Pages

Thursday, June 6, 2013

ಯೋಚಿಸಲೊ೦ದಿಷ್ಟು... ೬೪




೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ  ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ!
೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ ನ೦ತರ ಮನೆಗೆ ಬೀಗ ಹಾಕಿಲ್ಲವೆ೦ದು ಹಿ೦ತಿರುಗಿ ಬರಬೇಕಾಗುತ್ತದೆ!
೩.  “ ಕ್ಷಮಿಸಿ “ ಎ೦ದು ಕೇಳುವಾಗ ತಪ್ಪು ಮಾಡಿದುದರ ಭಾವನೆ ಇರದಿದ್ದಲ್ಲಿ ಕ್ಷಮಿಸುವವರಲ್ಲಿ ಅದು ಮತ್ತಷ್ಟು ಕೋಪವನ್ನೋ ಯಾ ಅಸಮ್ಮತಿಯನ್ನೋ ಉ೦ಟುಮಾಡುತ್ತದೆ!
೪. ದೇವರು ಯಾವ ಫಲಿತಾ೦ಶಗಳನ್ನೂ ನಮಗೆ ಕೊಡದೇ, ನಾವು ಮಾಡಿದ ಕರ್ಮದ ಫಲವನ್ನು ನಾವು ಉಣ್ಣುವುದರ ಸಾಕ್ಷಿಯಾಗಿ ಮಾತ್ರ ಕುಳಿತಿರುತ್ತಾನೆ!
೫. ದೇವರು ಪೂಜಾ ಸ್ಠಳಗಳಲ್ಲಿ ಪ್ರತ್ಯಕ್ಷನಾಗಿ ಭಕ್ತರ ಕೋರಿಕೆಗಳನ್ನು ಈಡೇರಿಸುವೆನೆ೦ದು ನಿ೦ತರೆ ಅರ್ಚಕರು ಅವನಲ್ಲಿಗೆ ಯಾರನ್ನೂ ಬಿಡಲಾರರು!
೬. ದೊಡ್ಡವರ ತಪ್ಪುಗಳನ್ನು ಒಪ್ಪಿಕೊ೦ಡು, ನಿರ್ಲಕ್ಷಿಸುವುದರಿ೦ದ ಮು೦ದಿನ ಪೀಳಿಗೆಗೆ ನಮ್ಮಿ೦ದ ತಪ್ಪು ಸ೦ದೇಶದ ರವಾನೆಯಾದ೦ತಾಗುತ್ತದೆ!
೭. ನಾವು ಎಷ್ಟೋ ಪ್ರಶ್ನೆಗಳ ಉತ್ತರವನ್ನು ಹಾಗೂ ವಿಮರ್ಶೆಯನ್ನು ಮಾಡಲು ಹೋಗದೇ ಸಿಧ್ಧ ಉತ್ತರವನ್ನೇ ಒಪ್ಪಿಕೊಳ್ಳುತ್ತೇವೆ ಹಾಗೂ ಅದನ್ನೇ ಅನುಸರಿಸುತ್ತೇವೆ!
೮. ಪ್ರೀತಿ ಮತ್ತು ಬುಧ್ಧಿವ೦ತಿಕೆಗಳೆರಡು ಮನುಷ್ಯ ಹಾಗೂ ಪ್ರಾಣಿಗಳ ಅ೦ತರವನ್ನು ಹೆಚ್ಚಿಸಿವೆ! ನಾವು ಅವೆರಡನ್ನೂ ಕಳೆದುಕೊ೦ಡಲ್ಲಿ ನಮ್ಮಗಳ ನಡುವಿನ ಆ ಹೆಚ್ಚಿನ ಅ೦ತರವನ್ನು ಕಡಿಮೆಗೊಳಿಸಬಹುದು!
೯. ಯಾವುದೇ ವಿಚಾರದ ಬಗ್ಗೆ ಅರಿಯುವುದಕ್ಕಿ೦ತಲೂ , ಅರಿಯಲು ವಿರೋಧಿಸುವುದು ಬಲು ದೊಡ್ಡ ತಪ್ಪು!
೧೦. ಕಲ್ಪನಾಶಕ್ತಿ ಎ೦ಬುದು ಮಾನವನಿಗೆ ವರವೂ ಹೌದು ಅ೦ತೆಯೇ ಶಾಪವೂ ಹೌದು! ನಮ್ಮ ಸ೦ತೋಷ ಹಾಗೂ ದು:ಖಗಳೆರಡಕ್ಕೂ ಅದೇ ಕಾರಣ!
೧೧. ನಮ್ಮ ಕೆಟ್ಟ ಸಮಯದಲ್ಲಿ ಜೊತೆಯಿರದಿದ್ದವನಿಗೆ ನಮ್ಮ ಒಳ್ಳೆಯ ಕ್ಷಣಗಳನ್ನು ಹ೦ಚಿಕೊಳ್ಳುವ ಅಧಿಕಾರವೂ ಇರುವುದಿಲ್ಲ.
೧೨. ಈ ಛಳಿಗಿ೦ತ ಆರಕ್ಷಕರೇ ಮೇಲು! ಆರಕ್ಷಕರು ನಮ್ಮನ್ನು ದೈಹಿಕವಾಗಿ ಹಿ೦ಸಿಸಿದರೆ, ಈ ಛಳಿ ಎನ್ನುವುದು ನಮ್ಮನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಗಡಗಡ ನಡುಗುವ೦ತೆ ಮಾಡುತ್ತದೆ!- ಆಸುಮನದ ಮಾತುಗಳು
೧೩. ನಮ್ಮ ಸಹಾಯದ ಅಗತ್ಯ ಇರುವವರಿಗೆ ಉಪಕರಿಸಿ ಸ೦ತಸ ಪಡೋಣ! ನಮ್ಮ ಕಷ್ಟಗಳ ಪರಿಹಾರಕ್ಕೆ೦ದೇ ಬೇರೆಲ್ಲೋ ಮತ್ತೊಬ್ಬನನ್ನು ದೇವರು ಸೃಷ್ಟಿಸಿರುತ್ತಾನೆ!
೧೪. ಒಮ್ಮೊಮ್ಮೆ ಅಗತ್ಯವಾಗಿ ಬೇಕಾದ ವಸ್ತುವಿನ ಕೊರತೆಯಲ್ಲಿಯೂ ನಾವು ಸ೦ತೋಷದಿ೦ದಲೇ ಇರುವುದು ವಿಚಿತ್ರವಾದರೂ ಸತ್ಯವಾದುದು!
೧೫. ಭಯಕ್ಕೆ ನಮ್ಮ ದೈಹಿಕಾ೦ಗಗಳ ಯಾವುದೇ ಪ್ರಚೋದನೆಯಿರದಿದ್ದರೂ , ಒಮ್ಮೊಮ್ಮೆ ನಮ್ಮಲ್ಲಿಯೇ ಮನೆ ಮಾಡಿಬಿಡುತ್ತದೆ!

Wednesday, June 5, 2013

ಸಂಪಾದಕೀಯ

           ಕಳೆದ ನಾಲ್ಕೈದು ವರ್ಷಗಳ ಮುಂಚೆ ನಾನು ಯಾವ ವಿಷಯದಲ್ಲಿ ವೇದಾಧ್ಯಾಯೀ ಸುಧಾಕರಶರ್ಮರೊಡನೆ ವಾದ ಮಾಡುತ್ತಿದ್ದೆನೋ ಅದೇ ವಿಷಯದಲ್ಲಿ ನಾನೀಗ ಬೇರೆಯವರಿಗೆ ಉತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಇಂದು ಮೂರ್ನಾಲ್ಕು ಜನ ಮಿತ್ರರು ಹರಟೆ ಹೊಡೆಯುತ್ತಿದ್ದೆವು. ಮಿತ್ರರೊಬ್ಬರು ನನಗೆ ಒಂದು ಸಲಹೆ ಕೊಟ್ಟರು " ನೋಡೀ, ನೀವು ಸಾಕಷ್ಟು ಸದ್ವಿಚಾರದ ಚಿಂತನೆ ಮಾಡುತ್ತಿರುವಿರಿ, ಆದರೆ ಒಂದು ವಿಷಯದಲ್ಲಿ ನನಗೂ ನಿಮಗೂ ಭೇದ ಇದೆ. ಅದೇನಪ್ಪಾ ಅಂದರೆ ನಿಮಗೆ ಸತ್ಯ ಎನಿಸಿದ್ದನ್ನು ಬರೆಯಿರಿ, ಆದರೆ ಬೇರೆಯವರನ್ನೇಕೆ ಖಂಡಿಸುತ್ತೀರಿ?

      ನಾನೂ ಶರ್ಮರೊಡನೆ ಇದೇ ವಿಚಾರದಲ್ಲಿ ಜಗಳವನ್ನೇ ಮಾಡುತ್ತಿದ್ದೆ. ಮೊನ್ನೆ ಅವರ ಭೇಟಿಯಾದಾಗ ಶರ್ಮರು ಹೇಳಿದರು" ನೋಡಿ, ನಿಮ್ಮ ಪರಿಚಯವಾದ ದಿನಗಳಿಗೂ ಇಂದಿಗೂ ನನ್ನಲ್ಲಿ ಸುಧಾರಣೆ ಆಗಿಲ್ಲವಾ? ನಿಮ್ಮ ತುಡಿತ ನನಗೆ ಅರ್ಥವಾಗಿದೆ. ನಾನು ಸತ್ಯದ ಹಾದಿಗಾಗಿ ವೇದದ ವಿರುದ್ಧದ ವಿಚಾರಗಳನ್ನು  ಖಂಡಿಸುತ್ತಿದ್ದಾಗ ನನ್ನೊಡನೆ ಹೆಚ್ಚು ಜನರು ಬರುತ್ತಿರಲಿಲ್ಲ. ಈಗ ವೇದದ ವಿಚಾರವನ್ನು ಹೇಳಿ ಖಂಡಿಸಬೇಕಾದ ವಿಚಾರವನ್ನು ಬಿಟ್ಟಿರುವುದರಿಂದ   ನನ್ನ ಹತ್ತಿರ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ವೇದದ ವಿಚಾರವನ್ನು ಹೆಚ್ಚು ಜನರಿಗೆ ತಲುಪಿಸಲು ಸಾಧ್ಯವಾಗಿದೆ.
     
         ಹೌದು, ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರು ಆಳವಾಗಿ ವೇದವನ್ನು ಅಧ್ಯಯನ ಮಾಡಿದ್ದಾರೆ.ವೇದಕ್ಕೆ ವಿರುದ್ಧವಾದದ್ದನ್ನು ಖಂಡಿಸುವ ಸಾಮರ್ಥ್ಯವೂ ಅವರಿಗಿದೆ. ಆದರೂ ಖಂಡಿಸುವ ಪರಿಗಿಂತಲೂ  ವೇದದ ವಿಚಾರವನ್ನು  ಮನಕ್ಕೆ ನಾಟುವಂತೆ ಮಂಡಿಸುತ್ತಾರೆ.  ವೇದದ ವಿಚಾರಕ್ಕಾಗಿ ಅವರನ್ನು ಅರಸಿಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

           ನಾನಾದರೋ ಸಾಮಾಜಿಕ ಕಾರ್ಯದಲ್ಲಿ ಹಲವರೊಡನೆ ಜೋಡಿಸಿಕೊಂಡಿರುವವನು. ನನ್ನ ಪರಿಚಿತರೆಲ್ಲರೂ ನಾನು ಒಪ್ಪಿರುವ ವಿಚಾರವನ್ನು ನೂರಕ್ಕೆ ನೂರು ಒಪ್ಪುತ್ತಾರೆಂದೇನೂ ಅಲ್ಲ. ಇಲ್ಲೇ ನನಗೆ ಸಮಸ್ಯೆ ಎದುರಾಗಿರುವುದು. ವೇದಕ್ಕೆ ವಿರುದ್ಧವಾದುದನ್ನು  ನನ್ನ ಮನಸ್ಸು  ಒಪ್ಪುವುದಿಲ್ಲ. ತಟ್ಟನೆ ವಿರೋಧಿಸಿ ಬಿಡುವ ಸ್ವಭಾವ ನನ್ನದು.ಆದರೆ ನನ್ನ ಮಿತ್ರರು ನನಗೆ ಕೊಡುತ್ತಿರುವ ಸಲಹೆ ಎಂದರೆ " ನಮ್ಮ ಹಿರಿಯರು ನೂರಾರು ವರ್ಷಗಳಿಂದ ಆಚರಿಸಿಕೊಂಡು  ಬಂದಿರುವ ಹಲವು ವಿಚಾರಗಳನ್ನು ಅವು ವೇದ ಸಮ್ಮತವಲ್ಲವೆಂದು ಬಿಡಲು  ಸಾಧ್ಯವಿಲ್ಲ. ನಮಗೆ ಅದರಲ್ಲಿ ಸಮಾಧಾನವಿದೆ. ಮೂರ್ತಿ ಪೂಜೆ ಬೇಡ ಅಂತೀರಿ.ವೇದದಲ್ಲಿ ಮೂರ್ತಿ ಪೂಜೆ ಇಲ್ಲದಿರಬಹುದು. ನೂರಾರು ವರ್ಷಗಳಿಂದ ಆಚರಿಸಿಕೊಂಡು  ಬಂದಿರುವ ನಮ್ಮ ಪೂರ್ವಿಕರು ಹೆಡ್ದರೇನಲ್ಲ. ನೀವು ನಿಮ್ಮ ಪಾಡಿಗೆ ವಿಚಾರಗಳನ್ನು ಮಂಡಿಸುತ್ತಾ ಹೋಗಿ, ಯಾರ ತಂಟೆಗೂ ಬರಬೇಡಿ. ನಿಮ್ಮ ವಿಚಾರ ಬೇಕಾದರೆ ಜನರು ಸ್ವೀಕರಿಸುತ್ತಾರೆ, ಇಲ್ಲದಿದ್ದರೆ ಇಲ್ಲ, ಅಷ್ಟೆ."
      ನನ್ನ ಮಿತ್ರರು ಈ ಮಾತು ಹೇಳಬೇಕಾದರೆ ಅದು ಕೇವಲ ಅವರ ಮಾತಲ್ಲ, ಎಂಬ ಅರಿವು ನನಗಿದೆ. ಈ ಬಗ್ಗೆ ಸಾಕಷ್ಟು ಯೋಚಿಸಿದ ನಂತರ "ಹೌದಲ್ವಾ, ನಾನು ಯಾವುದೋ ವಿಚಾರವನ್ನು ಖಂಡಿಸಿ ವಿರೋಧ ಎದುರಿಸುವ ಬದಲು ,ವೇದದ ವಿಚಾರವನ್ನು ನಾನು ಅರ್ಥ ಮಾಡಿಕೊಂಡಂತೆ ತಿಳಿಸುತ್ತಾ ಹೋಗುವುದು, ಇಲ್ಲಿಯವರೆಗೂ  ಸ್ಥಳೀಯ ಪತ್ರಿಕೆಗಳಲ್ಲಿ ನಾನು ಬರೆದಿರುವ ಲೇಖನಕ್ಕಾಗಲೀ, ಅಥವಾ ಬ್ಲಾಗ್ ಬರಹಕ್ಕಾಗಲೀ " ಇದು ತಪ್ಪು" ಎಂದು ಯಾರೂ ನೇರವಾಗಿ ಹೇಳಿಲ್ಲ. ತಪ್ಪು ಎನಿಸಿದರೆ "ಇದು ತಪ್ಪು, ಇದು ಸರಿ " ಎಂದು ತಿಳಿಸಿರೆಂದೇ ನನ್ನ ಕೋರಿಕೆ. ಆದರೆ ಯಾಕೋ ಯಾರೂ ನೇರವಾಗಿ ಅವರ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಇರಲಿ. ವೇದಾಧ್ಯಾಯೀ ಸುಧಾಕರಶರ್ಮರೇ ಖಂಡನಾ ಮಾರ್ಗವನ್ನು ಬಿಟ್ಟಮೇಲೆ ನನ್ನದು ಯಾವ ದೊಡ್ದ ವಿಷಯ?  ಇನ್ನು ಮುಂದೆ ಯಾರ ಮನಸ್ಸಿಗೂ ಕಸಿವಿಸಿಯಾಗದಂತೆ ಬರೆಯಬೇಕೆಂದುಕೊಂಡಿದ್ದೇನೆ. ಆ ದಿಕ್ಕಿನಲ್ಲಿ ಸಾಗಲು ಭಗವಂತನು ಶಕ್ತಿ ಕೊಡಲಿ.

-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ

Saturday, May 25, 2013

ಕುಸುಮ: 30

 “ಎಲ್ಲರಿಗಾಗಿ ವೇದ” -   ಬ್ರಾಹ್ಮಣ ವರ್ಣ  
                             
ಬ್ರಾಹ್ಮಣ ವರ್ಣದ ಕರ್ತವ್ಯಗಳ ಬಗ್ಗೆ ಕಳೆದ ವಾರ ಒಂದಿಷ್ಟು ವಿಚಾರ ಮಾಡಿದ್ದೆವು. ಈ ವಾರವೂ ಅದೇ ವಿಷಯವನ್ನು ಮುಂದುವರೆಸೋಣ. ಋಗ್ವೇದದ ಏಳನೇ ಮಂಡಲದ 103 ನೇ ಸೂಕ್ತದ 7ನೇ ಮಂತ್ರವನ್ನು ನೋಡೋಣ.

ಬ್ರಾಹ್ಮಣಾಸೋ ಅತಿರಾತ್ರೇ ನ ಸೋಮೇ ಸರೋ ನ ಪೂರ್ನಮಭಿತೋ ವದಂತ: |
ಸಂವತ್ಸರಸ್ಯ ತದಹ:  ಪರಿ ಷ್ಠ ಯನ್ಮಂಡೂಕಾ:  ಪ್ರಾವೃಷೀಣಂ ಬಭೂವ ||

ಅರ್ಥ:-
ಯತ್ = ಹೇಗೆ
ಸಂವತ್ಸರಸ್ಯ = ವರ್ಷದ
ಪ್ರಾವೃಷೀಣಮ್ = ಮಳೆಗಾಲದ
ಅಹ: = ದಿನವು
ಬಭೂವ = ಇರುತ್ತದೋ
ಮತ್ತು 
ತತ್ ಅಹ: = ಆ ದಿನ
ಮಂಡೂಕಾ: = ಶುದ್ಧ ಮನಸ್ಕರು
ಪೂರ್ಣಮ್ = ಪೂರ್ಣವಾಗಿ
ಸರ: = ಜ್ಞಾನವನ್ನು
 ಅಭಿತ: = ಎಲ್ಲೆಡೆಯಲ್ಲೂ
ವದಂತ: = ಉಪದೇಶಿಸುತ್ತಾ
ಪರಿಷ್ಠ: = ಉತ್ತಮ ರೀತಿಯಲ್ಲಿ ದೃಢವಾಗಿ ನಿಲ್ಲುತ್ತಾರೋ
ಹಾಗೆಯೇ
ಅತಿರಾತ್ರೇ = ದಾನಕರ್ಮದ ಮಿತಿಯನ್ನು ದಾಟಿ
ಸೋಮೇ ನ = ವಿವೇಕವನ್ನು ಹಂಚುವಂತೆ
ಬ್ರಾಹ್ಮಣಾಸ: = ಬ್ರಹ್ಮ ಜ್ಞಾನಿಗಳೇ
ಪರಿಷ್ಠ: = ದೃಢವಾಗಿ ನಿಲ್ಲಿ
ಭಾವಾರ್ಥ:-
 ವರ್ಷಾಕಾಲದಲ್ಲಿ ಜಲಧಾರೆಗಳು ಹರಿಯುವಂತೆ, ಶುದ್ಧ ಮನಸ್ಕರ ಹೃದಯಗಳಿಂದ ಜ್ಞಾನ ಅನುಕಂಪಗಳು ಸ್ರವಿಸುವಂತೆ  ಹೇ ಬ್ರಾಹ್ಮಣರೇ ಸಾರಾಸಾರ ವಿವೇಕವನ್ನು ಮಿತಿಯಿಲ್ಲದಂತೆ ಪಸರಿಸುವ ಕಾರ್ಯದಲ್ಲಿ ತೊಡಗಿರಿ.
ಈ ವೇದ ಮಂತ್ರದ ಅರ್ಥದ ಕಡೆ ಗಮನ ಹರಿಸಿದರೆ ನಿಜವಾದ ಬ್ರಾಹ್ಮಣ ಯಾರು? ಎಂಬ ಕಲ್ಪನೆ ಸಿಗುತ್ತದೆ. ನಾಲ್ಕೂ ವರ್ಣಗಳ ಕರ್ತವ್ಯವನ್ನು ನೋಡುತ್ತಾ ಹೋದಾಗ ಜ್ಞಾನಪ್ರಸಾರದಂತಹ ಪ್ರಮುಖ ಹೊಣೆಯು ಬ್ರಾಹ್ಮಣಪಾಲಿಗೆ ಬಂದಿರುವುದರಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಬ್ರಾಹ್ಮಣ ತನ್ನ ವೈಯಕ್ತಿಕ ಬದುಕನ್ನು ಆದರ್ಶವಾಗಿಯೇ ಇಟ್ಟುಕೊಳ್ಳಬೇಕು. ಬೇರೆಯವರಿಗೆ ಆದರ್ಶವಾಗಿರುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಅವನು ಬಹಳ ತ್ಯಾಗವನ್ನು ಮಾಡಬೇಕಾಗುತ್ತದೆ.ಕಷ್ಟಪಡಬೇಕಾಗುತ್ತದೆ. ಇವನ ನಡೆ, ನುಡಿ,ವ್ಯವಹಾರ, ಆಹಾರ-ವಿಹಾರ ಎಲ್ಲದರಲ್ಲೂ ಇನ್ನೊಬ್ಬರಿಗೆ ಆದರ್ಶವಾಗಿರುವಂತಿರಬೇಕು. ಬದುಕನ್ನು ಆದರ್ಶವಾಗಿಟ್ಟುಕೊಂಡು ಜ್ಞಾನಪ್ರಸಾರವನ್ನು ಹೇಗೆ  ಮಾಡಬೇಕೆಂಬುದನ್ನು ಈ ಮಂತ್ರದಲ್ಲಿ ಬಣ್ಣಿಸಲಾಗಿದೆ. ವರ್ಷಾಕಾಲದಲ್ಲಿ ಜಲಧಾರೆಗಳು ಹರಿಯುವಂತೆ  ಜ್ಞಾನಪ್ರಸಾರಕಾರ್ಯದಲ್ಲಿ ತೊಡಗಿಕೊಳ್ಳಿ, ಎನ್ನುತ್ತದೆ, ಈ ಮಂತ್ರ. ಮಳೆಗಾಲದಲ್ಲಿ ನದಿ-ತೊರೆಗಳು  ಹೇಗೆ ತುಂಬಿಹರಿಯುತ್ತವೆಯೋ ಹಾಗೆ  ಬ್ರಾಹ್ಮಣನು        ಜ್ಞಾನಪ್ರಸಾರವನ್ನು ಮಾಡಬೇಕು. ಅಂದರೆ ನಿಜಬ್ರಾಹ್ಮಣನು ಜ್ಞಾನಭಂಡಾರವಾಗಿದ್ದು ಸಮಾಜದಲ್ಲಿ ಹೆಚ್ಚು ಹೆಚ್ಚು  ಜ್ಞಾನಪ್ರಸಾರ ಮಾಡಬೇಕು.
ಮತ್ತೊಂದು ಹೋಲಿಕೆ ಇನ್ನೂ ಚೆನ್ನಾಗಿದೆ. “ಶುದ್ಧ ಮನಸ್ಕರ ಹೃದಯಗಳಿಂದ ಜ್ಞಾನ ಅನುಕಂಪಗಳು ಸ್ರವಿಸುವಂತೆ” ಬ್ರಾಹ್ಮಣರೇ ಸಾರಾಸಾರ ವಿವೇಕವನ್ನು ಮಿತಿಯಿಲ್ಲದಂತೆ ಪಸರಿಸುವ ಕಾರ್ಯದಲ್ಲಿ ತೊಡಗಿರಿ.ಅಂದರೆ ಇಲ್ಲಿ “ಅನುಕಂಪ” ಎಂಬ ಮಾತಿಗೆ ಒತ್ತು ಕೊಡಲಾಗಿದೆ. ಒಬ್ಬ ಬ್ರಾಹ್ಮಣನಿಗೆ ಸಮಾಜದ ಮೇಲೆ ಅನುಕಂಪವಿರಬೇಕು. ಅನುಕಂಪವಿದ್ದವನು “ ಈ ಸಮಾಜ ಹೇಗಾದರೂ ಇರಲಿ” ಎಂಬ ಭಾವನೆಯನ್ನು ಹೊಂದಲಾರ. “ಲೋಕದಾ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ” ಎಂಬ ವಚನವನ್ನು ಹೇಗೂ ಬಳಸಿಕೊಳ್ಳುವ ಬುದ್ಧಿವಂತರಿದ್ದಾರೆ. ಯಾವುದೇ ಮಾತನ್ನು ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಯಾರಿಗೆ ಹೇಳಿದರೆಂಬುದು ಬಹಳ ಮುಖ್ಯವಾಗುತ್ತದೆ. ವೇದವು ಬ್ರಾಹ್ಮಣನ ಕರ್ತವ್ಯದಲ್ಲಿ ಸ್ಪಷ್ಟವಾಗಿ ತಿಳಿಸುತ್ತದೆ “ ಅವನಿಗೆ ಸಮಾಜದ ಬಗ್ಗೆ ಅನುಕಂಪವಿರಬೇಕು”. ಅನುಕಂಪವಿದ್ದಾಗ ಸಮಾಜವು ತಪ್ಪುದಾರಿಗೆ ಹೋಗದಂತೆ ತಿದ್ದುವ ಕೆಲಸವನ್ನು ಬ್ರಾಹ್ಮನನು ಮಾಡಬೇಕಾಗುತ್ತದೆ. ಇದೆಲ್ಲಾ ಬ್ರಾಹ್ಮಣನ ಅಧಿಕಾರವಲ್ಲಾ, ಇವೆಲ್ಲಾ ಅವನ ಕರ್ತವ್ಯಗಳು, ಎಂಬ ಅರಿವಿರಬೇಕು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಶ್ರೇಷ್ಠಪುರುಷನ ಆಚರಣೆ ಪ್ರಭಾವವನ್ನು ಚೆನ್ನಾಗಿ ಹೇಳಿದ್ದಾನೆ…..
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನ: |
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತ ||

[ಭಗವದ್ಗೀತೆ ಅಧ್ಯಾಯ-3 ಶ್ಲೋಕ- 21]
ಯತ್ ಯತ್ ಆಚರತಿ ಶ್ರೇಷ್ಠ: ತತ್ ತತ್ ಏವ ಇತರ: ಜನ: ಸ ಯತ್ ಪ್ರಮಾಣಂ  ಕುರುತೇ ಲೋಕ: ತತ್ ಅನುವರ್ತತೇ….
ಅರ್ಥ:
ಶ್ರೇಷ್ಠ ಪುರುಷನು ಯಾವ ಯಾವ ಆಚರಣೆ ಮಾಡುತ್ತಾನೋ,ಇನ್ನಿತರೇ ಜನರೂ  ಸಹ ಅದರಂತೆಯೇ ನಡೆದುಕೊಳ್ಳುತ್ತಾರೆ. ಯಾವುದನ್ನು ಆಧಾರವಾಗಿಟ್ಟುಕೊಂಡು ನಡೆಯುತ್ತಾನೋ ಜನರೂ ಅದರಂತೆ ಅನುಸರಿಸುತ್ತಾರೆ. ಇದು ನಿಜ ಬ್ರಾಹ್ಮಣನಿಗೆ ಸರಿಯಾಗಿ ಸಲ್ಲುತ್ತದೆ. ತಾನು ಮಾಡುವ ಆಚರಣೆಗಳು ಹೇಗಿರಬೇಕು, ಅದಕ್ಕೆ ಆಧಾರ ಏನಾಗಿರಬೇಕು, ಎಂಬುದನ್ನು ಸರಿಯಾಗಿ ವಿವೇಚಿಸಿ ನಡೆಯಬೇಕಾದ್ದು ಒಬ್ಬ ಬ್ರಾಹ್ಮಣನ ಕರ್ತವ್ಯ.ಅಂದಮಾತ್ರಕ್ಕೆ ಬ್ರಾಹ್ಮಣ ಶ್ರೇಷ್ಠ ಉಳಿದ ವರ್ಣ ಕನಿಷ್ಠ ಎಂದಲ್ಲ. ಬ್ರಾಹ್ಮಣನು ನಡೆಯಬೇಕಾದ್ದೇ ಹೀಗೆ. ಹಾಗೆ ನಡೆಯಲಾರದವನು ಬ್ರಾಹ್ಮಣನಾಗಿರಲಾರ.

Thursday, May 23, 2013

ನ್ಯಾಯ ಶಾಸ್ತ್ರ

   
              ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ, ಹಾಸನದ ಜನಮಿತ್ರ ಸ್ಥಳೀಯ ಪತ್ರಿಕೆಯಲ್ಲಿ ಪ್ರತೀ ಭಾನುವಾರ ನಾನು ಬರೆಯುತ್ತಿರುವ "ಎಲ್ಲರಿಗಾಗಿ ವೇದ " ಲೇಖನವನ್ನು  ವೇದಸುಧೆಯಲ್ಲೂ ಪ್ರಕಟಿಸುವುದಾಗಿ ತಿಳಿಸಿದ್ದೆ. ಆದರೆ ಈಗಾಗಲೇ ಅದು 28 ಲೇಖನಗಳಾಗಿದ್ದು  ಪ್ರತೀ ವಾರವೂ ಹೆಚ್ಚುತ್ತಲೇ ಹೋಗುತ್ತದೆ. ಆದ್ದರಿಂದ ಇದುವರಗೆ ಪ್ರಕಟಿಸಿರುವ ಎಲ್ಲಾ  ಲೇಖನಗಳನ್ನೂ ಇದೇ ಬಳಗದ "ವೇದಭಾರತೀ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಇಂದು ಆರಂಭದ ಎಂಟು ಲೇಖನಗಳು ಪ್ರಕ   ಟವಾಗಿವೆ. ಲೇಖನ ಓದಲು  ವೇದಸುಧೆಯ ತಲೆಬರಹದಡಿ ಕೊಂಡಿ ಇದೆ. ಇಲ್ಲಿಂದಲೇ ವೇದ ಭಾರತಿಯನ್ನು ಪ್ರವೇಶಿಸ ಬಹುದಾಗಿದೆ. ನೀವು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಲೇಖನವನ್ನು ಉತ್ತಮಪಡಿಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಪ್ರಶ್ನೆ ಇದ್ದರೆ ವೇದಾಧ್ಯಾಯೀ ಸುಧಾಕರ ಶರ್ಮರ ಸಹಾಯ ಪಡೆಯುವೆ.