Pages

Friday, April 9, 2010

ಸ್ವಂತ ಬುದ್ಧಿ


ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ

ಶಾಸ್ತ್ರಂ ತಸ್ಯ ಕರೋತಿ ಕಿಂ|

ಲೋಚನಾಭ್ಯಾಂ ವಿಹೀನಸ್ಯ

ದರ್ಪಣಂ ಕಿಂ ಕರಿಷ್ಯತಿ||

ಸ್ವಂತ ಬುದ್ಧಿ ಇಲ್ಲದವನಿಗೆ ಶಾಸ್ತ್ರಗಳಿಂದ ಏನೂ ಲಾಭವಿಲ್ಲ. ಕಣ್ಣೇಇಲ್ಲದವನಿಗೆ ಕನ್ನಡಿಯಿಂದೇನು ಪ್ರಯೋಜನ?
ಸ್ವಂತ ಬುದ್ಧಿ ಇರಲೇ ಬೇಕಲ್ಲವೇ? ಅನೇಕ ವೇಳೆ ಶಾಸ್ತ್ರಗಳಿಂದ ಸಂದೇಹಗಳೇ ಹೆಚ್ಚಾದೀತು. ಆಗ ಸ್ವಂತ ವಿವೇಚನೆ ಮಾತ್ರ ನೆರವಾಗಬಲ್ಲದು.

Thursday, April 8, 2010

ಹೊಸಬೆಳಕು

ವೇದಾಭಿಮಾನಿಗಳಲ್ಲಿ ವಿನಮ್ರ ವಿನಂತಿ. ವೇದಸುಧೆಯು ಆರಂಭವಾಗಿರುವುದೇ ಎಲ್ಲರಿಗಾಗಿ ವೇದ ಎಂಬ ಉದ್ಧೇಶದೊಡನೆ. ವೇದಾಧ್ಯಾಯೀ ಸುಧಾಕರಶರ್ಮರೇ ಇದಕ್ಕೆ ಪ್ರೇರಣೆ. ಶರ್ಮರು ಇದೇ ಉದ್ಧೇಶ ಹೊಂದಿರುವ "ಹೊಸಬೆಳಕು " ಎಂಬ ಒಂದು ದಾರಾವಾಹಿಯ ತಯಾರಿಯಲ್ಲಿದ್ದುದರಿಂದ ಅವರಿಂದ ಬರಹಗಳು ಹೆಚ್ಚು ಪ್ರಕಟವಾಗಲಿಲ್ಲ. ಅವರ ಕೆಲವು ವೀಡಿಯೋ ಗಳನ್ನು ಹಾಕಲಾಗಿದೆ ಮತ್ತು ಬಿನ್ ಫೈರ್ ಡಾಟ್ ಕಾಮ್ ನಲ್ಲಿ ಪೇರಿಸಿರುವ ಶರ್ಮರ ಉಪನ್ಯಾಸದ ವಿವರಗಳನ್ನು " ದ್ವನಿಮುದ್ರಿತ ಉಪನ್ಯಾಸಗಳು ಮಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಅಲ್ಲಿಂದಲೇ ನೀವು ಬಿನ್ಫೈರ್ ಡಾಟ್ ಕಾಮ್ ಪ್ರವೇಶಿಸಿ ಉಪನ್ಯಾಸಗಳನ್ನು ಆಲಿಸಬಹುದು.ಹೊಸಬೆಳಕು ದಾರಾವಾಹಿಯ ವಿವರಗಳು ವೇದಸುಧೆಯಲ್ಲೂ ಪ್ರಕಟವಾಗಲಿದೆ. ಯಾರೇ ವೇದ ವಿದ್ವಾಂಸರ ಬರಹಗಳಿಗೂ ವೇದಸುಧೆಯಲ್ಲಿ ಸ್ವಾಗತವಿದೆ.ಬರಹಗಳನ್ನು ವೇದಸುಧೆಗೆ ಮೇಲ್ ಮಾಡಬಹುದು.
ಇಂದು ಶರ್ಮರು ದೂರವಾಣಿಯ ಮೂಲಕ ವೇದಸುಧೆಯನ್ನು ಸಂಪರ್ಕಿಸಿ ಓದುಗರಿಂದ ಏನೇ ಸಂದೇಹಗಳಿದ್ದರೂ ಉತ್ತರಿಸುವುದಾಗಿ ಪುನ: ಒತ್ತಿ ಹೇಳಿದ್ದಾರೆ. ಆದ್ದರಿಂದ ವೇದಗಳ ಬಗ್ಗೆ ಪ್ರಶ್ನೆಗಳನ್ನು ನೀವು vedasudhe@gmail.com ಗೆ ಮೇಲ್ ಕಳುಹಿಸುವುದರ ಮೂಲಕ ಕೇಳಬೇಕಾಗಿ ವಿನಂತಿ.

ದುರ್ಜನರೊಂದಿಗೆ ಸ್ನೇಹ


ದುರ್ಜನೇನ
ಸಮಂ ಸಖ್ಯಂ

ವೈರಂ ಚಾಪಿ ನಕಾರಯೇತ್|
ಉಷ್ಣೋ ದಹತಿ ಚಾಂಗಾರ:

ಶೀತ: ಕೃಷ್ಣಾಯತೇ ಕರಂ||
ದುರ್ಜನರೊಂದಿಗೆ ಸ್ನೇಹವನ್ನಾಗಲೀ ವೈರವನ್ನಾಗಲೀಮಾಡಕೂಡದು.

ಉರಿವ ಕೆಂಡ ಕೈಸುಟ್ಟರೆ, ತಣ್ಣಗಿನ ಇದ್ದಿಲು ಕೈಯನ್ನುಕಪ್ಪು ಮಾಡುತ್ತದೆ .

Wednesday, April 7, 2010

ಋಣ

ನನ್ನ ಕವನದ ಒಂದು ಸಾಲು ಹೀಗಿದೆ- "ಜಗಕೆಲ್ಲ ಬೆಳಕ ಕೊಡುವಂತ ರವಿಗೆ ನಾನೆಂಬ ಗರ್ವವಿಲ್ಲ| ಹಗಲೆಲ್ಲ ದುಡಿದು ಕತ್ತಲೆಯ ರಾತ್ರಿಯಲಿ ರವಿ ಮಾಯಾದನಲ್ಲ"
ನಮ್ಮನ್ನೆಲ್ಲಾ ಹೊತ್ತಿರುವ ಭೂಮಿಯು ಎಂದೂ ನಿಮ್ಮನ್ನೆಲ್ಲಾ ಹೊತ್ತಿರುವವಳು ನಾನೇ ಎಂದು ಜಂಬ ಪಡಲಿಲ್ಲ, ಅಂತೆಯೇ ಸೂರ್ಯನೂ ಕೂಡ, ಜಗತ್ತಿಗೇ ಬೆಳಕು ಕೊಟ್ಟರೂ ಅಹಂಕಾರ ಪಡಲಿಲ್ಲ. ಆದರೆ ನಮ್ಮ ಬಗೆಗೆ ಇದೇ ಪ್ರಶ್ನೆ ಹಾಕಿಕೊಂಡರೆ " ಆ ಬಡ ಹುಡುಗನಿಗೆ ಪೆನ್ಸಿಲ್ ತೆಗೆದು ಕೊಟ್ಟಿದ್ದು ನಾನೇ ಎಂದು ಟಾಮ್-ಟಾಮ್ ಮಾಡುತ್ತೇವೆ. ಆದರೆ ಯಾರೋ ಪುಣ್ಯಾತ್ಮ ಇಡೀ ವರ್ಷ ಊಟಹಾಕಿದ್ದರೂ ತಾನು ಊಟ ಹಾಕಿದೆ ಎಂದು ಹೇಳಿಕೊಂಡು ತಿರುಗುವುದಿಲ್ಲ. ಆದರೆ ಯಾವುದೋ ಒಂದು ಚಿಕ್ಕ ಸಹಾಯ ಮಾಡಿದರೂ ಅದಕ್ಕೆ ಬಣ್ಣ ಕಟ್ಟಿ ಪ್ರಚಾರ ಗಿಟ್ಟಿಸಲು ಯತ್ನಿಸುತ್ತೇವೆ.
ಒಂದು ದೇವಾಲಯ. ಯಾರೋ ಪುಣ್ಯಾತ್ಮ ಜೀರ್ಣೋದ್ಧಾರ ಮಾಡಿದ್ದಾನೆ.ಅವನ ಹೆಸರು ಯಾರಿಗೂ ಗೊತ್ತಿಲ್ಲ, ಕಾರಣ ಅವನ ಹೆಸರು ಕೆತ್ತಿಸಲೇ ಇಲ್ಲ. ಆದರೆ ಆ ದೇವಾಲಯಕ್ಕೆ ಒಂದು ನಾಮ ಫಲಕ ಹಾಕಿದ್ದಾರೆ. ಅದರ ಕೆಳಗೆ ಪ್ರಥಮ ದರ್ಜೆ ಗುತ್ತಿಗೆ ದಾರರಾದ ದುಗ್ಗಪ್ಪನವರ ಸೇವಾರ್ಥ-ಎಂದು ದೊಡ್ಡದಾಗಿ ಬರೆದಿದೆ. ನೋಡಿದವರು ದೇವಸ್ಥಾನ ಕಟ್ಟಿಸಿದ ಪುಣ್ಯಾತ್ಮ ಇವನೇ ಇರಬೇಕು, ಎಂದುಕೊಳ್ಳುತ್ತಾರೆ. ಆದರೆ ದೇವಾಲಯಕ್ಕೆ ಒಂದು ಬೋರ್ಡ್ ಬರೆಸಿದವನು ಈತ ನೆಂಬ ಸತ್ಯ ಹಲವರಿಗೆ ತಿಳಿಯುವುದೇ ಇಲ್ಲ. ಅದಕ್ಕಿಂತ ನಾಚಿಕೆಗೇಡಿನ ಇನ್ನೊಂದು ಉದಾಹರಣೆಯನ್ನೂ ಕಂಡೆ. ದೇವಾಲಯದ ಒಂದು ಫೋಟೋ ವನ್ನು ಗರ್ಭಗೃಹದ ಮುಂದೆ ಹಾಕಿದ್ದಾರೆ. ಅದರಲ್ಲಿ ಬಹಳ ದೊಡ್ಡ ಅಕ್ಷರಗಳಲ್ಲಿ ನಮ್ಮ ಕಣ್ಣಿಗೆ ರಾಚುವುದು" ಕೊಡುಗೆ: ರಾಮಪ್ಪನವರು" ರಾಮಪ್ಪನವರ ಕೊಡುಗೆ ಏನೂ ಅಂತಾ ಗೊತ್ತಾಯ್ತ?

ನಾವು ಸೂಟು-ಬೂಟು ಧರಿಸಿ ಸ್ಟೈಲ್ ಆಗಿ ಹೊರಟು ಬಿಡುತ್ತೇವೆ. ಯಾರಿಗೇನು ಕಡಿಮೆ? ನನಗೆಲ್ಲಾ ಇದೆ!!ಅನ್ನೋ ಅಹಂಕಾರ.[ಎಲ್ಲರಿಗೆ ಅನ್ವಯಿಸುವುದಿಲ್ಲ ಬಿಡಿ]
ನಮಗೆ ಬೇಕಾದಷ್ಟು ಇರಬಹುದು, ತಿಂಗಳಿಗೆ ೬೦-೭೦ ಸಾವಿರ ರೂಪಾಯಿ ಸಂಬಳ ಸಿಗಬಹುದು. ಆದರೆ ನಾವು ಧರಿಸೋ ಒಂದು ಅಂಗಿ ನನ್ನ ಸ್ವಂತದ್ದಾ? ಎಂಬ ಪ್ರಶ್ನೆ ಹಾಕಿಕೊಂಡು ನೋಡಿದ್ದೀವಾ?
ನನ್ನ ಅಂಗಿಯಲ್ಲಾ ಅದರಲ್ಲಿರುವ ಒಂದು ಬಟನ್ ಕೂಡಾ ನಮ್ಮ ಸ್ವಂತದ್ದಲ್ಲ. ಅದರಹಿಂದೆ ಅದೆಷ್ಟು ಜನರ ಬೆವರು ಹರಿದಿರುತ್ತೋ! ಈ ಮಾತುಗಳನ್ನು ಕೇವಲ ಅಕ್ಷರಗಳಾಗಿ ಓದಿದರೆ ಆಗದು.....
ನಾನು ಧರಿಸಿರುವ ಅಂಗಿಯ ಹಿಂದೆ ಅದೆಷ್ಟು ಜನರ ಶ್ರಮವಿದೆ , ಗಮನಿಸೋಣ.
ಯಾವುದೋ ಬಟ್ಟೆಯಿಂದ ಅಂಗಿ. ಆ ಬಟ್ಟೆಯನ್ನು ನೇಯ್ದವನು ಯಾರೋ? ,ದಾರದಿಂದ ಬಟ್ಟೆ. ಒಂದು ದಾರ ಹೊರಬರಬೇಕಾದರೆ ಅದು ತಯಾರಾದ ಕಾರ್ಖಾನೆಯಲ್ಲಿ ಅದೆಷ್ಟು ಜನರ ಶ್ರಮವಿದೆಯೋ?. ನಂತರ ಮಗ್ಗ. ಮುಂದೆ ಅದರ ಮಾರಾಟ. ಬಟ್ಟೆಯನ್ನು ಕೊಂಡರೆ ಸಾಲದು. ಅದನ್ನು ಹೊಲಿಯಲು ದರ್ಜಿ. ಕತ್ತರಿಸುವವನು ಯಾರೋ, ಗುಂಡಿ ಹಾಕುವವನು ಯಾರೋ, ಇನ್ನು ಅದೆಷ್ಟು ಜನರ ಶ್ರಮ ಅಡಗಿದೆಯೋ, ಅಂತೂ ಇದ ನನ್ನ ಶರ್ಟ್ ಎಂದು ಬೀಗುವವರು ನಾವು. ಅದು ನಮಗೆ ಇಷ್ಟು ಅಂದ ಕೊಡಬೇಕಾದರೆ ಅದೆಷ್ಟೋ ಕಾರ್ಮಿಕರ ಅರೆಹೊಟ್ಟೆಯ ದುಡಿಮೆಯೂ ಸೇರಿದೆ. ನಮಗೆ ಹೇರ್ ಕಟಿಂಗ್ ಮಾಡುವ ಕ್ಷೌರಿಕ, ಚಪ್ಪಲಿ ಹೊಲಿಯುವ ಚಮ್ಮಾರ, ಬಟ್ಟೆ ಹೊಲಿಯುವ ದರ್ಜಿ,ಕಾರ್ ದುರಸ್ತಿ ಮಾಡುವ ಮೆಕ್ಯಾನಿಕ್, ಕಾರು ತೊಳೆಯುವ ಹುಡುಗ, ಮನೆ ಮುಂದೆ ಗುಡಿಸುವ ಜಾಡಮಾಲಿ, ಅದೆಷ್ಟು ಜನರ ಋಣ ತೀರಿಸ ಬೇಕೋ ನಾವು!!
ಆದರೆ ಸುಲಭದಲ್ಲಿ ಮಾತನಾಡುವ ಜನರಿದ್ದಾರೆ. ನಮ್ಮ ಕೆಲಸ ನಮಗೆ, ಅವರ ಕೆಲಸ ಅವರಿಗೆ. ಈ ಜಾಡಮಾಲಿ, ಕ್ಷೌರಿಕರು, ಇಂತಹ ಕಾರ್ಮಿಕರು ಒಂದು ತಿಂಗಳು ರಜೆ ಮಾಡಲಿ, ಗೊತ್ತಾಗುತ್ತೆ, ಯಾರ ಮಹತ್ವ ಎಷ್ಟು? ಅಂತಾ.

ಪರರ ಪೀಡಿಸದ ಸಂಪಾದನೆ

ಅಕೃತ್ವಾ ಪರಸಂತಾಪಂ
ಅಗತ್ವಾ ಖಲ ನಮ್ರತಾಮ್|
ಅನುಸೃತ್ಯ ಸತಾಂ ಮಾರ್ಗಂ
ಯತ್ ಸ್ವಲ್ಪ ತದ್ ಬಹು||


ಬೇರೆಯವರಿಗೆ ನೋವುಂಟುಮಾಡದೆ,
ದುಷ್ಟರಿಗೆ ಬಗ್ಗದೆ,ಸಜ್ಜನರು ತುಳಿದ ಮಾರ್ಗವನ್ನು ಬಿಡದೆ,
ಸ್ವಲ್ಪವನ್ನೇ ಮಾಡಿದರೂ ಅದು ಮಹತ್ವದ್ದೇ ಸರಿ.


Tuesday, April 6, 2010

ಉತ್ತಮರಿಗೆ ಮಾನವೇ ಸಂಪತ್ತು

ಅಧಮಾ ಧನಮಿಚ್ಛಂತಿ
ಧನಂ ಮಾನಂ ಚ ಮಧ್ಯಮಾ: |
ಉತಾಮಾ: ಮಾನಮಿಚ್ಛಂತಿ
ಮಾನೋಹಿ ಮಹತಾಂ ಧನಮ್||

ಕೇವಲ ಹಣವನ್ನೇ ಬಯಸುವವರು ಅಧಮರು, ಹಣದೊಡನೆ ಮಾನವನ್ನೂ ಬಯಸುವವರು ಮಧ್ಯಮರು, ಉತ್ತಮರಾದರೋಮಾನವನ್ನೇ ಬಯಸುತ್ತಾರೆ.ಏಕೆಂದರೆ ಉತ್ತಮರಿಗೆ ಮಾನವೇ ಸಂಪತ್ತು.