ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಚನ್ನರಾಯಪಟ್ಟಣದ ಚೈತನ್ಯ ಶಾಲೆಯ ಆವರಣದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ವೇದಪಾಠ ಮಾಡುತ್ತಿದ್ದು ಇವರ ವಿದ್ಯಾರ್ಥಿಗಳಿಗಾಗಿ ಶ್ರಾವಣ ಪೂರ್ಣಿಮೆಯ ಸಂಜೆ ವಿಶೇಷ ಅಗ್ನಿಹೋತ್ರವನ್ನು ನೆರವೇರಿಸಿದರು. ಹೋಮದ ಅಂತ್ಯದಲ್ಲಿ ಉಪಾಕರ್ಮದ ವಿಶೇಷವನ್ನು ಶ್ರೀ ಶರ್ಮರು ತಿಳಿಸಿದರು. ಅದರ ಫೋಟೊ ಮತ್ತು ಆಡಿಯೋ ಕ್ಲಿಪ್ ನ್ನು ವೇದಸುಧೆಯ ವಾಚಕರಿಗಾಗಿ ಪ್ರಕಟಿಸಲಾಗಿದೆ.
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Friday, August 3, 2012
ಚನ್ನರಾಯಪಟ್ಟಣದಲ್ಲಿ ಉಪಾಕರ್ಮದ ವಿಶೇಷ ಅಗ್ನಿಹೋತ್ರ
ಗೃಹಪ್ರವೇಶ
ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್ದರು. ಆ ಸಮಯದಲ್ಲಿ ನಡೆದ ಸಂಭಾಷಣೆಯ ಸಾರವಿದು.
ಗುರುನಾಥರು : ಏನ್ಸಾರ್, ಬಂದಿದ್ದು?
ಗುರುಬಂಧು : "ಏನಿಲ್ಲ, ಮನೆಯೆಲ್ಲ ಮುಗಿಯಿತು, ಇನ್ನು ಗೃಹ ಪ್ರವೇಶ ಮಾಡಿದರಾಯಿತು. ಅದಕ್ಕಾಗಿ ತಮ್ಮಲ್ಲಿ ಒಂದು ಒಳ್ಳೆ ದಿನ ನಿಷ್ಕರ್ಷೆ ಮಾಡಿಕೊಂಡು ಹೋಗೋಣ ಎಂದು ಬಂದೆವು." ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಗುರುನಾಥರ ಪಾದಕ್ಕೆ ನಮಸ್ಕರಿಸಿದರು.
ಗುರುನಾಥರು: " ಗೃಹಪ್ರವೇಶವೇ? ಅದನ್ನು ಈಗಾಗಲೇ ಹಲವಾರು ಜನ ಮಾಡಿದ್ದಾರಲ್ಲ? ಅಲ್ಲವೇ? " ಎಂದು ನಮ್ಮ ಕಡೆ ನೋಡಿ ಕಣ್ಣು ಮಿಟುಕಿಸಿ ನಸುನಕ್ಕರು.
ಗುರುಬಂಧು ಪತ್ನಿ : "ಇಲ್ಲ ಗುರುಗಳೇ, ಗೃಹಪ್ರವೇಶ ಇನ್ನು ಆಗಿಲ್ಲಾ." ಎಂದರು ಆತುರದಲ್ಲಿ.
ಗುರುನಾಥರು : " ಏನಮ್ಮಾ ಹೀಗೆ ಹೇಳುತ್ತಾ ಇದ್ದಿಯಾ? ಗಾರೆ ಕೆಲಸದವನು, ಲೈಟ್ ಕೆಲಸದವನು, ನಲ್ಲಿ ಕೆಲಸದವನು, ಬಣ್ಣ ಬಳಿಯುವವನು, ಇನ್ನು ಪ್ರತಿ ದಿನಾ, ನೀವು ನಿಮ್ಮ ಸ್ನೇಹಿತರು ಎಲ್ಲರು ಆ ಗೃಹದ ಪ್ರವೇಶ ಮಾಡಿದಿರಲ್ಲಾ! ಇನ್ನ್ಯಾವ ಗೃಹಪ್ರವೇಶನಮ್ಮಾ? " ಎಂದು ಸ್ವಲ್ಪ ನಗೆಯಾಡುತ್ತಲೇ ಪ್ರಶ್ನೆ ಮಾಡಿದರು.
ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು ನಕ್ಕರು.
ಗುರುನಾಥರು : " ಮತ್ತೆ ಇನ್ನು ಯಾರಿಗೆ ಗೃಹಪ್ರವೇಶ? ಎಲ್ಲರು ಬಂದ ಹಾಗೆ ಆಗಿದೆಯಲ್ಲ?"
ಗುರುಬಂಧು ಪತ್ನಿ : " ನೆಂಟರು ಇಷ್ಟರು, ಬಂಧು ಬಳಗ ಎಲ್ಲರನ್ನು ಒಳ್ಳೆ ದಿನ ಕರೆದು ಊಟ ಹಾಕಬೇಡವೆ?" ಎಂದರು ಆಕೆ.
ಗುರುನಾಥರು : " ಎಲ್ಲರನ್ನು ಕರೆದು ಊಟ ಹಾಕಬೇಕು! ಮನೆ ಎಷ್ಟು ದೊಡ್ಡದಾಗಿದೆ, ಎಷ್ಟು ಚಂದವಾಗಿದೆ, ಎಂದು ಎಲ್ಲರಿಗು ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು. ಅಲ್ಲವೇ ?" ಎಂದು ನಮ್ಮ ಕಡೆ ತಿರುಗಿ ನಗುತ್ತ " ನಿಮ್ಮ ಅತ್ತೆಯವರನ್ನ ಏನು ಮಾಡುತ್ತೀರಿ? " ಎಂದರು.
ಗುರುಬಂಧು ಪತ್ನಿ.: " ಅವರನ್ನೂ ಕರೆದುಕೊಂಡು ಬರುತ್ತೇವೆ."
ಗುರುನಾಥರು " ಅಂದರೆ, ಅವರು ಈಗ ನಿಮ್ಮ ಜೊತೇಲಿ ಇಲ್ಲವೇ ? " ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.
ಗುರುಬಂಧು ಪತ್ನಿ : ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದು ಅನುಮಾನಿಸುತ್ತ, ಸ್ವಲ್ಪ ಮೌನದ ನಂತರ " ಇಲ್ಲ" ಎಂದರು.
ಗುರುನಾಥರು: " ಅಲ್ಲಮ್ಮಾ, ಮನೆದೇವರನ್ನು ಹೊರಗಡೆ ಇಟ್ಟು ಕಲ್ಲಿಗೆ ಪೂಜೆ ಮಾಡಿದರೆ ಏನು ಭಾಗ್ಯ ಬರುತ್ತಮ್ಮ? ನಿಮ್ಮ ಅತ್ತೇನ ವೃದ್ಧಾಶ್ರಮಕ್ಕೆ ಸೇರಿಸಿ ನೀವು ತುಂಬಾ ದೊಡ್ಡ ಮನೆ ಗೃಹ ಪ್ರವೇಶ ಮಾಡ್ತೀರಾ? ಹಸು ನಿಮ್ಮ ಮನೆಗೆ ಬಂದರೆ ಒಳ್ಳೇದು, ಆದರೆ ನಿಮ್ಮ ಅತ್ತೆ ? ಏನು ಅನ್ಯಾಯ? ಮೊದಲು ನಿಮ್ಮ ಅತ್ತೆಯವರನ್ನ ಮನೆಗೆ ಕರೆದುಕೊಂಡು ಬನ್ನಿ. ಅವರಲ್ಲಿ ಕ್ಷಮಾಪಣೆ ಕೇಳಿ ಜೊತೆಯಲ್ಲಿ ಇಟ್ಟು ಕೊಳ್ಳಿ. ಅವರ ಆಶೀರ್ವಾದ ಮೊದಲು ಪಡೆಯಿರಿ. ಅವರು ನಿಮ್ಮ ಮನಗೆ ಬಂದರೆ ಗೃಹಪ್ರವೇಶ ಆದಂತೆ. ಅದು ಬಿಟ್ಟು ನೀವು ಸಾವಿರ ಜನನ್ನ ಕರೆದು ಊಟ ಹಾಕಿ,ಉಡುಗೊರೆ ಕೊಟ್ಟರು ಏನೂ ಪ್ರಯೋಜನವಿಲ್ಲ. ನಡೀರಿ, ನಡೀರಿ. " ಎಂದು ಕಟುವಾಗಿ ಹೇಳಿ ಮುಖ ತಿರುಗಿಸಿಬಿಟ್ಟರು.
ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ ಆಯಿತು. ಗುರುಬಂಧು ಮತ್ತು ಅವರ ಪತ್ನಿಗೆ ತುಂಬಾ ಅವಮಾನವಾದಂತೆ ಆಯಿತು. ತಲೆ ತಗ್ಗಿಸಿ ನಿಂತು ಬಿಟ್ಟರು. ಮತ್ತೇನಾದರೂ ಹೇಳಬಹುದೆಂದು ಅವರು ಸ್ವಲ್ಪ ಸಮಯ ಕಾದರು. ಗುರುನಾಥರು ಅವರಕಡೆ ನೋಡಲೇ ಇಲ್ಲ. ಸ್ವಲ್ಪ ಸಮಯದ ನಂತರ " ಇನ್ನು ಯಾಕೆ ಇಲ್ಲೇ ಇದ್ದೀರಾ? ಹೋಗಿ ಮೊದಲು ಆಕೆಯನ್ನ ಮನೆಗೆ ಕರೆದು ತನ್ನಿ, ಆಮೇಲೆ ಬನ್ನಿ." ಎಂದು ಕಡ್ಡಿ ಎರಡು ತುಂಡು ಮಾಡಿದವರಂತೆ ಹೇಳಿಬಿಟ್ಟರು. ಅವರು ತಲೆ ತಗ್ಗಿಸಿ ಅಲ್ಲಿಂದ ಹೊರಟರು.
"ತಂದೆ ತಾಯಿಯ ಸೇವೆ ಮಾಡದೆ, ಏನು ಮಾಡಿದರು ಅದು ಕೇವಲ ಜನ ಮೆಚ್ಚಿಸಲು ಮಾತ್ರ. ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ , ದೇವರನ್ನು ಮೆಚ್ಚಿಸಬಹುದು. ಅಲ್ಲವೇ ಸಾರ್? " ಎಂದರು ಗುರುನಾಥರು.
ಈಗ್ಗೆ ನಾಲ್ಕಾರು ವರ್ಷಗಳ ಹಿಂದೆ ಹೇಳಿದ ಆ ಮಾತು ಇಂದಿಗೂ ನನ್ನನ್ನು ಯಾವಾಗಲು ಎಚ್ಚರಿಸುತ್ತಲೇ ಇರುತ್ತದೆ. ಯಾರಾದರು ಗೃಹಪ್ರವೇಶದ ಆಮಂತ್ರಣ ನೀಡಲು ಬಂದಾಗ ಈ ಘಟನೆ ತಟ್ಟನೆ ಜ್ಞಾಪಕಕ್ಕೆ ಬರುತ್ತದೆ.
ಆರ್ಯ ಸಮಾಜದಲ್ಲಿ ಉಪಾಕರ್ಮ
ಈ ವರ್ಷದ ನನ್ನ ಉಪಾಕರ್ಮ ಬೆಂಗಳೂರಿನ ಆರ್ಯ ಸಮಾಜದಲ್ಲಿ ಮಾಡಿಕೊಳ್ಲಬೇಕೆಂದು ನಿರ್ಧರಿಸಿ ಅಲ್ಲಿ ಆಚರಿಸಿಕೊಂಡೆ. ಅಗ್ನಿಹೋತ್ರವನ್ನು ಈಗಾಗಲೇ ನಾನು ಮಾಡುತ್ತಿದ್ದುದರಿಂದ ನನಗೆ ಅಲ್ಲಿನ ವಿಧಿಗಳು ಆಪ್ಯಾಯಮಾನವಾಗಿ ಸಂತಸ ನೀಡಿದವು. ಉಪಾಕರ್ಮ ಸಂದರ್ಭದಲ್ಲಿ ಉಪಾಕರ್ಮದ ಔಚಿತ್ಯವನ್ನು ಕುರಿತು ವೇದ ತರಂಗದ ಸಂಪಾದಕರಾದ ಶ್ರೀ ಶೃತಿಪ್ರಿಯರು ಮಾತನಾಡಿದರು. ಕೊನೆಯಲ್ಲಿ ವಯೋವೃದ್ಧರೂ ಜ್ಞಾನವೃದ್ಧರೂ ಆದ ಪಂಡಿತ್ ಸುಧಾಕರ ಚತುರ್ವೇದಿಯರಿಂದ ಆಶೀರ್ವಾದದದ ನುಡಿಗಳು.ಸುಮಾರು 120 ವರ್ಷದ ಪ್ರಾಯದಲ್ಲೂ ಪಂಡಿತಜಿಯವರ ನೆನಪಿನ ಶಕ್ತಿ, ಸಮಾಜದ ಬಗ್ಗೆ ಅವರ ಕಳಕಳಿ ನಮಗೆಲ್ಲಾ ಸ್ಪೂರ್ತಿದಾಯಕವಾಗಿತ್ತು. ವೃದ್ಧಾಪ್ಯದ ಸಹಜಕಾರಣದಿಂದ ಮಾತು ಸ್ವಲ್ಪ ಅಸ್ಪಷ್ತವಾಗಿದೆ ಎನಿಸ ಬಹುದು, ಆದರೆ ಅವರ ನೆನಪಿನ ಶಕ್ತಿ, ವಾಚಾರಿಕ ನೆಲೆ ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದೆ. ವೇದಸುಧೆಯ ಓದುಗರು ಕೇವಲ ಹತ್ತು ನಿಮಿಷಗಳ ಎರಡು ಆಡಿಯೊ ಕ್ಲಿಪ್ ಗಳನ್ನು ಕೇಳಬೇಕೆಂದು ಕೋರುವೆ.
Wednesday, August 1, 2012
ನಿಜದ ಹಾದಿಯಲ್ಲಿ ಸಾಗೋಣ
ವೇದಸುಧೆಯ ಆತ್ಮೀಯ ಬಂಧುಗಳೇ,
ನಮ್ಮ ಆಚರಣೆಗಳ ಬಗ್ಗೆ ಆಳವಾಗಿ ಚಿಂತನೆ ನಡೆಸಿದಾಗ ರೂಢಿಯಲ್ಲಿರುವ ನಮ್ಮ ಹಲವು ಆಚರಣೆಗಳಿಗೆ ಅರ್ಥವಿಲ್ಲದಿರುವುದು ಮನವರಿಕೆ ಯಾಗುತ್ತದೆ. ಆದರೂ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಆಚರಣೆಗಳನ್ನು ಬಿಡಲು ಬಲು ಕಷ್ಟ. ಈ ಸ್ಥಿತಿಯಲ್ಲಿ ನನ್ನನ್ನೂ ಸೇರಿದಂತೆ ಹಲವರು ತೊಳಲಾಡುತ್ತಿರುವುದು ಸುಳ್ಳಲ್ಲ. . ಹಲವರೊಡನೆ ಮಾತುಕತೆನಡೆಸಿದಾಗ ನನಗೆ ಈ ಸಂಗತಿ ಮನವರಿಕೆಯಾಗಿದೆ.ಇರಲಿ. ಕೆಲವರು ಸತ್ಯದ ಮಾರ್ಗದಲ್ಲಿ ಚಿಂತನಾಶೀಲರಾಗಿರುವುದು ಒಳ್ಳೆಯ ಲಕ್ಷಣ ವಂತೂ ಹೌದು. ನಿಜವ ತಿಳಿಯುವ ಹಾದಿಯಲ್ಲಿ ಪಂಡಿತ್ ಶ್ರೀ ಸುಧಾಕರ ಚತುರ್ವೇದಿಯವರು ಮತ್ತು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಹಾಗೂ ಇನ್ನೂ ಕೆಲವರು ಬೆರೆಳೆಣಿಕೆಯಲ್ಲಿ ನಮಗೆ ಕಾಣುತ್ತಾರೆ.ಒಮ್ಮೊಮ್ಮೆ ಸತ್ಯವನ್ನು ಕೇಳುವಾಗ ನಮಗೆ ಬಲು ಮುಜುಗರವಾಗುತ್ತದೆ. ಕಾರಣ ನಾವು ಹಲವು ವರ್ಷಗಳಿಂದ ಕೆಲವು ಆಚರಣೆಗಳಿಗೆ ಅಂಟಿಕೊಂಡಿದ್ದೇವೆ. ಅದು ತಪ್ಪೆಂದು ನಾನು ಭಾವಿಸುವುದಿಲ್ಲ. ನಮ್ಮ ಹಿರಿಯರು ಆಚರಣೆಯಲ್ಲಿ ತಂದದ್ದನ್ನು ನಾವು ಆಚರಿಸಿಕೊಂಡು ಬಂದಿದ್ದೇವೆ. ಅದರಿಂದಾಗಿ ನೂರಾರು ವರ್ಷಗಳ ಅನ್ಯ ಮತೀಯರ ದಾಳಿಯಾದರೂ ನಮ್ಮ ಸಂಸ್ಕೃತಿ-ಪರಂಪರೆಗಳು ಸಾವಿರಾರು ವರ್ಷಗಳಿಂದ ಗಟ್ಟಿಯಾಗಿಯೇ ನಿಂತಿವೆ.ನಮ್ಮದು ವೇದ ಉದಿಸಿದ ನಾಡು. ವೇದವನ್ನು ಎಲ್ಲರೂ ಒಪ್ಪುವವರೇ. ಆದರೆ ವೇದವನ್ನು ಕೇವಲ ಮಂತ್ರಗಳ ರೂಪದಲ್ಲಿ ಕೇಳಿ ಅನಂದಿಸುವ ನಾವು ಅದರ ಅರ್ಥವನ್ನು ತಿಳಿಯುವ ಸರಿಯಾದ ಪ್ರಯತ್ನ ಮಾಡುವಲ್ಲಿ ಸೋತಿದ್ದೇವೆ. ಹಾಗಾಗಿ ನಮಗೆ ವೇದದ ಬಗ್ಗೆ ಒಲವಿದ್ದರೂ ಅರ್ಥವನ್ನು ಸರಿಯಾಗಿ ಅರಿಯದ ಕಾರಣ ವೇದಬಾಹಿರವಾದ ಹಲವು ಆಚರಣೆಗಳನ್ನು ನಾವು ಮುಂದುವರೆಸಿಕೊಂಡೇ ಬಂದಿದ್ದೇವೆ. ವಿವಾಹ,ಉಪನಯನ ಮುಂತಾದ ಸಂಸ್ಕಾರ ನೀಡುವ ಸಂದರ್ಭದಲ್ಲೂ ಅನಗತ್ಯವಾದ, ಅರ್ಥವಿಲ್ಲದ ಹಲವು ಆಚರಣೆಗಳನ್ನು ರೂಢಿಮಾಡಿಕೊಂಡು ಮುಂದುವರೆಸಿಕೊಂಡು ಬಂದಿದ್ದೇವೆ. ಅದರಲ್ಲಿ ಇತ್ತೀಚಿನ ಆಚರಣೆ ಗಳೆಂದರೆ "ವೀಡಿಯೋ ತೆಗೆಯುವುದು" . ಎಷ್ಟರಮಟ್ಟಿಗೆ ಇದು ದುಷ್ಪರಿಣಾಮ ಬೀರುತ್ತಿದೆ ಎಂದರೆ ಎಲ್ಲಾ ಕಾರ್ಯಕ್ರಮಗಳೂ ವೀಡಿಯೋಗಾಗಿಯೇ ನಡೆಯುತ್ತವೆ. ವೀಡಿಯೋದಲ್ಲಿ ಚೆನ್ನಾಗಿ ಕಾಣಬೇಕೆಂಬ ಕಾರಣ ಕ್ಕಾಗಿಯೇ ಮದುವೆಯ ದಿನ ಪಾರ್ಲರ್ ಗಳಿಗೆ ಹೋಗಿ ವಿವಾಹ ಮಂಟಪದಲ್ಲಿ ಕೂರಬೇಕಾದ ವಧು ಅಲಂಕಾರ ಮಾಡಿಕೊಂಡು ಬರುತ್ತಾಳೆ. ಅವಳ ತಲೆಕೂದಲನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಮುಖಕ್ಕೆಲ್ಲಾ ಬಣ್ಣ ಬಳಿಸಿಕೊಂಡು, ತಲೆಗೂದಲನ್ನು ಡೈ ಮಾಡಿಕೊಂಡು ತಾನು ಚೆನ್ನಾಗಿಕಾಣುತ್ತಾಳೆಂದು ಕೊಳ್ಳುತ್ತಾಳೆ. ಮದುವೆಮನೆಯಲ್ಲಿ ಪುರೋಹಿತರು ಮಾಡಿಸುವ ಶಾಸ್ತ್ರ ಮುಗಿದರೆ ಸಾಕು, ವೀಡಿಯೋ ಚಿತ್ರೀಕರಣಕ್ಕಾಗಿ ಎಲ್ಲರೂ ಹಾತೊರೆಯುತ್ತಿರುತ್ತಾರೆ. ಇದು ಈಗ ನಡೆಯುತ್ತಿದೆ. ಮುಂದೆ ಇದೇ ಒಂದು ಆಚರಣೆಯಾಗಿ ಉಳಿಯುವುದಿಲ್ಲವೇ?
ನಮ್ಮ ಹಿಂದಿನವರು ಮನುಷ್ಯನ ಉತ್ತಮ ಆರೋಗ್ಯಕರ ಬದುಕಿಗಾಗಿ ರಚಿಸಿದ ಶೋಡಷ ಕರ್ಮಗಳು ಅವುಗಳ ಅರ್ಥವನ್ನು ಕಳೆದುಕೊಳ್ಳುತ್ತಿಲ್ಲವೇ? ಒಮ್ಮೆ ನಾವು ನಮ್ಮ ಸಧ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಕೌಟುಂಬಿಕ ನೆಮ್ಮದಿಯಬಗ್ಗೆ ಆತ್ಮಾವಲೋಕನ ಮಾಡಿಕೊಳ್ಲ ಬೇಡವೇ?
ನಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆಯೇ? ಇದ್ದರೆ ಸಂತೋಷ. ನಾವು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇವೆಂದೇ ಅರ್ಥ. ನೆಮ್ಮದಿ ಎಂಬುದು ನಿಜವಾದ ಅರ್ಥ ಉಳ್ಳದ್ದಾಗಿರಲೂ ಬೇಕು. ಒಂದು ವೇಳೆ ನೆಮ್ಮದಿ ಕಮ್ಮಿಯಾಗಿದ್ದರೆ ಆಗ ನಮಗೆ ಪ್ರಶ್ನೆ ಹಾಕಿಕೊಳ್ಳೋಣ. ನಮ್ಮ ನೆಮ್ಮದಿಯನ್ನು ಹಾಳು ಮಾಡಿದ ಸಂಗತಿಗಳು ಯಾವುವು? ನಮ್ಮ ಜೀವನ ಕ್ರಮ ಸರಿಯಾಗಿದೆಯೇ? ನಮ್ಮ ನಿತ್ಯ ಕರ್ಮಗಳು, ನಮ್ಮ ದೈನಂದಿನ ಜೀವನ ಕ್ರಮವು ನಮ್ಮ ಆರೋಗ್ಯ ಪೂರ್ಣ ಬದುಕಿಗೆ ಪೂರಕವಾಗಿದೆಯೇ?
ಯಾಕೆ ಇಷ್ಟೆಲ್ಲಾ ಹೇಳುತ್ತಿದ್ದೀನೆಂದರೆ ವೇದದಲ್ಲಿ ಇರುವುದೇ ನೆಮ್ಮದಿಯ ಜೀವನ ನಡೆಸುವ ಕಲೆ. ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಂತವರು ಸಾಕಷ್ಟು ಅಧ್ಯಯನ ಮಾಡಿ ವೇದ ಮಂತ್ರಗಳ ಅರ್ಥವನ್ನು ನಮಗೆ ಸರಳ ವಾದ ರೀತಿಯಲ್ಲಿ ತಿಳಿಸುತ್ತಿದ್ದಾರೆ. ಅವರ ವಿಚಾರಗಳಿಗೆ ವೇದಸುಧೆಯು ಬಹಳ ಪ್ರಾಮುಖ್ಯತೆ ಕೊಟ್ಟಿದೆ. ಕಳೆದ ಒಂದು ವರ್ಷದಿಂದ ಅನಾರೋಗ್ಯ ದಿಂದ ನೆರಳಿ ಈಗ ಚೇತರಿಸಿಕೊಂಡು ವೇದಸುಧೆಯ ಓದುಗರಿಗಾಗಿ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ "ಶರ್ಮರ ಪುಟ" ದಲ್ಲಿ ಸಾಕಷ್ಟು ವೇದಮಂತ್ರಗಳ ಅರ್ಥವಿವರಣೆಯ ಆಡಿಯೋ ಗಳು ಪ್ರಕಟವಾಗಿವೆ. ಅವೆಲ್ಲವೂ ನಮ್ಮ ಜೀವನಕ್ಕೆ ಉಪಯುಕ್ತವೇ ಆಗಿದೆ. ಇಷ್ಟಾದರೂ ಒಂದು ವಿಚಾರವನ್ನು ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ. ಶರ್ಮರು ಕೆಲವು ನಿಷ್ಟುರ ಮಾತುಗಳ ನ್ನಾಡುತ್ತಾರೆ. ಅವುಗಳನ್ನು ವೇದಮಂತ್ರದ ಆಧಾರದಿಂದ ಸಮರ್ಥಿಸುತ್ತಾರೆ. ಆದರೆ ಅವರ ಯಾವುದೇ ವಿಚಾರಗಳು ವೇದಬಾಹಿರವಾಗಿದೆ, ಎಂದು ಯಾವುದೇ ವೇದ ಪಂಡಿತರು ಭಾವಿಸಿದರೆ, ದಯಮಾಡಿ ಅವರು ಆಧಾರಸಹಿತವಾಗಿ ವೇದಸುಧೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ವಿನಂತಿಸುತ್ತೇನೆ. ಅದಕ್ಕಾಗಿ ಅವರು ವೇದಸುಧೆಗೆ ಒಂದು ಮೇಲ್ ಕಳಿಸಿದರೂ ಕೂಡ ಅದನ್ನು ಪ್ರಕಟಿಸಲು ವೇದಸುಧೆಯು ಬದ್ಧವಾಗಿದೆ. ಪೂರ್ವಾಗ್ರಹವನ್ನು ಬಿಟ್ಟು ನಿಜದ ಹಾದಿಯಲ್ಲಿ ಸಾಗೋಣವೆಂದು ವೇದಸುಧೆಯು ಬಯಸುತ್ತದೆ.
ಸುಕ್ಷೇತ್ರೇ ವಾಪಯೇದ್ ಬೀಜಂ
ಸುಕ್ಷೇತ್ರೇ ವಾಪಯೇದ್ ಬೀಜಂ ಸುಪುತ್ರೇ ದಾಪಯೇದ್ ಧನಂ |
ಸುಕ್ಷೇತ್ರೆ ಚ ಸುಪುತ್ರೇಚ ಯತ್ ಕ್ಷಿಪ್ತಂ ನೈವ ನಶ್ಯತಿ ||
ಫಲವತ್ತಾದ ನೆಲದಲ್ಲಿ ಬೀಜವನ್ನು ಬಿತ್ತಬೇಕು, ಗುಣಶಾಲಿಯಾದ ಮಗನಿಗೆ ಹಣವನ್ನು ನೀಡಬೇಕು . ಒಳ್ಳೆಯ ನೆಲದಲ್ಲಿ ಮತ್ತು ಗುಣವಂತನಾದ ಮಗನಲ್ಲಿ ಇಟ್ಟದ್ದು, ಕೊಟ್ಟದ್ದು ಎಂದಿಗೂ ಸಹ ಹಾಳಾಗುವುದಿಲ್ಲ. ಕೊಡುವಾಗ ಮತ್ತು ತೆಗೆದು ಕೊಳ್ಳುವಾಗಲೂ ಪಾತ್ರಾಪಾತ್ರ ವಿವೇಚನೆ ಯಿಂದಲೇ ಕೊಡಬೇಕು - ಶುಭೋದಯ
ಸುಕ್ಷೇತ್ರೆ ಚ ಸುಪುತ್ರೇಚ ಯತ್ ಕ್ಷಿಪ್ತಂ ನೈವ ನಶ್ಯತಿ ||
ಫಲವತ್ತಾದ ನೆಲದಲ್ಲಿ ಬೀಜವನ್ನು ಬಿತ್ತಬೇಕು, ಗುಣಶಾಲಿಯಾದ ಮಗನಿಗೆ ಹಣವನ್ನು ನೀಡಬೇಕು . ಒಳ್ಳೆಯ ನೆಲದಲ್ಲಿ ಮತ್ತು ಗುಣವಂತನಾದ ಮಗನಲ್ಲಿ ಇಟ್ಟದ್ದು, ಕೊಟ್ಟದ್ದು ಎಂದಿಗೂ ಸಹ ಹಾಳಾಗುವುದಿಲ್ಲ. ಕೊಡುವಾಗ ಮತ್ತು ತೆಗೆದು ಕೊಳ್ಳುವಾಗಲೂ ಪಾತ್ರಾಪಾತ್ರ ವಿವೇಚನೆ ಯಿಂದಲೇ ಕೊಡಬೇಕು - ಶುಭೋದಯ
Tuesday, July 31, 2012
ಯೋಚಿಸಲೊ೦ದಿಷ್ಟು...೫೪
೧. ನಾವು ದೇವರನ್ನು ನ೦ಬುವುದಕ್ಕಿ೦ತಲೂ ಹೆಚ್ಚಾಗಿ ಪುರೋಹಿತರನ್ನು ನ೦ಬುತ್ತೇವೆ!
೨. ಹಣ- ಅ೦ತಸ್ತುಗಳ ಹಿ೦ದೆ ಹೊರಟು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ!
ಮಾನವ ಸ೦ಬ೦ಧಗಳ ನಡುವೆ ಈ ದಿನಗಳಲ್ಲಿ ಅರ್ಥವಿಲ್ಲದ೦ತಾಗಿದೆ.
೩. ಪರಸ್ಪರ ಪರಿಧಿಯನ್ನು ದಾಟದಿರುವುದು
ಎಲ್ಲಾ ಸ೦ಬ೦ಧಗಳಲ್ಲಿಯೂ ಅತ್ಯವಶ್ಯ.
೪. ಅಮೇಜಾನ್ ಕಣಿವೆಯಲ್ಲಿನ ಅರಣ್ಯದ
ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡುವ ನಾವು ನಮ್ಮ ಮನೆಯ ಸುತ್ತಮುತ್ತಲಿನ ಮರ-ಗಿಡಗಳ
ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ!
೫. ನಮ್ಮ ವಿದ್ಯಾಭ್ಯಾಸ ಪದ್ಧತಿ ಕೇವಲ ಪದವಿ ಹಾಗೂ ಹಣವನ್ನು ಗಳಿಸಲು ಮಾತ್ರವೇ
ಹೇಳಿಕೊಡುತ್ತದೆ. ಆದರೆ ಬದುಕುವುದು ಹೇಗೆ? ಎ೦ಬುದನ್ನು ತಿಳಿಸಿಕೊಡುವುದಿಲ್ಲ!
೬. ಪ್ರತಿದಿನವೂ ಈ ಭೂಮಿಯ ಮೇಲೆ ನಮ್ಮದೊ೦ದು ಮರುಹುಟ್ಟು. ಆದ್ದರಿ೦ದ ಪ್ರತಿದಿನವೂ
ಎ೦ದಿನ೦ತೆಯೇ ಸ೦ತಸದಿ೦ದ –ಆಶಾವಾದದಿ೦ದ – ಹೊಸ ನಿರೀಕ್ಷೆಯಿ೦ದ ಆರ೦ಭಿಸೋಣ.
೭. ಎಲ್ಲರೂ ಒ೦ದೇ ರೀತಿಯಲ್ಲಿ ಚಿ೦ತಿಸಿದರೆ ಈ ಜಗತ್ತು ಎಷ್ಟು ಸು೦ದರವೆ೦ದು ನಾವು
ಯೋಚಿಸಿದರೂ, ಪರಸ್ಪರ ಭಿನ್ನ ರೀತಿಯಲ್ಲಿ ಚಿ೦ತಿಸುವುದರಿ೦ದಲೇ ಇದು ಇಷ್ಟೊ೦ದು
ಸು೦ದರವಾಗಿರುವುದು!
೮. ಯಾರೂ ಸ೦ತಸವನ್ನು ಹೊತ್ತುಕೊ೦ಡು
ಬ೦ದಿರುವುದಿಲ್ಲ. ಆದರೆ ನಾವೆಲ್ಲರೂ ಸ೦ತಸವನ್ನು ಗಳಿಸುವಷ್ಟು ಶಕ್ತರಾಗಿದ್ದೇವೆನ್ನುವುದು ಮಾತ್ರ
ದಿಟ!
೯. ಒ೦ದು ಸಣ್ಣ ನಗು ಎ೦ಥ ಕಠಿಣ ಹೃದಯಿಯನ್ನೂ ಕ್ಷಣ ಕಾಲ ಬೆರಗಾಗಿಸುತ್ತದೆ!
೧೦. ಜೀವನವೊ೦ದು ಪಿಯಾನೋ ವಾದ್ಯವಿದ್ದ೦ತೆ.. ಅದರಲ್ಲಿನ ಕಪ್ಪು ನಡೆಗಳು ದು:ಖವನ್ನು
ಧ್ವನಿಸಿದರೆ, ಬಿಳಿ ನಡೆಗಳು ಸುಖವನ್ನು ಧ್ವನಿಸುತ್ತವೆ! ಆದರೆ ಒ೦ದು ಮನಮೋಹಕ ರಾಗಕ್ಕಾಗಿ
ಅವೆರಡೂ ನಡೆಗಳನ್ನು ಒಟ್ಟಿಗೇ ನುಡಿಸಬೇಕು!!
೧೧. ಸಮಸ್ಯೆಗಳು ಬ೦ದಾಗ ,ನಾವು ಸಮಸ್ಯೆಗಳ ಸ೦ಕೀರ್ಣತೆ ಯಾ ಸರಳತೆಯ ಬಗ್ಗೆ ಗಮನವನ್ನು
ಹರಿಸುವುದಿಲ್ಲ.. ಬದಲಾಗಿ ಸಮಸ್ಯೆ ಉ೦ಟು ಮಾಡಿದವರ ಬಗ್ಗೆ ಯೋಚಿಸುತ್ತ ಕುಳಿತು ಬಿಡುತ್ತೇವೆ!
ಇದು ಪರಿಹಾರವನ್ನು ಕ೦ಡುಕೊಳ್ಳುವ ಮಾರ್ಗವನ್ನು ಮತ್ತಷ್ಟು ಜಟಿಲಗೊಳಿಸುತ್ತದೆ!
೧೨. ಆಳುವವರು ಮತ್ತು ಆಳಿಸಿಕೊಳ್ಳುವವರಿಬ್ಬರೂ ಪರಸ್ಪರ ಒಳಿತನ್ನು ಚಿ೦ತಿಸಿ,
ಅನುಷ್ಠಾನಗೈದರೆ ಮತ್ತಿನ್ಯಾವ ಸ್ವರ್ಗವನ್ನೂ ಭುವಿಗಿಳಿಸುವುದು ಬೇಡ!
೧೩. ಎಲ್ಲಾ ಮತ ಪುರೋಹಿತರೂ ಯಾವುದೇ ರಾಜಕೀಯ, ಆರ್ಥಿಕ ಹಾಗೂ ಲೈ೦ಗಿಕ
ಹಿತಾಸಕ್ತಿಗಳೊ೦ದಿಗೆ ರಾಜಿ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸಿದರೆ ಲೋಕದಲ್ಲಿ ತನ್ನಿ೦ತಾನೇ ಧರ್ಮವು ಊರ್ಜಿತಗೊಳ್ಳುತ್ತದೆ!
೧೪. ಈ ಲೋಕದಲ್ಲಿ ನಮ್ಮ ಆತ್ಮಕಥೆಯನ್ನು
ನಾವೇ ಬರೆಯಬೇಕು. ಒ೦ದೇ ಪುಸ್ತಕದ ಮಾದರಿಯಲ್ಲಿ ಇಲ್ಲವೇ ಸತ್ಕರ್ಮಗಳ ಮಾದರಿಯಲ್ಲಿ! ಇಲ್ಲದಿದ್ದರೆ
ನಾವು ಅಳಿದ ಮೇಲೆ ನಮ್ಮ ಬಗ್ಗೆ ಈ ಲೋಕವೇ ನೂರಾರು ಭಿನ್ನ ಕಥೆಗಳನ್ನು ಹೇಳುತ್ತದೆ!!
೧೫. ಒಮ್ಮೊಮ್ಮೆ ಹತ್ತು ಹಲವಾರು ಯೋಜನೆಗಳೊ೦ದಿಗೆ ಬದುಕುವುದಕ್ಕಿ೦ತ “ ದಿನಕ್ಕೊ೦ದು
ಯೋಜನೆ- ಆ ದಿನದ ಬದುಕು “ ಎ೦ಬ ಲಹರಿಯ ಬದುಕೇ ಸೂಕ್ತವೆನಿಸುತ್ತದೆ!
Subscribe to:
Posts (Atom)