Pages

Thursday, June 28, 2012

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-4



ಆತ್ಮಕ್ಕೆಲ್ಲಿಯ ಸಾವು?
ಮುಕುಂದೂರ್ ಸ್ವಾಮೀಜಿ ಯವರ ಜೀವನ ಘಟನೆಗಳನ್ನು ಓದುತ್ತಿದ್ದನ್ತೆಲ್ಲಾ ಆನಂದವಾಗುತ್ತೆ. ಅಧ್ಯಾತ್ಮವನ್ನು ಎಷ್ಟು ಸರಳವಾಗಿ ಮನಮುಟ್ಟುವಂತೆ ಹೇಳ್ತಾ ಇದ್ರೂ ಅಂದ್ರೆ......
ಸ್ವಾಮೀಜಿಯವರ ಆಶ್ರಮಕ್ಕೆ ಒಬ್ಬ ಭಕ್ತ ಬರ್ತಾನೆ. " ಸ್ವಾಮಿ ದೊಡ್ದಬೋರೆಗೌಡ ಸತ್ತೋದ " ಎಂದು ದು:ಖದಿಂದ ಹೇಳ್ತಾನೆ.
-ಹಾ! ಸತ್ತು ಹೋದ! ದೊಡ್ದಬೋರೆಗೌಡ !![ನಕ್ಕು] ಎಲ್ಲಾರ ಉಂಟೆ?
-ಇಲ್ಲಾ ಸ್ವಾಮಿ ನಾನೇ ಖುದ್ದು ನೋಡಿ ಬಂದೆ ,ನಿನ್ನೆ ಸತ್ತು ಇವತ್ತು ಮಣ್ಣು ಮಾಡಿ ಅಲ್ಲಿಂದಲೇ ಬರ್ತಾ ಇದ್ದೀನಿ !!
-ಹೌದಾ? ನೀನೇ ಖುದ್ದು ನೋಡಿದ್ಯಾ? ಏನಪ್ಪಾ ಸತ್ತು ಹೋಗೋದು ಅಂದ್ರೆ? ಎಂದರು ಗಂಭೀರವಾಗಿ.
-ಹೌದು ಸ್ವಾಮಿ , ನಾನೇ ನೋಡ್ದೆ ಅಂತೀನಿ.
-ಸರಿ ಬಿಡಪ್ಪಾ, ನೀನೇ ಕಂಡೇ ಅಂದ್ಮ್ಯಾಕೆ ಇನ್ನೇನ್ ಐತೆ? [ಕೃಷ್ಣ ಶಾಸ್ತ್ರಿಗಳ ಕಡೆ ನೋಡುತ್ತಾ......]" ಸ್ವಾಮಿ ಸತ್ತು ಹೊಗೊದುಂಟೆ? ಅದು ಬಂದೂ ಇಲ್ಲಾ, ಹೋಗೋದೂ ಇಲ್ಲಾ. ಅದು ಎಂದೆಂದಿಗೂ ಇರೋದು, ಈ ಯಪ್ಪಾ ನೋಡಿದ್ರೆ ನಾನೇ ಕಂಡೇ ಅಂತಾನೆ,ಎಂಗಪ್ಪಾ ಬಾಳಿ ಬದುಕಿ ಸತ್ತು ವೋಗೋದು? ಇವನಂತೂ ಸತ್ತು ವೋಗಾಕಿಲ್ಲಾ. [ಅವರನ್ನೇ ನೋಡಿಕೊಂಡು ]
" ಹೀಗಂತಾ ಹೇಳಿ ಜೋರಾಗಿ ನಕ್ಕಾಗ ಎಲ್ಲರೂ ಕಕ್ಕಾ-ಬಿಕ್ಕಿ.
ದೇಹಕ್ಕಷ್ಟೇ ಸಾವು, ಆತ್ಮನಿಗೆ ಸಾವಿಲ್ಲಾ!! ಎಂಬುದನ್ನು ಎಷ್ಟು ಸರಳವಾಗಿ ನಿರೂಪಿಸಿಬಿಟ್ರು!!

-------------------------------------------------------------
ಹಿಂಗೇ ಬಿಡದಂಗೆ ಹಿಡ್ಕಂದ್ರೆ ಅವಾ ಬಿಡ೦ಗೇ ಇಲ್ಲಾ!!
ಸ್ವಾಮಿಗಳ ಆಶ್ರಮದ ಮುಂದೆ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಸಿದ್ಧರ ಬೆಟ್ಟ ಕಾಣುತ್ತೆ. ಆ ಬೆಟ್ಟ ವನ್ನು ಹತ್ತಲು ಕೃಷ್ಣ ಶಾಸ್ತ್ರಿಗಳೊಟ್ಟಿಗೆ ಒಮ್ಮೆ ಸ್ವಾಮೀಜಿ ಹೊರಟರು. ಆಶ್ರಮದಿಂದ ೭-೮ ಮೈಲಿ ನಡೆದು ಬೆಟ್ಟದ ಬುಡ ಸೇರಿದರು. ಸ್ವಾಮೀಜಿಗೆ ಬೆಟ್ಟಹತ್ತುವುದೆಂದರೆ ಬಲು ಸಲೀಸು.ಸ್ವಾಮೀಜಿಯಂತೂ ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ನಿರಾಯಾಸವಾಗಿ ಹತ್ತುತ್ತಾ ಹೊರಟರು, ಆದರೆ ಕೃಷ್ಣಶಾಸ್ತ್ರಿಗಳಿಗೆ ಆಯಾಸವಾಗ್ತಾ ಇದೆ, ಎಷ್ಟು ಪ್ರಯತ್ನ ಪಟ್ಟರೂ ಸ್ವಾಮೀಜಿ ಯವರೊಟ್ಟಿಗೆ ಹೆಜ್ಜೆ ಹಾಕಲು ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ಕಡೆಯಂತೂ ಎರಡು ಎತ್ತರವಾದ ಬಂಡೆಗಳ ನಡುವೆ ಆಳವಾದ ಕಂದಕ. ಸ್ವಾಮೀಜಿ ಸಲೀಸಾಗಿ ಜಿಗಿದೇ ಬಿಟ್ಟರು. ಆದರೆ ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಆಗ ಸ್ವಾಮೀಜಿಯು ತಾವು ತಲೆಗೆ ಸುತ್ತಿದ್ದ ರುಮಾಲು ಬಿಚ್ಚಿ ಹಗ್ಗದಂತೆ ಉದ್ದಮಾಡಿ ಅದರ ಒಂದು ತುದಿಯನ್ನು ಶಾಸ್ತ್ರಿಗಳತ್ತ ಎಸೆಯುತ್ತಾರೆ, " ಈಗ ಹಗ್ಗ ಬಿಗಿಯಾಗಿ ಹಿಡ್ಕಾ ಇವ ನಿನ್ನ ಕರಕೊನ್ಡಾನು! " ಸ್ವಾಮೀಜಿ ನಗುತ್ತಾ ಹೇಳುತ್ತಾರೆ. ಶಾಸ್ತ್ರಿ ರುಮಾಲಿನ ಸಹಾಯದಿಂದ ಬನ್ದೆಮೇಲೇರುತ್ತಾರೆ.
ಸ್ವಾಮೀಜಿ ಮಾರ್ಮಿಕವಾಗಿ ಹೇಳುತ್ತಾರೆ" ನೋಡಪ್ಪಾ ಹಿಂಗೇ ಬಿಗಿಯಾಗಿ ಹಿಡ್ಕಂದ್ರೆ ಇವ ಕೈ ಬಿಡನ್ಗೇ ಇಲ್ಲಾ." ಭಗವಂತನನ್ನು ಕಾಣಲು ಎಷ್ಟು ದೃಢ ವಾದ ನಂಬಿಕೆ ಇರಬೇಕು , ಅನ್ನೋದನ್ನು ಸ್ವಾಮೀಜಿಯವರು ಚಿಕ್ಕ ಚಿಕ್ಕ ಘಟನೆಗಳಲ್ಲೂ ಮನಮುಟ್ಟುವಂತೆ ಹೇಳುತ್ತಿದ್ದ ಪರಿ ಇದು.
-----------------------------------------------------------------------
"ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲ್ಲಿಯೂ ಅವ ಇಹನಂತೆ"
ಬೆಟ್ಟವನ್ನು ಹತ್ತಿ ಹತ್ತಿ ಶಾಸ್ತ್ರಿಗಳಿಗೆ ಹೊಟ್ಟೆಯಲ್ಲಿ ಹಸಿವು ಜಾಸ್ತಿಯಾಗಿ ಬಿಟ್ಟಿತು. ಆಯಾಸ ಹೆಚ್ಚಾಗಿ ಬಂಡೆಯ ಮೇಲೆ ಮಲಗಿಬಿಟ್ರು, ಸ್ವಾಮೀಜಿಯಾದರೋ ಪ್ರಕೃತಿಯನ್ನೆಲ್ಲಾ ಬಣ್ಣಿಸ್ತಾ ಇದಾರೆ,
-ಯಾರಿಗೆ ಬೇಕು ಸ್ವಾಮೀಜಿ? ನನಗಂತೂ ತುಂಬಾ ಹಸಿವಾಗಿದೆ.
-ಬೆಟ್ಟಕ್ ಬಂದು ಹಸಿವಾಗ್ತದೆ ಅಂದ್ರೆ ಇಕ್ಕೊರ್ ಯಾರು? ಯೇನಾದ್ರ ಬುತ್ತಿ ತರ್ಬೇಕಿತ್ತಪ್ಪಾ!
- ಇಷ್ಟು ತಡವಾಗುತ್ತೆ ಅಂತಾ ನನಗೆ ಗೊತ್ತಾಗ್ಲಿಲ್ಲವಲ್ಲಾ
-ಅಂಗಾದ್ರೆ ಯಾರಾನ ತಂದಾಕಿದ್ರೆ ತಿಂದ ಬುಡ್ತೀಯಾ? ಹಾಸ್ಯಮಾಡಿ ಸ್ವಾಮೀಜಿ ನಕ್ಕರು, ಶಾಸ್ತ್ರಿಗಳೂ ನಕ್ಕರು.
-ಅಗೋ ಅಲ್ಲಿ ಯಾರೋ ಬಂದಂಗಾತು ,ಅವರನ್ನ ಕೇಳಾಣ " ಸ್ವಾಮೀಜಿ ಮಾತು ಕೇಳಿ ಶಾಸ್ತ್ರಿ ತಿರುಗಿ ನೋಡ್ತಾರೆ , ಯಾರೂ ಇಲ್ಲಾ.
-ಅಗೋ ಅಲ್ಲಿ ನೋಡು , ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡ್ ತಿದ್ದ ಎರಡು ಹದ್ದುಗಳನ್ನು ಸ್ವಾಮೀಜಿ ತೋರಿಸಿ ಹೇಳ್ತಾರೆ, " ಎಲೆ ಅಪ್ಪಯ್ಯಗಳಾ ಈ ಹುಡುಗನಿಗೆ ಭಾರಿ ಹಸಿವಾಗೈತೆ, ವಸಿ ಎನಾದರ ಕೊಡ್ರಪ್ಪಾ!
ಸ್ವಾಮೀಜಿ ತಮಾಷೆ ಮಾಡ್ತಾರಲ್ಲಾ ಅಂತಾ ಶಾಸ್ತ್ರಿಗಳಿಗೆ ಬೇಸರವೇ ಆಗುತ್ತೆ,
ಅಷ್ಟರಲ್ಲಿ ಸ್ವಾಮೀಜಿ ಹೇಳ್ತಾರೆ" ಇಗಳಪ್ಪಾ, ಕೊಟ್ಟೆ ಬಿಟ್ರಲ್ಲಾ! ತಕೋ ತಿನ್ನು , ಬಾಳಾ ಹಸ್ದಿದ್ದೀಯಾ ,ಅಂತಾ ಕೈಲಿದ್ದ ಬಾಳೆಹಣ್ಣನ್ನು ಕೊಡ್ತಾರೆ.
-ತಿನ್ನು, ತಿನ್ನು, ಕೇಳಿದ್ರೆ ಇನ್ನೂ ಕೊಡ್ತಾರೆ,
ಶಾಸ್ತ್ರಿ ಹಣ್ಣನ್ನು ನೋಡ್ತಾರೆ; ಆಗತಾನೆ ಗುಡಾಣದಿನ್ದ ತೆಗೆದಂತಿದೆ. ಒಂದಾದ ಮೇಲೊಂದರಂತೆ ಮೂರು ಹಣ್ಣನ್ನು ಕೊಟ್ಟಿದ್ದಲ್ಲದೆ , ಸ್ವಾಮೀಜಿಯವರೂ ಮೂರು ಬಾಳೆ ಹಣ್ಣನ್ನು ತಿಂತಾರೆ.
ಆಗ ಶಾಸ್ತ್ರಿಗಳು ಕೇಳ್ತಾರೆ" ಸ್ವಾಮೀಜಿ ಈ ಹಣ್ಣು ಎಲ್ಲಿಂದ ಬಂತು?
-ಆವಾಗ ಬರೋವಾಗ ಅಲ್ಲೊಬ್ಬ ಬಂದಾ ನೋಡು, ಅವಾಕೊಟ್ಟ.
-ಯಾರು ಸ್ವಾಮೀಜಿ ಅವನು? ನಾನು ನೋಡಲೇ ಇಲ್ಲವಲ್ಲಾ?
-ನೀನು ನೋಡ್ಲಿಲ್ಲಾ ಅಂದ್ರೆ ಅವನು ಬಂದೆ ಇಲ್ಲಾ ಅನ್ನು? ಅವನು ಇಲ್ವೆ ಇಲ್ಲಾ ಅನ್ನು?
ಶಾಸ್ತ್ರಿಗಳಿಗೆ ಎಲವೂ ವಿಸ್ಮಯವಾಗಿ ಕಾಣುತ್ತೆ.
ಸ್ವಾಮೀಜಿ ನಗ್ತಾ ಹಾಡ್ತಾರೆ" ಎಲ್ಲಾ ರೂಪವೂ ತಾನಂತೆ ಶಿವಾ, ಎಲ್ಲೆಲ್ಲಿಯೂ ಅವಾ ಇಹನಂತೆ,
ಕಾಣಲಾರದವರಿಗೆ ಕಲ್ಲಂತೆ.....ಅವ ಇಲ್ಲಂತೆ...
ಹೀಗೆ ಅದೆಷ್ಟು ಘಟನೆಗಳೋ!
ಸ್ವಾಮೀಜಿಯವರೊಡನೆ ಶಾಸ್ತ್ರಿಗಳಿಗಾದ ಇಂತಹ ಅನುಭವಗಳನ್ನು ಓದುತ್ತಾ ಇದ್ದರೆ ಮೈ ಝುಂ .. ಎನ್ನುತ್ತೆ.
--------------------------------------------------------------


ಮನವಿ:

 ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ  ಹತ್ತಾರುವರ್ಷಗಳ ಸ್ವಾಮೀಜಿಯವರ ಒಡನಾಟದ ಪರಿಣಾಮವಾಗಿ ಬಟ್ಟಿ ಇಳಿಸಿರುವ "ಯೇಗ್ ದಾಗೆ ಐತೆ "  ಪುಸ್ತಕದಿಂದ ಪ್ರೇರಿತರಾಗಿರುವ  ಹಾಸನದ    ಶ್ರೀ ಕವಿನಾಗರಾಜ್, ಶ್ರೀ ಪ್ರಕಾಶ್,ಬೇಲೂರಿನ ಡಾ.ಶ್ರೀವತ್ಸ ವಟಿ ಯವರು ಸೇರಿದಂತೆ ಕೆಲವು ಆತ್ಮೀಯರು ಸೇರಿ ಶ್ರೀ ಮುಕುಂದೂರು ಸ್ವಾಮಿಗಳ ಬಗ್ಗೆ ಪ್ರಕಟವಾಗದೇ ಇರಬಹುದಾದ    ಇನ್ನಷ್ಟು  ಮಾಹಿತಿಗಳನ್ನು  ಸಂಗ್ರಹಿಸಲು ಚಿಂತನೆ ನಡೆಸಿದ್ದೇವೆ. ಸ್ವಾಮೀಜಿಯವರು ಅರಸೀಕೆರೆ ತಾಲ್ಲೂಕು ಮತ್ತು ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ     ಸಾಕಷ್ಟು  ಓಡಾಟ ನಡೆಸಿರುವಂತಿದೆ.  ಹಾಗೂ ಹೊಳೇ ನರಸೀಪುರ ತಾಲ್ಲೂಕಿನ ಮುಕುಂದೂರು ಬೆಟ್ಟದಲ್ಲಿ ಕೆಲವು ಕಾಲ ತಪಸ್ಸು ಮಾಡಿ ಅವರಿಗೆ ಮುಕುಂದೂರಜ್ಜ ಅಥವಾ ಮುಕುಂದೂರು ಸ್ವಾಮಿಗಳು ಎಂಬ ಹೆಸರು ಬಂದಿದೆ.   ಈ ಭಾಗಗಳ ಪರಿಚಯವಿರುವ ಓದುಗ ಮಿತ್ರರು ಈ ಸತ್ಕಾರ್ಯದಲ್ಲಿ ಕೈಜೋಡಿಸಬೇಕಾಗಿ ಕೋರುವೆ.
ನೀವೇನು ಮಾಡಬಹುದು?
1. ಮುಕುಂದೂರು ಸ್ವಾಮಿಗಳ ಹೆಸರು ತಿಳಿದವರ ಮಾಹಿತಿ ನಮಗೆ ಕೊಡಿ.ಅವರನ್ನು ಭೇಟಿಯಾಗಲನುಕೂಲವಾಗುವ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡಿ
2. ನಿಮಗೆ ಸಾಧ್ಯವಾದರೆ ಅವರ ಸಂದರ್ಶನ ನಡೆಸಿ ವೀಡಿಯೋ ಕ್ಲಿಪ್ ನಮಗೆ ಕಳಿಸಿಕೊಡಿ.
3. ಒಂದು ವಿಚಾರ ಸ್ಪಷ್ಟವಿರಲಿ. ಸ್ವಾಮೀಜಿಯವರು ಯಾವುದೇ ಸಂಪ್ರದಾಯ ಪೋಷಕರಲ್ಲ.
4. ನಮಗೆ ಅಗತ್ಯವಿರುವುದು ಅವರ ನೇರವಾದ ಆಧ್ಯಾತ್ಮಿಕನುಡಿಗಳು. ನೆನಪಿರಲಿ ಸ್ವಾಮೀಜಿಯವರು  ವಿಗ್ರಹದಲ್ಲಿ ಮಾತ್ರ ದೇವರನ್ನು ಕಂಡವರಲ್ಲ. ಪ್ರಕೃತಿಯಲ್ಲಿರುವ ಗಿದಮರ ಬಳ್ಳಿಗಳು, ಬಂಡೆಗಳು,ಪ್ರಾಣಿ ಪಕ್ಷಿಗಳನ್ನು ಮನುಷ್ಯನಷ್ತೇ ಸಹಜವಾಗಿ ಮಾತನಾಡಿಸುತ್ತಿದ್ದವರು. ಆದ್ದರಿಂದ ಈ ತಲಹದಿಯಮೇಲೆ  ನೀವು ಮಾತನಾಡಿಸುವವರಿಂದ ಮಾಹಿತಿ ಪಡೆಯುವುದು ಉತ್ತಮ.





Wednesday, June 27, 2012

ಪುಟ್ಟ ಕಣ್ಣುಗಳಲ್ಲಿ ದೊಡ್ಡ ಕನಸುಗಳು

ರಕ್ತ ಸಂಬಂಧಗಳು ಮತ್ತು ಜೀವಾತ್ಮ



     ಅಲ್ಪ ಶಕ್ತ ಜೀವಾತ್ಮನಿಗೆ ಯಾವುದೇ ಕ್ರಿಯೆ ಮಾಡಲು ಶರೀರವೆಂಬ ಮಾಧ್ಯಮದ ಅಗತ್ಯವಿದೆ, ಅದು ಮಾಧ್ಯಮದ ಸಹಾಯವಿಲ್ಲದೆ ತಾನೇ ತಾನಾಗಿ ಏನೂ ಮಾಡಲಾರದು ಎಂದು ತಿಳಿದವರು ಹೇಳುತ್ತಾರೆ. ಹಿಂದೂಗಳು ಪುನರ್ಜನ್ಮದಲ್ಲಿ ನಂಬಿಕೆಯಿರುವವರು. ಹಿಂದಿನ ಜನ್ಮದ ಮಾತಾ-ಪಿತರೇ ಇನ್ನೊಂದು ಜನ್ಮದ ಮಾತಾ-ಪಿತೃಗಳಾಗಲಾರರು. ತಂದೆ-ತಾಯಿಯರ ಗುಣ ವಿಶೇಷಗಳೇ ಮಕ್ಕಳಿಗೆ ಇರದಿರುವುದು, ಎಲ್ಲಾ ಮಕ್ಕಳೂ ಒಂದೇ ಸ್ವಭಾವದವರಾಗದಿರುವುದು, ಕುಟುಂಬದ ಸದಸ್ಯರುಗಳಲ್ಲಿ ಹೊಂದಾಣಿಕೆಯ ಕೊರತೆ ಕಾಣುವುದು, ಇತ್ಯಾದಿ ಅಂಶಗಳು ಪುನರ್ಜನ್ಮದ ನಂಬಿಕೆಗೆ ಪೂರಕವಾಗಿವೆ. ಹಿಂದಿನ ಜನ್ಮದಲ್ಲಿ ಸಂಬಂಧಿಗಳಾಗಿದ್ದವರು ಈ ಜನ್ಮದಲ್ಲೂ ಸಂಬಂಧಿಗಳಾಗಿದ್ದರೆ ಪರಸ್ಪರರಲ್ಲಿ ಮಧುರ ಸಂಬಂಧವಿರುತ್ತದೆ ಎಂದು ಹೇಳುತ್ತಾರೆ. ಇದೇನೇ ಇದ್ದರೂ ಕೆಲವು ಗುಣಗಳು ಅನುವಂಶಿಕವಾಗಿ ಬರುವುದನ್ನೂ ಕಾಣುತ್ತೇವೆ. ಸಂಬಂಧಗಳು, ಅದರಲ್ಲೂ ರಕ್ತ ಸಂಬಂಧಿಗಳ ನಡುವಣ ಸಂಬಂಧಗಳು ಚೆನ್ನಾಗಿರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಈ ಹಿನ್ನೆಲೆಯಲ್ಲಿ ರಕ್ತ ಸಂಬಂಧಗಳು ಮತ್ತು ಜೀವಾತ್ಮರ ಸಂಬಂಧದ ಕುರಿತು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರನ್ನು ವಿಚಾರಿಸಿದಾಗ ಅವರು ಕೊಟ್ಟ ಉತ್ತರ ಈ   ಆಡಿಯೋ ತುಣುಕಿನಲ್ಲಿದೆ: 


-  ಕವಿ ನಾಗರಾಜ್

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-3

ತೋಟದ ಹಾದಿಯಲ್ಲಿ ಹೊರಟವರು ಆಶ್ರಮ ತಲುಪಿದೆವು.  ಅಲ್ಲಿನ ಒಬ್ಬ ಕೆಲಸಗಾರ  ಎಲ್ಲಾ ತೋರಿಸಿದವನು "ಕಾಫಿ ಮಾಡಿಸಿಕೊಂಡು ಬರಲಾ? ಬುದ್ಧಿಯೋರು ಮಲಗವ್ರೆ, ಅಂದ.
-ಪರವಾಗಿಲ್ಲ ,ನಾವು ಇಲ್ಲೇ ಎಲ್ಲಾ ನೋಡಿಕೊಂಡು ಎಲ್ಲಾ ನೋಡ್ತಾ ಇತೀವಿ..ಆಮೇಲೆ ಸ್ವಾಮೀಜಿ ನೋಡೋಣ, ಎಂದೆವು. ಆ ವ್ಯಕ್ತಿ ಆಶ್ರಮದ ಆವರಣದಲ್ಲಿರುವ ದೇವಾಲಯ, ಧ್ಯಾನ ಮಂದಿರ [ಈಗ ಕಲ್ಯಾಣ ಮಂಟಪವಾಗಿ        ಉಪಯೋಗವಾಗುತ್ತಿದೆ]   ಮುಕುಂದೂರು ಸ್ವಾಮಿಗಳಗದ್ದುಗೆ. ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಗುಹೆ, ಅವರು ಪೂಜಿಸುತ್ತಿದ್ದ  ಈಶ್ವರ ವಿಗ್ರಹ..ಎಲ್ಲವನ್ನೂ ನೋಡಿಕೊಂಡು ಸುತ್ತಮುತ್ತ ಇರುವ ಹಿರಿಯ ವ್ಯಕ್ತಿಗಳಿಂದ ಸ್ವಾಮಿಗಳ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯೋನ ಎಂದು ಆಶ್ರಮದ ಹೊರಗೆ ಹೆಜ್ಜೆ ಹಾಕಿದೆವು. ಆಗ ಭೇಟಿಯಾದ ಮೊದಲ ವ್ಯಕ್ತಿಯನ್ನು ಮಾತನಾಡಿಸಿದಾಗ.......

[ವೀಡಿಯೋ ನೋಡುವುದು ಹಲವು ಭಾರಿ ಪ್ರಯಾಸದ ಕೆಲಸ. ಇದರ ಆಡಿಯೊ ಕೂಡ ಇಲ್ಲೇ ಕೆಳಗಿದೆ. ಆಡಿಯೋ ಕೇಳುವುದು ಸುಲಭ.]

ಈ ವ್ಯಕ್ತಿಯೊಡನೆ ಮಾತನಾಡುವಾಗ ಒಂದಂಶವಂತೂ ಸ್ಪಷ್ಟವಾಯ್ತು.ಸ್ವಾಮೀಜಿಯವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದ ದಿನ ತಮಗೂ ದೇಹಮುಕ್ತಿ ಕೊಡಬೇಕೆಂದು ಪ್ರಾಥಿಸಿದವರು ಗೌರಜ್ಜಿ ಎಂಬ ಅಂಶ ಯೇಗ್ ದಾಗೆಲ್ಲಾ ಐತೆ ಪುಸ್ತಕದಲ್ಲಿ ಪ್ರಕಟಗೊಂದಿದೆ. ಆದರೆ ಆ ವ್ಯಕ್ತಿ ಗೌರಜ್ಜಿಯಲ್ಲಾ ಅವ೫ರು ಶರಣಮ್ಮ ಎಂದು ಅಂದು ಘಟನೆಯನ್ನು ಕಣ್ಣಾರೆ ಕಂಡವರು ಹೇಳಿದ್ದಾರೆ. ಸ್ವಾಮೀಜಿಯವರ ಬಗ್ಗೆ ಇಷ್ಟೆಲ್ಲಾ ವಿಚಾರಗಲನ್ನು ನಮಗೆ ತಿಳಿಯುವಂತೆ ಮಾಡಿರುವ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳ ವಯೋಮಾನದ ಸಹಜ ಕುಂದಿದ ನೆನಪಿನ ಶಕ್ತಿಯ ಪರಿಣಾಮ ಹೆಸರು ಬದಲಾಗಿರಬಹುದು. ಆದರೆ ಧಾಖಲೆಯಲ್ಲಿ ತಪ್ಪಾಗದಿರಲಿ ಎಂದು ಈ ಅಂಶವನ್ನು ಪ್ರಕಟಿಸಿರುವೆ

 

 ಸ್ವಾಮೀಜಿಯವರ ಆಶ್ರಮದ ಭೇಟಿಯ ವಿಚಾರ ತಿಳಿದ ಮಿತ್ರ ಪ್ರಕಾಶ್ ಅವರು ಮಾಡಿರುವ ಪ್ರತಿಕ್ರಿಯೆಗೆ ಓದುಗರಿಗೆ ವಿಷಯ ತಲುಪಲೆಂಬ ಕಾರಣಕ್ಕೆ ಮುಖ್ಯ ಲೇಖನದಲ್ಲಿಯೇ ಪ್ರತಿಕ್ರಿಯಿಸಿರುವೆ.
 -ಹರಿಹರಪುರ ಶ್ರೀಧರ್ 

 ಆತ್ಮೀಯ ಪ್ರಕಾಶ್,
ನಿಜವಾಗಿ ನೋಡಲೇ ಬೇಕಾದ ಸ್ಥಳ.ಆದರೆ ಅಲ್ಲಿ ಏನ್ ಆಗಿದೆ ಅಂದ್ರೆ ಯಾವ ವಿಚಾರವನ್ನು ಸ್ವಾಮಿಗಳು ಹೃದಯಂಗಮ ಮಾಡಿಕೊಂದಿದ್ದರೋ ಅದನ್ನು ಬದಿಗಿಟ್ಟು ಅವರ ಆಶ್ರಮ ಅವರ ಹೆಸರಲ್ಲೇ ಒಂದು ಸಂಪ್ರದಾಯದ ಚೌಕಟ್ಟಿನಲ್ಲಿ ನಡೆಯುತ್ತಿದೆ. ಅದು ಅಲ್ಲಿನ ಜನರ ತಪ್ಪೆಂದು ನಾನು ಭಾವಿಸುವುದಿಲ್ಲ. ಆದರೆ ಸ್ವಾಮಿಗಳ ವಿಚಾರವನ್ನು ಒಪ್ಪಿರುವ ಸಹಸ್ರಾರು ಜನರು ಮುಂದೆ ಬಂದರೆ ನಿಜವಾಗಲೂ ಸ್ವಾಮಿಗಳ ವಿಚಾರವನ್ನು ಹರಡುವಂತೆ ಮಾಡಿದರೆ ನಿಜವಾದ ಅಧ್ಯಾತ್ಮದ ಕೆಲಸ ಅದಾಗುವುದರಲ್ಲಿ ಸಂಶಯವಿಲ್ಲ. ಸ್ವಾಮಿಗಳದ್ದು ಸ್ವತ: ತಪೋನುಭವ. ಭಾಷೆಯನ್ನೂ ಕಲಿಯದ ಅವರು ತಮಗೆ ತಿಳಿದಿದ್ದ ಹಳ್ಳಿ ಭಾಷೆಯಲ್ಲಿ ಬಹಳ ಮುಗ್ಧವಾಗಿ ಅಧ್ಯಾತ್ಮವನ್ನು ತಿಳಿಸುವ ಶೈಲಿಯಲ್ಲಿ ನಾವೂ ಕೂಡ  ಮಗುವಾಗಿಬಿಡುತ್ತೇವೆ. ಸ್ವಾಮಿಗಳು ಓಡಾಡಿದ ಸ್ಥಳಗಳಲ್ಲಿ ಈಗಲೂ ಅರವತ್ತಕ್ಕಿಂತ ಹೆಚ್ಚು ವಯಸ್ಸಾಗಿರುವ ಹಿರಿಯ ಜೀವಿಗಳಿಂದ ಸ್ವಾಮೀಜಿಯವರ ವಿಚಾರದ ಮೇಲೆ ಬೆಳಕು ಚೆಲ್ಲುವ ಸಂಗತಿಗಳನ್ನು ಸಂಗ್ರಹಿಸಲು ಇದುವೇ ಸಕಾಲ. ವರ್ಷ ಕಳೆದಂತೆ ಹಳಬರು ಇಲ್ಲವಾಗುತ್ತಾರೆ. ಇದುವರೆವಿಗೆ ಪ್ರಕಟವಾಗದೆ ಉಳಿದಿರುವ ಹಲವಾರು ಸಂಗತಿಗಳು ಕಾಲಗರ್ಭ ಸೇರಿಹೋಗುತ್ತವೆ.ಈಗ ಆ ದಿಕ್ಕಿನಲ್ಲಿ ಪ್ರಯತ್ನ ಮಾಡುವುದಾದರೆ ಸಮಾನ ಮಾನಸಿಕರ ಜೊತೆ ಪೂರ್ಣವಾಗಿ ಕೈ ಜೋಡಿಸಲು ನಾನಂತೂ ಸಿದ್ಧ.
------------------------------------------------------------------------
ಕೃಷ್ಣಶಾಸ್ತ್ರಿಗಳು ಶಾಲೆಯಲ್ಲಿ ಪಾಠ ಮಾಡ್ತಾ ಇರ್ತಾರೆ.ಇದ್ದಕ್ಕಿದ್ದಂತೆ ಮುಕುಂದೂರು ಸ್ವಾಮಿಗಳು ಶಾಲೆಗೆ ಬಂದುಬಿಡ್ತಾರೆ."ನಾನೂ ಒಂದಿಷ್ಟು ಪಾಠ ಕೇಳ್ತೀನಿ ಮಗಾ!" ಸ್ವಾಮಿಗಳ ಮಾತು ಕೇಳಿದ ಶಾಸ್ತ್ರಿಗಳಿಗೆ ಏನೂ ಹೇಳಲು ತೋಚಲೇ ಇಲ್ಲ. ಕೊನೆಯ ಬೆಂಚ್ ಮೇಲೆ ಸ್ವಾಮಿಗಳು ಕುಳಿತಿದ್ದು ಆಯ್ತು. " ನಿನ್ನ ಪಾಡಿಗೆ ನೀನು ಪಾಠ ಮಾಡು " ಸ್ವಾಮಿಜಿ ಅಪ್ಪಣೆ ಕೊಡಿಸಿದರು. ತೂಗಿ ಹಾಕಿದ್ದ ಭೂಪಟದಲ್ಲಿ ಬಂಗಾಳಕೊಲ್ಲಿ,ಅರಬ್ಬೀ ಸಮುದ್ರ, ಕಲ್ಕತ್ತಾ, ಬೊಂಬಾಯಿ, ಎಲ್ಲಾ ತೋರಿಸಿ ಪಾಠ ಮಾಡಿ ಮುಗಿಸಿದ್ದಾಯ್ತು. ಸ್ವಾಮೀಜಿ ಜೊತೆ ಶಾಸ್ತ್ರಿಗಳು ಹೊರಗೆ ಹೊರಟರು. ಸ್ವಾಮೀಜಿ " ಚೆನ್ನಾಗಿ ಪಾಠ ಮಾಡ್ತೀಯ." ಎಂದಾಗ ಶಾಸ್ತ್ರಿಗಳು" ಚೆನ್ನಾಗಿ ಮಾಡ್ತೀನಾ? ಸ್ವಾಮಿ ಎಂದು ಮತ್ತೆ ಕೇಳಿದರು. " ಹೌದು, ಸಮುದ್ರ ನೋಡಿದ್ದೀಯಾ? ಅಂತ ಮಕ್ಕಳನ್ನು ಯಾರಾದ್ರೂ ಕೇಳಿದ್ರೆ, ಅವರು ಏನ್ ಹೇಳತಾರೆ? ಇಸ್ಕೂಲಲ್ಲಿ ಪಟ ಹಾಕಿದ್ರು ಅದರಲ್ಲಿ ನೋಡಿದ್ದೀನಿ, ನೀವೂ ಪಟ ಹಾಕಿ, ಅದರಲ್ಲಿ ತೋರಿಸ್ತೀನಿ,ಅಂತಾವೆ ಅಲ್ವಾ? "ಅಂಗೇನೆ ಸನ್ಯಾಸೀನ "ದೇವರು ತೋರಿಸಿ" ಅಂದ್ರೆ ಗುಡಿಬಾಗಿಲು ತೆಗಿ" ಅಂತಾನೆ. ಗುಡಿ ವಿಗ್ರಹದಲ್ಲಿ ದೇವರು ಐತಾ? " ಸ್ವಾಮೀಜಿ ಮಾತಿನ ಅಂತರಾಳ ಅರ್ಥಮಾಡಿಕೊಂಡು ಶಾಸ್ತ್ರಿಗಳು ಬೆಪ್ಪಾಗಿ ನಿಲ್ತಾರೆ. ಮುಂದೆ ಸ್ವಲ್ಪ ದೂರದಲ್ಲಿ ಹೆದ್ದಾರಿ ಕಾಣುತ್ತೆ. " ನೋಡು ನಾವೀಗ ಸಣ್ಣ ದಾರಿಯಿಂದ ದೊಡ್ಡ ರಸ್ತೆ ಸೇರ್ತೀವಿ.ದೊಡ್ಡರಸ್ತೆ ಸಿಕ್ಕಿದ ಕೂಡ್ಲೆ ನಮಗೆ ಊರೇ ಸಿಕ್ತು ಅಂತಾ ಹೇಳಕ್ಕಾಯ್ತದ? ಸರಿಯಾಗಿ ಹೋಗಿಲ್ಲಾ ಅಂದ್ರೆ ಊರು ಸಿಕ್ದೆ ಇನ್ನೆಲ್ಲೋ ಹೋಗ್ ಬಹುದು ಅಲ್ವಾ? ಎಚ್ಚರ ಇರ್ಬೇಕಪ್ಪಾ!! ಸ್ವಾಮೀಜಿ ಮಾತು ಎಷ್ಟು ಅರ್ಥ ಗರ್ಬಿತ ಅಲ್ವಾ? ಇದಕ್ಕೆ ವಿವರಣೆ ಬೇಕಾಗಿಲ್ಲಾ, ಅಲ್ವಾ?

-----------------------------------------------------------------

ಮನವಿ: ಆಶ್ರಮಕ್ಕೆ ನಾವು ಹೋದವರು ಆಶ್ರಮದ ಜೊತೆಗೆ ಸುತ್ತ ಮುತ್ತಲಿನ ಕೆಲವರನ್ನು    ಅವರಿಂದ  ಮಾಹಿತಿ ಪಡೆಯುವ ಸಲುವಾಗಿ ಮಾತನಾಡಿಸಿದ್ದೇವೆ.  ಅಂತಹ ವೀಡಿಯೋ ಗಳನ್ನು ಪ್ರಕಟಿಸುತ್ತಾ  ಗ್ರಂಥದ ಕೆಲವು ಆಯ್ದ ಭಾಗಗಳನ್ನು  ಇನ್ನೂ ಹಲವು ಭಾಗಗಳಲ್ಲಿ ಪ್ರಕಟಿಸಲಿದ್ದೇವೆ.

ಹಿಂದಿನ ಭಾಗಗಳಿಗಾಗಿ ಕೊಂಡಿ:

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-2

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-1


ಯೌವನಂ ಧನ ಸಂಪತ್ತಿ :........

ಯೌವನಂ ಧನ ಸಂಪತ್ತಿ : ಪ್ರಭುತ್ವಂ ಅವಿವೇಕಿತಾ |
ಏಕೈಕಮ್ ಅಪ್ಯನರ್ತ್ಹಾಯ ಕಿಮು ಯತ್ರ ಚತುಷ್ಟಯಂ ||

ಯೌವನ, ಐಶ್ವರ್ಯ, ಒಡೆತನ, ಮತ್ತಿ ಅವಿವೇಕಿತನ, ಇವುಗಳು ಒಂದೊಂದು ಕೂಡಾ ಅನರ್ಥಗಳನ್ನೇ ಮಾಡಲ್ಪಡುವುವು, ಇವುಗಳೆಲ್ಲವೂ ಒಂದೇ ಕಡೆ ಸೇರಿದರೆ ಭಯಂಕರವಾದ ಅನರ್ಥಗಲೇ ನಡೆಯುವುವು. ಯೌವನದ ಉತ್ಸಾಹ ಅದರ ಜೊತಗೆ ಸಂಪತ್ತು ಜೊತೆಗೆ ನಾಯಕತ್ವ ದೊರೆತರೆ ಅವಿವೇಕಕ್ಕೆ ಬೇರೆ ಜಾಗ ಬೇಕೆನ್ದೆನು ಇಲ್ಲ,


-Sadyojata Bhatta

Monday, June 25, 2012

ಅಹಿಂಸಾ ........ಒಂದಷ್ಟು ಚಿಂತನೆ.

" ಅಹಿಂಸಾ, ಸತ್ಯ, ಆಸ್ತೆಯ, ಶೌಚ, ಇಂದ್ರೀಯನಿಗ್ರಹ " ಇವು ಪಂಚ ಮುಖ್ಯ ತತ್ವಗಳು ಎಂದು ಧರ್ಮ ಶಾಸ್ತ್ರಗಳು ಹೇಳುತ್ತವೆ. ಯಾರನ್ನು ಹಿಂಸೆಗೆ ಒಳಪಡಿಸದಿರುವುದು ;   ಸತ್ಯವನ್ನೇ ನುಡಿಯುವುದು ;  ಪರರ   ವಸ್ತುಗಳನ್ನು   ಕದಿಯದಿರುವುದು ;   ದೇಹ ,ಮನಸ್ಸು, ಮತ್ತು ನಾವಾಡುವ ಮಾತಿನಲ್ಲಿ ಪವಿತ್ರತೆಯನ್ನು ಸಾಧಿಸುವುದು ; ಮತ್ತು ಪಂಚೆಂದ್ರಿಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು.  ಇವೆ ಆ ಪಂಚ ಮಹಾ ತತ್ವಗಳು.  ಮಹಾಭಾರತದಲ್ಲಿ  ಇದರಲ್ಲಿ ಒಂದಾದ ಅಹಿಂಸೆಯ ಬಗ್ಗೆ ಹೇಳಿದೆ " ಅಹಿಂಸಾ ಪರಮೊಧರ್ಮಃ."  ಅಹಿಂಸೆ ಪರಮ ಪವಿತ್ರ ಧರ್ಮವಾಗಿದೆ. ಈ ತತ್ವವನ್ನು ಪ್ರಪಂಚದ ಎಲ್ಲ ಧರ್ಮಗಳು ಒಪ್ಪಿಕೊಂಡಿವೆ. ಬೌದ್ಧ ಮತ್ತು ಕ್ರೈಸ್ತ ಧರ್ಮಗಳು ತಮ್ಮ ಗ್ರಂಥಗಳಲ್ಲಿ ಈ ವಿಚಾರವನ್ನು ವಿಶೇಷವಾಗಿ ಪ್ರತಿಪಾದಿಸಿದೆ.

ಹಿಂಸೆ ಎಂದರೆ ಕೇವಲ ಒಂದು ಜೀವಕ್ಕೆ ಹಾನಿ ಮಾಡುವುದು ಮಾತ್ರವಾಗುವುದಿಲ್ಲ, ಯಾರೊಬ್ಬರ ಮನಸ್ಸಿಗೆ ನೋವುಂಟು ಮಾಡುವುದು, ಮತ್ತೊಬ್ಬರಿಗೆ ನಮ್ಮ ನಡವಳಿಕೆಯಿಂದ ಆಗಬಹುದಾದ ಮಾನಸಿಕ ಕಿರಿಕಿರಿಯು ಸೇರುತ್ತದೆ.  ಆದ್ದರಿಂದ, ಅಹಿಂಸೆ ಎಂದರೆ ಯಾರೊಬ್ಬರಿಗೂ ಯಾವ ರೀತಿಯಲ್ಲೂ ಹಿಂಸೆಯಾಗದಂತೆ ಬಾಳುವುದೇ ಆಗುತ್ತದೆ.  ಪ್ರಪಂಚದ ಎಲ್ಲಾ  ಧರ್ಮಗಳು ಅಹಿಂಸೆಯ ತತ್ವವನ್ನು  ಪಾಲಿಸಬೇಕೆಂದು ಮತ್ತು ಹಿಂಸಾ ಮಾರ್ಗವನ್ನು ತ್ಯಜಿಸಬೇಕೆಂದು ಹೇಳುತ್ತವೆ.  ಆದರೆ, ಯಾವುದೇ ರೀತಿಯಲ್ಲಿ ಹಿಂಸೆಗೆ ಆಸ್ಪದ ಕೊಡದ ಹಾಗೆ ಜೀವನವನ್ನು ನಡೆಸಲು ಸಾಧ್ಯವೇ?


ಒಂದು ಉದಾಹರಣೆಯನ್ನು ನೋಡೋಣ.  ಒಬ್ಬ ಕೊಲೆಪಾತಕ ನಮ್ಮ ಮನೆಗೆ ನುಗ್ಗಿದ್ದ ಎಂದೇ ಅಂದುಕೊಳ್ಳೋಣ. ಅವನ ಕೈಯಲ್ಲಿ ಮಾರಕಾಸ್ತ್ರವಿದೆ.  ಅವನು ನಮ್ಮ ಮಗನನ್ನೂ , ಮಗಳನ್ನೂ ಹೊಡೆಯಲು ಅಥವಾ ಅತ್ಯಾಚಾರ ಮಾಡಲು ಮುಂದಾಗಬಹುದು.  ಹೆಂಡತಿ ಮಕ್ಕಳ  ಪ್ರಾಣ ತೆಗೆಯಲು ಮುನ್ನುಗ್ಗಬಹುದು.  ಕೊಲೆಯ ಬೆದರಿಕೆ ಒಡ್ಡಬಹುದು. ಮನೆಯಲ್ಲಿರುವ ಹಣ , ಒಡವೆ ದೋಚಲು ಪ್ರಯತ್ನಿಸಬಹುದು.  ಒಬ್ಬೊಬ್ಬರಾಗಿ ಹಿಂಸೆಗೆ ಒಳಗಾಗಬಹುದು.  ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ನಮ್ಮ ಕುಟುಂಬದ ಸದಸ್ಯರನ್ನು ರಕ್ಷಿಸಲು ಮುಂದಾಗಬೇಡವೇ ? ನಮ್ಮನ್ನು ರಕ್ಷಿಸಲು ಯಾರು ಇಲ್ಲವೆಂದು ಹೇಳುತ್ತಾ ಕೂರಬೇಕೆ?  ಅಹಿಂಸಾ ಪರಮೋ ಧರ್ಮಃ  ಎಂದು ಕಣ್ಣು ಮುಚ್ಚಿ ಕೂರಬೇಕೆ?  ಅಥವಾ ಅಹಿಂಸಾ ತತ್ವವನ್ನು ಮನೆಯವರಿಗೆಲ್ಲ ಹೇಳಿ ಸಮಾಧಾನ ಪಡಿಸಬೇಕೇ?  ಅಥವಾ ನಮ್ಮ ಕುಟುಂಬದ ಎಲ್ಲಾ ಸದಸ್ಯರೂ  ಒಗ್ಗಟ್ಟಾಗಿ ನಮ್ಮ ಕೈಲಾದ ಮಟ್ಟಿಗೆ ಆ ಪಾತಕಿಯನ್ನ ಎದುರಿಸಬೇಕೆ? ಅವನ ತಪ್ಪಿಗೆ ಶಿಕ್ಷೆಯನ್ನು ಕೊಡಿಸುವಲ್ಲಿ ಶ್ರಮಿಸಬೇಕೆ?  ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಆ ಪಾತಕಿಯನ್ನು ಸಾಯಿಸಬೇಕಾದ ಪರಿಸ್ಥಿತಿ ಬಂದಾಗ ಏನು ಮಾಡಬೇಕು?  ಈ ರೀತಿಯ ಹಲವಾರು ಪ್ರಶ್ನೆಗಳು ಸಹಜವಾಗಿ ನಮ್ಮೊಳಗೇ ಹುಟ್ಟಬಹುದು.


ಅಹಿಂಸೆಯನ್ನು ಭೋದಿಸುವ ನಮ್ಮ ಧರ್ಮ ಶಾಸ್ತ್ರಗಳು ಇಂಥ   ವಿಷಮ ಪರಿಸ್ಥಿತಿಯಲ್ಲಿ    ಏನು  ಮಾಡಬೇಕೆಂದು   ತಿಳಿಸಿವೆ.  " ಯಾವುದೇ ವಿಚಾರ ಮಾಡದೆ ಇಂತಹ ಪಾತಕಿಗಳನ್ನು ಶಿಕ್ಷಿಸಲು ಮುಂದಾಗಬೇಕೆಂದು , ದಂಡಿಸಬೇಕೆಂದು ಹೇಳುತ್ತದೆ."  ಮುಂದುವರೆದು  " ಇಂತಹ ದುಷ್ಕೃತ್ಯ ಎಸಗುವ ವ್ಯಕ್ತಿ ಗುರುವಾಗಿರಬಹುದು , ಹಿರಿಯನಾಗಿರಬಹುದು, ಯುವಕನಾಗಿರಬಹುದು, ಅಥವಾ ವಿದ್ಯಾಸಂಪನ್ನನೆ  ಆಗಿರಬಹುದು.  ಆದರೆ ಇಂತಹವರಿಗೆ ಯಾವುದೇ ಕರುಣೆಯನ್ನು ತೋರಿಸಬಾರದು " ಎಂದೇ ಹೇಳುತ್ತದೆ. " ಇಂತಹ ಅನಿವಾರ್ಯ ಸಂಧರ್ಭದಲ್ಲಿ ಪಾತಕಿಯನ್ನು ಕೊಂದರು , ಮಾಡಿದ ಪಾಪ ಕೃತ್ಯಕ್ಕೆ  ಯಾವ ಪಾಪದ ಲೇಶವು ಅಂಟುವುದಿಲ್ಲ "  ಎನ್ನುತ್ತದೆ ಧರ್ಮ ಶಾಸ್ತ್ರಗಳು.    ಇಂದಿನ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ  " ವಿಶೇಷ ಸಂಧರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅತ್ಯಾಚಾರಿ, ಕೊಲೆಗಡುಕರನ್ನು ಕೊಲ್ಲುವುದು  ಅಪರಾಧವಲ್ಲ " ಎನ್ನುವುದನ್ನು  ಹಲವಾರು ವಿಚಾರಣೆಯ ಸಂಧರ್ಭದಲ್ಲಿ ಸಮರ್ಥಿಸಿದೆ.


ಇಂತಹುದೇ ಸಂಧಿಗ್ದದಲ್ಲಿ ಅರ್ಜುನನು ಧರ್ಮರಾಯನನ್ನು ಅಹಿಂಸೆಯ ಬಗ್ಗೆ ಒಂದು ಪ್ರಶ್ನೆಯನ್ನು ಕೇಳುತ್ತಾನೆ.  " ಈ ಪ್ರಪಂಚದಲ್ಲಿ ನಮ್ಮ ಕಣ್ಣಿಗೆ ಕಾಣದ ಕೋಟ್ಯಾಂತರ ಜೀವಿಗಳು, ನಾವು ಊಹೆ ಕೂಡ ಮಾಡಿಕೊಳ್ಳಲಾಗದಂತೆ  ನಮ್ಮ ಕಣ್ಣ ರೆಪ್ಪೆಗೆ ಬಡಿತಕ್ಕೆ ಸಿಕ್ಕಿ ಸಾಯುವಾಗ  ಅಹಿಂಸಾ ತತ್ವ ಎಷ್ಟು ಸಮಂಜಸ? "   ಇಂತಹ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಭಾಗವತ ಹೀಗೆ ಹೇಳುತ್ತದೆ " ಜೀವೋ, ಜೀವಸ್ಯ , ಜೀವನಂ."  ಉಪನಿಷತ್ತು ಹೇಳುತ್ತದೆ "ಜೀವನದಲ್ಲಿ  ಪ್ರತಿಯೊಂದು ಅವಶ್ಯವೇ."


ಈ ಜಗತ್ತಿನಲ್ಲಿ  ಅಹಿಂಸೆಯನ್ನು ಎಲ್ಲರು ಭೋಧಿಸುವವರೆ ಆದರೆ ದುಷ್ಟರನ್ನು ಶಿಕ್ಷಿಸುವವರು ಯಾರು?  ದುಷ್ಟರಿಂದ ಸಾಮಾನ್ಯರಿಗೆ ರಕ್ಷಣೆ  ಹೇಗೆ?  ದುಷ್ಕೃತ್ಯ ಎಸಗುವವರನ್ನು ನಿಗ್ರಹಿಸುವ ಜೊತೆಗೆ ಶಿಷ್ಟರನ್ನು ರಕ್ಷಿಸುವ ಕಾರ್ಯ ಕೂಡಾ ಅಹಿಂಸಾ ತತ್ವದಷ್ಟೇ ಪ್ರಮುಖವಲ್ಲವೇ?  ಈ ಬದುಕಿನಲ್ಲಿ ಕೇವಲ ಒಳ್ಳೆಯತನವಷ್ಟೇ ಮುಖ್ಯವಲ್ಲ , ಜೊತೆಗೆ ಒಳ್ಳೆಯದನ್ನು ಉಳಿಸಿಕೊಳ್ಳಲು  ಹೋರಾಟವನ್ನು ನಡೆಸಬೇಕಾಗುತ್ತದೆ. ಇಂತಹ ಹೋರಾಟದ ಸಂಧರ್ಭದಲ್ಲಿ ಪಲಾಯನವಾದ ಎಂದಿಗೂ ಕೂಡದು.  ಸಮರ್ಥವಾಗಿ ಎದುರಿಸುವ ಮನೋಸ್ತೈರ್ಯ ಹೊಂದಬೇಕಾಗುತ್ತದೆ.  ಕೇವಲ ನೀತಿ ಪಾಠದಿಂದ ಜೀವನ ಸಾಗುವುದಿಲ್ಲ.  ನೀತಿ, ಅನೀತಿಯ ವ್ಯತ್ಸ್ಯಾವನ್ನು ತಿಳಿದು ಯಾವ ಸಂಧರ್ಭಕ್ಕೆ ಯಾವುದು ಅವಶ್ಯಕ ಎಂಬುದರ ನಿರ್ಧಾರ ಮಾಡಬೇಕಾದ ವಿವೇಚನೆ ಮತ್ತು ವಿವೇಕ ಅವಶ್ಯಕ.        ಇದನ್ನೇ ಶ್ರೀ ಕೃಷ್ಣ ಪರಮಾತ್ಮ     ಭಗವಧ್ಗೀತೆಯಲ್ಲಿ   ಅರ್ಜುನನಿಗೆ " ಕರ್ಮದಲ್ಲಿ ಆಕರ್ಮವನ್ನು, ಆಕರ್ಮದಲ್ಲಿ ಕರ್ಮವನ್ನು ಯಾವನು ನೋಡುತ್ತಾನೋ ಅವನೇ ಬುದ್ಧಿವಂತನು, ಅವನೇ ಯುಕ್ತನು, ಮತ್ತು ಸಕಲ ಕರ್ಮಗಳನ್ನು ಮಾಡಿದವನಾಗುತ್ತಾನೆ " ಎಂದು ಬೋಧಿಸಿದ್ದು .


ಹೆಚ್ ಏನ್ ಪ್ರಕಾಶ್


( ಈ ನನ್ನ ಚಿಂತನವು ಹಾಸನ ಆಕಾಶವಾಣಿ ಕೇಂದ್ರದಿಂದ ದಿನಾಂಕ 27 11 2009 ರಲ್ಲಿ ಬಿತ್ತರಗೊಂಡಿತ್ತು )