Pages

Monday, August 16, 2010

ಸಂಪಾದಕೀಯ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆ ಬಳಗದ ಒಬ್ಬ ಸದಸ್ಯರ ಬಗ್ಗೆ ನಿಮಗೆ ಪರಿಚಯ ಮಾಡಲೇ ಬೇಕು. ನಿಜವಾಗಿ ನಿನ್ನೆಯೇ ಮಾಡಿದ್ದರೆ ಚೆನ್ನಾಗಿತ್ತು. ಇರಲಿ ಇಂದು ಸ್ವಾತಂತ್ರ್ಯೋತ್ಸವದ ಮರು ದಿನ, ತಪ್ಪೇನಿಲ್ಲ. ಪರಿಚಯ ಮಾಡಿಕೊಡಬೇಕಾದವರ ಬಗ್ಗೆ ನಿಮಗೆ ಈಗಾಗಲೇ ಪರಿಚಯವಿದೆ. ಅವರೇ ಕವಿ ನಾಗರಾಜ್. ೧೯೭೬ ರ ಎಮರ್ಜೆನ್ಸಿ ಅವಧಿಯಲ್ಲಿ ಸೆರೆಮನೆವಾಸ ಅನುಭವಿಸಿದವರು. ಅವರ ಅನುಭವಗಳನ್ನು ಅವರ ಮಾತುಗಳಿಂದಲೇ ಕೇಳಿ. ಅವರ ಬ್ಲಾಗ್ "ಕವಿಮನ" ವನ್ನು ಇಣುಕುವ ಮುನ್ನ ವೇದಸುಧೆಯ ವಿಶೇಷ ಲೇಖನಗಳ ಪುಟದಲ್ಲಿ ನಾಗರಾಜರ ಸೇವಾಪುರಾಣವನ್ನೊಮ್ಮೆ ಓದಿ , ಸೇವಾಪುರಾಣದ ಎಲ್ಲಾ ಭಾಗಗಳನ್ನೂ ಮೊದಲಿನಿಂದ ಓದಿದಾಗ ಮಾತ್ರ ನಾಗರಾಜರ ಬಗ್ಗೆ ಸರಿಯಾದ ಪರಿಚಯವಾಗುತ್ತೆ.ಅಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲವಾದ್ದರಿಂದ ಇಲ್ಲಿ ಪ್ರತಿಕ್ರಿಯಿಸಿ. ಆಗಬಹುದೇ? ನಾಗರಾಜರು ಪಕ್ಕಾ ದೇಶಭಕ್ತರೆಂಬ ವಿಚಾರವನ್ನು ಮಾತ್ರ ತಿಳಿಸುತ್ತಾ ಮುಂದೊಮ್ಮೆ ವಿವರವಾಗಿ ಮಾತನಾಡಲು ಅವಕಾಶ ಉಳಿಸಿಕೊಳ್ಳುವೆ.ವಿಶೇಷ ಲೇಖನಗಳ ಪುಟದಲ್ಲಿ ಇನ್ನೊಂದು ಲೇಖನವೂ ಇದೆ.ಅದು ಕವಿ ಸುರೇಶ್ ಅವರದು. ಸುರೇಶ್ ಅವರು ನಾಗರಾಜರ ಸೋದರರು.

ಶ್ರೀಮಾತಾನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಆಶಾಢ ಮಾಸದ ಹೂವಿನ ಅಲ೦ಕಾರದ ಸೊಬಗು

ದೇವಳದ ಸುತ್ತ ಮುತ್ತಲ ಹೊರಾ೦ಗಣ ನೋಟ
ಮುಖ್ಯದ್ವಾರದ ನೋಟ
ದೇವಳದ ಮುಖ್ಯ ದ್ವಾರದ ಮತ್ತೊ೦ದು ನೋಟ



ಪ್ರಥಮ ದ್ವಾರ




ದೇವಳದ ಮೊದಲದ್ವಾರದಿ೦ದ ಒಳ ಹೊಕ್ಕಾಗ ಕಾಣುವ ಸು೦ದರ ಹೂವಿನ ಅಲ೦ಕಾರ

ಸೇವಾ ವಿಭಾಗದ ಪಕ್ಕದಿ೦ದ ದೇವಳದ ಪ್ರಥಮ ದ್ವಾರ

ಪ್ರಥಮದ್ವಾರದೊಳಗಿನ ಛಾವಣಿಗೆ ಹೂವಿನ ಅಲ೦ಕಾರ

ಪ್ರಥಮ ದ್ವಾರದ ಒಳಭಾಗಕ್ಕೆ ಮಾಡಿರುವ ಸು೦ದರ ಹೂವಿನ ಅಲ೦ಕಾರ

ಪ್ರಥಮದ್ವಾರದ ಮತ್ತೊ೦ದು ನೋಟ

ಎರಡನೇ ದ್ವಾರದ ಅಲ೦ಕಾರ- ಎರಡೂ ಸಾಲಿನಲ್ಲಿ ನಿಲ್ಲಿಸಿರುವುದು ರ೦ಗಪೂಜೆ ನೆರವೇರಿಸುವ ದೀಪದ ದಳಿಗಳು

ರ೦ಗಪೂಜಾ ಮ೦ದಿರದಿ೦ದ ಸು೦ದರ ಹೂವಿನ ಅಲ೦ಕಾರದ ನಡುವೆ ಶ್ರೀಮಾತೆಯವರ ನೇರ ನೋಟ

ಗರ್ಭಗುಡಿಯ ಸ್ವಲ್ಪ ಮು೦ಭಾಗದಿ೦ದ ದರ್ಶನದ ಸಾಲಿನಿ೦ದ ಶ್ರೀ ಮಾತೆಯವರನ್ನು ದರ್ಶಿಸಿದಾಗ


ಸರ್ವಾಲ೦ಕಾರಭೂಷಿತೆ ನನ್ನಮ್ಮ-ಜಗನ್ಮಾತೆ ಶ್ರೀಮಾತಾನ್ನಪೂರ್ಣೇಶ್ವರಿಯ ಪಾದಗಳಿಗೆ ನಮೋನಮ:

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ. ನನ್ನಮ್ಮ ಶ್ರೀ ಮಾತೆ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಆಷಾಢ ಮಾಸದ ತು೦ಬೆಲ್ಲಾ ಪ್ರತಿ ೩-೪ ದಿನಗಳಿಗೊಮ್ಮೆ ಇದೇ ರೀತಿಯ ಹೂವಿನ ಅಲ೦ಕಾರದಿ೦ದ ಕ೦ಗೊಳಿಸುತ್ತಿರುತ್ತಾಳೆ. ಈ ಮಾಸದ ತು೦ಬೆಲ್ಲಾ ಭಕ್ತಾದಿಗಳ ಸ೦ಖ್ಯೆಯೂ ಹೆಚ್ಚು. ಹೆಚ್ಚೆಚ್ಚು ಹೂವಿನ ಅಲ೦ಕಾರದಿ೦ದ ಸರ್ವಾ೦ಗ ಸು೦ದರಿಯಾಗಿ ಕಾಣುತ್ತಾ, ಭಕ್ತರ ಅಭೀಷ್ಟೇಗಳನ್ನೆಲ್ಲಾ ನೆರವೇರಿಸುವ ನನ್ನಮ್ಮ ಶ್ರೀ ಜಗನ್ಮಾತೆಯವರ ದರ್ಶನ ಹಾಗೂ ಶ್ರೀ ಪ್ರಸಾದವನ್ನು ಸ್ವೀಕರಿಸಲು ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮೆಲ್ಲರ ಆತಿಥ್ಯಕ್ಕಾಗಿ ನಾನಿದ್ದೇನೆ.ಊಟ, ವಸತಿ ಇತ್ಯಾದಿಗಳ ಬಗ್ಗೆ ಯಾವುದೇ ಅ೦ಜಿಕೆ ಬೇಡ. ಆದಷ್ಟೂ ರಜಾದಿನಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತಾದಿಗಳ ಸ೦ಖ್ಯೆ ಹೆಚ್ಚಿರುತ್ತದೆ. ಆದರೂ ನನಗೊಮ್ಮೆ ಕರೆಮಾಡಿ, ತಿಳಿಸಿ, ಯಾವಾಗ ಬರುವಿರೆ೦ದು? ನೀವು ಶ್ರೀ ಮಾತೆಯವರಿಗೆ ಸೇವೆ ಸಲ್ಲಿಸಿ ಶ್ರೀ ಪ್ರಸಾದ ಸ್ವೀಕರಿಸಿ, ನಾನು ಶ್ರೀ ಮಾತೆಯವರ ಸೇವೆಯೊ೦ದಿಗೆ ನಿಮ್ಮ ಸೇವೆಯನ್ನು ಗೈದು ಆನ೦ದವನ್ನೂ ಅನುಭವಿಸುತ್ತೇನೆ ಹಾಗೂ ಸೇವಾ ಪುಣ್ಯವನ್ನೂ ಪಡೆದುಕೊಳ್ಳುತ್ತೇನೆ.

Sunday, August 15, 2010

ಪೂಜ್ಯ ವಿವೇಕಮಯೀ ಮಾತಾಜಿಯವರ ಮೆಚ್ಚುಗೆ

Dear Sridhar,
Jai Ramakrishna.
I appreciate the noble work you are doing on Veda Sudhe.

With regards
Mata Vivekamayi
------------------------------------

ಬೆಂಗಳೂರಿನ ಭವತಾರಿಣಿ ಆಶ್ರಮದ ಪೂಜ್ಯ ವಿವೇಕಮಯೀ ಮಾತಾಜಿಯವರು ವೇದಸುಧೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಪೂಜ್ಯ ಪುರುಶೋತ್ತಮಾನಂದರ ಬಗ್ಗೆ ಒಂದು ಲೇಖನವನ್ನು ಕಳಿಸಿಕೊಟ್ಟಿರುತ್ತಾರೆ. ಅದನ್ನು ವೇದಸುಧೆಯಲ್ಲಿ ಪ್ರಕಟಿಸಲಾಗಿದೆ.ಫಾಂಟ್ ವೆತ್ಯಾಸದಿಂದ ಓದಲಾಗದಿದ್ದಲ್ಲಿ ದಯಮಾಡಿ ವೇದಸುಧೆಯ ಗಮನಕ್ಕೆ ತನ್ನಿ.
-ಶ್ರೀಧರ್

ಆಟಲ್ ಜಿ ಯವರನ್ನು ಇತ್ತೀಚಿಗೆ ಯಾರಾದರೂ ಕಂಡಿದ್ದೀರಾ?



ದೇಶವು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಇಂದು ದೇಶದ ಮಾಜಿ ಪ್ರಧಾನಿ, ರಾಷ್ಟ್ರಭಕ್ತ ಶ್ರೀ ಆಟಲ್ ಬಿಹಾರಿವಾಜಪೇಯಿ ಯವರನ್ನು ಟಿವಿ ಪರದೆಯಲ್ಲಿ ಎಲ್ಲಾದರೂ ಕಾಣಬಹುದೇನೋ ಎಂದು ನಿರೀಕ್ಷಿಸಿದ್ದೆ.ಆದರೆ ನನ್ನ ಕಣ್ಣಿಗೆ ಬಿದ್ದಿಲ್ಲ. ನೀವೇನಾದರೂ ಕಂಡಿರಾ? ದೇಶದಲ್ಲಿ ಬಿ.ಜೆ.ಪಿ ಯನ್ನು ಹುಟ್ಟುಹಾಕಿದ ಮಹಾನುಭಾವನನ್ನು ಬಿ.ಜೆ.ಪಿ.ಯವರೇ ಮರೆತು ಬಿಟ್ಟರೇ? ಈದಿನ ಆಟಲ್ ಜಿ ಯವರು ಹೇಗಿರಬಹುದು? ಅವರ ಆರೋಗ್ಯಸ್ಥಿತಿ ಹೇಗಿರಬಹುದು? ವೇದಸುಧೆಯ ಅಭಿಮಾನಿಗಳೇ ಆಟಲ್ ಜಿ ಯವರನ್ನು ಇತ್ತೀಚಿಗೆ ಯಾರಾದರೂ ಕಂಡಿದ್ದೀರಾ? ಟಿವಿ ಪರದೆಯಲ್ಲಾದರೂ ಸರಿ ನೀವು ನೋಡಿ ಎಷ್ಟು ದಿನಗಳಾಯ್ತು? ಯಾಕೋ ಅವರ ಬಗ್ಗೆ ಮಾತನಾಡಬೇಕೆನಿಸಿದೆ, ತಿಳಿದವರು ಹಂಚಿಕೊಳ್ಳುವಿರಾ?

ಮೂಢ ಉವಾಚ -3

ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ

ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ

ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ

ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು \
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ

ಪ್ರಶ್ನೆಯಾದ ರಾಜು!

-ಈಗ್ಗೆ ಸುಮಾರು ಸುಮಾರು ೧೮-೨೦ ವರ್ಷಗಳಮಾತು. ನಾನು ನಿತ್ಯವೂ ಒಂದು ಧ್ಯಾನಮಂದಿರಕ್ಕೆ ಹೋಗಿ ಸಂಜೆವೇಳೆ ಅರ್ಧ ಗಂಟೆ ಧ್ಯಾನ ಮಾಡಿ ಬರುತ್ತಿದ್ದೆ. ಅಲ್ಲಿ ಆಗಿಂದಾಗ್ಗೆ ಕಾಣುತ್ತಿದ್ದ ವ್ಯಕ್ತಿ ರಾಜು. ಸುಮಾರು ೪೦ ವರ್ಷ ವಯಸ್ಸಿನ ರಾಜು ಮೂರುವರೆ ಅಡಿ ಎತ್ತರ ವಿದ್ದಿರಬಹುದು. ಪರಸ್ಪರ ಪರಿಚಯ ವಾಯ್ತು. ನಮ್ಮ ಮನೆಯ ಸಮೀಪ ಇರುವ ಪರಿಶಿಷ್ಟ ಜಾತಿಗೆ ಸೇರಿದ ಎರಡು ಕಾಲುಗಳೂ ಇಲ್ಲದ ಲಕ್ಷ್ಮಿಯನ್ನು ರಾಜು ಮದುವೆಯಾಗಿದ್ದರು. ರಾಜುವಿನ ವೃತ್ತಿ ಎಂದರೆ ಊರೂರು ತಿರುಗುತ್ತಾ ಲಾಟರಿ ಟಿಕೆಟ್ ಮಾರಾಟ. ರಾಜು ತಮಿಳುನಾಡಿನವರು. ಹೀಗೆಯೇ ಊರೂರು ತಿರುಗುತ್ತಾ ಲಾಟರಿ ಟಿಕೆಟ್ ಮಾರುವಾಗ ಯಾರದೋ ಪರಿಚಯವಾಗಿ ಲಕ್ಶ್ಜ್ಮಿಯ ಸಂಬಂಧದವರೆಗೆ ತಲುಪಿ ಲಕ್ಷ್ಮಿಯ ಮದುವೆಯನಂತರ ಪತ್ನಿಯ ಮನೆಯಲ್ಲೇ ಇದ್ದುಕೊಂಡು ಲಾಟರಿ ಟಿಕೆಟ್ ಮಾರಾಟ ಮಾಡುವ ಕಾಯಕ ಮುಂದುವರೆಸಿದ್ದರು. ನಂತರ ಒಂದು ಹೆಣ್ಣುಮಗು ಜನ್ಮತಾಳಿ ಬೆಳೆದು ಅವಳ ಮದುವೆಯೂ ಆಯ್ತು. ಇತ್ತೀಚೆಗೆ ರಾಜು ಕಂಡಿರಲಿಲ್ಲ.
ಇಂದು ಭಾನುವಾರವಾದ್ದರಿಂದ ಸ್ನೇಹಿತರಾದ ಕವಿನಾಗರಾಜ್ ಮನೆಗೆ ಹೋಗಿದ್ದವನು ಅಲ್ಲಿಂದ ಆಫೀಸ್ ಕಡೆ ಹೋಗುವ ಮಾರ್ಗದಲ್ಲಿ ಇರುವ ಮಹಾರಾಜಾ ಪಾರ್ಕಿನೊಳಗೆ ಒಮ್ಮೆ ಹೋಗಿ ಹತ್ತು ನಿಮಿಷ ಅಡ್ಡಾಡಿ ನಂತರ ಆಫೀಸ್ ಗೆ ಹೋಗೋಣವೆಂದು ಪಾರ್ಕಿನೊಳಗೆ ಕಾಲಿಟ್ಟೆ. ಅಲ್ಲಿ ಬಿಳಿ ತುಂಡುಪಂಚೆ ಮತ್ತು ಬಿಳಿ ಹೊದಿಕೆ ಹೊದ್ದಿದ್ದ ಗಡ್ಡದಾರಿ ಕುಳ್ಳುವ್ಯಕ್ತಿಯೊಬ್ಬನನ್ನು ಕಂಡು ಅವನತ್ತ ನೋಡುವುದರಲ್ಲಿ ಅರೇ! ಇವರು ನಮ್ಮ ರಾಜು ಅಲ್ಲವೇ?!! ನೋ ಡೌಟ್ , ಆತನೇ!!

-ಏನ್ರೀ ಹೀಗೆ?
- "ಎಲ್ಲಾ ಸಾಯಿಬಾಬರ ಕೃಪೆ "
- ಕಾಣ್ತಾ ಇರಲಿಲ್ಲ, ಹೆಂಡ್ತಿ -ಮಗಳು?
- ಈಗ ಯಾರೂ ಇಲ್ಲ. ನಿಮಗೆ ಗೊತ್ತಿರುವಂತೆ ಹೆಳವಳಾದ ಅವಳನ್ನು ಮದುವೆಯಾಗಿ ನಿತ್ಯವೂ ಅವಳ ಸೇವೆ ಮಾಡಿಕೊಂಡು ನನ್ನ ವ್ಯಾಪಾರ ಮಾಡಿಕೊಂಡು ಅವಳನ್ನು ಸಾಕಿದ್ದಕ್ಕೆ ಅವಳೇ ನನ್ನ ಮೇಲೆ ಅನುಮಾನ ಪಟ್ಟಳು. ಒಂದೆರಡು ವರ್ಷ ಸಹಿಸಿಕೊಂಡಿದ್ದೆ. ಕೊನೆಗೆ ತಡೆಯಲಾಗಲಿಲ್ಲ. ಮನೆ ಬಿಟ್ಟು ಹೊರಟೆ. ವ್ಯಾಪಾರ ಮಾಡುವುದನ್ನೂ ನಿಲ್ಲಿಸಿದೆ. ಕೈಲಿದ್ದ ೨೫ ಸಾವಿರ ರೂಪಾಯಿಯಿಂದ ಬೂದಿಗೆರೆ ಸಾಯಿನಾಥ ಮಂದಿರಕ್ಕೆ ಒಂದು ಕಾಣಿಕೆಹುಂಡಿ ಮಾಡಿಸಿಕೊಟ್ಟೆ. ಅಲ್ಲಿಂದ ಮಾಲೂರು -ಬಂಗಾರ್ ಪೇಟೆ ರಸ್ತೆಯ ೧೨ ನೇ ಮೈಲುಗಲ್ಲಿಗೆ ಮೂರು ಕಿಲೋ ಮೀಟರ್ ದೂರವಿರುವ ಪಣಣಾತಿಹಳ್ಳಿಯಲ್ಲಿನ ಸಾಯಿಬಾಬ ಮಂದಿರದಲ್ಲಿ ಸೇವೆ ಮಾಡಿಕೊಂಡಿರುವೆ.
-ಏನು ಸೇವೆ ಮಾಡ್ತೀರಿ?
-"ಬಾಬರಿಗೆ ಅಲಂಕಾರ ಮಾಡುವೆ. ಅಲ್ಲಿ ಸಾಕಿರುವ ನಾಲ್ಕು ಹಸುಗಳ , ಕೆಲವು ಪಕ್ಷಿಗಳ ಸೇವೆ ಮಾಡಿಕೊಂಡಿರುವೆ".
ರಾಜು ಮಾತು ಮುಂದುವರೆಸಿದ್ದರು" ನೋಡಿ, ಅಲ್ಲಿರುವ ಹೂಗಿಡಗಳಲ್ಲಿ ಹೂ ಕೊಯ್ದುಕೊಂಡು ಪೂಜೆಗೆ ಕೊಡುವೆ, ಹುಲ್ಲು ಕೊಯ್ದು ,ಸಗಣಿ-ಗಂಜಲ ತೆಗೆದು ಪಶು ಸೇವೆ ಮಾಡುವೆ. ಪಶು-ಪಕ್ಷಿ ಗಳ ಸೇವೆ ಮಾಡಿಕೊಂಡು ಆನಂದ ವಾಗಿರುವೆ. ಬಿಡುವಾದಾಗ ಧ್ಯಾನ ಮಾಡುವೆ. ನಾನು ಹೂವು ಕೊಯ್ಯುವಾಗ ಒಮ್ಮೊಮ್ಮೆ ಏನಾಗುತ್ತೆ ಗೊತ್ತಾ? ಒಂದು ಹೂವು ನನ್ನ ಕಿವಿಯಲ್ಲಿ ಮಾತನಾಡಿದಂತೆ ಬಾಸವಾಗುತ್ತೆ " ನನ್ನನ್ನೇಕೆ ಬಾಬರ ಚರಣಕ್ಕೆ ಅರ್ಪಿಸಲು ನೀನು ಮನಸ್ಸು ಮಾಡಲಿಲ್ಲ?" ತಕ್ಷಣ ಹಿಂದಿರುಗಿ ಹೋಗಿ ಆಗಿಡದಲ್ಲಿ ನೋಡಿದರೆ ಸಂಧಿಯಲ್ಲಿ ಕಾಣದೆ ಬಿಟ್ಟಿದ್ದ ಹೂವೊಂದು ಪತ್ತೆಯಾಗುತ್ತೆ. ಆಹೂವನ್ನು ಕೊಯ್ದು ಬಾಬರಿಗೆ ಅರ್ಪಿಸುವೆ.............
ಹೀಗೆಯೇ ರಾಜು ಮಾತನಾಡುತ್ತಲೇ ಇದ್ದರು. ನಾನೇ ಮಧ್ಯೆ ಮಾತನಾಡಿ ಅವರ ಮಾತು ನಿಲ್ಲಿಸಿದೆ.ರಾಜು ತಮಿಳುನಾಡಿನ ಚೆಟ್ಟಿಯಾರ್ ಕುಲದವರಂತೆ. ವಿಧಿ ಅವರನ್ನು ಕರ್ನಾಟಕ ಸುತ್ತುವಂತೆ ಮಾಡಿ ಹಾಸನಕ್ಕೂ ಬಂದು ಅಲ್ಲಿನ ಲಕ್ಷ್ಮಿಯನ್ನು ಮದುವೆಯಾಗಿ ಅವಳಿಂದಲೂ ಪರಿತ್ಯಜ್ಯನಾಗಿ ಈಗ ಸಾಯಿಬಾಬರ ಸೇವೆ ಮಾಡಿಕೊಂಡಿರಲು ನಿರ್ಧರಿಸಿದ್ದೇನೆನ್ನುತ್ತಾರೆ. ನಮ್ಮ ಮನೆ ಗೃಹಪ್ರವೇಶಕ್ಕೆ ಆತ ಬಂದಿದ್ದರು. ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಎಲ್ಲರಿಗಿಂತ ಮುಂದೆ ಕುಳಿತು ಎಲ್ಲರ ಕಣ್ಸೆಳೆದಿದ್ದರು. ನಮ್ಮ ಪತ್ನಿ ಆಗ ಹೇಳಿದ್ದಳು" ಯಾರ್ಯಾರನ್ನೋ ಕರೀತೀರಲ್ರೀ!
ಮನುಷ್ಯನ ಈ ಜೀವನಕ್ಕೆ ಏನೆನ್ನೋಣ? ರಾಜು ಯಾರೋ, ಲಕ್ಷ್ಮಿ ಯಾರೋ, ಎಲ್ಲೋ ಇದ್ದವನು ಎಲ್ಲೋ ಬಂದು ಹೆಳವಿಯನ್ನು ಮದುವೆಯಾಗಿ ಆವಳಿಂದಲೇ ಪರಿತ್ಯಜ್ಯನಾಗಿ , ಈಗ ಮತ್ತೆ ಒಬ್ಬಂಟಿಯಾಗಿ ಓಡಾಡುತ್ತಿರುವ ರಾಜು ನನಗೆ ಪ್ರಶ್ನೆಯಾಗಿಯೇ ಉಳಿದು ಹೋದರು!! ನನ್ನ ಮೊಬೈಲ್ ಸೆರೆಹಿಡಿದ ಅವರ ಚಿತ್ರವನ್ನೊಮ್ಮೆ ನೋಡಿದರೆ ವಿ.ಆರ್.ಭಟ್ಟರು ಭವಿಷ್ಯ ಹೇಳಿಯಾರು!