Pages

Friday, July 1, 2011

ಮೌನ ಮಂಥನ...

ಕೇವಲ ಮಾತನಾಡದಿರುವುದು ಮೌನವಲ್ಲ. ಮನಸ್ಸಿನ ಆಲೋಚನೆಗಳನ್ನು ತೊಡೆಯುವುದು ಮೌನ.
ಮೌನದಿಂದ ಮನನ. ಮನನದಿಂದ ಮಂಥನ. ಮಂಥನದಿಂದ ಜೀವನ ದರ್ಶನವಾಗುತ್ತದೆ. ಹೊಸಬೆಳಕು; ಹೊಸತಿರುವೂ ಕೂಡ ಗೋಚರಿಸುತ್ತದೆ. ನಾವು ನಿದ್ರೆಯಿಂದ ಎಚ್ಚೆತ್ತ ಕೂಡಲೇ ಮನಸ್ಸು ಕೆಲಸ ಮಾಡಲಿಕ್ಕಾರಂಭಿಸುತ್ತದೆ. ಆದ್ದರಿಂದ ಮೌನದಲ್ಲಿದ್ದೂ ಚಿಂತೆಗಿಂತಲೂ ಚಿಂತನಶೀಲತೆ ಬೆಳೆಸಿಕೊಳ್ಳಬೇಕು. ಚಿಂತೆಗಳು ಇದ್ದೇ ಇರುತ್ತವೆ; ಇರಲಿ. ಅವು ಚಿಂತನಗಳಾಗಿ ಸಚ್ಛದಾನಂದವನೆ ತರಲಿ.
ರಾತ್ರಿ ಮನಸ್ಸು ಕೆಲಸ ಮಾಡುತ್ತಲೇ ಇದ್ದರೆ ನಿದ್ರೆ ಹತ್ತದು. ಮನಸ್ಸು ಸ್ವಸ್ಥವಾಗಿ ನಿರ್ಲಿಪ್ತಗೊಳ್ಳುವುದರಿಂದಲೆ ನಿದ್ರೆ ಬರುತ್ತದೆ. ನಿದ್ರೆಯಲ್ಲಿನ ಸುಪ್ತ ಮನಸ್ಥಿತಿಯೇ ಬೇರೆ. ಆಗ ಕನಸುಗಳೂ ಬೀಳಬಹುದು. ಗಾಢ ನಿದ್ರೆಯಲ್ಲಿ ಕನಸುಗಳ ಕಾಟವೂ ಇಲ್ಲ; ಇಹ ಪರದ ಗೊಡವೆಯೂ ಇರುವುದಿಲ್ಲ!
ಮೌನದಲ್ಲಿ ಧ್ಯಾನವಿದೆ. ಧ್ಯಾನವೆಂದರೆ, ಕೇವಲ ಜಪ, ಮಂತ್ರ ಪಠಣೆಯಲ್ಲ. ಅದು ಪ್ರಾಥಮಿಕ ಪ್ರಾರ್ಥನೆಯಾಗುತ್ತದೆ. ಆನಂತರದ ಕ್ಷಣಗಳಲ್ಲಿ ಮಾನದಿಂದ ಉಸಿರಾಟವನ್ನು ಗಮನಿಸುವುದಷ್ಟೇ.
ಆ ಉಸಿರಾಟದಲ್ಲಿ ಮನಸ್ಸಿನ ತಾಕಲಾಟವಿದೆ. ಅದು ತಂತಾನೆ ತಹಬಂಧಿಗೆ ಬರುತ್ತದೆ. ಆ ಮೌನದಲ್ಲೇ ತಾಳ್ಮೆಯಿಂದ ನಿರೀಕ್ಷಣೆ ಮಾಡುವುದಾಗಬೇಕು. ಹಾಗೇ ಸ್ತಬ್ದವಾಗಿ ನಿಶ್ಚಿಂತೆಯಿಂದ ನಿರ್ಲಿಪ್ತತೆಯತ್ತ ಸಾಗುತ್ತಲಿದ್ದಾಗಲೇ ಆತ್ಮದ ಅರಿವಾಗುತ್ತದೆ.
ಆ ಅರಿವಿನಲ್ಲಿಯೆ ಧಾರಣಾವಸ್ಥೆಯಿದೆ. ಆ ಧಾರಾಣಾವಸ್ಥೆಯಿಂದಾಚೆಗೆ ಸಾಗಿ ಸಮಾಧಿ ಸ್ಥಿತಿ ತಲುವುದು ಕಡಿಮೆ ಸಾಧನೆಯೇನಲ್ಲ.... ಆ ಶೂನ್ಯಸಾನ್ನಿಧ್ಯದಲ್ಲೇ ಬ್ರಹ್ಮಾನಂದ ಹೊಂದುವುದು ಹಾಗೂ ಪರಮಾಪ್ತನಾದ
ಪರಮಾತ್ಮನನ್ನೂ ಕಾಣವುದೆಂದರೆ ಅಂತರಂಗಲ್ಲಿ ಅತೀವ ವ್ಯಾಕುಲಭಾವ ಸ್ಫುರಿಸಬೇಕು. ಅನಿತ್ಯ ಚೇತನವು ಸೂಕ್ಷ್ಮ ಶರೀರದಲ್ಲಿ ಅಂತರ್ಲೀನವಾಗಬೇಕು ಆಗಲೇ ಆತ್ಮ ಸಾಕ್ಷಾತ್ಕಾರವಾಗುವುದು.
ಶೂನ್ಯ ಸಾನ್ನಿಧ್ಯ

2 comments:

  1. 'ಮಾತು ಬೆಳ್ಳಿ, ಮೌನ ಬಂಗಾರ'. ಮಾತು ಕಡಿಮೆಯಾದಷ್ಟೂ ಲೌಕಿಕ ಸಮಸ್ಯೆಗಳಿಗೆ ಮತ್ತು ಸಂಕಷ್ಟಗಳಿಗೆ ಪರಿಹಾರಗಳು ಸುಲಭವಾಗುತ್ತವೆ. ಅಂತೆಯೇ ಮೌನ ಆಂತರಿಕ ಚಿಂತನೆಗೆ, ಧ್ಯಾನಜಪಾದಿಗಳಿಗೆ ಪ್ರಾಥಮಿಕ ಮೆಟ್ಟಿಲಾಗುತ್ತದೆ. ಒಂದೊಂದೇ ಮೆಟ್ಟಿಲುಗಳನ್ನೂ ಏರುವುದೂ ಕೂಡ ಸಾಮಾನ್ಯರಿಗೆ ಒಂದು ಜನ್ಮದಷ್ಟೇ ಸಮಯ ಬೇಕಾಗಬಹುದು. ಆದರೂ ಸಾಧನಾಪಥದಲ್ಲಿ ಸರಿಯಾದ ಮೆಟ್ಟಿಲ ಮೇಲೆ ಮೊದಲ ಹೆಜ್ಜೆಯಿಡುವುದೇ ಅತ್ಯಂತ ಪ್ರಮುಖವಾಗುತ್ತದೆ. ಮೌನ ಗಾಢವಾಗಿ ಮನಸ್ಸು ಇಡೀ ಪ್ರಪಂಚವನ್ನು ಶೂನ್ಯ ಭಾವದಿಂದ ನೋಡುವ ಸಾಧನೆಯೇ ಅಂತಿಮ ಘಟ್ಟ.
    ಬರಹ ಚೆನ್ನಾಗಿದೆ. ಅಭಿನಂದನೆಗಳು.

    ReplyDelete
  2. ಕವಿ ಸುರೇಶ್,
    ನಿಮ್ಮ ಕಾಮೆಂಟ್ ಸಹ ಚೆನ್ನಾಗಿದೆ;
    ಧನ್ಯವಾದಗಳು.

    ReplyDelete