Pages

Sunday, October 3, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 4

ಋಗ್ವೇದ ಸಾರುತ್ತಲಿದೆ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ|| (ಋಕ್.10.81.3.)


[ವಿಶ್ವತಃ ಚಕ್ಷುಃ] ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ [ಉತ] ಮತ್ತು [ವಿಶ್ವತಃ ಮುಖಃ] ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, [ವಿಶ್ವತಃ ಬಾಹುಃ] ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, [ಉತ] ಅದೇ ರೀತಿ [ವಿಶ್ವತಃ ಪಾತ್] ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, [ಏಕದೇವಃ] ಒಬ್ಬ ದೇವನು [ದ್ಯಾವಾ ಭೂಮಿ ಜನಯನ್] ದ್ಯುಲೋಕ, ಪೃಥಿವೀ ಲೋಕಗಳನ್ನು ರಚಿಸುತ್ತಾ [ಬಾಹುಭ್ಯಾಂ ಸಮ್] ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ [ಪತತ್ರೈ ಸಮ್] ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ [ಧಮತಿ] ಪ್ರಾಣವನ್ನು ಊದುತ್ತಿದ್ದಾನೆ.


     ಎಂತಹ ಸೊಗಸಾಗಿದೆ, ಈ ವರ್ಣನೆ! ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ ಎಂದು ಮೊದಲೇ ಓದಿದ್ದೇವೆ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲ್ಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ "ಏಕ ದೇವಃ" ಎಂಬ ಶಬ್ದಗಳಿವೆ. ಮೊದಲು ಉದ್ಗರಿಸಿದ ಯಜುರ್ವೇದ ಮಂತ್ರವೊಂದರಲ್ಲಿಯೂ ನಾವು "ಏಕಮ್" ಎಂಬ ಶಬ್ದವನ್ನು ಕಾಣುತ್ತೇವೆ.

3 comments:

  1. ಒಟ್ಟಿನಲ್ಲಿ ಎಲ್ಲೆಡೆವ್ಯಾಪಿಸಿರುವ ಭಗವಂತನ ಶಕ್ತಿಯು ಜೀವಕೋಟಿಯ ಎಲ್ಲ ಪ್ರಕ್ರಿಯೆಗಳಿಗೂ ಚೇತನ ಶಕ್ತಿಯಾಗಿ ಅದೇ ಕಾರಣವಾಗಿದೆ, ಎಂದು ಭಾವಿಸಬೇಕಷ್ಟೆ.ಈ ಬಗ್ಗೆ ನಂಬಿಕೆ ಬರುವುದು ಹೇಗೆ? ವಿಚಾರ ವಿಮರ್ಶೆ ಮಾಡುತ್ತಾ ಹೋದರೆ ಈ ಪ್ರಶ್ನೆ ಕೇಳುವುದಕ್ಕೆ ನನ್ನ ಮನಸ್ಸನ್ನು ಪ್ರಚೋಸಿರುವ ಹಿಂದಿನ ಶಕ್ತಿಯೂ ಅದೇ ಆಗಿದೆ, ಅಂತೆಯೇ ಇದೆಲ್ಲಾ ಸುಳ್ಳು ,ಜೀವಕೋಟಿಯ ಪ್ರತಿಯೊಂದೂ ಕೂಡ ಪ್ರಕೃತಿ ಸಹಜ ಕ್ರಿಯೆಗಳಿಂದ ಚಟುವಟಿಕೆಯಿಂದ ಕೂಡಿರುತ್ತವೆ- ಎಂಬ ಚಿಂತನೆಯ ಹಿಂದಿನ ಚೇತನ ಶಕ್ತಿಯೂ ಅದೇ ಆಗಿರಬೇಕಲ್ಲವೇ?-ಒಟ್ಟಿನಲ್ಲಿ ಇದೆಲ್ಲಾ ಗೊಂದಲಮಯವೇ ಅಗಿದೆ. ನಮ್ಮ ಚಿಂತನೆಯನ್ನು ಟ್ಯೂನ್ ಮಾಡುವಂತಹ ,ಸಂಸ್ಕಾರ ಕೊಡಬಲ್ಲಂತಹ ಗುರುವಿನ ಅವಶ್ಯಕತೆ ಹೆಚ್ಚು ಕಾಣುತ್ತದೆ.ಕೆಲವೆಲ್ಲಾ ನಮ್ಮ ಚಿಂತನೆಗೆ ನಿಲುಕುವುದೇ ಇಲ್ಲ.ಅಥವ ಅಷ್ಟು ಆಳಕ್ಕೆ ಹೋಗುವ ತಾಳ್ಮೆಯೇ ನಮಗೆ ಇಲ್ಲ.ಶರ್ಮರಂತವರು ನಮಗೆ ಕನ್ವಿನ್ಸ್ ಮಾಡಬೇಕು. ಇಲ್ಲದಿದ್ದರೆ ಗೊಂದಲಕ್ಕೆ ಸಿಕ್ಕಿಹಾಕಿಕೊಳ್ಳುವುದಂತೂ ನಿಶ್ಚಿತ.

    ReplyDelete
  2. ನನಗೂ ಗೊಂದಲವಿದೆ. ಎಲ್ಲೆಲ್ಲೂ ದೇವರಿದ್ದಾನೆ ಎಂದಾಗ ಎಲ್ಲೆಲ್ಲೂ, ಎಲ್ಲದರಲ್ಲೂ ನಾವು ದೇವರನ್ನು ಕಾಣುವ ಪ್ರಯತ್ನ ಮಾಡಬಹುದಲ್ಲವೇ? ನೀವಂದಂತೆ ಸಂದೇಹ ನಿವಾರಿಸುವ ಸದ್ಗುರುವಿನ ಅಗತ್ಯ ಬಹಳವಿದೆ.

    ReplyDelete