Pages

Thursday, June 9, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೭

ವೇದಗಳ ದೃಷ್ಟಿಯಲ್ಲಿ ಧಾರ್ಮಿಕರಾದವರನ್ನು ವರ್ಣಿಸುತ್ತಾ ಋಗ್ವೇದ ಹೇಳುತ್ತದೆ:-


ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ |
ಸೋಮಾ ಋತಸ್ಯ ಧಾರಯಾ ||
(ಋಕ್. ೯.೬೩.೪.)


ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |
ಅಪಘ್ನಂತೋ ಅರಾವ್ಣಃ ||
(ಋಕ್. ೯.೬೩.೫.)


ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |
ಇಂದ್ರಂ ಗಚ್ಛಂತ ಇಂದವಃ ||
(ಋಕ್. ೯.೬೩.೬.)


[ಏತೇ ಆಶವಃ ಸೋಮಾಃ] ಈ ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, [ಋತಸ್ಯ ಧಾರಯಾ] ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, [ಹ್ವರಾಂಸಿ ಅತಿ] ಕುಟಿಲ ಭಾವನೆಗಳನ್ನು ದಾಟಿ, ಅಸೃಗ್ರಮ್] ಮುಂದೆ ಸಾಗುತ್ತಾರೆ.
[ಅಪ್ತುರಃ] ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, [ಇಂದ್ರಂ ವರ್ಧಂತಃ] ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, [ವಿಶ್ವಂ ಆರ್ಯಂ ಕೃಣ್ವಂತಃ] ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ.
[ಸುತಾಃ ಬಭ್ರವಃ ಇಂದವಃ] ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, [ಇಂದ್ರಮ ಗಚ್ಛಂತಃ] ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, [ಸ್ವಂ ರಜಃ ಅನು] ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, [ಆ ಅಭಿ ಅರ್ಷಂತಿ] ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.


ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಆದುದರಿಂದ, ಮುಂದಿನ ಅಧ್ಯಾಯದಲ್ಲಿ ಈ ಮೂರು ಧರ್ಮಾಂಗಗಳ ನಿಜವಾದ ಸ್ವರೂಪವನ್ನರಿತುಕೊಳ್ಳೋಣ ಬನ್ನಿ.
************

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

ವೇದಸುಧೆ ಬಳಗದ ಹಾಸನದ ಶ್ರೀ ಹೆಚ್.ಎನ್.ಪ್ರಕಾಶ್ ಅವರು ಒಳ್ಳೆಯ ಹಾಡುಗಾರರು. ಶ್ರೀಯುತರು ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಹಾಡಿದ ಹಾಡು ಜನರನ್ನು ಸೆಳೆದಿತ್ತು. ಈಗ ನೀವೂ ಕೇಳಿ...




HNP

Tuesday, June 7, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೬

     ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ. ಹೀಗೆ ಹೇಳಿದರೆ, ಅದೆಷ್ಟು ಸದ್ಗುಣಗಳಿವೆಯೋ, ಎಷ್ಟನ್ನು ಅವಲಂಬಿಸಿದರೆ ಧರ್ಮವನ್ನು ಮೈಗೂಡಿಸಿಕೊಂಡಂತಾಗುವುದೋ ಯಾರ ಕಲ್ಪನೆಯ ಹಿಡಿತಕ್ಕೂ ಸಿಕ್ಕುವುದಿಲ್ಲ. ಆದುದರಿಂದ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ:


ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |
ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ ||
(ಋಕ್. ೯.೭೩.೮.)

     [ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ, ಧರ್ಮದ ರಕ್ಷಕನು, [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು, [ಹೃದಿ ಅಂತಃ] ತನ್ನ ಹೃದಯದಲ್ಲಿ, [ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು, ಉಪಾಸನೆಗಳನ್ನು, [ಆ ದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು, [ವಿಶ್ವಾ ಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ, ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಆಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಆವ ವಿಧ್ಯತಿ] ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ, ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ.
    ವೇದಗಳ ಸಂದೇಶ ಬಹು ಗಂಭೀರ, ಬಹಳ ಆಳ. ಋತವನ್ನು ಈಶ್ವರೀಯ ವಿಧಾನವಾದ ಧರ್ಮವನ್ನು ಪಾಲಿಸುವವನ ವರ್ಣನೆ ಮಾಡುವಾಗ, ಋಗ್ವೇದ ಆ ಮಹಾಪುರುಷನು ಧರಿಸುವ ಮೂರು ಪವಿತ್ರ ಧರ್ಮಾಂಗಗಳನ್ನು, ಜ್ಞಾನಕರ್ಮೋಪಾಸನಾತ್ರಯವನ್ನು ಸೂಚಿಸುತ್ತದೆ. ಸತ್ಯ, ನ್ಯಾಯ, ದಯೆ, ತ್ಯಾಗ, ಸಂಯಮ, ದಾನ, ಮೈತ್ರಿ, ಅಹಿಂಸೆ ಮೊದಲಾದ ಮಾನವನ ಊಹೆಗಂದಬಹುದಾದ ಸಮಸ್ತ ಆತ್ಮೋದ್ಧಾರಕ ಗುಣಗಳೂ ಜ್ಞಾನ-ಕರ್ಮ-ಉಪಾಸನಾ ಎಂಬ ಮೂರು ಅಂಗಗಳಲ್ಲಿ ಅಡಕವಾಗಿ ಹೋಗುತ್ತವೆ. ಜ್ಞಾನಿ ಅನುದಾರನಾಗಲಾರ, ಸತ್ಕರ್ಮನಿರತನು ರಾಗ-ದ್ವೇಷಗಳಿಗೆ ಸಿಕ್ಕಲಾರನು, ಉಪಾಸಕನು ಯಾರ ವೈರಿಯೂ ಆಗಿರಲಾರನು. ಈ ಮೂರು ಅಂಗಗಳನ್ನೂ ತನ್ನ ಬಾಳಿಗೆ ಹೊಂದಿಸಿಕೊಂಡ ಧನ್ಯಾತ್ಮನು, ತನ್ನ ಸ್ವಂತ ದೌರ್ಬಲ್ಯದಿಂದಲೋ, ಪರರ ಒತ್ತಡದಿಂದಲೋ ಲೋಕಕ್ಕೆ ಅಪ್ರಿಯರಾದ, ವ್ರತಬಾಹಿರರಾದ ಅಧರ್ಮನಿರತರನ್ನು ಕಂಡು ಹೇಸಿಗೆಯಿಂದ ಮೂಗು ಮುರಿಯುವುದಿಲ್ಲ. ತಿರಸ್ಕಾರದಿಂದ ಧಿಕ್ಕರಿಸುವುದಿಲ್ಲ. ಪತನದ ಹಳ್ಳಕ್ಕೆ ಬಿದ್ದವರನ್ನೂ ಕೂಡ ಮೇಲೆತ್ತಿ, ಉತ್ತಮ ಶಾಸನಕ್ಕೆ, ಈಶ್ವರೀಯ ವಿಧಾನಕ್ಕೆ ಅವರೂ ಕೂಡ ತಲೆಬಾಗುವಂತೆ ಮಾಡುತ್ತಾನೆ.
**************

Monday, June 6, 2011

ಯೋಚಿಸಲೊ೦ದಿಷ್ಟು...೩೬

೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ!
೨. ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ.
೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ ಪ್ರಯಾಣದಲ್ಲಿ ಜೊತೆಯಾಗುವ ಸಹ ಪ್ರಯಾಣಿಕರ೦ತೆ!
೪. ನಿದ್ರೆಯಲ್ಲಿ ಕನಸು ಕಾಣುವುದು ಸಾಮಾನ್ಯ.. ನಿದ್ರೆಯಲ್ಲಿ ಕನಸನ್ನು ಕಾಣದಿದ್ದರೆ ಅದು ಸೋಮಾರಿತನ! ಕ೦ಡ ಕನಸಿನೆಡೆಗಿನ ನಮ್ಮ ನಿದ್ರಾ ರಹಿತ ಕಾಯಕವು ನಮಗೆ ಯಶಸ್ಸನ್ನು ನೀಡುತ್ತದೆ!!
೫. ನೋವಿನ ಬಗ್ಗೆ ಹೆಚ್ಚು ಚಿ೦ತಿಸಕೂಡದು .. ನೋವಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊ೦ಡು ಮು೦ದಿನ ಸು೦ದರ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
೬. ಒಳ್ಳೆಯ ಹೃದಯ ಸ೦ತಸದ ನೆಲೆವೀಡೆ೦ದು ಹೇಳಬಹುದಾದರೂ, ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಹೃದಯ ಹೆಚ್ಚು ನೋವನ್ನು ಅನುಭವಿಸುತ್ತದೆ!
೭. ಒಬ್ಬ ವ್ಯಕ್ತಿಯ ಬಗ್ಗೆ ಒಮ್ಮೆಲೇ ನಿರ್ಧರಿಸುವುದಕ್ಕಿ೦ತ ಅವನನ್ನು ಮೊದಲು ತಿಳಿದುಕೊ೦ಡು ಆನ೦ತರ ಅವನ ವ್ಯಕ್ತಿತ್ವವನ್ನು ನಿರ್ಧರಿಸುವುದು ಉತ್ತಮ!
೮. ಹೆಚ್ಚು ಗಳಿಕೆ- ಹೆಚ್ಚು ಬಳಕೆ ಹಾಗೂ ಹೆಚ್ಚು ಉಳಿಕೆಯಿ೦ದ ಯಾವುದೇ ವ್ಯಕ್ತಿ ಶ್ರೀಮ೦ತನಾಗಲಾರ! ಬದಲಾಗಿ ಎಲ್ಲವುದರ ಸಮಪಾಲಿನ ಬಳಕೆಯಿ೦ದಲೇ ಶ್ರೀಮ೦ತನೆನಿಸಿಕೊಳ್ಳುವುದು ( ಯಾವುದರ ಹೆಚ್ಚು ಯಾ ಕಡಿಮೆ ಬಳಕೆ ಮಾಡದಿರುವುದು)
೯. ಸೋಲು ನಿಶ್ಚಿತವೆ೦ದಿದ್ದರೂ ಛಲ ಬಿಡದೆ ಗೆಲುವಿನತ್ತ ಸಾಗುವುದೇ ನಿಜವಾದ ವೀರನ ಲಕ್ಷಣ!
೧೦. ನಮ್ಮ ಒಳ್ಳೆಯತನವೇ ನಮ್ಮ ನಿಜವಾದ ಬ೦ಡವಾಳ! ಬಡ್ಡಿ ಶೀಘ್ರವಾಗಿ ದೊರೆಯದಿದ್ದರೂ ನಿಧಾನವಾಗಿಯಾದರೂ ಪಡೆಯಬಹುದು!
೧೧. ಜೀವನದಲ್ಲಿ ಅತಿ ಹೆಚ್ಚಿನ ಸ್ವಾರ್ಥವು ಕೆಲವೊಮ್ಮೆ ಮೌಲ್ಯಯುತ ನಿರೀಕ್ಷೆಗಳು ವಿಫಲಗೊಳ್ಳುವಲ್ಲಿ ಹಾಗೂ ಮೌಲ್ಯಯುತ ವಸ್ತುಗಳ/ವ್ಯಕ್ತಿಗಳ/ಭಾವನೆಗಳನ್ನು ಕಳೆದುಕೊಳ್ಳುವಲ್ಲಿ ಪರ್ಯಾವಸಾನಗೊಳ್ಳುತ್ತದೆ!
೧೨. ನಾವು ನಮ್ಮ ಪ್ರತ್ಯೇಕತೆಗಳಿ೦ದಲೇ “ಇತರರಿಗಿ೦ತ ಭಿನ್ನರು“ ಎ೦ದು ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ! ದುರದೃಷ್ಟವಶಾತ್ ನಾವು ಯಾವಾಗಲೂ ಇತರರ೦ತಾಗಲು ಪ್ರಯತ್ನಿಸುತ್ತಲೇ ಇರುತ್ತೇವೆ!
೧೩. ಕಳೆದುಕೊಳ್ಳಲು ಬೇರೇನೂ ಉಳಿದಿಲ್ಲವೆ೦ಬುದು ನಮ್ಮ ಕೊನೆಯ ನಿಲುವಾದರೂ... ನಾವು ಕಳೆದುಕೊಳ್ಳುತ್ತಲೇ ಇರುತ್ತೇವೆ!
೧೪. ಹಸಿದ ಹೊಟ್ಟೆಯವನಿಗೆ ಧರ್ಮದ ಕುರಿತು ಉಪನ್ಯಾಸ ನೀಡಿದರೇನೂ ಪ್ರಯೋಜನವಿಲ್ಲ! ಮೊದಲು ಆತನ ಹೊಟ್ಟೆಯ ಹಸಿವನ್ನು ನೀಗಿಸಬೇಕು- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೫. ಸತ್ಯಕ್ಕೆ ಒ೦ದೇ ಮುಖವಲ್ಲ,ಅದಕ್ಕೆ ಅನೇಕ ಮುಖಗಳಿವೆ! ಸತ್ಯದ ಒ೦ದೇ ಮುಖವನ್ನು ಕ೦ಡು “ ಇದು ಇಷ್ಟೇ “ ಎ೦ಬ ನಿರ್ಣಯಕ್ಕೆ ಬರಲಾಗದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

ಸತ್ಸಂಗ

ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ ನಾನು ರಚಿಸಿದ್ದ ಹಾಡುಗಳನ್ನು ಶ್ರೀಮತೀ ಲಲಿತಾ ರಮೇಶ್ ಅವರು ಸುಶ್ರಾವ್ಯವಾಗಿ ಹಾಡಿದರು. ಸ್ವಾಮೀಜಿಯವರು ಹಾಡನ್ನು ತದೇಕಚಿತ್ತದಿಂದ ಆಲಿಸಿದರಲ್ಲದೆ ಹಾಡಿನಲ್ಲಿರುವ ಆಧ್ಯಾತ್ಮಿಕ ಸಂದೇಶದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಿಗ್ಗೆ ಸುಮಾರು ೧೦ಗಂಟೆಯಿಂದ ಒಂದು ಗಂಟೆಗೂ ಮೀರಿ ನಡೆದ ಸತ್ಸಂಗವು ಸಾರ್ಥಕವಾಯ್ತೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿತ್ತು.






ಹಾಸನದ ಶ್ರೀಶಂಕರಮಠದಲ್ಲಿ ವೇದಾಂತ ಸಪ್ತಾಹ

ಹಾಸನದ ಶ್ರೀಶಂಕರಮಠದಲ್ಲಿ ಕಳೆದ ಒಂದುವಾರ ಕಾಲ ವೇದಾಂತ ಸಪ್ತಾಹವು ನಡೆಯಿತು.ಕೇವಲ ನಾಲ್ಕು ದಿನಗಳು ನಾನು ಈ ಪ್ರವಚನಗಳಲ್ಲಿ ಪಾಲ್ಗೊಳ ಲು ಸಾಧ್ಯ ಸಾಧ್ಯವಾಗಿದ್ದು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ಒಂಬತ್ತನೇ ಶ್ಲೋಕದ ಬಗ್ಗೆ ಹೊಳೇನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ಮಾಡಿದ ಪ್ರವಚನದ ಧ್ವನಿಯನ್ನು ಹಾಗೂ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.