Pages

Saturday, December 11, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -2



ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ|
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.೧.೧೬೪.೨೦)


     [ಸಯುಜಾ] ಸದಾ ಒಂದಿಗಿರುವ, [ಸಖಾಯಾ] ಪರಸ್ಪರ ಸ್ನೇಹಿತರಾದ ಅಥವಾ ಆತ್ಮ ಎಂಬ ಸಮಾನಖ್ಯಾನವನ್ನು ಹೆಸರಾಗುಳ್ಳ [ದ್ವಾ ಸುಪರ್ಣಾ] ಎರಡು ಸುಂದರವಾದ ರೆಕ್ಕೆಗಳನ್ನುಳ್ಳ ಪಕ್ಷಿಗಳು ಅಥವಾ ಸೊಗಸಾದ ಗತಿಯನ್ನುಳ್ಳ ಇಬ್ಬರು ಆತ್ಮರು [ಸಮಾನಂ ವೃಕ್ಷಂ] ಒಂದೇ ಮರವನ್ನು ಅಥವಾ ಕತ್ತರಿಸಲರ್ಹವಾದ ಪ್ರಾಕೃತಿಕ ಜಗತ್ತನ್ನು [ಪರಿ ಷಸ್ವಜಾತೇ] ಆಶ್ರಯಿಸಿದ್ದಾರೆ. [ತಯೋಃ ಅನ್ಯಃ] ಅವರಲ್ಲೊಬ್ಬನು, ಭೋಕ್ತ್ಯವಾದ ಜೀವಾತ್ಮನು [ಸ್ವಾದು ಪಿಪ್ಪಲಂ ಅತ್ತಿ] ಮಧುರವಾದ ಫಲವನ್ನು ಸವಿಯುತ್ತಿದ್ದಾನೆ. [ಅನ್ಯಃ] ಮತ್ತೊಬ್ಬನು [ಅನಶ್ನನ್] ಭುಂಜಿಸದೆ [ಅಭಿ ಚಾಕಶೀತಿ] ಸಾಕ್ಷಿರೂಪನಾಗಿ ವಿರಾಜಿಸುತ್ತಿದ್ದಾನೆ.
     ಇದೊಂದು ಆಕರ್ಷಕವಾದ ರೂಪಕ. ಜೀವಾತ್ಮ-ಪರಮಾತ್ಮರು ಅನಾದಿಕಾಲದಿಂದಲೂ ಒಂದಾಗಿದ್ದಾರೆ. ಪ್ರಾಕೃತಿಕ ಜಗತ್ತು ನಶ್ವರವಾದರೂ ಕೂಡ ಅಸ್ತಿತ್ವ ಹೊಂದಿದೆ. ಅಲ್ಪಜ್ಞ ಭೋಕ್ತವಾದ ಜೀವಾತ್ಮ ಪ್ರಾಕೃತಿಕ ಜಗತ್ತಿನ ಸುಖವನ್ನು ಭೋಗಿಸುತ್ತಿದ್ದಾನೆ. ಅಭೋಕ್ತವಾದ ಸರ್ವಜ್ಞ ಪರಮಾತ್ಮ ಸಾಕ್ಷಿರೂಪನಾಗಿ ರಾರಾಜಿಸುತ್ತಿದ್ದಾನೆ. ಇಲ್ಲಿ ಸ್ಪಷ್ಟವಾಗಿ ಪರಬ್ರಹ್ಮ ಪರಮಾತ್ಮನಿಂದ ಸರ್ವಥಾ ಭಿನ್ನವಾದ ಅನಾದಿ ಜೀವಾತ್ಮನ ವರ್ಣನೆಯಿದೆ. ನಶ್ವರವಾದರೂ ಮಿಥ್ಯೆಯಲ್ಲದ ಜಗತ್ತಿನ ಚಿತ್ರಣವು ಇದೆ. ಯುಕ್ತಿಯುಕ್ತವಾಗಿ ಇದನ್ನು ಖಂಡಿಸಲು ಸಾಧ್ಯವೇ ಇಲ್ಲ. ಆದರೂ ಇದು ವ್ಯಾವಹಾರಿಕ ಸತ್ಯ ಮಾತ್ರ, ಪಾರಮಾರ್ಥಿಕವಲ್ಲ ಎಂದು ಹೇಳಿ ಸುಲಭವಾಗಿ ತಳ್ಳಿಹಾಕಲು ಕೆಲವರು ಯತ್ನಿಸಿದ್ದಾರೆ. ಸ್ವತಃ ವೇದಗಳೇ ಸತ್ಯಕ್ಕೆ ವ್ಯಾವಹಾರಿಕ- ಪಾರಮಾರ್ಥಿಕ ಭೇದವನ್ನು ಕಲ್ಪಿಸದಿರುವಾಗ ಹಾಗೆ ಮಾಡಲು ಇವರಿಗೇನು ಅಧಿಕಾರವೋ?

No comments:

Post a Comment