Pages

Friday, June 10, 2011

ವೇದೋಕ್ತ ಜೀವನ ಪಥ ಲೇಖನ ಮತ್ತು ನಾವು

ವೇದಸುಧೆಯು ಯಾವ ಉದ್ಧೇಶದಿಂದ ಆರಂಭವಾಯ್ತೋ ಅದಕ್ಕೆ ಪೂರ್ಣ ನ್ಯಾಯವನ್ನು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಕೊಡುತ್ತಿದ್ದಾರೆ. ವೇದೋಕ್ತ ಜೀವನ ಪಥ ಗ್ರಂಥವನ್ನು ದಾರಾವಾಹಿಯಾಗಿ ಶ್ರೀ ನಾಗರಾಜರು ಬರೆಯುತ್ತಿದ್ದಾರೆ. ಆದರೆ ನನಗೊಂದು ಸಂಶಯ ಕಾಡುತ್ತಿದೆ. ವೇದಸುಧೆಯ ಓದುಗರು ಇಂತಹ ಮಹತ್ತರವಾದ ಬರವಣಿಗೆಯನ್ನು ಓದುತ್ತಿದ್ದಾರೆಯೇ? ಎಂದು ಸಂಶಯಿಸಲು ಕಾರಣ ಇಂತಹ ಅದ್ಭುತವಾದ ಲೇಖನಕ್ಕೆ ಓದುಗರು ಪ್ರತಿಕ್ರಿಯಿಸುವುದಿಲ್ಲ. ನನ್ನ ಕಳಕಳಿಯ ಮನವಿ ಇಷ್ಟೆ. " ಚೆನ್ನಾಗಿತ್ತು" "ಉಪಯೋಗವಾಯ್ತು" ಎಂಬ ಒಂದು ಪದದ ಪ್ರತಿಕ್ರಿಯೆ ವ್ಯಕ್ತವಾದರೂ ಬರೆದವರಿಗೆ ಅದನ್ನು ಮುಂದುವರೆಸಲು ಉತ್ಸಾಹಬರುತ್ತದೆ. ಇದು ಮಾನವ ಸಹಜ ಸ್ವಭಾವ. ಅಲ್ಲದೆ ಯಾರೂ ಓದದಿದ್ದರೆ ಬರೆಯುವ ಶ್ರಮವನ್ನಾದರೂ ತೆಗೆದುಕೊಳ್ಳಬೇಕೇಕೆ?
ವೇದೋಕ್ತ ಜೀವನ ಪಥದ ಇಂದಿನ ಭಾಗವಂತೂ ಅದ್ಭುತವಾಗಿದೆ.ಅದನ್ನು ಓದಲೇ ಬೇಕು. ಅದು ಜವನದಲ್ಲಿ ಪ್ರಗತಿಹೊಂದಬೇಕೆಂದು ಆಶಿಸುವವನಿಗೆ ಉಪಯೋಗವಾಗಬಲ್ಲ ಜೀವನ ಸೂತ್ರಗಳು. ಅದನ್ನು ಓದಿದ ನಾನು ನನ್ ಅನಿಸಿಕೆಯನ್ನು ಅಲ್ಲಿ ಬರೆದರೆ ಉದ್ದವಾಗುತ್ತದೆಂದು ಪ್ರತ್ಯೇಕ ಲೇಖನವನ್ನೇ ಮಾಡಿರುವೆ. ನಾಗರಾಜರು ಅನ್ಯಥಾಭಾವಿಸಬಾರದಾಗಿ ಕೋರುವೆ.
---------------------------------------------
ಮಂತ್ರ:
ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್. ೯.೬೩.೪.) ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |ಅಪಘ್ನಂತೋ ಅರಾವ್ಣಃ || (ಋಕ್. ೯.೬೩.೫.) ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |ಇಂದ್ರಂ ಗಚ್ಛಂತ ಇಂದವಃ || (ಋಕ್. ೯.೬೩.೬.)

ಅರ್ಥ:
೧]ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, ಕುಟಿಲ ಭಾವನೆಗಳನ್ನು ದಾಟಿ, ಮುಂದೆ ಸಾಗುತ್ತಾರೆ. ೨]ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ. ೩]ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.

ನನ್ನ ಅನಿಸಿಕೆ:
ಎಂತಹ ಪರಮ ಸತ್ಯವನ್ನು ವೇದಗಳು ಹೇಳುತ್ತಾ ಇವೆ ನೋಡಿ. ಜೀವನದಲ್ಲಿ ಪ್ರಗತಿ ಹೊಂದುವವರು ಯಾರು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಯಾರು ಜೀವನದಲ್ಲಿ ಸೋಮಾರಿಗಳಲ್ಲ ಅವರು, ಜೀವನದಲ್ಲಿ ಪ್ರಮಾದವನ್ನುಮಾಡದವರು,ಆಚಾರವಿಚರಗಳು ಶುಬ್ರವಾಗಿರುವವರು, ಶಾಂತಸ್ವಭಾವದವರು,ಇವರು ಧರ್ಮದ ಪ್ರವಾಹದಲ್ಲಿ ನಡೆಯುತ್ತಾಎಲ್ಲಾ ಕುಟಿಲಭಾವನೆಗಳನ್ನು ದಾಟಿ ಮುಂದೆ ಹೋಗುತ್ತಾರೆ. ಇಂತವರು ಸಾಮಾನ್ಯವಾಗಿ ಕೆಲಸದಲ್ಲಿ ವೇಗಶಾಲಿಗಳಾಗಿರುತ್ತಾರೆ. ಆತ್ಮವಿಶ್ವಾಸದಿಂದ ಪ್ರಗತಿಯಲ್ಲಿ ಸಾಗುತ್ತಾ ಎಲ್ಲಾ ಸಂಕುಚಿತ ಮನೋಭಾವನೆಗಳನ್ನು ದೂರಮಾಡುತ್ತಾ ಇಡೀ ಮಾನವಕುಲವನ್ನು ಪ್ರೀತಿಸುತ್ತಾ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡಬೇಕೆಂಬ ಧ್ಯೇಯದಲ್ಲಿ ಮುಂದೆ ಸಾಗುತ್ತಾರೆ. ತಮ್ಮನ್ನು ತಾವು ಭಗವಂತನ ಮಕ್ಕಳೆಂದು ತಿಳಿದ ಇವರು ತಮ್ಮ ಚಾರಿತ್ರ್ಯವನ್ನು ನಿರ್ಮಲವಾಗಿಟ್ಟುಕೊಂಡು ನೀರಸವಾಗಿರುವ ಜೀವನದಲ್ಲಿ ಉಲ್ಲಾಸಗೊಳಿಸುತ್ತಾ, ಸರ್ವಶಕ್ತಿವಂತನಾದ ಪರಮಾತ್ಮನೆಡೆಗೆ ಸಾಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ನಿರಂತರವಾಗಿ ಮುಂದೆಸಾಗುತ್ತಾ ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯುವರು. ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಜೀವನದಲ್ಲಿ ಉದ್ಧಾರವಾಗಬೇಕೆಂಬುವವನಿಗೆ ಇದಕ್ಕಿಂತ ಸೂತ್ರಗಳು ಬೇಕೆ?

6 comments:

  1. ಶ್ರೀಧರರೇ, ಈಗಿನ ಪೀಳಿಗೆಗೆ ತತ್ಕಾಲಕ್ಕೆ ಸಂತೋಷ ಕೊಡುವ ವಿಚಾರ, ಮಜಾ ಕೊಡುವ ವಿಚಾರ ಮಾತ್ರ ಹಿಡಿಸುತ್ತದೆ. ಹುಡುಗಿಯೊಬ್ಬಳು ಏನಾದ್ರೂ ಬರೆಯಲಿ ಅದಕ್ಕೆ ಹುಡುಕಿಹೋಗಿ ಪ್ರತಿಕ್ರಿಯಿಸುತ್ತಾರೆ, ಹಿರಿಯರು ಈ ಥರದ ಉತ್ತಮ ಬರಹಗಳನ್ನು ಪ್ರಕಟಿಸಿದರೆ ಆದಷ್ಟೂ ದೂರವೇ ಇರುತ್ತಾರೆ. ವಿದೇಶೀ ಸಂಸ್ಕೃತಿಯನ್ನು ಸಂಪೂರ್ಣವಾಗಿ ಆಸ್ವಾದಿಸಿ ಆಹ್ಲಾದಪಡೆದ ಈ ಜನ ಕ್ಷಣಿಕವಾಗಿ ಸಿಗುವ ಸುಖಕ್ಕೆ ಮೊರೆಹೋಗುತ್ತಿದ್ದಾರೆ, ಭಾರತೀಯ ಸಂಸ್ಕೃತಿ ಬರೇ ಪುಸ್ತಕಗಳಲ್ಲಿ ದಾಖಲಾಗಿದೆ. ಇದು ವಿಷಾದನೀಯವಾದರೂ ಸತ್ಯ. ಎಲ್ಲರಿಗೂ ಅವರವರ ಸ್ವಾರ್ಥವೇ ಜಾಸ್ತಿಯಾಗಿದೆ, ದಿನ ದಿನ ಕ್ಷಣ ಕ್ಷಣ ಪಂಚೇಂದ್ರಿಯಗಳ ಸುಖದಲ್ಲೇ ಮುಳುಗಬಯಸುವ ಹಲವರಿಗೆ ಈ ತೆರನಾದ ಬರಹಗಳು ರುಚಿಸುವುದಿಲ್ಲ. ಇನ್ನೂ ಕೆಲವರಿಗೆ ವೇದದ ಭಾಗವನ್ನು ನೀವೇನೇ ಅಂದರೂ ಅರ್ಥಮಾಡಿಕೊಳ್ಳುವುದು ಕಷ್ಟ. ನಾವು ನಾವೇ ಪ್ರತಿಕ್ರಿಯಿಸುತ್ತಾ ಹೋದರೆ ಅದು ಮಿಕ್ಕಿದ ಓದುಗರಿಗೆ ಆಭಾಸವಾಗಬಾರದು ಎಂದು ನಾನು ಪ್ರತಿಕ್ರಿಯೆ ಹಾಕಿಲ್ಲ. ಆದರೆ ಓದುವುದು ಇದ್ದೇ ಇದೆ. ಇನ್ನಾದರೂ ಹಲವರು ಓದಲಿ ಮತ್ತು ಪ್ರತಿಕ್ರಿಯಿಸಲಿ ಎಂಬುದು ನನ್ನ ಅರಿಕೆಯಾಗಿದೆ.

    ReplyDelete
  2. ಧನ್ಯವಾದಗಳು, ಭಟ್ಟರೇ,
    ವೇದಸುಧೆಯನ್ನು ನಿತ್ಯವೂ ನೂರಾರು ಅಭಿಮಾನಿಗಳು ಓದುತ್ತಾರೆಂಬುದು ಗೊತ್ತಾಗಿದೆ. ನನ್ನ ಅರಿಕೆ ಇಷ್ಟು ಮಾತ್ರ ಇತ್ತು. ಅದೇನೆಂದರೆ ಬರೆದದ್ದನ್ನು ಓದಿದವರು ಒಂದು ಮಾತು ತಿಳಿಸಿದರೆ ಅದರ ಸಾರ್ಥಕತೆ ಅರಿವಾಗುತ್ತದೆಂದು.ಇಲ್ಲದಿದ್ದರೆ ನಾಗರಾಜರಿಗೆ ಸಾಕಷ್ಟು ಇತರೆ ಕೆಲಸವಿದೆ. ನನ್ನ ಕೋರಿಕೆಯಮೇಲೆ ಈ ದಾರಾವಾಹಿ ಬರೆಯುತ್ತಿದ್ದಾರೆ. ಬರೆದದ್ದು ಸಾರ್ಥಕವಾಯ್ತೆಂದು ಅವರಿಗೂ ಅನಿಸಬೇಕಲ್ಲವೇ? ಅಷ್ಟೆ. ಸಾಮಾನ್ಯವಾಗಿ ಓದಿದವರೆಲ್ಲಾ ತಮ್ಮ ಪ್ರತಿಕ್ರಿಯೆ ನೀಡುವುದಿಲ್ಲ. ಅದೂ ಗೊತ್ತಾಗಿದೆ. ಆದ್ದರಿಂದ ಮತ್ತೆ ಮತ್ತೆ ಮನವಿ ಮಾಡುವುದಿಲ್ಲ.

    ReplyDelete
  3. ನಮಸ್ಕಾರ ಗುರುಗಳಿಗೆ,
    ಚಿಂತಿಸುವ ಅಗತ್ಯವಿಲ್ಲ. ವೇಧಸುಧೆಯ ವಿಚಾರಧಾರೆಗಳು ಉತ್ಕೃಷ್ಟ ಮಟ್ಟದ್ದು. ಎಲ್ಲವಿಷಯಗಳನ್ನು ಇಷ್ಟೋಂದು ಸುಲಲಿತವಾಗಿ ತಿಳಿಸುವ ಪ್ರತಿಯೊಬ್ಬ ಲೇಖಕರಿಗೆ ನಾನು ಅಭಾರಿ. ನನಗೆ ಅನಿಸುವ ಹಾಗೆ, ಪ್ರತಿಕ್ರಿಯೆ ಗಳನ್ನು ನೀಡುವ ಮಟ್ಟಕ್ಕೆ ನಾವಿದ್ದೇವೆಯೆ ಎಂದು ನಾನು ಚಿಂತಿಸುತ್ತೇನೆ. ಚೆನ್ನಾಗಿದೆ ಹಾಗು ಪ್ರತಿಯುತ್ತರವಾಗಿ ಧನ್ಯವಾದಗಳು ಎಂದರೆ ಅದು ಯಾಂತ್ರಿಕವಾಗುವುದಿಲ್ಲವೆ. ಕೆಲವೊಂದು ಸಾರಿ ಸಮಯದ ಅಭಾವ ಹಾಗು ಕೆಲಸದ ಒತ್ತಡ ಮತ್ತೇನೋ ತೊಂದರೆಗಳು ಪ್ರತಿಕ್ರಿಯಿಸುವದಕ್ಕೆ ಆಗುವುದಿಲ್ಲ. ಇತ್ತೀಚಿಗೆ ನನ್ನ ಬ್ಲಾಗ್ ಸಹ ಅಪ್ಡೇಟ್ ಆಗ್ತಾಯಿಲ್ಲ. ಮನಸ್ಸಿನಲ್ಲಿ ನೂರಾರು ಆಲೋಚನೆಗಳು ಬರ್ತಾ ಯಿರುತ್ತೆ ಅದನ್ನೆಲ್ಲ ಅಕ್ಷರರೂಪಕ್ಕೆ ಇಳಿಸಬೇಕು ಅಂತ ಅಂದ್ಕೊಳ್ತಿನಿ ಆದರೆ ಆಗ್ತಾಯಿಲ್ಲ.

    ಸಾಧ್ಯವಾದಷ್ಟು ಪ್ರತಿಕ್ರಿಯ್ಸಿಸಲು ಪ್ರಯತ್ನಿಸುತ್ತೇನೆ.

    ಧನ್ಯವಾದಗಳು.

    ರಂಗನಾಥ.ಪಿ.ಎಸ್.

    ReplyDelete
  4. ವೇದಸುಧೆಯ ಲೇಖನಗಳನ್ನು ಪ್ರೀತಿಸುವ ಜನರಿದ್ದಾರೆಂದಮೇಲೆ ಲೇಖಕರ ಪ್ರಯತ್ನ ಸಾರ್ಥಕವಾಯ್ತು-ಎಂದೇ ಅರ್ಥ. ಲೇಖಕರಿಗೂ ಓದುತ್ತಾ ಜೊತೆಗಿರುವ ಅಭಿಮಾನಿಗಳಿಗೂ ಧನ್ಯವಾದಗಳು.
    -ಹರಿಹರಪುರಶ್ರೀಧರ್
    ಸಂಪಾದಕ

    ReplyDelete
  5. ಪ್ರಿಯ ಶ್ರೀಧರ್, ನಿಮ್ಮ ಕಳಕಳಿಗೆ ಧನ್ಯವಾದ. ಅನುಭವಗಳು ಸಾಂದ್ರಗೊಳ್ಳುತ್ತಿವೆಯೋ, ಭಾವನೆಗಳು ಜಡ್ಡುಗಟ್ಟಿವೆಯೋ, ವಯಸ್ಸಿನ ಪ್ರಭಾವವೋ ಏನೋ! ನನಗೆ ಈಗ ಇತರರು ಟೀಕಿಸಿದರೂ ನನ್ನನ್ನು ಸಮರ್ಥಿಸಿಕೊಳ್ಳಬೇಕೆಂದು ಅನ್ನಿಸುತ್ತಿಲ್ಲ. ಅವರವರ ಭಾವನೆಗಳು ಅವರಿಗೆ,ನನ್ನ ಅಲ್ಪಮತಿಗೆ ಸರಿಯನ್ನಿಸಿದ್ದು ನನಗೆ ಇರಲಿ ಎಂದು ಅನ್ನಿಸುತ್ತಿದೆ. ನನ್ನ ಭಾವನೆಗಳನ್ನು ಇತರರ ಮೇಲೆ ಹೇರುವ, ಒಪ್ಪಬೇಕೆಂದು ಬಯಸುವ ಮನೋಭಾವ ಪೂರ್ಣ ಹೋಗಿಲ್ಲವಾದರೂ ಕ್ಷೀಣಿಸಿದೆ. ನಿಮ್ಮ ಬರಹಕ್ಕೆ ಇದು ಸಂಬಂಧಪಡದ ಪ್ರತಿಕ್ರಿಯೆಯಲ್ಲ. ಏನೋ ಬರೆದುಬಿಟ್ಟೆ.
    ಈ ಬರವಣಿಗೆಯಿಂದ ವೇದೋಕ್ತ ಜೀವನಪಥದ ಅಭ್ಯಾಸ, ಮನನಕ್ಕೆ ನನಗೂ ಅವಕಾಶವಾಗುತ್ತಿದೆ.
    -ಕ.ವೆಂ.ನಾಗರಾಜ್.

    ReplyDelete
  6. ನನ್ನ ಪ್ತತಿಕ್ರಿಯೆಯಲ್ಲಿ 'ಸಂಬಂಧಪಡದ' ಅನ್ನುವುದನ್ನು 'ಸಂಬಂಧಪಡುವ' ಎಂದು ಓದಿಕೊಳ್ಳಲು ಕೋರುವೆ.
    -ಕ.ವೆಂ.ನಾಗರಾಜ್.

    ReplyDelete