Pages

Friday, July 1, 2011

ಸುಧಾಕರ ಚತುರ್ವೇದಿಯವರ ವಿಚಾರಧಾರೆ : ಬಾಳಿಗೆ ಬೆಳಕು







ಸಹೃದಯರೇ,
      ದಿನಾಂಕ ೧೮-೦೬-೨೦೧೧ ರಂದು ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲ್ಗೊಂಡು ಅವರ ವಿಚಾರವನ್ನು ಸವಿಯುವ ಸೌಭಾಗ್ಯ ನನ್ನದಾಗಿತ್ತು. ವಯಸ್ಸು ೧೧೫ ವರ್ಷಗಳಾದರೂ ಇನ್ನೂ ಉತ್ಸಾಹದ ಚಿಲುಮೆಯಾಗಿ ವಿಚಾರಗಳನ್ನು ಸುಸ್ಪಷ್ಟವಾಗಿ ವಿವರಿಸುವ ಅವರು ಪ್ರಖರ ಸತ್ಯವಾದಿ. ನಿಜ ಅರ್ಥದಲ್ಲಿ ವಿಚಾರವಾದಿ. (ಈಗ ವಿಚಾರವಾದಿ ಎಂಬ ಪದ ಸಹ ವಿಚಾರವಾದಿಗಳೆಂದು ಕರೆಯಿಸಿಕೊಳ್ಳುವವರಿಂದ ಕಲುಷಿತವಾಗಿದೆ). ಅಂದು ನಾನು ಕೇಳಿದ ಅವರ ಮಾತುಗಳನ್ನು ಬರಹರೂಪದಲ್ಲಿಳಿಸಿ ತಮ್ಮ ಮುಂದಿಟ್ಟಿದ್ದೇನೆ. ಸಹೃದಯರ ಪ್ರತಿಕ್ರಿಯೆ, ವಿಮರ್ಶೆಗಳಿಗೆ ಸ್ವಾಗತವಿದೆ.
-ಕ.ವೆಂ.ನಾಗರಾಜ್.
*************************
ಬಾಳಿಗೆ ಬೆಳಕು



     ಅಗ್ನಿಹೋತ್ರ ಮಾಡುವಾಗ ಮೊದಲು ಒಂದುಸಲ 'ಅಯಂತ ಇಧ್ಮ' ಎಂದು ಹೇಳುತ್ತೇವೆ. ಆಮೇಲೆ ೫ ಸಲ 'ಅಯಂತ ಇಧ್ಮ' ಎಂದು ಹೇಳುತ್ತೇವೆ. ಅಗ್ನಿಹೋತ್ರ ಮಾಡುವ ವಿಚಾರದಲ್ಲಿ ತಿಳಿದುಕೊಳ್ಳಬೇಕಾದ್ದಿದೆ. ವಾಯುಶುದ್ಧಿ, ಜಲಶುದ್ದಿ ಇವೆಲ್ಲಾ ಇದ್ದದ್ದೇ. ಎಲ್ಲರಿಗೂ ಅರ್ಥವಾಗುತ್ತೆ. ಆಧ್ಯಾತ್ಮಿಕ ಭಾವನೆಯನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಹೋಮ, ಹವನ ಮಾಡಿದೆವು ಅಂತೀವಿ, ನಮ್ಮ ಉದ್ಧಾರವಾಗುತ್ತೋ, ಭಗವಂತನ ಉದ್ಧಾರವಾಗುತ್ತೋ ತಿಳಿದುಕೊಳ್ಳುವುದಿಲ್ಲ., ಭಗವಂತ, ನೀನು ಮಹಾನ್ ಅಗ್ನಿ, 'ಅಯಂ ಆತ್ಮಾ ತೇ ಇಧ್ಮ' - ನನ್ನ ಆತ್ಮ ಇದು ನಿನಗೆ ಸಮಿತ್ತು- ಅಂತ. ನಾನು ಸಮಿತ್ತು. ನನ್ನ ಆತ್ಮ ಇದೆಯಲ್ಲಾ, ಭಗವಂತಾ, ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ, ಅಂತ. ಅರ್ಥ ಮಾಡಿಕೊಳ್ಳಿ, ಅಗ್ನಿಯಲ್ಲಿ ಬೆಳಕಿದೆ, ಸಮಿತ್ತಿನಲ್ಲಿ ಸ್ವತಃ ಬೆಳಕಿಲ್ಲ. ಅಗ್ನಿಯೊಡನೆ ಬೆರೆತಾಗ ಸಮಿತ್ತು ಉರಿದು ಬೆಳಕು ಕೊಡುತ್ತದೆ. ಹೀಗೆ, ಪರಮಾತ್ಮ ಜ್ಯೋತಿಸ್ವರೂಪ, ಸರ್ವಶಕ್ತ, ನಮ್ಮ ಆತ್ಮ ಅಲ್ಪಜ್ಞ, ಅಲ್ಪಶಕ್ತ. ಒಳ್ಳೆ ಕೆಲಸಾನೂ ಮಾಡ್ತೇವೆ, ಕೆಟ್ಟ ಕೆಲಸಾನೂ ಮಾಡ್ತೇವೆ. ಒಳ್ಳೆ ಕೆಲಸ ಮಾಡಿದಾಗ ಸ್ವಲ್ಪ ಮೇಲೇರುತ್ತೇವೆ, ಕೆಟ್ಟ ಕೆಲಸ ಮಾಡಿದಾಗ ಕೆಳಕ್ಕೆ ಬೀಳುತ್ತೇವೆ. ಈ ಏಳೋದು, ಬೀಳೋದು ನಮ್ಮ ಹಣೆಬರಹ. ಅದರ ಫಲವೇನೇ ಈ ಸುಖ-ದುಃಖ ಅನ್ನುವುದು,.ಒಳ್ಳೆ ಕೆಲಸ ಮಾಡಿದಾಗ ಸುಖ, ಕೆಟ್ಟ ಕೆಲಸ ಮಾಡಿದಾಗ ದುಃಖ. ಇದು ಇದ್ದದ್ದೇ. ಇದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಮೀರಿ, ಪರಮಾತ್ಮನಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡರೆ ಜೀವಾತ್ಮಕ್ಕೆ ಪ್ರಕಾಶ ಬರುತ್ತದೆ. ಜೀವಾತ್ಮ ಸಮಿತ್ತಿದ್ದಂತೆ, ಅದಕ್ಕೆ ಸ್ವಯಂಪ್ರಕಾಶವಿಲ್ಲ, ಪರಮಾತ್ಮನೆಂಬ ಅಗ್ನಿಯೊಂದಿಗೆ ಒಂದಾದಾಗ ಅದಕ್ಕೆ ಪ್ರಕಾಶ ಬರುತ್ತದೆ. 'ಈಶ್ವರ ಸನ್ನಿಧಾನ' ಅಂತ ಹೇಳ್ತೀವಲ್ಲಾ, ಏನಿದರ ಅರ್ಥ? ತ್ರಿಕರಣ ಪೂರ್ವಕವಾಗಿ ನಮ್ಮನ್ನು ಅಂದರೆ ಆತ್ಮನನ್ನು ಪರಮಾತ್ಮನೊಂದಿಗೆ ಅರ್ಪಿಸಿಕೊಂಡಾಗ ನಮಗೆ ಪರಮಾನಂದ ಸಿಕ್ಕುತ್ತೆ.
     'ಸಮಾಧಿ, ಸುಷುಪ್ತಿ, ಮೋಕ್ಷೇಶು ಬ್ರಹ್ಮರೂಪಪ' - ಸಾಂಖ್ಯ ದರ್ಶನದಲ್ಲಿ ಕಪಿಲಾಚಾರ್ಯರು ಹೇಳುತ್ತಾರೆ. ಕಪಿಲಾಚಾರ್ಯರನ್ನು ಅನೇಕರು ನಾಸ್ತಿಕರು ಎನ್ನುತ್ತಾರೆ. ಅವರು ನಾಸ್ತಿಕರಲ್ಲ, ಅವರನ್ನು ನಾಸ್ತಿಕರು ಅನ್ನುವವರೇ ನಾಸ್ತಿಕರು. ಪರಮಾತ್ಮ ಸರ್ವಜ್ಞ, ಎಲ್ಲವನ್ನೂ ಮಾಡುವವನು, . ಅವನನ್ನು ನಾವು ಈಶ್ವರ ಅಂತ ಬಾವಿಸ್ತೇವೆ. ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಪ್ರಕೃತಿ ಇಲ್ಲದಿದ್ದರೆ ಭಗವಂತ ಏನೂ ಮಾಡಲಾಗುತ್ತಿರಲಿಲ್ಲ. ಒಳ್ಳೆಯ ನಿಪುಣ ಟೈಲರ್ ಹತ್ತಿರ ಹೋಗಿ ಬಟ್ಟೆಯನ್ನು ಕೊಡದೆ 'ನನಗೊಂದು ಅಂಗಿ ಹೊಲೆದುಕೊಡು' ಅಂದರೆ ಅವನು ಹೇಗೆ ಹೊಲಿಯುತ್ತಾನೆ? ಹೊಲಿಯಲು ಅವನಿಗೆ ಬಟ್ಟೆ ಕೊಡಬೇಕು. ಹಾಗೆಯೇ ಈ ಪ್ರಕೃತಿ ಇಲ್ಲದಿದ್ದರೆ, ಈ ಜಡ ಪ್ರಕೃತಿ ಇಲ್ಲದಿರುತ್ತಿದ್ದರೆ ಭಗವಂತನಿಗೆ ಈ ಜಗತ್ತನ್ನು ಸ್ಥಾಪನೆ ಮಾಡಲು, ಸೃಷ್ಟಿ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಇದನ್ನು ಅರಿತುಕೊಂಡು ನಾವು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಯಾವಾಗ ನಾವು ಕೆಳಕ್ಕೆ ಬೀಳುತ್ತೇವೆ ಅಂದರೆ ಆ ಪ್ರಕೃತಿಗೆ ವಶವಾದಂತೆ ನಾವು ಪರಮಾತ್ಮನನ್ನು ಮರೆತುಬಿಡ್ತೇವೆ, ಪ್ರಕೃತಿಗೆ ವಾಲುತ್ತೇವೆ, ಪರಮಾತ್ಮ ಇಲ್ಲದಿದ್ದರೆ ಪ್ರಕೃತಿ ತನ್ನಿಂದ ತಾನೇ ಏನೂ ಮಾಡುವಂತಿಲ್ಲ. ವಾಯು ಬೀಸುತ್ತೆ, ತನ್ನಷ್ಟಕ್ಕೆ ತಾನೇ ಬೀಸುತ್ತೇನು? ಸಾಧ್ಯವಿಲ್ಲ. ಆ ಬೀಸುವ ಹಾಗೆ ಮಾಡುವವನು ಪರಮಾತ್ಮ. ಬೆಂಕಿ ಸುಡುತ್ತೆ, ಅದಕ್ಕೆ ಸುಡುವ ಶಕ್ತಿ ಕೊಟ್ಟವರಾರು? ಪಂಚಭೂತಗಳೂ ಅಷ್ಟೆ. ಹೀಗೆ ಯೋಚನೆ ಮಾಡುತ್ತಾ ಹೋಗಿ. ಎಲ್ಲಕ್ಕೂ ಮೂಲಶಕ್ತಿ ಆ ಭಗವಂತನೇ. ಜಡ ಪ್ರಕೃತಿ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರದು. ಇದನ್ನೇ ಕಪಿಲ ಮಹರ್ಷಿಗಳೂ ಹೇಳುತ್ತಾರೆ, ಅವರನ್ನು ನಾಸ್ತಿಕರು ಅಂತ ಹೇಗೆ ಹೇಳುವುದು? ಅವರು ಹೇಳುತ್ತಾರೆ: ಸಮಾಧಿ, ಸುಷುಪ್ತಿ, ಮೋಕ್ಷ - ಈ ಮೂರು ಸ್ಥಿತಿಯಲ್ಲಿ ಜೀವಾತ್ಮನಿಗೆ ಬ್ರಹ್ಮ ರೂಪ ಬರುತ್ತೆ ಅಂತ. ಸಮಾಧಿ ಅಂದರೆ ಎಲ್ಲವನ್ನೂ ಮರೆತು ಮನಸ್ಸು ಸ್ಥಿರವಾಗಿ ನಿಂತು ಪರಮಾತ್ಮನನ್ನು ಧ್ಯಾನಿಸಿದಾಗ, ಜೀವಾತ್ಮ ಇದ್ದೂ ಕೂಡ ಇಲ್ಲದ ಹಾಗೆ ಆದಾಗ, ಜೀವಾತ್ಮ ತನ್ನ ಇರವನ್ನು ತಾನೇ ಮರೆತು ಭಗವಂತನಲ್ಲಿ ಮನಸ್ಸನ್ನು ಸ್ಥಿರಗೊಳಿಸಿದಾಗ ಭಗವಂತ ಬಿಟ್ಟು ಬೇರೇನೂ ಕಾಣದಿದ್ದಾಗ ಉಂಟಾಗುವ ಸ್ಥಿತಿ ಇದೆಯಲ್ಲಾ ಅದನ್ನು ಸಮಾಧಿ ಅನ್ನುತ್ತಾರೆ. ಈಗ ಹೇಳುತ್ತಾರಲ್ಲಾ, ಸತ್ತ ಮೇಲೆ ಹೂತು/ಸುಟ್ಟು ಕಟ್ಟುವ ಕಟ್ಟೆ ಇದೆಯಲ್ಲಾ, ಅದು ಸಮಾಧಿ ಅಲ್ಲ. ಒಳ್ಳೆಯ ವಿಚಾರದಲ್ಲಿ ಎಲ್ಲಿ ಮನಸ್ಸು ಮತ್ತು ಆತ್ಮ ಸ್ಥಿರವಾಗಿ ನಿಲ್ಲುತ್ತೋ ಅದು ಸಮಾಧಿ. ಅದು ಒಂದು ಅವಸ್ಥೆ. ಈ ಸ್ಥಿತಿಯಲ್ಲಿ ಜೀವಾತ್ಮ ತಾನು ಅಲ್ಪಜ್ಞ, ಅಲ್ಪಶಕ್ತ ಎಂಬ ಎಲ್ಲಾ ಭಾವನೆಯನ್ನೂ ಮರೆತುಬಿಡುತ್ತಾನೆ, ಪರಮಾತ್ಮನಲ್ಲಿ ನೆಲೆ ನಿಲ್ಲುತ್ತಾನೆ.
     ಸುಷುಪ್ತಿ - ನಿದ್ದೆ, ಒಳ್ಳೆಯ ನಿದ್ದೆ - ಅಂದರೆ ಒಳ್ಳೆಯ ಸ್ವಾಭಾವಿಕವಾದ ನಿದ್ದೆ. ಆ ಸ್ಥಿತಿಯಲ್ಲಿ ಕೂಡ ನಾವು ಆನಂದ ಪಡೆಯುತ್ತೇವೆ. ಅಲ್ಲಿ ಬಾಹ್ಯ ಪ್ರಪಂಚ ಇರುವುದಿಲ್ಲ. ಶ್ರೀಮಂತನೂ ನಿದ್ದೆ ಮಾಡ್ತಾನೆ, ಬಡವನೂ ನಿದ್ದೆ ಮಾಡ್ತಾನೆ. ಶ್ರೀಮಂತನ ನಿದ್ದೆ ಚಂಚಲವಾಗಬಹುದು, ಎಲ್ಲಿ ತನ್ನ ಶ್ರೀಮಂತಿಕೆಯನ್ನು ಯಾರು ಕೊಳ್ಳೆ ಹೊಡೀತಾರೋ ಅಂತ ಯೋಚನೆಯಲ್ಲಿ ಹಣದ ಮೇಲೆ ಮನಸ್ಸು ನಿಂತಿರುತ್ತದೆ. ಬಡವನಿಗೆ ಹಾಗಲ್ಲ, ಚಾಪೆ ಇದ್ದರೆ ಚಾಪೆ, ನೆಲ ಇದ್ದರೆ ನೆಲ, ಮಲಗುತ್ತಾನೆ, ಚೆನ್ನಾಗಿ ನಿದ್ದೆ ಹೋಗುತ್ತಾನೆ. ಕಾರಣವೇನೆಂದರೆ ಕಳೆದುಕೊಳ್ಳುವುದಕ್ಕೆ ಅವನ ಹತ್ತಿರ ಜಾಸ್ತಿ ಇಲ್ಲ. ಯಾವನ ಹತ್ತಿರ ಕಳೆದುಕೊಳ್ಳುವುದಕ್ಕೆ ಬಹಳ ಕಡಿಮೆ ಇರುತ್ತೋ ಅವನೇ ಸುಖಿ. ನನ್ನ ಹತ್ತಿರ ಒಂದು ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಕಳೆದುಹೋಯಿತು. ಪರವಾಗಿಲ್ಲ, ಮತ್ತೆ ಗಳಿಸಬಹುದು. ಅದೇ ಒಂದು ಕೋಟಿ ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಅದು ಕಳೆದುಹೋಯಿತು ಅಂದರೆ ಅಷ್ಟು ಸುಲಭವಾಗಿ ಸಹಿಸಿಕೊಳ್ಳಲು ಆಗುವುದಿಲ್ಲ, ಈ ಮಾತನ್ನು ಒತ್ತಿ ಒತ್ತಿ ಶಂಕರಾಚಾರ್ಯರೂ ಹೇಳ್ತಾರೆ, ಮಧ್ವಾಚಾರ್ಯರೂ ಹೇಳ್ತಾರೆ, ರಾಮಾನುಜಾಚಾರ್ಯರೂ ಹೇಳ್ತಾರೆ, ಭಾಷೆ ಬೇರೆ ಅಷ್ಟೆ. ಶಂಕರಾಚಾರ್ಯರು 'ಜ್ಞಾನವಿಲ್ಲದೆ ಮುಕ್ತಿಯಿಲ್ಲ' ಅಂತ ಹೇಳ್ತಾರೆ, ರಾಮಾನುಜರು 'ಭಗವಂತನಲ್ಲಿ ಸಂಪೂರ್ಣ ಆತ್ಮಸಮರ್ಪಣೆ ಮಾಡಿಕೊಂಡರೆ ಮುಕ್ತಿ ಸಿಗುತ್ತೆ' ಅಂತಾರೆ, ಮಧ್ವಾಚಾರ್ಯರೂ 'ನಿನ್ನನ್ನು ನೀನು ಮರೆ' ಅಂತ ಹೇಳ್ತಾರೆ. ಪರಮಾತ್ಮನನ್ನು ನಾರಾಯಣ ಅಂತ ಕರೀತಾರೆ. ಅವನನ್ನು ಶಂಕರ ಅಂತಾಲಾದ್ರೂ ಕರೀರಿ, ಶಿವ ಅಂತಲಾದ್ರೂ ಕರೀರಿ, ಯಾವ ಹೆಸರಿನಿಂದಾದರೂ ಕರೀರಿ, ಏನಡ್ಡಿಯಿಲ್ಲ. ನಾವು ಅರ್ಥ ಮಾಡಿಕೊಳ್ಳೋಕೆ ಹೋಗಲ್ಲ. ಪದಗಳನ್ನು ತೆಗೆದುಕೊಂಡು ಬಿಡ್ತೇವೆ, ಅವನಿಗೊಂದು ಜಾಗ ಕಲ್ಪಿಸಬೇಕಲ್ಲಾ, ನಾವು ದೇವರಿಗೆ ಬೇರೆ ಬೇರೆ ಲೋಕ ಕಟ್ಟಿಸಿಕೊಟ್ಟುಬಿಡುತ್ತೇವೆ. ವೈಕುಂಠದಲ್ಲಿ ನಾರಾಯಣ ಇರ್ತಾನೆ, ಕೈಲಾಸದಲ್ಲಿ ಶಿವ ಇರ್ತಾನೆ, ಹೀಗೆ. ಇದೆಲ್ಲಾ ನಮ್ಮ ಕಲ್ಪನೆ.
     ಮೋಕ್ಷ ಇದ್ದೇ ಇದೆ. ಅಲ್ಲಿ ಪ್ರಕೃತಿಯ ಬಂಧನವೇ ಇಲ್ಲ, ಆ ಭಗವಂತನ ಸಾನ್ನಿಧ್ಯದಲ್ಲಿ ಆನಂದವನ್ನು ನೇರವಾಗೇ ಪಡೆಯುತ್ತೇವೆ. ಬ್ರಹ್ಮರೂಪಪ ಅಂತ ಹೇಳ್ತಾರೆ, ಜ್ಞಾಪಕವಿಟ್ಟುಕೊಳ್ಳಿ. ಮೋಕ್ಷದಲ್ಲಿ ಇವನೇ ಬ್ರಹ್ಮ ಆಗಿಬಿಡ್ತಾನೆ ಅಂತ ಅಲ್ಲ. ಜೀವಾತ್ಮ ಯಾವಾಗಲೂ ಜೀವಾತ್ಮನೇ, ಹಿಂದೆಯೂ ಜೀವಾತ್ಮ, ಮುಂದೆಯೂ ಜೀವಾತ್ಮನೇ, ಅನಂತಕಾಲದವರೆಗೂ ಜೀವಾತ್ಮನೇ. ಅದು ಎಂದೂ ಪರಮಾತ್ಮ ಆಗುವುದಿಲ್ಲ. ನಮ್ಮಲ್ಲಿ ಒಂದು ಕಲ್ಪನೆ ಇದೆ, ಸತ್ತ ಮೇಲೆ ಭಗವಂತನಲ್ಲಿ ಸೇರಿ ಹೋಗಿಬಿಡ್ತಾರೆ ಅಂತ. ಹಾಗೆ ಸೇರುತ್ತಾ ಹೋದರೆ ಪರಮಾತ್ಮ ಬೆಳೆಯುತ್ತಾ ಹೋಗಬೇಕಲ್ಲಾ! ಎಲ್ಲರೂ ಸತ್ತು ಸತ್ತು ಸೇರುತ್ತಾ ಹೋದರೆ ದೊಡ್ಡ ಪರಮಾತ್ಮ ಆಗಬೇಕಲ್ಲಾ! ಇದು ಪರಮಾತ್ಮನ ಭಕ್ತರು ಆಡುವ ಮಾತೇ ಇದು? ಪರಮಾತ್ಮನನ್ನು ಹಾಸ್ಯ ಮಾಡಿದಂತೆ.
     ಒಂದು ಉದಾಹರಣೆ ತೆಗೆದುಕೊಳ್ಳಿ, ನಮ್ಮಲ್ಲಿ ಒಗ್ಗಟ್ಟು ಏಕೆ ಇಲ್ಲ? ಶಂಕರಾಚಾರ್ಯರು ಒಂದು ಶ್ಲೋಕ ಬರೆದಿದ್ದಾರೆ; 'ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ' ಅಂದರೆ ಹೇಗೆ ಆಕಾಶದಿಂದ ಬಿದ್ದ ಮಳೆನೀರು ಹೇಗೆ ಸಮುದ್ರ ಸೇರುತ್ತೋ ಹಾಗೆ ಎಲ್ಲಾ ದೇವರಿಗೆ ಮಾಡಿದ ನಮಸ್ಕಾರ ಕೇಶವನಿಗೆ ಸೇರುತ್ತೆ ಅಂತ. ಲಿಂಗಾಯಿತರು 'ಅದು ಏಕೆ ಸ್ವಾಮಿ, ಕೇಶವನಿಗೇ ಏಕೆ ಸೇರಬೇಕು? ಶಂಕರಂ ಪ್ರತಿಗಚ್ಛತಿ ಅಂತ ಹೇಳಬಾರದಾ?' ಅಂತ ಕೇಳಬಹುದು. ಜೈನರು ಜಿನನಿಗೇ ಏಕೆ ಸೇರಬಾರದು ಅಂತ ಕೇಳಬಾರದಾ? ಅಲ್ಲೂ ಕೂಡ ಪ್ರತ್ಯೇಕತೆ! ದೇವರೊಬ್ಬ ಅಂತ ಹೇಳೋದು, ನಾಮ ಹಲವು ಅಂತ ಹೇಳೋದು, ಬೇರೆ ಬೇರೆ ಹೆಸರಿಟ್ಟುಕೊಂಡು ಗುದ್ದಾಡೋದು. ಇದು ಮನುಷ್ಯನ ಅಲ್ಪತ್ವ. ದೇವರು ಎಲ್ಲಿದ್ದಾನೆ? ಅವನು ಎಲ್ಲಾ ಕಡೆ ಇದ್ದಾನೆ. ಅವನನ್ನು ನೋಡಲು ಕಾಶಿಗೆ ಹೋಗಬೇಕಿಲ್ಲ, ರಾಮೇಶ್ವರಕ್ಕೂ ಹೋಗಬೇಕಿಲ್ಲ, ಬದರಿಗೂ ಹೋಗಬೇಕಿಲ್ಲ, ಕೇದಾರನಾಥಕ್ಕೂ ಹೋಗಬೇಕಿಲ್ಲ, ಅಮರನಾಥಕ್ಕೂ ಹೋಗಬೇಕಿಲ್ಲ.ಇರೋ ಊರೇ ಸಾಕು. ದೇವಸ್ಥಾನಕ್ಕೂ ಹೋಗಬೇಕಿಲ್ಲ, ಈ ಶರೀರ ಇದೆಯಲ್ಲಾ, ಇದರಲ್ಲೂ ಇದ್ದಾನೆ. ಅಲ್ಲಿರುವ ದೇವರು ದೊಡ್ಡವನು, ಇಲ್ಲಿರುವ ದೇವರು ಚಿಕ್ಕವನು ಅಂತ ಏನೂ ಇಲ್ಲ. ಅವನು ಎಲ್ಲೋ ಒಂದು ಕಡೆ ಇರುತ್ತಾನಾ? ಎಲ್ಲಾಕಡೆ ಇರುತ್ತಾನೆ. ಇರೋನು ಒಬ್ಬನೇ ದೇವರು. ೨೫ ದೇವರಿಲ್ಲ. ಕಲ್ಪನೆ ಮಾಡಿಕೊಂಡು ಬೇರೆ ಬೇರೆ ಹೆಸರು ಕೊಡೋದು! ಅಣು-ಅಣುವಿನಲ್ಲೂ ದೇವರಿದ್ದಾನೆ ಅಂತಾರೆ. ಹಾಗಿದ್ದ ಮೇಲೆ ಇವೆಲ್ಲಾ ಯಾಕೆ?
     ಸತ್ತ್ವಗುಣ ಹೆಚ್ಚಾಗಿ, ರಜೋಗುಣ ಕಡಿಮೆಯಾಗಿ, ತಮೋಗುಣ ಶೂನ್ಯವಾದಾಗ ನಮಗೆ ಸ್ವಲ್ಪ ಸ್ವಲ್ಪ ಪರಮಾತ್ಮನ ಅನುಭವವಾಗುವುದಕ್ಕೆ ಪ್ರಾರಂಭವಾಗುತ್ತದೆ. ಇದನ್ನು ಅನುಭವಿಸಿ ತಿಳಿಯಬೇಕೇ ಹೊರತು ಪದಗಳಲ್ಲಿ ವಿವರಿಸುವುದು ಕಷ್ಟ. ಜೀವಾತ್ಮ - ಪರಮಾತ್ಮ ಒಟ್ಟು ಸೇರಿದಾಗ ಆಗುವ ಅನುಭೂತಿ, ಆನಂದ ವರ್ಣಿಸಲಸದಳ. ಸಕ್ಕರೆಯ ರುಚಿಯೇ ಗೊತ್ತಿಲ್ಲದೆ ಇರುವವರಿಗೆ ಸಕ್ಕರೆ ಸಿಹಿ ಎಂದು ಇಪ್ಪತ್ತೈದು ಸಲ ಒತ್ತಿ ಒತ್ತಿ ಹೇಳಿದರೂ ಅರ್ಥವಾಗದೆ ಹೋಗಬಹುದು, ಆದರೆ ಸಕ್ಕರೆಯನ್ನು ಆತ ನಾಲಗೆಯ ಮೇಲಿರಿಸಿಕೊಂಡಾಗ ಅವನಿಗೆ ಅದರ ಸಿಹಿ ಅನುಭವಕ್ಕೆ ಬರುತ್ತದೆ. ಹಾಗೆಯೇ ಪರಮಾತ್ಮನನ್ನು ಅನುಭವಿಸಿಯೇ ತಿಳಿಯಬೇಕು. ಸಾಕ್ಷಾತ್ಕಾರ ಅನ್ನುವುದು ಸುಳ್ಳು. ಪರಮಾತ್ಮನನ್ನು ನಮ್ಮ ಹಣೆಗಣ್ಣಿಂದ ನೋಡಿದೆವು ಅನ್ನುವುದು ಸುಳ್ಳು. ಪರಮಾತ್ಮನನ್ನು ಕಾಣಲು ಬೇಕಾಗಿರುವುದು ಜ್ಞಾನದ ಕಣ್ಣು, ಒಳಗಣ್ಣು, ಅಂತಃಚಕ್ಷು, ಆ ಕಣ್ಣುಗಳಿಂದ ನಾವು ಭಗವಂತನನ್ನು ಕಾಣಬಹುದು.
     ಸೂರದಾಸರು ಹುಟ್ಟುಕುರುಡರು. ಅವರು ಕೃಷ್ಣನನ್ನು ವರ್ಣಿಸಿದ ರೀತಿ ನೋಡಿದರೆ ಕೃಷ್ಣ, ದೇವಕಿ, ಯಶೋದೆ, ಎಲ್ಲಾ ಎದುರಿಗೆ ಬಂದಂತೆ ಭಾಸವಾಗುತ್ತದೆ. ಹೇಗೆ ಸಾಧ್ಯವಾಯಿತು ಇದು? ಜನ್ಮಾಂತರದ ಸಂಸ್ಕಾರ, ಅಂತಃಚಕ್ಷುವಿನಿಂದ ನೋಡಿದರು. ಈಗಲೂ ಪರೀಕ್ಷೆ ಮಾಡಿ ನೋಡಿ, ದೇವರಿಗೆ ಆಕಾರ ಇಲ್ಲ, ಕಲ್ಪಿಸಿಕೊಳ್ಳಿ, ಯಾವ ಆಕಾರ ಬೇಕಾದರೂ ಕಲ್ಪಿಸಿಕೊಳ್ಳಿ. ನಾರಾಯಣ - ಶಂಖ, ಚಕ್ರ, ಗದಾಪದ್ಮಧಾರಿ, ಕಿರೀಟ ಹಾಕಿಕೊಂಡಿದ್ದಾನೆ, ತುಳಸಿಮಾಲೆ, ಪೀತಾಂಬರ ವಸ್ತ್ರ, ಏನೇನೋ ಕಲ್ಪಿಸಿಕೊಳ್ಳಿ, ಕಾಣಿ, ಆ ಚಿತ್ರ ಮನಸ್ಸಿಗೆ ಬರುತ್ತೆ, ನಿಜವಾಗಿಯೂ ಹಾಗೆ ಇದೆಯಾ? ನಿಜವಾಗಿ ಹಾಗಿಲ್ಲ. ನಿಮ್ಮ ಕಲ್ಪನೆಯಂತೆ ನಿಮಗೆ ಕಾಣುತ್ತೆ, ಅಷ್ಟೆ. ಹಾಗೆಯೇ ಶಿವ! ಪರಮಾತ್ಮನ ವಿಷಯ ಮಾತನಾಡುವಾಗ ಬಹಳ ಗಂಭೀರವಾಗಿ ಆಲೋಚಿಸಬೇಕು. ಪರಮಾತ್ಮ ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಅವನಿಲ್ಲದ ಜಾಗವೇ ಇಲ್ಲ. ಅಗ್ನಿಹೋತ್ರ ಮಾಡುವಾಗ, ಸಂಧ್ಯಾವಂದನೆ ಮಾಡುವಾಗ ಈ ಮಂತ್ರ ಹೇಳ್ತೇವೆ:


ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ  |
ನಮಃ ಶಿವಾಯ ಚ ಶಿವತರಾಯ ಚ ||
(ಯಜು.೧೬.೪೧.)
     ಇದರ ಅರ್ಥ ಶಾಂತಿಸ್ವರೂಪನಿಗೆ ನಮಸ್ಕಾರ ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ ಎಂದು.

4 comments:

  1. ಧನ್ಯವಾದಗಳು.
    -ನಾಗರಾಜ್.

    ReplyDelete
  2. ವಿಚಾರಗಳು ಚಿಂತನಾರ್ಹ. ಓದಿದ ನಂತರ ನನಗನಿಸಿದ ಕೆಲವು ಮಾತುಗಳನ್ನು ಇಲ್ಲಿ ಬರೆದಿದ್ದೇನೆ.

    ಭಗವಂತ ಸರ್ವವ್ಯಾಪೀ ಎಂಬುದು ನಿರ್ವಿವಾದದ ಮಾತು. ಆದಾಗ್ಯೂ ನಾವು ಹಿರಿಯರನ್ನು ಕಂಡಾಗ ನಮಸ್ಕರಿಸುತ್ತೇವೆ; ಗುರುಗಳನ್ನೂ, ಪೂಜ್ಯರನ್ನೂ ಕಂಡಾಗ ನಮಸ್ಕರಿಸುತ್ತೇವೆ. ತಾರ್ಕಿಕವಾಗಿ ನೋಡಿದರೆ ಎಲ್ಲರಲ್ಲೂ ಭಗವಂತನಿದ್ದಾನೆ ಎಂದಾಗ ಈ ಆಚರಣೆಯೂ ಪ್ರಶ್ನಾರ್ಹವಾಗುತ್ತದೆ. ಆದರೆ ನಿಜವಾಗಿ ನೋಡಿದರೆ ಇವೆಲ್ಲಾ ಮನುಷ್ಯನ ಭಾವನೆಗಳು ಮತ್ತು ನಂಬಿಕೆಗಳು. ಭಾವನೆಗಳು ಮತ್ತು ನಂಬಿಕೆಗಳು ಜೀವನದ ಅವಿಭಾಜ್ಯ ಅಂಗ. ಎಷ್ಟೋ ವೇಳೆ ಈ ಭಾವನೆಗಳು ಮತ್ತು ನಂಬಿಕೆಗಳು ತರ್ಕದ ಕಸರತ್ತಿಗೆ ನಿಲುಕದ ವಿಷಯಗಳು. ಹಾಗೇ ಪವಿತ್ರ ಕ್ಷೇತ್ರಗಳಿಗೆ ಹೋಗುವ ಮಾತು ಕೂಡಾ ಇದರ ಪರಿಮಿತಿಯಲ್ಲಿಯೇ ಬರುತ್ತದೆ. ಎಲ್ಲೆಲ್ಲೂ ಭಗವಂತನಿದ್ದಾನೆಂದ ಮೇಲೆ ಸಂಡಾಸಿನಲ್ಲಿ ಕೂತು ಯಾರಾದರೂ ಧ್ಯಾನ-ಜಪ ಮಾಡಲು ಸಾಧ್ಯವೇ? ಅದಕ್ಕೆಂದೇ ಮೀಸಲಾದ, ಮೀಸಲಾಗಿರಿಸಬೇಕಾದ ಜಾಗವಿದೆ. ಪ್ರಶಾಂತವಾದ ಪುಣ್ಯಕ್ಷೇತ್ರಗಳಿಗೆ ಹೋದಾಗ ಅಲ್ಲಿನ ಪರಿಸರ, ವರ್ಣಿಸಲಾಗದ ತರಂಗಗಳು ಇತ್ಯಾದಿ ಮನಸ್ಸಿಗೆ ಅವ್ಯಕ್ತವಾದ ಆನಂದ, ನೆಮ್ಮದಿ ಕೊಡುವುದಂತೂ ಬಹುಜನರ ಅನುಭವ. ನಾವು ಹೇಗೆ ಆ ಭಗವಂತನನ್ನು ನೋಡುತ್ತೇವೆ, ಅನುಭಾವಿಸುತ್ತೇವೆ ಮತ್ತು ಆರಾಧಿಸುತ್ತೇವೆ ಎಂಬುದು ನನ್ನ ಖಚಿತ ಅಭಿಪ್ರಾಯದಲ್ಲಿ ಅತ್ಯಂತ ವೈಯುಕ್ತಿಕವಾದದ್ದು. "ಯದ್ಭಾವಂ ತದ್ಭವತಿ" ಎಂಬುದು ಈ ಕಾರಣಕ್ಕಾಗಿಯೇ. ಹಾಗಾಗಿ ಪರಮಾತ್ಮ (ಆತ್ಮ ಶಾಂತಿ, ನೆಮ್ಮದಿ, ಮೋಕ್ಷ ಏನೇ ಅಂದರೂ)ಸಾಕ್ಷಾತ್ಕಾರದ ಸಾಧನೆಗೆ ಅವರವರು ಆರಿಸಿಕೊಂಡ ಮಾರ್ಗ ಅವರವರಿಗೆ ಶ್ರೇಷ್ಠ. ವಿಚಾರಗಳನ್ನು ತಿಳಿಸಬಹುದು. ಆಚರಣೆಗಳನ್ನು ಅವರವರ ಆತ್ಮ ಮೆಚ್ಚಿದ, ಒಪ್ಪಿದ ರೀತಿಯಲ್ಲಿಯೇ ಮುಂದುವರೆಸಿಕೊಂಡು ಹೋಗಲು ಅವರವರು ಸ್ವತಂತ್ರರು.ಹಾಗಾಗಿಯೇ ನಮ್ಮಲ್ಲಿ ಸಾಧನಾಪಥಗಳು ಅಸಂಖ್ಯ. ಎಲ್ಲರದರ ಗುರಿ ಮಾತ್ರಾ ಒಂದೇ.

    ReplyDelete
  3. ಕಣ್ತೆರೆಸುವ ಲೇಖನ.ಒಂದು ಮಾತು ನಿಜ.ನಾವು ಈ ಲೇಖನದ ವಿಚಾರದಮಟ್ಟಕ್ಕೆ ಬೆಳೆಯಬೇಕು. ಅಂದಮಾತ್ರಕ್ಕೆ ನಾವು ಸಾಗುತ್ತಿರುವ ಮಾರ್ಗ ತಪ್ಪು ಎಂದು ನನಗನ್ನಿಸುವುದಿಲ್ಲ.ಒಂದು ಶ್ರೇಷ್ಠ ಮಟ್ಟವನ್ನು ತಲುಪಲು ನೂರಾರು ದಾರಿಗಳು.ನಾವು ಆ ದಾರಿಯಲ್ಲೇ ಕ್ರಮಿಸುತ್ತಿದ್ದೇವೆ. ನನಗಂತೂ ಇತ್ತೀಚೆಗೆ ನನಗೆ ಲಭ್ಯವಾಗುತ್ತಿರುವ ಜ್ಞಾನದ ಬಗ್ಗೆ ಸಂತಸವಿದೆ.ಹಲವಾರು ಸಂತರಿಂದ ಪ್ರವಚನಗಳನ್ನು ಕೇಳುವಾಗ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತೇನೆ. ಆಗ ಕೆಲವರು ಭಾವಿಸಬಹುದು. ಭಗವಂತನು ನಿರಾಕಾರವೆಂದು ಪ್ರತಿಪಾದಿಸುತ್ತಿರುವ ವಿಚಾರವನ್ನಿಟ್ಟುಕೊಂಡು 'ವೇದಸುಧೆ" ಯಂತಹ ಬ್ಲಾಗ್ ನಡೆಸುತ್ತಿರುವ ನನಗೆ ಇದರಿಂದ ದ್ವಂದ್ವ ಎನಿಸುವುದಿಲ್ಲವೇ? ಎಂದು. ನನಗೆ ಖಂಡಿತವಾಗಲೂ ಹಾಗೆನಿಸುವುದಿಲ್ಲ. ಮೊನ್ನೆ ಶಂಕರಾಚಾರ್ಯರ ಸಾಧನ ಪಂಚಕದ ಬಗ್ಗೆ ಉಪನ್ಯಾಸವನ್ನು ಕೇಳುತ್ತಿದ್ದಾಗ ಶಂಕರಾಚಾರ್ಯರು ಕೊಟ್ಟಿರುವ ನಲವತ್ತು ಸೂತ್ರಗಳು[ಶಂಕರರ ಹೆಸರಲ್ಲಿ ಯಾರೇ ಬರೆದಿದ್ದರೂ ಚಿಂತೆ ಇಲ್ಲ] ಸಾಧನಾಪಥದಲ್ಲಿ ಸಾಗುವವನಿಗೆ ತುಂಬಾ ಉಪಯುಕ್ತವೆನಿಸುತ್ತೆ. ಆದರೆ ಅದರಲ್ಲಿ ಕೆಲವು ವಿಚಾರಗಳು ಚತುರ್ವೇದಿಗಳ ವಿಚಾರಕ್ಕೆ ಹೊಂದಾಣಿಕೆಯಾಗುವುದಿಲ್ಲ. ಆದರೆ ಸಾಧನೆಗೆ ಕೊಟ್ಟಿರುವ ಸೂತ್ರವಂತೂ ಅತ್ಯದ್ಭುತ.ಏನೇ ಪ್ರತಿಪಾದನೆಗಳಿದ್ದರೂ ನಮ್ಮ ದೇಶದಲ್ಲಿ ಸಾವಿರಾರು ಸಾದುಸಂತರು ತಮ್ಮ ತಪಸ್ಸಿನ ಫಲವಾಗಿ ನಮ್ಮ ಜೀವನಕ್ಕೆ ಸಾಕಷ್ಟು ವಿಚಾರಗಳನ್ನು ನೀಡಿದ್ದಾರೆ. ನೆಮ್ಮದಿಯ ಜೀವನಕ್ಕೆ ನಮ್ಮ ದೇಶದಲ್ಲಿ ಲಭ್ಯವಿರುವಷ್ಟು ಜ್ಞಾನ ಪ್ರಪಂಚದಲ್ಲಿ ಸಿಗಲಾರದು.ಅಂತೂ ನಮ್ಮ ನೆಮ್ಮದಿಯ ಬದುಕಿಗೆ ಬೇಕಾದ ಜ್ಞಾನವು ಯಾರಿಂದಲಾದರೂ ಸಿಗಲಿ.ನಮ್ಮ ಅಂತರಾತ್ಮನಿಗೆ ಅದು ಸರಿ ತಪ್ಪು ಎಂದು ವಿವೇಚಿಸುವ ಸಾಮರ್ಥ್ಯ ಇದೆ.

    ReplyDelete