ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು ತಮ್ಮ ಮಕ್ಕಳ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಮ್ಮ ಮಕ್ಕಳು ಹೀಗಾಗಬೇಕು, ಹಾಗಾಗಬೇಕು ಎಂಬ ಹಲವಾರು ಆಸೆ ಆಕಾಂಕ್ಷೆಗಳನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಆ ದಿಸೆಯಲ್ಲಿ ನಡೆಸಲು ಶ್ರಮ ಹಾಕುತ್ತಾರೆ. ತಮ್ಮ ಮಕ್ಕಳು ತಮಗಿಂತ ಹೆಚ್ಚು ಪುರೋಭಿವೃದ್ಧಿಗೆ ಬರಬೇಕೆಂದು ತಮ್ಮ ಅಮೂಲ್ಯವಾದ ಸಮಯವನ್ನು ತೊಡಗಿಸಿಕೊಂಡು ಮಕ್ಕಳಿಗೆ ಶಿಕ್ಷಣವನ್ನು ಹಲವಾರು ಪ್ರಾಕಾರಗಳಲ್ಲಿ ಕೊಡಿಸುತ್ತಾರೆ, ಕೊಡುತ್ತಾರೆ. ತಮ್ಮ ಮಕ್ಕಳ ಸ್ವಲ್ಪ ಯಶಸ್ಸು ಕೂಡಾ, ಅಪ್ಪ ಅಮ್ಮರಿಗೆ ಅಪಾರ ಸುಖವನ್ನು ನೀಡುತ್ತದೆ. ಆದರೆ, ಕೆಲವೊಮ್ಮೆ ಮಕ್ಕಳ ಮನಸ್ಸು ಬೇರೆಡೆಗೆ ಹೋದಾಗ, ಅಥವಾ ತಂದೆತಾಯಿಯರ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದಾಗ, ಅಥವಾ ತಮ್ಮ ಕನಸುಗಳು ವಿಭಿನ್ನವಾದಾಗ, ಇನ್ನಿತರ ಯಾವುದೋ ಕಾರಣದಿಂದ ನಿರೀಕ್ಷಿತ ಫಲಿತಾಂಶ ಸಿಗದಾದಾಗ ಮಕ್ಕಳ ಮೇಲೆ ಅಪ್ಪ ಅಮ್ಮರ ನಿರಾಸೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಅಸಡ್ಡೆ, ತಿರಸ್ಕಾರ ಮತ್ತು ಸಿಟ್ಟು ಇವುಗಳು ಮಕ್ಕಳ ಮೇಲೆ ದುಬಾರಿಯಾದ ಪರಿಣಾಮ ಬೀರುತ್ತವೆ. ಇಂತಹ ಜಟಿಲವಾದ ಸಮಸ್ಯೆಗಳು ಬರುವ ಮುಂಚೆ ಮಕ್ಕಳ ಮನಸನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ಮಕ್ಕಳ ಕನಸು, ವಿಚಾರ ಮತ್ತು ಆಸೆಗಳು ತೀರಾ ಬಾಲಿಶವಾಗಿದೆಯೆಂದು ನಮಗೆ ಅನ್ನಿಸಬಹುದು, ಆದರೆ,ಆ ಚಿಂತನೆಯಲ್ಲೂ ಸರಿಯಾದ ದಿಕ್ಕು ಇರುತ್ತೆ ಎಂಬುದನ್ನು ತಂದೆ ತಾಯಿಯರು ಮರೆಯಬಾರದು.
ನರೇಂದ್ರ ಚಿಕ್ಕ ಹುಡುಗನಾಗಿದ್ದಾಗ ತನ್ನ ತಂದೆ ತಾಯಿಯ ಜೊತೆ ಎರಡು ಕುದುರೆಗಳ ಸಾರೋಟಿನ ಪ್ರಯಾಣವನ್ನು ಬಹಳ ಇಷ್ಟ ಪಡುತ್ತಿದ್ದ. ಕಲ್ಕೊತ್ತ ನಗರ ಸಂಚಾರ ಮಾಡುವಾಗ ಕುದುರೆಯ ಕಾಲಿನ ಟಕ್ ಟಕ್ ಸದ್ದು, ಕಟ್ಟಿದ ಗೆಜ್ಜೆಯ ನಿನಾದ, ತಂಪಾದ ಗಾಳಿ ಇವೆಲ್ಲವೂ ನರೆಂದ್ರನಿಗೆ ಬಹಳ ಆಪ್ಯಾಯಮಾನವಾಗಿತ್ತು. ಇಂತಹ ನಗರ ಪ್ರದಕ್ಷಿಣೆ ಮುಗಿಸಿ ಬಂದ ನರೇಂದ್ರನ ತಂದೆ " ನೀನು ದೊಡ್ಡವನಾದ ಮೇಲೆ ಏನು ಆಗಲು ಬಯಸುತ್ತೀ? " ಎಂದು ಪ್ರಶ್ನೆ ಹಾಕಿದರು. ನರೇಂದ್ರ ಕ್ಷಣ ಮಾತ್ರವೂ ತಡಮಾಡದೆ " ನಾನು ಜೋಡಿ ಕುದರೆಯ ಸಾರೋಟಿನ ಸವಾರನಾಗುತ್ತೀನಿ " ಎಂದು ಉತ್ತರಿಸಿದ. ಈ ಮಾತು ನರೇಂದ್ರನ ತಂದೆಗೆ ಅತ್ಯಂತ ಸಿಟ್ಟು ಮತ್ತು ನಿರಾಸೆ ಒಮ್ಮೆಲೇ ಆಯಿತು. ಇದನ್ನು ಗಮನಿಸಿದ ತಾಯಿ ನರೇಂದ್ರನ ಕೈ ಹಿಡಿದುಕೊಂಡು ನೇರಾ ದೇವರಮನೆಗೆ ಕರೆದುಕೊಂಡು ಹೋಗಿ ದೇವರಮುಂದೆ ನಿಲ್ಲಿಸಿ ಅಲ್ಲಿ ಇರಿಸಲಾಗಿದ್ದ ಶ್ರೀ ಕೃಷ್ಣನ ಭಗವದ್ಗೀತಾ ಉಪದೇಶದ ಫೋಟೋ ತೋರಿಸುತ್ತ " ಈ ರೀತಿಯ ಸವಾರನಾಗಲು ಬಯಸಿರುವೆ ಅಲ್ಲವೇ? " ಎಂದು ಕೇಳಿದರು. ನರೇಂದ್ರನ ಬಾಯಿಂದ ಮಾತು ಬರಲಿಲ್ಲ. " ನೀನು ಜೋಡಿ ಕುದುರೆಗಳ ಸಾರೋಟಿನ ಸವಾರನೇ ಆಗುವುದಾದರೆ ಶ್ರೀಕೃಷ್ಣನ ತರಹ ಜಗತ್ತಿಗೆ ಬೆಳಕು ಕೊಡುವ ಸವಾರನಾಗು." ಎಂದು ಹುರಿದುಂಬಿಸಿದರು. ಮುಂದೆ ಆ ಪುಟ್ಟ ನರೇಂದ್ರನೆ, ಸ್ವಾಮಿ ವಿವೇಕಾನಂದನಾಗಿ ಜಗತ್ತಿಗೆ ಬೆಳಕು ತೋರಿದ ಸವಾರನಷ್ಟೇ ಅಲ್ಲ ಸರದಾರನು ಆದರು.
ಮಕ್ಕಳ ಮನಸಿನಲ್ಲಿ ಇರುವ ಆಸೆಗಳು ಅಸ್ಪಷ್ಟವಾಗಿರಬಹುದು, ಕನಸುಗಳು ಬಾಲಿಶ ಎನಿಸಬಹುದು, ವಿಚಾರಗಳು ಅಸಂಬದ್ಧ ಎನಿಸಬಹುದು. ಆದರೆ ಸ್ವಲ್ಪ ತಾಳ್ಮೆ ವಹಿಸಿ, ಮಕ್ಕಳ ಕನಸಿಗೆ, ಆಸೆಗಳಿಗೆ, ವಿಚಾರಗಳಿಗೆ ಹೇಗೆ ನೀರೆರೆದು ಪೋಷಿಸಿ ಬೆಳೆಸೆಬಹುದು ಎಂಬುದರ ಬಗ್ಗೆ ಚಿಂತಿಸಿದರೆ ಸಾಕು ಮಕ್ಕಳು ಹೆಚ್ಚು ಸಬಲರಾಗುತ್ತಾರೆ. ತಮ್ಮ ಮಕ್ಕಳು ಪ್ರತಿಭಾಶಾಲಿಗಳು ಆಗಬೇಕೆಂಬುದು ಪ್ರತಿ ತಂದೆತಾಯರ ಉದ್ದೇಶವು ಅದೇ ತಾನೇ! ಇದಕ್ಕೆ ನೀವೇನು ಹೇಳುವಿರಿ?
ಹೆಚ್ ಏನ್ ಪ್ರಕಾಶ್
ನಿಜ ಪ್ರಕಾಶ್, ನಾನೂ ಕೂಡ ಇದೇ ವಿಷಯವನ್ನು ಈಗ ತಾನೇ ಓದುತ್ತಿದ್ದೆ. ಮಕ್ಕಳ ಮುಂದೆ ಉದಾತ್ತ ಗುರಿಯನ್ನು ತೆರೆದಿದ ಬೇಕು.
ReplyDeleteಧನ್ಯವಾದಗಳು ಶ್ರೀಧರ್.
ReplyDelete