Pages

Wednesday, November 30, 2011

ಸತ್ಸಂಗ


 ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ
  ಮಾತಾಜಿ ವಿವೇಕಮಯೀ    
  ಇವರಿಂದ 
 ನಮ್ಮ ಮನೆಯಲ್ಲಿ  ಸತ್ಸಂಗವನ್ನು ಆಯೋಜಿಸಲಾಗಿದೆ. ವಿವರ ಇಲ್ಲಿದೆ.

ಸ್ಥಳ:  ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ,
 ಹೊಯ್ಸಳನಗರ
 ಪೋಲೀಸ್ ಕಾಲೋನಿ, ಹಾಸನ

ಸತ್ಸಂಗ:  ದಿನಾಂಕ: 2.12.2011 ಶುಕ್ರವಾರ ಸಂಜೆ 6.00 ಕ್ಕೆ 
ಧ್ಯಾನ:  ದಿನಾಂಕ 3.12.2011 ಶನಿವಾರ ಬೆಳಿಗ್ಗೆ 6.30 ಕ್ಕೆ 

ವಿ.ಸೂ: ಹೊರ ಊರಿನಿಂದ ಬಂದವರಿಗೆ ಉಳಿಯಲು ವ್ಯವಸ್ಥೆ ಇದೆ.

 ಸರ್ವರಿಗೂ ಸ್ವಾಗತ

-ಹರಿಹರಪುರ ಶ್ರೀಧರ್ 

Tuesday, November 29, 2011

ಯೋಚಿಸಲೊ೦ದಿಷ್ಟು...೪೬

೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು..
೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ.. ಮತ್ತೊಬ್ಬರ ಆರೈಕೆ ಮಾಡುವುದಾಗಲೀ.. “ಆರೈಕೆ“ ಎ೦ಬುದೊ೦ದು ಸು೦ದರ ಅನುಭವ!
೩. ನಮಗೆ ಯಾವುದು ಬೇಡವಾಗಿಲ್ಲವೋ ಅದನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ಕೊಡಬಾರದೆ೦ಬುದೇ ಉಡುಗರೆ ಕೊಡಲು ಅನುಸರಿಸಬೇಕಾದ ಸುವರ್ಣದ೦ತಹ ಸೂತ್ರ!- ವಿಲಿಯ೦ ಆಲನ್ ನೈಟ್
೪. ಉತ್ಸಾಹ ಇಲ್ಲದೆ ಯಾರಿ೦ದಲೂ ಯಾವಾಗಲೂ ಅಮೋಘವಾದದ್ದೇನೂ ಸಾಧಿಸಲ್ಪಟ್ಟಿಲ್ಲ!
೫. ನಾವು ಪರರಿಗೆ ಮಾಡಿದ ಉಪಕಾರವನ್ನು ಅವರಿಗೆ ನೆನಪಿಸುವುದೆ೦ದರೆ ಅವರನ್ನು ಬೈದ೦ತೆಯೇ!!
೬. ಇನ್ನಷ್ಟು ಪಡೆಯುವ ಆಸೆಯಿ೦ದ ಪರರಿಗೆ ಉಪಕರಿಸಬಾರದು!
೭. ನಾವು ಉಪದೇಶಿಸಿದ೦ತೆ ನಡೆಯಬೇಕೆ೦ದು ಎಲ್ಲರೂ ಒಪ್ಪುತ್ತಾರೆ... ಆದರೆ ನಡೆಯುವ೦ತೆಯೇ ಉಪದೇಶಿಸಬೇಕೆ೦ಬುದನ್ನು ಮಾತ್ರ ಎಲ್ಲರೂ ಖ೦ಡಿಸುತ್ತಾರೆ!!
೮. ನಾಳೆ ಎನ್ನುವವರು ಮೂವರು ಮಾತ್ರ – ದರ್ಜಿ,ಅಕ್ಕಸಾಲಿಗ ಮತ್ತು ಅಗಸ- ಬೀ.ಚಿ.
೯. ಕುಟು೦ಬ ಭ್ರಷ್ಟಾಚಾರದಲ್ಲಿ ನಿರತನಾದ ರಾಜಕಾರಣಿ ತನ್ನ ಜಾತಿಯ ಹೆಸರಿನಿ೦ದ ಮು೦ದೆ ಬರಲು ಯತ್ಸಿಸಿ,ಸಫಲನಾದರೂ ಅದರಿ೦ದ ಅವನಿಗೇ ಲಾಭವೇ ಹೊರತು ಅವನ ಜಾತಿಯ ಸಾಮಾನ್ಯ ಜನರಿಗೆ ಏನೂ ಲಾಭವಾಗಲಾರದು!
೧೦. ರೆಕ್ಕೆಗಳಿಲ್ಲದ ಹಕ್ಕಿ, ಹಲ್ಲು ಕಿತ್ತ ಹಾವು, ಒಣಗಿದ ಮರ, ನೀರಿಲ್ಲದ ಸರೋವರ ಮತ್ತು ಬಡವ ಎಲ್ಲರೂ ಒ೦ದೇ!
೧೧. ಉಪದೇಶದಿ೦ದ ಪ್ರಯೋಜನ ಪಡೆಯಬೇಕಾದರೆ, ಅದನ್ನು ಕೊಡಬೇಕಾದ ಬುಧ್ಧಿಗಿ೦ತ ಹೆಚ್ಚಿನ ಬುಧ್ಧಿಶಕ್ತಿ ಬೇಕು!!
೧೨.ಲೋಕೋಧ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ೦ದು ಯಾರೂ ತಿಳಿದುಕೊಳ್ಳಬಾರದು.. ನಮ್ಮ ಪ್ರಯತ್ನ ನಮ್ಮ ಏಳ್ಗೆಗೆ ಹಾಗೂ ಬಾಳಿನ ಸಫಲತೆಗಾಗಿ!!- ಡಿ.ವಿ.ಜಿ.
೧೩. ನಾವು ಪ್ರತಿಯೊಬ್ಬರೂ ಒ೦ದಲ್ಲ ಒ೦ದು ರೀತಿಯ ಋಣವನ್ನು ಹೊತ್ತವರೇ!!
೧೪. ಏಕಾ೦ತವೆ೦ದರೆ ಎಲ್ಲರನ್ನೂ ಬಿಟ್ಟು ಒ೦ಟಿಯಾಗಿರುವುದಲ್ಲ.. ಅದು ಬಾಳಿನ ಏಕಾ೦ತ- ಎಲ್ಲೇ ಇದ್ದರೂ, ಯಾರೊಡನಿದ್ದರೂ ಅದು ಸಾಧ್ಯವಾಗುತ್ತದೆ!!
೧೫.ಇತರರು ನಮಗೇನನ್ನು ಮಾಡಬಾರದೆ೦ದು ನಾವು ಅಪೇಕ್ಷಿಸುತ್ತೇವೆಯೋ ಅದನ್ನು ನಾವೂ ಅವರಿಗೆ ಮಾಡಬಾರದು!!

Monday, November 28, 2011

ವಿವೇಕ ಚೂಡಾಮಣಿ-ಭಾಗ-೧೭


मूलम् - ಮೂಲ
श्रोत्रियोऽवृजिनोऽकामहतो यो ब्र्ह्मवित्तमः ।
ब्रह्मण्युपरतः शान्तो निरिन्धन इवानलः।
अहेतुक-दयासिन्धुः बन्धुरानमतां सताम्॥३४॥

ಶ್ರೋತ್ರಿಯೋಽವೃಜಿನೋಽಕಾಮಹತೋ ಯೋ ಬ್ರಹ್ಮವಿತ್ತಮಃ|
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ |
ಅಹೇತುಕ-ದಯಾಸಿಂಧುರ್ಬಂಧುರಾನಮತಾಂ ಸತಾಮ್ ||೩೪||

ಪ್ರತಿಪದಾರ್ಥ:
(ಯಃ =ಯಾರು, ಶ್ರೋತ್ರಿಯೋ=ಶ್ರೋತ್ರಿಯನೋ(ಶಾಸ್ತ್ರಾರ್ಥಗಳ ವಿವೇಚನೆಯುಳ್ಳವನು), ಅವೃಜಿನಃ=ಪಾಪವಿಲ್ಲದವನು, ಅಕಾಮಹತಃ=ಬಯಕೆಗಳಿಲ್ಲದವನು,  ಬ್ರಹ್ಮವಿತ್ತಮಃ=ಜ್ಞಾನಿಗಳಲ್ಲಿ ಶ್ರೇಷ್ಠನು, ಬ್ರಹ್ಮಣಿ=ಬ್ರಹ್ಮದಲ್ಲಿ, ಉಪರತಃ=ನೆಲಸಿರುವವನು, ನಿರಿಂಧನಃ ಅನಲಃ ಇವ = ಉರುವಲಿಲ್ಲದ ಬೆಂಕಿಯಂತೆ,  ಶಾಂತಃ= ಶಾಂತನೂ, ಅಹೇತುಕ ದಯಾಸಿಂಧುಃ=ಯಾವ ನಿಮಿತ್ತವೂ ಇಲ್ಲದ ದಯಾಸಿಂಧುವೂ, ಆನಮತಾಂ ಸತಾಮ್= ನಮಿಸುತ್ತಿರುವ ಸತ್ಪುರುಷರಿಗೆ, ಬಂಧುಃ = ಬಾಂಧವನೂ..... (ಆಗಿರುವವನು) )

ತಾತ್ಪರ್ಯ :
ಯಾರು ಶ್ರೋತ್ರಿಯನೋ, ಪಾಪರಹಿತನೋ, ಬಯಕೆಗಳೇ ಇಲ್ಲದವನೋ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೋ, ಕೇವಲ ಬ್ರಹ್ಮದಲ್ಲಿ ಮನಸನ್ನು ನೆಟ್ಟಿರುವವನೋ, ಕಟ್ಟಿಗೆಯಲ್ಲಿ ಉರಿದು ಆರಿಹೋದ ಬೆಂಕಿಯಂತೆ (ಉರುವಲೇ ಇಲ್ಲದ) ಶಾಂತನಾಗಿರುವವನೂ, ಯಾವ ನಿಮಿತ್ತವೂ ಇಲ್ಲದೆ ದಯಾಸಿಂಧುವಾಗಿರುವವನೋ, ಶರಣು ಬಂದ ಸಜ್ಜನರಿಗೆ ಬಂಧುವಂತಿರುವವನೋ .....)

ವಿವರಣೆ :
ಜ್ಞಾನಾರ್ಥಿಯಾಗಿ ಗುರುವಿನ ಬಳಿಸಾರಬೇಕು ಎಂದು ತಿಳಿಸಿದ ನಂತರ ಆಚಾರ್ಯರು ಮತ್ತೆ ಗುರೂಪಸತ್ತಿಯನ್ನು ಮುಂದುವರಿಸುತ್ತಾರೆ. ಅಧಿಕಾರಿಯ ಅರ್ಹತೆಯ ನಿರೂಪಣೆಯ ನಂತರ ಜ್ಞಾನಾರ್ಜನೆಯ ಪಾಠವನ್ನು ಆಚಾರ್ಯರು ಆರಂಭಿಸುತ್ತಾರೆ. ಮೇಲಿನ ಶ್ಲೋಕದಲ್ಲಿ ಮೊದಲಿಗೆ ’ಶ್ರೋತ್ರಿಯಃ’ ಎನ್ನುವುದರ ಮೂಲಕ ಗುರುವು ಶಾಸ್ತ್ರಾರ್ಥಗಳನ್ನು ಅನುಭವದಿಂದ ನಿಶ್ಚಯಿಸಿಕೊಂಡವನಾಗಿರಬೇಕು ಎಂದು ಹೇಳುತ್ತಾರೆ. ಕೇವಲ ಪುಸ್ತಕ ಪಾಂಡಿತ್ಯವಲ್ಲದೆ ಸ್ವಾನುಭದಿಂದಲೂ ತಿಳಿದುಕೊಂಡು ತರ್ಕಕ್ಕೆ-ಶಾಸ್ತ್ರಕ್ಕೆ, ಅನುಭವಕ್ಕೆ-ಶಾಸ್ತ್ರಕ್ಕೆ ವಿರೋಧಗಳು ತೋರ್ಗೊಡದಂತೆ (ಅವಿರೋಧವೆನಿಸುವಂತೆ) ಕಡ್ಡಿಮುರಿದಂತೆ ಹೇಳುವವನಾಗಿರಬೇಕು ಅಥವಾ ಹೇಳುವ ತಿಳುವಳಿಕೆಯನ್ನು ಉಳ್ಳವನಾಗಿರಬೇಕು ಎಂಬರ್ಥದಲ್ಲಿ ತಿಳಿಸುತ್ತಾರೆ. ’ಉಪನಿಷತ್ತುಗಳನ್ನು ಅಧ್ಯಯನ ಮಾಡಿ ಅದರ ಅರ್ಥವನ್ನು ವಿಚಾರಮಾಡಿದವನೇ ಶ್ರೋತ್ರಿಯನು’ ಎಂಬ ಪಾಣಿನಿಯ ಸೂತ್ರದ ವಿಚಾರವನ್ನು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನದಲ್ಲಿ ಒಕ್ಕಣಿಸಿರುತ್ತಾರೆ. ’ಅವೃಜಿನಃ’ ಎಂದರೆ ಪಾಪರಹಿತನು ಎಂಬ ಅರ್ಥವಿರುತ್ತದೆ. ಜ್ಞಾನಿಯಾದ ಗುರುವಿನಲ್ಲಿ ನೈತಿಕ ಮೌಲ್ಯಗಳೂ ಇರಬೇಕಾಗುತ್ತದೆ. ಜಗತ್ತಿಗೆ ಮಾದರಿಯಾಗಿ ನಿಲ್ಲಬೇಕಾಗುವ ಗುರುವು ಒಳ್ಳೆಯತನದ ಗುಣಗಳನ್ನು ಇಟ್ಟುಕೊಂಡಿರಬೇಕೇ ಹೊರತು ’ತಾನು ಗುರು ತಾನೇನು ಮಾಡಿದರೂ ಸರಿಯೆ’ ಎನ್ನುವ ಧೋರಣೆಯನ್ನು ಹೊಂದಿರಬಾರದು. ಜಗಕ್ಕೆ ಹಿತಕಾರಿಯಾದ ಕೆಲಸಗಳನ್ನು ಮಾಡುತ್ತಾ ಲೋಕಾನುಗ್ರಹಕ್ಕಾಗಿ ಬದುಕಬೇಕು ಎಂದು ’ಅವೃಜಿನಃ’ ಎನ್ನುವಲ್ಲಿ ಹೇಳಿರುತ್ತಾರೆ. ಮುಂದೆ ’ಅಕಾಮಹತಃ’ ಎಂದು ಹೇಳುತ್ತಾರೆ. ಬಯಕೆಗಳನ್ನೆಲ್ಲಾ ನಾಶಮಾಡಿಕೊಂಡಿರುವವನು ಅಥವಾ ಬಯಕೆಗಳೇ ಏಳದಂತೆ ಸಾಧನೆ ಮಾಡಿಕೊಂಡಿರುವವನನ್ನು ಅಕಾಮಹತಃ ಎಂದು ಹೇಳುತ್ತಾರೆ.  ಮಾನ್ಯ ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಈ ಸಂದರ್ಭವನ್ನು ಸೊಗಸಾಗಿ ನಿರೂಪಿಸುತ್ತಾರೆ..

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ ?|
ಕೈಸೋಕದಿರೆ ಕೈಯ ಸಪ್ಪುಳಾದೀತೆ? ||
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ|
ದೋಷವೊಳಗೋ ಹೊರಗೋ ? - ಮಂಕುತಿಮ್ಮ ||

’ವಾಸನೆ ತಾಯಿ , ಸಂದರ್ಭ ತಂದೆ’ ಎಂದು ಸೊಗಸಾಗಿ ಡಿ.ವಿ.ಜಿ. ಯವರು ಹೇಳುತ್ತಾರೆ. ಗಸಗಸೆ ಪಾಯಸದ ಬಯಕೆಯೇ ಇಲ್ಲದ ಮೇಲೆ ಅದೆಷ್ಟು ಕೊಳಗ ಪಾಯಸ ತಂದಿಟ್ಟರೂ ಪ್ರಯೋಜನವಾಗಲಾರದು !. ಬಯಕೆ ಎಂಬ ದೋಷವು ಒಳಗಿನದೋ ಅಥವಾ ಹೊರಗಿನದೋ ಎಂಬುದನ್ನು ಯೋಚಿಸಿ ನಿರ್ಧರಿಸಬೇಕಾಗುತ್ತದೆ. ಕಾಮಹತಃ ಎಂದರೆ ವಿಷಯದ ಆಸೆಗಳಿಂದ ಕೂಡಿರುವವನು ಅಥವಾ ತನ್ನನ್ನು ತಾನೇ ಅದರೊಳಗೆ ದೂಡಿಕೊಂಡಿರುವವನು ಎಂದು ಅರ್ಥ. ಅಕಾಮಹತಃ ಎಂದರೆ ವಿಷಯಾಸಕ್ತಿಯಿಂದ ದೂರವಿರುವವನು ಎಂದು ಅರ್ಥ. ನಂತರ, ಬ್ರಹ್ಮಜ್ಞಾನಿಗಳಲ್ಲಿ ಉತ್ತಮೋತ್ತನೂ ಮತ್ತು ವಿಷಯಾಸಕ್ತಿಯನ್ನೆಲ್ಲಾ ಕರಗಿಸಿಕೊಂಡು ಕೇವಲ ಬ್ರಹ್ಮನಲ್ಲಿ ಮನಸನ್ನು ಇಟ್ಟಿರುವವನು ಗುರುವು ಎಂದು ಹೇಳುತ್ತಾರೆ. ಮುಂದೆ ’ಶಾಂತಃ ನಿರಿಂಧನ ಇವಾನಲಃ’ ಎಂದು ಹೇಳುತ್ತಾರೆ. ಈ ವಾಕ್ಯಕ್ಕೆ ಮೇಲಿನ ಕಗ್ಗವೇ ಉತ್ತಮ ವಿವರಣೆಯಾಗಿರುತ್ತದೆ. ಹೇಗೆ ಉರುವಲು ಇಲ್ಲದಿದ್ದರೆ ಬೆಂಕಿಯು ತಣ್ಣಗಾಗಿ ಉರಿಯಿಲ್ಲದೆಯೇ ತೋರುವುದೋ (ಹುಲ್ಲಿಲ್ಲದ ಜಾಗದಲ್ಲಿ ಬೆಂಕಿಯು ಹೊತ್ತಿದರೆ ಹೇಗೆ ತಾನೇ ಆರಿ ಹೋಗುವುದೋ) ಹಾಗೆಯೆ, ವಾಸನೆಯೇ ಇಲ್ಲದವರಲ್ಲಿ ಸಂದರ್ಭಗಳೂ ಹುಟ್ಟಲಾರದು ಮತ್ತು ಗುರುವು ಹೀಗೆಯೇ ಇರಬೇಕು ಎಂದು ಹೇಳುತ್ತಾರೆ. ಹೀಗೆ ಹೊರಗಿನ ವಿಷಯಗಳನ್ನು ಅವಲಂಬಿಸದೆ ’ಶಾಂತ’ನಾಗಿದ್ದು ಬ್ರಹ್ಮದಲ್ಲಿ ಗಟ್ಟಿಮನಸುಳ್ಳವನಾಗಿರಬೇಕು ಎಂದು ನಿರೂಪಿಸುತ್ತಾರೆ.
ನಂತರ ’ ಅಹೇತುಕ ದಯಾಸಿಂಧುಃ ಬಂಧುರಾನಮತಾಂಸತಾಮ್’ ಎಂದು ಹೇಳುತ್ತಾರೆ. ಶರಣಾಗಿ ಬರುವ ಸಜ್ಜನರಿಗೆ ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಕರುಣೆಯ ಸಾಗರದಂತೆ ಇದ್ದು ತಿಳುವಳಿಕೆ ಮೂಡಿಸಬಲ್ಲಂತಹ ಬಂಧುವಿನಂತೆ , ಆಪ್ತ ಗೆಳೆಯನಂತೆ ಇರಬೇಕು ಎಂಬರ್ಥದಲ್ಲಿ ಹೇಳಿರುತ್ತಾರೆ. ಗೀತೆಯಲ್ಲಿ ಕೃಷ್ಣನು ಹೇಳುವ ವಾಕ್ಯವೊಂದು ಹೀಗೆ ಬರುತ್ತದೆ ; ’ ನನಗೆ ಈ ಲೋಕದಿಂದ ಯಾವ ಪ್ರಯೋಜನವೂ ಇಲ್ಲ. ಆದರೂ ಈ ಜಗತ್ತಿಗಾಗಿ ನಾನು ಎಲ್ಲವನ್ನೂ ಮಾಡುತ್ತೇನೆ, ಏಕೆಂದರೆ ಈ ಜಗತ್ತನ್ನು ನಾನು ಪ್ರೀತಿಸುತ್ತೇನೆ ಎಂದರೆ ಅನಿಮಿತ್ತವಾಗಿ ಪ್ರೀತಿಸುತ್ತೇನೆ ’ ಎಂದು. ಯಾವ ನಿಮಿತ್ತ ಕಾರಣವೂ ಇಲ್ಲದೆ ಶರಣಾಗಿ ಬಂದವರಿಗೆ ತಿಳಿಸುವ ಕರುಣೆಯನ್ನು ಗುರುವು ಹೊಂದಿರಬೇಕು ಎಂದು ನಿರೂಪಿಸುತ್ತಾರೆ. ವಾಡಿಕೆಯಂತೆ ಶೆಟ್ಟರ ಅಂಗಡಿಯಲ್ಲಿ ದಿನಸಿಯನ್ನು ಕೊಳ್ಳುವುದು ಬಿಟ್ಟು ಅಂದು ಪುಡ್ ಬಜಾರಿನಲ್ಲಿ ದಿನಸಿ ತಂದಿರುತ್ತೇವೆ. ಹೀಗೆ ತಂದಿದ್ದೇನಾದರೂ ಶೆಟ್ಟರಿಗೆ ತಿಳಿಯಿತೆಂದರೆ ಮುಂದೆ ಅವರ ಅಂಗಡಿಯಲ್ಲಿ ನಮಗೆ ಸಿಗುವುದು ಕಳಪೆ ದಿನಸಿ ಅಥವಾ ಬಜಾರಿಗಿಂತಲೂ ದುಪ್ಪಟ್ಟು ಬೆಲೆಯೆ !. ಶೆಟ್ಟರು ಸಹಿಸಿಕೊಳ್ಳುವರೆ ?!. ಗುರುವಿನ ಕತೆಯು ಹೀಗಾಗಬಾರದು ಎನ್ನುವುದು ಮೇಲಿನ ಶ್ಲೋಕದ ಆಶಯ. ಪ್ರವಾಹಣ ಜೈವಲಿಯು ಶ್ವೇತಕೇತುವಿಗೆ ಹೇಳಿದಂತೆ, ಯಾಜ್ಞವಲ್ಕ್ಯರು ಮೈತ್ರಾದೇವಿಗೆ ಹೇಳಿದಂತೆ, ಯಮನು ನಚಿಕೇತನಿಗೆ ತಿಳಿಸಿದಂತೆ  ವಿನಯದಿಂದ ಬಂದು ಕೇಳುವವರಿಗೆ (ಬೇರೆಯವರಿಗೆ ಅಲ್ಲ) ಗುರುವು ತಿಳಿಸಿಕೊಡುವಂತಹವನಾಗಿರಬೇಕು ಎನ್ನುವುದು ಸಾರಾಂಶ. ರಮಣ ಮಹರ್ಷಿಗಳಂತಹ ಮೌನವ್ಯಾಖ್ಯಾನ ಶಿರೋಮಣಿಗಳೂ ಸಹ ವಿನಯದಿಂದ ಬಂದ ಕೆಲವರಿಗೆ ತಿಳುವಳಿಕೆಯ ಪಾಠವನ್ನು ಹೇಳಿರುವುದನ್ನು ಅವರ ಜೀವನ ಚರಿತ್ರೆಯ ಸಾಹಿತ್ಯದಲ್ಲಿ ಓದಿರುತ್ತೇವೆ.

मूलम् = ಮೂಲ
तमाराध्य गुरुं भक्त्या प्रह्वः प्रश्रयसेवनैः ।
प्रसन्नं तमनुप्राप्य पृच्छेद् ज्ञातव्यमात्मनः॥३५॥ 

ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವ-ಪ್ರಶ್ರಯ-ಸೇವನೈಃ|
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇದ್ ಜ್ಞಾತಮಾತ್ಮನಃ ||೩೬||

ಪ್ರತಿಪದಾರ್ಥ :  
(ತಂ ಗುರುಂ= ಅಂತಹ ಗುರುವನ್ನು, ಭಕ್ತ್ಯಾ= ಭಕ್ತಿಯಿಂದ, ಆರಾಧ್ಯ=ಪೂಜಿಸಿ, ಆರಾಧಿಸಿ, ಪ್ರಹ್ವ-ಪ್ರಶ್ರಯ = ನಮ್ರತೆ-ವಿನಯದಿಂದ, ಸೇವನೈಃ= ಸೇವೆ ಮಾಡಿ, ಪ್ರಸನ್ನಂ ತಂ= ತೃಪ್ತನಾದ ಅವನನ್ನು, ಅನುಪ್ರಾಪ್ಯ= ಹೊಂದಿ, ಆತ್ಮನಃ ಜ್ಞಾತವ್ಯಂ= ತಾನು ತಿಳಿದುಕೊಳ್ಳಬೇಕಾದುದನ್ನು, ಪೃಚ್ಛೇತ್ = ಕೇಳಬೇಕು, ಪ್ರಶ್ನಿಸಬೇಕು )

ತಾತ್ಪರ್ಯ:
ಅಂತಹ (೩೪ನೆಯ ಶ್ಲೋಕದಲ್ಲಿ ವಿವರಿಸಿದ) ಗುಣಗಳನ್ನು ಹೊಂದಿರುವ ಗುರುವನ್ನು ಭಕ್ತಿಯಿಂದ ಪೂಜಿಸಿ ನಯ-ವಿನಯಗಳಿಂದ ಸೇವಿಸಿದ ನಂತರ ಶಾಂತನಾದ ಗುರುವಿನ ಸಮೀಪವನ್ನು ಹೊಂದಿ ತಾನು ತಿಳಿದುಕೊಳ್ಳಬೇಕಾಗಿರುವುದರ ವಿಚಾರದ ಬಗೆಗೆ ಕೇಳಬೇಕು ಅಥವಾ ಪ್ರಶ್ನೆ ಮಾಡಬೇಕು.

ವಿವರಣೆ:
ಗುಣಸಂಪನ್ನನಾದ ಗುರುವನ್ನು ನಯ-ವಿನಯಗಳಿಂದ ಪೂಜಿಸಿ ಸೇವೆ ಮಾಡಬೇಕು ಎಂದು ಹೇಳುತ್ತಾರೆ. ಗೀತೆಯಲ್ಲಿ (೧) ಹೇಳುವಂತೆ " ಸಾಷ್ಟಾಂಗ ನಮಸ್ಕಾರದಿಂದಲೂ ಕೇಳುವಿಕೆಯಿಂದಲೂ, ಗುರುಸೇವೆಯಿಂದಲೂ ತಿಳಿದುಕೊಳ್ಳಬೇಕು. ತತ್ವವನ್ನು ಅರಿತ ಜ್ಞಾನಿಗಳು ನಿನಗೆ ಅದನ್ನು ತಿಳಿಸುತ್ತಾರೆ" ಎಂಬ ವಾಕ್ಯವು ಸೊಗಸಾದುದು. ಇಲ್ಲಿ ನಮಸ್ಕಾರ, ಗುರುಸೇವೆ ಎನ್ನುವುದೆಲ್ಲವೂ ನಯ-ವಿನಯಗಳಂತಹ ಸದ್ವಿಚಾರಗಳಿಗೆ ಬೆಂಬಲವಾಗಿ ನಿಲ್ಲುತ್ತದೆ. ಭಕ್ತಿಯಿಂದ-ನಮ್ರತೆಯಿಂದ ಎಂದು ವಿಶೇಷವಾಗಿ ಹೇಳಿರುವುದು ’ಮಾತು-ಮನಸು-ಕೆಲಸ’ (ಕಾಯಾ-ವಾಚಾ-ಮನಸಾ; ತ್ರಿಕರಣ ಶುದ್ಧಿ) ಗಳಲ್ಲಿ  ನಿಯತ್ತನ್ನು ಇಟ್ಟುಕೊಳ್ಳವುದು, ಪಾರದರ್ಶಕ ನಡೆವಳಿಕೆಯನ್ನು ಉಳಿಸಿಕೊಳ್ಳುವುದು ಎನ್ನುವ ಅರ್ಥದಲ್ಲಿ. ಇಂತಹ ಉತ್ತಮ ನಡವಳಿಕೆಗಳಿಂದ ಗುರುವಿನ ಮನಸು ಒಲಿದ ನಂತರ ಆತನ ಸಮೀಪವನ್ನು ಹೊಂದಿ ಯಾವುದು ಆತ್ಮಾರ್ಥ ವಿಚಾರವೋ (ಇನ್ಯಾವುದೋ ವಿಷಯವನ್ನಲ್ಲ) ಅದರ ಬಗೆಗೆ ಕೇಳಿ ತಿಳಿದುಕೊಳ್ಳಬೇಕು ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...
------------------------------------------------

ಟಿಪ್ಪಣಿ :

ಗೀತೆಯ ವಾಕ್ಯ.." ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ವದರ್ಶಿನಃ || ( ೪.೩೪) 

ವಂದನೆಗಳೊಂದಿಗೆ....



Sunday, November 27, 2011

ಹೊಸ ಪ್ರಯೋಗ

ಇಂದು ಮನುಷ್ಯನದು ಧಾವಂತ ಜೀವನ. ಅತಿಯಾದ ಆಧುನಿಕತೆ. ನಮ್ಮತನವನ್ನು ಮರೆತು  ವಿದೇಶೀ ಭೋಗಜೀವನ ಶೈಲಿಯನ್ನು ಅನ್ಧಾನುಕರಿಸುತ್ತಿರುವ ನಮ್ಮ ಯುವ ಪೀಳಿಗೆ.ಯಾವುದು ತಪ್ಪು ? ಯಾವುದು ಸರಿ ಎಂಬ ವಿವೇಚನಾರಹಿತ ಜೀವನ. ಎಲ್ಲವೂ ಆಧುಕತೆಯ ಹೆಸರಲ್ಲಿ. ಸರಿ, ಅದರಲ್ಲಾದರೂ  ದೇಹ, ಮನಸ್ಸು, ಬುದ್ಧಿಯ ಸ್ವಾಸ್ಥ್ಯ ಸರಿ ಇದೆಯೇ? ಖಂಡಿತವಾಗಿಯೂ ಇಲ್ಲ ವೆಂದೆ ಹೇಳಬೇಕಾದ ಅನಿವಾರ್ಯತೆ. ಬೆಳಿಗ್ಗೆ ಏಳುವಾಗಲೇ ಟಿ.ವಿ. ರಿಮೋಟ್ ಹಿಡಿದುಕೊಂಡೆ ಏಳುವ ಪರಿ. ಅದರಲ್ಲಾದರೋ ಸಾಕಷ್ಟು ಸದ್ವಿಚಾರಗಳಿಗೆ ಅವಕಾಶವಿದ್ದರೂ  ಪ್ರತಿಶತ ೯೦ ಕ್ಕಿಂತಲೂ ಹೆಚ್ಚು ಮನಸ್ಸನ್ನು ಕೆಡಸುವ ಕಾರ್ಯಕ್ರಮಗಳು. ಬೆಳಿಗ್ಗೆ ಎದ್ದಾಗ ಆರಂಭವಾದ  ಟಿ .ವಿ. ಪರದೆಯ ಮೇಲೆ ಹೊಡೆದಾಟ ಬಡಿದಾಟ ,ರಕ್ತದ ಹರಿದಾಟ ದೃಶ್ಯಗಳನ್ನು ರಾತ್ರಿ ಮಲಗುವಾಗಲೂ ನೋಡಿ ಮಲಗುವಂತಹ ಪರಿಸ್ಥಿತಿ. ದಾರಾವಾಹಿಗಳ ಬಗ್ಗೆಯಂತೂ ಚರ್ಚಿಸದಿರುವುದೇ ಸೂಕ್ತ. ನಿತ್ಯವೂ ಹತ್ತಾರು ದಾರಾವಾಹಿಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುವ ಗೃಹಿಣಿಯರು. ದಾರಾವಾಹಿಯ ಸಮಯದಲ್ಲಿ  ಮನೆಗೆ ಬೆಂಕಿ ಬಿದ್ದರೂ ಗಮನ ಹರಿಸದಂತಹ ಮನಸ್ಥಿತಿ! 
ಹೌದು, ನಾವೆತ್ತಾ ಸಾಗುತ್ತಿದ್ದೇವೆ?  ನಮ್ಮ  ಇಂತಹ ಜೀವನದಿಂದ ನೆಮ್ಮದಿಯ ಆರೋಗ್ಯ ಪೂರ್ಣ ಬದುಕು ಸಾಧ್ಯವೇ? ಇಂತಹಾ ಧಾವಂತದ ದಿನಗಳಲ್ಲಿ ಸದ್ವಿಚಾರಗಳನ್ನು ಗಂಟೆ ಗಟ್ಟಲೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಆದ್ದರಿಂದ ಇಲ್ಲೊಂದು ಹೊಸ ಪ್ರಯೋಗ. ಸದ್ವಿಚಾರಗಳನ್ನು ಎರಡು ನಿಮಿಷಗಳಲ್ಲಿ ಜನರ ಕಿವಿಗೆ ಬೀಳಿಸುವ ಪ್ರಯತ್ನ. ಅದರಿಂದ ಏನಾದರೂ ಪ್ರಭಾವವಾಗಿ ಬೇಕೆನಿಸಿದವರಿಗೆ  ಸಾಕಷ್ಟು  ವಿಚಾರಗಳಿಗೆ ವೇದಸುಧೆಯಂತಹ ಅನೇಕ ತಾಣಗಳು ಈಗಾಗಲೇ ಇದ್ದೆ ಇವೆ. ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

Saturday, November 26, 2011

ಒಂದೆರಡು ನಿಮಿಷದಲ್ಲಿ ಕೇಳಿದ್ದು ಅದೆಷ್ಟು ಅಮೂಲ್ಯ!

ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕಾ ಗ್ರಂಥದ ಆಯ್ದ ಭಾಗಗಳು
ಧ್ವನಿ: ಶ್ರೀ ಸೂರ್ಯ ಪ್ರಕಾಶ್ ಪಂಡಿತ್



ಪಾಪವನ್ನು ಗುಟ್ಟಾಗಿ ಮಾಡಿದಾಗ!!


ಕುರುಡನಾರು? ಮೂಕನಾರು? ಕಿವುಡನಾರು?


Friday, November 25, 2011

ಜೀವನ ದರ್ಶನ

ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಿರುವ ಅನೇಕ ಸಂಗತಿಗಳ ಬಗ್ಗೆ ಅವನಿಗೆ ಸರಿಯಾದ ಅರಿವೇ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು? ಎನ್ನುವ ವಿವೇಚನಾ ಶಕ್ತಿಯೂ ಅವನಿಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವನಿಗೆ ನೆರವಾಗುವುದು ನಮ್ಮ ದಾರ್ಶನಿಕರ ಮಾತುಗಳು.  ದಾರ್ಶನಿಕರಲ್ಲಿ ಶ್ರೇಷ್ಠ ರಾದ ಶ್ರೀಶಂಕರಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡಿ ಶ್ರೀ ಶಂಕರರ ವಿಚಾರಧಾರೆಯನ್ನು ಅತ್ಯಂತ ಸರಳವಾಗಿ ನಮ್ಮಂತ ಸಾಮಾನ್ಯರಿಗೆ ಉಣಬಡಿಸುವ ಮಹಾನ್ ಕೆಲಸವನ್ನು ಬೆಂಗಳೂರಿನ ಚಿಂತಕರಾದ ಶ್ರೀ ಸೂರ್ಯ ಪ್ರಕಾಶ ಪಂಡಿತರು ನಿರಂತರವಾಗಿ ಮಾಡುತ್ತಿದ್ದಾರೆ. ಶ್ರೀಯುತರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಪ್ರವಚನದಲ್ಲಿನ ಆಯ್ದ ಭಾಗಗಳು ಇಲ್ಲಿವೆ.


ನರಕ ಎಂದರೇನು?


ಸತ್ಯದ ಪರಿಕಲ್ಪನೆ ಏನು?


ಮೋಕ್ಷ ಎಂದರೇನು?

ಕಾಲದ ಮಹಿಮೆ?


ಚಾರ್ವಾಕ ನೀತಿ