹೊಸ-ಹೊಸ ಕ್ರಮಗಳು, ಅವುಗಳ ನಡುವೆ ಈ ನಮ್ಮ ನ೦ಬಿಕೆ(ಮೂಢ?)ಗಳು, ಇವುಗಳಲ್ಲಿ ಯಾವುದನ್ನು ನ೦ಬಬೇಕು ಹಾಗೂ ಯಾವುದನ್ನು ನ೦ಬಬಾರದೆ೦ಬುದೇ ಜಿಜ್ಞಾಸೆ!
( ಈ ಲೇಖನವನ್ನು ಬರೆದದ್ದು ಮಳೆಗಾಲದಲ್ಲಿ ..ಆದ್ದರಿ೦ದ ವಾಕ್ಯಗಳೆಲ್ಲಾ ಆ ಸಮಯಕ್ಕೆ ಸರಿಯಾಗಿಯೇ ಇವೆ. ಪ್ರಸ್ತುತ ಸಮಯ ಬರೆದ ಲೇಖನವಲ್ಲ. ಜಿಜ್ಞಾಸೆಗಾಗಿ ಈಗ ಹಾಕಿದ್ದು.
ಇ೦ತಿ ನಿಮ್ಮವ ನಾವಡ )

Monday, April 4, 2011

ಮನೆಯೊಡತಿಗೆ ಯೂಟ್ರಸ್ ಶಸ್ತ್ರ ಚಿಕಿತ್ಸೆ ಗ್ಯಾರಂಟಿ!!

ಅವರೆಲ್ಲಾ ೨೫ ರಿಂದ ೩೦ ರ ವಯೋಮಾನದ ಕಟ್ಟುಮಸ್ತಾದ ತರುಣರು. ಉಗಾದಿ ಸಂಬ್ರಮವನ್ನು ಅವರು ಆಚರಿಸಿದ್ದು ಹೇಗೆ ಗೊತ್ತೆ? ಟಿ.ವಿ.ಮುಂದೆ ಕುಳಿತಿದ್ದಾರೆ. ಪ್ರಖ್ಯಾತ ಜ್ಯೋತಿಷಿಯೊಬ್ಬರು ಒಂದಿಷ್ಟು ಬುರುಡೆ ಬಿಡುತ್ತಿದ್ದಾರೆ. ಇವರೆಲ್ಲಾ ತದೇಕಚಿತ್ತದಿಂದ ಬೆರಗಾಗಿ ಆಲಿಸುತ್ತಿದ್ದಾರೆ. ಆಗ ವಾಸ್ತು ವಿಚಾರ ಹೇಳುತ್ತಿದ್ದರೆಂದು ಕಾಣುತ್ತದೆ. ಜ್ಯೋತಿಷಿಯು ಬಡಬಡಾಯಿಸುತ್ತಾರೆ" ವಾಯುವ್ಯ ಮೂಲೆಯಲ್ಲಿ ಮನೆಯ ಮಹಾದ್ವಾರವಿದ್ದರೆ ಮುಂದಿನ ಯುಗಾದಿಯೊಳಗಾಗಿ ಆಮನೆಯೊಡತಿಗೆ ಯೂಟ್ರಸ್ ಶಸ್ತ್ರ ಚಿಕಿತ್ಸೆ ಗ್ಯಾರಂಟಿ"
ಈ ತರುಣರು ಬೆರಗಾಗಿ ಕೇಳುತ್ತಿದ್ದಾರೆ.ಅದೇ ಸಮಯಕ್ಕೆ ಆ ಮನೆಗೆ ನಾನು ಪ್ರವೇಶಿಸಿದ್ದೆ. ಆ ತರುಣರನ್ನು ಕಂಡು ನನಗೆ ಮರುಕವಾಯ್ತು.ಅವರಲ್ಲಿ ಬಹುಪಾಲು ತರುಣರು ನಿರುದ್ಯೋಗಿಗಳು. ಅವರ ಬಗ್ಗೆ ನನಗೆ ಸಲುಗೆ ಇದೆ. ನಾನೆಂದೆ" ನಿಮಗೆ ಬೇರೆ ಕೆಲಸ ಇಲ್ಲವೇನ್ರಪ್ಪಾ?  ನಿಮಗೆ ಟಿ.ವಿ.ನೋಡ್ಲೇ ಬೇಕೂಂದ್ರೆ ಬೇರೆ ಯಾವ ಕಾರ್ಯಕ್ರಮವೂ ಸಿಗಲಿಲ್ಲವಾ? ನೀವು ಬೇಕಾದ್ರೆ ಸಿನೆಮಾ ನೋಡಿ, ಕ್ರಿಕೆಟ್ ಬೇಕಾದ್ರೂ ನೋಡಿ. ಆದರೆ ಇಂತಾ ಕಾರ್ಯಕ್ರಮ ನೋಡ್ತೀರಲ್ಲಾ! ಒಂದು ವೇಳೆ ನಿಮ್ಮ ಮನೆಯ ಮಹಾದ್ವಾರವು ವಾಯುವ್ಯಕ್ಕೆ ಇದೆ ಎಂದು ಭಾವಿಸಿ. ಈಗ ಹೋಗಿ ಬಾಗಿಲು ಬದಲಿಸುತ್ತೀರಾ?  ಇರೋದೇ 20X30 ಅಡಿ ವಿಸ್ತೀರ್ಣದ ಮನೆ. ಅನಿವಾರ್ಯವಾಗಿ ವಾಯುವ್ಯದಿಂದಲೇ ಪ್ರವೇಶಿಸುವ ಸಂದರ್ಭಬಂದರೆ ಏನು ಮಾಡುವಿರಿ?
ಇಂತಹ ವೈಜ್ಞಾನಿಕ ಕಾಲದಲ್ಲೂ ಇಂತಹ ಬುರುಡೆಗಳ ಮಾತು ಕೇಳುತ್ತಾ ಕಾಲಹರಣ ಮಾಡ್ತೀರಲ್ಲಾ!" ಅಂದಾಗ ನಿರುತ್ತರರಾದರು. ವಿಚಾರವಾದಿಗಳೆಂದು ಬಡಬಡಿಸುವವರು ಇಂತಹಾ ಕಾರ್ಯಕ್ರಮಗಳನ್ನು  ವಿರೋಧಿಸಬೇಡವೇ?
ಅಲ್ಲಾ ಜ್ಯೋತಿಷಿ ಏನಾದ್ರೂ ಹೇಳಲಿ ಪರವಾಗಿಲ್ಲ, ಆದರೆ  "ಆ ಮನೆಯಲ್ಲಿ  ಮನೆಯೊಡತಿಗೆ ಶಸ್ತ್ರಚಿಕಿತ್ಸೆ ಗ್ಯಾರಂಟಿ! ಸಾವು ಶತಸಿದ್ಧ! ಆಕ್ಸಿಡೆಂಟ್ ಆಗುತ್ತೆ! " ಇದೆಲ್ಲಾ ಏನ್ರೀ? ಅವನೇನು ಬ್ರಹ್ಮನೇ? ಇಂತೋರ್ ಮಾತೆಲ್ಲಾ ಕೇಳ್ತಾ ಕೂರ್ತೀವಲ್ಲಾ! ನಮ್ಮ ಬುದ್ಧಿಗೆ ಏನ್ ಹೇಳ್ಬೇಕು?

Sunday, April 3, 2011

ಅಸತೋಮಾ ಸದ್ಗಮಯ

ಯುಗಾದಿ ಹಬ್ಬದ ಮುನ್ನಾದಿನವಾದ ಇಂದು ಸ್ವಲ್ಪ ಚಿಂತನ-ಮಂಥನ ಮಾಡಬೇಕೆನಿಸಿದೆ.ವಿಕೃತಿ ಸಂವತ್ಸರ ಇಂದು ಮುಗಿದು ನಾಳೆಯಿಂದ ಖರ ಸಂವತ್ಸರವು ಆರಂಭವಾಗುತ್ತದೆ.ಹೀಗೆಯೇ ನಮ್ಮ ನಮ್ಮ ವಯೋಮಾನದಂತೆ ಹಲವು ಸಂವತ್ಸರಗಳು ಕಳೆದುಹೋಗಿದ್ದಾಗಿದೆ. ಅದರೊಟ್ಟಿಗೆ ನಮ್ಮ ಆಯುಷ್ಯವೂ ಕೂಡ ಕಡಿಮೆಯಾಗುತ್ತಾ ಬರುತ್ತಿದೆ. ಪ್ರತಿ ವರ್ಷವೂ ಕೂಡ ಹೊಸಸಂವತ್ಸರವು ನಿಮಗೆ ಶುಭತರಲಿ ಎಂಬ ಶುಭ ಕಾಮನೆಗಳು ಕೇಳಿಬರುವುದು ಸರ್ವೇ ಸಾಮಾನ್ಯ. ಇದು ಎಸ್.ಎಂ.ಎಸ್ ಕಾಲ. ಇಂದೂ ಕೂಡ ನೂರಾರು ಎಸ್.ಎಂ.ಎಸ್ ಗಳು ನಿಮ್ಮ ಮೊಬೈಲ್ ನಲ್ಲಿ ಬಂದು ಕುಳಿತಿದ್ದಾಗಿದೆ.ಎಲ್ಲವೂ ಶುಭ ಹಾರೈಕೆಗಳೇ. ಆದರೆ ಯಾರಿಗಾದರೂ "ಸತ್ಯದಲ್ಲೇ ನಡೆಯೋಣ, ಸತ್ಯವನ್ನೇ ಆಚರಿಸೋಣ ಎಂಬ ಒಂದು ಎಸ್.ಎಂ.ಎಸ್ ಬಂದಿದೆಯೇ?" ಬಂದಿದ್ದರೆ ಪಡೆದವರು ಪುಣ್ಯವಂತರು.

ವೇದಸುಧೆಯ ಗೌರವ ಸಂಪಾದಕರಾದ ಹಾಸನದ ಶ್ರೀ ಕವಿ ನಾಗರಾಜ್ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಒಂದು ಸತ್ಸಂಗ ನಡೆಯಿತು. ಬೇಲೂರಿನ ವೇದಾಧ್ಯಾಯೀ ವಿಶ್ವನಾಥಶರ್ಮರು ಅಗ್ನಿಹೋತ್ರವನ್ನು ನಡೆಸಿಕೊಟ್ಟರು.ನಾವೆಲ್ಲರೂ ಸಾಮಾನ್ಯವಾಗಿ ಹೇಳುವ ಒಂದು ಮಂತ್ರವನ್ನು ಅಗ್ನಿಹೋತ್ರ ನಡೆಯುವಾಗ ಶ್ರೀ ಶರ್ಮರು ಹೇಳಿ ಅದರ ಅರ್ಥವನ್ನೂ ವಿವರಿಸಿದರು. ಹೌದು, ನಮಗೆಲ್ಲರಿಗೂ ಅದರ ಅರ್ಥವೂ ತಿಳಿದಿದೆ. ಆದರೆ ಅದರ ಒಳಹೊಕ್ಕು ಆ ಮಂತ್ರದ ಅರ್ಥವನ್ನು ತಿಳಿದಿದ್ದೇವೆಯೇ? ಎಂದು ಸ್ವಲ್ಪ ವಿಚಾರ ಮಾಡೋಣ.

ಅಸತೋಮಾ ಸದ್ಗಮಯ|
ತಮಸೋಮಾ ಜ್ಯೋತಿರ್ಗಮಯ|
ಮೃತ್ಯೋರ್ಮಾ ಅಮೃತಂಗಮಯ|
ಓಂ ಶಾಂತಿ: ಶಾಂತಿ: ಶಾಂತಿ: ||

ಅಸತ್ಯದಿಂದ ಸತ್ಯದ ಕಡೆ ಹೋಗೋಣ
ಕತ್ತಲೆಯಿಂದ ಬೆಳಕಿನತ್ತ ಹೋಗೋಣ
ಮೃತ್ಯುವಿನಿಂದ ಅಮೃತತ್ವ ಕಡೆಗೆ ಹೋಗೋಣ
ಎಲ್ಲರಿಗೂ ಶಾಂತಿ ಸಿಗಲಿ-
ಇದು ಭಾವಾರ್ಥ. ಆದರೆ ಇದರ ಒಳಹೊಕ್ಕು ನಾವು ಮಂತ್ರವನ್ನು ಅರ್ಥ ಮಾಡಿಕೊಂಡಿದ್ದೇವೆಯೇ? ಹಾಗೆ ಒಂದು ವೇಳೆ ಮಂತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೇ ಆದರೆ ಇಂದು ನಮ್ಮ ಬಾಳು ನೆಮ್ಮದಿಯಿಂದ ಇರಲೇ ಬೇಕಲ್ಲವೇ?

"ಅಸತ್ಯದಿಂದ ಸತ್ಯದ ಕಡೆ ಹೋಗೋಣ"- ಸರಳವಾಗಿ ಹೇಳುವ ಈ ಮಾತಿಗೆ ಎಷ್ಟು ಅರ್ಥವಿದೆ! ಅಸತ್ಯ ಅಂದರೇನು? ಸತ್ಯ ಎಂದರೇನು? -ಈ ಪದಗಳ ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕಲ್ಲವೇ? ಇಲ್ಲಿ ನಾವು ವೇದಾಂತಿಗಳಾಗುವುದೇನೂ ಬೇಡ. ಆದರೆ "ಅಸತ್ಯದಿಂದ ಸತ್ಯದ ಕಡೆ ಹೋಗೋಣ"- ಎಂದು ಮಂತ್ರವನ್ನು ಹೇಳಿದ ಮೇಲೆ ಮಂತ್ರದಂತೆ ನಡೆಯಬೇಕಲ್ಲವೇ? ನಾವು ಹಾಗೆ ಮಾಡುತ್ತಿದ್ದೇವೆಯೇ? ದೇವರ ಹೆಸರಿನಲ್ಲಿ ಮಾಡುತ್ತಿರುವ ಪೂಜೆ-ಪುನಸ್ಕಾರಗಳು, ಆಚರಿಸುತ್ತಿರುವ ಆಚರಣೆಗಳು, ಹವನ-ಹೋಮಗಳು, ಇತ್ಯಾದಿಗಳನ್ನು ಸತ್ಯಪಥದಲ್ಲಿ ಆಚರಿಸುತ್ತಿದ್ದೇವೆಯೇ? ಶ್ರೀ ಸುಧಾಕರಶರ್ಮರು ಬಹಳ ನಿಷ್ಟುರವಾಗಿಯೇ ಒಂದು ಮಾತು ಹೇಳುತ್ತಾರೆ. ಸರ್ವವ್ಯಾಪಿಯೂ, ಸಾರ್ವಭೌಮನೂ, ಸರ್ವಜ್ಞನೂ ಆದ ಭಗವಂತನಿಗೆ ನಾವು ಏನೇನೋ ಆಕಾರಕೊಟ್ಟು , ಅವನನ್ನು ಕುಬ್ಜನನ್ನಾಗಿ ಮಾಡಿಬಿಡುತ್ತೀವಲ್ಲಾ! ಸುಳ್ಳು ಸುಳ್ಳು ಕಥೆಗಳನ್ನೇ ಹೇಳುತ್ತಾ ಅದನ್ನೇ ನಿಜವೆನಿಸಲು ಹೊರಟಿದ್ದೀವಲ್ಲಾ! ಇದು ಅಸತ್ಯದಿಂದ ಸತ್ಯದ ಕಡೆ ಹೋಗೋಣವೆಂದು ಮಂತ್ರ ಹೇಳುವ ನಮಗೆ ಎಷ್ಟು ಸರಿ ಹೊಂದುತ್ತದೆ?

ತಮಸೋಮಾ ಜ್ಯೋತಿರ್ಗಮಯ|
"ಕತ್ತಲೆಯಿಂದ ಬೆಳಕಿನತ್ತ ಹೋಗೋಣ"- ನಾವು ಅದೇ ಕತ್ತಲೆಯಲ್ಲಿ ಸಿಕ್ಕಿಹಾಕಿಕೊಂಡು ನೆರಳುತ್ತಿಲ್ಲವೇ?

ಮೃತ್ಯೋರ್ಮಾ ಅಮೃತಂಗಮಯ|
"ಮೃತ್ಯುವಿನಿಂದ ಅಮೃತತ್ವ ಕಡೆಗೆ ಹೋಗೋಣ"- ನಾವೆಲ್ಲಾ ಮೃತ್ಯುವಿನ ಭೀತಿಯಲ್ಲಿಯೇ ಕಾಲ ಹಾಕುತ್ತಿಲ್ಲವೇ? ನಾವು ತಿನ್ನುತ್ತಿರುವ ಆಹಾರವು ವಿಷಪೂರಿತವಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಆದರೂ ನಾವು ನಮ್ಮ ಆಹಾರದ ಶೈಲಿ ಬದಲಿಸಲು ಸಿದ್ಧರಿಲ್ಲ. ಹೀಗಾದರೆ ಅಮೃತತ್ವದ ಕಡೆ ಹೋಗುವುದಾದರೂ ಹೇಗೆ?
ಅಷ್ಟೇ ಅಲ್ಲ, ನಮ್ಮ ಚಿಂತನೆಗಳು, ಆಲೋಚನೆಗಳು,ನಮ್ಮ ಬದುಕಿನ ಶೈಲಿ, ಆಹಾರ ಕ್ರಮ -ಇವೆಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತವೆ. 
ಸಧ್ಯದ ಪರಿಸ್ಥಿತಿಯಲ್ಲಿ ನಾವೆಲ್ಲಿದ್ದೇವೆಂಬುದನ್ನು ಕೇವಲ ಕೆಲವೇ ಶಬ್ಧಗಳಲ್ಲಿ ಇಲ್ಲಿ ಪ್ರಸ್ತಾಪಿಸಲಾಗಿದೆ.
ವೇದಸುಧೆಯ ಅಭಿಮಾನಿಗಳೇ ಹೊಸವರ್ಷದಲ್ಲಿ ಮೇಲೆ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಸ್ವಲ್ಪ ಚಿಂತನ-ಮಂಥನ ನಡೆಸೋಣ. ಅರ್ಥವನ್ನು ತಿಳಿದು ಮಂತ್ರವನ್ನು ಪಠಿಸೋಣ. ಹಾಗಲ್ಲದೆ ಕಂಠಪಾಠವಾದ ಮಂತ್ರವನ್ನು ಅರ್ಥ ತಿಳಿಯದೆ ಪಠಿಸಿದರೆ ಬರುವ ಭಾಗ್ಯವಾದರೂ ಏನು?
ಇಂತಹ ಪವಿತ್ರವಾದ ಭರತ ಭೂಮಿಯಲ್ಲಿ ಹುಟ್ಟಿರುವುದೇ ನಮ್ಮ ಪೂರ್ವಜನ್ಮದ ಪುಣ್ಯದ ಫಲ ವಲ್ಲವೇ? ವೇದದ ಭೂಮಿಯಲ್ಲಿ ಜನ್ಮತಾಳಿರುವ ನಾವು ವೇದ ವೆಂದರೆ ಜ್ಞಾನ ಎಂಬುದನ್ನು ಮನವರಿಕೆ ಮಾಡಿಕೊಂಡು ಕೆಲವಾದರೂ ವೇದಮಂತ್ರಗಳ ಅರ್ಥವನ್ನು ತಿಳಿದುಕೊಂಡಿದ್ದೇ ಆದರೆ ನಮ್ಮ ನೆಮ್ಮದಿಯ ಜೀವನಕ್ಕೆ ಬೇಕಾದ ಸಮಸ್ತವೂ ಅದರಲ್ಲಿದೆ ಎಂಬುದನ್ನು ತಿಳಿಸುತ್ತಾ, ವೇದವನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ವೇದಾಧ್ಯಾಯೀ ಸುಧಾಕರ ಶರ್ಮರ ಹಲವು ಉಪನ್ಯಾಸಗಳ ಆಡಿಯೋ ವೇದಸುಧೆಯ "ಶರ್ಮರ ಪುಟದಲ್ಲಿ ಲಭ್ಯವಿದೆ. ಹೊಸ ಬರಹಗಳಿಗಾಗಿ ಕಾಯುವ ಅಗತ್ಯವಿಲ್ಲ. ಈಗಾಗಲೇ ರುಚಿಯಾದ ಅಡುಗೆ ಸಿದ್ಧವಾಗಿದೆ. ಅದನ್ನು ಉಣಬಡಿಸಲು ವೇದಸುಧೆಯು ಸಾಕಷ್ಟು ಶ್ರಮಪಟ್ಟು ಸಂಗ್ರಹಿಸಿ ಪ್ರಕಟಿಸಿದೆ. ಅವುಗಳನ್ನು ಕೇಳಿದ್ದೇ ಆದರೆ ವೇದಪಥದಲ್ಲಿ ಕ್ರಮಿಸಲು ನಮಗೆ ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ - 2

     ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ವಿಗ್ರಹ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆಯುತ್ತಿರುವ/ಪಡೆಯಬಯಸುವ ಬಹುತೇಕರ ಶ್ರದ್ಧೆ, ನಂಬಿಕೆಗಳು ಸುಳ್ಳೆಂದು ನಾನು ಹೇಗೆ ಹೇಳಲಿ? ಅವರುಗಳ ಪ್ರಾರ್ಥನೆಗೆ ವಿಗ್ರಹಗಳು ಮಾಧ್ಯಮವಾಗಿರಬಹುದು. ವಿಗ್ರಹಗಳು ಅವರ ಮನೋಶಕ್ತಿಯ ಕೇಂದ್ರೀಕರಣಕ್ಕೆ ಸಾಧನ ಹಾಗೂ ಸಹಕಾರಿಯಾಗಿ ಇರಬಹುದು. ವಿಗ್ರಹಗಳನ್ನು ದೇವರೆಂದು ಭಾವಿಸಿ, ನಂಬಿ ಪೂಜಿಸುವವರ ಮಾನಸಿಕ ಚಿಂತನೆಯ ಅಲೆಗಳು ವಿಗ್ರಹಗಳಲ್ಲಿ ಕ್ರೋಢೀಕೃತಗೊಂಡು ಅಲ್ಲಿ ಶಕ್ತಿ ಸಂಚಯನ ಆಗಿರಬಹುದು. ಅಂತಹ ಸ್ಥಳಗಳು ಶಕ್ತಿ ಕೇಂದ್ರಗಳಾಗಿರಬಹುದು. ಇಲ್ಲೂ ಸಹ ವಿಗ್ರಹಗಳಿಗಿಂತ ಅವುಗಳನ್ನು ಪೂಜಿಸುವವರ ಮನೋಶಕ್ತಿಯೇ ನಿರ್ಧಾರಕವೆಂದು ನನ್ನ ವೈಯಕ್ತಿಕ ಅನಿಸಿಕೆ. ದೇವರನ್ನು ವಿಗ್ರಹಗಳಲ್ಲಿ ಅಥವ ವಿಗ್ರಹಗಳ ಮೂಲಕ ಕಾಣುವುದರಲ್ಲಿಯೂ ಅರ್ಥವಿರಬಹುದು, ಇಲ್ಲದಿರಬಹುದು. ಆದರೆ ವಿಗ್ರಹಗಳೇ ದೇವರೆಂದು ಭಾವಿಸುವುದು ತಾರ್ಕಿಕವಾಗಿಯೂ ಸಹ ಕಷ್ಟಕರ ಸಂಗತಿ. ಒಂದು ಹಂತದ ಪರಿಪಕ್ವತೆ ಬಂದ ನಂತರದಲ್ಲಿ ವಿಗ್ರಹ ಪೂಜೆಯ ಅಗತ್ಯ ಬಾರದೇ ಹೋಗಬಹುದು. ಕೆಲವು ದೇವಸ್ಥಾನಗಳಲ್ಲಿ ದೇವರ ಪ್ರಸಾದ ಕೇಳಿ ಬೇಡುತ್ತಾ ಕುಳಿತ ಭಕ್ತರನ್ನು ಗಮನಿಸಿದ್ದೀರಾ? ಬಲಗಡೆ ಹೂವು ಬಿದ್ದರೆ ಒಪ್ಪಿಗೆಯೆಂತಲೂ ಎಡಗಡೆ ಬಿದ್ದರೆ ಅಶುಭವೆಂದು ನಂಬುವ ಅವರು ದೇವರೊಂದಿಗೆ ಮಾತನಾಡುವ ಪರಿಯನ್ನೂ ನೋಡಿದ್ದೇನೆ. ತಮ್ಮ ಕಷ್ಟ ಸುಖ ತೋಡಿಕೊಳ್ಳುತ್ತಾ 'ಯಾಕಪ್ಪಾ ಇಷ್ಟು ಪರೀಕ್ಷೆ ಮಾಡುತ್ತೀಯಾ? ಇನ್ನೂ ಸತಾಯಿಸಬೇಡ, ಒಳ್ಳೆಯದು ಮಾಡಪ್ಪಾ, ಬೇಗ ಪ್ರಸಾದ ಕೊಡು' ಎಂಬಿವೇ ಇತ್ಯಾದಿ ಹಳಹಳಿಸುತ್ತಿರುತ್ತಾರೆ. ಪ್ರಸಾದ ಕೇಳಲು ಬಂದ ಇತರರೂ ಅವರ ಸರದಿಗಾಗಿ ಕಾಯುತ್ತಿರುತ್ತಾರೆ. ಹಲವರಿಗೆ ಅದು ಭ್ರಮೆಯಂತೆ ಕಂಡರೂ ಭಕ್ತರ ತದೇಕ ಚಿತ್ತತೆ, ನಂಬಿಕೆ ಅಲ್ಲಿ ಎದ್ದು ಕಾಣುತ್ತದೆ. ಅಲ್ಲಿಯೂ ಅವರ ಮನೋಶಕ್ತಿಯೇ ಪ್ರಮುಖವೆಂದು, ವಿಗ್ರಹವಲ್ಲವೆಂದು ನನಗೆ ಅನ್ನಿಸುತ್ತದೆ. ವೈದ್ಯರಲ್ಲಿನ ನಂಬಿಕೆ ಅರ್ಧ ಕಾಯಿಲೆ ವಾಸಿ ಮಾಡುವಂತೆ ದೇವರಲ್ಲಿನ ಅವರ ನಂಬಿಕೆ ಅವರಿಗೆ ನೆಮ್ಮದಿ, ಶಾಂತಿ ಕಂಡುಕೊಳ್ಳಲು ನೆರವಾಗಬಹುದು. ಮೊದಲಿನಿಂದ ಪೂರ್ವಜರು ಮತ್ತು ಸುತ್ತಮುತ್ತಲಿನವರು ಇಟ್ಟುಕೊಂಡು ಬಂದ ನಂಬಿಕೆ, ನಡವಳಿಕೆಗಳನ್ನು ಅವರು ಮುಂದುವರೆಸುತ್ತಾರೆ. ಮುಂದೆ ಅವರ ಮಕ್ಕಳೂ ಅದೇ ರೀತಿಯಲ್ಲಿ ಸಾಗಬಹದು.


     ಒಂದು ಪ್ರಾಂತದ ರಾಜನೊಬ್ಬ ಸ್ವಾಮಿ ವಿವೇಕಾನಂದರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭ. ಆ ರಾಜನಿಗೆ ವಿಗ್ರಹಾರಾಧನೆಯಲ್ಲಿ/ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ವಿಗ್ರಹಪೂಜೆ ಬಗ್ಗೆ ಆತ ನಿಕೃಷ್ಟವಾಗಿ ಮಾತನಾಡಿದುದನ್ನು ಶಾಂತವಾಗಿ ಆಲಿಸಿದ ವಿವೇಕಾನಂದರು ರಾಜನ ಭಾವಚಿತ್ರವೊಂದನ್ನು ತರಿಸಲು ಹೇಳಿದರು. ಭಾವಚಿತ್ರ ತಂದಾಗ ಅಲ್ಲಿದ್ದ ಸಭಾಸದರೊಬ್ಬರನ್ನು ಕರೆದು ಆ ಭಾವಚಿತ್ರದ ಮೇಲೆ ಉಗುಳಲು ಹೇಳಿದರು. ಆ ವ್ಯಕ್ತಿ ನಡುಗಿಹೋದರು -'ರಾಜರ ಭಾವಚಿತ್ರದ ಮೇಲೆ ಉಗುಳುವುದೇ?'. ವಿವೇಕಾನಂದರು ಹೇಳಿದರು -'ಇದು ರಾಜರ ಭಾವಚಿತ್ರವೇ ಹೊರತು ರಾಜರಲ್ಲ; ಉಗುಳಿದರೆ ರಾಜರಿಗೆ ಏನೂ ಆಗುವುದಿಲ್ಲ'. ಅದಕ್ಕೆ ಅವರು 'ಸ್ವಾಮಿ, ಇದು ಭಾವಚಿತ್ರವಿರಬಹುದು. ಆದರೆ ಇದರಲ್ಲಿ ನಾವು ರಾಜರನ್ನು ಕಾಣುತ್ತಿದ್ದೇವೆ. ಇದರ ಮೇಲೆ ಉಗುಳುವುದು ನಮಗೆ ಕಲ್ಪನೆಯಲ್ಲಿಯೂ ಅಸಾಧ್ಯ'. ಆಗ ವಿವೇಕಾನಂದರು ರಾಜರಿಗೆ 'ದೇವರ ವಿಗ್ರಹಗಳು ದೇವರಲ್ಲ. ಅದರೆ ಜನ ಅಲ್ಲಿ ದೇವರನ್ನು ಕಾಣುತ್ತಾರೆ. ಅವುಗಳನ್ನು ಪೂಜಿಸಿ ನೆಮ್ಮದಿ, ಶಾಂತಿ ಕಂಡುಕೊಳ್ಳುತ್ತಾರೆ. ಆದ್ದರಿಂದ ವಿಗ್ರಹಪೂಜೆಯನ್ನು ವಿರೋಧಿಸುವುದು ಸಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದರು.


     ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು ಹುಟ್ಟು ಹಾಕಲಾಗುತ್ತಿರುವ ಹಿಂದೂ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಮೈಗೂಡಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಪರಧರ್ಮ ಸಹಿಷ್ಣುತೆಯ ಕೊರತೆ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಹಾಗೆಂದು ನಾನು ಯಾವುದೇ ಧರ್ಮದ ಪರ ಅಥವಾ ವಿರೋಧಿ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಸಮಸ್ಯೆ, ಸಂಘರ್ಷಗಳ ಬಗ್ಗೆ ಮಾತ್ರ ನನ್ನಲ್ಲಿ ತಳಮಳ ಇದೆ.

     ನನ್ನ ಮನಸ್ಥಿತಿ ಹೇಗಿದೆಯೆಂದರೆ ಯಾವುದಾದರೂ ಉತ್ತಮ ಗ್ರಂಥ ಓದಿದಾಗ ಅದರಲ್ಲಿನ ಒಳ್ಳೆಯ ಅಂಶಗಳಿಗೆ ಮಾರುಹೋಗುತ್ತೇನೆ. ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ. ಚಿಕ್ಕಂದಿನಲ್ಲಿ ಪ್ರತಿದಿನ ಸಾಯಂಕಾಲ ಆಟ ಆಡಿಕೊಂಡು ಬಂದ ನಂತರ ಕೈಕಾಲುಮುಖ ತೊಳೆದುಕೊಂಡು ನಾವು ಐವರು ಮಕ್ಕಳು ನಮ್ಮ ತಾಯಿ ಹೇಳಿಕೊಡುತ್ತಿದ್ದ ಪ್ರಾರ್ಥನೆ, ಭಜನೆಗಳನ್ನು ಒಟ್ಟಿಗೆ ಹೇಳಿ ದೇವರಿಗೆ ನಮಸ್ಕಾರ ಮಾಡಿದ ನಂತರವೇ ಓದಿಕೊಳ್ಳಲು ತೊಡಗುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ತಂದೆಯವರು ಮಾಡುತ್ತಿದ್ದ ದೇವರ ಪೂಜೆ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಪಡೆದ ಮೇಲಷ್ಟೇ ನಮಗೆ ತಿಂಡಿ ಸಿಗುತ್ತಿತ್ತು. ಆ ದಿನಗಳಲ್ಲಿ ತೋರಣ ಕಟ್ಟುವುದು, ಗಣಪತಿ ಪೂಜೆಗೆ ಮಂಟಪ ಸಿದ್ಧಪಡಿಸುವುದು, ನವರಾತ್ರಿಯಲ್ಲಿ ಗೊಂಬೆಗಳನ್ನು ಅಂದವಾಗಿ ಜೋಡಿಸುವುದು, ಇತ್ಯಾದಿಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಮಾಡುತ್ತಿದ್ದೆ. ಸಾಮೂಹಿಕ ರಾಮನವಮಿ, ಗಣೇಶ ಉತ್ಸವಗಳ ಸಂದರ್ಭಗಳಲ್ಲಿ ಏರ್ಪಾಡಾಗುತ್ತಿದ್ದ ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ತಲ್ಲೀನನಾಗಿ ಕೇಳುತ್ತಿದ್ದೆ. ವಿಶೇಷವಾಗಿ ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿರುತ್ತಿದ್ದ ಹರಿಕಥೆಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ರಾಮಾಯಣ, ಮಹಾಭಾರತಗಳು ನಿಜವಾಗಿಯೂ ನಡೆದಿದೆಯೋ, ಇಲ್ಲವೋ ಎಂಬಿತ್ಯಾದಿ ವಿವಾದಗಳ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಅವುಗಳಲ್ಲಿ ತುಂಬಿರುವ ನೀತಿಪಾಠಗಳು, ಜೀವನದರ್ಶನ ಅನುಕರಣೀಯ.


     ದೇವರ ಕುರಿತು ಜಿಜ್ಞಾಸೆ, ದೇವರನ್ನು ಪೂಜಿಸುವ ರೀತಿ ಕುರಿತು ವಿವಿಧ ಆಲೋಚನೆಗಳು ಚಿಕ್ಕಂದಿನಿಂದಲೇ ಬಂದಿತ್ತು. ಹಬ್ಬ ಹರಿದಿನಗಳಲ್ಲಿ ತಂದೆಯವರು ಪೂಜೆ ಮಾಡುವ ಸಂದರ್ಭಗಳಲ್ಲಿ ನಾವು ಮಕ್ಕಳಿಗೆ ಸಹಜವಾದ ಆಟ, ಜಗಳಗಳಲ್ಲಿ ತೊಡಗಿ ಕಿರುಚಾಟ, ಅಳು, ಗಲಾಟೆ ಮಾಡುತ್ತಿದ್ದರಿಂದ ತಂದೆಯವರ ಏಕಾಗ್ರತೆಗೆ ಭಂಗ ಬಂದು ಅವರು ಸಿಟ್ಟಿಗೇಳುತ್ತಿದ್ದರು. ಆ ಸಿಟ್ಟಿನಲ್ಲಿ ಮಕ್ಕಳಲ್ಲಿ ದೊಡ್ಡವನಾದ ನನಗೆ ಬೈಗುಳ ಮತ್ತು ಪೆಟ್ಟುಗಳು ಬೀಳುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ನನ್ನ ತಪ್ಪಿಲ್ಲದಿದ್ದರೂ ನಾನು ಬೈಸಿಕೊಳ್ಳಬೇಕಾದಾಗ, ಪೆಟ್ಟು ತಿನ್ನಬೇಕಾಗಿ ಬಂದಾಗ ನನಗೆ ಸರಿಕಾಣುತ್ತಿರಲಿಲ್ಲ. ಆಗೆಲ್ಲಾ ನನ್ನ ಮನಸ್ಸು 'ಹಬ್ಬ ಮಾಡುವುದು ಎಲ್ಲರಿಗೂ ಒಳ್ಳೆಯದಾಗಲಿ, ಸಂತೋಷ ಸಿಗಲಿ ಎಂದು; ಇದರಿಂದ ಮನಸ್ಸಿಗೆ ಬೇಸರವಾಗುವುದಾದರೆ ಅಂತಹ ಹಬ್ಬ ಏಕೆ ಬೇಕು?' ಎಂದು ಯೋಚಿಸುತ್ತಿತ್ತು. ಚಿಕ್ಕಂದಿನಿಂದಲೇ ದೇವರ ಕುರಿತು ತರ್ಕ, ಜಿಜ್ಞಾಸೆಗಳಿಗೆ ಶ್ರೀಕಾರ ಬಿದ್ದಿತ್ತು.


     ಇಂದು ಯಾರನ್ನು ನಮ್ಮ ಕಷ್ಟ, ಕಾರ್ಪಣ್ಯಗಳಿಗಾಗಿ ಮೊರೆಯಿಡುತ್ತೇವೆಯೋ ಆ ದೇವರುಗಳೇ ಸಮಸ್ಯೆಗಳ ಮೂಲವಾಗಿರುವುದು ಯುಗಮಹಿಮೆ. ದೇವರಿಗಾಗಿ ಧರ್ಮಯುದ್ಧಗಳು, ಮಾರಣಹೋಮಗಳು ನಡೆಯುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ತಮ್ಮ ಮತ-ಧರ್ಮದ ವಿಸ್ತಾರದ ಹಿನ್ನೆಲೆಯೇ ದೇಶ-ದೇಶಗಳ ನಡುವೆ ನಡೆಯುವ ಯುದ್ಧಗಳ ನಿಜವಾದ ಕಾರಣವೆಂಬುದು ಸುಸ್ಪಷ್ಟ. ನಾನು ದೇವರು/ದೇವರುಗಳ ವಿರುದ್ಧ ಮಾತನಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನದ ಬಗ್ಗೆ ಹೇಳುತ್ತಿದ್ದೇನೆ. ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಜೊತೆಗೆ ಕೆಟ್ಟ ಸಂಪ್ರದಾಯಗಳೂ ಆಚರಿಸಲ್ಪಡುತ್ತಿವೆ. ನಿಜವಾಗಿಯೂ ದೇವರು ತನ್ನನ್ನು ಕುರಿತು ಜನರು ಪೂಜಿಸಬೇಕು, ಪ್ರಾರ್ಥಿಸಬೇಕು ಎಂದು ಬಯಸುತ್ತಾನೆ ಎಂದು ನಾನು ನಂಬುವುದಿಲ್ಲ. ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಜನರಿಗೆ ಬೇಕಾಗಿದೆಯೇ ಹೊರತು ದೇವರಿಗಲ್ಲ. ನೂರೆಂಟು ಪಾಪಕೃತ್ಯಗಳನ್ನು ಮಾಡಿ ಪರಿಹಾರರೂಪವಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡುವುದು, ಹುಂಡಿಗೆ ಹಣ ಹಾಕುವುದು, ಇತ್ಯಾದಿ ಮಾಡಿ ಪಾಪ ಕಳೆದುಕೊಂಡ ಭಾವನೆ ಮೂಡಿಸಿಕೊಳ್ಳುವುದು ಕಾಣುತ್ತೇವೆ. ಪಾಪ ಮಾಡಿದ್ದನ್ನು ಕ್ಷಮಿಸುವಂತಹ ದೇವರಿಗಿಂತ ಪಾಪಕ್ಕೆ ತಕ್ಕ ಶಿಕ್ಷೆ ಕೊಡುವ ದೇವರು ನನಗೆ ಇಷ್ಟ. ಏಕೆಂದರೆ ಹೀಗಿದ್ದರೆ ಕೆಟ್ಟದನ್ನು ಮಾಡಲು ಹಿಂಜರಿಯುವಂತಹ ವಾತಾವರಣ ಬರಬಹುದು. ಆದರೆ ನಮ್ಮ ಇಷ್ಟ, ಕಷ್ಟ ಅನುಸರಿಸಿ ದೇವರು ಇರುತ್ತಾನೋ, ಇಲ್ಲವೋ ಗೊತ್ತಿಲ್ಲ.

     ದೇವರ ಕುರಿತು ಜಿಜ್ಞಾಸೆ, ಗೊಂದಲಗಳು ಬಗೆಹರಿಸಲು ಆ ದೇವರೇ ಬರಬೇಕು! ಬಸವಣ್ಣನವರು ಎಲ್ಲಾ ಜಾತಿಗಳವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಆಗಿದ್ದೇನು? ಅಂತಹವರದ್ದೇ ಒಂದು ಜಾತಿ/ಧರ್ಮ ಆಯಿತು. ಮಧ್ಯಪ್ರದೇಶದಲ್ಲೂ ಸಹ ಜಾತಿ ಪದ್ಧತಿ ವಿರೋಧಿಸುವ ಗುಂಪಿದ್ದು, ಅವರನ್ನು 'ಅಜಾತರು' ಎಂಬ ಜಾತಿ ಹೆಸರು ಇಟ್ಟು ಅವರದೇ ಜಾತಿ ಮಾಡಿಬಿಟ್ಟಿದ್ದಾರೆ. ಯಾವುದೇ ಹೊಸ ವಿಚಾರ, ಜ್ಞಾನ ಪಸರಿಸುವವರನ್ನೂ ಸಹ ಪ್ರತ್ಯೇಕಿಸಿ ಹೆಸರಿಟ್ಟುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಾನ್ವೇಶಿಗಳು ಗೊಂದಲ, ತೊಂದರೆಗಳಿಗೆ ಸಿಲುಕುತ್ತಾರೆ.


     ವೇದಗಳ ಕುರಿತು ವೇದಾಧ್ಯಾಯಿ ಸುಧಾಕರ ಶರ್ಮರವರ ಉಪನ್ಯಾಸಗಳು ಸೇರಿದಂತೆ ಹಲವಾರು ಜ್ಞಾನವೇತ್ತರ ಮಾತುಗಳನ್ನು ಕೇಳಿದ ನಂತರ ಮತ್ತು ಸಂಬಂಧಿಸಿದ ವಿಚಾರಧಾರೆಗಳಿರುವ ಪುಸ್ತಕಗಳನ್ನು ಓದಿದ ನಂತರ ಸಂದೇಹಗಳು ಬಗೆಹರಿದಿಲ್ಲವಾದರೂ ನನ್ನ ವಿಚಾರ ಸರಿಯಾದ ದಾರಿಯಲ್ಲಿದೆಯೆಂಬ ಭಾವ ಮೂಡುತ್ತಿದ್ದು ಒಂದು ರೀತಿಯ ಅಭಿಪ್ರಾಯ ನನ್ನೊಳಗೆ ಸಾಂದ್ರೀಕೃತವಾಗುತ್ತಿದೆ. ಅವೆಂದರೆ:
೧. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
೨. ನಮಗೆ ಆಗುವ ಎಲ್ಲಾ ಒಳಿತು ಕೆಡಕುಗಳಿಗೆ ನಾವೇ ಕಾರಣರೇ ಹೊರತು ಇತರರಲ್ಲ, ದೇವರಲ್ಲವೇ ಅಲ್ಲ. ದೇವಸ್ಥಾನಕ್ಕೆ ಹೋಗಿ ತಪ್ಪುಕಾಣಿಕೆ ಹಾಕುವುದರಿಂದ ಮತ್ತು ಕ್ಷಮಿಸಲು ಪ್ರಾರ್ಥಿಸುವುದರಿಂದ ಮಾಡಿದ ಪಾಪ ಹೋಗುವುದಿಲ್ಲ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ.
೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳಿತನ್ನೇ ತರುತ್ತದೆ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ!
೪. ಒಳ್ಳೆಯದು ಮತ್ತು ಸತ್ಯವೆಂದು ಭಾವಿಸುವ ದಾರಿಯಲ್ಲಿ ನಡೆಯುವುದೇ ದೇವರ ಪೂಜೆ.
೫. ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ.
೬. ಸತ್ಯ ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹವಿಲ್ಲದೆ ಸ್ವೀಕರಿಸುವ ಮತ್ತು ಅಗತ್ಯವೆನಿಸಿದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಮನೋಭಾವ ಬರಬೇಕು.


      ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ. ಆತ ತನ್ನ ಕೆಲಸ ಮಾಡಿಯೇ ಮಾಡುತ್ತಾನೆ. ನಾವು ನಮ್ಮ ಕೆಲಸ ಮಾಡೋಣ, ಅಂದರೆ ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರಿತು ಸತ್ಯಾನ್ವೇಶಿಗಳಾಗಿ ನಡೆಯೋಣ, ಇರುವಷ್ಟು ಕಾಲ ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ ಮಾಡದಿರೋಣ!

************

-ಕ.ವೆಂ.ನಾಗರಾಜ್.