Pages

Tuesday, May 31, 2011

ವೇದ,ಉಪನಿಷತ್ತು, ಅರಣ್ಯಕ, ಪುರಾಣ

ನಮ್ಮ ದೇಶದಲ್ಲಿ ವೇದಗಳ ಜೊತೆ ಜೊತೆಗೇ ಉಪನಿಷತ್ತುಗಳ, ಅರಣ್ಯಕಗಳ, ಪುರಾಣಗಳ ಹಾಗೂ ಇನ್ನಿತರ ಗ್ರಂಥಗಳ ಅಧ್ಯಯನವು ನಡೆದು ಬಂದಿದೆ. ಎಲ್ಲದರಲ್ಲೂ ವೇದದ ಹಲವು ಅಂಶಗಳು ಇರುವುದು ಸುಳ್ಳಲ್ಲ . ಇವೆಲ್ಲವೂ ವೇದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಗ್ರಂಥಗಳೇನಲ್ಲ[ಇದು ನನ್ನ ತಿಳುವಳಿಕೆ] ನಮ್ಮ ದೇಶದಲ್ಲಿ ಸಾವಿರಾರು ಋಷಿಗಳು ಜನ್ಮತಾಳಿ ಅವರವರ ತಪಸ್ಸಿನಿಂದ ಅವರು ಕಂಡುಕೊಂಡ ಸತ್ಯವನ್ನು ನಮಗೆಲ್ಲಾ ಅವರವರ ರೀತಿಯಲ್ಲಿ ತಿಳಿಸಿದ್ದಾರೆ. ಇದು ನಮ್ಮ ಭಾಗ್ಯವೆಂಬುದು ನನ್ನ ಅಭಿಮತ.


ಯಥಾ ನಧ್ಯ: ಸ್ಯಂದಮಾನಾ ಸಮುದ್ರೇ
ಅಸ್ತಂ ಗಚ್ಚತಿ ನಾಮರೂಪೇ ವಿಹಾಯ
ತಥಾ ವಿದ್ವಾನ್ ನಾಮರೂಪಾತ್ ವಿಮುಕ್ತ:
ಪರಾತ್ಪರಂ ಪುರುಷಮುಪೈತಿ ದಿವ್ಯಂ
[ಸಂಸ್ಕೃತ ಕಲಿತಿಲ್ಲವಾದ್ದರಿಂದ ಮೇಲಿನ ಸೂಕ್ತಿಯಲ್ಲಿ ವ್ಯಾಕರಣ ದೋಷ ವಿದ್ದರೆ ಪಂಡಿತರು ದಯಮಾಡಿ ತಿದ್ದಿ]


"ಹರಿಯುತ್ತಾ ಹರಿಯುತ್ತಾ ಹೇಗೆ ನದಿಗಳು ತಮ್ಮ ನಾಮರೂಪವನ್ನು ಕಳೆದುಕೊಂಡು ಸಮುದ್ರದಲ್ಲಿ ಒಂದಾಗುತ್ತವೋ ಹಾಗೆ ಜ್ಞಾನಿಗಳು ನಾಮರೂಪವನ್ನು ಬಿಟ್ಟು ದಿವ್ಯ ಪರಾತ್ಪರ ಪುರುಷನನ್ನು ಪಡೆಯುತ್ತಾರೆ"....ಈ ಚಿಂತನೆ ನಮಗೆ ಹಿತವೆನಿಸುತ್ತದೆಯಲ್ಲವೇ? ಆದರೆ ವೇದಾಧ್ಯಾಯೀ      ಶ್ರೀ ಸುಧಾಕರಶರ್ಮರ ಚಿಂತನಾ ಲಹರಿಯೇ ಬೇರೆ. ವೇದಸುಧೆ ಬಳಗದ ಶ್ರೀ ವಿ.ಆರ್.ಭಟ್ಟರು ಕೇಳಿರುವ ಪ್ರಶ್ನೆಗೆ ಇಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರಿಸಿದ್ದಾರೆ.ವೇದಸುಧೆಯ ಅಭಿಮಾನಿಗಳೆಲ್ಲರೂ ಈ ಚರ್ಚೆಯಲ್ಲಿ ದಯಮಾಡಿ ಪಾಲ್ಗೊಳ್ಳಿ. ಇಲ್ಲಿ ಯಾರದೋ ವಾದ ಗೆಲ್ಲಬೇಕೆಂದಿಲ್ಲ. ಆದರೆ ಆರೋಗ್ಯಕರ ಚರ್ಚೆನಡೆದು ನಮ್ಮ ಜ್ಞಾನ ಹೆಚ್ಚಿಸಿಕೊಳ್ಳೋಣ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ನಿಂದನೆಗೆ ಅವಕಾಶವಿಲ್ಲ. ಅಂತಹ ಪ್ರತಿಕ್ರಿಯೆಗಳನ್ನು ವೇದಸುಧೆಯು ಪ್ರಕಟಿಸುವುದಿಲ್ಲ.
ವಿ.ಸೂ:- ಶ್ರೀ ಸುಧಾಕರಶರ್ಮರು ತಮ್ಮ   ಅನಾರೋಗ್ಯದ ಕಾರಣ    ಹೆಚ್ಚಾಗಿ ಅಂತರ್ಜಾಲತಾಣವನ್ನು ಇಣುಕುತ್ತಿಲ್ಲ. ಆದರೂ  ನಾವು ಚರ್ಚೆ ಮುಂದುವರೆಸೋಣ. ಅವರ ಆರೋಗ್ಯ ಸ್ಥಿತಿ ಉತ್ತಮಗೊಂಡಾಗ ಶರ್ಮರು ತಮ್ಮ ಉತ್ತರವನ್ನು ನೀಡುತ್ತಾರೆ.
-----------------------------------------------------
ಶ್ರೀ ವಿ.ಆರ್.ಭಟ್ಟರ ಪ್ರಶ್ನೆ:
ವೇದವನ್ನು ಸಂಕಲಿಸಿದ ಮಹರ್ಷಿ ವ್ಯಾಸರೇ ಭಾಗವತ ಪುರಾಣವನ್ನೂ ಬರೆದರು. ಇಲ್ಲಿ ನೀವು ಹೇಳುವುದು ವೇದದ ಉಲ್ಲೇಖ. ಕೇವಲ ವೇದವೇ ಸತ್ಯ ಮಿಕ್ಕಿದ್ದೆಲ್ಲಾ ಸುಳ್ಳು ಎಂದು ಯಾವುದರಿಂದ ಪ್ರತಿಪಾದಿಸುತ್ತೀರಿ ಸ್ವಾಮೀ? ಯಾಕೆಂದರೆ ವೇದದ ಕರ್ತೃ ಯಾರೆಂಬುದು ಹಲವು ವಿಜ್ಞಾನಿಗಳಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆಯಲ್ಲಾ!
ಶ್ರೀ ಸುಧಾಕರಶರ್ಮರ ಉತ್ತರ:
ಈ ಪ್ರಶ್ನೆ ಮೇಲಿಂದ ಮೇಲೆ ಬರಬೇಕು. ವಿಮರ್ಶೆ ಮಾಡಿ. ಸತ್ಯವಾದರೆ ಸ್ವೀಕರಿಸಿ, ಸುಳ್ಳಾದರೆ ಹೇಗೆ ಎಂಬುದನ್ನು ಸಾಧಾರವಾಗಿ ತಿಳಿಸಿ.
-ವೇದಗಳು ಸಕಲ ಮಾನವರಿಗಾಗಿದೆ.
-ವೇದಗಳು ಸಕಲ ಮಾನವರ ಹಿತವನ್ನು ಬಯಸುತ್ತದೆ.
-ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ಜ್ಞಾನಭಂಡಾರ. ಮಿಕ್ಕೆಲ್ಲ ಜ್ಞಾನಭಂಡಾರಗಳ ಮೇಲೂ ಇದರ ಪ್ರಭಾವವಿದೆ.
-ವೇದಗಳಲ್ಲಿ ತದ್ವಿರುದ್ಧವಾದ ಸಿದ್ಧಾಂತಗಳಿಲ್ಲ.
-ವೇದಗಳಲ್ಲಿ ಕಲಬೆರಕೆಯಿಲ್ಲ. ಕಲಬೆರಕೆಯಾಗದಂತಹ ವ್ಯವಸ್ಥೆಯಿದೆ.
-ವೇದಗಳು ಸೃಷ್ಟಿನಿಯಮಕ್ಕೆ ಅನುಗುಣವಾದ Physical Laws, Laws of Nature, ಭೌತವಿಜ್ಞಾನ ಮೋದಲಾದವಿಗಳ ನಿಯಮಗಳಿಗೆ ವಿರುದ್ಧವಾದ ಅಪದ್ಧಗಳನ್ನು ಆಡುವುದಿಲ್ಲ.
-ಅರ್ಥವನ್ನು ಲೆಕ್ಕಿಸದೆ, ಕೆಲವೊಮ್ಮೆ ಇಲ್ಲವೆಂದೇ ಹೇಳುತ್ತಾ, ತಾವಾಡಿದ್ದೇ ವೇದ ಎಂದೂ, ಬಡಬಡಿಸುವ ಎಲ್ಲವೂ ವೇದವಲ್ಲ! ಅಲ್ಲೆಲ್ಲಾ ಸಮಾನ್ಯಜ್ಞಾನಕ್ಕೆ. ತರ್ಕಕ್ಕೆ ವಿರುದ್ಧವಾದ ಅಂಶಗಳು ಬೇಕಾದಷ್ಟಿವೆ. ಅವನ್ನು ಸಮರ್ಥಿಸುತ್ತಿಲ್ಲ.
-ವೇದಗಳು ತರ್ಕಬದ್ಧವಾಗಿವೆ.
-ವೇದಗಳು ಸಾರ್ವಕಾಲಿಕವಾದ್ದರಿಂದ ತಿದ್ದುಪಡಿಯ ಅವಶ್ಯಕತೆಯಿಲ್ಲ.
-ವೇದಗಳಲ್ಲಿ ಕೇವಲ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದದ ಸಂಹಿತಭಾಗ (ಸುಮಾರು 20,379 ಮಂತ್ರಗಳಿವೆ). ರೂಢಿಯಲ್ಲಿ ಬ್ರಾಹ್ಮಣಗ್ರಂಥಗಳನ್ನೂ, ಆರಣ್ಯಕಗಳನ್ನೂ, ಉಪನಿಷತ್ತುಗಳನ್ನೂ ಇನ್ನೂ ಯಾವ್ಯಾವುದೋ ಗ್ರಂಥಗಳನ್ನು ವೇದವೆಂದು ಗುರುತಿಸುವ ಸಂಪ್ರದಾಯಗಳು ಬಂದಿವೆ. ಅವನ್ನು ಇಲ್ಲಿ ಮಾನ್ಯ ಮಾಡಲಾಗುವುದಿಲ್ಲ.
ಸಧ್ಯಕ್ಕೆ ಇಷ್ಟು ಸಾಕು. ಇಷ್ಟೂ ಗುಣಗಳು ಇಂದಿನ ಯಾವುದೇ ಜ್ಞಾನಭಂಡಾರದಲ್ಲಿ ಇಲ್ಲವಾದ್ದರಿಂದ ವೇದಗಳು ಉತ್ತಮ.

Sunday, May 29, 2011

ಮೇಲಕ್ಕೇರಿದ ಮೈಲಾರಶರ್ಮ



     ನಾನು ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು ಮೈಲಾರಶರ್ಮ. ನನಗೆ ಸುಮಾರು ೩೫-೩೬ ವರ್ಷಗಳಿಂದ ಪರಿಚಯಸ್ಥರು. ನನಗಿಂತ 8-10 ವರ್ಷ ದೊಡ್ಡವರು. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಸರಳ ವ್ಯಕ್ತಿ, ಸಂಪ್ರದಾಯಸ್ಥ. ನಿವೃತ್ತರಾದ ಮೇಲೆ ಪೂಜೆ, ಪುನಸ್ಕಾರ, ತೀರ್ಥಕ್ಷೇತ್ರಗಳಿಗೆ ಪ್ರವಾಸ ಮಾಡಿಕೊಂಡಿದ್ದವರು. ಅವರು ದಿನಾಂಕ ೨೭-೦೫-೨೦೧೧ರ ಬೆಳಿಗ್ಗೆ ವಿಧಿವಶರಾದರು. ನನಗೆ ಆಶ್ಚರ್ಯ ಮತ್ತು ಸಂತೋಷದ ವಿಷಯವಾಗಿ ತಿಳಿದದ್ದೇನೆಂದರೆ ಅವರ ದೇಹವನ್ನು ಹಾಸನದ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಿದ್ದು. ಅವರ ಕಣ್ಣುಗಳೂ ಸಹ ಉಪಯೋಗಕ್ಕೆ ಬಂದದ್ದು. ಅವರು ನಿಧನಾನಂತರ ತಮ್ಮ ದೇಹವನ್ನು ಮತ್ತು ಕಣ್ಣುಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಅವರ ಇಚ್ಛೆಯನ್ನು ಅವರ ಕುಟುಂಬದವರು ನೆರವೇರಿಸಿದ್ದೂ ಸಹ ಒಂದು ಒಳ್ಳೆಯ ಬೆಳವಣಿಗೆಯಾಗಿ ನನಗೆ ಕಂಡಿತು. ಮೈಲಾರಶರ್ಮ, ನೀವು ಧನ್ಯ, ನಿಮ್ಮ ಕುಟುಂಬದವರೂ ಧನ್ಯರು. ನಿಮ್ಮ ಈ ಕೆಲಸ ಇತರರಿಗೆ ಮಾರ್ಗದರ್ಶಿಯಾಗಿದೆ. ನಿಮಗೆ ನನ್ನ ನಮಸ್ಕಾರಗಳು.
     ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ಹೆಣವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ಹೆಣವನ್ನು ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ. ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅದನ್ನು ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಕೇಳಿದ ಉಪನ್ಯಾಸಗಳು, ಓದಿದ ಕೆಲವು ಗ್ರಂಥಗಳು, ಸಂಸ್ಕಾರವಶಾತ್ ಹೊಂದಿರುವ ಅಭಿಪ್ರಾಯಗಳು ಕಾರಣವಾಗಿ ಮೂಡಿದ ಕೆಲವು ಮುಕ್ತಕಗಳನ್ನು ತಮ್ಮ ಮುಂದಿಟ್ಟಿರುವೆ:


ತಾಯಿಯ ಸ್ವತ್ತಲ್ಲ ತಂದೆಯ ಸ್ವತ್ತಲ್ಲ
ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ |
ಮಿತ್ರರ ಸ್ವತ್ತಲ್ಲ ತನ್ನದಲ್ಲವೆ ಅಲ್ಲ
ಶರೀರವಿದಾರ ಸ್ವತ್ತು ಗೊತ್ತಿಲ್ಲ ಮೂಢ ||


ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ |
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು ನಾನೆನಲೆ ಮೂಢ ||


ತನುವು ಸುಂದರವೆಂದು ಉಬ್ಬದಿರು ಮನುಜ
ಹೊಳೆವ ಚರ್ಮದೊಳಗಿಹುದು ಹೊಲಸು ||
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ ||


ದೇಹವೆಂಬುದು ಅನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ |
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ ||


ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||


ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||


ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ ||
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ ||


ಪರಮಾತ್ಮ ರಚಿಸಿಹನು ನವರಸದರಮನೆಯ
ನಡೆದಾಡುವೀ ಮಹಲಿನರಸ ಜೀವಾತ್ಮ |
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
ಇಂದ್ರಿಯಗಳು ಕಾವಲಿಗಿಹವು ಮೂಢ ||


ನೀರು ಹರಿಯುವುದು ಬೆಂಕಿ ಸುಡುವುದು
ಬಾಲನವನಂತ್ಯದಲಿ ಮುಪ್ಪಡರಿ ಕುಗ್ಗುವನು |
ಚಣಚಣಕೆ ತನುವು ಬದಲಾಗುತಿಹುದು
ಬದಲಾಗುವುದೆ ತನುಗುಣವು ಮೂಢ ||


ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ? |
ಬಸವಳಿಯದಿರಳಿವ ದೇಹದಭಿಮಾನದಲಿ
ಜೀವರಹಸ್ಯವನರಿತವನೆ ಜ್ಞಾನಿ ಮೂಢ ||


ಜೀವಿಗಳಿವರು ಎಲ್ಲಿಂದ ಬಂದವರು
ಬಂದದ್ದಾಯಿತು ಮತ್ತೆಲ್ಲಿ ಹೋಗುವರು |
ಎಲ್ಲಿಂದ ಬಂದಿಹರಲ್ಲಿಗೇ ಹೋಗುವರು
ಕೆಲದಿನ ನಮ್ಮೊಡನಿರುವರು ಮೂಢ ||


ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||


ಕಾಣಿಸದು ಕಣ್ಣಿಗೆ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೆ ಮೂಢ ||


ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||


ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು
ಆತ್ಮವಿದು ಅಚ್ಚರಿಯು ಹೇಳಲಚ್ಚರಿಯು |
ಕೇಳಲಚ್ಚರಿಯು ಅರಿಯಲಚ್ಚರಿಯು
ಆತ್ಮವನರಿಯದಿಹದಚ್ಚರಿಯು ಮೂಢ ||


ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ
ಜಲವೊಂದಿರಬಹುದು ಜಲದಗುಣ ಭಿನ್ನ |
ಜ್ಯೋತಿಯೊಂದಿರಬಹುದು ಪ್ರಕಾಶ ಭಿನ್ನ
ಭಿನ್ನದೀ ಜಗದಿ ಆತ್ಮವವಿಚ್ಛಿನ್ನ ಮೂಢ ||


     ವೈಯಕ್ತಿಕವಾಗಿ ನಾನೂ ಸಹ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ನನ್ನ ಸಂಬಂಧಿಕರು ಮಾಡಬೇಕೆಂದು ಬಯಸುತ್ತೇನೆ. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ನಾನು ನನ್ನ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ನನ್ನ ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು.

Saturday, May 28, 2011

ವೇದಸುಧೆಯ ಆತ್ಮೀಯ ಅಭಿಮಾನೀ ಬಂಧುಗಳೇ,
ನಮಸ್ತೆ. ನಿಮಗೆಲ್ಲರಿಗೂ ತಿಳಿದಿರುವಂತೆ  ನಮ್ಮ ನಿಮ್ಮೆಲ್ಲರ  ನೆಮ್ಮದಿಯ ಬದುಕಿಗಾಗಿ ಒಂದಿಷ್ಟು ಉತ್ತಮ ವಿಚಾರಗಳನ್ನು ನೀಡುತ್ತಾ , ಸಂದೇಹಗಳು ಬಂದಾಗ ಆರೋಗ್ಯಪೂರ್ಣ ಚರ್ಚೆಮಾಡುತ್ತಾ ವೇದಸುಧೆಯ ಚಟುವಟಿಕೆಗಳು ಆತ್ಮೀಯ ವಾತಾವರಣದಲ್ಲಿ ಸಾಗುತ್ತಿರುವುದು ಸರಿಯಷ್ಟೆ. ಆದರೆ ಒಮ್ಮೊಮ್ಮೆ  ಕೆಲವು ವಿಚಾರಗಳು ಎಲ್ಲರಿಗೂ ಒಪ್ಪಿಗೆ ಯಾಗುವುದಿಲ್ಲ. ಸತ್ಯ ಏನೇ ಇರಲಿ ತಾವು ನಂಬಿದ ವಿಚಾರವನ್ನು ಯಾರಾದರೂ ಖಂಡಿಸಿದಾಗ ಬೇಸರಗೊಂಡು ಕಡೆಗೆ ಚರ್ಚೆ ವೈಯಕ್ತಿಕ ಮಟ್ಟಕ್ಕೆ  ಸಾಗಲು ಅನುವು ಮಾಡುತ್ತದೆ. ಅಂತಹ ಒಂದು ಪ್ರಸಂಗ ವೇದಸುಧೆಯಲ್ಲಿ ನಡೆದಿದೆ. ಆತ್ಮೀಯರಾದ ಶ್ರೀ ಮಹೇಶ್ ನೀರ್ಕಜೆಯವರು ನನಗೆ ಎಸ್,ಎಂ.ಎಸ್. ಮಾಡಿದಾಗ ಅಂತಹ ಪ್ರಸಂಗವು ನನ್ನ ಕಣ್ಣಿಗೆ ಬಿತ್ತು. ಚರ್ಚೆಗಳು ತೀರಾ ವೈಯಕ್ತಿಕ  ಮಟ್ಟಕ್ಕೆ  ಇಳಿದಿದ್ದರಿಂದ ಆ ಎರಡು ಪ್ರತಿಕ್ರಿಯೆಗಳನ್ನು
 ತೆಗೆಯಲಾಗಿದೆ. ವೇದಸುಧೆಯಲ್ಲಿ ನೇರವಾಗಿ ಚರ್ಚೆ ಮಾಡಲು ಅನುಕೂಲವಿರಲೆಂಬ ಕಾರಣಕ್ಕಾಗಿ ಓದುಗರು ಬರೆದ ಪ್ರತಿಕ್ರಿಯೆಗಳನ್ನು ಪರಿಶೀಲಿಸದೆ ಪ್ರಕಟವಾಗಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮುಂದೆ ಈ ಬಗ್ಗೆಯೂ ವೇದಸುಧೆ ಬಳಗವು ಒಂದು ಹೊಸನಿಲುವು ತೆಗೆದುಕೊಳ್ಳಬೇಕಾಗಬಹುದು. ಅಂತೂ ಯಾರೋ ಒಬ್ಬ ಓದುಗರ ಪ್ರತಿಕ್ರಿಯೆಯನ್ನು ಆಧರಿಸಿ ವೇದಸುಧೆಯು ತನ್ನ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲ, ಬದಲಿಗೆ ಬಳಗದ ಹಿರಿಯ ಸದಸ್ಯರೊಡನೆ ಸಮಾಲೋಚಿಸಿ ನಿರ್ಧರಿಸಲಾಗುವುದು.     

ವೇದೋಕ್ತ ಜೀವನ ಪಥ: ಮಾನವಧರ್ಮ - ೫

ಕೇಳಿರಿ:-

ಪರಾ ಯಾಹಿ ಮಘವನ್ನಾ ಚ ಯಾಹೀಂದ್ರ ಭ್ರಾತರುಭಯತ್ರಾ ತೇ ಅರ್ಥಮ್ |
ಯತ್ರಾ ರಥಸ್ಯ ಬೃಹತೋ ನಿಧಾನಂ ವಿಮೋಚನಂ ವಾಜಿನೋ ರಾಸಭಸ್ಯ ||
(ಋಕ್. ೩.೫೩.೫.)


     [ಮಘವನ್] ಓ ಸೌಭಾಗ್ಯಶಾಲಿ, [ಭ್ರಾತಃ] ಸೋದರ, [ಇಂದ್ರ] ಇಂದ್ರಿಯವಾನ್ ಜೀವಾತ್ಮನ್, [ಯತ್ರ] ಎಲ್ಲಿ [ಬೃಹತಃ ರಥಸ್ಯ] ಮಹಾನ್ ಶರೀರದ [ನಿಧಾನಮ್] ಆಶ್ರಯವಿದೆಯೋ [ರಾಸಭಸ್ಯ] ಮೋಕ್ಷಕ್ಕಾಗಿ ಹಾತೊರೆದು ಕೂಗುವ [ವಾಜಿನಃ] ಜ್ಞಾನವಾನ್ ಆತ್ಮನ [ವಿಮೋಚನಮ್] ಮುಕ್ತಿಯಿದೆಯೋ [ಉಭಯತ್ರಾ] ಆ ಎರಡೂ ಕಡೆಗೂ [ತೇ ಅರ್ಥಮ್] ನಿನ್ನ ಹಿತದ ಸಲುವಾಗಿ [ಆ ಯಾಹಿ] ಬಾ [ಚ] ಮತ್ತು [ಪರಾಯಾಹಿ] ಹೋಗು.
      ಭಾವನೆ ಸ್ಪಷ್ಟವಾಗಿದೆ. ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ.
*********************************

Friday, May 27, 2011

ಯೋಚಿಸಲೊ೦ದಿಷ್ಟು...೩೫

೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ!
೨. ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡುವ೦ಥದ್ದು!
೩.ಎಲ್ಲಾ ಶಕ್ಥಿಯೂ ನಿಮ್ಮೊಳಗೇ ಇದೆ.. ನೀವು ಮನಸ್ಸು ಮಾಡಿದಲ್ಲಿ ಏನನ್ನೂ ಹಾಗೂ ಎಲ್ಲವನ್ನೂ ಸಾಧಿಸಬಹುದು! – ಸ್ವಾಮಿ ವಿವೇಕಾನ೦ದ
೪. ಏನೂ ಇಲ್ಲದಿದ್ದಾಗ ನಾವು ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಹಾಗೂ ಎಲ್ಲವನ್ನೂ ಹೊ೦ದಿದ್ದಾಗ ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಎ೦ಬವುಗಳ ಮೂಲಕ ನಮ್ಮ ಜೀವನದ ಯಶಸ್ಸನ್ನು ಪರಿಗಣಿಸಲಾಗುತ್ತದೆ! ( ಹರೀಶ ಆತ್ರೇಯರ ಚರವಾಣಿ ಸ೦ದೇಶ)
೫. ನಾವು ಮೊದಲು ನಮ್ಮನ್ನು ಸ್ನೇಹಿಸಲು ಕಲಿಯಬೇಕು.. ಇತರರೂ ನಮ್ಮನ್ನು ಸ್ನೇಹಿಸತೊಡಗುತ್ತಾರೆ!
೬.ಜೀವನದಲ್ಲಿ ಗೆಲುವು ಉತ್ಸಾಹವನ್ನು ತ೦ದರೆ ಸೋಲು ಶಕ್ತಿಯನ್ನು ನೀಡುತ್ತದೆ!
೭.ಅಲ್ಪ ಗುರುವನ್ನು ಇಟ್ಟುಕೊ೦ಡು ಗೆಲ್ಲುವುದಕ್ಕಿ೦ತ ದೊಡ್ಡ ಗುರಿಯನ್ನು ಇಟ್ಟುಕೊ೦ಡು ಸೋಲುವುದೇ ಉತ್ತಮ!- ರಾಬರ್ಟ್ ಬ್ರೌನಿ೦ಗ್
೮. ಕೆಲಸದ ಆರ೦ಭದಲ್ಲಿ ತೋರುವ ಉತ್ಸಾಹ ಹಾಗೂ ಶ್ರಧ್ಧೆಯನ್ನು ಅ೦ತ್ಯದವರೆಗೂ ಕಾಪಾಡಿಕೊ೦ಡು ಬ೦ದಲ್ಲಿ ಯಾವುದೇ ಕಾರ್ಯದಲ್ಲಿಯೂ ಸೋಲು ಕಾಣಿಸದು.
೯. ಜೀವನ ವೆ೦ಬ ಹೆದ್ದಾರಿಯಲ್ಲಿ ಸೋಲುವುದು ಕಡಿಮೆ.. ತಿರುವುಗಳಲ್ಲಿ ಕಾಲು ಜಾರುವುದೇ ಹೆಚ್ಚು!
೧೦. ಅನೇಕರು ಗೆದ್ದಾಗ ಸೋಲುತ್ತಾರೆ.. ಕೆಲವರು ಸೋತಾಗ ಗೆಲ್ಲುತ್ತಾರೆ!
೧೧. ಸ೦ಸ್ಕೃತಿಯೆ೦ದರೆ ಸ್ವಗುಣ ಹಾಗೂ ಪರಗುಣಗಳ ಮಿಶ್ರಣ!- ಡಿ.ವಿ.ಜಿ.
೧೨. ಬಲಹೀನನು ಸ೦ಪತ್ತನ್ನು ಸೃಷ್ಟಿಸಿದರೆ, ಬಲವ೦ತನು ಅದನ್ನು ನು೦ಗಿ ದಾರಿದ್ರ್ಯವನ್ನು ಹ೦ಚುತ್ತಾನೆ!
೧೩.ಸಮಸ್ಯೆ ಬ೦ದಾಗ ಗಾಬರಿಯಾಗದೆ, ಸೂಕ್ತ ಸಲಹೆಗಳನ್ನು ಪಡೆದಲ್ಲಿ ಸಮಸ್ಯೆಗಳ ನಿವಾರಣೆ ಸಾಧ್ಯ- ಡಿ.ವೀರೇ೦ದ್ರ ಹೆಗ್ಗಡೆ
೧೪. ಅಹ೦ಕಾರ ಕ್ಷಯಿಸಿದ೦ತೆ ನಮ್ಮೊಳಗಿನ ಅಸಮಾಧಾನವೂ ಕ್ಷಯಿಸುತ್ತದೆ. ಲೋಕಕ್ಕೆ ನಮ್ಮಿ೦ದಾಗುವ ಭಾರ ಕಡಿಮೆಯಾಗುತ್ತದೆ. ಜೀವನ ಭಾರವನ್ನು ಹಗುರ ಮಾಡುವ ಯೋಗವೇ “ಸ೦ಸ್ಕೃತಿ“! – ಎಮರ್ ಸನ್
೧೫. “ಅಸಾಧ್ಯತೆ“ಗಳ ಬೆನ್ನುಹತ್ತಿದಾಗಲೇ “ಸಾಧ್ಯತೆ“ ಗಳ ಅರಿವಾಗುವುದು!

ವೇದೋಕ್ತ ಜೀವನ ಪಥ - ಮಾನವಧರ್ಮ - 4

ಋಗ್ವೇದದ ಈ ಮಂತ್ರವನ್ನು ಗಮನಿಸಿರಿ:


ಪ್ರತ್ಯಾನ್ಮಾನಾದಧ್ಯಾ ಯೇ ಸಮಸ್ವರನ್ಶ್ಲೋಕಯಂತ್ರಾಸೋ ರಭಸಸ್ಯ ಮಂತವಃ |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತಃ ||
(ಋಕ್. ೯.೭೩.೬.)


     [ಯೇ] ಯಾರು [ಪ್ರತ್ಯಾತ್ ಮಾನಾತ್ ಅಧಿ] ಶಾಶ್ವತ ಪ್ರಮಾಣವಾದ ವೇದಜ್ಞಾನದ ಆಶ್ರಯದಲ್ಲಿ [ಆ ಸಂ ಅಸ್ವರನ್] ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರು [ಶ್ಲೋಕ ಯಂತ್ರಾಸಃ] ವೇದಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ [ರಭಸಸ್ಯ ಮಂತವಃ] ಸರ್ವಶಕ್ತಿಮಾನ್ ಪ್ರಭುವನ್ನು ತಿಳಿದವರೂ ಆಗುತ್ತಾರೆ. [ಆಪಾನಕ್ಷಾಸಃ] ಜ್ಞಾನದೃಷ್ಟಿಯಿಂದ ಕುರುಡರೂ [ಬಧಿರಾಃ] ಕಿವುಡರೂ ಆದವರು [ಋತಸ್ಯ ಪಂಥಾಮ್] ಋತದ, ಈಶ್ವರೀಯ ವಿಧಾನದ, ಧರ್ಮದ ಮಾರ್ಗವನ್ನು [ಆಹಾಸತ] ತ್ಯಜಿಸುತ್ತಾರೆ. [ದುಷ್ಕೃತಃ] ದುಷ್ಕರ್ಮನಿರತರು [ನ ತರಮತಿ] ಪಾರುಗಾಣುವುದಿಲ್ಲ.

     ವೇದಗಳೇ ಶಾಶ್ವತವಾದ, ಸಾರ್ವಕಾಲಿಕವೂ, ಸಾರ್ವಭೌಮವೂ ಆದ ಸತ್ಯಶಾಶ್ತ್ರಗಳು. ಅದು ಬೋಧಿಸುವ ಮಾರ್ಗ ಋತದ ಮಾರ್ಗ, ಧರ್ಮದ ಮಾರ್ಗ. ವೇದಗಳ ನಿರ್ಮಲಜ್ಞಾನ ಪಡೆದು, ಜ್ಞಾನದಾಯಕ ಮಂತ್ರಗಳ ಮೇಲೆ ಅಧಿಕಾರ ಪಡೆದು, ಪ್ರಭು ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು. ಆದರೆ, ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ, ಮೂಢಜನರು ಋತದ ಮಾರ್ಗವನ್ನು, ಧರ್ಮಪಥವನ್ನು ಬಿಟ್ಟುಬಿಡುತ್ತಾರೆ. ಅ0ತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು. ನಾವು ಈ ಅಧ್ಯಾಯದ ಪ್ರಾರಂಭದಲ್ಲಿಯೇ ಹೇಳಿರುವಂತೆ, ಧರ್ಮದ ಮಾರ್ಗ ಕೇವಲ ಇಹಕ್ಕೆ ಸಂಬಂಧಿಸಿದುದಲ್ಲ, ಕೇವಲ ಪರಕ್ಕೆ ಸಂಬಂಧಿಸಿದುದೂ ಅಲ್ಲ, ಜೀವನಕ್ಕೆ ಎರಡು ಮುಖಗಳಿವೆ, ಒಂದು ಚೇತನಾಂಗ, ಮತ್ತೊಂದು ಜಡಾಂಗ. ಚೇತನಾಂಗಕ್ಕೆ ಅಧ್ಯಾತ್ಮಿಕ ಪೋಷಣೆ ಬೇಕು, ಜಡಾಂಗಕ್ಕೆ ಭೌತಿಕ ಪೋಷಣೆ ಬೇಕು. ಇದರರ್ಥ ಆತ್ಮೋದ್ಧಾರಕ್ಕಾಗಿ ಸಾಧನೆಯನ್ನೂ, ದೇಹಪೋಷಣೆಗಾಗಿ ಲೌಕಿಕ ಕರ್ಮಗಳನ್ನೂ ನಡೆಯಿಸಿಕೊಂಡು ಹೋಗುವಂತಹ ಜೀವನಕ್ರಮವನ್ನು ಅವಲಂಬಿಸಬೇಕು. ಸಾಂಸಾರಿಕಾಭ್ಯುದಯ, ಪಾರಮಾರ್ಥಿಕೋತ್ಕರ್ಷ - ಎರಡನ್ನೂ ಸಾಧಿಸಿಕೊಡುವ ಜೀವನಪಥವೇ ಧರ್ಮ.
****************************************