Pages

Tuesday, September 13, 2011

ಮಾಯೆ-೩

ಬ್ರಹ್ಮನನು ಅರಿತಿಲ್ಲ.. ನಾ ಬ್ರಾಹ್ಮಣನಲ್ಲಾ..
ಜನಿವಾರವಿಹುದಲ್ಲಾ.. ಅದ ನಾ ಕಿತ್ತೊಗೆದಿಲ್ಲ..
ಸ೦ಸ್ಕಾರವಿದಯ್ಯಾ.. ನಾಮದಲಿ ನಾ ದ್ವಿಜ..
ಸ೦ಸ್ಕಾರದೊಳೂ ಕಾಣುವರು ಬ್ರ್ತಹ್ಮನನು
ಎನ್ನ೦ತರ೦ಗದೇವಾ.. ನಾನಾವ ಬ್ರಾಹ್ಮಣನಯ್ಯ..
ನಿನ್ನರಿಯಲಾಗದವನು...

ಕಣ್ಣಿದ್ದವರೆಲ್ಲಾ ಕಾಣಲಾರರಯ್ಯಾ...
ಬಾಯಿದ್ದವರೆಲ್ಲಾ ಮಾತಾಡರಯ್ಯಾ..
ಆ೦ತರ್ಯದಾ ಚಕ್ಷುಗಳಿ೦ದ ಕಾಣಲು
ನೀನಾರೆ೦ಬುದನು ಅರಿವೆವಯ್ಯಾ..
ಕಣ್ಣಿದ್ದರೂ ಎನಗೆ ಎನ್ನ ರೂಪವು ಕಾಣಿಸದಯ್ಯಾ..
ಎನ್ನ೦ತರ೦ಗದೇವಾ..ನಿನ್ನನ್ನರಿವ ಚಕ್ಷುಗಳ ನೀಡಯ್ಯಾ..

Friday, September 9, 2011

ಯೋಚಿಸಲೊ೦ದಿಷ್ಟು...೪೦

೧. ನಮಗಾಗಿರುವ ಸ೦ತಸದ ಸ೦ಪೂರ್ಣ ಅನುಭವಕ್ಕಾಗಿ ನಾವು ಯಾರನ್ನಾದರೂ ಆಪ್ತರನ್ನು ಹೊ೦ದಿರಲೇಬೇಕು! ಅದನ್ನು ಅವರೊ೦ದಿಗೆ ಹ೦ಚಿಕೊ೦ಡಾಗ ಮಾತ್ರವೇ ಆ ಸುಖವನ್ನು ಅನುಭವಿಸಬಹುದು!!
೨. ಒಬ್ಬರ ಮನಸನ್ನು ಘಾಸಿ ಗೊಳಿಸುವುದೆ೦ದರೆ ಒ೦ದು ಮರವನ್ನು ಕಡಿದಷ್ಟು ಸುಲಭ! ಆದರೆ ಒಬ್ಬರನ್ನು ಸ೦ತಸಗೊಳಿಸುವುದೆ೦ದರೆ ಒ೦ದು ಗಿಡವನ್ನು ನೆಟ್ಟು, ಅದನ್ನು ಮರವನ್ನಾಗಿ ಬೆಳೆಸಿದ೦ತೆ... ಆ ಪ್ರಕ್ರಿಯೆ ಸಾಕಷ್ಟು ಸಮಯವನ್ನು ಬೇಡುತ್ತದೆ!!
೩. ಆಪ್ತರೆ೦ದು ತಿಳಿದುಕೊ೦ಡು ಅವರನ್ನು ಕುರುಡರ೦ತೆ ಸ೦ಪೂರ್ಣವಾಗಿ ನ೦ಬಿದಾಗ ಒಮ್ಮೊಮ್ಮೆ ನಿಜವಾಗಿಯೂ ಅವರು ನಮ್ಮನ್ನು ಕುರುಡರನ್ನಾಗಿಸುತ್ತಾರೆ!!
೪. ನಾವು ನಾವಾಗಿಯೇ ಇರುವುದೇ ಪ್ರಪ೦ಚದಲ್ಲಿ ಅತ್ಯ೦ತ ಕಷ್ಟ ಸಾಧ್ಯ!!
೫. ಗು೦ಪಿನಲ್ಲಿ ನಮ್ಮೊ೦ದಿಗೆ ನಮ್ಮಷ್ಟೇ ವೇಗವಾಗಿ.. ನಮ್ಮ ಧ್ವನಿಯನ್ನಾಲಿಸುತ್ತಾ ನಡೆಯುವರೊ೦ದಿಗೆ ನಡೆಯೋಣ..
೬.ಎಲ್ಲವನ್ನೂ ರಿಯಾಯಿತಿ ದರದಲ್ಲಿ ಕೊಳ್ಳಬಹುದಾದರೂ ಮಾನಸಿಕ ತೃಪ್ತಿಯನ್ನು ಕೊಳ್ಳಲಾಗದು!!
೭. ಕೆಲವು ವ್ಯಕ್ತಿತ್ವಗಳು ಹಾಗೆಯೇ... ಎಷ್ಟೇ ಸ್ವತ: ಸಮಾಜದಿ೦ದ ,ಪರರಿ೦ದ ಯಾತನೆಗಳನ್ನು ಅನುಭವಿಸಿದರೂ ಅವರಿಗಾಗಿ ಒಳಿತನ್ನೇ ಬಯಸುತ್ತಾರೆ!
೮. ಜೀವನವೆ೦ದರೆ ಬಹುಶ: ಹಾಗೆಯೇ.. ನಾವು ನಿರೀಕ್ಷಿಸಿದ ಬಹು ಪಾಲು ಸ೦ಭವಿಸದೇ.. ಸ೦ಭವಿಸುವ ಅನಿರೀಕ್ಷಿತವಾದ ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ!!
೯. ಜೀವನದಲ್ಲಿ ನಾವು ಭೇಟಿಯಾಗಬಹುದಾದ ಜನರಲ್ಲಿ ಸಾಮಾನ್ಯವಾಗಿ ಯಾರೂ ನಮ್ಮನ್ನು ಅರ್ಥೈಸಿಕೊಳ್ಳದೇ, ನಾವು ಮಾತ್ರ ಅವರನ್ನು ಅರ್ಥೈಸಿಕೊಳ್ಳಬೇಕೆ೦ದು ಬಯಸುವವರೇ ಹೆಚ್ಚಿರುತ್ತಾರೆ!!
೧೦. ವೈರಿಗಳ ಸಲಹೆಯನ್ನೂ ತಿರಸ್ಕರಿಸಬಾರದು.. ಒಮ್ಮೊಮ್ಮೆ ಆ ಸಲಹೆಗಳೇ ನಮ್ಮನ್ನು ಸಮಸ್ಯೆಯಿ೦ದ ಮುಕ್ತಗೊಳಿಸಬಹುದಾದ ದಾರಿಯಾಗಿರಬಹುದು!!
೧೧. ಜೀವನ ಅನಿರೀಕ್ಷಿತ ಘಟನೆಗಳ ಸರಮಾಲೆಯೆ೦ದು ತಿಳಿದು, ಸ೦ಭವಿಸುವ ಘಟನೆಗಳೊ೦ದಿಗೆ ಸಾಗುವುದೇ ಬುಧ್ಧಿವ೦ತಿಕೆ!
೧೨.ಜೀವನದಲ್ಲಿ ನಾವು ಕಳೆದ ಸು೦ದರ ರಸ ನಿಮಿಷಗಳ ಮತ್ತೊಮ್ಮೆ ಬರುವುದಿಲ್ಲವಾದರೂ ಸ೦ಬ೦ಧಗಳು ಹಾಗೂ ಕಳೆದುಹೋದ ನೆನಪುಗಳು ಹಾಗೇಯೇ ಉಳಿಯುತ್ತವೆ!!
೧೩. ನಮ್ಮನ್ನು ಮೊದಲು ನಾವು ನ೦ಬಬೇಕು!!
೧೪.ಒಮ್ಮೊಮ್ಮೆ ತೀರಾ ಭಾವುಕರಾದಾಗ... ಕೆಲವೊ೦ದು ಭಾವನೆಗಳು ನಮ್ಮನ್ನು ತೀರಾ ಕುಗ್ಗಿಸಿದಾಗ.. ಏಕಾ೦ತವು ಸಮಾಧಾನ ನೀಡ ಬಲ್ಲುದು.
೧೫, ಜೀವನದಲ್ಲಿ ಸಮಸ್ಯೆಗಳು ಇರುತ್ತವೆ.. ಸಮಸ್ಯೆಗಳನ್ನು ಗೆದ್ದರೆ ನಾವು ನಾಯಕರಾಗಬಹುದು.. ಸೋತರೆ ಮಾರ್ಗದರ್ಶಿಯಾಗಬಹುದು!!- ಸ್ವಾಮಿ ವಿವೇಕಾನ೦ದ

Thursday, September 8, 2011

ವಿಚಾರ ಮಥನ ನಡೆಯಲಿ

     ಅಧ್ಯಯನ, ಶ್ರವಣ, ಮನನ, ವಿಮರ್ಶೆ, ವಿವೇಚನೆ ಇವುಗಳು ಜ್ಞಾನದ ಮೂಲ. ಯಾವುದೇ ಪೂರ್ವಾಗ್ರಹವಿಲ್ಲದ ಚಿಂತನೆ ರೂಢಿಸಿಕೊಂಡರೆ ಸತ್ಯದ ಸಾಕ್ಷಾತ್ಕಾರಕ್ಕೆ ಸಹಕಾರಿ. ವೇದದ ಅರ್ಥ ಮತ್ತು ಉದ್ದೇಶವೂ ಇದೇ ಆಗಿದೆ. ಶ್ರೀ ಶಂಕರಾಚಾರ್ಯರ ವಿವೇಕ ಚೂಡಾಮಣಿ ಕುರಿತು ಶ್ರೀ ಸುಬ್ರಹ್ಮಣ್ಯರವರು ಉತ್ತಮ ಮಾಲಿಕೆ ಆರಂಭಿಸಿದ್ದು ಮಾಲಿಕೆಯ  ಭಾಗ -೯ರಲ್ಲಿ ಈ ರೀತಿ ಹೇಳಿರುವ ಸಂಗತಿ ಇದೆ:


    " ಗುರುವಾದವನು ಬ್ರಹ್ಮನಿಷ್ಠ ಅಥವಾ ಬ್ರಹ್ಮಸಂಪ್ರದಾಯದವನಾಗಿರಬೇಕು ಎಂದು ಹೇಳುತ್ತಾರೆ. ( ಸಮ್ಯಕ್ ಪ್ರಕೃಷ್ಟತಯಾ ದಾಯವರೂಪೇಣ ಸಮಾಗತಮ್ ಇತಿ ಸಂಪ್ರದಾಯಃ = ಚೆನ್ನಾಗಿ, ವಿಶೇಷವಾಗಿ ಬಳುವಳಿ ಅಥವಾ ನಮ್ಮಪಾಲಿಗೆ ಬಂದಿರುವುದೇ ಸಂಪ್ರದಾಯ ). ನಿಷ್ಠೆಯಿದ್ದಲ್ಲಿ ಬ್ರಹ್ಮಜ್ಞಾನದ ಹಾದಿ ಸುಗಮವಾಗುತ್ತದೆ. ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇಡೀ ವ್ಯವಸ್ಥೆಯನ್ನು ಕೀಳಾಗಿ ಅರ್ಥೈಸುವುದು ’ನಿಷ್ಠೆ’ ಎನ್ನುವುದಕ್ಕೆ ವಿರೋಧವಾಗುತ್ತದೆ. ನಮಗೆ ಆರನೆ ತರಗತಿಯಲ್ಲಿ ’ದಯಾನಂದ ಸರಸ್ವತಿಯವರ’ ಕುರಿತು ಪಾಠವೊಂದಿತ್ತು. ದೇವ ನಿಷ್ಠರಾದ ದಯಾನಂದ ಸರಸ್ವತಿಯವರು ಶಿವರಾತ್ರಿಯ ಜಾಗರಣೆಗೆಂದು ಹೋದ ದೇವಾಲಯದಲ್ಲಿ ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಶಿವಲಿಂಗದ ಮೇಲೆ ಇಲಿಗಳು ಓಡಾಡಿದುವಂತೆ. ಅದನ್ನು ಕಂಡ ಸರಸ್ವತಿಗಳು ಹೀಗೆ ಹೇಳುತ್ತಾರೆ " ತನ್ನ ಮೈಮೇಲೆ ಓಡಾಡುವ ಇಲಿಗಳನ್ನು ಓಡಿಸಲಾರದ ಈ ಶಿವ ಜಗತ್ತಿನ ಜೀವಕೋಟಿಯನ್ನು ಹೇಗೆ ತಾನೇ ಕಾಪಾಡಿಯಾನು ?" ಎಂದು. ( ದಯಾನಂದರ ಬಗೆಗೆ ಟೀಕೆ ಮಾಡುವ ಅಥವಾ ಖಂಡನೆ ಮಾಡುವ ಯೋಗ್ಯತೆ ನನಗಿಲ್ಲ. ನನ್ನ ವಿಚಾರವೇನಿದ್ದರೂ ಈ ಒಂದು ವಾಕ್ಯದ ಬಗೆಗೆ ಮಾತ್ರ). ಜಗತ್ತಿನ ಜೀವಕೋಟಿಯಲ್ಲಿ ಪಾಪದ ಇಲಿಯೂ ಸೇರಿದೆ ಎನ್ನುವುದು ಸರಸ್ವತಿಗಳಿಗೆ ಏಕೆ ಹೊಳೆಯಲಿಲ್ಲ ? . ದೇವನಿಷ್ಠರಾಗಿದ್ದಾಗ ಜಡವಾದ ಶಿಲೆಯಲ್ಲೇ ಶಿವನನ್ನು ಕಂಡಿದ್ದ ಸರಸ್ವತಿಗಳಿಗೆ ಜೀವವಿರುವ, ಚೈತನ್ಯಪೂರ್ಣವಾದ ಇಲಿಯಲ್ಲಿ ಶಿವನನ್ನು ಕಾಣಲು ಸಾಧ್ಯವಾಗಲಿಲ್ಲವೇ ?!. ಇದಕ್ಕೆ ಸಾರಸಗಟು ವಿಗ್ರಹಾರಾಧನೆಯನ್ನೇ ಅವರು ತಿರಸ್ಕರಿಸಬೇಕಿತ್ತೇ ?. ಈ ನಿಟ್ಟಿನಲ್ಲಿ ನೋಡಿದರೆ ಆರ್ಯಸಮಾಜದಲ್ಲಿ ಸರಸ್ವತಿಗಳ ಭಾವಚಿತ್ರವನ್ನಿಟ್ಟು ಪೂಜಿಸುವುದೂ, ವೇದಗಳನ್ನು ಹೇಳಿಕೊಂಡು ಹವನ (ಬೆಂಕಿಗೆ ತುಪ್ಪ ಸುರಿಯುವುದು ಎನ್ನೋಣವೇ ?) ಮಾಡುವುದೂ ತಪ್ಪೇ ಆಗುತ್ತದೆ !. ಬ್ರಹ್ಮವಿದ್ಯೆಯ  ಅರಿವಿಗೆ  ನಿಷ್ಠೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ."
     ಈ ಭಾಗದ ಕುರಿತು ನಡೆದ ಚರ್ಚೆ ಹೀಗಿದೆ:

ಕವಿ ನಾಗರಾಜ್ :
ನಮ್ಮ ಪಾಲಿಗೆ ಬಂದಿರುವ ಎಲ್ಲಾ ಸಂಪ್ರದಾಯಗಳೂ ಚೆನ್ನಾಗಿದೆಯೆಂದಾಗಲೀ, ವಿಶೇಷವಾದ ಬಳುವಳಿಯಾಗಿದೆ ಎಂದು ಅನ್ನಿಸುವುದಿಲ್ಲ. ಎಷ್ಟೋ ಸಂಪ್ರದಾಯಗಳು ಹೊಸ ಹೊಸ ರೂಪ/ಕುರೂಪ ತಳೆಯುತ್ತಿವೆ. ವಿಚಾರಕ್ಕೆ ಮಹತ್ವ ಕೊಡದೆ ಕೇವಲ ಆಚಾರಕ್ಕೆ ಮಹತ್ವ ಕೊಡುವ ಪರಿ ಇಂದು ನಾವು ಕಾಣುತ್ತಿದ್ದೇವೆ. 
ಯಾರದೇ ಆಗಲಿ, ಒಂದು ವಾಕ್ಯದ ಮೇಲೆ ಅವರ ಯೋಗ್ಯತೆ ನಿರ್ಧರಿಸಲಾಗುವುದಿಲ್ಲ. ಅದನ್ನು ಹೇಳಿರಬಹುದಾದ ಸಮಯ, ಸಂದರ್ಭಗಳನ್ನೂ ಗಣಿಸಬೇಕಾಗುತ್ತದೆ. ಮಹರ್ಷಿ ದಯಾನಂದ ಸರಸ್ವತಿಯವರು ಇಲಿಯನ್ನು ಜೀವಕೋಟಿಯಿಂದ ಹೊರತಾದದ್ದು ಎಂದು ಭಾವಿಸಿದ್ದಾರೆಂದು ಅರ್ಥೈಸುವುದು ಸರಿಯಾಗಲಾರದು.


ಸುಬ್ರಹ್ಮಣ್ಯ:
ಮಾನ್ಯ ನಾಗರಾಜರೇ,
ದಯಾನಂದ ಸರಸ್ವತಿಯವರ ಕುರಿತಾಗಿ ನೀವು ಹೇಳಿರುವುದು ಸರಿಯಾಗಿಯೇ ಇದೆ. ಅವರೇನೂ ಹಾಗೆ ಭಾವಿಸಿರಲಾರರು ಎಂದು ಅಂದುಕೊಂಡರೂ ಮತ್ತು ಅವರಾಡಿದ್ದ ಮಾತುಗಳು ಸಾಂಧರ್ಭಿಕವೆಂದೇ ತಿಳಿದರೂ ಮುಂದೆ ವಿಗ್ರಹಾರಾಧನೆಯನ್ನೇ ಬಹಿಷ್ಕರಿಸಿ ಆರ್ಯಸಮಾಜವು ನಡೆದ ದಾರಿ ತಿಳಿದೇ ಇದೆಯಲ್ಲಾ(ಇಂದಿಗೂ) !. ದಯಾನಂದ ಸರಸ್ವತಿಯವರನ್ನೂ ಶಂಕರರಿಗೇ ಹೋಲಿಸುವುದನ್ನೂ ತಿಳಿದಿದ್ದೇನೆ. ಮಹಾಜ್ಞಾನಿಗಳು ಅವರು, ಅವರ ವಿಚಾರಗಳನ್ನು ನಾನು ಖಂಡಿಸುತ್ತಿಲ್ಲ ( ಆ ಯೋಗ್ಯತೆಯೂ ನನಗಿಲ್ಲ ) ಬದಲಾಗಿ ಇಲಿಗಳು ಓಡಾಡಿದ್ದೇ ಒಂದು ನೆಪವಾಯಿತೇ ಎನ್ನುವುದು ನನ್ನ ಜಿಜ್ಞಾಸೆ ಅಷ್ಟೆ.
ನಿಮ್ಮ ಆಸಕ್ತಿಗೆ, ವೈಚಾರಿಕತೆಗೆ ಧನ್ಯವಾದಗಳು.
ಕವಿ ನಾಗರಾಜ್ :
ವಿಗ್ರಹಾರಾಧನೆ ಸರಿಯಲ್ಲವೆಂದು ಪ್ರತಿಪಾದಿಸುವವರ ಪ್ರಧಾನ ಅಂಶ ದೇವರು ನಿರಾಕಾರನೆಂಬುದೇ ಆಗಿದೆ. ಇದಕ್ಕೆ ಅವರು ಕೊಡುವ ಕಾರಣಗಳೂ ತಳ್ಳಿಹಾಕುವಂತಹುದಲ್ಲ. ಈ ಕುರಿತು ಪ್ರತ್ಯೇಕ ಜಿಜ್ಞಾಸೆ/ಚರ್ಚೆ ಮಾಡಬಹುದು. ಹಿಂದೆಯೂ ಆಗಿದೆ. ಮುಂದೆಯೂ ಮುಂದುವರೆಸೋಣ. ನಿಮ್ಮ ಲೇಖನಮಾಲೆಯಲ್ಲಿ ಈ ಅಂಶ ಒಳಗೊಳ್ಳುವುದು ವಿಹಿತವಲ್ಲ. ಈ ಭಾಗವನ್ನು ಈ ಲೇಖನದಿಂದ ಕೈಬಿಡುವುದು ಸೂಕ್ತವೆನಿಸೀತು. ಏಕೆಂದರೆ ಇಂತಹ ಚರ್ಚೆ ಈ ಲೇಖನದ ಅಡಿಯಲ್ಲಿ ಮುಂದುವರೆಯುವುದು ಸರಿಯಾಗಲಾರದು.
ಸುಬ್ರಹ್ಮಣ್ಯ:
ಮಾನ್ಯ ನಾಗರಾಜರೆ,
ದೇವರನ್ನು ಸೀಮಿತ ಮಾಡಿಕೊಂಡು ನೋಡುವುದರಿಂದ ಆಗುವ ಎಡವಟ್ಟುಗಳು ಇವು. ನನ್ನ ಲೇಖನದಲ್ಲಿ ’ಬ್ರಹ್ಮವಿದುತ್ತಮ್’ ಎನ್ನುವುದಕ್ಕೆ ಪೂರಕವಾಗಿ ಉದಾಹರಣೆಯನ್ನು ಬರೆಯುವಾಗ ನನಗೆ ನೆನಪಿದ್ದ ಶಾಲೆಯ ಪಠ್ಯದಲ್ಲಿದ್ದ ಈ ವಾಕ್ಯವನ್ನು ಹಾಕಿದೆ ಅಷ್ಟೆ. ನೀವು ಹೇಳಿದಂತೆ ಇದಕ್ಕೆ ಪ್ರತ್ಯೇಕ ಚರ್ಚೆಯನ್ನೇ ನೆಡೆಸುವುದು ಒಳಿತು. 
ಇನ್ನು ಸಂಪ್ರದಾಯದ ವಿಷಯವಾಗಿ ಹೇಳುವುದಾದರೆ , ವಿವೇಕಚೂಡಾಮಣಿಯಲ್ಲಿ ಪ್ರಸ್ತಾವಿರುವುದು ಅಧಿಕಾರಿಯು ಬ್ರಹ್ಮಸಂಪ್ರದಾವಿತ್ ಆಗಿರಬೇಕು ಎಂಬ ಹಿನ್ನಲೆಯಲ್ಲಿ ಸಂಪ್ರದಾಯ ಎನ್ನುವುದನ್ನು ಬಳಸಲಾಗಿದೆ. ಇದು ಜನರಲ್ ಸಂಪ್ರದಾಯಗಳಲ್ಲ. 
ವಿವೇಕ ಚೂಡಾಮಣಿಯನ್ನು ಆತ್ಮಜ್ಞಾನದ ನೆಲೆಗಟ್ಟಿನಲ್ಲಷ್ಟೇ ನೋಡಬೇಕಾಗುತ್ತದೆ. ಇಲ್ಲದಿದ್ದರೆ ಗೊಂದಲಮಯವಾಗುತ್ತದೆ. 
ನಿಮ್ಮ ಪ್ರೋತ್ಸಾಹಕಾರಕ ನುಡಿಗಳಿಗೆ ನಾನು ಆಭಾರಿ.


ನನ್ನ ಅನಿಸಿಕೆ: [ದೇವರನ್ನು ಸೀಮಿತ ಮಾಡಿಕೊಂಡು ನೋಡುವುದರಿಂದ ಆಗುವ ಎಡವಟ್ಟುಗಳು ಇವು.] ನನ್ನ ಭಾವವೂ ಇದೇ. ಆದರೆ ಸೀಮಿತ ಅನ್ನುವುದು ಯಾವುದು ಎಂಬುದೂ ಚರ್ಚಾರ್ಹ. ಜಿಜ್ಞಾಸುಗಳು ಅರ್ಥ ಮಾಡಿಕೊಳ್ಳಬಲ್ಲರು. ಅದರೆ ಅರ್ಥ ಮಾಡಿಕೊಳ್ಳದೆ ಮಾಡುವ ಆಚರಣೆಗಳು ಕುರುಡು ಸಂಪ್ರದಾಯಗಳಾಗಿ ಮುಂದುವರೆಯುವ ಅಪಾಯವನ್ನೂ ಅರಿಯಬೇಕು.
ದಯಾನಂದ ಸರಸ್ವತಿಯವರು ಹೇಳಿದ ಮಾತು ಅವರ ಬಾಲ್ಯಕಾಲದಲ್ಲಿ ಎಂದು ತಿಳಿದಿದ್ದೇನೆ. ವಿಚಾರ ಮಾಡುವ ಪ್ರವೃತ್ತಿ ಅವರಿಗೆ ಚಿಕ್ಕಂದಿನಿಂದಲೇ ಬಂದಿತ್ತು. ಅವರ ಈ ಮಾತಿನ ಉಲ್ಲೇಖದಿಂದ ಈ ಚರ್ಚೆಗೆ ಕಾರಣವಾಗಿದ್ದು ವಿಚಾರಮಥನದಿಂದ ಸತ್ಯ ತಿಳಿಯುವಲ್ಲಿ ಸಹಕಾರಿಯಾಗಲಿ.


ಸನ್ಮಾನ್ಯ ವೇದಸುಧೆಯ ಓದುಗರು ಈ ಕುರಿತು ಸುಯೋಗ್ಯ ಚರ್ಚೆ, ಜಿಜ್ಞಾಸೆ ಮಾಡಲಿ, ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಕೋರುವೆ. ಯಾವುದೇ ದೂಷಣೆ, ನಿಂದೆಗಳಿಗೆ ಅವಕಾಶವಿಲ್ಲ. ಖಂಡನೆಗಿಂತ ಮಂಡನೆಗೆ ಆದ್ಯತೆ ಇರಲಿ ಎಂದು ಬಿನ್ನಹ.
-ಕ.ವೆಂ.ನಾಗರಾಜ್.
---------------------------
ನನ್ನ ಅನಿಸಿಕೆ :


ನೇರವಾಗಿ ಹೇಳಬೇಕೆಂದರೆ ಇಲ್ಲಿ ಚರ್ಚೆ ನಡೆಯುವುದೆಂದರೆ ದಯಾನಂದ ಸರಸ್ವತಿಯವರ  ಆರ್ಯ ಸಮಾಜಬಗ್ಗೆಯೇ ನಡೆಯಬೇಕಾಗುತ್ತದೆ. ಮೂರ್ತಿ ಪೂಜೆ ಬೇಕೇ? ಬೇಡವೇ? ಇದೇ ವಿಚಾರ. ಈ ಬಗ್ಗೆ ನನ್ನ ಸ್ಪಷ್ಟ ಅಭಿಪ್ರಾಯ ತಿಳಿಸಿ ಬಿಡುವೆ. ನಾನೀಗಾಗಲೇ ವೇದಸುಧೆಯಲ್ಲಿಯೇ ಪ್ರಸ್ತಾಪಿಸಿರುವಂತೆ ನನ್ನ ಹಿಂದಿನ ಒಂದು ಘಟನೆ ನೆನಪು ಮಾಡುವುದು ಅನಿವಾರ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಬೀಡಿ -ಬೆಂಕಿಪೊಟ್ಟಣದ ಮೇಲಿರುತ್ತಿದ್ದ ದೇವರ ಚಿತ್ರಗಳನ್ನು  ಅತ್ಯಂತ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಂಡು ಜೋಪಾನವಾಗಿ ತೆಗೆದಿಡುತ್ತಿದ್ದೆ. ಹೀಗೆ ಮಾಡುತ್ತಾ ಮಾಡುತ್ತಾ ನಮ್ಮ ಮನೆಯಲ್ಲಿ ಅದೊಂದು ದೊಡ್ದ ಸಂಗ್ರಹವೇ ಆಗಿ ತಲೆನೋವಾಯ್ತು. 
ಮುಂದಿನ ಹೆಜ್ಜೆ.ವಿಗ್ರಹಗಳ ಮೇಲಿನ ಶ್ರದ್ಧೆ. ಕಂಡಕಂಡ ವಿಗ್ರಹಗಳಿಗೆಲ್ಲಾ ಕೈ ಮುಗಿದು ಅಡ್ದ ಬಿದ್ದಿದ್ದಾಯ್ತು. ನಂತರ ನಿತ್ಯ ಪೂಜಾ ಕ್ರಮ. ಇಲ್ಲಿ ನೋಡಿ ಸ್ವಲ್ಪ ದ್ವಂದ್ವ ಶುರುವಾಯ್ತು. ಹತ್ತಾರು ವರ್ಷ ನಿತ್ಯ ಪೂಜೆ ಮಾಡಿತ್ತಿದ್ದ ನನಗೆ ಒಂದು ದಿನ ಪುಟ್ಟ ಪುಟ್ಟ ವಿಗ್ರಹಗಳಿಗೆ ಅಭಿಶೇಕ ಮಾಡುವಾಗ ಮನದಲ್ಲಿ ಮೂಡಿ ಬಂದ ವಿಚಾರ ತಿಳಿಸಿ ಬಿಡುವೆ" ಅರೇ, ಈ ಪುಟ್ಟಬೊಂಬೆಗಳಿಗೆ ಅಭಿಶೇಕ ಮಾಡುತ್ತಿದ್ದೀನಲ್ಲಾ! ತಕ್ಷಣ ನಾನು ಚಿಕ್ಕ ವಯಸ್ಸಿನಲ್ಲಿ ಹಂಚಿಪಕರೆ,ಮಣ್ಣಿನಲ್ಲಿ ಮಾಡಿದ ಪಾತ್ರೆಗಳನ್ನು ಇಟ್ಟುಕೊಂಡು ಆಡುತ್ತಿದ್ದ ದಿನಗಳು ನೆನಪಾಯ್ತು. ಕೂಡಲೇ ಪೂಜೆಯನ್ನು ಅಷ್ಟಕ್ಕೇ ಮುಗಿಸಿದೆ. ಪೂಜಾಗೃಹದಲ್ಲೇ ಕಣ್ಮುಚ್ಚಿ ಕುಳಿತೆ. ಮುಂದೆ ಹಲವಾರು ವರ್ಷಗಳು ಹೀಗೇ ನಡೆದು ಬಂತು. ಕೊನೆಗೆ ಅಗ್ನಿಹೋತ್ರದ ಪರಿಚಯವಾಯ್ತು. ಈಗ ಹಲವಾರು ದಿನಗಳಿಂದ ರೆಗ್ಯುಲರ್ ಆಗಿ ಅಗ್ನಿಹೋತ್ರ ಮಾಡುತ್ತಿರುವೆ. ಅದರಿಂದ ನೆಮ್ಮದಿ ಇದೆ.

ಯಾಕಾಗಿ ಇಷ್ಟೆಲ್ಲಾ ಪುರಾಣ ಹೇಳಿದೆ ನೆಂದರೆ [ಬಹುಷ: ಪುರಾಣ ಹೀಗೆಯೇ ಹುಟ್ಟಿರಬೇಕು] ವಯಸ್ಸಾದಂತೆಲ್ಲಾ ಹಂತಹಂತವಾಗಿ ಪ್ರೌಢಿಮೆ ಬರುವುದು ಸಹಜ. ಕೆಲವರು ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲೂ ಏಳು ವರ್ಷದ ಮಕ್ಕಳ ಮನೋಭಾವ ಹೊಂದಿರುತ್ತಾರೆ. ಕೆಲವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಎಪ್ಪತ್ತರ ಅನುಭವ ಪಡೆದವರಂತಿರುತ್ತಾರೆ. ಇಷ್ಟೆ!!
ಪೂರ್ತಿ ಪೂಜೆ ಮಾಡುವುದು ಬಿಡುವುದು ಅವರವರ ಮನೋಭಾವ. ಆದರೆ ಸಾಮಾನ್ಯವಾಗಿ ಇಲ್ಲಿ[ವೇದಸುಧೆಗೆ] ಬಂದವರೆಲ್ಲಾ ಭಗವಂತನಲ್ಲಿ ಅತ್ಯಂತ ಶ್ರದ್ಧೆ ಹೊಂದಿದವರೇ ಆಗಿರುತ್ತಾರೆ. ಈ ಕುರಿತು ಚರ್ಚೆ ಮಾಡಲು ಸಿದ್ಧರಿರುವುದಿಲ್ಲ. ಆದರೆ ನಾಗರಾಜ್ ರಂತವರಾಗಲೀ ಸುಬ್ರಹ್ಮಣ್ಯ ರಂತವರಾಗಲೀ ಬರೆದದ್ದನ್ನು ಶ್ರದ್ಧೆಯಿಂದ ಓದುತ್ತಾರೆ. ಆದರೆ  ಪ್ರತಿಶತ ಒಬ್ಬರಿಗೂ ಚರ್ಚೆ ಮಾಡುವ ಸ್ವಭಾವ ಇರುವುದಿಲ್ಲ. ವೇದಸುಧೆಯ ಒಂದುವರೆ ವರ್ಷದ ಅನುಭವವಿದು. ನಾವು ಹೇಳಬೇಕೆಂದಿದ್ದನ್ನು       ಹೇಳಿ ಬಿಡೋಣ.ಅಷ್ಟೆ.ನಮ್ಮ ಹಲವು ಆಚರಣೆಗಳನ್ನು ಎಷ್ಟು ಕುರುಡಾಗಿ ಆಚರಿಸುತ್ತೇವೆಂದರೆ ಮೊನ್ನೆ ನಡೆದ ಗೌರಿಹಬ್ಬದ ಮೊರದಜೊತೆಯಲ್ಲಿ ಮಂಗಲ ದ್ರವ್ಯಗಳನ್ನು ಕೊಡುವಾಗ ಉಪಯೋಗಿಸಲು ಸಾಧ್ಯವಾಗದ ಬಳೆ ಬಿಚ್ಚೋಲೆಗಳು, ಕನ್ನಡಿ ಬಾಚಣಿಗೆಗಳು, ಅರಿಶಿನ ಕುಂಕುಮದ ಪೊಟ್ಟಣಗಳು[ ಕೇವಲ  ಬಣ್ಣಗಳು  ]ಇವನ್ನೆಲ್ಲಾ ಎಲ್ಲರೂ ನೋಡಿಲ್ಲವೇ? ಮಂಗಳ ದ್ರವ್ಯಗಳ ಪಾವಿತ್ರ್ಯವಾಗಲೀ ಸದುಪಯೋಗವಾಗಲೀ ಅಲ್ಲಿದೆಯೇ? ಕೆಲವರು " ನಮ್ಮ ಮನೆಯಲ್ಲಿ ಇದನ್ನೆಲ್ಲಾ ಸದುಪಯೋಗವಾಗುವಂತೆಯೇ ಹಬ್ಬದ ಆಚರಣೆ ಮಾಡುತ್ತೇವೆಂದು ಬೊಗಳೆ ಬಿಡಬಹುದು. ಆದರೆ ನಾನು ಪ್ರತೀ ವರ್ಷ ಹತ್ತಾರು ಮನೆಗಳಲ್ಲಿ ನೂರಾರು ಮಹಿಳೆಯರು ಮಂಗಳ ದ್ರವ್ಯಗಳ ಪಾವಿತ್ರ್ಯ ಅರಿಯದೆ ಮಕ್ಕಳಾಟದಂತೆ ಕುರುಡಾಗಿ ಆಚರಿಸುವುದನ್ನು ಕಂಡು ತಿಳುವಳಿಕೆ ಹೇಳಿ ಅದಕ್ಕೆ ಬೆಲೆ ಸಿಗದಿದ್ದಾಗ   ನೊಂದು  ಕೊಂಡಿದ್ದೇನೆ. ಹೀಗಾದರೂ ನಾಲ್ಕು ಜನರಿಗೆ ತಿಳಿಯಲೆಂದು ಇಲ್ಲಿ ಸೂಕ್ತವೋ ಅಸೂಕ್ತವೋ ವಿಚಾರವನ್ನು ಹರಿಬಿಟ್ಟಿದ್ದೇನೆ.

ಅಂತಿಮವಾಗಿ ನನ್ನ ಅನಿಸಿಕೆ: ಸಮಾಜದ ಬಗ್ಗೆ /ಭಗವಂತನ ಬಗ್ಗೆ ಶ್ರದ್ಧೆ ಇರುವಂತವರು ಸಾಧ್ಯವಾದಷ್ಟೂ ಧಾರ್ಮಿಕ ಆಚರಣೆಯ ಹೆಸರಲ್ಲಿ ನಡೆಯುವ ಮಕ್ಕಳಾಟವನ್ನು ಆಚರಿಸುವಂತವರಿಗೆ ಮನದಟ್ಟು ಮಾಡಲು ಪ್ರಯತ್ನಿಸಬೇಕು. ಆದರೆ ನಾನು ಭಾರೀ ದೊಡ್ದವನೆಂಬ ಅಹಂ ಇರಬಾರದು ಅಷ್ಟೆ. ಇಷ್ಟಾದರೂ ಹಲವಾರು ಆಚರಣೆಗಳ ಒಳಮರ್ಮ ನಮಗೆ ಅರಿವಾಗದಿರಬಹುದು.ನಾವು ಕೆಲವೆಡೆ ಸೋಲಲೂ ಬಹುದು. 
-ಹರಿಹರಪುರ ಶ್ರೀಧರ್ 


Wednesday, September 7, 2011

ವಿವೇಕ ಚೂಡಾಮಣಿ - ಭಾಗ -೧೦


ಗ್ರಂಥದ ಮುಂದುವರಿದ ಭಾಗ:-

साधनान्यत्र चत्वारि कथितानि मनीषिभिः ।
येषु सत्स्वेव सन्निष्ठा यदभावे न सिध्यति ॥१८॥

ಸಾಧನಾನ್ಯತ್ರ ಚತ್ವಾರಿ ಕಥಿತಾನಿ ಮನೀಷಿಭಿಃ |
(= ಆತ್ಮವಿದ್ಯೆಯ ಸಾಧನಗಳು ನಾಲ್ಕು)
ಯೇಷು ಸತ್ಸ್ವೇವ ಸನ್ನಿಷ್ಠಾ ಯದಭಾವೇ ನ ಸಿಧ್ಯತಿ ||೧೮||
(= ಸಾಧನಗಳಿದ್ದರೆ (=ಏವ) ಸಾಧನೆಯು ಸಾಧ್ಯ, ಇಲ್ಲದಿದ್ದರೆ ಇಲ್ಲ)

ವಿಚಾರದಿಂದಲೇ ಜ್ಞಾನ ಎನ್ನುವುದನ್ನು ಈಗಾಗಲೇ ತಿಳಿದಿದ್ದೇವೆ. ಆತ್ಮವಿದ್ಯೆಯ ಸಿದ್ಧಿಗೆ ಇರುವ ಸಾಧನಗಳು ನಾಲ್ಕು . ಹೆಚ್ಚೆಂದರೂ ಇಷ್ಟೆ ಕಡಿಮೆಯೆಂದರೂ ಇಷ್ಟೆ ಎನ್ನುವುದು ಸೂಚಿತ. ನಾಲ್ಕು ಸಾಧನಗಳಿದ್ದರೆ ಆತ್ಮವಿದ್ಯೆಯು ಸಿದ್ಧಿಸುತ್ತದೆ ಮತ್ತು ಇವು ಇಲ್ಲದಿದ್ದರೆ ಸಿದ್ಧಿಯೂ ಇಲ್ಲ ಎಂಬರ್ಥದದಲ್ಲಿ ಹೇಳುತ್ತಾರೆ. ಇದೊಂದು ರೀತಿಯ ವ್ಯಾವರ್ತಕ ನಿಯಮ ಎನ್ನಬಹುದು. ಪಾಯಸಕ್ಕೆ ಮೆಣಸಿನಕಾಯಿ ಒಗ್ಗರಣೆ ಹಾಕುವುದು ಪಾಯಸದ ತಯಾರಿಕೆಯ ಸಾಧನಗಳಲ್ಲಿ ಇಲ್ಲ, ಹಾಗೂ ಒಗ್ಗರಣೆ ಹಾಕಿದರೆ ಪಾಯಸದ ಸಾಂಪ್ರದಾಯಿಕ ರುಚಿಯು ಕೆಡುತ್ತದೆ !. ಇಲ್ಲೂ ಕೂಡ ಇರುವುದು ನಾಲ್ಕೇ ಸಾಧನಗಳು. ಇದೇ ಕನಿಷ್ಠ ಮತ್ತು ಗರಿಷ್ಠ ಎನ್ನುವುದು ಸೂಚಿತ.
’ಮನೀಷಿಭಿಃ’ ಎಂಬಲ್ಲಿ ವೇದಜ್ಞಾನವುಳ್ಳವರು (ಶ್ರುತಿತಾತ್ಪರ್ಯ ಜ್ಞಾನವುಳ್ಳವರು) ಎಂದು ತಿಳಿಯಬೇಕು ಎನ್ನುವುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ.  ಶ್ರುತಿಯ ಅವಲಂಬನೆಯಿಲ್ಲದೆ ಸಾಧಕರಿಗೆ ನಾಲ್ಕು ಸಾಧನಗಳ ವಿಚಾರವನ್ನು ತಿಳಿಯುವುದು ಮತ್ತು ಅನುಸರಿಸುವುದು ಕಷ್ಟ ಎಂಬರ್ಥದಲ್ಲಿ ಹೇಳಿರುತ್ತಾರೆ.
’ಏವ’ ಎಂದು ಹೇಳುವುದರ ಮೂಲಕ ಯಾರಿಗೆ ಸಾಧನ ಚತುಷ್ಟಯಗಳ ಸಾಧನೆ ಇರುವುದೋ ಆತನೇ ಆತ್ಮಾಭ್ಯಾಸಕ್ಕೆ ಅರ್ಹನು ಎಂದು ತಿಳಿಸುತ್ತಾರೆ.  ಸಾಧನಗಳಿಲ್ಲದಿದ್ದರೆ ಸಾಧನೆಯೂ ಇಲ್ಲ ಎಂದು ಅರ್ಥ.

ಮುಂದೆ ಸಾಧನ ಚತುಷ್ಟಯವನ್ನು ನಿರೂಪಿಸುತ್ತಾರೆ

आदौ नित्यानित्यवस्तुविवेकः परिगण्यते ।
इहामुत्रफलभोगविरागस्तदनन्तरम् ।
शमादिषट्कसम्पत्तिः मुमुक्षु्त्वमिति स्फुटम् ॥१९॥

ಆದೌ ನಿತ್ಯಾನಿತ್ಯವಸ್ತುವಿವೇಕಃ ಪರಿಗಣ್ಯತೇ |
(= ಶಾಶ್ವತ (ಉಳಿಯುವ) ಮತ್ತು ಕ್ಷಣಿಕ (ಅಳಿಯುವ) ವಸ್ತುಗಳ ವಿವೇಕವು)
ಇಹಾಮುತ್ರಫಲಭೋಗ ವಿರಾಗಸ್ತದನಂತರಮ್ |
(=ಇಹಪರಗಳಲ್ಲಿನ ಆಸೆಯ ಮೇಲಿನ ಅನಾಸಕ್ತಿ )
ಶಮಾದಿ ಷಟ್ಕ ಸಂಪತ್ತಿರ್ಮುಮುಕ್ಷುತ್ವಮಿತಿ ಸ್ಫುಟಮ್ ||೧೯||
(= ಶಮವೇ ಮೊದಲಾದ ಆರು ಗುಣಗಳು ಮತ್ತು ಮೋಕ್ಷಾಪೇಕ್ಷೆಯು)

ಆತ್ಮಾಭ್ಯಾಸಕ್ಕೆ ಮೊದಲಾಗುವ ಮುನ್ನ ಇರಬೇಕಾದ ಅರ್ಹತೆಗಳನ್ನು ತಿಳಿದುಕೊಂಡೆವು. ಅರ್ಹತೆಯನ್ನು ಸಂಪಾದಿಸಿಕೊಂಡ ನಂತರ ಸಾಧನೆಗೆ ಮೊದಲಾಗುವಾಗ ನಾಲ್ಕು ಸಾಧನಗಳು ಅರಿವು ಇರಬೇಕಾಗುತ್ತದೆ. ಅರಿತುಕೊಂಡ ನಂತರ ಅನುಸರಿಸಬೇಕಾಗುತ್ತದೆ. ಸತತ ಅನುಸರಣೆಯಿಂದ ಆತ್ಮಜ್ಞಾನವು ಸಿದ್ಧಿಸುತ್ತದೆ. ಹೊಲವನ್ನು ಉಳುಮೆ ಮಾಡಲು ನೇಗಿಲು, ಎತ್ತು ಮುಂತಾದ ಸಾಧನಗಳು ಬೇಕಾಗುತ್ತವೆ. ಉತ್ತುವ ಬಗೆಯನ್ನು ತಿಳಿದಿದ್ದೇನೆ ಹಾಗಾಗಿ ಬೆಳೆಯು ತಂತಾನೇ ಹುಲುಸಾಗಿ ಬಂದು ಬಿಡುತ್ತದೆ ಎನ್ನುವುದು ಮೂಳತನವಾಗುತ್ತದೆ.  ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸಿಕೊಂಡು ಉತ್ತಿ ಬಿತ್ತಿದಾಗ ಬೆಳೆಯು ಬರುತ್ತದೆ.
ಹಾಗೆ ಇಲ್ಲಿಯೂ ಆತ್ಮಾಭ್ಯಾಸಕ್ಕಾಗಿ ನಾಲ್ಕು ಸಾಧನಗಳನ್ನು ಹೇಳಿರುತ್ತಾರೆ. ಅವು ಹೀಗಿವೆ
೧) ನಿತ್ಯಾನಿತ್ಯವಸ್ತುವಿವೇಕ
೨) ಇಹಾಮುತ್ರಫಲಭೋಗ ವೈರಾಗ್ಯ
೩) ಶಮದಮಾದಿ ಷಟ್ಕ ಸಂಪತ್ತಿ
೪) ಮುಮುಕ್ಷುತ್ವ

ಇಲ್ಲಿಂದ ಮುಂದೆ ಒಂದೊಂದಾಗಿ ಸಾಧನಗಳ ವಿಶಿಷ್ಟತೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಮೊದಲಿಗೆ ’ನಿತ್ಯಾನಿತ್ಯವಸ್ತುವಿವೇಕ’.

ब्रह्मसत्यं जगन्मिथ्येत्येवं रूपो विनिश्चयः ।
सोऽयं नित्यानित्यवस्तुविवेकः समुदाहृतः॥२०॥

ಬ್ರಹ್ಮಸತ್ಯಂ ಜಗನ್ಮಿಥ್ಯೇತ್ಯೇವಂ ರೂಪೋವಿನಿಶ್ಚಯಃ।
(=ಬ್ರಹ್ಮವು ಸತ್ಯ ಮತ್ತು ಜಗತ್ತು ಮಿಥ್ಯೆ )
ಸೋಽಯಂ ನಿತ್ಯಾನಿತ್ಯವಸ್ತುವಿವೇಕಃ ಸಮುದಾಹೃತಃ||೨೦||
(= ಇದೇ ನಿತ್ಯಾನಿತ್ಯವಸ್ತುವಿವೇಕವು)

ಆತ್ಮಜ್ಞಾನವೇ (ನಾನು ಮತ್ತು ನನ್ನ ದೈವ ಒಂದೇ ಎನ್ನುವ ಅನುಭವ - ಸುನಾಥ) ’ಬ್ರಹ್ಮ’ ಎಂದು ತಿಳಿದುಕೊಂಡಿದ್ದೇವೆ. ಇಂತಹ ಬ್ರಹ್ಮವೊಂದೇ ಸತ್ಯ, ಇನ್ನುಳಿದ ಜಗತ್ತು ಮಿಥ್ಯೆ (ಸತ್ಯವಲ್ಲದ್ದು) ಎಂಬ ಅದ್ವೈತ ತತ್ವವನ್ನು ಶ್ರೀ ಶಂಕರರು ಈ ಶ್ಲೋಕದಲ್ಲಿ ನಿರೂಪಿಸುತ್ತಾರೆ. ಇಂತಹ ಬ್ರಹ್ಮಭಾವವೇ ನಿತ್ಯಾನಿತ್ಯವಸ್ತುವಿವೇಕ ಎನ್ನುತ್ತಾರೆ.
ಬ್ರಹ್ಮವು ಸತ್ಯ ಮತ್ತು ನಿತ್ಯ (ಹುಟ್ಟು ಸಾವುಗಳ ಗೊಡವೆಯಿಲ್ಲದ್ದು) ಎನ್ನುವುದನ್ನು ದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳೂ ಮಾನ್ಯಮಾಡುತ್ತವೆ. ಆದರೆ, ಜಗತ್ತು ಅನಿತ್ಯವಲ್ಲ ಅದೂ ಸಹ ಸತ್ಯವಾದುದು ಎಂದು ದ್ವೈತಸಿದ್ಧಾಂತವು ಹೇಳುತ್ತದೆ.
" ಈ ಜಗತ್ತು ಹಿಂದೆ ಯಾವ ಕಾಲದಲ್ಲಿಯೂ ಯಾವ ದೇಶದಲ್ಲಿಯೂ ಯಾರಿಗೂ ಬಾಧಿತವಾಗಲಿಲ್ಲ ಮುಂದೆಯೂ ಆಗಲಾರದು. ಆದುದರಿಂದ ಜಗತ್ತು ನಿತ್ಯವೂ ಅಬಾಧಿತವೂ ಆಗಿದೆ " ಎಂದು ದ್ವೈತ ಸಿದ್ಧಾಂತದಲ್ಲಿ ಶ್ರೀ ಮಧ್ವಾಚಾರ್ಯರು ಭೇದವನ್ನು ಪ್ರತಿಪಾದಿಸುತ್ತಾರೆ. ಒಂದು ಪ್ರಸಿದ್ಧವಾದ ಶ್ಲೋಕದಲ್ಲಿ *(೧) ಮಧ್ವಾಚಾರ್ಯರ ತತ್ವವು ಬಹಳ ಚೆನ್ನಾಗಿ ಹೇಳಲ್ಪಟ್ಟಿದೆ. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲದಿದ್ದರೂ
  " ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ " ಎನ್ನುವ ಅದ್ವೈತವನ್ನು ಬಿಟ್ಟು ಎಲ್ಲವೂ ಶ್ರೀ ಹರಿಯೇ , ಅವನೊಬ್ಬನೇ ಶೇಷಿ ಮಿಕ್ಕದ್ದೆಲ್ಲಾ ಶೇಷ ಎಂದು ಹೇಳುತ್ತಾರೆ. ದ್ವೈತದಲ್ಲಿಯೂ ಸಹ ’ ಹರಿ ಸರ್ವೋತ್ತಮ’ ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ. ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ. ಇಲ್ಲಾದರೂ ಸಹ ನಾವು ಶಂಕರರ ತತ್ವವನ್ನೇ ಕಾಣಬಹುದಾಗಿರುತ್ತದೆ. ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ ( ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ ’ಜಗತ್ತು’ ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ. ಇದು ನಿತ್ಯ ಅದು ಅನಿತ್ಯ ಎನ್ನುವ ಪೃಥಃಕರಣ ಎನ್ನಬಹುದು. (ಅರ್ಜುನನ ಗುರಿಯು ಪಕ್ಷಿಯ ಅಕ್ಷಿಯೊಂದೇ ಆಗಿದ್ದಾಗ ಉಳಿದ ಅಂಗಗಳೆಲ್ಲಾ ಆತನಿಗೆ ನಿಮಿತ್ತವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು).
ಬ್ರಹ್ಮವು ಸತ್ಯ ಎಂದು ಮೊದಲೇ ಹೇಳಿಬಿಡುವುದರಿಂದ ಆತ್ಮಜ್ಞಾನವನ್ನು ಪಡೆಯಬೇಕೆಂಬ ಆಸಕ್ತನ ಆಸಕ್ತಿಯು ಇಮ್ಮಡಿಯಾಗುತ್ತದೆ ಎಂಬ ಸೂಕ್ಷ್ಮ ಸಂವೇದನೆಯನ್ನು ಇಟ್ಟುಕೊಂಡು ಶ್ರೀ ಶಂಕರರು ಸಾಧನ ಚತುಷ್ಟಯದಲ್ಲಿ ನಿತ್ಯಾನಿತ್ಯವಿವೇಕವನ್ನು ಮೊದಲಿಗೆ ಸೇರಿಸಿದ್ದಾರೆ ಎನ್ನಬಹುದು. ’ಪರಿಗಣ್ಯತೇ’ ಎಂದು ವಿಶೇಷವಾಗಿ ಹೇಳಿರುವುದನ್ನು ಗಮನಿಸಬಹುದಾಗಿರುತ್ತದೆ. ಪುಸ್ತಕವೊಂದು ಓದಲು ಚೆನ್ನಾಗಿದೆ ನಾಳೆಯಿಂದ ಓದೋಣ ಎಂದು ಕೊಂಡಿದ್ದವನಿಗೆ ಅವನ ಹತ್ತು ಮಂದಿ ಗೆಳೆಯರು ’ಆ ಪುಸ್ತಕ ತುಂಬಾ ಚೆನ್ನಾಗಿದೆ’ ಎಂದು recommend ಮಾಡಿದರೆ ಆತನು ನಾಳೆ ಬಿಟ್ಟು ಇಂದಿನಿಂದಲೇ ಓದಲು ಮೊದಲಾಗಬಹುದು !.
ಆತ್ಮನೇ ಪರಮಾತ್ಮ ಎನ್ನುವ ಧೃಡನಿಶ್ಚಯವು ಬಂದು ಬಿಟ್ಟರೆ ಮುಂದೆ ಅನುಭವದಿಂದ ತಿಳಿಯಲು ಆಸಕ್ತಿಯೂ ಹೆಚ್ಚುತ್ತದೆ ಅನುಕೂಲವೂ ಆಗುತ್ತದೆ ಎಂಬ ಭಾವವನ್ನು ’ಬ್ರಹ್ಮಸತ್ಯಂ’ ಎನ್ನುವುದರಲ್ಲಿ ಕಾಣಬಹುದು.

ಮುಂದೆ ’ಜಗತ್ತು ಮಿಥ್ಯೆ’ ಎಂದು ಹೇಳುತ್ತಾರೆ. ಜಗತ್ತು ಯಾರಿಗೆ ಬಾಧಿತವಾಗದಿದ್ದರೂ ಸಹ ಅದು ಇದ್ದಂತೆ ಇರುವುದಿಲ್ಲ. ’ಜಗತ್ತು’ ಎನ್ನುವಾಗ ಜಗತ್ತಿನಲ್ಲಿರುವ ಎಲ್ಲಾ ಜೀವ-ಜಡ ವಸ್ತುಗಳನ್ನೂ ಗಣಿಸಬೇಕಾಗುತ್ತದೆ. ಜೀವ-ಜಡವಸ್ತುಗಳಿಂದಲೇ ಜಗತ್ತು ಎನ್ನುವುದು ವಿಜ್ಞಾನವೂ ಆಗಿರುವಾಗ ಒಂದನ್ನು ಬಿಟ್ಟು ಮತ್ತೊಂದು ಇರಲಾರದು ಎನ್ನುವುದು ತಿಳಿಯುತ್ತದೆ. ಆದರೆ, ಅದ್ಯಾವುದೂ ಶಾಶ್ವತವಲ್ಲ ಎನ್ನುವುದು ವಾಸ್ತವ ಮತ್ತು ಸತ್ಯ !. ’ಬದಲಾವಣೆಯೇ ಜಗದ ನಿಯಮ’ ಎಂಬ ಗೀತಾವಾಕ್ಯದಿಂದಲೆ ಜಗತ್ತು ಅನಿತ್ಯ ಎನ್ನುವುದು ನಿಶ್ಚಯವಾಗುತ್ತದೆ.  ’ಅನಿತ್ಯ’ ಎನ್ನುವುದೇನೋ ಸರಿ ಆದರೆ, ಮಿಥ್ಯೆ ಎನ್ನುವುದು ಎಷ್ಟು ಸರಿ ? ಎಂಬ ಪ್ರಶ್ನೆಯು ಬರುತ್ತದೆ.
ಆತ್ಮಾಭ್ಯಾಸಿಯು ಅನಿತ್ಯವಾದ ಜಗತ್ತನ್ನು ನೆಚ್ಚಿ ಕುಳಿತರೆ ತನ್ನ ಪರಮಾರ್ಥದ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದು. ಆತನ ಲಕ್ಷ್ಯವೇನಿದ್ದರೂ ಬ್ರಹ್ಮದೆಡೆಗೆ ಮಾತ್ರ ಇರಬೇಕಾಗುತ್ತದೆ. ಹೀಗೆ ಗಟ್ಟಿಯಾಗುತ್ತಾ ಸಾಗಿದಂತೆ ಮೊಟ್ಟಮೊದಲ ವೈರಾಗ್ಯವು(=ಅನಾಸಕ್ತಿ, ತಟಸ್ಥ ಭಾವ) ಹುಟ್ಟುತ್ತದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವವನು ಅದನ್ನು ವಾಸ್ತವದಲ್ಲಿ ಬಯಸುತ್ತಾನೆಯೇ ಹೊರತು ಕೇವಲ ಕನಸಿನಲ್ಲಿ ಕಂಡು ತೃಪ್ತನಾಗುವುದಿಲ್ಲ !. ಮಿಥ್ಯಾಪ್ರಂಪಚದ ಗೊಡವೆಯಿಂದ ಪರಮಾರ್ಥ ಚಿಂತನೆಯು ಸಾಧ್ಯವಾಗುವುದಿಲ್ಲ ಎಂಬ ಭಾವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳಬಹುದು.
"ವೈರಾಗ್ಯವು ತಪ್ಪದೆ ಹುಟ್ಟುವುದಕ್ಕಾಗಿ ಬ್ರಹ್ಮವು ನಿತ್ಯ ಜಗತ್ತು ಅನಿತ್ಯ ಎಂದು ಹೇಳದೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯೆ ಎಂದು ಹೇಳಿದ್ದಾರೆ " ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ವಿವರಣೆ.
’ವಿನಿಶ್ಚಯಃ’ (=ಸರಿಯಾದ , ವಿಶೇಷವಾದ ತಿಳುವಳಿಕೆ) ಎಂಬ ವಿಶೇಷಣದ ಮೂಲಕ ಆತ್ಮಾಭ್ಯಾಸಿಯು ನಿತ್ಯಾನಿತ್ಯವಿವೇಕವನ್ನು  ಧೃಡವಾಗಿ ನಿಶ್ಚಯಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸಿರುತ್ತಾರೆ.
ಇಂತಹ ನಿತ್ಯಾನಿತ್ಯವಿವೇಕವೆ ವೈರಾಗ್ಯಕ್ಕೆ ಕಾರಣ ಎಂಬುದನ್ನು ’ಸಮ್-ಉದಾಹೃತಃ’ ಎಂಬಲ್ಲಿ ’ಸಮ್’ ಎಂಬ ಉಪಸರ್ಗದಿಂದ ಸೂಚಿಸಿರುತ್ತಾರೆ.

ವಿವೇಕ ಚೂಡಾಮಣಿಯ ಆಂತರ್ಯವು ನಾವು ಇದೀಗ ತಿಳಿದುಕೊಂಡ ಶ್ಲೋಕದಲ್ಲಿ ಚೆನ್ನಾಗಿ ಒಡಮೂಡಿದೆ ಎನ್ನಬಹುದು. ’ಸರ್ವಕರ್ಮ ಸನ್ಯಾಸ-ವೈರಾಗ್ಯ-ಮುಮುಕ್ಷುತ್ವ-ಬ್ರಹ್ಮಭಾವ’ ಇವುಗಳು ಈ ಗ್ರಂಥದ ಮೂಲೋದ್ದೇಶ ಎನ್ನುವುದು ಇಲ್ಲಿ ಕಂಡುಬರುತ್ತದೆ. ಕೆಲವರು ’ಕೇವಲ ಸನ್ಯಾಸಿಗಳಿಗಾಗಿಯೇ ಈ ಗ್ರಂಥವಿರುವುದು, ಇದರಿಂದ ಬದುಕಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳುವುದನ್ನು ಕೇಳಿದ್ದೇನೆ. ಅವರಿಗಾಗಿ ಒಂದು ಮಾತು.
ಬದುಕುವುದಕ್ಕೆ ಜಗತ್ತಿನಲ್ಲಿ ಬೇಕಾದಷ್ಟು ಜಾಗವಿದೆ, ಮಾಡುವುದಕ್ಕೆ ಕೆಲಸವೂ ಇದೆ. ಅಂತಹವರು ಅವರವರ ಕೆಲಸಗಳನ್ನು ಮಾಡಿಕೊಂಡು ಬದುಕು ನೆಡೆಸಿಕೊಳ್ಳಬಹುದು. ಶ್ರೀ ಶಂಕರ ಭಗವತ್ಪಾದರೇನೂ ಎಲ್ಲರಿಗೂ ಮೋಕ್ಷವನ್ನು ಕೊಟ್ಟುಬಿಡುತ್ತೇನೆಂದು ಎಲ್ಲಿಯೂ ಬರೆದುಕೊಟ್ಟಿಲ್ಲ. ಬಂದವರಿಗೆ, ಆಸಕ್ತರಿಗೆ ಮಾತ್ರವೇ ಈ ಗ್ರಂಥದ ಉಪಯೋಗವಿರುವುದು ಎಂದು ಹೇಳಬೇಕಾಗುತ್ತದೆ.

ಒಬ್ಬರು ಬಹಳ ದೊಡ್ಡ ಪಂಡಿತರಿದ್ದರಂತೆ. ಎಲ್ಲವನ್ನು ತಿಳಿದುಕೊಂಡಿದ್ದ ಅವರನ್ನು ಮೀರಿಸುವವರು ಯಾರೂ ಇರಲಿಲ್ಲವಂತೆ. ಆದರೂ, ಕಾಶಿಯ ಪಂಡಿತರೊಡನೆ ಜಯ ಸಾಧಿಸದೆ ಸಾಧನೆಯು ಅಪೂರ್ಣ ಎಂಬ ಮಾತನ್ನು ಕೇಳಿದ ಪಂಡಿತರು ಕಾಶಿಗೆ ಹೋಗಿ ಮತ್ತಷ್ಟು ವಿದ್ಯೆಯನ್ನು ಕಲಿತು ಅಲ್ಲಿಯ ಪಂಡಿತರನ್ನು ಸೋಲಿಸಿ ತಮ್ಮ ಊರಿಗೆ ಮರಳಿದರಂತೆ. ಒಮ್ಮೆ ಊರಿನಲ್ಲಿದ್ದ ಒಬ್ಬ ಸಾಧಾರಣ ಮುದುಕ ಸಂತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಪಂಡಿತರು ಉತ್ತರಿಸಲಾಗದೆ ಪರಾಭವ ಹೊಂದಿ ನಂತರ ಆ ಪ್ರಶ್ನೆಗೂ ಉತ್ತರ ಪಡೆಯಲೋಸುಗ ಮತ್ತೆ ಕಾಶಿಗೆ ತೆರಳಿದರಂತೆ. ನಾಲ್ಕೈದು ವರುಷಗಳ ಕಾಲ ಕಾಶಿಯಲ್ಲಿ ತಂಗಿದ್ದು ಇನ್ನಷ್ಟು ವಿದ್ಯೆಯನ್ನು ಕಲಿತು ಉತ್ತರವನ್ನು ಕಂಡುಕೊಂಡು ಊರಿಗೆ ಮರಳಿದರಂತೆ. ಅವರು ಬರುವಷ್ಟರಲ್ಲಿ ಪ್ರಶ್ನೆ ಹಾಕಿದ್ದ ಸಂತರು ತೀರಿಕೊಂಡಿದ್ದರಂತೆ !. ಉತ್ತರವನ್ನು ಯಾರಿಗೂ ಹೇಳಲಾಗದೆ ಪಂಡಿತರು ಬೇಸರಪಟ್ಟುಕೊಂಡರಂತೆ. ಆದರೇನು ? ಆ ನೆಪದಲ್ಲಿ ಇನ್ನಷ್ಟು ಕಲಿತುಕೊಂಡಿದ್ದು ಅವರಿಗೆ ಪ್ರಯೋಜನವೇ ಆಯಿತಲ್ಲಾ !. ಇಲ್ಲಿ ಮುಖ್ಯವಾಗಿ ಕಾಣುವುದು commitment ಎನ್ನುವುದು. ವಿರಾಗಿಗಳಾಗುದಕ್ಕೋಸ್ಕರವೇ ತಿಳಿಯಬೇಕೆಂದೇನೂ ಇಲ್ಲ ಅಥವಾ ತಿಳಿದಾಕ್ಷಣ ಯಾರೂ ವಿರಾಗಿಗಳಾಗುವುದೂ ಇಲ್ಲ !. ಜಿಜ್ಞಾಸೆಯು (= ಅರಿತುಕೊಳ್ಳಬೇಕೆಂಬ ಬಯಕೆ) ಎಲ್ಲಕ್ಕಿಂತ ಮುಖ್ಯವಾದುದು ಮತ್ತು ಮಾನ್ಯವಾದುದು ಎಂದು ಹೇಳಬಹುದು.

ಮುಂದಿನ ಕಂತಿನಲ್ಲಿ "ಇಹಾಮುತ್ರಫಲಭೋಗವೈರಾಗ್ಯ"ದ ವಿಚಾರವನ್ನು ತಿಳಿಯೋಣ.

------------------------------------------------------

ಟಿಪ್ಪಣಿ:-

*(೧)
ಮಧ್ವಾಚಾರ್ಯರ  ಒಂಬತ್ತು  ತತ್ವವಿರುವ ಪ್ರಸಿದ್ಧ ಶ್ಲೋಕ

ಶ್ರೀಮನ್ಮಧ್ವಮತೇ ಹರಿಃ ಪರತರೋ ಸತ್ಯಂ ಜಗತ್ತತ್ವತೋ
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಛಭಾವಂ ಗತಾಃ |
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||

---------------------------------

ವಂದನೆಗಳೊಂದಿಗೆ....

Tuesday, September 6, 2011

ವಿನಂತಿ

ನನ್ನ ಮನೆಯ ನಿರ್ಮಾಣದ ಕೆಲಸಗಳ ಒತ್ತಡದಿಂದ ಇನ್ನೆರಡು ತಿಂಗಳುಗಳಕಾಲ ನಾನು ವೇದಸುಧೆಯಲ್ಲಿ ಹೆಚ್ಚು  ಪ್ರಕಟಿಸಲಾರೆ. ಬರುವ ನವಂಬರ್ ೨ ಮತ್ತು ೩ ರಂದು ಗೃಹಪ್ರವೇಶ ನಿಮಿತ್ತ ಕೆಲವು ಕಾರ್ಯಕ್ರಮಗಳು ನಿಶ್ಚಯವಾಗಿದೆ . ವೇದಸುಧೆಯಲ್ಲಿಪ್ರಕಟಿಸುವೆ. ವೇದಸುಧೆಯ ಅಭಿಮಾನಿಗಳು ನನ್ನೊಡನಿರಬೇಕೆಂದು ವಿನಂತಿಸುವೆ.
-ಹರಿಹರಪುರಶ್ರೀಧರ್ 

Sunday, September 4, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೮:


     ಉಪಾಸನಾ -  ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ. ಆಲಿಸಿರಿ:-


ಯುಂಜತೇ ಮನ ಉತ ಯುಂಜತೇ ಧಿಯೋ ವಿಪ್ರಾ ವಿಪ್ರಸ್ಯ ಬೃಹತೋ ವಿಪಶ್ಚಿತಃ |
ವಿ ಹೋತ್ರಾ ದಧೇ ವಯುನಾವಿದೇಕ ಇನ್ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ ||
(ಯಜು. ೩೭.೨.)


     [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ [ವಿಪಶ್ಚಿತಃ] ವಿದ್ವಾಂಸರು [ಬೃಹತಃ ವಿಪ್ರಸ್ಯ] ಮಹಾನ್ ಹಾಗೂ ವಿಶಿಷ್ಟ ಪ್ರಜ್ಞನಾದ ಪ್ರಭುವಿನಲ್ಲಿ [ಮನಃ ಯುಂಜತೇ] ಮನಸ್ಸನ್ನು ನಿಲ್ಲಿಸುತ್ತಾರೆ. [ಉತ] ಹಾಗೆಯೇ [ಧಿಯಃ ಯುಂಜತೇ] ಬುದ್ಧಿಗಳನ್ನು ನಿಲ್ಲಿಸುತ್ತಾರೆ. [ಏಕ ಇತ್ ವಯುನಾವಿತ್] ಏಕಮಾತ್ರ ಪಥಜ್ಞನೂ, ಲೋಕಜ್ಞನೂ ಆದ ಪ್ರಭುವು [ಹೋತ್ರಾ] ಸಂಯೋಗಜನ್ಯವಾದ ನಾನಾ ಜಗತ್ತುಗಳನ್ನು [ವಿದಧೇ] ವಿವಿಧ ರೀತಿಯಲ್ಲಿ ಧರಿಸಿದ್ದಾನೆ. [ಸವಿತುಃ ದೇವಸ್ಯ] ಜಗದುತ್ಪಾದಕ ಹಾಗೂ ಪ್ರೇರಕನಾದ, ಸರ್ವದಾತೃ, ಪ್ರಕಾಶಸ್ವರೂಪ ಭಗವಂತನ, [ಪರಿಸ್ತುತಿಃ ಮಹೀ] ಉನ್ನತ ಸ್ತುತಿ ಮಹತ್ತಾದುದು. 


     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗೆಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ.
***************